ಕನ್ನಡದಾ.. ಕಥೆ ಕೇಳೂ.. ಕನ್ನಡದ ಕಂದಾ..
– ಗವಿಸಿದ್ಧ ಬಿ. ಹೊಸಮನಿ
ಸೂಫಿ ಸಂತರ ನಾಡಿನಲ್ಲಿ ೭೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನುಡಿ ತೇರಿಗೆ ನೆನ್ನೆಯೇ ಚಾಲನೆ ಸಿಕ್ಕಿದೆ. ಇದಕ್ಕೆ ನಾಡಿನ ನಾನಾ ಭಾಗದ ಕನ್ನಡ ಪ್ರೇಮಿಗಳು, ಬರೆಹಗಾರರು, ಬುದ್ಧಿ ಜೀವಿಗಳು, ಸಾಂಸ್ಕೃತಿಕ ಚಿಂತಕರು ಸಾಕ್ಷಿಯಾಗಿದ್ದಾರೆ. ಬಿಸಿಲ ನಾಡು ಮೊದಲಾಗಿ ಎಲ್ಲೇಡೆ ಕನ್ನಡ ಕುರಿತು ಮಾತು-ಮಂಥನ. ಕನ್ನಡ ಹಾಡು-ಪಾಡು ಕೇಳಿ ಬರುತ್ತಿದೆ. ಸಮ್ಮೇಳನದ ನೆಪದಲ್ಲಿ ಎಲ್ಲರೂ ಒಂದೆಡೆ ಸೇರುವುದನ್ನು ಗಮನಿಸಿದರೆ ‘ಕನ್ನಡ’ಎಂಬುದು ಬರೀ ಒಂದು ಭಾಷೆಯಾಗದೇ ಅದು ಮಾನವೀಯ ಸಂಬಂಧ ಕಟ್ಟುವ, ಬೆಸೆಯುವ ಶಕ್ತಿಯನ್ನೇ ತನ್ನೊಳಗಿರಿಕೊಂಡಂತಿದೆ. ಆ ಸೌಹಾರ್ದಯುತ ಸಂಬಂಧಕ್ಕೆ ರೊಟ್ಟಿಯ ನಾಡು ಬಿಜಾಪುರದ ಮಣ್ಣೇ ಸಾಕ್ಷಿಯಾಗಿದೆ.
ಕನ್ನಡ ಎಂಬುದು ಒಂದು ನಿರ್ಧಿಷ್ಟ ಪ್ರದೇಶದ ಜನರಾಡುವ ಒಂದು ಭಾಷೆಯಾದರೂ ಅದರ ಹರವು ಬಹು ವಿಸ್ತಾರವಾದುದು. ಈ ದಿಶೆಯಲ್ಲಿ ಆಲೋಚಿಸಿದರೆ ಕನ್ನಡ ಎಂದರೆ ಅದು ಒಂದು ಸಂಸ್ಕೃತಿ, ಬದುಕಿನ ಕ್ರಮವೇ ಆಗಿದೆ. ನಮ್ಮ ಮಾತು, ಆಲೋಚನೆ, ಸಂತಷ, ಸಂಕಟ, ನಿರೀಕ್ಷೆ, ಭರವಸೆ ಎಲ್ಲವನ್ನೂ ಈ ಕನ್ನಡ ಒಳಗೊಂಡಿದೆ. ಇಂತಹ ಕಾರಣದಿಂದಲೇ ಸಮ್ಮೇಳನದ ನೆಪದಲ್ಲಿ ಕನ್ನಡತ್ವದ ಎಲ್ಲವನ್ನೂ ಚರ್ಚೆಗೆಳೆದುಕೊಳ್ಳುತ್ತೇವೆ. ಚಿಂತನ-ಮಂಥನ ಮಾಡುತ್ತೇವೆ. ಸಮ್ಮೇಳನದಲ್ಲಿ ಈಗದನ್ನು ಮಾಡುತ್ತಿದ್ದೇವೆ. ಆದರೆ, ೭೯ನೇ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಿ ನಾವು.. ‘ಕನ್ನಡ ಎಲ್ಲವನ್ನೂ ಒಳಗೊಂಡು ಕನ್ನಡವಾಗಿಯೇ ಉಳಿದಿದೆಯೇ.?’ ಎನ್ನುವ ಒಂದೇ ಒಂದು ಪ್ರಶ್ನೆಯನ್ನು ಹಾಕಿಕೊಂಡರೆ ಬರುವ ಉತ್ತರ ನಿರಾಶದಾಯಕವಾದುದು..!
ಪಟ್ಟಣ ಪ್ರದೇಶಗಳನ್ನು ಬಿಟ್ಟರೆ ನಮ್ಮ ಹಳ್ಳಿಗಳಲ್ಲಿ ಕನ್ನಡದ ಬೇರುಗಳು ಗಟ್ಟಿಯಾಗಿಯೇ ಇವೆ. ಕನ್ನಡ, ಕನ್ನಡದ ಆಶಯಕ್ಕೆ ಏನೂ ಆಗಿಲ್ಲ, ಏನೂ ಆಗುವುದೂ ಇಲ್ಲ. ಮತ್ತಷ್ಟು ಸಮೃದ್ಧಗೊಳ್ಳುತ್ತ ಹೊಸ ಹೊಸ ದಿಕ್ಕಿನತ್ತ ಸಾಗುತ್ತಿದೆ ಎನ್ನುವ ಅಭಿಪ್ರಾಯವು ನಮ್ಮ ಕನ್ನಡದ ಹಿರಿಯ ಚಿಂತಕರು, ವಿಮರ್ಶಕರಿಂದ ಕೇಳಿ ಬರುತ್ತಿದೆ. ಈ ಅಭಿಪ್ರಾಯದಂತೆ ಕನ್ನಡಕ್ಕೆ ಕುತ್ತು ಬಾರದಿದ್ದರೆ, ಅದು ಎಲ್ಲವನ್ನೂ ಒಳಗೊಂಡು, ಅರಗಿಸಿಕೊಂಡು ಬೆಳೆದರೆ ಯಾವ ತೊಂದರೆಯೂ ಇಲ್ಲ. ಹಾಗೆ ಬೆಳೆದರೆ ಕನ್ನಡಿಗರಿಗೆ ಒಳ್ಳೆಯದೇ ಆಗುತ್ತದೆ.
ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪುರಸ್ಕಾರಗಳು ಸಂದಿವೆ. ಹೊಸ ತಲೆಮಾರಿನ ಲೇಖಕರು ಬಹಳಷ್ಟು ಗಂಭೀರವಾಗಿಯೇ ಬರೆಯುತ್ತ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಬ್ಲಾಗ್ ಬರೆಹದ ಮೂಲಕ ಕನ್ನಡ ಮತ್ತಷ್ಟು ಇಂಬು ಪಡೆದುಕೊಳ್ಳುತ್ತಿದೆ ಎನ್ನುವ ಅಂಶಗಳತ್ತ ಗಮನ ಹರಿಸಿದರೆ ಕನ್ನಡ ಪ್ರಗತಿಯತ್ತ ಸಾಗುವುದು ಕಂಡು ಬರುತ್ತದೆ. ಈ ಪ್ರಗತಿ ಬಗ್ಗೆ ಯಾವುದೇ ಸಂಶಯವೂ ಇಲ್ಲ.
ಬದುಕಿನ ದೃಷ್ಟಿಯಿಂದಾಗಲಿ, ಆಲೋಚನೆ ಕ್ರಮದಿಂದಾಗಲಿ, ಅವರು ತೆಗೆದುಕೊಳ್ಳುವ ನಿರ್ಧಾರದಿಂದಾಗಲಿ ಬೇರೆ ಬೇರೆ ನೆಲೆಯಿಂದ ಕನ್ನಡ, ಕನ್ನಡತ್ವ ಸರಿ ಇದೆಯೋ ಇಲ್ಲೋ ಅದು ಬೇರೆ ಚರ್ಚೆ. ಆದರೆ, ಭಾಷೆಯ ದೃಷ್ಟಿಯಿಂದ ಕನ್ನಡದ ಮುಂದೆ ಹಿಂದಿನಕ್ಕಿಂತ ಈಗ ಬಹುದೊಡ್ಡ ಬಿಕ್ಕಟ್ಟು ಇದೆ ಎಂದೆನಿಸುತ್ತದೆ.
ಈ ಕೆಳಗಿನ ಕೆಲವು ಅಂಶಗಳನ್ನೇ ಗಮನಿಸಿ..
ಕನ್ನಡದ ಕಥೆ-೧
ನಮ್ಮ ಬಡಾವಣೆಯಲ್ಲಿ ನಗರಸಭೆಯವರು ಬರೆಯಿಸಿ ಹಾಕಿರುವ ಫಲಕದ ಹೆಸರು ‘ಬನಶಂಕರಿ ಲೇಔಟ್’ ಎಂದಿದೆ. ಆ ಮನೆಯ ಹೆಸರು ‘ಚಿಂಟೂ ನಿಲಯ’ ಎಂದಿದೆ. ಒಂದಷ್ಟು ಫಲಕಗಳು ಹೀಗಿವೆ. ‘ಭವಾನಿ ಬುಕ್ ಸೆಂಟರ್’, ‘ಕರ್ನಾಟಕ ಕಾನ್ವೆಂಟ್ ಸ್ಕೂಲ್’.
ಕನ್ನಡ ಕಥೆ-೨
ನಾನು ಆ ಹುಡುಗನಿಗೆ ಕೇಳಿದೆ ‘ಪುಟ್ಟಾ, ನಿಮ್ಮ ಚಿಕ್ಕಪ್ಪ ಎಲ್ಲಿ? ಆ ಹುಡುಗ ಹೇಳಿದ ‘ನಮ್ಮಮನೇಲಿ ಚಿಕ್ಕಪ್ಪ ಇಲ್ಲ, ಅಂಕಲ್ ಅಷ್ಟೇ ಇದಾರೆ’ ಎಂದು. ಪುಟ್ಟ ಹುಡುಗಿಯೊಬ್ಬಳನ್ನು ಕೇಳಿದೆ, ‘ಪುಟ್ಟಿ , ಪ್ರಜಾರಾಜ್ಯೋತ್ಸವವನ್ನು ಯಾವಾಗ ಆಚರಿಸುತ್ತಾರೆ’ ಎಂದು ಕೇಳಿದೆ. ಆಗ ಆ ಹುಡುಗಿ ಹೇಳಿತು, ‘ಇಷ್ಟು ದೊಡ್ಡಾವ್ರದೀರಿ ಅಂಕಲ್ ನಿಮಗೆ ಗೊತ್ತಾಗೋದಿಲ್ಲಾ, ಅದು ರಿಪಬ್ಲಿಕ್ ಡೇ ಅಂಕಲ್’ ಎಂದು ಹೇಳಿದಳು. ‘ಹಾಲು, ಎಲ್ಲಿಂದ ಸಿಗುತ್ತದೆ ಅಲ್ವಾ ಪುಟ್ಟಾ’ ಎಂದು ಕೇಳಿದೆ. ಆ ಬಾಲಕ ಹೇಳಿದ ‘ಡೈರಿಯಿಂದ’ ಎಂದ. ‘ಆಕಳಿನಿಂದ ಬರುತ್ತೆ ಅಲ್ವಾ’ ಅಂದೆ. ಮತ್ತೆ ಹೇಳಿದ ‘ಡೈರಿಯಿಂದ ಬರುತ್ತೆ’ ಎಂದು.
ಆ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬಳು ‘ಲಗೋರಿ ಆಟ ಗೊತ್ತಾ ಮಕ್ಕಳೆ ನಿಮಗೆ?’ಎಂದು ಕೇಳುತ್ತಾರೆ. ಆಗ ಆ ಮಕ್ಕಳು ಹೇಳುವ ಉತ್ತರ ‘ನಮಗೆ ಕಾರ್ ರೇಸ್, ಸ್ಪೈಡರ್ ಮ್ಯಾನ್ ಗೊತ್ತು ಮೇಡಂ’ ಎಂದು. ಆತ ಪ್ರೌಢಶಾಲೆಯಲ್ಲಿ ಮಾತೃಭಾಷೆ ಕನ್ನಡ ವಿಷಯ ಕಲಿಸುವ ಶಿಕ್ಷಕ. ನಿತ್ಯವೂ ಕನ್ನಡ ಭಾಷೆಯ ಬಗ್ಗೆ ಪಾಠ ಮಾಡುತ್ತಾನೆ. ಆತನ ಮಕ್ಕಳು ಒಂದನೇ ತರಗತಿಯಿಂದಲೇ ಆಂಗ್ಲ (ಇಂಗ್ಲಿಷ್) ಮಾಧ್ಯಮದಲ್ಲಿ ಓದುತ್ತಿವೆ.
ಕನ್ನಡ ಕಥೆ-೩
ಆತ, ಕನ್ನಡ ಪಂಡಿತ. ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾನೆ. ನೆಲ-ಜಲ-ಭಾಷೆ ಕುರಿತು ಪುಸ್ತಕ ಬರೆದಿದ್ದಾನೆ. ಆತನ ಮುದ್ದಿನ ಪುತ್ರನೊಬ್ಬನು ದಿನಾಲು ತಂದೆಯ ಜತೆ ಕುಶಲೋಪರಿ (ಎಸ್ಎಂಎಸ್ ಮೂಲಕ) ನಡೆಸುವುದು ಹೀಗೆ.. ‘ಪ್ರೀತಿಯ ಪೇರೆಂಟ್ಸ್ ನಾನು ನೈಸಾಗಿದ್ದೀನಿ. ನಂಗೆ ಅರ್ಜೆಂಟಾಗಿ ಅಮೌಂಟ್ ಕಳ್ಸಿ ’ ಎಂದು. ನಮ್ಮ ಮಕ್ಕಳಿಗೆ ಮಾಹಾತ್ಮ ಗಾಂಧೀಜಿಯವರು ಗೊತ್ತು. ಆದರೆ, ಬಾವುಟದ ಹಾಡು ಗೊತ್ತಿಲ್ಲ. ‘ಏ ಫಾರ್ ಯಾಪಲ್.. ಬಿ ಫಾರ್ ಬೋಟ್..’ ಹಾಡುತ್ತ ಬದುಕಿನ ಕನಸು ಕಾಣುತ್ತವೆ.
ಕನ್ನಡ ಕಥೆ-೪
ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಯಾವುದೋ ಸ್ಥಳದ ಬಗ್ಗೆ ಅಲ್ಲಿನವರನ್ನು ಕೇಳಿ, ‘ನನಗೆ ಕನ್ನಡ ಬರುವುದಿಲ್ಲ’ ಎಂದು ಅವರು ತಲೆ ಅಲ್ಲಾಡಿಸುತ್ತಾರೆ. ಬೆಂಗಳೂರಿನಲ್ಲಿ ಮಹಾತ್ಮಗಾಂಧಿ ರಸ್ತೆ (ಎಂ.ಜಿ.ರಸ್ತೆ) ಎಲ್ಲರಿಗೂ ಗೊತ್ತು. ನೀವು ಅಲ್ಲಿಗೆ ಹೋದಾಗ ಎಂ.ಜಿ ರಸ್ತೆಗುಂಟ ಇರುವ ನಾನಾ ಅಂಗಡಿಗಳ ಬಹುತೇಕರಿಗೆ ‘ಎಂ.ಜಿ. ರಸ್ತೆ ಎಂದರೇನು ಎಂದು ಕೇಳಿ’ ಅವರು ಗೊತ್ತಿಲ್ಲ. ಎನ್ನುತ್ತಾರೆ. ‘ಇದು ಮಹಾತ್ಮಗಾಂಧಿ ರಸ್ತೆಯಾ’ ಎಂದು ಮತ್ತೊಮ್ಮೆ ಕೇಳಿ, ‘ಗೊತ್ತಿಲ್ಲ’ ಎನ್ನುತ್ತಾರೆ. ನಿತ್ಯ ಅಲ್ಲಿಯೇ ಬೆಳಗುಗಾಣುವ ಬಹುತೇಕರಿಗೆ ಎಂಜಿ ರಸ್ತೆ ಎಂದರೆ ಅದು ಮಹಾತ್ಮಗಾಂಧಿ ರಸ್ತೆ ಎಂದು ಗೊತ್ತೇ ಇಲ್ಲ.!
ಅಲ್ಲಲ್ಲಿನ ಕೆಲ ಫಲಕಗಳು.. : ನಿರಂಜನ ಸರ್ಕಲ್, ಅಮೃತಾ ಕ್ಲಿನಿಕ್, ಕರುನಾಡು ಗಾರ್ಮೆಂಟ್ಸ್ . ಕನ್ನಡ ಡಿಬೆಟ್ ಕಾಂಪಿಟೇಶನ್, ಇದು ೧೦ ಸ್ಟ್ಯಾಂಡರ್ಡ್ ಕ್ಲಾಸ್..
ಹೀಗೆ ನಮ್ಮ ಮನೆ, ಶಾಲೆ, ಕಚೇರಿ, ರಸ್ತೆ, ಬಸ್ನಿಲ್ದಾಣ ಎಲ್ಲಾ ಕಡೆಯೂ ಕನ್ನಡ-ಇಂಗ್ಲಿಷ್ ಎರಡೂ ಬೆರೆತಿವೆ. ಇಂಗ್ಲಿಷಿನ ಭರಾಟೆಯಲ್ಲಿ ಕನ್ನಡ ಸಪ್ಪೆಯಾಗುತ್ತಲೇ ಸಾಗಿದೆ. ಮುಂದೆ ಹೇಗೋ.?!
ಕರ್ನಾಟಕ, ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದೆ ಎಂದು ಹೆಮ್ಮೆಯಿಂದ ಬರೆಯುವ, ಹೇಳುವ ನಾವು ವಾಸ್ತವದಲ್ಲಿ ಕನ್ನಡ ಸ್ಥಿತಿ ಏನಾಗಿದೆ ಎಂದು.? ಕನ್ನಡಿಗರಾದ ನಾವು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕಿದೆ. ಕನ್ನಡ ಚಿಂತನೆ ಎಂದರೆ ಅದು ಹೀಗೆ ಇರಬೇಕು ಎಂದಾಗದೇ ಆ ಚಿಂತನೆಯಲ್ಲಿ ಒಬ್ಬ ಜನಸಾಮಾನ್ಯ, ವಿದ್ಯಾರ್ಥಿ, ಕೂಲಿ ಕಾರ್ಮಿಕ, ರೈತ ಹೀಗೆ ಎಲ್ಲರನ್ನೂ ಒಳಗೊಂಡು ಚರ್ಚೆಯಾದಾಗ ಮಾತ್ರ ಕನ್ನಡ ಎಲ್ಲವನ್ನೂ ಒಳಗೊಂಡು ಕನ್ನಡವಾಗಿ ಉಳಿಯಲು ಸಾಧ್ಯವೇನೋ ಎಂಬುದು ನನ್ನ ಅಭಿಪ್ರಾಯ.
ಇನ್ನೂ ತನ್ನ ಸುಧೀರ್ಘ ಹಾದಿಯಲ್ಲಿ ಕನ್ನಡಕ್ಕೆ, ಕನ್ನಡ ಭಾಷೆಗೆ ಒಳ್ಳೆಯ ಹಾಗೂ ಕೆಟ್ಟ ಘಳಿಗೆಗಳೂ ಎದುರಾಗಿವೆ. ಭಾಷಾಂಧತೆ, ಏಕರೂಪ ಶಿಕ್ಷಣ ಇಲ್ಲದಿರುವುದು, ಇಂಗ್ಲಿಷ್ನ ಹೇರಿಕೆ, ಗಡಿ ವಿವಾದ ಇನ್ನೂ ಹತ್ತು ಹಲವು ಸಮಸ್ಯೆಗಳು ನಮ್ಮ ಮುಂದಿವೆ. ಜಾಗತೀಕರಣಕ್ಕೆ ಅಸ್ತು ಹಾಕಿದ ದಿನದಿಂದಲೇ ಕನ್ನಡಕ್ಕೆ ಎದುರಾದ ಸಮಸ್ಯೆಗಳು ಆತಂಕಕಾರಿಯಾದವು. ಆ ಎಲ್ಲ ಸಮಸ್ಯೆಗಳ ಸ್ವರೂಪ ಈಗ ಬದಲಾಗಿ ಮತ್ತಷ್ಟು ಜಟಿಲಗೊಂಡಿವೆ. ಜಾಗತೀಕರಣದ ಕರಿ ನೆರಳು ಮೊದಲಿಗಿಂತ ಈಗ ಕನ್ನಡದ ಮೇಲೆ ಇನ್ನೂ ದಟ್ಟವಾಗಿಯೇ ಇದೆ.!
ಕನ್ನಡ ಮೇಲೆ ಇಂಗ್ಲಿಷ್ ಹೇರಿಕೆ ಇದು ಕನ್ನಡಿಗರನ್ನು ಅತಿ ಹೆಚ್ಚು ಕಾಡಿದ ಸಮಸ್ಯೆ. ಅರ್ಧ ಕನ್ನಡ ಇನ್ನರ್ಧ ಇಂಗ್ಲಿಷ್ ಬಳಸಿ ಮಾತಾಡುವುದು ಈಗಿನ್ನೂ ಹೆಚ್ಚುತ್ತಿದೆ. ಇಂಗ್ಲಿಷನ್ನು ಜ್ಞಾನಕ್ಕಾಗಿ ಕಲಿತರೆ ಕನ್ನಡಕ್ಕೆ ಯಾವ ತೊಂದರೆಯೂ ಇಲ್ಲ. ನಾವು ಹೆಚ್ಚು ಹೆಚ್ಚು ಇಂಗ್ಲಿಷ್ ಕಲಿತರೆ ಮಾತ್ರ ನಮಗೆ ಕನ್ನಡ ಬಗ್ಗೆ ಕಾಳಜಿ ಹೊಂದಲು ಸಾಧ್ಯ ಎನ್ನುವುದು ಕೆಲ ಭಾಷಾ ತಜ್ಞರ ವಿಚಾರ.
“ನಮ್ಮ ಶಿಕ್ಷಣ ಮಾಧ್ಯಮ ಕನ್ನಡವೇ ಇರಲಿ; ನಮ್ಮ ಜ್ಞಾನದ ಹರವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಒಂದು ಭಾಷೆಯಾಗಿ ಇಂಗ್ಲಿಷ್ನ್ನು ಕಲಿಯೋಣ. ಆದರೆ, ಮಾಧ್ಯಮವಾಗಿ ಬೇಡ’’ ಎಂಬುದು ಚಿಂತಕರಾದ ಯು.ಆರ್.ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಕನ್ನಡದ ಕುರಿತು ಗಂಭೀರವಾಗಿ ಆಲೋಚಿಸುವ ಕನ್ನಡದ ಹಲವು ಮನಸುಗಳು ಅಭಿಪ್ರಾಯವಾಗಿದೆ. ಕನ್ನಡ ಸುರಕ್ಷತೆಯ ದೃಷ್ಟಿಯಿಂದ ಈ ಅಭಿಪ್ರಾಯ ಸರಿಯಾಗಿಯೇ ಇದೆ.
ಒಂದು ಭಾಷೆಯಲ್ಲಿ ನಾವು ಪ್ರಬುದ್ಧರಾದಾಗ ಇನ್ನೊಂದು ಭಾಷೆಯನ್ನು ಉಳಿಸಲು ಸಾಧ್ಯ. ಬೇರೆ ಬೇರೆ ಭಾಷೆಗಳನ್ನು ಕಲಿಯುವುದು, ತಿಳಿಯುವುದು ತಪ್ಪಲ್ಲ. ಆ ಭಾಷೆಯನ್ನು ಪೂರ್ಣವಾಗಿ ತಿಳಿಯದೇ ಅದನ್ನು ಬರೀ ವ್ಯವಹಾರಕ್ಕಾಗಿ ಬಳಸುವುದು ತಪ್ಪು ಎನ್ನುವ ವಿಚಾರಗಳೂ ಇವೆ. ಕನ್ನಡ-ಇಂಗ್ಲಿಷ್ ವಿಷಯದಲ್ಲಿ ನಾವು ಇಷ್ಟೊಂದು ಗೊಂದಲ ಎದುರಿಸಲು ಕಾರಣ ಇಂಗ್ಲಿಷನ್ನು ನಾವು ಸಮೃದ್ಧವಾಗಿ ಕಲಿಯದೇ ಬರೀ ವ್ಯವಹಾರಕ್ಕಾಗಿ ಬಳಸಿಕೊಂಡಿರುವುದೇ ಆಗಿದೆ. ಪರಿಣಾಮ ಕನ್ನಡ ಭಾಷೆ ಇವತ್ತು ಮೊದಲಿಗಿಂತ ಹೆಚ್ಚು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂದು ವಿಷಾದದಿಂದಲೇ ಹೇಳುವ ಸ್ಥಿತಿ ಎದುರಾಗಿದೆ.
* * *
೭೯ನೇ ಅಖಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನುಡಿ ತೇರಿಗೆ ಚಾಲನೆ ನೀಡಿದ ಕೋ.ಚೆನ್ನಬಸಪ್ಪನವರು “ಕನ್ನಡಕ್ಕೆ ಕುತ್ತು ಬಾರದಿರಲಿ, ಕರ್ನಾಟಕ ಒಡೆಯದಿರಲಿ’’ ಎನ್ನುವ ಸಂದೇಶವನ್ನು ಇಡೀ ನಾಡಿನ ಜನತೆಗೆ ರವಾನಿಸಿದ್ದಾರೆ.
“ನಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಅದು ಮಾತೃಭಾಷೆಯಲ್ಲಿಯೇ ಸಿಗಬೇಕು. ಮಾತೃಭಾಷೆಯಲ್ಲಿಯ ಕಲಿಸಬೇಕು. ನಾವು ಮನೆಮನೆಗೆ ತೆರಳಿ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕರೆತರಬೇಕು. ಇಂಗ್ಲಿಷ್ ಕಲಿತರೆ ಮಾತ್ರ ನೌಕರಿ ಸಿಗುತ್ತದೆ ಎನ್ನುವ ಭ್ರಮೆಯಿಂದ ಹೊರಬರಬೇಕು. ಕನ್ನಡ ಕಲಿತರೂ ನೌಕರಿ ಸಿಗುತ್ತದೆ ಎಂಬುದನ್ನು ತಿಳಿಸಬೇಕು. ಯಾರಿಗೂ-ಯಾವುದಕ್ಕೂ ಕಮ್ಮಿ ಇಲ್ಲ ಎನ್ನುವಂತೆ ಕನ್ನಡ ಶಾಲೆಗಳನ್ನು ಸುಸಜ್ಜಿತವಾಗಿ ಕಟ್ಟಬೇಕು. ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ಕೈಬಿಡಬೇಕು. ಕನ್ನಡಕ್ಕೆ ಧಕ್ಕೆ ತರುವ ಯಾರೇ ಇರಲಿ ಅಂತವರ ವಿರುದ್ಧ ಎದೆಸೆಟಸಿ ಹೋರಾಡಬೇಕು’’ ಎನ್ನುವ ವಿಚಾರಗಳನ್ನು ತಿಳಿಸಿದ್ದಾರೆ.
ಕೋ.ಚ ಅವರ ಮಾತುಗಳನ್ನು ಪ್ರತಿಯೊಬ್ಬ ಕನ್ನಡಿಗ ಅರ್ಥಮಾಡಿಕೊಳ್ಳಬೇಕು. ಅವರ ಕಿವಿಮಾತನ್ನು ನಮ್ಮ ಸರಕಾರಗಳು, ಮಂತ್ರಿ-ಮಹೋದಯರು ಅರಿಯಬೇಕಿದೆ. ಬಹುಮುಖ್ಯವಾಗಿ ಕನ್ನಡ, ಕನ್ನಡ ಭಾಷೆ, ಸಂಸ್ಕೃತಿ ಕುರಿತು ಚಿಂತನೆ ನಡೆಸಬೇಕಿದೆ. ಕನ್ನಡದಲ್ಲಿ ಸಾಕಷ್ಟು ತೊಡಕುಗಳು ಎದುರಾಗಿವೆ. ಕನ್ನಡ ಅದು ಮಾತೃ ಭಾಷೆಯಾದರೂ ಅದು ಮಾತೃ ಭಾಷೆಯೇ ಎನ್ನುವ ಮಟ್ಟಿಗೆ ನಾವು ಕನ್ನಡವನ್ನು ಬಹು ಸಪ್ಪೆಯಾಗಿಯೇ ಬಳಸುತ್ತಿದ್ದೇವೆ.
“ನಮ್ಮ ಶಿಕ್ಷಣ ಮಾಧ್ಯಮ ಕನ್ನಡವೇ ಇರಲಿ. ನಮ್ಮ ಜ್ಞಾನದ ಹರವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಒಂದು ಭಾಷೆಯಾಗಿ ಇಂಗ್ಲಿಷ್ನ್ನು ಕಲಿಯೋಣ, ಮಾಧ್ಯಮವಾಗಿ ಬೇಡ’’ ಎನ್ನುವ ವಿಚಾರವನ್ನಾಗಲಿ, “ಇಂಗ್ಲಿಷ್ ಕಲಿತರೆ ಮಾತ್ರ ನೌಕರಿ ಸಿಗುತ್ತದೆ ಎನ್ನುವ ಭ್ರಮೆಯಿಂದ ನಾವು ಹೊರಬರಬೇಕು’’ ಎನ್ನುವ ಸಲಹೆಯನ್ನಾಗಲಿ ನಮ್ಮ ಕನ್ನಡದ ಚಿಂತಕರು ಆಗಾಗ ಹೇಳುತ್ತಲೇ ಇದ್ದರೂ ಇಂಗ್ಲಿಷ್ ಕಲಿತರೆ ಮಾತ್ರ ಬದುಕು ಎನ್ನುವ ಭ್ರಮೆಯಿಂದ ಬಹುತೇಕ ಸುಶಿಕ್ಷಿತರೇ ಇನ್ನೂ ಹೊರಬಂದಿಲ್ಲ ಎಂಬುದು ದುರಂತವೇ ಆಗಿದೆ.
ನಮ್ಮ ನಾಡಿನ ನಾಳೆಯ ನಾಗರಿಕರು, ದೇಶ ಕಟ್ಟುವ ಪ್ರಜೆಗಳು ಎನ್ನುವ ನಮ್ಮ ಬಹುದೊಡ್ಡ ವಿದ್ಯಾರ್ಥಿ ಸಮೂಹದ ಮಾತುಗಳನ್ನು ಸೂಕ್ಷ್ಮವಾಗಿ ಕೇಳಿದರೆ ನಿಜಕ್ಕೂ ಭಯವೆನಿಸುತ್ತದೆ. ಕನ್ನಡ ಭಾಷೆ ಕಲುಷಿತಗೊಳ್ಳುತ್ತಲೇ ಸಾಗಿದೆ ಎನ್ನುವ ಆತಂಕ ಎದುರಾಗುತ್ತದೆ. ಕನ್ನಡ ಎಂಬುದು ನಮ್ಮ ಮಾತೃ ಭಾಷೆ ಎಂದು ಸಾರಿ ಸಾರಿ ಹೇಳುತ್ತಿರುವಾಗಲೇ ಅದೇ ತಾಯಿ ಇಂದು ತನ್ನ ಮಗುವಿಗೆ ನೀನು ಕನ್ನಡ ಶಾಲೆಗೆ ಹೋಗಬೇಡ, ಇಂಗ್ಲಿಷ್ ಶಾಲೆಗೆ ಹೋಗು ಎಂದು ನಿತ್ಯ ತನ್ನ ಮಗುವಿಗೆ ಪಾಠ ಮಾಡುತ್ತಿದ್ದಾಳೆ. ಇಂಗ್ಲಿಷ್ ಕಲಿತರ ಮಾತ್ರ ನಿನಗೆ ಮುಂದೆ ಭವಿಷ್ಯ ಕಾದಿದೆ ಎಂದು ತನ್ನ ಮಗುವಿಗೆ ತಿಳಿಸುತ್ತಿದ್ದಾಳೆ.!
ಮನೆಯೇ ಮೊದಲು ಪಾಠಶಾಲೆ ನಿಜ. ಆದರೆ, ಮೊದಲ ಪಾಠಶಾಲೆಯಾದ ಆ ಮನೆಯಲ್ಲಿ ಈಗ ನಿತ್ಯ ‘ನೀನು ಇಂಗ್ಲಿಷ್ನ್ನೇ ಕಲಿಯಬೇಕು’ ಎನ್ನುವ ಬೋಧನೆ ನಡೆದಿದೆ. ‘ಮಮ್ಮಿ, ಡ್ಯಾಡಿ’ ಅದರೆ ಮಾತ್ರ ನನಿಗೆ ಊಟಕ್ಕೆ ಹಾಕುತ್ತೇವೆ ಎನ್ನುವ ಕಟ್ಟುಪಾಡುಗಳು ಇವತ್ತಿನ ಮಕ್ಕಳಿಗೆ ಬಾಲ್ಯದಿಂದಲೇ ಎದುರಾಗಿದೆ.
‘ನಿನ್ನ ಹೆಸರು ಏನಪಾ.?’ ಎಂದು ಈ ತಲೆಮಾರಿನ ಚಿಕ್ಕ ಮಕ್ಕಳಿಗೆ, ಬಾಲಕಿ, ಬಾಲಕರಿಗೆ ಕನ್ನಡದಲ್ಲಿ ಕೇಳಿ ಅವರು ತಮ್ಮ ಹೆಸರನ್ನು ಹೇಳುವುದಿಲ್ಲ. ಅದೇ ಇಂಗ್ಲಿಷ್ನಲ್ಲಿ ಕೇಳಿ ಆಗ ತಮ್ಮ ಹೆಸರನ್ನು ಹೇಳುತ್ತಾರೆ. ಹಾಗಾದರೆ ಕನ್ನಡದ ಸ್ಥಿತಿ.? ನಮ್ಮ ಈಗಿನ ಇಡೀ ಕನ್ನಡ ಸಾರಸ್ವತ ಲೋಕವೇ ಅ ಆ ಇ ಈ ಕಲಿತ ಹಳ್ಳಿಯಲ್ಲಿನ ಆ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿರುವುದು ಕನ್ನಡದ ಬೆಳವಣಿಗೆಯೇ.? ಕನ್ನಡ ಯಾವ ದೃಷ್ಟಿಯಿಂದ ಸುರಕ್ಷಿತವಾಗಿದೆ.? ಈ ಬಗ್ಗೆ ಸಮ್ಮೇಳನದಲ್ಲಿ ಗಂಭೀರ ಚಿಂತನೆಗಳು ನಡೆಯುವುದು ಇವತ್ತಿನ ತುರ್ತು ಅಗತ್ಯವೇ ಆಗಿದೆ.







ಹೊಸಮನಿಯವರೇ, ನೀವು ಬರೆದಿರುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಕನ್ನಡದ ಆರೋಗ್ಯ ನಿಜಕ್ಕೂ ಸರಿ ಇಲ್ಲ. ಕನ್ನಡಿಗರು ಕನ್ನಡತನ ಎಂದರೆ ನಿಜವಾಗಿಯೂ ಏನು ಎಂಬುದನ್ನು ಅರಿತುಕೊಳ್ಳುವವರೆಗೆ ಕನ್ನಡದ ಆರೋಗ್ಯ ಸುಧಾರಿಸುವುದಿಲ್ಲ. ನನ್ನ ಬ್ಲಾಗ್ ತಾಣದಲ್ಲಿ ಕನ್ನಡಿಗರಿಗೆ ಕನ್ನಡತನವನ್ನು ಕಲಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಮಯೋಚಿತವಾದ ಲೇಖನವನ್ನು ಬರೆದದ್ದಕ್ಕೆ ನಿಮಗೆ ನನ್ನ ಅಭಿನಂದನೆಗಳು.