ವಿನತೆ ಶರ್ಮ
ವರ್ಷ 1998, ಆಗಸ್ಟ್ ಎರಡನೇ ವಾರದಲ್ಲಿ ನಮ್ಮ ಬಳಗದ ಒಂದು ಸಮಾರಂಭದಲ್ಲಿ ಸಿಕ್ಕ ದೊಡ್ಡಮ್ಮ ಕೇಳಿದರು – “ಏನೇ, ನಿಮ್ಮಮ್ಮ ಕೈಲಾಸಕ್ಕೇ ಹೊರಟ್ ಬಿಟ್ಳಲ್ಲ.” ನಾನಂದೆ – “ಹೂಂ, ದೊಡ್ಡಮ್ಮ, ಅಮ್ಮಂಗೆ ಒಂದು ವರ್ಷದಿಂದ ಆ ಯಾತ್ರೆಯದ್ದೆ ಧ್ಯಾನ ಆಗಿತ್ತು, ಅಂತೂ ಈ ವರ್ಷ ಅಮ್ಮನ ಕನಸು ನನಸಾಯಿತು.” ಅಮ್ಮ ‘ನಾನು ವಾಪಸ್ಸು ಬರುವುದಿಲ್ಲ’ ಎಂದು ನಮಗೆ ಹೇಳಲಿಲ್ಲ, ಹೌದು. ಆದರೆ, ಆಕೆ “ನನ್ನನ್ನು ಆ ಕೈಲಾಸಪತಿ ಪರಮೇಶ್ವರ ಕರೆಸಿಕೊಂಡರೆ ಅದು ನನ್ನ ಪುಣ್ಯ” ಎಂದು ಬಾರಿ ಬಾರಿ ಹೇಳಿದ್ದುಂಟು. ನಾವು ‘ಏ ಹೋಗಮ್ಮ, ತಮಾಷೆ ಮಾಡಬೇಡ’ ಎಂದು ಛೇಡಿಸಿದ್ದೂ ಹೌದು. ಆಕೆ ಇಡೀ ಒಂದು ವರ್ಷ ತನ್ನ ಕೈಲಾಸ-ಮಾನಸ ಸರೋವರ ಯಾತ್ರೆಗಾಗಿ ತಪಸ್ಸು ಮಾಡಿದ್ದನ್ನು, “ಓಂ ನಮಃ ಶಿವಾಯ” ಮಂತ್ರವನ್ನು ದಿನವೂ ಬರೆದೂ ಬರೆದೂ ಹಲವಾರು ನೋಟ್ ಬುಕ್ ಗಳನ್ನು ತುಂಬಿಸಿದ್ದನ್ನು ನೋಡಿ ನಾವೆಲ್ಲರೂ ಇದೇನಪ್ಪ ಇದು, ಈಕೆಯ ಈ ಪರಿ ಧ್ಯಾನ ಅಂದು ಕೊಂಡುದ್ದೂ ಉಂಟು.
ಅಮ್ಮನ ಈ ಪರಿ ನಮಗೇನು ಹೊಸದಲ್ಲ. ವರ್ಷಗಳ ಹಿಂದೆ ಆಕೆ ಅಮರನಾಥ ಮತ್ತು ಅಯ್ಯಪ್ಪ ಸ್ವಾಮಿ ಯಾತ್ರೆಗಳಿಗೆ ಹೋದಾಗ ಹೀಗೇ ಬಹಳ ಏಕಾಗ್ರತೆಯಿಂದ ಚಾಚೂ ತಪ್ಪದೆ ತನ್ನ ನೇಮ, ನಿಷ್ಠೆ ಗಳನ್ನ ಆಚರಿಸಿದ್ದು ನೋಡಿ ನಾವು ಪಳಗಿದ್ದೆವು. ಸುಮಾರು ವರ್ಷಗಳಿಂದ ಆಕೆ ಮತ್ತು ಆಕೆಯ ಕೆಲ ಸ್ನೇಹಿತರು ಈ ರೀತಿ ಹಲವಾರು ತರಹದ ಪುಣ್ಯ ಯಾತ್ರೆಗಳಿಗೆ ಹೊಗುವುದನ್ನು ನಮ್ಮ ಬಂಧು, ಬಳಗದವರು ಕೊಂಡಾಡುವುದು ಇತ್ತು. ತನ್ನ ಪ್ರತಿ ಯಾತ್ರೆಯ ಅನುಭವ ಯನ್ನು ಆಕೆ ‘ನರೆಟೀವ್ ‘ ನಂತೆ ಬರೆದು, ಇದನ್ನು ಹಲವಾರು ಜನ ಓದುತ್ತಿದ್ದರು. ಆಕೆಯೊಡನೆ ನಾನೂ ಎರಡು ಬಾರಿ ಈ ರೀತಿಯ ಯಾತ್ರೆಗಳಿಗೆ ಹೋಗಿದ್ದೆ ಕೂಡ. ಹಿಮಾಲಯದ ಚಾರ್ ಧಾಮ್, ವೈಷ್ನೋದೇವಿ, ಗಂಗೋತ್ರಿ-ಗೋಮುಖ ಇತ್ಯಾದಿಗಳಿಗೆ ನಾನು ಟ್ರೆಕಿಂಗ್ ಮಾಡಿದ್ದು ಉಂಟು. ಆಕೆಯೊಡನೆ ಕೈಲಾಸ-ಮಾನಸ ಸರೋವರ ಯಾತ್ರೆಗಾಗಿ ನಾನೂ ಹೋಗುವುದು ಅಂತ ನಿರ್ಧಾರ ಮಾಡಿ, ಹೆಚ್ಚು ಕಡಿಮೆ ತಯಾರಿ ಮಾಡಿಕೊಂಡು, ಭಾರತ ಸರ್ಕಾರಕ್ಕೆ ಅಪ್ಲಿಕೇಶನ್ ಹಾಕುವ ಸಮಯದಲ್ಲಿ ನಾನು ಮನಸ್ಸು ಬದಲಾಯಿಸಿ, ಹಾಗೆ ಮಾಡಿದ್ದಕ್ಕೆ ಒಬ್ಬಿಬ್ಬರ ಬೈಗಳನ್ನು ಕೇಳಿದ್ಡೂ ಆಯ್ತು. ಊಂ, ಅರವತ್ತು ಸಾವಿರ ರೂಪಾಯಿ ಈ ಯಾತ್ರೆಗೆ, ಯಾರು ಕೊಡುತ್ತಾರೆ ಅಂತ ನಾನು ಯಾರಿಗೂ ಕೇಳಿಸದಂತೆ ಗೊಣಗಿಕೊಂಡಿದ್ದೆ ಆಗ. ಅಮ್ಮ ಮತ್ತು ನನ್ನ ಟೀಚರ್ ದೆಹಲಿಗೆ ಹೊರಟಾಗ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಟ್ರೈನ್ ನಲ್ಲಿ ಕೂತಾಗ ಹೇಳಿದ್ದರು “ನೀನು ಬಂದಿದ್ದರೆ ಚೆನ್ನಾಗಿತ್ತು”. ನಾನು ಹೇಳಿದ್ದೆ “ನೀವು ವಾಪಸ್ ಬನ್ನಿ, ಇನ್ನೊಂದ್ ಸರ್ತಿ ನನ್ನ ಜೊತೆ ಹೋಗೊವ್ರಂತೆ”.

ಅವರು ವಾಪಸ್ಸು ಬರಲಿಲ್ಲ, ನನಗೆ ಇನ್ನೂ ಹೋಗಲಾಗಿಲ್ಲ. ಅದರ ಬದಲು ಅನ್ನೋದರ ರೀತಿ ಅಮ್ಮ ಯಾತ್ರೆಯಿಂದ ವಾಪಸ್ಸು ಬರುವುದಿಲ್ಲ ಎಂದು ಆಗಸ್ಟ್ 18 ರಂದು ರಾತ್ರಿ ಟಿವಿ ಚಾನೆಲ್ ಗಳು ಹೇಳಿದಾಗ ನಂಬಲಿಲ್ಲ. ಆಗಸ್ಟ್ 19 ರ ಬೆಳಿಗ್ಗೆ ನ್ಯೂಸ ಪೇಪರಗಳು ದೊಡ್ಡ ಅಕ್ಷರಗಳಲ್ಲಿ ಯಾತ್ರಿಗಳೆಲ್ಲರೂ ಸಮಾಧಿಯಾಗಿದ್ದಾರೆ ಎಂದು ಕಿರುಚಿಕೊಂಡಾಗ ಅರೆ, ಇದೇನಾಯಿತು ಹೀಗೆ, ನಾನು ತಪ್ಪು ಮಾಡಿದೆ, ಅಮ್ಮ ಹೇಗಿದ್ದಾರೆ ಒಬ್ಬರೇ ದೂರದ ಹಿಮಾಲಯದಲ್ಲಿ, ಆಕೆಯನ್ನು ಹಾಗೆ ಒಬ್ಬಂಟಿಯಾಗಿ ಬಿಡುವುದು ಸರಿಯೇ ಈ ಮಗಳಿಗೆ ಅನ್ನಿಸಿತು. ನಾವೆಲ್ಲಾ ಕುಟುಂಬದವರು ಬೆಂಗಳೂರಿನಿಂದ ದೆಹಲಿಗೆ ಆಗಸ್ಟ್ 20 ರಂದು ಹೊರಟೆವು. ಆ ದಿನದಿಂದ ಹಿಡಿದು ಆಗಸ್ಟ್ 25 ಗೌರಿ ಹಬ್ಬದ ದಿನದ ವರಗೆನ ನನ್ನ ಅನುಭವಗಳ ಹಂಚಿಕೆ ಈ ಲೇಖನ. ನಾನು ಬೆಂಗಳೂರು, ದೆಹಲಿ, ಪಿತೊರಘರ್, ಕೊನೆಗೆ ಧಾರ್ಚುಲದಲ್ಲಿ ಕೇಳಿದ್ದು, ನೋಡಿದ್ದು ಹಾಗೂ ಅನುಭವಿಸಿದ್ದು, ಹಲವಾರು ಮೂಲಗಳಿಂದ ವಿಷಯಗಳನ್ನು ನಾನು ಓದಿದ್ದು, ನಂತರದ ವರ್ಷಗಳಲ್ಲಿ ಇಂಟರ್ನೆಟ್ ನಲ್ಲಿ ಸಾಕಷ್ಟು ವಿಷಯ ಸಂಗ್ರಹ ಮಾಡಿದ್ದೀನಿ ಕೂಡ – ಬೇರೆ ಬೇರೆ ರೀತಿಯ ಇಂಟರ್ ಪ್ರಿಟೆಶನ್ ಗಳನ್ನೂ ಓದಿದ್ದೀನಿ. ಈ ಲೇಖನದಲ್ಲಿ ಮುಖ್ಯವಾಗಿ ಕರ್ನಾಟಕದಿಂದ ಯಾತ್ರಾರ್ಥಿಗಳ ಕುಟುಂಬದವರು ನಾವು ಹಿಮಾಲಯದ ಧಾರ್ಚುಲಕ್ಕೆ ಹೋಗಿದ್ದು, ನಾಲ್ಕು ದಿನಗಳು ನಾನು ಅಲ್ಲೇ ಧಾರ್ಚುಲದಲ್ಲೇ ಇದ್ದು ಅಲ್ಲಿ ಭಾರತೀಯ ಸೇನೆಯ ಸೈನಿಕರು, ಹೆಲಿಕಾಪ್ಟರ್ ಗಳು ಹೊತ್ತು ತಂದ ಹಲವಾರು ಯಾತ್ರಾರ್ಥಿಗಳ, ಮತ್ತಿತರ ದೇಹಗಳನ್ನು ನೋಡಿ ಕಡೆಗೆ ಮೂರನೇ ದಿನ ನನ್ನ ತಾಯಿಯಿ ದೇಹವನ್ನು ನೋಡಿ ಗುರುತು ಹಿಡಿದು, ಮರು ದಿನ ಕಾಳಿ ನದಿಯ ದಡದಲ್ಲಿ ಆಕೆಯ ಅಂತ್ಯ ಕ್ರಿಯೆಯನ್ನು ಮಾಡಿದ್ದು ಇಲ್ಲಿ ಬರೆದಿದ್ದೇನೆ.
ಇತ್ತೀಚಿಗೆ ಕನ್ನಡ ಪತ್ರಿಕೆಯೊಂದರಲ್ಲಿ ಒಬ್ಬರು ಬರೆದ ಲೇಖನದಲ್ಲಿ ಯಾರೊಬ್ಬರ ಯಾತ್ರಿಯ ದೇಹವೂ ಸಿಕ್ಕಲಿಲ್ಲ, ಯಾವ ಒಂದು ವಸ್ತುವನ್ನೂ ತೆಗೆಯಲಾಗಲಿಲ್ಲ ಎನ್ನುವ ಅಭಿಪ್ರಾಯವಿದೆ. ಇದು ತಪ್ಪು ಹಲವಾರು ಯಾತ್ರಿಗಳ ಹಾಗೂ ಇತರರ ದೇಹಗಳಷ್ಟೇ ಅಲ್ಲ, ಬೇಕಾದಷ್ಟು ಅವರಿಗೆ ಸೇರಿದ ವಸ್ತುಗಳನ್ನೂ ಭಾರತೀಯ ಸೇನೆಯ ಸಿಬ್ಬಂದಿ ತಂದು ಧಾರ್ಚುಲದಲ್ಲಿ ಅವರ ಕುಟುಂಬದ ಸದಸ್ಯರಿಗೆ ತಲುಪಿಸಿದ್ದಾರೆ. ಇದಕ್ಕೆ ನಾನೇ ಸ್ವತಹ ಸಾಕ್ಷಿ. ಹಿಮಾಲಯದ ನೈನಿತಾಲ್, ಅಲ್ಮೋರ, ಪಿತೋರಘರ್ ಹಾಗೆ ಮುಂದೆ ಧಾರ್ಚುಲ ದಾಟಿಕೊಂಡು ಕೈಲಾಸ ಪರ್ವತ ಹಾಗೂ ಮಾನಸ ಸರೋವರಕ್ಕೆ ಹೋಗುವ ದಾರಿಯಲ್ಲಿ ನಡೆದರೆ ಸಿಗುವುದು ಒಂದು ಬಹಳ ಸಣ್ಣ ಹಳ್ಳಿ ಮಾಲ್ಪ, ಅದೂ ಪರ್ವತದ ಬುಡದಲ್ಲಿ. ಪಕ್ಕದಲ್ಲಿ ಕಾಳಿ ಗಂಗಾ ನದಿ, ನದಿಯ ಆಚೆ ಕಡೆ ನೇಪಾಳ, ಸುತ್ತಲೂ ಇರುವ ಪರ್ವತಗಳ ಸಾಲು, ಸಣ್ಣ ನೀರಿನ ಝರಿಗಳು, ಪರ್ವತಗಳ ಗೋಡೆಗಳು. ಆ ವರ್ಷ 1998 ರಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಗೆಂದು ದೆಹಲಿ ಬಿಟ್ಟು ಹೊರಟ 12ನೇ ಬ್ಯಾಚಿನ ಅರವೆತ್ತೆರಡು ಯಾತ್ರಿಕರು, ಯಾತ್ರೆಯ ಮುಂದಾಳತ್ವವನ್ನು ವಹಿಸಿಕೊಂಡಿದ್ದ ಭಾರತೀಯ ಸರ್ಕಾರದ ನೌಕರರು, ಕುಮಾವ್ ವಿಕಾಸ್ ಮಂಡಳ ನಿಗಮ್ ನವರು, ಯಾತ್ರಿಕರಿಗೆ ಸಹಾಯ ಮಾಡಲೆಂದು ಹೊರಟ ಪೋರ್ಟರ್ ಗಳು, ಅವರ ಕುದುರೆಗಳು, ಮತ್ತಿತರು ಸೇರಿದಂತೆ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಯ ದೊಡ್ಡ ಗುಂಪು ಮಾಲ್ಪದಲ್ಲಿ ಆಗಸ್ಟ್ 16 ರಂದು ಬೀಡು ಬಿಟ್ಟಿತ್ತು.
ಆ ವರ್ಷದ ಯಾತ್ರೆಯಲ್ಲಿ ಇದು ಅತ್ಯಂತ ದೊಡ್ಡ ಗುಂಪು, ಇದು ಬಹುಶಃ ಕ್ಷೇಮಕರವಲ್ಲ ಎಂದು ದೆಹಲಿಯಲ್ಲೇ ಭಾವಿಸಲಾಗಿತ್ತು. ನನ್ನ ತಾಯಿ ಎಲ್. ಪದ್ಮಾವತಮ್ಮ ಆ ಗುಂಪಿನಲ್ಲಿದ್ದರು. ಅವರೊಡನೆ ಆಕೆಯ ಹತ್ತಿರದ ಸ್ನೇಹಿತೆ ಹಾಗೂ ನನ್ನ ಪ್ರೈಮರಿ ಶಾಲೆಯ ಟೀಚರ್ ಎಸ್. ಲಲಿತಮ್ಮ ಇದ್ದರು. ಕರ್ನಾಟಕದಿಂದ ಒಟ್ಟು ಆರು ಮಂದಿ ಯಾತ್ರಿಗಳು ಹೋಗಿದ್ದರು ಎಂದು ನನಗೆ ತಿಳಿದು ಬಂದದ್ದು ಆಗಸ್ಟ್ 21 ರಂದು, ದೆಹಲಿಯ ಭಾರತೀಯ ಸರ್ಕಾರದ ಮಿನಿಸ್ಟ್ರಿ ಆಫ್ ಎಕ್ಸಟರ್ನಲ್ ಅಫೈರ್ಸ್ ನ ಮೀಟಿಂಗ್ ಹಾಲ್ನಲ್ಲಿ. ಇದೇ ಗುಂಪಿನಲ್ಲಿ ಬೆಂಗಳೂರಿನ ನೃತ್ಯಗ್ರಾಮದ ಪ್ರಸಿದ್ಧ ಒಡಿಸ್ಸಿ ನರ್ತಕಿ ಪ್ರೊತಿಮ ಗೌರಿ ಬೇಡಿಯೂ ಇದ್ದರು ಎಂದು ನನ್ನ ತಾಯಿ ದೆಹಲಿಯಿಂದ ಬರೆದ ಪತ್ರದ ಮೂಲಕ ನನಗೆ ಮುಂಚೆಯೆತಿಳಿದಿತ್ತು. ಅವರ ಗುಂಪಿನ ಬಗ್ಗೆ ಹಲವಾರು ವಿಷಯಗಳನ್ನು ಕೂಡ ಆ ಪತ್ರದಲ್ಲಿ ಆಕೆ ಹೇಳಿದ್ದರು. ಈ ಗುಂಪಿನ ಯಾತ್ರಾರ್ಥಿಗಳ ಗ್ರೂಪ್ ಫೋಟೋ ನನ್ನ ಬಳಿ ಇದೆ. ನೃತ್ಯಗ್ರಾಮದ ಮುಖ್ಯಸ್ಥರು ಮತ್ತು ಪ್ರೋತಿಮರವರ ಸೋದರಿ ಧಾರ್ಚುಲದಲ್ಲಿ ನನಗೆ ಸಿಕ್ಕಿದ್ದರು.
ಧಾರ್ಚುಲದ ಆಸ್ಪತ್ರೆಯಲ್ಲಿ ಆಗಾಗ ಅವರು ಭೇಟಿಯಾದಾಗ ನಾವುಗಳು ಪರಸ್ಪರ ವಿಷಯಗಳನ್ನು ಹಂಚಿಕೊಂಡೆವು. ನನ್ನಮ್ಮನ ಬಾಡಿ ಸಿಕ್ಕ ದಿನ ಅವರಿಬ್ಬರೂ ನನಗೆ ಸಾಂತ್ವನ ಹೇಳಿದರು. ಬೆಂಗಳೂರಿನಿಂದ ಅಮ್ಮ ದೆಹಲಿಗೆ ಹೊರಟರು. ದೆಹಲಿಯಿಂದ ಅವರ ಗುಂಪು ಯಾತ್ರೆ ಆರಂಭಿಸಿತು. ಬೇರೆ ಬೇರೆ ವಾಹನಗಳ ಮೂಲಕ ಅವರು ಧಾರ್ಚುಲವನ್ನು ತಲುಪಿದರು. ಇಲ್ಲಿಂದ ಚಾರಣ ಆರಂಭ, ಬರೆ ಕಾಲ್ನಡಿಗೆ ಅಥವಾ ಪೋನಿಗಳ ಮೇಲೆ ಸವಾರಿ. ಹಾಗೆ ನಡೆದು ಆಗಸ್ಟ್ 16 ರಂದು ಪರ್ವತದ ಬುಡದ ಮಾಲ್ಪ ಹಳ್ಳಿಯನ್ನು ತಲುಪಿ ಟೆಂಟ್ ಹೊಡೆದರು. ಆಗಸ್ಟ್ ಹದಿನೇಳರಂದು ಆ ಗುಂಪು ಬುಡದಿಂದ ನೂರಾರು ಕಲ್ಲಿನ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಕೊಂಡು ಪರ್ವತದ ಮೇಲಕ್ಕೆ ಬಂದರು. ಅವರು ಮುಂದೆ ಸಾಗಲಿದ್ದರು. ಆದರೆ ಹಾಗಾಗಲಿಲ್ಲ. ಭಾರತೀಯ ಸರ್ಕಾರದ ಮಿನಿಸ್ಟ್ರಿ ಆಫ್ ಎಕ್ಸಟರ್ನಲ್ ಅಫೈರ್ಸ್ ಆಫೀಸರ್ ಒಬ್ಬರು (ನಾನು ಕೇಳಿದ ನೂರಾರು ಪ್ರಶ್ನೆಗಳಿಂದ ಕೆಲವಾರು ವಿಷಯಗಳು ಮಾತ್ರ ತಿಳಿದು ಬಂತು) ನನಗೆ ದೆಹಲಿಯಲ್ಲಿ ಹೇಳಿದಂತೆ ಧಾರ್ಚುಲದಿಂದ ಮುಂದೆ ದಾರಿಯಲ್ಲಿ ಆಗಾಗಲೇ ಲ್ಯಾಂಡ್ ಸ್ಲೈಡ್ ಆಗಿದ್ದು, ದಾರಿ ಸುಗಮವಾಗುವ ವರಗೆ ಈ 12 ನೆ ಬ್ಯಾಚಿನವರು ಮಂಡೆ ಸಾಗುವ ಹಾಗೆ ಇಲ್ಲ ಎಂದು ತಂಡದ ಲೀಡರ್ ಗಳು ನಿರ್ಧರಿಸಿದರು. ಹಾಗಾಗಿ ತಂಡವು ಪುನಃ ಮಾಲ್ಪಾಕ್ಕೆ ಬಂದು ಸೇರಿತು. ಇದು ನಿಜವಿರಬಹುದು.
ಆದರೆ ಮತ್ತೊಬ್ಬರು ನನಗೆ ಧಾರ್ಚುಲದಲ್ಲಿ ಹೇಳಿದಂತೆ ಆ ಗುಂಪು ಹದಿನೆಂಟರಂದು ಮಾಲ್ಪದಲ್ಲಿ ಇರಬಾರದಾಗಿತ್ತು. ನಿಶ್ಚಿತ ಕಾರ್ಯಕ್ರಮದ ಪ್ರಕಾರ ಅವರು ಹದಿನೇಳರಂದುತಮ್ಮ ಪ್ರಯಾಣವನ್ನು ಮುಂದುವರಿಸ ಬೇಕಿತ್ತು. ಆದರೆ ಯಾತ್ರೆಯನ್ನು ಮುಗಿಸಿಕೊಂಡು ವಿರುದ್ಧ ದಿಕ್ಕಿನಿಂದ ವಾಪಸ್ಸು ಬರುತ್ತಿದ್ದ ಗುಂಪು ತಮ್ಮ ಕ್ಯಾಂಪನ್ನು ಆಗಾಗಲೇ ಬಿಟ್ಟು ಮಾಲ್ಪಾದ ಕಡೆ ಹೊರಟಿದ್ದರು. ಎರಡೂ ಗುಂಪುಗಳು ಆ ಬಹಳ ಇಕ್ಕಟ್ಟಿನ ಪರ್ವತದ ಮಾರ್ಗದಲ್ಲಿ ಸೇರುವುದು ಬೇಡ ಎಂದು ಯಾತ್ರೆಯ ನೇತ್ರುತ್ವವನ್ನು ವಹಿಸಿ ಕೊಂಡಿದ್ದ ಕುಮಾವ್ ವಿಕಾಸ್ ನಿಗಮ್ ಮಂಡಲ್ ಮತ್ತು ಭಾರತ ಸರ್ಕಾರದ ಆಫೀಸರ್ ಗಳು ನಿರ್ಧರಿಸಿ, ಈ 12 ನೆ ಬ್ಯಾಚನ್ನು ಮತ್ತೆ ಕೆಳಗಿಳಿಸಿ ಮಾಲ್ಪಾಕ್ಕೆ ವಾಪಸ್ಸು ತಂದರು. ಯಾತ್ರೆ ಮುಗಿಸಿ ವಾಪಸ್ಸು ಬರುತ್ತಿದ್ದ ಗುಂಪು ತುಂಬಾ ಸುಸ್ತಾಗಿದೆ, ಅದರಲ್ಲಿ ಯಾತ್ರಾರ್ಥಿಯೊಬ್ಬರಿಗೆ ಅದಷ್ಟೂ ಬೇಗ ಔಷದಿ ಉಪಚಾರದ ಅವಶ್ಯಕತೆ ಇದೆ, ಅವರು ಮಾಲ್ಪದಲ್ಲಿ ತಂಗದೆ ಮುಂದೆ ಸಾಗಲಿ ಅನ್ನುವುದು ಕಾರಣವಾಗಿತ್ತು. ಯಾವುದು ನಿಜ ಎಂದು ನಾನು ತಲೆ ಕೆಡಿಸಿಕೊಂಡಿಲ್ಲ.
ಮಾಲ್ಪದಲ್ಲಿ ಈ ಹನ್ನೆರಡನೆ ಬ್ಯಾಚ್ ನ ದೊಡ್ಡ ಗುಂಪು ಹದಿನೇಳರಂದು ಮತ್ತೆ ಬಂದು ತಂಗಿದೆ. ತಾಪಮಾನ ದಾಖಲೆಗಳ ವರದಿಯಂತೆ ಆ ವರ್ಷ ಅತ್ಯಂತ ಮಳೆಯಾಗಿದೆ, ಮತ್ತೂ ಬೀಳುತ್ತಲೇ ಇದೆ. ಮೂರು ದಿನಗಳಿಂದ ಪರ್ವತಗಳ ಮೇಲಿನ ಕೆಲ ಭಾಗಗಳಲ್ಲಿ ಬಿದ್ದ ಭಾರಿ ಮಳೆಯಿಂದ ಪರ್ವತದ ಅಲ್ಲಲ್ಲಿ ಚಿಕ್ಕ, ದೊಡ್ಡ ಬಂಡೆಗಳು ಸಡಿಲವಾಗಿದೆ ಹಾಗೂ ಅಲ್ಲಲ್ಲಿ ಚಿಕ್ಕದಾಗಿ ಮಣ್ಣು ಬಂಡೆಗಳ ಜಾರಿಕೆ (ಲ್ಯಾಂಡ್ ಸ್ಲಯ್ದ್ ) ಕೂಡ ಆಗಿದೆ. ನಂತರ ನನಗೆ ತಿಳಿದಿದ್ದು, ಆಗಸ್ಟ್ ಹದಿನಾರರಂದು ಮೂರು ಕುದುರೆಗಳು ಇಂತಹ ಜಾರಿಕೆಯಲ್ಲಿ ಸಿಕ್ಕಿ ಸತ್ತಿದ್ದವು. ಪರ್ವತದ ಮೇಲಿನ ನೀರಿನ ಎರಡು ಝುರಿಗಳು ತುಂಬಿ, ಉಕ್ಕಿ ಹರಿಯುತ್ತಿವೆ. ಅದೇ ರಾತ್ರಿ ಮತ್ತೆ ಭಾರಿ ಮಳೆಯಾಗಿದೆ. ಆಗಸ್ಟ್ ತಿಂಗಳ ದಿನಾಂಕ 18ರ ಬೆಳಗಿನ ಜಾವ ಒಂದರಿಂದ ಮೂರು ಘಂಟೆಯ ಸಮಯ.ಎಲ್ಲರೂ ಸುಖವಾದ ನಿದ್ದೆಯಲ್ಲಿ ಇರುವ ಸಮಯ. ಪರ್ವತದ ಇಡೀ ಒಂದು ಗೋಡೆ ಸಡಿಲವಾಗಿ, ಜರುಗಿದೆ. ಉಕ್ಕಿ ಹರಿದ ಝರಿಗಳ ಪ್ರವಾಹದ ಜೊತೆಗೆ ಬಂಡೆಗಳ ಸುರಿಮಳೆ ಯೂ ಆಗಿದೆ. ಎಲ್ಲವೂ ಬಂದು ಪರ್ವತದ ಬುಡದಲ್ಲಿ ಕ್ಯಾಂಪಿನ ಟೆಂಟ್ ಗಳಲ್ಲಿ ಮಲಗಿದ್ದ ಹನ್ನೆರಡನೆ ಬ್ಯಾಚಿನ ಇಡೀ ಗುಂಪಿನ ಮೇಲೆ ಬಿದ್ದು ನೆಲದಿಂದ ಸುಮಾರು 40 ಅಡಿ ಸಮಾಧಿಯನ್ನು ನಿರ್ಮಾಣ ಮಾಡಿದೆ.
ಈ ಘಟನೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಕೈಲಾಸದ ಪಾದವನ್ನೇ ಸೇರಿದರು. ದೆಹಲಿಯಿಂದ ನಾವು ಕೆಲವರು ಮಾತ್ರ ಬರೈಲಿಗೆ ಹೋದೆವು. ನಮ್ಮ ಕುಟುಂಬದಿಂದ ನಾನೊಬ್ಬಳು ಮತ್ತು ಬೇರೆ ಯಾತ್ರಾರ್ಥಿಗಳ ಕುಟುಂಬಗಳಿಂದ ಅವರವರ ಸಂಬಂಧಿಕರು ಹೀಗೆ ನಾವುಗಳು ಬರೈಲಿಯಿಂದ ಭಾರತೀಯ ಸರ್ಕಾರ ಕೊಟ್ಟ ಹೆಲಿಕಾಪ್ಟರ್ ಗಳಲ್ಲಿ ಪ್ರಯಾಣಿಸಿ ಮಾಲ್ಪಾದ ಕಡೆ ಹೋದೆವು. ಆಕಾಶದಿಂದ ನೋಡಿದರೆ ಏನಿದೆ ಅಲ್ಲಿ – ಬರೀ ಬಂಡೆಗಳು ರಾಶಿ ರಾಶಿ, ಪರ್ವತಗಳ ಸಾಲುಗಳು, ಕಾಳಿ ನದಿ. ಹೆಲಿಕಾಪ್ಟರ್ ನಲ್ಲಿ ಮಿಲಿಟರಿಯವರು ಹೇಳಿದರು – ಮಾಲ್ಪ ಈಗ ಬರೀ ಒಂದು ಅಳಿಸಿ ಹೋದ ಹಳ್ಳಿಯ ನೆನಪು ಮಾತ್ರ. ಮತ್ತೆ ನಿಮಗೇನೂ ಕಾಣಿಸುವುದಿಲ್ಲ. ಯಾತ್ರಾರ್ಥಿಗಳ ಕೆಲ ಕುಟುಂಬಗಳ ನಾವುಗಳು ಧಾರ್ಚುಲ ಸೇರಿ ಅಲ್ಲಿದ್ದ ಗೆಸ್ಟ್ ಹೌಸ್ ನಲ್ಲಿ ತಂಗಿದೆವು. ಪ್ರತಿ ವರ್ಷ ಇಲ್ಲಿಂದಲೇ ಎಲ್ಲಾ ಯಾತ್ರಾರ್ಥಿಗಳು ಪೋನಿಗಳನ್ನು, ಪೋರ್ಟರ್ ಗಳನ್ನೂ ಗೊತ್ತು ಮಾಡಿಕೊಂಡು ಮುಂದೆ ಕಾಲ್ನಡಿಗೆ ಯಲ್ಲಿ ಸಾಗುವುದು. ಇಲ್ಲಿಂದ ಮಾಲ್ಪ 48 ಕಿಮೀ ಮಾತ್ರ. ನಾನು ಧಾರ್ಚುಲಕ್ಕೆ ಹೋದ ಕೂಡಲೇ haeಹೇಳಿದ್ದು – ನಾನು ಮಾಲ್ಪಕ್ಕೆ ಹೊಗುತ್ತಿದ್ದೇನಿ. ಎರದು ದಿನಗಳ ಕಾಲ್ನಡಿಗೆ ಅಷ್ಟೇ, ಪರವಾಗಿಲ್ಲ, ಅಮ್ಮನ್ನ ನೋಡಲೇ ಬೇಕು ಅಂತ ನನ್ನ ಯೋಚನೆ.
ಆಗಲೇ ಅಲ್ಲಿ ಭಾರತದ ಬೇರೆ ಬೇರೆ ಕಡೆಗಳಿಂದ ಬಂದು ಸೇರಿದ್ದ ಯಾತ್ರಾರ್ಥಿಗಳ ಸುಮಾರು ಕುಟುಂಬದ ಕೆಲವರು ಬಂದು ಸೇರಿದ್ದರು. ಕೆಲವರು ಸರಿ, ನಾವು ನಿನ್ನ ಜೊತೆ ಬರುತ್ತೀವಿ, ಅಂದರು.
ಇನ್ನೂ ಕೆಲವರು ಇಲ್ಲ, ಇದು ಈಗ ಮಿಲಿಟರಿ ಆಪರೇಶನ್ ಅಂತ ಡಿಕ್ಳೆರ್ ಮಾಡಿದ್ದಾರೆ, ನಿಮ್ಮನ್ನ ಸರಕಾರದವರು ಮಿಲಿಟರಿಯವರು ಮುಂದೆ ಹೋಗಲು ಬಿಡುವುದಿಲ್ಲ ಅಂದರು. ನಾವೆಲ್ಲರೂ ಮಿಲಿಟರಿಯ ಕೆಲ ಮುಖ್ಯಸ್ಥರಲ್ಲಿಗೆ ಹೋಗಿ ಪರ್ಮಿಷನ್ ಕೇಳಿದೆವು. ಅವರು ನಿರಾಕರಿಸಿದರು. ಕಾರಣ – ಮಿಲಿಟರಿಯವರು ಮಾಲ್ಪಾದಿಂದ ಅಗೆದು ದೇಹಗಳನ್ನು ಧಾರ್ಚುಲಕ್ಕೆ ತರಲಿದ್ದರು. ಈ ಕೆಲಸ ಆಗಲೇ ಶುರುವಾಗಿತ್ತು. ಧಾರ್ಚುಲ ಆ ಪ್ರಾಂತ್ಯದಲ್ಲಿ ದೊಡ್ಡ ಪಟ್ಟಣ, ಅಲ್ಲಿದ್ದ ಸರಕಾರೀ ಆಸ್ಪತ್ರೆಗೆ ದೇಹಗಳನ್ನು ತಂದು ಅಲ್ಲೇ ದೇಹಗಳ ಪೋಸ್ಟ್ ಮಾರ್ಟಂ ಕೂಡ ಮಾಡುವ ವ್ಯವಸ್ಥೆ ಮಾಡಿದ್ದು, ಇದಕ್ಕೆ ಸಾಕಷ್ಟು ಮುತುವರ್ಜಿಯನ್ನು ವಹಿಸಲಾಗಿತ್ತು. ಪೋಲೀಸು, ಆಸ್ಪ್ರತ್ರೆ, ನಾನಾ ತರಹದ ಸರಕಾರೀ ಸಿಬ್ಬಂದಿ ವರ್ಗ, ದೆಹಲಿಯಿಂದ ಬಂದಿದ್ದ ಅಧಿಕಾರಿಗಳು, ಹೀಗೆ ಸರಕಾರೀ ವ್ಯಕ್ತಿಗಳ ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು.
ಹಾಗಾಗಿ ನಾವೆಲ್ಲರೂ ಧಾರ್ಚುಲಾದಲ್ಲೇ ಇದ್ದು, ನಮ್ಮಗಳ ತಾಯಿ, ತಂದೆ, ಸೋದರ-ಸೋದರಿ, ಇತ್ಯಾದಿ ಕುಟುಂಬದ ಆಪ್ತರಿಗಾಗಿ ಕಾದೆವು. ಯಾತ್ರಾರ್ಥಿಗಳ ಕುಟುಂಬದಿಂದ ಅಲ್ಲಿ ಹೆಂಗಸರು ನಾನು, ಪ್ರೊತಿಮಾ ಬೇಡಿಯ ಕಡೆಯಿಂದ ಇಬ್ಬರು ಅಷ್ಟೇ. ಧಾರ್ಚುಲಾದಿಂದ ಯಾತ್ರಿಗಳ ಕೂಡ ಹೋಗಿದ್ದ ಪೋರ್ಟರ್ ಗಳು, ಅವರ ಪೋನಿಗಳು, ಸಹಾಯಕರು ಇವರಗಳ ಕುಟುಂಬದ ಜನ ಆ ಆಸ್ಪತ್ರೆಯ ಬಳಿ ಪ್ರತಿ ದಿನ ಆಸು ಪಾಸು ಗುಂಪು ಕೂಡುತ್ತಿದ್ದರು. ಅವರುಗಳ ಕುಟುಂಬಗಳ ಆಧಾರ ಸ್ತಂಭ ವೇ ಕಳಚಿ ಮರೆಯಾಗಿತ್ತು, ಕುಟುಂಬಗಳು ಅತಂತ್ರರಾಗಿ, ಹೊಟ್ಟೆ ಪಾಡಿಗಾಗಿ ಕಷ್ಟ ಪಡುವ ಸ್ಥಿತಿ ಅವರದು. ಅವರ ನಮ್ಮೆಲ್ಲರ ದುಃಖ ಒಂದೇ ತರಹದ್ದು – ನಾವೆಲ್ಲರೂ ನಮ್ಮ ಆಪ್ತರನ್ನು ಕಳೆದು ಕೊಂಡಿದ್ದೆವು. ಆಸ್ಪತ್ರೆಯ ಒಂದು ಭಾಗದಲ್ಲಿ ಒಂದು ಇಡೀ ಕೈ, ತೋಳು ಕಳೆದುಕೊಂಡು ಕುಳಿತಿದ್ದ ಒಬ್ಬ ಪೋರ್ಟರ್ ನನ್ನು ನಾನು ಭೇಟಿಯಾದೆ. ಸ್ಥಳೀಯ ಮುನಿಸಿಪಾಲಿಟಿಯ ಒಬ್ಬ ಮಹಿಳಾ ಸಿಬ್ಬಂದಿ ನನ್ನ ಬಳಿ ಬಂದು ಪರಿಚಯ ಹೇಳಿ ಸಹಾನುಭೂತಿ ಸೂಚಿಸಿದಳು. ಆ ಮಹಿಳೆ ಅವನನ್ನು ಮಾತನಾಡಿಸಿ ನನಗೆ ಹೇಳಿದಳು “ಇವ ಅಪಘಾತ ಸಂಭವಿಸಿದಾಗ ತಾನೂ ಬಂಡೆಯಡಿ ಸಿಕ್ಕಿ ಕೈಯಿ ಕಳೆದುಕೊಂಡಿದ್ದಾನೆ – ಹೆಚ್ಚಿನ ಚಿಕಿತ್ಸೆ ಸಿಕ್ಕಿಲ್ಲ, ಬ್ಯಾಂಡೇಜ್ ಹಾಕಿ ಕಳಿಸಿದ್ದಾರೆ ಅಷ್ಟೇ, ಬಡವರನ್ನು ಯಾರು ಗಮನಿಸುತ್ತಾರೆ, ದೂರದಿಂದ ಬಂದಿರುವ ನಿಮ್ಮನ್ನು ನೋಡಿಕೊಳ್ಳುವುದು ನಮ್ಮ ಧರ್ಮ.”
ಧಾರ್ಚುಲಕ್ಕೆ ತಲುಪಿದ ಮೇಲೆ ನಾನು, ನನ್ನ ಟೀಚರನ ಮೊಮ್ಮಗ ಪ್ರಕಾಶ, ಆಂಧ್ರದ, ಕಲ್ಕತ್ತಾದ ಇಬ್ಬರು ಹೀಗೆ ನಾವುಗಳು ಕೆಲವರು ನಮ್ಮದೇ ಚಿಕ್ಕ ಗುಂಪು ಮಾಡಿಕೊಂಡು ಒಬ್ಬರಿಗೊಬ್ಬರು ಸಮಾಧಾನ ಹೇಳುತ್ತಿದ್ದೆವು. ನಾವು ಅಲ್ಲಿಗೆ ತಲುಪಿದ ಮರು ದಿನ ಬೆಳಿಗ್ಗೆ ಮೊದಲ ಕೆಲ ದೇಹಗಳನ್ನು ಆಸ್ಪತ್ರೆಯ ಹೊರಾಂಗಣದಲ್ಲಿ ಸಾಲಾಗಿ ಇಡಲಾಗಿತ್ತು. ನಾವು ರಿಲೆಟೀವ್ ಗಳು ಅಲ್ಲಿಗೆ ಹೋಗಿ ಸಾಲಾಗಿ ದೇಹಗಳನ್ನು ಪದೇ ಪದೇ ನೋಡಿ ಅವರು ನಮ್ಮವರಾ ಇಲ್ಲವಾ ಎಂದು ಹೇಳು ತ್ತಿದ್ದೆವು. ಕೆಲವರಿಗೆ ಗುರುತು ಹಿಡಿಯಲು ಕಷ್ಟವಾಗಿತ್ತು, ಆ ರೀತಿ ದೇಹಗಳು ಜಖಂ ಆಗಿದ್ದವು. ಯಾತ್ರಿಗಳು ಹಾಕಿಕೊಂಡಿದ್ದ ಬಟ್ಟೆ ಬರಿ, ಚೂರುಪಾರು ಉಳಿದ ಆಭರಣಗಳು, ಮುಖ ಚಹರೆ, ಕೂದಲ ಬಣ್ಣ – ಹೀಗೆ ಎಲ್ಲರೂ ಒಂದಲ್ಲ ಒಂದು ಗುರಿತಿಗಾಗಿ ಹುಡುಕುತ್ತಿದ್ದರು. ಕೆಲವು ದೇಹಗಳು ಚೆನ್ನಾಗಿ ಗುರುತು ಹಿಡಿಯುವ ಸ್ಥಿತಿಯಲ್ಲಿದ್ದವು. ತೀರಾ ಜಖಂ ಆಗಿದ್ದ ದೇಹಗಳನ್ನು ಆಸ್ಪತ್ರೆಯ ಒಳ ಭಾಗದಲ್ಲಿ ಒಂದು ರೂಂ ನಲ್ಲಿ ಇಡ ಲಾಗಿತ್ತು. ದೇಹಗಳನ್ನ ಗುರಿತಿಸಿದವರದ್ದು ಒಂದು ತರದ ದುಃಖ, ಆಗಲಾರ್ದವರದ್ದು ಇನ್ನೊಂದು ತರಹದ ದುಃಖ, ಇನ್ನೂ ಕಾಯುತ್ತಿದ್ದವರದ್ದು ಮತ್ತೊಂದು ತರಹದ ಗೋಳು. ನಾನಾ ರೀತಿಯ ಅಳು ದನಿಗಳು, ಸಾವಿನ ವಾಸನೆ, ನೂರೆಂಟು ಪ್ರಶ್ನೆಗಳು… ನಾವೆಲ್ಲರೂ ” ನೋಡಿ, ಇದು ನನ್ನ … ಇವರ ಫೋಟೊ, ಈ ಇವರು ನೋಡಲು ಹೀಗಿದ್ದಾರೆ, ಇಷ್ಟು ವಯಸ್ಸು ನೀವು ಮೊದಲು ಆಸ್ಪತ್ರೆಗೆ ಹೋದರೆ ಈ ಚಹರೆಗಳು ಇತ್ಯಾದಿ ಕಾಣಿಸಿದರೆ ಸ್ವಲ್ಪ ಹೇಳಿ” ಅಂತ ಪರಸ್ಪರ ವಿವಿರಗಳನ್ನು ಕೂಡ ಹಂಚಿಕೊಳ್ಳುತ್ತ ಹೋದೆವು.
ನನ್ನ ತಾಯಿಯ ಫೋಟೋ, ಕಿವಿಯ ಓಲೆಗಳ ಗುರುತು ಇತ್ಯಾದಿಗಳ ವಿಷಯ ನಾನು ಎಲ್ಲರ ಹತ್ತಿರಾನೂ ಹೇಳಿ ಹೇಳಿ ಇಟ್ಟಿದ್ದೆ. ಅಷ್ಟಲ್ಲದೇ ಆಸ್ಪತ್ರೆಯ ಸಿಬ್ಬಂದಿ, ಪೊಲೀಸರು, ಸಹಾಯ ಮಾಡಲೆಂದು ಕರೆಸಿದ್ದ “ಸ್ಕಾವೆಂಜರುಗಳು” ಎಲ್ಲರಿಗೂ ಅಮ್ಮನ ಗುರುತುಗಳನ್ನ ಹೇಳಿದ್ದೆ. ಗುರುತು ಹಿಡಿದ ಮೇಲೆ ಏನು ಮಾಡುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡ ತೊಡಗಿತು. ಸಹಾಯಕ್ಕೆ ಆಗ ಬಂದವರು ಸ್ಥಳೀಯ ಹಾಗೂ ಪಕ್ಕದ ನೇಪಾಳದ ಯುವಕ ಸಂಘದವರು. ಗುರುತು ಹಿಡಿದ ಸಂಬಂಧಿಕರು ಪೋಸ್ಟ್ ಮಾರ್ತೆಮ್ ಮಾಡಿಸಿ ನಂತರ ಜಿಲ್ಲಾ ಕಲೆಕ್ಟರ್ ಕಡೆಯಿಂದ ಡೆತ್ ಸರ್ಟಿಫಿಕೇಟ್ ಪಡೆಯಲು ಅರ್ಜಿ ಕೊಡಬೇಕಿತ್ತು. ಜಿಲ್ಲಾ ಕಲೆಕ್ಟರ್ ಪಿತೊರಾಘರ್ ನಿಂದ ಬಂದಿದ್ದರು. ಮೊದಲ ಮೂರು ದಿನಗಳು ನಾನು ಬರೀ ಕಾದಿದ್ದೇ ಕಾದಿದ್ದು. ದೇಹಗಳನ್ನು ನೋಡಿದ್ದು, ಎನಣಿಸಿದ್ದು, ಅಮ್ಮ ಸಿಕ್ಕಿಲ್ಲವಲ್ಲಾ ಅಂತ ಗೋಳಾಡಿದ್ದು ಮತ್ತೆ ಕಾದಿದ್ದು. ಮೂರನೇ ದಿನ ಸಂಜೆ ಪ್ರಕಾಶ ಬಂದು “ಮತ್ತೆ ಆರು ಬಾಡಿಗಳನ್ನ ತಂದಿದ್ದಾರೆ, ಮೋಸ್ಟ್ಲಿ ನಮ್ಮಜ್ಜಿ ನಿಮ್ತಾಯಿ ಅದರಲ್ಲಿ ಇರಬಹುದು” ಎಂದ. ಇರಲಿ ದೇವರೇ ಅಂತ ನನ್ನ ಪ್ರಾರ್ಥನೆ. ಹಾಗೆ ಮತ್ತೊಂದು ಸುದ್ದಿ ಬಂತು – ಸತ್ತು ವಾರವಾಗಿದೆ, ದೇಹಗಳು ಕೊಳೆಯುತ್ತ ಬಂದಿವೆ, ಮಿಲಿಟರಿಯವರು ನಾಳೆ ಈ ಆಪರೇಷನ್ ನಿಲ್ಲಿಸಲಿದ್ದಾರೆ ಎಂದು.
ಉಳಿದ ಎಲ್ಲರಿಗೂ ಗಾಬರಿ – ಮುಂದೇನು ಎಂಬ ಪ್ರಶ್ನೆ. ಅಧಿಕಾರಿಗಳ ಜೊತೆ ಮಾತನಾಡಲು ಕೆಲವರು, ನಾವು ಇನ್ನು ಕಾಯುವುದಿಲ್ಲ ವಾಪಸ್ ಹೋಗ್ತೀವಿ ಎನ್ನುವ ಮಂದಿ – ನನಗೆ ಅಮ್ಮಾ, ನೀನೇ ದಿಕ್ಕು ತೋರಿಸು ಎನ್ನುವ ಸ್ಥಿತಿ. “ಪ್ರಕಾಶ, ನಾನು ಹೋಗಿ ನೋಡ್ತೀನಿ” ಎಂದೆ. “ಬೇಡ ಕಣ್ರೀ, ಸಾಯಂಕಾಲ, ಬೆಳಕು ಸಾಲದು, ಮಳೆ ಬೇರೆ” ಅಂದ ಅವನು. ಜೊತೆಯಲ್ಲಿದ್ದ ಕಲ್ಕತ್ತದಾತ, ಮತ್ತಿಬ್ಬರು ಕೂಡ ಅದೆ ಮಾತು ಹೇಳಿದರು. ಸ್ಥಳೀಯ ಪೊಲೀಸ್ ಆಫೀಸರ್ ಒಬ್ಬರು ಹಾಗೂ ಮತ್ತೊಬ್ಬ ಅಧಿಕಾರಿ ಕೂಡ ಈಗ ಬೇಡ, ಸಂಜೆಯ ಹೊತ್ತು ಸರಿಯಲ್ಲ, ಅದರಲ್ಲೂ ನೀನು ಹೆಂಗಸು ಬೇರೆ” ಎಂದರು. ನನಗೆ ಆ ಸ್ಥಳ ಬಿಡಲು ಮನಸ್ಸಿಲ್ಲ. ಒಳ ದನಿ ಅಮ್ಮ ಅಲ್ಲಿದ್ದಾರೆ ಎನ್ನುತ್ತಿದೆ. ಪ್ರಕಾಶ ನನ್ನ ಸಂಕಟ ನೋಡಿ “ರೀ, ನಾನು ಹೋಗಿ ನೋಡ್ ತೀನಿ” ಅಂದ. ವಾಪಸ್ಸು ಬಂದು “ಕಷ್ಟಾ ಕಣ್ರೀ, ಮಬ್ಬು ಮಬ್ಬು” ಅಂದ. ಯಾಕೋ ನಾನು ಆ ಇಡೀ ರಾತ್ರಿ ಅಮ್ಮ ಅಲ್ಲಿದ್ದಾರೆ ಅಂತಲೆ ಕಳೆದೆ. ಬೆಳಿಗ್ಗೆ ಮತ್ತೆ ನಾನು, ಪ್ರಕಾಶ, ಕಲ್ಕತ್ತದಾತ ಆಸ್ಪತ್ರೆಗೆ ಹೋದೆವು. ಅಲ್ಲಿ ಕಾರಿಡಾರ್ನಲ್ಲಿ ನನ್ನನ್ನ ಕೂರಿಸಿ ಪ್ರಕಾಶ, ಆತ ಹೋದರು. ನಾನು ಅಮ್ಮನ ಫೋಟೋ ಇಟ್ಟುಕೊಂಡು ಅಳುತ್ತ ಕೂತಿದ್ದೆ.
ಅಷ್ಟರಲ್ಲಿ ಆಸ್ಪತ್ರೆಯ ಒಬ್ಬ ಸಿಬ್ಬಂದಿ ನನ್ನ ಬಳಿ ಬಂದು “ಬೆಹೆನ, ನಿನ್ನ ಬಳಿಯಿರುವ ಅ ಫೋಟೋ ದಲ್ಲಿರುವ ಹಾಗೆ ಇರುವ ಮಹಿಳೆಯ ಒಂದು ದೇಹ ಅಲ್ಲಿದೆ” ಎಂದರು. ಹಾಗಾದರೆ ಅದು ನಮ್ಮಮ್ಮನದೆ ಎಂದು ನಾನು ಇನ್ನೂ ಅಳಲು ತೊಡಗಿದೆ. ಆ ಮಹಿಳಾ ಸಿಬ್ಬಂದಿ ನನ್ನ ಬಳಿ ಬಂದು ಸಮಾಧಾನ ಮಾಡಲಾರಂಭಿಸಿದಳು. ಅದೇ ಆಸ್ಪತ್ರೆಯಾತ ಮತ್ತೆ ಬಂದು ಅಮ್ಮ ಯಾವುದಾದರೂ ಚಿನ್ನದ ಒಡವೆ ಹಾಕಿಕೊಂಡಿದ್ದರ ಅಂತ ಕೇಳಿದ. ಅಮ್ಮ ಅವರ ಓಲೆಗಳನ್ನ ಬಿಚ್ಚಿಟ್ಟು ಪ್ರಯಾಣದಲ್ಲಿ ಯಾಕೆ ದುಬಾರಿ ಚಿನ್ನ ಅಂತ ಹೇಳಿ ನಮ್ಮಕ್ಕನ ಮಗಳ ಚಿಕ್ಕ ಓಲೆಗಳನ್ನ ಹಾಕಿಕೊಂಡು ಹೋಗಿದ್ದರು. ಹೌದು, ಈ ರೀತಿಯ ಚಿನ್ನದ ಓಲೆ ಹಾಕಿಕೊಂಡು ಹೋಗಿದ್ದರು ಎಂದೆ. “ನೆನ್ನೆ ನಿಮ್ಮಮ್ಮನ ದೇಹವನ್ನು ನಾವು ದಾಖಲೆ ಮಾಡುವ ಸಮಯದಲ್ಲಿ ಎರಡೂ ಕಿವಿಗಳಲ್ಲಿ ಓಲೆಗಳು ಇದ್ದದ್ದನ್ನ ನಾನು ನೋಡಿದ್ದೆ, ಈಗ ಆ ಓಲೆಗಳು ಇಲ್ಲ” ಅಂತ ಆತ ಹೇಳುತ್ತಿರುವಾಗಲೇ ಪ್ರಕಾಶ, ಕಲ್ಕತ್ತದಾತ ವಾಪಸ್ಸು ಬಂದು ನಮ್ಮಮ್ಮನ ದೇಹ ಅಲ್ಲಿ ಹೊರಾಂಗಣದಲ್ಲಿ ಇದೆ ಅಂತ ಹೇಳಿದರು. ನನಗೆ ಅಮ್ಮ ಸಿಕ್ಕಿದ ಸಮಾಚಾರ ಕೇಳಿ ಮಿದುಳಿನ ಎಲ್ಲಾ ಚಟುವಟಿಕೆಗಳೂ ಫ್ರೀಜ್ ಆಗುವ ಸಮಯ ಅದು. ಅವರಿಬ್ಬರೂ ಈ ಓಲೆಯ ವಿಷಯವನ್ನು ಕೇಳಿಸಿಕೊಂಡರು.
ಪಕ್ಕ ಸರಿದು ಆ ಆಸ್ಪತ್ರೆಯಾತನನ್ನು ಮಾತನಾಡಿಸಿದರು, ಅವನು ಹೇಳಿದ “ಆ ಒಬ್ಬ ಸ್ಕಾವೆಂಜರ್ ನೆನ್ನೆ ಈ ಬೆಹೆನಜಿಯ ತಾಯಿಯ ಬಳಿ ಇದ್ದದ್ದನ್ನು ನಾನು ಗಮನಿಸಿದ್ದೆ, ಅವನು ಇಲ್ಲೇ ಎಲ್ಲಾದರು ಇರಬಹುದು, ಯಾರನ್ನಾದರೂ ಕಳಿಸುತ್ತೀನಿ ಇರಿ “. ಈ ಮಧ್ಯದಲ್ಲಿ ಪತ್ರಕರ್ತರು, ಟಿವಿ ಚಾನೆಲ್ ಗಳ ಮಂದಿ ಧಾರ್ಚುಲಕ್ಕೆ ಬರಲಾರಂಭಿಸಿದ್ದರು. ನನಗೆ ಅವರು ನನ್ನಮ್ಮನನ್ನು ಟಿವಿಯಲ್ಲಿ ತೋರಿಸುವುದು ಇಷ್ಠವಿರಲಿಲ್ಲ. ಒಂದು ಟಿವಿ ಚಾನೆಲ್ ನಾನು ಅಳುತ್ತಿರುವುದನ್ನು, ಅಮ್ಮ ಹಾಗೂ ಇತರರನ್ನು ಟಿವಿಯಲ್ಲಿ ತೋರಿಸಿದ್ದನ್ನು ನನ್ನ ಬಳಗದವರು, ಸ್ನೇಹಿತರು ನೋಡಿದ್ದಾರೆ. ಪ್ರಕಾಶ್ ನನ್ನಮ್ಮನ ಸೀರೆ ಬಣ್ಣ ಹೀಗೆದೆ ಎಂದು ಹೇಳಲು ಶುರು ಮಾಡಿದ ಎರಡು ನಿಮಷಗಳಲ್ಲೇ ಆಸ್ಪತ್ರೆಯಾತ, ಮತ್ತೊಬ್ಬ ಯುವಕ ಹಾಜರು. ಆಸ್ಪತ್ರೆಯಾತ ಗದರು ದನಿಯಲ್ಲಿ “ತೋರಿಸು ತೋರಿಸು” ಅಂದ – ಆ ಯುವಕ ಹರಿದಿದ್ದ ಜೀನ್ಸ್ ಪ್ಯಾಂಟಿನ ಪಾಕೆಟ್ ನಿಂದ ಓಲೆಗಳನ್ನ ತೆಗೆದು ನನ್ನ ಮುಂದೆ ಇಟ್ಟ. ನಾನು ಗಟ್ಟಿಯಾಗಿ ಕಿರಿಚಿಕೊಂಡೆ – ಓಲೆಗಳು ಅಮ್ಮನ ಹರಿದಿದ್ದ ಕಿವಿಗೆ ಇನ್ನೂ ಹಾಗೆ ಅಂಟಿಕೊಂಡಿದ್ದವು. ಕಿವಿಯ ಮಾಂಸದ ಚೂರು ನನ್ನನ್ನು ನೋಡುತ್ತಿತ್ತು. ಎಲ್ಲರಿಗೂ ಶಾಕ್ .
ಯುವಕ ಹೇಳಿದ “ನಾನು ಬಡವ,ನನ್ನ ಅಣ್ಣ ಯಾತ್ರಿಗಳ ಜೊತೆ ಸಹಾಯ ಮಾಡಲು, ಕೂಲಿ ಗಳಿಸಲು ಹೋದ, ಸತ್ತ. ಈ ಚಿನ್ನ ಮಾರಿದರೆ ಸ್ವಲ್ಪ ದುಡ್ಡಾದರೂ ಸಿಕ್ಕತ್ತೆ ಅಂತ ಆಸೆ ಆಯ್ತು”. ನಾನು ಅಳುತ್ತ ಹೇಳಿದೆ – “ತಮ್ಮ, ನನ್ನ ಅಮ್ಮನ ಓಲೆ. ನನಗೆ, ನನ್ನ ಕುಟುಂಬಕ್ಕೆ ಆಕೆಯ ನೆನಪು ಅಂತ ಬೇಕು, ಕೊಡು . ನಾನು ನಿನಗೆ ಸ್ವಲ್ಪ ಹಣ ಕೊಡ್ತೀನಿ”. ನಾನು ಅವನಿಗೆ 300 ರೂಪಾಯಿಗಳನ್ನ ಕೊಟ್ಟು ಓಲೆಯನ್ನು ವಾಪಸ್ ಪಡೆದೆ. ಸರಿ, ಅಮ್ಮನ ಬಳಿಗೆ ನಡೆಯಲು ಆರಂಭಿಸಿದೆ – ಕಾಲುಗಳೆರಡು ಸೋಲುತ್ತಿವೆ, ಕೈಗಳೆರಡು ನಡುಗುತ್ತಿವೆ, ಕಳೆದ ಹಲವಾರು ದಿನಗಳಿಂದ ಪಟ್ಟ ಪಾಡು, ತಿಂದ ನೋವು ಕಡೆಗೂ ಕಾಣಿಸುತ್ತಿದೆ. ಕೊನೆಗೂ ಅಲ್ಲಿ ಹೋಗಿ ನಿಂತೆ, ನೋಡಿದೆ – ಅಮ್ಮ ಹಸಿರು ಸೀರೆ ಉಟ್ಟು ಸರಸ್ವತಿ ಕಲರ್ ಬ್ಲೌಸ್ ಧರಿಸಿ ಮಲಗಿದ್ದರು. ಕುಸಿದು ಬಿದ್ದ ನನ್ನನ್ನು ಪ್ರಕಾಶ್ ಮತ್ತು ಕಲ್ಕತ್ತದಾತ ಎತ್ತಿ ಹಿಡಿದರು. ಅಧಿಕಾರಿಗಳು, ಪೊಲೀಸರು, ಆಸ್ಪತ್ರೆಯ ಡಾಕ್ಟರ್ ಗಳೆಲ್ಲ ಬಂದು ನಾನು ಗುರುತು ಹಿಡಿದ ಬಾಡಿ ಇಂತಹವರದ್ದು ಎಂದು ದಾಖಲು ಮಾಡಿಕೊಂಡು ಹೋದರು. ಮತ್ತದೇ ಮಹಿಳಾ ಸಿಬ್ಬಂದಿ ಬಂದು ನನ್ನನ್ನು ಸಾಮಾಧಾನ ಮಾಡಿದರು.
ಇನ್ನೂ ಕೆಲವರು ಬಂದು ಪೋಸ್ಟ್ ಮಾರ್ಟಂ ಅದೇ ಜಾಗದಲ್ಲೇ ನಡೆಯಲಿದೆ, ನೀನು ಇಲ್ಲಿರುವುದು ನಿನಗೆ ಒಳ್ಳೆಯದಲ್ಲ ಎಂದರು. ಆಸ್ಪತ್ರೆಯ ಡಾಕ್ಟರ್ ಆ ಮಹಿಳೆಗೆ ನನ್ನನ್ನು ಬೇರೆ ಕಡೆ ಕರೆದುಕೊಂಡು ಹೋಗಲು ಹೇಳಿದರು. ಆಕೆ ಹತ್ತಿರದಲ್ಲೆ ಇದ್ದ ತನ್ನ ಮನೆಗೆ ನನ್ನನ್ನು ಕರೆದು ಕೊಂಡು ಹೋದರು. ಮಧ್ಯಾನ್ಹದ ಊಟದ ಸಮಯಕ್ಕೆ ಶಾಲೆಯಿಂದ ಬಂದ ತನ್ನಿಬ್ಬರು ಮಕ್ಕಳಿಗೆ ನನ್ನ ಪರಿಚಯ ಮಾಡಿಸಿದರು. ಆಕೆಯ ಮೂಲಕ ನನಗೆ ಮತ್ತಷ್ಟು ವಿಷಯಗಳು ತಿಳಿದವು. ಎಲ್ಲರ ಗಮನವೂ ಯಾತ್ರಿಗಳ ಮೇಲೆ ಇದೆ, ಸತ್ತಿರುವ ಅನೇಕ ಸ್ಥಳೀಯರ ಬಗ್ಗೆ ಯಾರೂ ಗಮನ ಕೊಡುತ್ತಿಲ್ಲ, ಆ ಸಂಸಾರಗಳೆಲ್ಲ ಈಗ ಅತಂತ್ರವಾಗಿದೆ, ಮಕ್ಕಳು ಅನಾಥರಾಗಿದ್ದಾರೆ, ತಾಯಂದಿರು ಈಗ ಸಂಪಾದನೆಯ ಮಾರ್ಗ ಹುಡುಕಬೇಕು, ಇದೆಲ್ಲ ಬರೀ ನಮ್ಮಂತಹ ಸ್ಥಳೀಯರಿಗೆ ಗೊತ್ತು ಎಂದ ಆಕೆ ಹೇಳಿದರು. “ನಿನ್ನ ತಾಯಿಯ ದೇಹವನ್ನು ಹೇಗೆ ನಿನ್ನ ಊರಿಗೆ ತೆಗೆದುಕೊಂಡು ಹೋಗುತ್ತೀಯ, ಬೇರೆಯವರೆಲ್ಲ ದೇಹಗಳ ಅಂತ್ಯ ಕ್ರಿಯೆಯನ್ನು ಇಲ್ಲೇ ಮಾಡುತ್ತಿದ್ದಾರೆ” ಎಂದರು. ಆಗ ನಾನು ವಾಸ್ತವಕ್ಕೆ ಮತ್ತೆ ಬಂದೆ – ಹೌದು, ನಾನೇನು ಮಾಡುವುದು ಎಂಬ ಪ್ರಶ್ನೆ. ಪುನಃ ಆಕೆ ಇಲ್ಲೇ ದಹನ ಮಾಡು, ಸ್ಥಳೀಯ ಯುವಕ ಮಂಡಳಿಯವರು ಸಹಾಯ ಮಾಡುತ್ತಿದ್ದಾರೆ. ನಾನು ನಿನ್ನನ್ನು ಅವರ ಹತ್ತಿರ ಕರೆದುಕೊಂಡು ಹೋಗುತ್ತೀನಿ, ಎಂದರು. ನಾನು ಕನಸಿನಲ್ಲೂ ಕಲ್ಪಿಸಿಕೊಳ್ಳದ್ದಿದ್ದ ಪರಿಸ್ಥಿತಿ ಎದುರಾಯಿತು – ನನ್ನ ತಾಯಿಯ ಅಂತ್ಯ ಕ್ರಿಯೆಗೆ ನಾನು ಏರ್ಪಾಡು ಮಾಡಬೇಕಿತ್ತು. ಹೇಗೆ, ಏನು ಎಂದು ನಾನು ಯೋಚನೆ ಮಾಡಿ, ನಿರ್ಧಾರಗಳನ್ನ ಮಾಡಬೇಕಿತ್ತು.
ಎಲ್ಲಕ್ಕೂ ಮಿಗಿಲಾಗಿ ಈ ಅತಿ ವಿಚಿತ್ರದ ಪರಿಸ್ಥಿತಿಯನ್ನು ನನ್ನ ಮನಸ್ಸು ಒಪ್ಪಿಕೊಳ್ಳಬೇಕಿತ್ತು. ಹೌದು, ಅಮ್ಮ ಗಂಗಾ ಮಾತೆಯನ್ನು ಜೀವನ ಪೂರ್ತಿ ಪೂಜೆ ಮಾಡಿದ್ದರು. ಹಿಂದೂ ಕ್ಯಾಲೆಂಡರ್ ಪ್ರಕಾರ ಗಂಗಾ ದಶಮಿಯ ದಿನ ಹುಟ್ಟಿದ ನನಗೆ ಗಂಗಾ ಎಂದು ಹೆಸರಿಡಬೇಕು ಎಂದು ಆಸೆ ಪಟ್ಟಿದ್ದರಂತೆ. ಆದರೆ ಅಪ್ಪ ನನಗೆ ಹೆಸರು ಕೊಟ್ಟರಂತೆ. ಸತ್ತ ಮೇಲೆ ಆ ಗಂಗೆಯನ್ನು ಸೇರುವ ಆಸೆಯನ್ನು ಅಮ್ಮ ಹೇಳಿದ್ದರು. ಆವರ ಧರ್ಮ, ನಂಬಿಕೆಗಳು, ಆಚಾರದ ಪ್ರಕಾರ ನಾನು ಅವರ ದೇಹಕ್ಕೆ ಈಗ ಗೌರವ ಸಲ್ಲಿಸಬೇಕು, ಅದೇ ಆಕೆಯ ಮಗಳಾಗಿ ನನ್ನ ಕರ್ತವ್ಯ ಎಂದು ನನ್ನ ಮನಸ್ಸು ಹೇಳಿತು. ಸರಿ, ಆಕೆಯ ಅಂತ್ಯಕ್ರಿಯೆ ಇಲ್ಲೇ ಕಾಳಿ ನದಿಯ ಪಕ್ಕದಲ್ಲಿ ಎಂದು ನಿರ್ಧಾರಕ್ಕೆ ಬಂದೆ. ಈ ಕಾಳಿ ನದಿ ಮುಂದೆ ಹಿಮಾಲಯದ ಇತರ ನದಿಗಳ ಜೊತೆ ಗಂಗೆಯೊಡನೆ ಸಾಗರವನ್ನು ಸೇರುತ್ತಾಳೆ ಎಂದು ಸ್ವಲ್ಪ ಸಮಾಧಾನ ಆಯ್ತು. ನಂತರ ನಾನು ವಾಪಸ್ಸು ಆಸ್ಪತ್ರೆಗೆ ಹೋದೆ. ಅಲ್ಲಿ ಯುವಕ ಮಂಡಳಿಯ ನಾಯಕ ನನ್ನನ್ನು ಮಾತನಾಡಿಸಿ ಅಂತ್ಯಕ್ರಿಯೆಗೆ ಯಾವ ಸಹಾಯ ಬೇಕು ಎಂದು ಕೇಳಿದ. ಯಾವ ಸಂಬಂಧವೂ ಇಲ್ಲದ ಅವನು, ಅವನ ಮಿತ್ರರು ನನಗೆ ಆಗ ಆಪ್ತ ಬಂಧುಗಳು.
ಅವನ ಕೈ ಹಿಡಿದು ಜೋರಾಗಿ ಅತ್ತು ಬಿಟ್ಟೆ. “ಅಳಬೇಡ, ಬೆಹೆನ್, ನಾವು ಒಬ್ಬರಿಗೊಬ್ಬರು ಸಮಯಕ್ಕಾಗಬೇಕಲ್ಲವೇ” ಎಂದ. ಪಂಡಿತಜೀ ಹತ್ತಿರ ಕರೆದುಕೊಂಡು ಹೋದ. ಅವರು ಬ್ರಾಹ್ಮಣ ಜಾತಿ ಧರ್ಮದ ಪ್ರಕಾರ ಬೇಕಿರುವ ಸಾಮಗ್ರಿಗಳ ಪಟ್ಟಿ ಕೊಟ್ಟರು. ನಾನು ಪ್ರಕಾಶನನ್ನ ಕರೆದುಕೊಂಡು ಸ್ಥಳೀಯ ಅಂಗಡಿಗಳಿಗೆ ಹೋಗಿ ಅವುಗಳನ್ನ ಹೊಂದಿಸಿಕೊಂಡೆ. ಮರುದಿನ ಆಗಸ್ಟ್ 25 ರಂದು ಪ್ರಕಾಶ್, ಕಲ್ಕತ್ತದಾತ, ಮೂರು ದಿನಗಳ ಕಾಲ ಗೆಸ್ಟ್ ಹೌಸಿನಲ್ಲಿ ಜೊತೆಗಿದ್ದ ಇನ್ನೂ ಕೆಲವರು, ಯುವಕ ಮಂಡಳಿಯ ಹುಡುಗರು, ಪಂಡಿತಜೀ ಎಲ್ಲರೂ ಧಾರ್ಚುಲದಿಂದ ಕೆಲ ಕಿಲೋಮೀಟರ್ ದೂರ ಹೋದೆವು. ಆ ಯುವಕರು ವಾಹನಗಳ ವ್ಯವಸ್ಥೆ, ದೇಹವನ್ನು ಅಲ್ಲಿಗೆ ತರುವುದು, ದಹನಕ್ಕೆ ಬೇಕಿದ್ದ ಕಟ್ಟಿಗೆ ಇತ್ಯಾದಿ ಎಲ್ಲದರ ಏರ್ಪಾಡು ಮಾಡಿದ್ದರು. ಅವರಿಗೆ ನಾನು ಯಾವತ್ತೂ ಕೃತಜ್ಞಳಾಗಿದ್ದೀನಿ. ಕಾಳಿನದಿ ದಡದಲ್ಲಿ ಆಕೆಯ ಅಂತ್ಯ ಕ್ರಿಯೆ ಮಾಡಿದೆ. ಬೆಂಗಳೂರಿಗೆ ವಾಪಸ್ಸು ಬಂದ ಮೇಲೆ ತಿಳಿಯಿತು ಆ 25 ಮಂಗಳವಾರ ಗೌರಿ ಹಬ್ಬ ಆಗಿತ್ತು. ಆಮೇಲೆ ವಾಪಸ್ಸು ಆಸ್ಪತ್ರೆಗೆ ಹೋಗಿ ಸರಕಾರೀ ಅಧಿಕಾರಿಗಳನ್ನು ಭೇಟಿಯಾಗಿ, ಪತ್ರಗಳನ್ನು ಕೊಟ್ಟು, ಫಾರಂಗಳನ್ನೂ ತುಂಬಿ ಪೋಸ್ಟ್ ಮಾರ್ಟಂ ರಿಪೋರ್ಟ್, ಮರಣ ಪತ್ರ ದಾಖಲೆಗಳನ್ನ ಪಡೆಯುವ ಹೊತ್ತಿಗೆ ಆಗಸ್ಟ್ 26 ಆಗಿತ್ತು. ಆ ಕೆಲ ಸನ್ನಿವೇಶಗಳಲ್ಲಿ ಹಲವಾರು ಬಾರಿ ಬ್ಯೂರೆಕ್ರಸಿ, ತೊಂದರೆಗಳನ್ನೂ ಅನುಭವಿಸಿದ್ದಾಯ್ತು. ಯುವಕ ಮಂಡಳಿಯ ನಾಯಕನನ್ನು ಸಹಾಯ ಕೇಳಿ ಪುನಃ ಭೇಟಿಯಾದೆ. ಅವನು ಸಹಾಯ ಮಾಡಿದ.
ನಂತರ ಆದಷ್ಟೂ ಬೇಗ ಧಾರ್ಚುಲವನ್ನು ಬಿಟ್ಟು ಹೋಗಲು ಹೇಳಿದ – “ಮಿಲಿಟರಿಯವರು ಈ ಆಪರೇಶನ್ ನಿಲ್ಲಿಸುತ್ತಿದ್ದಾರೆ. ಸಂಬಂಧಿಕರುಗಳೆಲ್ಲ ಗುಂಪು ದಹನಕ್ರಿಯೆಯನ್ನು ಸರಕಾರಕ್ಕೆ ಒಪ್ಪಿಸಿ ವಾಪಸ್ಸು ಹೋಗುತ್ತಿದ್ದಾರೆ. ಸ್ಥಳೀಯರು ಮಾಲ್ಪಾಕ್ಕೆ ಹೋಗಿ ತಮ್ಮ ಬಂಧುಗಳ ದೇಹಗಳನ್ನು ಹುಡುಕುವುದು ಎಂದು ನಿರ್ಧಾರ ಮಾಡಿದ್ದಾರೆ. ಆದರೆ ಸರಕಾರ, ಮಿಲಿಟರಿಯವರು ಒಪ್ಪುತ್ತಿಲ್ಲ, ಪರಿಸ್ಥಿತಿ ಬಿಗಡಾಯಿಸುತ್ತಿದೆ, ಬೆಹೆನ್ ನೀನು ಈಗಲೇ ಧಾರ್ಚುಲದಿಂದ ಹೋಗುವುದು ಸೂಕ್ತ” ಎಂದ. ಪ್ರಕಾಶ ಕೂಡ ಬಂದು “ಹೌದು, ಮಿಲಿಟರಿಯವರು ಕೆಲಸ ನಿಲ್ಲಿಸುತ್ತಿದ್ದಾರೆ. ನಾನು ಕೂಡ ಇನ್ನೂ ಕಾಯದೆ ಹೊರಡುತ್ತಿದ್ದೀನಿ, ಎಲ್ಲರೂ ಧಾರ್ಚುಲ ಬಿಡಲಾರಂಭಿಸಿದ್ದಾರೆ. ನನ್ನ ಕುಟುಂಬದವರು ಗೋಕರ್ಣದಲ್ಲಿ ಅಜ್ಜಿಯ ಕಾರ್ಯಗಳನ್ನು ಆರಂಭಿಸಿದ್ದಾರೆ. ನಾನು ಗೋಕರ್ಣಕ್ಕೆ ಹೋಗ್ತೀನಿ” ಎಂದ. ನಾವು ಕೆಲವರು ಜೀಪ್ ಮಾಡಿಕೊಂಡು ಪಿತೊರಘರಗೆ ಹೊರೆಟೆವು. ಅಲ್ಲಿಂದ ದೆಹಲಿ, ದೆಹಲಿಯಿಂದ ಆಗಸ್ಟ್ 28 ರಂದು ಬೆಂಗಳೂರಿಗೆ ಮರು ಪ್ರಯಾಣ. ಬೆಂಗಳೂರಿನಲ್ಲಿ ಓಲೆಗಳನ್ನು ಅಕ್ಕನಿಗೆ ಒಪ್ಪಿಸಿದೆ. ನನ್ನಮ್ಮ ತನ್ನ ಯಾತ್ರೆಗಳ ದಿನಚರಿ ಬರೆದು ನಂತರ ಅದನ್ನು ನರೆಟೀವ್ ನಂತೆ ಬರೆದು ಅದನ್ನು ನಾವೆಲ್ಲರೂ ಓದುತ್ತಿದ್ದೆವು. ನಾನು ಕೂಡ ಈ ನನ್ನ ಅನುಭವವನ್ನು ಬರೆದಿದ್ದೀನಿ – ವ್ಯತ್ಯಾಸ ಎಂದರೆ ನಾನು ಬರೆದಿರುವುದು ಒಂದು ಯಾತ್ರೆಯ ದುರಂತದ ಬಗ್ಗೆ, ಒಬ್ಬ ಮಗಳು ತನ್ನ ತಾಯಿಗೆ “ನೀನು ನನ್ನನ್ನು ಈ ಭೂಮಿಗೆ ತಂದೆ, ಆ ಋಣವನ್ನು ನಾನು ಈಗ ನಿನ್ನ ದಹನಕ್ರಿಯೆ ಮಾಡುವುದರ ಮೂಲಕ ತೀರಿಸುತ್ತೀದ್ದೀನಿ” ಎಂದು ಹೇಳಿದ ರೀತಿಯ ಬಗ್ಗೆ. ಇದನ್ನು ಬರೆಯುವುದಕ್ಕೆ 15 ವರ್ಷಗಳು ತನಕ ನಾನು ಕಾದೆ.






ಹೌದು, ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ನಾನು ೨೦೧೨ ರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿದ್ದೇನೆ. ಮಾಲ್ಪ ಬಳಿ ನಮಗೆ ಈ ಘಟನೆ ನಡೆದ ಸ್ಥಳವನ್ನು ತೋರಿಸಿದರು. ಇಡೀ ಒಂದು ದೊಡ್ಡ ಗುಡ್ಡವೇ ಕುಸಿದು ಬಿತ್ತಂತೆ! ಇದು ಭಕ್ತಿ ಮತ್ತು ಸಾಹಸದ ಯಾತ್ರೆ. ಹಲವಾರು ಹೆಜ್ಜೆಗಳಲ್ಲಿ ನಾವು ಸಾವಿನಿಂದ ತಪ್ಪಿಸಿಕೊಂಡ ಭಾವ ಮೂಡುತ್ತದೆ. ಆದರೆ ನಮ್ಮ ಐಟಿಬಿಪಿ ಯೋಧರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ೩೦ ದಿನಗಳ ಈ ಚಾರಣ ಅತ್ಯಂತ ರೋಚಕವಾದದ್ದು. ನನ್ನ ಬದುಕಿನ ಅತ್ಯಂತ ಸಂಭ್ರಮದ ದಿನಗಳು ಅವು!
ಅಬ್ಬ ………….ಎಂತ ವೇದನೆ …………… ನಿರಾತಂಕ ಸಾವೇ ನಮ್ಮನ್ನು ನೋವು ಕೊಡುವಾಗ ……………..
ಏನು ಹೇಳಬೇಕೋ ಹೇಗೆ ನನ್ನ ನೋವು ಹೇಳಬೇಕೋ ತಿಲಿವುತ್ತಿಲ್ಲ ………….. ನಿಮ್ಮ ಸಹನೆ, ಧ್ಯರ್ಯಕ್ಕೆ ಒಂದು ನಮಸ್ಕಾರ…..
ನನ್ನ ಕಣ್ಣಲ್ಲಿ ನೀರೆ ಬಂತು. ಮನ ಕಲಕಿ ಹೋಯ್ತು. ಒಬ್ಬರೇ ಹೇಗೆ ತದೆದುಕೊಂದಿರೋ………………….
ಅಮ್ಮನ ಕಳಕೊಂಡಿದ್ದು ಒಂದು ಕಡೆ ………
ಅಲ್ಲಿನ ಕರಾಳ ಪರಿಸ್ತಿತಿ ಒಂದು ಕಡೆ…………………
ದೇವರು ನೋವನ್ನು ಭರಿಸುವ ಶಕ್ತಿ ಕೊಡಲಿ………………..
ನನ್ನಮ್ಮ ತನ್ನ ಯಾತ್ರೆಗಳ ದಿನಚರಿ ಬರೆದು ನಂತರ ಅದನ್ನು ನರೆಟೀವ್ ನಂತೆ ಬರೆದು ಅದನ್ನು ನಾವೆಲ್ಲರೂ ಓದುತ್ತಿದ್ದೆವು. ನಾನು ಕೂಡ ಈ ನನ್ನ ಅನುಭವವನ್ನು ಬರೆದಿದ್ದೀನಿ – ವ್ಯತ್ಯಾಸ ಎಂದರೆ ನಾನು ಬರೆದಿರುವುದು ಒಂದು ಯಾತ್ರೆಯ ದುರಂತದ ಬಗ್ಗೆ, ಒಬ್ಬ ಮಗಳು ತನ್ನ ತಾಯಿಗೆ “ನೀನು ನನ್ನನ್ನು ಈ ಭೂಮಿಗೆ ತಂದೆ, ಆ ಋಣವನ್ನು ನಾನು ಈಗ ನಿನ್ನ ದಹನಕ್ರಿಯೆ ಮಾಡುವುದರ ಮೂಲಕ ತೀರಿಸುತ್ತೀದ್ದೀನಿ” ಎಂದು ಹೇಳಿದ ರೀತಿಯ ಬಗ್ಗೆ. ಇದನ್ನು ಬರೆಯುವುದಕ್ಕೆ 15 ವರ್ಷಗಳು ತನಕ ನಾನು ಕಾದೆ….abba ii durantada bagge ondistu tilididde…nimma edeyaalada madugattida dukha..keli kannale mudi bantu..idarottige ittichege nadeda uttarakanda da duranta kuda kaaditu…ii saavu ii kaala asdeke istondu krura endu kaaduttide..matte matte .ondu hale haadu nenapu baruttide ” ii dehadinda duranaade eke aatmave,ii saavu nyayave..ii saavu nyayave….”
ಅಬ್ಬಾ! ಎಂಥಹ ದುರಂತವಿದು! ಓದುವಾಗಲೇ ಮೈನಡುಗಿಸುವಂತಹ ದಾರುಣ ಅನುಭವ!
ಲೇಖಕಿ ಇವೆಲ್ಲವನ್ನೂ ಧೈರ್ಯದಿಂದ ಒಬ್ಬರೇ ಎದುರಿಸಿ, ಅಮ್ಮನ ಕೊನೆಯಾಸೆಯನ್ನು ನೆರವೇರಿಸಿದ ಬಗೆಗೆ ಮೆಚ್ಚುಗೆ ಅನ್ನಿಸುತ್ತದೆ.
ಶ್ರೀಮತಿ, ವಿನತೆರವರೆ,
ನಿಮ್ಮ ಬರಹದಲ್ಲಿ ತಾಯಿಯ ಬಗ್ಗೆ ಕಾತುರ ಪ್ರೇಮ ವ್ಯಕ್ತವಾಗಿದೆ. ಕೈಲಾಸ ಯಾತ್ರೆಯಲ್ಲಿ ದುರಂತಗಳು ಸರ್ವೇ ಸಾಮಾನ್ಯವಾಗಿವೆ. ನಿಮ್ಮ ತಾಯಿಯವರು ಹೋದಾಗ ನೇಪಾಳ-ನ್ಯಾಲಂ ರಸ್ತೆಯಲ್ಲಿ ಹೋಗಿದ್ದಿದ್ದರೆ ಉತ್ತಮವಾಗಿತ್ತೇನೋ ? ಆಗ ನ್ಯಾಲಂ ರಸ್ತೆಯು ಕಚ್ಚಾ ರಸ್ತೆಯಾಗಿದ್ದು ತುಂಬಾ ಕಷ್ಟವಾಗುತ್ತಿತ್ತಂತೆ. ಈಗ ನ್ಯಾಲಂ-ಸಾಗಾ-ದಾರ್ಚುಲಾ-ಕೈಲಾಸ ರಸ್ತೆಯನ್ನು ಚೀನ ಅತ್ಯುತ್ತಮವಾಗಿ ನಿರ್ಮಿಸಿದೆ. ಆದರೂ ಸಾವಿನ ಸಂಖ್ಯೆ ಕಡಮೆಯಾಗಿಲ್ಲ.
ನಾನು ೨೦೧೩ ಜುಲೈನಲ್ಲಿ ಕೈಲಾಸ-ಮಾನಸ ಯಾತ್ರೆಯನ್ನು ನೇಪಾಳ-ಕೊಡಾರಿ-ನ್ಯಾಲಂ-ದಾರ್ಚುಲಾ ಮುಖೇನ ಮಾಡಿದ್ದೆ. ನಾನು ಕೆಲವು ವರ್ಷಗಳ ಹಿಂದೆ ತೀವ್ರ ಖಾಯಿಲೆಗೆ ಒಳಗಾಗಿದ್ದು ಬದುಕಿದ್ದೇ ದೊಡ್ಡದು. ಇಂತಹಾ ನಾನು ಕೂಡಾ ಕೈಲಾಸ-ಮಾನಸವನ್ನು ನೋಡಬಹುದು ಎಂದು ನನಗೆ ನಾನೇ ಖಾತ್ರಿಪಡಿಸಿಕೊಳ್ಳಬೇಕಾಗಿತ್ತು. ಕೈಲಾಸದ ಆ ಎರಡು ದಿನಗಳ ಪರಿಕ್ರಮದಲ್ಲಿ ಮೊದಲ ಮತ್ತು ಎರಡನೆ ರಾತ್ರಿ ಸತ್ತೇ ಹೋಗುತ್ತೇನೆ ಎಂಬಷ್ಟು ಅಸ್ವಸ್ಥತೆಯಾಗಿತ್ತು. ಬಚಾವಾಗಿ ವಾಪಸ್ ಬಂದೆ. ನನ್ನ ಸಹ ಯಾತ್ರಿಯೊಬ್ಬರು ಮೃತರಾದರು. ಈ ಸಾವಿನ ವಾಸನೆಯ ನಡುವೆ ಕೂಡಾ ಅಲ್ಲಿಗೆ ಹೋಗಬೇಕೆಂಬ ತುಡಿತವಿದೆಯಲ್ಲಾ ಅದು ಅನನ್ಯ. ಅಲ್ಲಿನ ಸುಂದರ ದೃಶ್ಯಗಳು, ಅದೆಷ್ಟೋ ಮಹಾ ಪುರುಷರು ಕಾಲಿಟ್ಟು ಹೋದ ಜಾಗದಲ್ಲಿ ನಾನು ನಡೆಯುತ್ತಿದ್ದೇನೆ ಎಂಬ ಭಾವನೆ, ಕೈಲಾಸ ಪರ್ವತದ ಅದ್ದೂರಿ ನೋಟಗಳು, ವಾಪಸಾಗುವಾಗ ಸಣ್ಣ-ಪುಟ್ಟ ಬೆಟ್ಟಗಳ ಅದ್ಭುತ ನೋಟ…ಒಂದೆ ಎರಡೆ! ನಿಜಕ್ಕೂ ಅದ್ಭುತ.
ತಾವು ಒಮ್ಮೆ ಅಲ್ಲಿಗೆ ಹೋಗಿ ಬನ್ನಿ. ನಿಮ್ಮ ತಾಯಿಯ ಅಸ್ತಿತ್ವದ ಇರವು ನಿಮಗಾಗುತ್ತದೆ.
ಶುಭಾಶಯಗಳು.
ಲಿಂಗರಾಜು ಡಿ.ಎಸ್.
ಬೆಂಗಳುರು.
೨೪/೦೨/೨೦೧೪