ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ಶೈಲಜಾ ಹಾಸನ ಓದಿದ ‘ನಾವು ಭಾರತೀಯರು’

ಎನ್ ಶೈಲಜಾ ಹಾಸನ

ಮಗು ಅಮ್ಮನ ಲಾಲಿ ಹಾಡು ಕೇಳುತ್ತಲೆ ಬೆಳೆಯುತ್ತಿರುತ್ತದೆ. ಊಟ ಮಾಡಿಸುವಾಗ,ತೊಟ್ಟಿಲು ತೂಗುವಾಗ ಮಗುವಿಗೆ ಅಮ್ಮನೊ , ಅಜ್ಜಿಯೊ ಹಾಡು ಹೇಳುತ್ತಿದ್ಜರೆ ,ಕಥೆ ಹೇಳುತ್ತಿದ್ದರೆ ಕೈತುತ್ತು ರುಚಿ ಎನಿಸುತ್ತದೆ, ನಿದ್ದೆ ಕಣ್ತುಂಬುತ್ತದೆ. ಮುಂದೆ ಶಾಲೆಯಲ್ಲಿ ಶಿಕ್ಷಕರಿಂದಲೊ, ಪುಸ್ತಕಗಳನ್ನು ಓದುವುದರಿಂದಲೊ, ಬದುಕಿನ ಹಲವು ಮೌಲ್ಯಗಳನ್ನು ಕಲಿಯುವ ಅವಕಾಶ ಸಿಗುತ್ತದೆ.ಏಕತೆ, ಭಾವೈಕ್ಯತೆ, ದೇಶಪ್ರೇಮ,ನಾಡುನುಡಿಯ ಮೇಲಿನ ಅಭಿಮಾನ, ಸ್ಪೂರ್ತಿದಾಯಕ ಜೀವನ ಚರಿತ್ರೆಗಳನ್ನು ಕಥೆಗಳ ಮೂಲಕವೂ ,ಪದ್ಯಗಳ ಮೂಲಕವೂ ತಿಳಿದುಕೊಳ್ಳುತ್ತಾರೆ.

ಮುಗ್ಧ ಮನಸ್ಸುಗಳಲ್ಲಿ ತ್ಯಾಗ, ಮಮತೆ, ಪ್ರೇಮ, ಸ್ವಾಭಿಮಾನ, ಘನತೆ-ಗೌರವ, ಮಾನವತೆಗಳಂತಹ ಮೌಲ್ಯಗಳೇ ಮೈವೆತ್ತ ಕಥೆಗಳು, ಹಾಡುಗಳು ಗಾಢವಾಗಿ ಅಚ್ಚೊತ್ತುವುವು. ಮಕ್ಕಳಿಗಾಗಿ ಸೃಷ್ಟಿಯಾದ ಸಾಹಿತ್ಯವೆ ಮಕ್ಕಳ ಸಾಹಿತ್ಯ .

ಇಂತಹ ಮಕ್ಕಳ ಸಾಹಿತ್ಯ ಹೇಗಿರಬೇಕು ಎಂದರೆ ಭಾವನಾತ್ಮಕವಾಗಿರಬೇಕು. ಹಾಡುಗಾರಿಕೆಯಿಂದ ಕೂಡಿರಬೇಕು. ಅರ್ಥವಂತಿಕೆಯ ಬದಲು ಪ್ರಾಸಾನುಪ್ರಾಸ ಇರಬೇಕು. ಅಂತ್ಯಪ್ರಾಸ ಹೆಚ್ಚಿರಬೇಕು. ಮಕ್ಕಳ ಸಹಜ ಗುಣ ಮಾನವೀಕರಣ. ನಿರ್ಜೀವ ವಸ್ತುಗಳ ಜತೆಯೂ ಮಾತನಾಡುವ ಮಕ್ಕಳ ಪ್ರಪಂಚ ಕಲ್ಪನಾತೀತವಾದುದು.

ಕಲ್ಲು–ಮಣ್ಣಿಗೂ ಸ್ಪಂದಿಸುವ ಗುಣ ಅವರದ್ದು. ಆಯಾ ಪ್ರಸಂಗಗಳಿಗೆ ತಕ್ಕಂತೆ ಅವರ ಮನಮಿಡಿಯುತ್ತದೆ. ಮಕ್ಕಳ ಸಾಹಿತ್ಯ ಓದುವ ಮುದುಕರ ಮನಸ್ಸು ಮಗುವಿನಂತೆ ಸ್ಪಂದಿಸಬೇಕು. ಇಂತಹ ಒಂದು ಪ್ರಯತ್ನದಲ್ಲಿ ತೊಡಗಿರುವ ಕವಿ ಮೌಲಾಲಿ ಕೆ.ಆಲಗೂರ ಅವರು ಮಕ್ಕಳಿಗಾಗಿ "ನಾವು ಭಾರತೀಯರು" ಎಂಬ ಕೃತಿ ರಚಿಸಿದ್ದಾರೆ.

"ನಾವು ಭಾರತೀಯರು" ಕೃತಿಯಲ್ಲಿ ದೇಶ, ಭಾವೈಕ್ಯತೆ, ಭಾಷೆ, ಹಬ್ಬಹರಿದಿನಗಳ ಮಹತ್ವ, ಕೌಟುಂಬಿಕ ಮೌಲ್ಯಗಳು, ಮಹಾನ್ ವ್ಯಕ್ತಿಗಳ ಚಿತ್ರಣ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಮಕ್ಕಳಿಗಾಗಿ ಕವಿತೆ ರಚನೆ ಮಾಡಿ ಗಮನ ಸೆಳೆದಿದ್ದಾರೆ. ಭಾವೈಕ್ಯತೆ,ಸಹಿಷ್ಣುತೆ, ಸಾಮರಸ್ಯ ಅತ್ಯಗತ್ಯವಾಗಿರುವ ಈ ದಿನಗಳಲ್ಲಿ ನಾವೆಲ್ಲರೂ ಒಂದೇ, ನಾವು ಭಾರತೀಯರು ಎಂಬ ಕವಿತೆಯಲ್ಲಿ

ಮಂದಿರ ಮಸೀದಿ ಚರ್ಚುಗಳು ನೆಮ್ಮದಿಯ ಧಾಮ ಜಾತಿ ಜನಾಂಗಗಳ ಇಲ್ಲ ಸರ್ವಜನರ ಸಂಗಮ ಎಂದು ಹೇಳುತ್ತಾ ಐಕ್ಯತೆ ತುಂಬಲು ಕವಿ ಪ್ರಯತ್ನಿಸಿದ್ದಾರೆ. ದೇಶಕಾಯುವ ಸೈನಿಕ ಯಾವತ್ತಿಗೂ ಸ್ಪೂರ್ತಿದಾಯಕ.ಅಂತಹ ಸೈನಿಕರನ್ನು ಕುರಿತು ಕವಿ ಹೀಗೆ ಬರೆದಿದ್ದಾರೆ.

ಅಡಿಯಿಂದ ಮುಡಿಯವರೆಗೂ ವೀರ ನಡೆಯ ಗತ್ತು ಕಠಿಣ ಪರಿಶ್ರಮದ ಯೋಧರು ದುಡಿಯಲು ನಾಡಿಗಿಲ್ಲ ಆಪತ್ತು ವೈರಿಪಡೆಯ ಹಿಮ್ಮೆಟ್ಟಿಸಿ ಗರ್ಜಿಸುವ ಸೈನಿಕರ ನೀಯತ್ತು
ಮರೆಯದಿರೋಣ ನಾವುಗಳು ಯೋಧರನ್ನು ಯಾವತ್ತು
ಮಕ್ಕಳ ಮನಸ್ಸು ಹೂವಿನಂತೆ ಸುಕೋಮಲ .

ಇಂತಹ ಸುಕೋಮಲ ಮನಸ್ಸುಗಳಲ್ಲಿ ಮೌಲ್ಯಗಳ ಸುಗಂಧ ತುಂಬಿಸುವ ಕೆಲಸ ಆಗಬೇಕಾಗಿದೆ. ಅವರನ್ನು ಮುಂದಿನ ಭವ್ಯ ಭವಿಷ್ಯಕ್ಕೆ ಸಿದ್ಧ ಪಡಿಸಲು ಅವರಲ್ಲಿ ಮನುಷತ್ವ, ಅಂತಃಕರಣ , ಮಾನವೀಯತೆ ತುಂಬಿ ಆ ನೆಲೆಗಟ್ಟಿನ ಮೇಲೆ ಅವರನ್ನು ಗಟ್ಟಿ ವ್ಯಕ್ತಿತ್ವವಾಗಿ ರೂಪಿಸಲು ಮಹಾತ್ಮರ ಕಥೆಗಳು, ಕವಿತೆಗಳು ಅಗತ್ಯವಾಗಿ ಬೇಕಾಗಿವೆ. ಅಂತಹ ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ಕವಿ ಮೌಲಾಲಿ ರಚಿಸಿದ ಕವಿತೆಗಳಾದ ರಾಷ್ಟ್ರ ಪಿತ ಗಾಂಧಿ ತಾತ,ಅಬ್ದುಲ್ ಕಲಾಂ,ಅಜ್ಜ ಸುತಾರ ಇವರ ಕವಿತೆಗಳು ಸಹಕಾರಿಯಾಗಿವೆ.

ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಬರೆಯುವವರು ಮಕ್ಕಳ ಒಡನಾಟದ ಜತೆಗೆ ತಮ್ಮ ಬಾಲ್ಯದ ನೆನಪಿನಂಗಳದಲ್ಲಿ ಬರೆದಾಗ ಮಾತ್ರ ಸ್ಪಂದನೆ ಸಿಗುತ್ತದೆ. ತೀ.ನಂ.ಶ್ರೀ ಅವರು ಹೇಳುವಂತೆ ‘ಬಾಲ್ಯ ಜೀವನದ ನೆನಪು ಉಳಿಸಿಕೊಂಡವರು ಮಾತ್ರ ಮಕ್ಕಳ ಸಾಹಿತಿ ಆಗಲು ಸಾಧ್ಯ’ ಇಂತಹ ಸಾಹಿತಿಗಳಲ್ಲಿ ಒಬ್ಬರಾದ ಮೌಲಾಲಿಯವರು ಇನ್ನಷ್ಟು ವೈವಿಧ್ಯಮಯ, ಚಿಂತನೆ ಹೆಚ್ಚಿಸುವ, ಬೌದ್ಧಿಕದರಿವು ಮೂಡಿಸುವ, ಕೌತುಕ ಹೆಚ್ಚಿಸುವ , ಮೌಲ್ಯಗಳನ್ನು ತುಂಬಿಸುವ ಕವಿತೆಗಳನ್ನು ಬರೆಯಲಿ.ಆ ಮೂಲಕ ಮಕ್ಕಳ ಸಾಹಿತ್ಯಕ್ಕೆ ಶ್ರೇಷ್ಠ ಕಾಣಿಕೆ ನೀಡುವಂತಾಗಲಿ.

‍ಲೇಖಕರು Admin

16 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading