ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಡೆಯೂರು ಪಲ್ಲವಿ ಓದಿದ ‘ಟ್ರಂಕು ತಟ್ಟೆ’

ಎಡೆಯೂರು ಪಲ್ಲವಿ

“ಬಿಟ್ಟಿಯಾಗಿ ಕೊಡುವಾಗ ಇನ್ನೆಂಥದ್ದು ಕೊಡಕ್ಕಾಗುತ್ತೆ” ಎಂಬ ಅಸಡ್ಡೆಯ, ದರ್ಪದ, ಋಣಬಾರದ ಮಾತುಗಳನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ಇದಕ್ಕಿಂತ ಹೆಚ್ಚಿಗೆ ಬಯಸಬಾರದು ಎಂಬುದೂ ಇದರ ಹಿಂದಿನ ಮರ್ಮವಿರಬಹುದು. ಆದರೆ ಈ ಬಿಟ್ಟಿ ಸೌಲಭ್ಯಗಳು ಅದೆಷ್ಟು ಕಳಪೆಯಾಗಿರುತ್ತವೆ ಎಂಬುದನ್ನು ಈ ಹಾಸ್ಟೆಲ್ ಕಥನ ತೆರೆದಿಡುತ್ತದೆ.

ಮೂಲಭೂತ ಸೌಕರ್ಯಗಳೂ ಇಲ್ಲದರ ನಡುವೆ ಆಹಾರ ದಕ್ಕಿಸಿಕೊಳ್ಳಲೋಸುಗ ನಡೆಯುವ ಊಟದ ಕಳ್ಳತನ, ಊಟದ ಕಳ್ಳತನ ತಪ್ಪಿಸಲು ಮಾಡುವ ಎಂಜಲ ಉಪಾಯ, ಅಂದಿನ ಮೇಷ್ಟ್ರುಗಳ ಹೊಡೆತಗಳು, ಶಾಲೆಯ ಶಿಕ್ಷೆಗಳ ನಡುವೆಯೂ ಮೂಡುತ್ತಿದ್ದ ಬಾಲ್ಯದ ಪುಡಿ ರೌಡಿತನ, ಹರೆಯದರಲ್ಲಿ ಮೂಡುವ ಸಿನಿಮಾ ಹುಚ್ಚು, ಅಜ್ಞಾತ ಮದುವೆ ಊಟಗಳು, ಪ್ರೇಮ, ಟಿ ಎಲ್ ಟಿ, ಪಾಸು ಫೇಲುಗಳ ಗೊಂದಲದ ಆಟಗಳು ಮುದ ನೀಡುತ್ತವೆ. ಅಂತಹ ಕಳಪೆ ಗುಣಮಟ್ಟದ ವ್ಯವಸ್ಥೆಯ ನಡುವೆ ತಲೆ ಎತ್ತುವ ಸಣ್ಣತನ ಭ್ರಷ್ಟಾಚಾರ ಕ್ರೌರ್ಯಗಳು ಕಾಣಿಸಿಕೊಳ್ಳುತ್ತವೆ. ಅರೆಗಳ್ಳ, ಉಪವಾಸದ ನಡುವೆಯೂ ಒಬ್ಬರಿಗೊಬ್ಬರು ಅನುಕಂಪದಿಂದಲೋ, ಹಂಚಿಕೆಯ ದೃಷ್ಟಿಯಿಂದಲೂ ಒಬ್ಬರಿಗೊಬ್ಬರು ಚಾಚಿಕೊಳ್ಳುವ ಸಹಾಯ ಹಸ್ತವೂ ಎದೆಯ ಕವಾಟವನ್ನು ತಣ್ಣಗಾಗಿಸುತ್ತದೆ. ಇಲ್ಲಿ ದೂಷಣೆಗಳಿಲ್ಲ, ಸಿಂಪತಿ ಬಯಸುವ ