ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ಎಸ್ ಶಂಕರ್ ಕಾಲಂ: ಎಮರ್ಜೆನ್ಸಿ ನೆನಪಿನಲ್ಲಿ…

ಖಾಲೀ ಗದ್ದಲದ ಈ ನಾಡಿನ ಉದ್ದಗಲಕ್ಕೂ ಈಗ ಶಾಂತಿ ನೆಲೆಸಿದೆ ನರನಾಡಿಯೆಲ್ಲ ನಿಂತೇ ಹೋದಂತಾಗಿ ನಾವೆಲ್ಲ ಯೋಗಿಗಳಾಗಿದ್ದೇವೆ…… ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳ ಬದಲು ಪತ್ರಿಕೆಗಳ ತುಂಬ ಶುದ್ಧ ಸಮಾಚಾರ ತುಂಬಿದೆ….. ಸರಕಾರದ ಕೆಲಸ ದೇವರ ಕೆಲಸವಾಗಿ ತುಪ್ದದ ದೀಪ ಢಾಳಾಗಿ ಉರಿಯುತ್ತಿವೆ….. ಹೆದ್ದಾರಿಯ ಮೇಲೆ ಕೆಟ್ಟು ನಿಂತ ಟ್ರಕ್ಕು ಕೂಡ ನಾಡು ಮುನ್ನಡೆದಿದೆ- ಎಂಬ ಸಂದೇಶ ಹೊತ್ತಿದೆ….. ನಮ್ಮ ಜನತಂತ್ರದ ಇತಿಹಾಸದಲ್ಲೇ ಕರಾಳತಮ ಅಧ್ಯಾಯವೆನಿಸಿದ ಎಮಜರ್ೆನ್ಸಿ ಕುರಿತು ಚಂದ್ರಶೇಖರ ಪಾಟೀಲರು ತಮಗೇ ವಿಶಿಷ್ಟವಾದ ವ್ಯಂಗ್ಯದೊಂದಿಗೆ ಪ್ರತಿಕ್ರಿಯಿಸಿದ ಕವನದ ಆಯ್ದ ಸಾಲುಗಳಿವು. ಕೊನೆಗೆ ಧನ್ಯತೆಯ ಈ ಕ್ಷಣದಿ, ಓ ಮುದ್ದು ರಂಗ, ಕಿವಿ ಮುಚ್ಚಿ, ಕಣ್ಣು ಮುಚ್ಚಿ, ನೆನೆ ನೆನೆ ಗಾಂಧಿಯನು (ಯಾವ ಗಾಂಧಿ ಅಂತ ತಿಳಿಯದೆ ಪೆದ್ದಲಿಂಗ?) ಬಾಯಿ ಮುಚ್ಚಿ ನೆನೆ ನನೆ ಗಾಂಧಿಯನು ಎನ್ನುತ್ತ ತಮ್ಮ ಈ `ಗಾಂಧೀಸ್ಮರಣೆ’ಯನ್ನು (1976) ಮುಗಿಸುತ್ತಾರೆ ಚಂಪಾ. ತುತರ್ುಸ್ಥಿತಿ ಅನುಭವಕ್ಕೆ ಬಾಯಿ ಕೊಟ್ಟ ಕನ್ನಡ ಕವನಗಳಲ್ಲಿ ಇದು ನನ್ನ ಮೆಚ್ಚಿನದು ಎಂಬ ಕಾರಣಕ್ಕೆ ಈ ಸಾಲುಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ.   1975 ಎಮಜರ್ೆನ್ಸಿ ಘೋಷಣೆಯಾದ ವರ್ಷ. ಸಣ್ಣ ಊರಿನಿಂದ ಬೆಂಗಳೂರಿಗೆ ಬಂದಿದ್ದ ನಾನು, ಮನೆ ನೆನಪಾದೊಡನೆ ಕಣ್ಣಲ್ಲಿ ಪೊರೆಗಟ್ಟುತ್ತಿದ್ದ ಅಳುಮುಂಜಿ ಭಾವುಕತೆಯನ್ನು ಅದೇ ತಾನೇ ದಾಟುತ್ತ, ಮೊದಲ ವರ್ಷದ ಬಿಎಸ್ಸಿಗೆ ಸೇರಿದ್ದೆ. ಆಗ ನಮ್ಮ ಕಿವಿಗೆ ಬೀಳತೊಡಗಿದ ಕಥೆಗಳು ಭಿನ್ನ ಭಿನ್ನ. ಒಂದು ಕಡೆ ಎಲ್ಲ ಆಫೀಸುಗಳೂ ಸಮಯಕ್ಕೆ ಸರಿಯಾಗಿ ಆರಂಭವಾಗುತ್ತಿದ್ದವು. ಕರ್ತವ್ಯದ ವೇಳೆಯಲ್ಲಿ ಯಾರೂ ಕುಚರ್ಿಗೆ ಕೋಟು ತಗುಲಿಸಿ ಕಾಫಿ ಟೀ ಎಂದು ಅರ್ಧ ದಿನ ಓತ್ಲಾ ಹೊಡೆಯುವಂತಿರಲಿಲ್ಲ. ಸಮಯಕ್ಕೆ ಓಡುವ ರೈಲುಗಳು. ಎಲ್ಲೆಲ್ಲೂ ದಕ್ಷತೆ, ಸಮಯಪ್ರಜ್ಞೆ… ‘ನಮ್ಮ ಜನ ಹೀಗೇರೀ, ಒದ್ದು ಕೆಲಸ ಮಾಡಿಸೋರಿಗೇ ಬಗ್ಗೋದು’ ಅನ್ನುವ ತಾರೀಫುಗಳು. ಯಾವ ವಿಷಯದಲ್ಲೂ ಖಚಿತ ನಿಲುವುಗಳಿಲ್ಲದಿದ್ದ ನಾನೂ ಈ ಎರವಲು ವಿಚಾರಗಳಿಗೆ ಆತುಕೊಂಡು ‘ನಮ್ಮ ದೇಶಕ್ಕೆ ಇದೇ ಸರಿ’ ಎಂದು ತಲೆದೂಗಿದ್ದೆ. ಅಷ್ಟೇ ಅಲ್ಲ, ರಜೆಯಲ್ಲಿ ಊರಿಗೆ ಹೋದಾಗಲೂ ಹಾಗೇ ವಾದಿಸಿ, ಸ್ವಾತಂತ್ರ್ಯ ಹೋರಾಟಗಾರರೂ, ಜೇಪಿ ಬಗ್ಗೆ ಅಪಾರ ಗೌರವ ಉಳ್ಳವರೂ ಆಗಿದ್ದ ನಮ್ಮಪ್ಪನಿಂದ ಉಗಿಸಿಕೊಂಡಿದ್ದೆ! (ಬ್ರಿಟಿಷರ ಆಡಳಿತವೇ ಚಂದವಿತ್ತು ಎಂದು ಈಗಲೂ ಗೊಣಗುವ ಜನ ಎಷ್ಟಿಲ್ಲ?!) ಕೆಲವು ದಿನಗಳಲ್ಲೇ ಬೇರೆ ಬೇರೆ ಥರದ ವರ್ತಮಾನಗಳು ಬರತೊಡಗಿದವು. ರಾತ್ರಿ ನಮ್ಮ ಹಾಸ್ಟೆಲಿಗೆ ಗುಟ್ಟಾಗಿ ಬರುತ್ತಿದ್ದ ಕೆಲವು ಹುಡುಗರು (ಬಹುತೇಕ ಆರೆಸ್ಸೆಸ್ ಬೆಂಬಲಿಗರು) ಕೈ ಬರಹದ ಅಥವಾ ಕಲ್ಲಚ್ಚಿನ ಕರಪತ್ರಗಳನ್ನು ತಂದು ಎಮಜರ್ೆನ್ಸಿ ಕೆಟ್ಟದೆಂದು ತಲೆ ತುಂಬತೊಡಗಿದರು. ನಾವು ಕೆಲವರು ಆ ಕರಪತ್ರಗಳನ್ನು, ನಮಗೆ ಅರ್ಥವಾಗಲಿ ಬಿಡಲಿ, ಹತ್ತಿರದ ಇತರೆ ಹಾಸ್ಟೆಲುಗಳಿಗೆ ತಲುಪಿಸಿ, ತೋಚಿದಂತೆ ದೇಶಭಕ್ತಿಯನ್ನೂ ಪ್ರದಶರ್ಿಸುತ್ತಿದ್ದೆವು. ಹೀಗೇ ಕಾಲೇಜ್ ಆವರಣದಲ್ಲೂ ಒಮ್ಮೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದ ನನ್ನನ್ನು ಪ್ರಿನ್ಸಿಪಾಲರು ಕರೆಸಿ ಎಚ್ಚರಿಸಿದ್ದರು: ಹಾಗೆಲ್ಲ ಮಾತಾಡಬೇಡಪ್ಪ, ಅಪಾಯ ಅಂತ. ಅಪಾಯದ ಮಾತು ಕೇಳಿ ಆಗ ನನಗೆ ರೋಮಾಂಚನವಾಯಿತೇ ಹೊರತು, ಭಯವಲ್ಲ! ಕಾರಣ, ಎಮಜರ್ೆನ್ಸಿ ಎಂಬ ಪದಾರ್ಥ ನಮ್ಮ ಬದುಕನ್ನು ಹೇಗಾದರೂ ಎಲ್ಲಿಯಾದರೂ ಪ್ರವೇಶಿಸಬಹುದು ಅನ್ನುವ ಕಲ್ಪನೆಯೇ ನಮಗಿರಲಿಲ್ಲ. ನಮ್ಮ ಪಾಲಿಗದು, ಎಲ್ಲೋ ಬಾಲಿ ದ್ವೀಪದಲ್ಲಿ ಭಾರೀ ಭೂಕಂಪ ಅನ್ನುವಂಥ- ದೂರದ ಗಾಳಿಮಾತಿನಂತಿತ್ತು. ಒಟ್ಟಿನಲ್ಲಿ, ಈ ಸಣ್ಣ ಪುಟ್ಟ ಕ್ರಾಂತಿಕಾರಕ ಕೆಲಸಗಳು, ಒಮ್ಮೆಲೇ ಹತ್ತು ದಿಕ್ಕುಗಳಲ್ಲಿ ಚಿಮ್ಮಲೆತ್ನಿಸುತ್ತಿದ್ದ ನಮ್ಮ ಪ್ರಾಯದ ಮನಸ್ಸಿಗೆ, ಸಾಹಸದ ಭ್ರಮೆ ಮತ್ತು ಕೃತಕೃತ್ಯತೆಯ ಸಂಭ್ರಮ ತರುವ ಚಟುವಟಿಕೆಗಳಾಗಿದ್ದವು! ಕಾಲ ನಿಲ್ಲಲಿಲ್ಲ. ಮುಗಿಯದ ದುಃಸ್ವಪ್ನದಂತೆ ಕಂಡಿದ್ದ ಎಮಜರ್ೆನ್ಸಿಯೂ ಮುಗಿಯಿತು. ಚುನಾವಣೆಗಳು ಬಂದವು. ಅಷ್ಟು ಕಾಲ ದೇಶಾದ್ಯಂತ ಘಟಿಸಿದ್ದ ಭೀಕರ ದೌರ್ಜನ್ಯದ ಕಥೆಗಳು ಒಂದೊಂದಾಗಿ ಹೊರಬರತೊಡಗಿದವು. ನಮ್ಮ ಮುಗ್ಧತೆಯೂ ಕರಗುತ್ತ ಹೋಯಿತು. ಕಡೆಗೆ ಜನತೆ ತುತರ್ುಸ್ಥಿತಿಯ ದೊರೆಸಾನಿ ಇಂದಿರಾಗಾಂಧಿಯನ್ನು ಕಸದ ಬುಟ್ಟಿಗೆ ಎಸೆಯುವುದರೊಂದಿಗೆ ನಾಡಿನ ಒಂದು ವಿಕಾರ ಅಧ್ಯಾಯಕ್ಕೆ ತೆರೆ ಬಿತ್ತು. ಈ ಎರಡನೇ ಸ್ವಾತಂತ್ರ್ಯ ಹೋರಾಟದ ಫಲವಾಗಿ ಹುಟ್ಟಿದ ಜನತಾಪಕ್ಷದ ಬೆಂಗಳೂರು ಕಚೇರಿಗೆ, ಜೊತೆಯ ಕೆಲವರೊಂದಿಗೆ ನಾನೂ ಎಡತಾಕತೊಡಗಿದೆ. ಹಾಗೆ ಹೋಗಿ ಬರುವುದು ಕೂಡಾ ಯಾವ ಅಪೇಕ್ಷೆಯೂ ಇಲ್ಲದ, ನಮ್ಮ ಮುಗ್ಧ ಕ್ರಾಂತಿಯ ಹೊಣೆಯಂತಿತ್ತ್ತು. ಮುಂದೆ ನಮಗೆ ಕಾದಿದ್ದ ಆಘಾತ ಮತ್ತು ಭ್ರಮ ನಿರಸನಗಳ ಬಗ್ಗೆ ಇಲ್ಲಿ ಬರೆಯುವುದಿಲ್ಲ. ಒಟ್ಟು ಇಷ್ಟಂತೂ ಗಟ್ಟಿ: ನಮಗೆಲ್ಲ ರಾಜಕೀಯ ಶಿಕ್ಷಣ ಆರಂಭವಾಗಿದ್ದೇ ತುತರ್ುಸ್ಥಿತಿ ವಿರೋಧಿ ಪ್ರಜ್ಞೆಯೊಂದಿಗೆ. ಅದಕ್ಕೇ ಕಾಂಗ್ರೆಸ್/ ಇಂದಿರಾ ವಿರೋಧದಲ್ಲೇ ಶುರುವಾಗಿ ಅಲ್ಲೇ ಮುಗಿದ ನಮ್ಮ ಆಗಿನ ರಾಜಕೀಯ ತಿಳಿವು, ಬೇರೆ ಸೂಕ್ಷ್ಮ ಸ್ತರಗಳನ್ನು ತಲುಪಬೇಕಾದರೆ, ಇನ್ನೂ ಎಷ್ಟೋ ವರ್ಷಗಳು, ಅನುಭವಗಳು ಹಾಗೂ ಸಹವಾಸಗಳು ಬೇಕಾದವು. ಮುಂದಕ್ಕೆ ಭಾರತದ ಪ್ರಜೆ ಏನೆಲ್ಲ ನೋಡಿದ! ಸಿಟ್ಟಿನಿಂದ, ಸಹನೆಯಿಂದ, ಗೊಂದಲದಿಂದ, ನಿರಾಸೆಯಿಂದ, ನಿರೀಕ್ಷೆಯಿಂದ… ವಿರೋಧ ಪಕ್ಷ ಬಂತು, ಅವರ ಜಗಳ ಬಂತು, ಮತ್ತೆ ಇಂದಿರಾ, ಮತ್ತೆ ನಾನಾ ದೊಂಬರಾಟಗಳು, ಹತ್ಯೆ, ಮಾರಣ ಹೋಮಗಳು… ಕಡೆಗೆ ಜನತಂತ್ರಕ್ಕೆ ಇಂದಿರಾ ಎಸಗಿದ ಅಪಚಾರವನ್ನೂ ಮೀರಿಸುವಂತೆ ಈ ನೆಲದ ಜಾತ್ಯತೀತ ಆಶಯಗಳನ್ನು ಛಿದ್ರಗೊಳಿಸಿದ ಕೋಮುವಾದಿ ರಾಜಕಾರಣ ಶುರುವಾಯಿತು. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದವರ ದೇಶಪ್ರೇಮದ ಬಡಿವಾರವನ್ನೂ ಕಂಡಾಯಿತು… ಇಷ್ಟೆಲ್ಲ ಕಂಡ ಮೇಲೆ, ಅದೇ ಮಧ್ಯಮವರ್ಗದ ತೆಳು ಆವೇಶದ ತೀಮರ್ಾನಗಳಿಗೇ ಜೋತು ಬಿದ್ದರೆ ಹೇಗೆ? ಈಚೆಗೆ ಕೆಲವು ಗೆಳೆಯರ ಚಚರ್ೆಯಲ್ಲಿ ಪ್ರಶ್ನೆ ಬಂತು: ಈ ದೇಶದ ಅತ್ಯತ್ತಮ ಪ್ರಧಾನಿ ಯಾರು? ನಾನು ಯಾವ ಅಳುಕಿಲ್ಲದೆ ಹೇಳಿದೆ: ಇಂದಿರಾಗಾಂಧಿ!… ಹಾಗೆಂದ ಕೂಡಲೇ ನಾನು ಅವರ ಬೆನ್ನಿಗೇ ಚೂರಿ ಹಾಕಿದೆ ಅನ್ನುವಂತೆ ಅವಾಕ್ಕಾದರು. ಮೈಮೇಲೇರಿ ಜಗಳಕ್ಕೇ ನಿಂತುಬಿಟ್ಟರು! ನಾನು ವಾದಿಸಿದೆ: ಇಂದಿರಾ- ಸವರ್ಾಧಿಕಾರಿ, ದೇವರಾಜ ಅರಸು- ಭ್ರಷ್ಟಾಚಾರದ ಗಂಗೋತ್ರಿ… ಹೀಗೆ ಒಬ್ಬೊಬ್ಬರಿಗೆ ಒಂದೊಂದು ಪಟ್ಟ ಕಟ್ಟಿ ಅಲ್ಲೇ ಕಾಲೂರಿ ನಿಂತುಬಿಡುವುದು ನಮ್ಮ ಜಾಯಮಾನ. ಆದರೆ ಅದರಾಚೆ ಹೋಗಿ ಎಲ್ಲ ಅಧಿಕಾರದ ಉದ್ದೇಶ ಮತ್ತು ಪರಿಣಾಮಗಳನ್ನು ನೋಡದಿದ್ದರೆ, ಬಾಯಿಮಾತು ಮತ್ತು ಸಾಧನೆಯ ನಡುವಣ ಅಂತರವನ್ನು ಅಳೆಯದಿದ್ದರೆ, ನಮಗೆ ತಿಳಿವಳಿಕಸ್ಥರ ಕಾಣ್ಕೆಯೂ ಸಿಗುವುದಿಲ್ಲ; ಅನಕ್ಷರಸ್ಥರ ವಿವೇಕವೂ ದಕ್ಕುವುದಿಲ್ಲ. ನಾವೇ ನೋಡಿದ್ದೇವೆ: ಇಂದಿರಾ ಕಾಲದಲ್ಲಿ ಹಳ್ಳಿ ಹಳ್ಳಿಯ ಮೂಲೆಗಳಲ್ಲಿ ಅತ್ಯಂತ ದುರ್ಬಲ ದಲಿತನನ್ನು ಮುಟ್ಟಲೂ ಅಲ್ಲಿನ ಬಲಿಷ್ಠರು ಮತ್ತು ಪೊಲೀಸರು ಹೆದರುವ ಸ್ಥಿತಿಯಿತ್ತು. ‘ಬಿಡಪ್ಪ, ಅವರ ಹಿಂದೆ ಇಂದಿರಮ್ಮ ಇದ್ದಾಳೆ’ ಅನ್ನುತ್ತಿದ್ದರು. ಬ್ಯಾಂಕ್ ರಾಷ್ಟ್ರೀಕರಣದ ಅಬ್ಬರ, ಗರೀಬಿ ಹಟಾವೊ ಘೋಷಣೆಯ ಪೊಳ್ಳು ರಮ್ಯತೆಗಳನ್ನೂ ಮೀರಿ ಇಂದಿರಾ ಗೆದ್ದಿದ್ದು ಇಲ್ಲಿ- ಈ ನಾಡಿನ ಕಡೇ ಮನುಷ್ಯನಲ್ಲೂ ಆತ್ಮಬಲ ತುಂಬಿದ್ದರಲ್ಲಿ; ಸಮಾನ ಹಕ್ಕುಗಳ ಅರಿವು ಮತ್ತು ಭರವಸೆ ಹುಟ್ಟಿಸಿದ್ದರಲ್ಲಿ. ದೀನ ದುರ್ಬಲರ ತಂಟೆಗೆ ಹೋದರೆ ಭಾರತದ ಕಾನೂನು