ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಪುಸ್ತಕಗಳೊಂದಿಗೆ ಎಂ ಎಸ್ ಶ್ರೀರಾಮ್

ಎಂ ಎಸ್  ಶ್ರೀರಾಮ್ ಹೊಸ ಎರಡು ಕೃತಿಗಳೊಂದಿಗೆ ಸಜ್ಜಾಗಿದ್ದಾರೆ. ಶನಿವಾರ ಸಂತೆ, ಸಲ್ಮಾನ್ ಖಾನ್ ಕೃತಿ ಕನ್ನಡದ ಓದಿಗೆ ಹೊಸ ಬನಿಯನ್ನು ಪರಿಚಯಿಸಲಿದೆ.  ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ.
ಈ ಎರಡೂ ಕೃತಿಗಳಿಗೆ ಎನ್  ಎ ಎಂ ಇಸ್ಮಾಯಿಲ್ ಹಾಗೂ ಅಬ್ದುಲ್ ರಶೀದ್ ಬರೆದ ಬೆನ್ನುಡಿಯನ್ನು ಶ್ರೀರಾಮ್ ‘ಅವಧಿ’ಯ ಓದುಗರಿಗಾಗಿ ಕಳಿಸಿಕೊಟ್ಟಿದ್ದಾರೆ.
ಎಂದಿನಂತೆ ವರ್ಲ್ಡ್ ಕಲ್ಚರ್ ನಲ್ಲಿ ಫೆಬ್ರವರಿ ೧೦ರಂದು ನಡೆಯುವ ಬಿಡುಗಡೆ ಸಮಾರಂಭಕ್ಕೆ ಬನ್ನಿ


‘ಶನಿವಾರ ಸಂತೆ’ ಕೃತಿಗೆ ಬರೆದ ಬೆನ್ನುಡಿ

ಸಾಹಿತ್ಯ ವಿಮರ್ಶೆ ಮತ್ತು ರಾಜಕೀಯ ವಿಶ್ಲೇಷಣೆಗಳನ್ನು ಹೊರತು ಪಡಿಸಿದ ಸಂವೇದನಶೀಲ ಬರಹಗಳನ್ನು ಕನ್ನಡದ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕಷ್ಟಪಟ್ಟು ಹುಡುಕಿ ಕಂಡುಕೊಳ್ಳಬೇಕಷ್ಟೇ. ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಆಡಳಿತ ನೀತಿಗಳ ಕುರಿತು ಕನ್ನಡದಲ್ಲಿ ಬರೆಯುವ ಅನೇಕರು, ಜನರು ಅರಿಯಲೇಬೇಕಾದ ಸಂಗತಿಗಳೆಲ್ಲವನ್ನೂ ಪಾರಿಭಾಷಿಕಗಳ ಗೋರಿಯಲ್ಲಿ ಹೂತುಬಿಟ್ಟಿರುತ್ತಾರೆ.
ಎಂ.ಎಸ್. ಶ್ರೀರಾಮ್‌ ಅವರ ಈ ಬರೆಹಗಳು ಎಂಥಾ ಸಂಕೀರ್ಣ ಸಂದರ್ಭದಲ್ಲೂ ಪಾರಿಭಾಷಿಕಗಳ ಜೇಡರಬಲೆಗೆ ಸಿಕ್ಕಿಬೀಳುವುದಿಲ್ಲ. ಹಾಗೆಯೇ ಇವು ಕನ್ನಡದ ಬರೆವಣಿಗೆಯ ಮಿತಿಯಾಗಿರುವ ಸಾಹಿತ್ಯದ ಪರಿಭಾಷೆಯೊಳಗೂ ಉಳಿದುಕೊಳ್ಳುವುದಿಲ್ಲ. ಹೀಗೆ ಎರಡು ಬಗೆಯಲ್ಲಿ ಸೀಮೋಲ್ಲಂಘನ ಮಾಡುವ ಈ ಲೇಖನಗಳು ಕನ್ನಡದಲ್ಲಿ ಇನ್ನೂ ರೂಪುಗೊಳ್ಳದೇ ಇರುವ ಸಮಾಜ ವಿಜ್ಞಾನದ ಭಾಷೆಯ ಸೃಷ್ಟಿಯತ್ತ ಹೆಜ್ಜೆ ಇಡುತ್ತಲೇ ಜನಸ್ನೇಹಿ ಸಾಮಾಜಿಕ ವಿಶ್ಲೇಷಣೆಯ ಬರೆಹಗಳ ಮಾದರಿಯೊಂದನ್ನು ಮುಂದಿಡುತ್ತಿವೆ.
ಇಷ್ಟನ್ನೂ ಒಂದು ವೈರುದ್ಧ್ಯಾತ್ಮಕವಾದ ಹೇಳಿಕೆಯ ಮೂಲಕ ವಿವರಿಸಬಹುದೇನೋ-ಕನ್ನಡದ ಸಾಮಾಜಿಕ ವಿಶ್ಲೇಷಣೆಯ ಬರೆಹಗಳನ್ನು ಸಮಾಜ ವಿಜ್ಞಾನದ ಪಾರಿಭಾಷಿಕಗಳು ಮತ್ತು ಸಾಹಿತ್ಯದ ಪರಿಭಾಷೆಯ ಯಾಜಮಾನ್ಯದಿಂದ ಬಿಡುಗಡೆ ಮಾಡುವುದು ಸಾಧ್ಯ ಎಂದು ತೋರಿಸಿಕೊಡುತ್ತಿರುವ ಎಂ.ಎಸ್. ಶ್ರೀರಾಮ್ ಕನ್ನಡದ ಕಥೆಗಾರರೂ ಹೌದು.

-ಎನ್ ಎ ಎಂ ಇಸ್ಮಾಯಿಲ್


‘ಸಲ್ಮಾನ್ ಖಾನ್’ ಕೃತಿಗೆ ಬರೆದ ಮುನ್ನುಡಿ

ಪ್ರಿಯ ಶ್ರೀರಾಮ್
ವಾರ್ತೆ ಎಂಬ ಅರ್ಥವೂ ಇರುವ ವರ್ತಮಾನವೆಂಬ ಬದುಕಿನಲ್ಲಿ ಕಥೆ ಬರೆಯಲು ಲಾಯಕ್ಕಾದ ಪಾತ್ರಗಳೂ ಇಲ್ಲ , ಕಥೆಯೊಂದಕ್ಕೆ ಬೇಕಾದ ರೂಪಕಗಳೂ ಇಲ್ಲ ಎಂದು ಕೊರಗುತ್ತಾ ಜೀವನ ಸವೆಸುತ್ತಿರುವ ನಮ್ಮಂತವರು ನಿಮ್ಮ ಇಲ್ಲಿನ ಕಥೆಗಳನ್ನು ಓದಿ ನಾಚಿಕೊಳ್ಳಬೇಕು.ಎತ್ತಣ ಸಲ್ಮಾನ್ ಖಾನ್ ಎತ್ತಣ ರೂಪಾರಾಣಿ, ಎತ್ತಣ ಸತ್ಯಂ ರಾಮಲಿಂಗರಾಜು ಎತ್ತಣ ದೇವರಕೊಂಡ ಬಾಲರಾಜು, ಎತ್ತಣ ಕೊಂಡಪಲ್ಲಿ ಎತ್ತಣ ಮೌನಿಬಾಬಾ! ಒಂದಕ್ಕೊಂದು ಸಂಬಂದವೇ ಇಲ್ಲದ ಕ್ಷುದ್ರಗ್ರಹ ಈ ವರ್ತಮಾನದ ಭೂಮಿ ಎಂದು ನಾವೆಲ್ಲ ಅಲವತ್ತುಕೊಳ್ಳುತ್ತಿದ್ದರೆ, ಇಲ್ಲ ಈ ಎಲ್ಲವೂ ಒಂದಕ್ಕೊಂದು ಅಂಟಿಕೊಂಡು ಒಂದೇ ತೀವ್ರನಿಘಾ ಘಟಕದಲ್ಲಿ ಬೇರೆ ಬೇರೆ ಕಾಯಿಲೆಗಳ ಕಾರಣಕ್ಕಾಗಿ ಅಡ್ಮಿಟ್ಟಾಗಿವೆ ಎಂದು ನಿಮ್ಮ ಕಥೆಗಳು ಸಾರಿ ಹೇಳುತ್ತಿವೆ.
ನಿಮ್ಮ ಕಥೆಗಳಲ್ಲಿ ನೀವು ಹೇಳಿರುವ ಸಂಗತಿಗಳು ಗಹನವಾಗಿದ್ದರೂ ಹೇಳಿರುವ ರೀತಿ ಸರಳವಾಗಿವೆ.ಒಂದು ಮುಗುಳ್ನಗೆಯನ್ನು ಮೂಗ ತುದಿಯಲ್ಲಿಟ್ಟುಕೊಂಡೇ ಈ ಇಡೀ ಕಥಾಸಂಕಲನವನ್ನು ಓದಿ ಮುಗಿಸಬಹುದು.ನಡುನಡುವಲ್ಲಿ ಆಕಾಶವನ್ನೂ, ಸಂಗೀತವನ್ನೂ ಎಷ್ಟು ಬೇಕೋ ಅಷ್ಟು ಅನುಭವಿಸಬಹುದಾದರೂ ಹೆಚ್ಚು ಮಜಾಕೊಡುವುದು ಕಥೆಗಳಲ್ಲಿ ಬರುವ ನಮ್ಮದೇ ದೈನಂದಿನ ರಗಳೆಗಳು.ಓದುಗರು ಮುಚ್ಚಿಡುವಂತದನ್ನು ನೀವೂ ಬಚ್ಚಿಟ್ಟು, ಅವರು ಬಿಚ್ಚಿಡುವುದನ್ನು ನೀವೂ ರಟ್ಟು ಮಾಡಿ ಒಂದು ರೀತಿಯ ಅರ್ಥಗರ್ಭಿತ ತಾಧ್ಯಾತ್ಮದಲ್ಲಿ ಕಥೆಯೊಂದರ ಕೊನೆಯ ತನಕ ನೀವು ಅವರನ್ನು ಕರೆದುಕೊಂಡು ಹೋಗುವ ರೀತಿ ನನಗಂತೂ ಇಷ್ಟವಾಯಿತು.
ರಾಜಕೀಯ, ಸಿನೆಮಾ, ಅರ್ಥವ್ಯವಸ್ಥೆ, ಆಧ್ಯಾತ್ಮ, ಸಂಸಾರ, ವೃದ್ಧಾಪ್ಯ, ಸೆಕ್ಸ್, ಮನುಷ್ಯನ ವಿಚಿತ್ರ ಏಕಾಂಗಿತನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ತುಂಟ ತುಂಟ ಕಥೆಗಾರಿಕೆ ನನಗಂತೂ ನಿಮ್ಮ ಕುರಿತ ಗೌರವ ನೂರ್ಮಡಿಗೊಂಡಿದೆ.

-ಅಬ್ದುಲ್ ರಶೀದ್

 

‍ಲೇಖಕರು G

1 February, 2013

2 Comments

  1. Arvind

    Sriram , we missed you in recent Sahitya sambhrama
    eager to read your new books

  2. kum.veerabhadrappa

    nammellara preetiya kathegaara mitra sriram,
    nemma eradu pustagalu bidugadeyaaguttiruva vishaya tilidu santoshavaagide,
    hardika abhinandanegalu
    kumvee

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading