
ಲೋಕಸಭಾ ಜಿದ್ದಾಜಿದ್ದಿ ಅಖಾಡಕ್ಕೆ ಭರ್ಜರಿ ರಂಗು ಬಂದಿದ್ದು ಇದೀಗ ಎಲ್ಲೆಲ್ಲೂ ಕದನ ಕೌತುಕ. ಬೇಡ ಬೇಡ ಎಂದರೂ ಜಾತಿ ಬಲದ ರಾಜಕಾರಣದ ಲೆಕ್ಕಾಚಾರ. ಇದಷ್ಟೆ ಅಲ್ಲಎಲ್ಲೆಲ್ಲೂ ಬರೀ ಜಾತಿ ಜಾತಿಗೆ ಆದ್ಯತೆ.
ಸೆಕ್ಯುಲರಿಸಂ ಇಲ್ಲವೇ ಜಾತಿ ರಹಿತ ಸಮಾಜದ ನಿರ್ಮಾಣ ಕೇವಲ ಭ್ರಮೆ ಸೃಷ್ಟಿಸುವ ಒಣ ಘೋಷಣೆಯಾಗಿರುವ ಈ ಹೊತ್ತಲ್ಲಿ, ತತ್ವ ಸಿದ್ಧಾಂತಗಳೆಲ್ಲ ರಾಜಕೀಯ ಪಕ್ಷಗಳ ಡೋಂಗಿತನವೆಂಬಂತೆ ಕಾಣುತ್ತಿವೆ.
ಬಿಜೆಪಿ ಕಥೆ ಬಿಡಿ. ಈ ಪಕ್ಷದ ಒಲವು ನಿಲುವುಗಳು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಬಗ್ಗೆ ಮಾತನಾಡುವುದು ಬೇಡ. ಅದು ಬಹಿರಂಗವಾಗಿಯೇ ಬಲಪಂಥೀಯ ವಿಚಾರದೊಂದಿಗೆ ಅಖಾಡಕ್ಕೆ ಧುಮುಕಿದೆ.
ಆದರೆ ಸೆಕ್ಯೂರಲಿಸಂ ಬುರುಡೆ ಬಿಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲೂ ಇಂಥ ನಯವಂಚಕ, ಜೋಭದ್ರಗೇಡಿ ರಾಜಕಾರಣ ಎದ್ದು ಕಾಣುತ್ತಿರುವುದು ಈ ಹೊತ್ತಿನ ವಿಶೇಷ.

ಹೀಗೆ ಜಾತಿ ರಾಜಕಾರಣ, ಸಾಮಾಜಿಕ ಪ್ರಜ್ಞೆಯ ಬಗ್ಗೆ ಚಿಂತಿಸುತ್ತಿರುವಾಗಲೆ, ಮಾಜಿ ಮಂತ್ರಿ, ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕ ರೋಷನ್ ಬೇಗ್ ರಿಂದ ಒಂದು ಹೇಳಿಕೆ ಹೊರ ಬಿದ್ದಿದೆ.
ತಮ್ಮ ರಾಜಕೀಯ ಬದುಕಲ್ಲಿ ಮೊದಲ ಬಾರಿಗೆ ಸಿಡಿದ ದ್ವನಿಯಲ್ಲಿ ಮಾತನಾಡಿರುವ ಬೇಗ್, ಕಾಂಗ್ರೆಸ್ ಉನ್ನತ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಂದ ಮುಸ್ಲಿಮರಿಗೆ ಅನ್ಯಾಯ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಜನಕ್ಕೆ ಸೀಟು ಕೊಟ್ಟಿಲ್ಲ. ಒಬ್ಬರಿಗೆ ಮಾತ್ರ ಕೊಡಲಾಗಿದೆ. ಅನ್ಯಾಯ ಮಾಡಲಾಗಿದೆ ಎಂದು ಬೇಸರ, ಸಿಟ್ಟಿನಿಂದಲೆ ಕೆಂಡ ಕಾರಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ರೋಷನ್ ಬೇಗ್ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಲಿಲ್ಲ. ಜೊತೆಗೆ ಮೈತ್ರಿ ಸರಕಾರದಲ್ಲಿ ಮಂತ್ರಿ ಸ್ಥಾನವನ್ನೂ ನೀಡಲಿಲ್ಲ. ಸಹಜವಾಗಿಯೇ ಸಿಟ್ಟಿಗೆದ್ದ ರೋಷನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುವ ಸಂಗತಿ.
ಮುಸ್ಲಿಮರಿಗೆ ಕಾಂಗ್ರೆಸ್ನಿಂದ ಅನ್ಯಾಯ ಆಗಿದೆ. ಅವರನ್ನು ಮತ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಹಿರಂಗವಾಗಿ ಹೇಳಲು ರೋಷನ್ ಬೇಗ್ ತನಗೆ ಟಿಕೆಟ್ “ ಅನ್ಯಾಯ ಆಗುವವರೆಗೂ “ ಕಾಯಬೇಕಾಯಿತೇ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿ. ಈಗಲಾದರೂ ಇದನ್ನು ಬಹಿರಂಗವಾಗಿ ಹೇಳಿದರಲ್ಲ ಎನ್ನುವುದೇ ಸ್ವಲ್ಪ ಸಮಾಧಾನ.
ಮುಸ್ಲಿಂ ಸಮುದಾಯದ ದ್ವಂದ್ವ , ರಾಜಕೀಯ ದುರಂತ ಅಡಗಿರುವುದು ಇಲ್ಲೇ. ಕನಿಷ್ಟ ಈಗಲಾದರೂ ರೋಷನ್ ಬೇಗ್ ಅಂತ ಸಜ್ಜನ ರಾಜಕಾರಣಿಗಳು ಅಪರೂಪಕ್ಕೆ ಸತ್ಯವನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಬಂತಲ್ಲ ಎಂದು ಹೇಳಿಕೊಂಡೇ, ಜನ ಸಂಖ್ಯೆಯಿಂದ ಶಕ್ತಿಶಾಲಿಯಾಗಿರುವ ಮುಸ್ಲಿಂ ಸಮುದಾಯ, ರಾಜಕೀಯವಾಗಿ ಬೆರಳೆಣಿಕೆಯಷ್ಟು ಸ್ಥಾನಗಳಿಗೆ ಗೋಗರೆದು, ಬೇಡುವಂತಹ ದೈನೇಸಿ ಸ್ಥಿತಿಗೆ ಏಕೆ ಬಂತು ಎನ್ನುವುದನ್ನೂ ಚರ್ಚಿಸಬೇಕು.
ರಾಷ್ಟ್ರರಾಜಕಾರಣದ ಬಗ್ಗೆ ‘general ‘ ಎನ್ನಿಸಿಕೊಳ್ಳುವಂತೆ ಮಾತನಾಡುವುದಕ್ಕಿಂತ ರಾಜ್ಯದ ಮುಸ್ಲಿಂ ಸ್ಥಿತಿ ಗತಿ ವಿಚಾರಗಳ ಮೂಲಕ ನೈಜ ಸ್ಥಿತಿಯ ಹುಡುಕಾಟ ಮುಖ್ಯ ಎಂದು ನಾನು ಭಾವಿಸಿದ್ದೇನೆ.

ಮೊದಲಿಗೆ ಈ ‘ಸೋ ಕಾಲ್ಡ್ ಸೆಕ್ಯೂಲರ್’ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಚುನಾವಣೆ ಸಂದರ್ಭದ ನಿಲುವುಗಳೇನು ಎನ್ನುವುದನ್ನು ಒರೆಗೆ ಹಚ್ಚಿ ನೋಡೋಣ. ಭಾಷಣಗಳ ಉದ್ದಕ್ಕೂ ಸಾಮಾಜಿಕ ಪ್ರಜ್ಞೆಯ ಬಗ್ಗೆ ಭಾಷಣ ಬಿಗಿಯುವ ಈ ಪಕ್ಷಗಳು ಟಿಕೆಟ್ ಹಂಚುವಾಗ ಮಾತ್ರ ಯೋಚಿಸುವುದೇ ಬೇರೆಯ ರೀತಿ.
ಇಲ್ಲಿ ಸಾಮಾಜಿಕ ನ್ಯಾಯ ಮುಖ್ಯವೋ? ಅಥವಾ ಗೆಲ್ಲುವ ಸೂತ್ರ ಮುಖ್ಯವೋ? ಇದು ಈ ಹೊತ್ತಿನ ಮುಖ್ಯ ಪ್ರಶ್ನೆ.
ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರದಲ್ಲಿ ಮಾತ್ರ ಮುಸ್ಲಿಂ ಅಭ್ಯರ್ಥಿಗೆ ಕಣಕ್ಕಿಳಿಯಲು ಈ ಸೆಕ್ಯೂಲರ್ ಪಕ್ಷಗಳ ಜೋಡಿ ಅವಕಾಶ ಮಾಡಿಕೊಟ್ಟಿದೆ ಎಂದರೆ ಇದಕ್ಕೆ ಏನೆನ್ನಬೇಕು?
ಮುಸ್ಲಿಮರು ಮತ ಚಲಾಯಿಸಲು ಬರುವ ಯಂತ್ರಗಳು ಮಾತ್ರವೇ? ಹಾಗೆಂದು ಈ ಪಕ್ಷಗಳು ತಿಳಿದಿವೆಯೆ?
ಅಲ್ಪಸಂಖ್ಯಾತ ಸಮುದಾಯವೊಂದರ ರಾಜಕೀಯ ಹಕ್ಕು ಪ್ರತಿಪಾದನೆ ದೃಷ್ಟಿಯಿಂದ ಈ ವಿವರಣೆಗೆ ನಾನು ಕೈಹಾಕಿದ್ದೇನೆ.
ಬಿಜೆಪಿಯ ಭೂತ ತೋರಿಸುತ್ತಾ, ಭಯ ಹುಟ್ಟಿಸುತ್ತ, ಮತ ಗಿಟ್ಟಿಸುತ್ಠ ಬಂದ ಪಕ್ಷಗಳು ಈ ಸಮುದಾಯದ ರಾಜಕೀಯ ಹಕ್ಕನ್ನು ವಂಚಿಸುತ್ತಾ ಬಂದಿವೆ.
ಅದರಲ್ಲೂ ಪ್ರಧಾನಿ ಮೋದಿಯನ್ನು ಮಟ್ಟ ಹಾಕಲು ಹರಸಾಹಸ ನಡೆಸುತ್ತಿರುವ ಈ ಹೊತ್ತಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ‘ಸಾಫ್ಟ್ ಹಿಂದುತ್ವವನ್ನು‘ ರಾಜಕೀಯ ತಂತ್ರವಾಗಿ ಅನುಸರಿಸಿದ್ದೆ ತಡ, ಮುಸ್ಲಿಂ ಸಮುದಾಯವಂತೂ ಸಂದಿಗ್ಧತೆ ಗೆ ಸಿಲುಕಿಕೊಂಡಿದೆ.
ಮುಸ್ಲಿಂ ಸಮುದಾಯದ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯ ಎಂದೇ ಬಿಂಬಿಸಲಾಗುತ್ತಿದ್ದ ತುಷ್ಟೀಕರಣ, ದೇಶದ್ರೋಹದ ವಿಚಾರಗಳು ಈ ಚುನಾವಣೆಯಲ್ಲಿ ಎಲ್ಲೂ ಚರ್ಚೆಗೆ ಬಂದಿಲ್ಲ. ಗೋ ಹತ್ಯೆ ಯ ಹೆಸರಲ್ಲಿ ನಡೆದಿರುವ ಹಿಂಸಾಚಾರದ ಮಾತೇ ಇಲ್ಲ. ಮುಸ್ಲಿಂ ಸಮುದಾಯದ ಸಮಸ್ಯೆಗಳ ಸಂಗತಿಯೇ ಇಲ್ಲ. ಚುನಾವಣೆ ವಿಚಾರಗಳ ಮುಖ್ಯವಾಹಿನಿಯಿಂದ ಮುಸ್ಲಿಂ ಸಮುದಾಯವನ್ನು ಹೊರಕ್ಕಿಡುವುದು ಒಂದು ತಂತ್ರವೇ ಆಗಿರಬಹುದು ಎಂಬ ಗುಮಾನಿ ಬರುತ್ತದೆ.
ಇಂಥ ಅನ್ಯಾಯ ಏಕೆ? ಮುಸ್ಲಿಂ ಮತಗಳು ತಮಗೆ ಬಿದ್ದೇ ಬೀಳುತ್ತವೆ ಎಂಬ taken for granted ಎಂಬ ಲೆಕ್ಕಾಚಾರದಲ್ಲಿ ಅವರನ್ನು ನೇಪಥ್ಯಕ್ಕೆ ತಳ್ಳಿ, ಇತರೆ ಮತಗಳನ್ನು ಗಿಟ್ಟಿಸಿಕೊಳ್ಳುವ ತಂತ್ರವೇ?
ಕರ್ನಾಟಕವನ್ನೇ ತೆಗೆದುಕೊಳ್ಳಿ. ಸುಮಾರು 17 ವರ್ಷ ಮೊದಲು ನಡೆದಿರುವ ಜಾತಿ ಜನಗಣತಿಯ ಪ್ರಕಾರ ಮುಸ್ಲಿಂ ಜನಸಂಖ್ಯೆ ಶೇ 13 ರಷ್ಟಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಕಾಲಕ್ಕೆ ನಡೆದ ಜಾತಿ ಜನಗಣತಿಯ ಅನಧಿಕೃತ ಮಾಹಿತಿಯಂತೆ ಮುಸ್ಲಿಂ ಜನಸಂಖ್ಯೆ ಸರಿ ಸುಮಾರು 75 ಲಕ್ಷ. ಆದರೂ ಗೋಗರೆಯುವ ಪರಿಸ್ಥಿತಿ ಏಕೆ? ಅಷ್ಟೆ ಅಲ್ಲ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಸೋತು ಹೋಗುತ್ತಾರೆ ಎಂಬ ವಿಶ್ಲೇಷಣೆ ಏಕೆ? ಮುಸ್ಲಿಂ ಸಂಖ್ಯೆ ಗಣನೀಯವಾಗಿದ್ದರೂ ಗೆಲ್ಲಲು ಮತಗಳ ಕೊರತೆ ಬಿದ್ದು ಸೋಲುವುದು ಏಕೆ? ಸೆಕ್ಯೂಲರ್ ಪಕ್ಷಗಳ ಇತರೆ ಮತಗಳು ಸಂಪೂರ್ಣವಾಗಿ ಮುಸ್ಲಿಮರಿಗೆ ಬೀಳದಿರುವುದಕ್ಕೇ ಕಾರಣವೇನು?
ಇದೀಗ ಅಂಕಿ ಅಂಶಗಳನ್ನು ಈ ವಾದಕ್ಕೆ ಪೂರಕವಾಗಿ ಮುಂದಿಡೋಣ.
ಜಿಲ್ಲೆಗಳ ದೃಷ್ಟಿಯಿಂದ ಹೇಳುವುದಾದರೆ ದಕ್ಷಿಣ ಕನ್ನಡ- 24.02% ಬೀದರ್ 19.68%,ಕಲ್ಬುರ್ಗಿ 19.99%, ವಿಜಯಪುರ 16.97%, ಧಾರವಾಡ 20.94%, ಹಾವೇರಿ 18.65 , ಕೊಡಗು 15.74 ರಷ್ಟು ಮುಸ್ಲಿಂ ಜನ ಸಂಖ್ಯೆ ಇದೆ.
ಇನ್ನುಳಿದ ಜಿಲ್ಲೆಗಲಾದ ಗದಗ, ರಾಯಚೂರು, ಕೋಲಾರ, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ಬಳ್ಳಾರಿ, ದಾವಣಗರೆ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಕನಿಷ್ಟ 11% ರಿಂದ ಗರಿಷ್ಟ 14.1% ರವರೆಗೂ ಇದೆ.
ಆದರೆ ಇದೇ ಜನಸಂಖ್ಯೆ ಲೋಕಸಭಾ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲಿ ಕ್ಷೇತ್ರಗಳ ವಿಸ್ತೀರ್ಣ ಬದಲಾಗುತ್ತದೆ. ಮುಸ್ಲಿಂ ಮತದಾರರ ಸಂಖ್ಯೆ ಒಡೆದು ಹೋಗಿ ಹಂಚಿಕೆ ಆಗುತ್ತದೆ.
ಹೀಗಿದ್ದರೂ 17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಸ್ಲಿಂ ಮತದಾರರು ಶೇಕಡಾ 12ರಿಂದ 22 ರವರೆಗೂ ಇದ್ದು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಧಾರವಾಡ, ಹಾವೇರಿ, ಬೆಂಗಳೂರು ಕೇಂದ್ರ, ಬೀದರ್ ಲೋಕಸಭಾ ಕ್ಷೇತ್ರಗಳಲ್ಲಂತೂ ಮುಸ್ಲಿಂ ಸಮುದಾಯ ಪ್ರಾಬಲ್ಯ ಪಡೆದಿದೆ. ರಾಯಚೂರು, ವಿಜಯಪುರ, ಚಿಕ್ಕೋಡಿ, ಬೆಂಗಳೂರು ಉತ್ತರ, ದಕ್ಷಿಣ, ಕೋಲಾರ, ಮೈಸೂರು ಮೊದಲಾದ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ದೊಡ್ಡ ಪ್ರಮಾಣದಲ್ಲಿದ್ದಾರೆ.
ಹೀಗಿದ್ದರೂ ಕೇವಲ ಒಂದೇ ಒಂದು ಲೋಕಸಭೆಗೆ ಮಾತ್ರ ಟಿಕೆಟ್ ನೀಡಲಾಗಿದ್ದು, ಅವರನ್ನೂ ಗೆಲ್ಲಿಸಲು ಪರದಾಡುವಂತಹ ಪರಿಸ್ಥಿತಿ ಬಂದಿದೆ.
ಸೆಕ್ಯೂಲರ್ ರಾಜಕೀಯ ಪಕ್ಷಗಳ ನಾಯಕರು ಬಿಜೆಪಿಯನ್ನು ಅದರಲ್ಲೂ ಮೋದಿ ರಾಜಕಾರಣವನ್ನು ಹಿಮ್ಮೆಟ್ಟಿಸಲು ‘ನಾವೂ ಕೂಡಾ ಹಿಂದೂಗಳು ‘ ಎಂಬ ತಂತ್ರ ಅನುಸರಿಸುತ್ತಿದ್ದಂತೆ ಮುಸ್ಲಿಮರನ್ನು ಹಿಂದಕ್ಕೆ ಸರಿಸುವಂತಹ ವಾತಾವರಣ ನಿರ್ಮಾಣ ಆಗಿದೆಯೆ ಎನ್ನುವ ಪ್ರಶ್ನೆ ಇಲ್ಲಿ ಮುಖ್ಯವಾಗಿ ತಲೆದೋರಿದೆ.
ಇವೆಲ್ಲಕ್ಕಿಂತ ಹೆಚ್ಚಾಗಿ ಮುಸ್ಲಿಂ ಮತದಾರರು ಗೆಲ್ಲಲು ಸಾಧ್ಯವಿರುವ ಕ್ಷೇತ್ರಗಳಲ್ಲಿ ಸೆಕ್ಯೂಲರ್ ಪಕ್ಷಗಳಿಗೆ ಸೇರಿದ ನಾಯಕರು, ಮತದಾರರ ಅಭಿಪ್ರಾಯ ಬೇರೆಯದ್ದೇ ಆಗಿದ್ದು ಮುಸ್ಲಿಂ ಅಭ್ಯರ್ಥಿ ಸೋತುಹೋಗುವುದು ಏಕೆ? ಎನ್ನುವುದೂ ಚರ್ಚೆಯ ವಿಚಾರವಾಗಿದೆ.
ಮುಸ್ಲಿಮರನ್ನು ಮತಾಂಧರೆಂದು ಟೀಕಿಸುತ್ತಲೇ ನೆಪ ಮಾತ್ರಕ್ಕೆ ಬಿಜೆಪಿಯಂಥ ಪಕ್ಷಗಳಲ್ಲಿ ಮುಸ್ಲಿಮರ ಹೆಸರು ಹೇಳಿಕೊಂಡೇ ಅವಕಾಶ ಪಡೆದ ಒಂದು ಗುಂಪಿನ ನಾಯಕರು, ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿದ್ದರೂ ರಾಜಕೀಯ ಹಕ್ಕಿನ ಅನುಸಾರ ಮುಸ್ಲಿಮರಿಗೆ ಚುನಾವಣೆ ಸ್ಪರ್ಧೆಗೆ ಟಿಕೆಟ್ ಸಿಗದೆ ಗೋಗರೆಯುವಂತಹ ಹೀನಾಯ ಸ್ಥಿತಿಗೆ ತಲುಪಿದ ಮತ್ತೊಂದು ಗುಂಪಿನ ನಾಯಕರು ಇವತ್ತು ಕುಳಿತು ಯೋಚಿಸುವ ಪರಿಸ್ಥಿತಿ ಬಂದಿದೆ.
ವಾಸ್ತವದ ಪ್ರಜ್ಞೆಯ ಜೊತೆ, ಒಳಗೊಳ್ಳುವ ರಾಜಕಾರಣ, (inclusive politics) ಸ್ವಾಭಿಮಾನ, ರಾಜಕೀಯ ಅರಿವು ಈ ಹೊತ್ತಿಗೆ ಮುಖ್ಯವಾಗಿದೆ. ಸಂಸತ್ತು ಮತ್ತು ರಾಜ್ಯ ವಿಧಾನ ಸಭೆಯಲ್ಲಿ ಕುಸಿಯುತ್ತಾ ಬಂದಿರುವ ಮುಸ್ಲಿಂ ಪ್ರಾತಿನಿಧ್ಯ ಗಮನಿಸಿದರೆ ಈ ಸಮುದಾಯ ತಮ್ಮದೇ ನಾಯಕರಿಗೆ ಬುದ್ದಿ ಕಲಿಸಬೇಕು. ಯಾವುದೇ ರಾಜಕೀಯ ಪಕ್ಷದ ಗುತ್ತಿಗೆ ಆಗದೆ ಆಯಾ ಸಮಯ, ಸಂದರ್ಭಕ್ಕೆ ಅನುಸಾರ ಸಮುದಾಯದ ಸಮಗ್ರ ಏಳಿಗೆ ದೃಷ್ಟಿಯ ರಾಜಕೀಯ ಮಾಡುವ ದಿನಗಳು ಬರಬೇಕು. ಆಗ ಈ ಸಮುದಾಯದ ಹಕ್ಕು ಪ್ರತಿಪಾದನೆ ಅರ್ಥ ಪಡೆದುಕೊಳ್ಳುತ್ತದೆ.
ಈ ಸಮುದಾಯಕ್ಕೆ ಸಮರ್ಥ ನಾಯಕನ ಕೊರತೆ ಪ್ರಮುಖವಾಗಿ ಎದ್ದು ಕಂಡಿದೆ. ಸಮುದಾಯವನ್ನು ಪ್ರೀತಿಸುವ, ಇತರೆ ಸಮುದಾಯದ ಜೊತೆ ಹೆಜ್ಜೆ ಇಟ್ಟು ಮುಂದೆ ಹೋಗುವ , ಬದಲಾವಣೆಯ ಹಪಾಹಪಿಯ ನಾಯಕನನ್ನು ಈ ಸಮುದಾಯ ರೂಪಿಸಿಕೊಳ್ಳಬೇಕಿದೆ.
.
ಅಂಕಿ ಅಂಶ ಕೃಪೆ: ಎಸ್.ಬಾಬು ಖಾನ್ / ಸಮುದಾಯ ಚಿಂತಕರು – ವಿಶ್ಲೇಷಕರು






0 Comments