ಸುಮ್ಮನಿರುವುದಿಲ್ಲ ಎಂಬ ಎಚ್ಚರ ತಂದಿದ್ದರಲ್ಲಿ. ಇದೇನು ಸಣ್ಣ ವಿಷಯವೇ? ಈ ಮಾಪರ್ಾಟು ಕೇವಲ ಪ್ರಚಾರದಿಂದಾದ್ದು ಎಂದು ವಾದಿಸುವವರು, ಒಂದೇ ಒಂದು ಸಲ ನಮ್ಮ ಅಗಾಧ ಜಡತ್ವದ ಸಾಮಾಜಿಕ ಯಂತ್ರವನ್ನು ತುಸುವೇ ಅಲುಗಿಸಲು ಪ್ರಯತ್ನಿಸಿ ನೋಡಬೇಕು. ಆಗ, ಇಂದಿರಾಪ್ರಜ್ಞೆ ಇಷ್ಟು ಜೀವಂತವಾಗಿ ಹಳ್ಳಿ ಹಳ್ಳಿ ಮುಟ್ಟಬೇಕಾದರೆ, ಅದರ ಹಿಂದೆ ಯಾವ ಪ್ರಮಾಣದ ದೈತ್ಯ ಛಲ ಇದ್ದಿರಬಹುದೆಂಬ ಕಲ್ಪನೆ ಮೂಡುತ್ತದೆ. ಮತ್ತು ಆ ತಾಳ್ಮೆಗೇಡಿಯಾದ ಒಂಟಿ ಹೆಂಗಸನ್ನು ಬಿಟ್ಟರೆ ಬೇರೆ ಯಾವ ಪ್ರಧಾನಿಯ ಕೈಲೂ ಇದು ಸಾಧ್ಯವಾಗಲಿಲ್ಲ. ಸಮಾನತೆಯೇ ಮನುಕುಲದ ಮೂಲ ಕನಸು ಅನ್ನುವುದರಲ್ಲಿ ನನ್ನ ಗೆಳೆಯರಿಗೂ ಭಿನ್ನಾಭಿಪ್ರಾಯವಿರಲಿಲ್ಲ. ಮತ್ತು ನಮ್ಮ ನಾಡಿನಲ್ಲಿ ಜಾತ್ಯತೀತ ಆಕಾರದಲ್ಲೇ ಮೈದಳೆಯಬೇಕಾದ ಈ ಆಶಯಕ್ಕಾಗಿ, ಯಾರು ಇಲ್ಲಿ ನಿಜಕ್ಕೂ ಕಣ್ಣಿಗೆ ಕಾಣುವ ಸಾಧನೆ ಮಾಡಬಲ್ಲರೋ, ಅವರೇ ನನ್ನ ದೃಷ್ಟಿಯಲ್ಲಿ ನಿಜ ನಾಯಕರು. ನೂರೆಂಟು ವಿರೋಧಾಭಾಸಗಳಿಂದ ತುಂಬಿದ್ದ ಇಂದಿರಾ ಆಡಳಿತವನ್ನು- ಆ ಎಮಜರ್ೆನ್ಸಿಯ ರಾಕ್ಷಸತ್ವವನ್ನೂ ಮರೆಯದೆ- ನಾನು ಮೆಚ್ಚುವುದು ಇದಕ್ಕಾಗಿ ಎಂದು ವಿವರಿಸಿದೆ. ಗೆಳೆಯರು ಮಾತು ಬೆಳೆಸದೆ ಸುಮ್ಮನಾಗಿದ್ದರಿಂದ ನನ್ನ ನಿಲುವು ಒಪ್ಪಿದರೋ ಬಿಟ್ಟರೋ ಗೊತ್ತಾಗಲಿಲ್ಲ! 29 ಜುಲೈ 2005 *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ  ]]>

‍ಲೇಖಕರು G

17 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading