ಎಲ್ಲವನ್ನೂ ಪೋಣಿಸಿದ ಆ ಒಂದು ದಾರ…

ಕಲಾವಿದ ತಲ್ಲೂರ್ ಎಲ್.ಎನ್. ಪುಸ್ತಕ ಬಿಡುಗಡೆಯ ನೆಪದಲ್ಲಿ ಸಂಪಾದಕ ಅಣ್ಣನ ನೋಟ..

ರಾಜಾರಾಂ ತಲ್ಲೂರು

 

ಇದೊಂದು ಒಳಗಿನ ನೋಟ. ಇಲ್ಲಿ ನನ್ನದು ದ್ವಿಪಾತ್ರ.

ಮೊದಲನೆಯದು,  ಕಲಾಸಕ್ತನಾಗಿ ಹಾಗೂ ಈ ಪುಸ್ತಕದ ಸಂಪಾದಕನಾಗಿ, ಸಮಕಾಲೀನ ಕಲಾವಿನೊಬ್ಬನ ಕಲಾಕೃತಿಗಳನ್ನು ಗಮನಿಸುವುದು. ಎರಡನೆಯದಾಗಿ, ಅದೇ ಕಾಲಕ್ಕೆ ಆ ಕಲಾವಿದನ ಒಡಹುಟ್ಟಿದ ಅಣ್ಣನೂ, ಕಲಾಕೃತಿಗಳ ಮೊದಲ ವೀಕ್ಷಕನೂ-ವಿಮರ್ಶಕನೂ ಆಗಿ ಪ್ರತಿಕ್ರಿಯಿಸುವುದು.

ದೀಪದಡಿಯ ಕತ್ತಲಿನ ಅರಿವಿದ್ದೇ ನನ್ನ ಅನ್ನಿಸಿಕೆಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ನಾವು ಅಣ್ಣ-ತಮ್ಮ ಮನೆಯಲ್ಲಿ ಸೇರಿದಾಗ ಕಲಾಕೃತಿಗಳ ಬಗ್ಗೆ ಚರ್ಚೆ ಬಂದರೆ, ಹೆಚ್ಚಾಗಿ ಚರ್ಚೆ ಆಗುವ ವಿಷಯ, ಒಬ್ಬ ಕಲಾವಿದ ಮತ್ತು ಆತನ ಜೀವನಾವಧಿಯಲ್ಲಿ ಆತ ರಚಿಸಿದ ಕಲಾಕೃತಿಗಳ ನಡುವಿನ ಅಂತಃಸಂಬಂಧ. ಕಲಾವಿದ ತಲ್ಲೂರು ಎಲ್.ಎನ್. ಬಗ್ಗೆ ಇರುವ ಒಂದು ಜನರಲ್ ಆಬ್ಸರ್ವೇಷನ್ ಎಂದರೆ, ಅವರ ಕಲಾಕೃತಿಗಳಲ್ಲಿ ಬಳಕೆಯಾಗುವ ಮೂಲವಸ್ತುಗಳ (ಮಾಧ್ಯಮಗಳ) ವೈವಿದ್ಯತೆ. ಹೆಚ್ಚಿನಂಶ ಭಾರತದ ಸಮಕಾಲೀನ ಕಲಾವಿದರಲ್ಲಿ ಇಷ್ಟೊಂದು ವೈವಿದ್ಯಮಯ ಮಾಧ್ಯಮಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸಿದವರು ಬಹಳ ವಿರಳ.

ಮರದ ಪೆಟ್ಟಿಗೆಗಳು, ಪಾಪ್‌ಅಪ್ ಕಲಾಕೃತಿಗಳು, ಇನ್ಫ್ಲೇಟೆಬಲ್‌ಗಳು, ಲೋಹ, ಮರ, ಕಲ್ಲು, ಯಂತ್ರಗಳು, ಆವೆಮಣ್ಣು, ರೊಬೊಟಿಕ್ ಮಿಲ್ಲಿಂಗ್, ಸುಡುವಿಕೆ, ಕತ್ತರಿಸುವಿಕೆ, ಹೆಟ್ಟುವಿಕೆ, ಶಬ್ದ, ಬೆಳಕು, ವಾಸನೆ, ಬಣ್ಣ… ಹೀಗೆ ತಲ್ಲೂರು ಅವರ ಮಾಧ್ಯಮಗಳ ಬಳಕೆ ಎಷ್ಟು ವೈವಿದ್ಯಮಯವೋ, ಅವುಗಳಿಗೆ ಅವರು ಒದಗಿಸುವ ವೀಕ್ಷಕ ಪ್ರವೇಶಿಕೆಗಳೂ ಕೂಡ (ಹಾಗೆಂದರೆ, ಕಲಾಕೃತಿಯನ್ನು ಅನುಭವಿಸಬಯಸುವ ವೀಕ್ಷಕರಿಗೆ ಒಂದು ಪ್ರವೇಶದ್ವಾರ ಅಥವಾ ದಿಕ್ಕು ತೋರುಗಂಬ) ಅಷ್ಟೇ ವೈವಿದ್ಯಮಯ. ವಿಜ್ಞಾನ, ವೈದ್ಯಕೀಯ, ಚರಿತ್ರೆ, ವೇದ, ಪುರಾಣ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ಅನರ್ಥಶಾಸ್ತ್ರ, ಅಜ್ಜಿಕಥೆ… ಹೀಗೆ!

ಇಷ್ಟೊಂದು ವೈವಿದ್ಯಮಯ ಆಕರಗಳನ್ನು ಕಲಾವಿದನೊಬ್ಬನ ಈ ತನಕದ ಜೀವನಾವಧಿಯಲ್ಲಿ, ಒಂದೇ ದಾರದಲ್ಲಿ ಪೋಣಿಸಿಟ್ಟ ಆ ಅಂಶಗಳು  ಯಾವುದಿರಬಹುದು?

ಇತ್ತೀಚೆಗೆ ತಲ್ಲೂರು ಎಲ್.ಎನ್. ದಕ್ಷಿಣ ಕೊರಿಯಾದ ಸಂಕ್ಯುನ್‌ಕ್ವಾನ್ ವಿಶ್ವವಿದ್ಯಾನಿಲಯದಲ್ಲಿ ಒಂದು  ಸಣ್ಣ ಅವಧಿಗೆ ಅತಿಥಿ ಉಪನ್ಯಾಸಕರಾಗಿದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಅವರೊಂದು ಕುತೂಹಲಕರ ಅಸೈನ್‌ಮೆಂಟ್ ಕೊಟ್ಟಿದ್ದರು. ಅದೇನೆಂದರೆ, ತರಗತಿಯ ಎಲ್ಲ ವಿದ್ಯಾರ್ಥಿಗಳೂ ಏನಾದರೊಂದು ವಸ್ತುವನ್ನು ಒಂದು ಪೆಟ್ಟಿಗೆಯಲ್ಲಿ ಮುಚ್ಚಿಟ್ಟುಕೊಂಡು ತರಬೇಕು.

ಅದನ್ನು ವಿದ್ಯಾರ್ಥಿಗಳ ನಡುವೆ ಕಲಸಿ ಹಂಚಿ, ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ತನಗೆ ಸಿಕ್ಕಿದ ಪೆಟ್ಟಿಗೆಯಲ್ಲಿರುವ ವಸ್ತುವನ್ನು ಕಣ್ಣಿನಿಂದ ನೋಡದೆ, ಬರೀ ಮುಟ್ಟಿ, ಆ ಸ್ಪರ್ಷದ ಅನುಭವದ ಆಧಾರದಲ್ಲಿ ಚಿತ್ರ ಬರೆಯಬೇಕು. ಅಂದರೆ, ಕಣ್ಣು-ಮನಸ್ಸುಗಳಿಂದಾಚೆಗೆ, ಬೇರೆ ಇಂದ್ರಿಯಗಳ ಮೂಲಕ ಒಂದು ವಸ್ತುವನ್ನು ಗ್ರಹಿಸಿ, ಅಭಿವ್ಯಕ್ತಿಸುವ ಪ್ರಕ್ರಿಯೆ ಇದು.

ಮೂಲತಃ ಮ್ಯೂಸಿಯಾಲಜಿಯಲ್ಲಿ ಉನ್ನತ ಶಿಕ್ಷಣ ಪಡೆದಿರುವ ತಲ್ಲೂರು ಎಲ್.ಎನ್., ಇಂತಹದೊಂದು ಹಾದಿ ಹಿಡಿದದ್ದು ಆಕಸ್ಮಿಕವೇನಲ್ಲ. ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಮ್ಯೂಸಿಯಾಲಜಿ ಸ್ನಾತಕೋತ್ತರ ಪದವಿಗಾಗಿ ಅಭ್ಯಾಸ ಮಾಡುವ ವೇಳೆ ಅವರು ಸಲ್ಲಿಸಿದ್ದ ವಿದ್ಯಾರ್ಥಿ ಪ್ರಬಂಧದ ಶೀರ್ಷಿಕೆ:

The Museum’s Non-Verbal Communication, “Multi-sensory approaches in Exhibition Design”.

ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ (ಅಂದಿನ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ) ದಲ್ಲಿ ಅಪ್ರೆಂಟಿಸ್‌ಶಿಪ್ ಮಾಡುತ್ತಿದ್ದಾಗಲೂ ತಲ್ಲೂರು ಅವರಿಗೆ ಹಿಸ್ಟರಿ ಮ್ಯೂಸಿಯಂಗಳಿಗೆ ಬರುವ ವೀಕ್ಷಕರು ಮ್ಯೂಸಿಯಮ್ಮಿನೊಳಗೆ ಬರೇ ಕಣ್ಣಾಡಿಸಿ ಹೋಗುವುದು ಮತ್ತು ವಿಜ್ಞಾನ ಮ್ಯೂಸಿಯಂಗಳಲ್ಲಿ ವೀಕ್ಷಕರು ಅಲ್ಲಿನ ಪ್ರದರ್ಶನ ವಸ್ತುಗಳೊಂದಿಗೆ ಸಂವಾದಿಸುವುದು… ಇವೆಲ್ಲ  ಕಾಡುವ ಸಂಗತಿಗಳಾಗಿದ್ದವು. ವೀಕ್ಷಕರ ಕಣ್ಣು-ಮನಸ್ಸು ಮಾತ್ರವಲ್ಲದೆ, ಬೇರೆ ಜ್ಞಾನೇಂದ್ರಿಯಗಳನ್ನೂ ಒಂದು ಕಲಾಕೃತಿಯನ್ನು ಅನುಭವಿಸುವಲ್ಲಿ ಬಳಕೆ ಮಾಡಿಕೊಂಡರೆ ಹೇಗಿದ್ದೀತು ಎಂಬಲ್ಲಿಂದ ಆರಂಭಗೊಂಡ ಯೋಚನಾ ಸರಣಿ, ಅವರನ್ನು ಈವತ್ತು ಇಲ್ಲಿಗೆ ತಲುಪಿಸಿದೆ. ಇದು ಈ ಇಡಿಯ ಇಪ್ಪತ್ತು ಚಿಲ್ಲರೆ ವರ್ಷಗಳ ಕಲಾಬದುಕಿನ ಒಂದು ಮುಖ.

ಬರೋಡಾದಲ್ಲಿ ಫೈನ್‌ಆರ್ಟ್ ಸ್ನಾತಕೋತ್ತರ ಪದವಿ ಪಡೆಯಲು ಹೋದ ತಲ್ಲೂರು ಎಲ್.ಎನ್. ಅಲ್ಲಿ ಸೀಟು ಸಿಗದೆ, ಮ್ಯೂಸಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾ, ಜೊತೆ ಜೊತೆಗೇ ಕಲಾವಿದನಾಗಿಯೂ ವಿಕಾಸಗೊಳ್ಳುತ್ತಾ ಹೋದರು. ಪದವಿ ಮುಗಿಸಿ ಹೊರಬಂದ ತಲ್ಲೂರು ಕೈನಲ್ಲಿ ಒಂದಿಷ್ಟು ಪಾಪ್‌ಅಪ್ ಕಲಾಕೃತಿಗಳ ಪೆಟ್ಟಿಗೆಗಳಿದ್ದವು. ಅವುಗಳನ್ನು ಯಾರು ಪ್ರದರ್ಶಿಸುತ್ತಾರೆ ಎಂದು ಹುಡುಕುತ್ತಾ ಹೊರಟ ತಲ್ಲೂರು ಎಲ್.ಎನ್.ಗೆ ಸಿಕ್ಕವರು ಕೆಮೋಲ್ಡ್ ಗ್ಯಾಲರಿಯ ಶಿರೀನ್ ಗಾಂಧಿ.

ಹೆಚ್ಚಿನ ಗ್ಯಾಲರಿಗಳು ನಿರಾಕರಿಸಿದ್ದನ್ನು ಅವಕಾಶ ಎಂಬಂತೆ ಸ್ವೀಕರಿಸಿದ ಶಿರೀನ್, 1999ರಲ್ಲಿ ತನ್ನ ಕೆಮೋಲ್ಡ್ ಗ್ಯಾಲರಿಯಲ್ಲಿ ತಲ್ಲೂರು ಅವರಿಗೆ ಪ್ರದರ್ಶನಾವಕಾಶ ನೀಡಿದರು. ಇದು ಹೆಚ್ಚಿನಂಶ ತಲ್ಲೂರು ಎಲ್.ಎನ್.ಅವರ ಕಲಾವಿದ ಬದುಕಿಗೆ ಮೊದಲ ತಿರುವು. ಗ್ಯಾಲರಿಯ ತುಂಬೆಲ್ಲ ಮುಚ್ಚಿಟ್ಟಿದ್ದ ಮರದ ಪೆಟ್ಟಿಗೆಗಳು, ವೀಕ್ಷಕ ಅಲ್ಲಿ ಮಣೆಯ ಮೇಲೆ ಕುಳಿತು ಪೆಟ್ಟಿಗೆಗಳನ್ನು ತೆರೆದು ಕಲಾಕೃತಿಗಳನ್ನು ನೋಡಬೇಕೆಂಬ ಹೊಸತನವೇ ಈ ಕಲಾ ಪ್ರದರ್ಶನಕ್ಕೆ ಪ್ರಚಾರ ಕೊಟ್ಟಿತು.

ಕೆಮೋಲ್ಡ್ ಗ್ಯಾಲರಿಯಲ್ಲಿ ನಡೆದ ತಲ್ಲೂರು ವೃತ್ತಿ ಬದುಕಿನ ಮೊದಲ ಪ್ರದರ್ಶನವನ್ನೇ  ನ್ಯೂಯಾರ್ಕಿನಲ್ಲಿ ಮರುಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಅಮೆರಿಕದ ಬೊಸ್‌ಪಾಸಿಯಾ 1999ರಲ್ಲಿ ನೀಡಿದ “ಎಮರ್ಜಿಂಗ್ ಆರ್ಟಿಸ್ಟ್” ಪ್ರಶಸ್ತಿಯನ್ನು ಸ್ವೀಕರಿಸಲು ಮೊದಲ ಬಾರಿಗೆ ದೇಶದಿಂದ ಹೊರಗೆ ಅಮೆರಿಕಕ್ಕೆ ಹೋಗಿಬಂದದ್ದು ಮತ್ತು ಮರುವರ್ಷ, 2000ದಲ್ಲಿ “ಆರ್ಟ್ ಇನ್ ದ ವರ್ಡ್”  ಗ್ರೂಪ್ ಷೋ ಗಾಗಿ ಪ್ಯಾರಿಸ್‌ಗೆ ಹೋಗಿ ಬಂದದ್ದು, ತಲ್ಲೂರು ಅವರಿಗೆ ತನ್ನ ಅನುಭವ ಪ್ರಪಂಚ ಎಷ್ಟು ಸೀಮಿತ ಎಂಬುದನ್ನು ಅರಿವು ಮಾಡಿಸಿಕೊಟ್ಟವು.

ಪೂರ್ಣಕಾಲಿಕ ಕಲಾವಿದನಾಗಿಯೇ ಬದುಕುತ್ತೇನೆ ಎಂಬ ಹಠ ಮತ್ತು ಕನಸು-ಎರಡನ್ನೂ ಹೊತ್ತಿದ್ದ ತಲ್ಲೂರು,  ಸಮಕಾಲೀನ ಕಲಾಪ್ರಪಂಚದಲ್ಲಿ ತನ್ನ ಉಳಿವಿಗೆ ಆ ಹಂತದಲ್ಲಿ ತನ್ನಲ್ಲಿರುವ ಕೌಶಲಗಳು ಸಾಲವೆಂಬುದು ಅರಿವಿಗೆ ಬರುತ್ತಲೇ, ಕಾಮನ್‌ವೆಲ್ತ್ ಸಹಕಾರದಿಂದ ಇಂಗ್ಲಂಡಿನ ಲೀಡ್ಸ್ ಮೆಟ್ರೊಪಾಲಿಟನ್ ವಿವಿಯಲ್ಲಿ ಕಂಟೆಂಪೊರರಿ ಫೈನ್ ಆರ್ಟ್ ಪ್ರಾಕ್ಟೀಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಈ ಸಾಗರೋತ್ತರ ಶಿಕ್ಷಣ, ತಲ್ಲೂರು ಅವರ ಕಲಾ ಬದುಕಿನಲ್ಲಿ ಮಹತ್ತರ ತಿರುವುಗಳಿಗೆ ಕಾರಣವಾಯಿತು.

ಗ್ಲೋಬಲೈಸೇಷನ್ನಿನ ಗಾಳಿ ಭಾರತದಾದ್ಯಂತ ಬೀಸುತ್ತಿದ್ದ ಹೊತ್ತಿನಲ್ಲೇ ಕಲೆಯನ್ನು ಪೂರ್ಣಪ್ರಮಾಣದಲ್ಲಿ ವೃತ್ತಿ ಎಂದು ಸ್ವೀಕರಿಸುವ ಖಚಿತ ನಿಲುವು ತಳೆದದ್ದು ತಲ್ಲೂರು ಬದುಕಿನಲ್ಲಿ ಬಲುದೊಡ್ಡ ನಿರ್ಧಾರ ಎಂಬುದು ಕುಟುಂಬದ ಒಳಗಿನವನಾಗಿ ಈ ಲೇಖಕನ ಖಚಿತ ನಿರ್ಧಾರ. ಇಂಟರ್ನೆಟ್ ಬರುವ ಮೊದಲು, ಬಹುತೇಕ ಗುರು-ಶಿಷ್ಯ ಪರಂಪರೆಯೇ ಆಗಿದ್ದ ಭಾರತೀಯ ಕಲಾಜಗತ್ತಿನಲ್ಲಿ   ವ್ಯವಸ್ಥೆಯನ್ನು ಮೀರಿ ಬೆಳೆಯುವುದಕ್ಕೆ ಇಂಟರ್ನೆಟ್ ತೆರೆದುಕೊಟ್ಟ ಅವಕಾಶಗಳೂ ಅಗಾಧ.

ಹೀಗಿದ್ದೂ, ಈ ಆಧುನಿಕ ವ್ಯವಸ್ಥೆ ಎಲ್ಲರಿಗೂ ಸಮಾನಾವಕಾಶಗಳನ್ನು ನೀಡಿತೇ ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕು. ಬದಲಾದ ಪರಿಸ್ಥಿತಿಯಲ್ಲಿ ತನ್ನ ಇತಿ ಮಿತಿಗಳ ಅರಿವು ಮತ್ತು ಬೆಳೆಯಲು ಅಗತ್ಯ ಇರುವ ಕೌಶಲ-ಅನುಭವಗಳ ಗಳಿಕೆಯ ಸರಿಹಾದಿ ಹಿಡಿಯುವುದೂ ಇಲ್ಲಿ ಮಹತ್ವದ್ದು. ಅದೃಷ್ಟವಶಾತ್ ಅಂತಹದೊಂದು ವಿಷನ್ ಇದ್ದುದರಿಂದಲೇ,  ತಲ್ಲೂರು ಎಲ್.ಎನ್. ಭಾರತದ ಸಮಕಾಲೀನ ಕಲಾ ಪ್ರಪಂಚದಲ್ಲಿ “ರೈಟ್ ಮ್ಯಾನ್ ಅಟ್ ರೈಟ್ ಪ್ಲೇಸ್ ಅಟ್ ರೈಟ್ ಟೈಮ್” ಆಗಿ ಮೂಡಲು ಸಾಧ್ಯ ಆಯಿತು.

ಕರಾವಳಿಯ ಕೆಳ ಮಧ್ಯಮವರ್ಗದ ಕುಟುಂಬದಿಂದ ಬಂದ ತಲ್ಲೂರು, ದೇಶದ ಮೆಟ್ರೋಗಳಲ್ಲಿರುವ ಕಲಾಜಗತ್ತಿಗೆ ಹಳ್ಳಿಯಿಂದ ಬಂದ ಕನಸುಗಣ್ಣುಗಳ ಹುಡುಗರಲ್ಲೊಬ್ಬನಾದರೆ, ಜಗತ್ತಿನ ಮಟ್ಟಿಗೆ, ಸಮಕಾಲೀನ ಕಲಾಜಗತ್ತಿನಲ್ಲಿ ದಶಕಗಟ್ಟಲೆ ಹಿಂದುಳಿದಿರುವ ತೃತೀಯ ಜಗತ್ತಿನ ದೇಶವಾದ ಭಾರತದ ಪೊಟೆನ್ಷಿಯಲ್ ಇರುವ ಕಲಾವಿದರಲ್ಲೊಬ್ಬ ಅನ್ನಿಸಿಕೊಂಡೇ ಬೆಳೆದರು. ಇಲ್ಲಿ ಬೇರಿನ ಸತ್ವದ ಅರಿವು ಮತ್ತು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮಹತ್ವಾಕಾಂಕ್ಷೆಗಳೆರಡೂ ಬಹಳ ಲಯಬದ್ಧವಾಗಿ ತಲ್ಲೂರು ಅವರ ಪರ ಕೆಲಸ ಮಾಡಿದವು. ಬೇರಿನ ಸತ್ವವನ್ನು ಜಾಗತಿಕ ಕಣ್ಣುಗಳಿಂದ ನೋಡುವ ಬಗೆ ಮತ್ತು ಜಾಗತಿಕ ಅನುಭವಗಳನ್ನು ಬೇರಿನ ಸತ್ವಗಳಿಗೆ ಅನ್ವಯಿಸುವ ಬಗೆಗಳೆರಡರಲ್ಲೂ ತಲ್ಲೂರು ಪರವಾಗಿ ನಿಂತದ್ದು ಅವರ ವೈಯಕ್ತಿಕ ಬದುಕಿನಲ್ಲಾದ ಇನ್ನೊಂದು ಬೆಳವಣಿಗೆ.

ತಾನು ಸ್ನಾತಕೋತ್ತರ ಪದವಿ ಪಡೆಯುವ ವೇಳೆ ಅಲ್ಲಿ ಕಲಿಕೆಗಾಗಿ ಬಂದು ಪರಿಚಿತರಾದ ದಕ್ಷಿಣ ಕೊರಿಯಾದ ಲೀ ಸುನ್‌ಗ್ಯುಮ್ ಅವರನ್ನು ಮದುವೆ ಆದ ತಲ್ಲೂರು, ಕೊರಿಯಾದಲ್ಲೂ ಮನೆ ಮಾಡಿಕೊಂಡು, ತನ್ನ ಸಮಯವನ್ನು ಎರಡು ದೇಶಗಳ ನಡುವೆ ಹಂಚಿಕೊಳ್ಳತೊಡಗಿದರು.  ಕಳೆದ ಹದಿನೈದು ವರ್ಷಗಳಿಂದ ದೇಶದೊಳಗಿನ ಬದುಕನ್ನು ಹತ್ತಿರದಿಂದ ಕಂಡಷ್ಟೇ ಇಂಟೆನ್ಸಿಟಿಯಿಂದ ದೂರದಿಂದಲೂ ಕಾಣುವ ಅವಕಾಶ ಸಿಕ್ಕಿದ್ದು, ತಲ್ಲೂರು ಅವರ ಕೃತಿಗಳ ಮೇಲೆ ದಟ್ಟ ಪ್ರಭಾವ ಬೀರಿದೆ.

ತಂಟೆಯೂ ಆಬ್ಸರ್ಡಿಟಿಯೇ!

ತಲ್ಲೂರು ಬಾಲ್ಯ ಕಳೆದದ್ದು ಮಂಗಳೂರು ಜಿಲ್ಲೆಯ ಸುರತ್ಕಲ್ಲಿನ  ಸಮೀಪದ ಬೈಕಂಪಾಡಿ ಎಂಬ ಬಂದರು ಪುನರ್ವಸತಿ ಪೂರ್ವ ಕಾಲನಿಯಲ್ಲಿ (ಈಗಲ್ಲಿ ಎಪಿಎಂಸಿ ಯಾರ್ಡ್ ಇದೆ) ಇದ್ದ ಬಾಡಿಗೆ ಮನೆ ವಠಾರವೊಂದರಲ್ಲಿ ಮತ್ತು ಆ ಬಳಿಕ  ಹೊಸಬೆಟ್ಟು ಎಂಬ ಅಗ್ರಹಾರದಂತಹ ಊರಿನ ಪುಟ್ಟ ಸ್ವಂತ ಮನೆಯಲ್ಲಿ. ತಂದೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದುದರಿಂದ  ತಲ್ಲೂರು ಎಲ್.ಎನ್. ತಂದೆ-ತಾಯಿಯರೊಟ್ಟಿಗೆ  ಮಂಗಳೂರಿನಲ್ಲಿದ್ದರೆ, ಈ ಲೇಖಕ ತಲ್ಲೂರಿನಲ್ಲಿ ಅಜ್ಜ-ಅಜ್ಜಿಯರ ಜೊತೆ ಇರಬೇಕಾಗಿತ್ತು.  ಬಾಲ್ಯದಿಂದಲೂ ತಲ್ಲೂರು ಎಕ್ಸೆಂಟ್ರಿಕ್ ತಂಟೆಗಳಿಗೆ ಹೆಸರುವಾಸಿ. ಒಂದನೇ ತರಗತಿಯಲ್ಲಿ ಟೀಚರ್ ಜಡೆ ಎಳೆದ ದೂರು ಬಂದರೆ, ಮುಂದೆ ಕಲಾಪದವಿಯ ವೇಳೆ ಮೈಸೂರಿನ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಶುವಲ್ ಆರ್ಟ್ಸ್ ಕಾವಾದಲ್ಲಿ ಇಂತಹದೇ ಯಾವುದೋ ತಂಟೆಗಾಗಿ ಕಾಲೇಜಿನಿಂದ ನೋಟಿಸು ಬಂದು, ತಂದೆ ರಾತ್ರೋರಾತ್ರಿ ಮೈಸೂರಿಗೆ ಧಾವಿಸಬೇಕಾಗಿತ್ತು.

ಅಂದು ಅಡ್ಮಿನಿಸ್ಟ್ರೇಟರ್ ಆಗಿದ್ದ ಹಿರಿಯ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ತಲ್ಲೂರು ತಂಟೆಯನ್ನು ಲಘುವಾಗಿಯೇ ತಗೆದುಕೊಂಡು, ತಂದೆಗೆ ಸಮಾಧಾನ ಮಾಡಿ ಹಿಂದೆ ಕಳಿಸಿದ್ದರು. ಬೈಕಾಂಪಾಡಿಯಲ್ಲಿ ಸಮುದ್ರ ತೀರದ ಬಳಿ ಇದ್ದ ಮೀನಕಳಿಯ ಕಿರಿಯ ಪ್ರಾಥಮಿಕ ಶಾಲೆಗೆ ನಡೆದು ಹೋಗುವಾಗ ಬೇಕೆಂದೇ ಗಾಳಿ-ಮಳೆಯಲ್ಲಿ ತನ್ನ ಕೊಡೆಯನ್ನು ಹಾರಿಬಿಟ್ಟು ಎಲ್ಲಿಗೆ ಹೋಗುತ್ತದೆಂದು ನೋಡುವುದು, ಮುಂದೆ ಸುರತ್ಕಲ್‌ನಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವಾಗ-ಬರುವಾಗ ರಸ್ತೆಯಲ್ಲಿ ಸಿಗುವ ಕೈಗಾಡಿಗಳನ್ನು ದೂಡಿಕೊಂಡು  ಅವರ ಜೊತೆ ಹೋಗುವುದು, ರಸ್ತೆ ಬದಿ ಮಾರಾಟಗಾರರ ಪರವಾಗಿ ಅವರು ಕೂಗಬೇಕಾದದ್ದನ್ನು ತಾನೇ ಕೂಗುತ್ತಾ ಬರುವುದು, ಐಸ್ ಕ್ಯಾಂಡಿ ದೂಡುಗಾಡಿಗಳನ್ನು ಚಡಾವಿನಲ್ಲಿ ದೂಡಿಕೊಟ್ಟು, ಐಸ್ ಕ್ಯಾಂಡಿ ಪಡೆಯುವುದು… ಹೀಗೆ ತಲ್ಲೂರು ತುಂಟಾಟಗಳ ಪಟ್ಟಿ ದೊಡ್ಡದಿದೆ.

ಕಾಲೇಜಿನಲ್ಲೂ, ಆತ ಇಂದಿಗೂ ಚಿರಪರಿಚಿತನಿರುವುದು ಹಾಸ್ಯನಟನಾಗಿ. ಕಾಲೇಜಿನ ರಂಗಮಂದಿರದ ತುದಿ ಹತ್ತಿ, ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂಬ ಬೆದರಿಕೆ ಒಡ್ಡುವ ಪೆದ್ದನ ಪಾತ್ರಕ್ಕಾಗಿ ಛದ್ಮವೇಷ ಸ್ಪರ್ಧೆಯ ಬಹುಮಾನ ಗೆದ್ದಿದ್ದ ತಲ್ಲೂರು ಎಲ್.ಎನ್. ಅನ್ನು ಸುರತ್ಕಲ್ ಪರಿಸರದಲ್ಲಿ ಬಹಳ ಕಾಲ ಹಾಗೇ ನೆನಪಿಟ್ಟುಕೊಂಡಿದ್ದರು!.

ತಲ್ಲೂರು ತನ್ನ “ಬಾನ್ ಅಪಟೈಟ್” ಪುಸ್ತಕಕ್ಕೆ (2007) ಪ್ರವೇಶಿಕೆಯಾಗಿ ಒಂದು ಕಾನ್ಸೆಪ್ಟ್ ಟಿಪ್ಪಣಿ ಬರೆದಿದ್ದಾರೆ.: ಮಾನಸಿಕ ರೋಗಿಗಳ ಆಶ್ರಯತಾಣ ಒಂದರಲ್ಲಿ  ಒಬ್ಬ ಮನೋರೋಗಿ ನೀರಿಲ್ಲದ ಖಾಲಿ ಟಾಂಕಿಯೊಂದರಲ್ಲಿ ಗಾಳ ಹಾಕುತ್ತಾ ಕುಳಿತಿದ್ದ. ಆತನಿಗೆ ಗೇಲಿ ಮಾಡಲೆಂದು ಅಲ್ಲಿಗೆ ಭೇಟಿ ನೀಡಿದ್ದ ಇನ್ನೊಬ್ಬ ವ್ಯಕ್ತಿ ಆತನಲ್ಲಿ “ಎಷ್ಟು ಮೀನುಗಳನ್ನು ಹಿಡಿದಿ?” ಎಂದು ಕೇಳುತ್ತಾನೆ. ಅದಕ್ಕೆ ಆ ಮನೋರೋಗಿ, “ನೀನೊಬ್ಬ ಮೂರ್ಖ. ಇದು ಖಾಲಿ ಕೊಳ ಮತ್ತು ನಾನೊಂದು ಕೋಲು ಹಿಡಿದು ಕುಳಿತಿದ್ದೇನೆ.”ಎಂದು ಮುಖಕ್ಕೆ ಹೊಡೆದಂತೆ ಉತ್ತರಿಸುತ್ತಾನೆ.  ಹೆಚ್ಚಿನಂಶ ಈ ಟಿಪ್ಪಣಿ, ತಲ್ಲೂರು ಅವರ ಎಲ್ಲ ಕಲಾಕೃತಿಗಳ ಕುರಿತಾದ ಸಮಗ್ರ ಟಿಪ್ಪಣಿ ಕೂಡ ಹೌದು. ಬದುಕನ್ನು ವ್ಯಕ್ತಿ ನೊಡುವ ಬಗೆ, ಅದೇ ಬದುಕನ್ನು ಸಮಾಜ ನೊಡುವ ಬಗೆಗಳ ನಡುವೆ ಇರುವ ನೂರಾರು ಪೂರ್ವತೀರ್ಮಾನಗಳು ಮತ್ತು ಆ ಪೂರ್ವತೀರ್ಮಾನಗಳ ಫಲವಾಗಿ ಹುಟ್ಟುವ ಅಸಂಗತ ಸನ್ನಿವೇಶಗಳು – ಇವು ತಲ್ಲೂರು ಅವರ ಕಲಾಕೃತಿಗಳ ಎಕ್ಸ್‌ಪ್ಲೋರೇಷನ್ನಿನ ಬಹುಮುಖ್ಯ ಭಾಗ. ಹಾಗಾಗಿಯೇ ತಲ್ಲೂರು ಅವರ ಹೆಚ್ಚಿನ ಕೃತಿಗಳು ಓಪನ್ ಎಂಡೆಡ್ ಆಗಿ ಕಾಣಿಸುತ್ತವೆ; ಯಾವುದೂ ಇದಮಿತ್ಥಂ ಎಂದು ಮುಗಿಯುವುದಿಲ್ಲ.

ಕೃತಿಯಿಂದ ಕೃತಿ ಹುಟ್ಟುವುದು

ತಲ್ಲೂರು ಅವರ ಸುಮಾರು ಎರಡು ದಶಕಗಳ ವೃತ್ತಿ ಜೀವನವನ್ನು ಸ್ಥೂಲವಾಗಿ ನೋಡುತ್ತಾ ಹೋದರೆ, ಅದೊಂದು ಲಾಜಿಕಲ್ ಆದ ಸರಪಣಿಯಂತೆ ತೋರುತ್ತದೆ. ಪ್ರತೀ ಕಲಾಕೃತಿ, ಅದರ ಮುಂದಿನ ಕಲಾಕೃತಿಗೆ ಹಾದಿ ತೆರೆದುಕೊಟ್ಟದ್ದು ಕಾಣಿಸುತ್ತದೆ. ಆರಂಭದ ಪಾಪ್‌ಅಪ್ ಕಲಾಕೃತಿಗಳು (“ಪ್ರೀಚಿಂಗ್ ಟೇಬಲ್”- 2002) ಮುಂದೆ ಪಾಪ್‌ಅಪ್ ಆಗುವ ಇನ್ ಫ್ಲೇಟಬಲ್‌ಗಳಿಗೆ (“ಮೇಡ್ ಇನ್ ಇಂಗ್ಲಂಡ್ – ಅ ಟೆಂಪಲ್ ಡಿಸೈನ್ ಫಾರ್ ಇಂಡಿಯಾ”- 2002, “ಪ್ಯಾನಿಕ್ ರೂಂ”- 2006) ಗಳಿಗೆ ದಾರಿ ಮಾಡಿಕೊಟ್ಟರೆ, ಶಬ್ದಗಳೊಂದಿಗೆ ಈಂಟರಾಕ್ಟಿವ್ ಆಗಿದ್ದ “ಮಿಲೆನಿಯಂ ಲೋಗೋ”- 2000, “ಸೊವೆನೀರ್ ಮೇಕರ್” – 2005ಗೆ ದಾರಿ ಮಾಡಿಕೊಟ್ಟಿತು. ಪಾಪ್‌ಅಪ್ ಕಲಾಕೃತಿಗಳಿಗಾಗಿ ಕಾರ್ಪೆಂಟರ್‌ಗಳೊಂದಿಗೆ ಮಾಡಿದ ಕೆಲಸ, ಮುಂದೆ “ಬುಲಿಮಿಯಾ”ಕ್ಕೆ ಹಾದಿ ತೆರೆಯಿತು.

2006ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಮರದ ಕೆತ್ತನೆಯ ವಿವಿಧ ಮಗ್ಗುಲುಗಳನ್ನು ಎಕ್ಸ್‌ಪ್ಲೋರ್ ಮಾಡತೊಡಗಿದ ತಲ್ಲೂರು, 2007ರಲ್ಲಿ ಇನ್ಫ್ಲೇಟೆಬಲ್ ಹಾಸಿಗೆಗಳನ್ನು ಆಸ್ಪತ್ರೆ ಮಂಚದ ಮೇಲಿರಿಸಿದ ಕಲಾಕೃತಿ “ಶೀರ್ಷಿಕೆ ರಹಿತ (ಬೆಡ್)” – 2007 ರಚಿಸುತ್ತಾರೆ. “ಮ್ಯಾನ್ ಕ್ಯಾರಿಯಿಂಗ್ ಹ್ಯಾಲೋ”- 2008 ಕೃತಿಯಿಂದ ಹ್ಯಾಲೋಗಳ ಸರಣಿ ಶುರುವಾಗುತ್ತದೆ, ಅದರ ಇನ್-ಲೇ ಕೆಲಸಗಳ ಸ್ಪೂರ್ತಿಯಿಂದ “ಗ್ರಾಫ್ಟ್” – 2010 ಸರಣಿ ಶುರುವಾಗುತ್ತದೆ.

ಹ್ಯಾಲೋಗಳ ಸರಣಿಯಿಂದ ಆರಂಭಗೊಂಡ ಲೋಹಶಿಲ್ಪಗಳ ಬಳಕೆ ಅವನ್ನು ಸವೆಸುವ ಯಂತ್ರಗಳ ಬಳಕೆಯತ್ತ ಮುಂದುವರಿದರೆ, ಇತ್ತ  “ಸೊವನಿರ್ ಮೇಕರ್” ತಯಾರಿಯ ವೇಳೆ ಕಂಡಿದ್ದ ಮೊಳೆ ತಯಾರಿಸುವ ಯಂತ್ರದ ಜೊತೆಗಿದ್ದ ಹಠಯೋಗಿ ಮೂರ್ತಿ, “ವಿಡಿ ವಿನಿ ವಿಸಿ” – 2013 ಗೆ ದಾರಿ ಮಾಡಿಕೊಡುತ್ತದೆ ಹೀಗೆ ಪ್ರತಿಯೊಂದೂ ಕೃತಿ ಇನ್ನೊಂದಕ್ಕೆ ಹಾದಿ ಮಾಡಿಕೊಟ್ಟದ್ದನ್ನು ಗುರುತಿಸುತ್ತಾ ಬರಬಹುದು. ಈ ಲಾಜಿಕ್‌ಲ್ ಬೆಳವಣಿಗೆಂii ಸರಪಣಿ ಕೇವಲ ಮಾಧ್ಯಮಕ್ಕೆ ಸೀಮಿತವಲ್ಲ. ತಂತ್ರ, ಪ್ರವೇಶಿಕೆ, ಪ್ರಸ್ತುತಿಗಳಲ್ಲೂ ಈ ರೀತಿಯ ಸಾತತ್ಯ ಕಾಣಿಸುವುದರಿಂದಾಗಿ ತಲ್ಲೂರು ಎಲ್. ಎನ್. ಅವರ ಈ ತನಕದ  ಎಲ್ಲ ಕೃತಿಗಳನ್ನೂ ಒಟ್ಟಾಗಿ ಒಂದು ಕೃತಿಯಾಗಿ ನೋಡುವುದು ಕೂಡ ಸಾಧ್ಯವಾಗುತ್ತದೆ.

ಮಾಧ್ಯಮವೂ ಕೃತಿಯೇ

ಸೃಜನಶೀಲ ಚಟುವಟಿಕೆಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರಿಗೆ, ತಾವು ವ್ಯಕ್ತಪಡಿಸಬೇಕಾಗಿರುವುದನ್ನು  ಅದಕ್ಕಾಗಿ ತಾವು ಆಯ್ದುಕೊಂಡ ಮಾಧ್ಯಮ ಅಲ್ಲದೆ ಬೇರೆ ಮಾಧ್ಯಮದಲ್ಲಿ ಹೇಳಲು ಸಾಧ್ಯವಿಲ್ಲ ಎಂಬುದನ್ನು ಸ್ವತಃ ಅತನಗೆ ಮತ್ತು ತನ್ನನ್ನು ಓದುವ, ನೋಡುವ, ಕೇಳುಗರಿಗೆ ಖಚಿತಪಡಿಸುವುದು ಬಹಳ ಮುಖ್ಯ. ಕವಿಯೊಬ್ಬ ಕಾವ್ಯ ಮಾಧ್ಯಮವನ್ನು, ನಾಟಕಕಾರನೊಬ್ಬ ರಂಗಭೂಮಿಯನ್ನು, ಕಥೆಗಾರನೊಬ್ಬ ಕಥನ ಮಾಧ್ಯಮವನ್ನು, ಕಲಾವಿದನೊಬ್ಬ ದೃಶ್ಯ ಕಲೆಯನ್ನು  ಆಯ್ಕೆ ಮಾಡಿಕೊಂಡಾಗ, ಆತನ ಅಭಿವ್ಯಕ್ತಿಯ ಕುರಿತು ಆ ಮಾಧ್ಯಮವೇ ಮಾತನಾಡತೊಡಗಬೇಕಾಗುತ್ತದೆ.  ಅದನ್ನು ಬಿಟ್ಟು, ಆ ಮಾಧ್ಯಮವನ್ನು ಬಳಸಿಕೊಂಡ ವ್ಯಕ್ತಿ ಮಾತನಾಡತೊಡಗಿದರೆ, ಆಗ ಆ ಕೃತಿ ಅಥವ ಸ್ವತಃ ಆ ಕೃತಿಯ ಹಿಂದಿರುವ ವ್ಯಕ್ತಿ ವಾಚಾಳಿ ಅನ್ನಿಸಿಕೊಳ್ಳುತ್ತಾರೆ.

ತಲ್ಲೂರು ಅವರ ಬಹುತೇಕ ಕೃತಿಗಳಲ್ಲಿ ಮಾಧ್ಯಮವೇ ಕೃತಿ ಆಗುವ ಗುಣ ಇರುವುದರಿಂದಲೇ ಅವು ಹೆಚ್ಚು ಕಾಡತೊಡಗುತ್ತವೆ.

ಅದಕ್ಕೆ ಒಂದೆರಡು ಉದಾಹರಣೆಗಳನ್ನು ಕೊಡುತ್ತೇನೆ.

ಅವರ ಆರಂಭದ ಕೃತಿಗಳಲ್ಲೊಂದು “ಮೇಡ್ ಇನ್ ಇಂಗ್ಲಂಡ್- ಅ ಟೆಂಪಲ್ ಡಿಸೈನ್ ಫಾರ್ ಇಂಡಿಯಾ” – 2002. ಅತಿಯಾದ ಪ್ಲಾಸ್ಟಿಕ್ ಬಳಕೆ, ಇಂಟರ್ನೆಟ್‌ನಲ್ಲಿ ಪೂಜೆ, ಗಲ್ಲಿ ಮೂಲೆಗಳಲ್ಲಿ ದೇವರುಗಳನ್ನಿಡುವ ಟ್ರೆಂಡ್ ಉತ್ತುಂಗದಲ್ಲಿದ್ದ ಕಾಲದಲ್ಲೇ ಸಿದ್ಧವಾದ ಈ ಕೃತಿ, ಮಡಿಚಿ ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯಬಲ್ಲ ಪ್ಲಾಸ್ಟಿಕ್ ಗೋಪುರವೊಂದರ ಒಳಗೆ  ವೀಕ್ಷಕರಿಗೆ ದೇವರನ್ನು ಬ್ಯಾಟರಿ ಹಿಡಿದು ಅರಸಲು ಅನುವು ಮಾಡಿಕೊಡುತ್ತದೆ.

ತಲ್ಲೂರು ಅವರ “ಗ್ರಾಫ್ಟ್” – 2010 ಸರಣಿಯ ಕೃತಿಗಳು ಕೂಡ ಇಂತಹದೇ ಗುಣ ಹೊಂದಿವೆ. ಹೊರನೋಟಕ್ಕೆ ಸಾಧಾರಣ ಮರವೊಂದರ ಬೊಡ್ಡೆಯ ಉಂಗುರಗಳಂತೆ ಕಾಣಿಸುವ ಈ ಕೃತಿಗಳು ಹತ್ತಿರಕ್ಕೆ ಹೋದಾಗ ಬೇರೆಯದೇ ಕಥೆ ಹೇಳುತ್ತವೆ. ಮರದ ಚಿಕ್ಕ ಚಿಕ್ಕ ತುಂಡುಗಳನ್ನು ಇನ್-ಲೇ ವಿಧಾನದಲ್ಲಿ ಜೋಡಿಸಿ ಮಾಡಲಾಗಿರುವ, ಮರದ ಬೊಡ್ಡೆಯ ಉಂಗುರಗಳನ್ನು ಹೋಲುವ ಕಲಾಕೃತಿಗಳು ಇವು. ಇಲ್ಲಿ ಮರದ ತೆಳು ಚಕ್ಕೆಗಳೇ ಮರದ ಬಗ್ಗೆ ಮಾತನಾಡುತ್ತಿವೆ.

“ವಿಡಿ ವಿನಿ ವಿಸಿ” – 2013  ಕೃತಿಯಲ್ಲಿ ಹೇಗೆ ಕರಾವಳಿಯ ಆವೆಮಣ್ಣಿನ ಹಂಚುಗಳು ದೇಶಾಂತರ ಹೋಗುವ ಪಾಡಿಗೆ ಸಿಕ್ಕಿಹಾಕಿಕೊಂಡವು ಎಂಬ ಬಗ್ಗೆ “ಕ್ವಿಂಟೆಸೆನ್ಷಿಯಲ್” – 2012 ಕೃತಿಯಲ್ಲಿ ಎಲಿಫೆಂಟಾದ ಆನೆಯ ಕಥೆಯ ಬಗ್ಗೆ “ಎಟಿಎಂ” – 2012ನಲ್ಲಿ ಗೆದ್ದಲು ಹಿಡಿದಂತೆ ಕಾಣುವ ಹೊಚ್ಚ ಹೊಸ ಮರದ ಬೀಸಣಿಗೆಯ ಕುರಿತು ಇದೇ ಪುಸ್ತಕದ ಇತರ ಲೇಖನಗಳಲ್ಲಿ ಹಿರಿಯ ವಿಮರ್ಶಕರು ವಿವರಿಸುವ ಮೂಲಕ  ಮಾಧ್ಯಮವೇ ಹೇಗೆ ಕೃತಿಯಾಗಿ ಕಥೆ ಹೇಳುತ್ತಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಅವರ ತೀರಾ ಇತ್ತೀಚಿನ ಕೃತಿ  “X” – 2017 ಕೂಡ, ಕೈ ಹೆಣಿಗೆಯ ಹಲವು ಕ್ರಾಸ್‌ಸ್ಟಿಚ್‌ಗಳಲ್ಲೇ ಒಂದು ಕ್ರಾಸ್‌ಸ್ಟಿಚ್ಚಿನ ಕಥೆ ಹೇಳುತ್ತದೆ.

ಸಂವಾದಿ ಕಲಾಕೃತಿಗಳು

ತಲ್ಲೂರು ಕೃತಿಗಳಲ್ಲಿ ವೀಕ್ಷಕ ಮತ್ತು ಕೃತಿ ಬೇರೆಬೇರೆ ಆಗಿರುವುದಿಲ್ಲ. ವೀಕ್ಷಕ ಕೂಡ ಕೃತಿಯ ಭಾಗವೇ ಆಗಿ ಆ ಕೃತಿಯನ್ನು ಅನುಭವಿಸುವುದು ವಿಶಿಷ್ಟವಾಗಿರುತ್ತದೆ. ಈ ಅನುಭವಿಸುವಿಕೆಯ ಪದರುಗಳೂ  ವೀಕ್ಷಕರ ಒಳಗೊಳ್ಳುವಿಕೆಯನ್ನಾಧರಿಸಿ ಬೇರೆ ಬೇರೆ ಆಳದಲ್ಲಿರುತ್ತವೆ. ಕಲಾವಿದನ ಉದ್ದೇಶ, ಆ ಕೃತಿ ಪ್ರದರ್ಶಿತವಾಗಿರುವ ಪರಿಸರ, ವೀಕ್ಷಕನ ಅನುಭವ ಮತ್ತು ಒಬ್ಬ ವೀಕ್ಷಕನ ಅನುಭವ ಆಧರಿಸಿ ಸಿಗುವ ಒಟ್ಟಂದದ ಅನುಭವ… ಹೀಗೆ.

ಉದಾಹರಣೆಗೆ, ತಲ್ಲೂರು ಅವರ “ಪ್ಯಾನಿಕ್ ರೂಂ”- 2006 ತೆಗೆದುಕೊಳ್ಳಿ. ಅಲ್ಲಿ ವೀಕ್ಷಕನಿಗೆ ಆರಂಭದಲ್ಲಿ, ತಕ್ಷಣಕ್ಕೆ ನೋಡಲು ದೊಡ್ಡದೇನೂ ಇರುವುದಿಲ್ಲ. ಆದರೆ, ವೀಕ್ಷಕ ಬಟನ್ ಒತ್ತುತ್ತಲೇ ಆತನ/ಆಕೆಯ ಸುತ್ತ ಆಳೆತ್ತರದ ಅಕ್ಕಿ ಮೂಟೆಗಳ ಗೋಡೆಯೊಂದು ಎದ್ದು ನಿಲ್ಲುತ್ತದೆ. ಈ ಗೋಡೆ ತಕ್ಷಣಕ್ಕೆ ಕೆಳಗಿಳಿಯದಿದ್ದಾಗ, ಒಳಗೆ ಬಂಧಿ ಆಗುವ ವೀಕ್ಷಕನ ಆತಂಕಗಳು ಅಲ್ಲಿರುವ ಕ್ಯಾಮರಾ ಮೂಲಕ ಹೊರಗೆ ಪರದೆಯ ಮೇಲೆ ಪ್ರದರ್ಶಿತವಾಗುತ್ತಿರುತ್ತವೆ.

ಇದು ತಲ್ಲೂರು ಅವರ ಬಹುಚರ್ಚಿತ ಕಲಾಕೃತಿಗಳಲ್ಲಿ ಒಂದು. ಅವರ ಇನ್ನೊಂದು ಕಲಾಕೃತಿ “ಸೊವನೀರ್ ಮೇಕರ್” – 2005ನಲ್ಲಿ, ಮುಳ್ಳುತಂತಿ ಬೇಲಿಯನ್ನು ನಿರ್ಮಿಸುವ ಯಂತ್ರವೊಂದು ಗ್ಯಾಲರಿಯ ಒಳಗೆ ಮುಳ್ಳುತಂತಿಗಳನ್ನು ಉತ್ಪಾದಿಸುತ್ತದೆ. ವೀಕ್ಷಕ ಬಟನ್ ಒತ್ತಿದಾಗ, ತಂತಿ ಉತ್ಪಾದನೆ ಆಗುತ್ತದೆ. ಜೊತೆಗೆ ಜಗತ್ತಿನ ಎಲ್ಲ ದೇಶಗಳ ರಾಷ್ಟ್ರಗೀತೆಗಳು ಒಂದಾದ ಮೇಲೊಂದರಂತೆ ಮೊಳಗುತ್ತಿರುತ್ತವೆ. ವೀಕ್ಷಕ, ಅಲ್ಲಿ ತಾನು ಉತ್ಪಾದಿಸಿದ ತಂತಿಯ ತುಂಡನ್ನು ಸ್ಮರಣಿಕೆ ಆಗಿ ಪಡೆಯಬಹುದು. ಹಲವು ಪೇಟೆಂಟ್ ಕದನಗಳಿಗೆ ಕಾರಣ ಆಗಿದ್ದ ಚರಿತ್ರೆ ಉಳ್ಳ ಈ ಮುಳ್ಳುತಂತಿ ಉತ್ಪಾದನಾ ಯಂತ್ರದ ‘ಸೊವನೀರ್ ಯಂತ’ ಮಾದರಿಗೆ ತಲ್ಲೂರು ಪೇಟೆಂಟ್ ಅರ್ಜಿ ಸಲ್ಲಿಸಿರುವುದನ್ನೂ ಅಲ್ಲಿ ಪ್ರದರ್ಶಿಸಲಾಗಿದೆ. ಹೀಗೆ, ವೀಕ್ಷಕ ಕಲಾಕೃತಿಯ ಜೊತೆ, ಅದರ ಚರಿತ್ರೆ, ರಾಜಕೀಯ, ಆರ್ಥಿಕತೆ ಇವೆಲ್ಲದರ ಬಗ್ಗೆಯೂ ಸಂವಾದ ನಡೆಸುತ್ತಾ ಅದನ್ನು ಅನುಭವಿಸಬೇಕಾಗುತ್ತದೆ.

ಅವರ ಇತ್ತೀಚೆಗಿನ “ಇಂಟಾಲರೆನ್ಸ್” – 2017 ಕೃತಿಯಲ್ಲಿ ವ್ಯಕ್ತಿಯೊಬ್ಬ ಕಲ್ಲಿನ ತುಂಡುಗಳನ್ನು ತನ್ನ ಕಾಲುಗಳ ಮೇಲೆ ಹೇರಿಕೊಂಡು ಕುಳಿತಿದ್ದಾನೆ. ಹೊರನೋಟಕ್ಕೆ ಅದು ಹಾಗೆ ಕಂಡರೂ, ಮೂಲದಲ್ಲಿ ಅದು ವ್ಯಕ್ತಿ ಸಹಿತ ಏಕಶಿಲಾ ರಚನೆ. ವೀಕ್ಷಕರು ಆ ಶಿಲ್ಪದ ಮೇಲೆ ತಮಗೆ ಇಷ್ಟ ಬಂದಂತೆ ಗ್ರಾಫಿಟಿಗಳನ್ನು (ಗೋಡೆಬರಹ) ಕೆತ್ತಬಹುದು, ಅದಕ್ಕಾಗಿ ಕಲ್ಲಿನ ಮೇಲೆ ಕೊರೆಯಬಲ್ಲ  ಪೆನ್ನನ್ನು ತಲ್ಲೂರು ಅಲ್ಲಿ ವ್ಯವಸ್ಥೆ ಮಾಡಿದ್ದಾರೆ.

ಹೀಗೆ, ಪ್ರತಿಯೊಂದು ಕೃತಿ ಕೂಡ ಕೇವಲ ಕಂಡು ಮುಂದಕ್ಕೆ ಹೋಗುವ ಹಂತಕ್ಕಿಂತ ಹಲವು ಹೆಜ್ಜೆ ಮುಂದೆ ಹೋಗಿ, ವೀಕ್ಷಕನಿಗೆ ಅನುಭವವಾಗಿ ಒದಗಿಬರುವುದು ತಲ್ಲೂರು  ಅವರ ಬಹುತೇಕ ಎಲ್ಲ ಕಲಾಕೃತಿಗಳ ವೈಶಿಷ್ಟ್ಯ. ಹಾಗಾಗಿ  ತಲ್ಲೂರು ಎಲ್. ಎನ್. ತಮ್ಮ ಕಲಾಕೃತಿಗಳನ್ನು ‘ಇಂಟರಾಕ್ಟಿವ್ ಆರ್ಟ್ ಆಬ್ಜೆಕ್ಟ್ಸ್’ ಎಂದೇ ಗುರುತಿಸುತ್ತಾರೆ.

ಭಾರತೀಯ ಸಾಂಸ್ಕೃತಿಕ, ಜನಪದ ಬದುಕಿನ ಅನುಭವಗಳನ್ನು ಹಾಗೆಯೇ ಎತ್ತಿ ಲೋಕಮುಖಕ್ಕೆ ತೋರಿಸುವ ಈ ತನಕದ ಹಾದಿಯಿಂದ ಭಿನ್ನವಾಗಿ, ಆ ಅನುಭವಗಳಿಗೆ ದೂರದಿಂದ ನಿಂತು ನೋಡಿದಾಗ ಸಿಗುವ ಹೊರನೋಟವನ್ನು ಮತ್ತು ಅದೇ ವೇಳೆಗೆ ತೀವ್ರವಾದ ಒಳನೋಟಗಳನ್ನೂ ಕೂಡ ಕೊಡಲು ಸಾಧ್ಯ ಆಗಿರುವುದು ಮತ್ತು ಜಾಗತಿಕ ಸಂದರ್ಭದಲ್ಲೂ ಅದನ್ನು ಸಮಕಾಲೀನ ಕಲಾಕೃತಿಯಾಗಿ ವ್ಯಕ್ತಗೊಳಿಸಲು ಸಾಧ್ಯ ಆಗಿರುವುದು ತಲ್ಲೂರು ಅವರ ಹೆಚ್ಚುಗಾರಿಕೆ. ಕಲಾವಿದ ತಲ್ಲೂರು ಎಲ್. ಎನ್. ಏಷ್ಯನ್ ಅನುಭವಗಳಿಗೆ ಒಬ್ಬ ಕ್ರಿಟಿಕಲ್ ಇನ್ಸೈಡರ್ ಆಗಿ ಜಾಗತಿಕ ಸಮಕಾಲೀನ ಕಲಾರಂಗದಲ್ಲಿ  ಗುರುತಾಗತೊಡಗಿದ್ದಾರೆ.

 

‍ಲೇಖಕರು Avadhi GK

February 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Devaraj Shettigar

    Inspiring article on the many facets of a true achiever. May more laurels come his way.

    ಪ್ರತಿಕ್ರಿಯೆ
  2. Dr Nagarathna

    WOW ….it’s high time to know more about him.I have seen only neighbourhood friendly down to earth chap yet

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: