ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಮ್ಮೆ ಕರಿಬಸಯ್ಯ

ಬಿಳುಮನೆ ರಾಮದಾಸ್

11.jpg

ಮೈಸೂರಿಗೂ ಹುಣಸೂರಿಗೂ ನಡುವೆ ಹೆದ್ದಾರಿಯಲ್ಲಿ ಬಿಳಿಕೆರೆಯಲ್ಲಿ ಚೆಕ್ ಪೋಸ್ಟ್ ಒಂದಿದೆ. ಅಲ್ಲಿ ಕರಿಬಸಯ್ಯ ಎಂಬ ಸಹಾಯಕ ವಾಣಿಜ್ಯ ತೆರಿಗೆ ಕೆಲಸ ಮಾಡುತ್ತಿದ್ದರು. ಅವರು ಹೆಸರಿಗೆ ತಕ್ಕ ಹಾಗೆ ಇದ್ದರು. ಅವರು ಚೆಕ್ ಪೋಸ್ಟ್ ಗೆ ಹತ್ತಿರದಲ್ಲಿ ವಾಸವಾಗಿದ್ದ ವಿಧವೆ ಸಿದ್ದಮ್ಮ ಎಂಬುವಳೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದರು. ರಾತ್ರಿ ಪಾಳಿಯ ಸಮಯದಲ್ಲಿ ಚೆಕ್ ಪೋಸ್ಟ್ ನಲ್ಲಿ ಹತ್ತು ಗಂಟೆಯವರೆಗೆ ಕೆಲಸ ಮಾಡಿ ಸಿಬ್ಬಂದಿಗೆ ಸಿದ್ಧಮ್ಮನ ಗುಡಿಸಲಿಗೆ ಹೋಗಿ ಬರುವುದಾಗಿಯೂ ಅಗತ್ಯ ಬಿದ್ದರೆ ತನ್ನನ್ನು ಕರೆಯಬೇಕೆಂದು ಹೇಳಿ ಹೋಗುತ್ತಿದ್ದರು. ಅದು ರಹಸ್ಯ ವಿಷಯವೇನಾಗಿರಲಿಲ್ಲ. ಸಿದ್ಧಮ್ಮ ಆರ್ಥಿಕವಾಗಿ ಕಷ್ಟದಲ್ಲಿದ್ದುದರಿಂದ ಕರಿಬಸಯ್ಯ ಅವಳ ಕಷ್ಟಕ್ಕೆ ಮರುಗಿ ಆಕೆಗೆ ಒಂದು ಎಮ್ಮೆ ಕೊಡಿಸುವುದಾಗಿಯೂ ಆಕೆ ಹಾಲು ಮಾರಿ ಜೀವನ ಮಾಡಿಕೊಂಡಿರಬೇಕೆಂದು ಆಶ್ವಾಸನೆ ಕೊಟ್ಟಿದ್ದರು. ಸಿದ್ಧಮ್ಮ ಎಮ್ಮೆ ಸಿಗುವ ಆಸೆಯಿಂದ ಹರ್ಷಾತಿರೇಕದಿಂದ ಬೀಗಿ ಹೋಗಿದ್ದಳು.

ಆದರೆ ಕರಿಬಸಯ್ಯನವರು ಆಶ್ವಾಸನೆ ಕೊಟ್ಟದ್ದರ ಹೊರತು ತನ್ನ ಭರವಸೆಯನ್ನು ಈಡೇರಿಸದೇ ರಾತ್ರಿಪಾಳಿಯಲ್ಲಿ ಆಕೆಯ ಗುಡಿಸಲಿಗೆ ಭೇಟಿ ಕೊಟ್ಟಾಗಲೆಲ್ಲಾ “ಎಮ್ಮೆ ಕೊಡಸ್ತೀನಿ ಒಸಿ ಇರು. ಒಳ್ಳೆ ಎಮ್ಮೆ ನೋಡತಾ ಇವ್ನಿ” ಎಂದು ಸುಳ್ಳು ಹೇಳುತ್ತಿದ್ದರು. ಕರಿಬಸಯ್ಯನವರು ಆರ್ಥಿಕ ವರ್ಷ ಮುಗಿದ ಮೇಲೆ ವರ್ಗಾವಣೆ ತೆಗೆದುಕೊಂಡು ಅಲ್ಲಿಂದ ಪರಾರಿಯಾಗುವ ಸಂಚನ್ನು ಹೂಡಿದ್ದರು. ಆಕೆಗೆ ಈ ಗುಟ್ಟನ್ನು ಚೆಕ್ ಪೋಸ್ಟ್ ಸಿಬ್ಬಂದಿಯೊಬ್ಬರು ಹೇಳಿಕೊಟ್ಟು ಆಕೆಯನ್ನು ರೊಚ್ಚಿಗೆಬ್ಬಿಸಿದರು. ಆಕೆಗೆ ಜ್ಞಾನೋದಯವಾಗಿ ಎಮ್ಮೆ ಕೊಡಿಸುವುದಾಗಿ ರಾತ್ರಿಪಾಳಿಯಲ್ಲಿ ಬಂದು ಹೋಗುವ ಕರಿಬಸಯ್ಯ ಮಹಾ ಮೋಸಗಾರ ಎಂದು ತಿಳಿಯಿತು. ಆಕೆ ಕರಿಬಸಯ್ಯನ ಹಗಲು ಪಾಳಿಯಲ್ಲಿ ಒಂದೊಮ್ಮೆ ಧರಣಿ ಕೂತಳು. “ಎಮ್ಮೆ ಕೊಡಸ್ತೀನಿ. ಧರಣಿ ಕುಂತಗಿಂತಗೋಬ್ಯಾಡ” ಎಂದು ಪರಿಪರಿಯಾಗಿ ಕರಿಬಸಯ್ಯನವರು ಕೇಳಿಕೊಂಡರೂ “ಯಾವಾಗ ನೀನು ಎಮ್ಮೆ ಕೊಡಿಸೋದು. ಬರೇ ಸುಳ್ಳು ಹೇಳತಾ ಕಾಲ ಹಾಕತಿಯಲ್ಲ. ಎಮ್ಮೆ ಕೊಡಸೋದು ಬ್ಯಾಡ ನೀನು ಎಮ್ಮೆ ದುಡ್ಡು ಮಡಗು” ಎಂದು ದೊಡ್ಡ ಬಾಯಿ ಮಾಡಿ ಕೂಗ ಹತ್ತಿದಳು. ಸಿದ್ಧಮ್ಮ ಕರಿಬಸಯ್ಯನ ಪ್ರತಿಪಾಳಿಯಲ್ಲೂ ಬಂದು ಧರಣಿ ಕೂತು ಗಲಾಟೆ ಮಾಡಹತ್ತಿದಳು. ರಾತ್ರಿ ಪಾಳಿಯಲ್ಲಿ ಅವಳ ಗುಡಿಸಲಿಗೆ ಹೋಗುವುದನ್ನು ಸಾಹೇಬರು ನಿಲ್ಲಿಸಿದಾಗ ಚೆಕ್ ಪೋಸ್ಟ್ ಗೆ ಬಂದು “ಕರಿಬಸಯ್ಯ ನನ್ನ ಮಗನೇ ಬಾರೋ ನೀನು ನನ್ನ ಮಡಿಕ್ಕಂಡಿಲ್ಲವಾ?” ಎಂದು ಕೂಗ ಹತ್ತಿದಳು.

ಇದು ಚೆಕ್ ಪೋಸ್ಟ್ ಸಿಬ್ಬಂದಿಗೂ ಚೆಕ್ ಪೋಸ್ಟ್ ಗೆ ಬಂದು ಹೋಗುವ ಲಾರಿಡ್ರೈವರ್ ಗಳಿಗೂ ಆಡಿಕೊಳ್ಳಲು ಆಹಾರವಾಯಿತು. ಮೈಸೂರಿನಲ್ಲಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಡಿ.ಸಿ. ಸಾಹೇಬರಿಗೂ ಸುದ್ದಿ ಹೋಯಿತು. ಸಾಹೇಬರು ಕರಿಬಸಯ್ಯನವರು ಕೆಲಸ ಮಾಡುವ ಪಾಳಿ ತಿಳಿದುಕೊಂಡು ಸಿದ್ಧಮ್ಮನ ಹಾರಾಟ, ಚೀರಾಟವನ್ನು ಕಣ್ಣಾರೆ ಕಂಡು ಕರಿಬಸಯ್ಯನವರನ್ನು ತರಾಟೆಗೆ ತೆಗೆದುಕೊಂಡು ಒಂದು ಎಮ್ಮೆ ಕೊಳ್ಳಲು ತಗಲುವ ಹಣ ನೂರೈವತ್ತನ್ನು ಕೊಡಿಸಿ ರಾಜಿ ಮಾಡಿಸಿದರು. ಅಂದಿನಿಂದ ಕರಿಬಸಯ್ಯನವರ ಹೆಸರು ಎಮ್ಮೆ ಕರಿಬಸಯ್ಯ ಎಂದಾಯಿತು.

‍ಲೇಖಕರು avadhi

7 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading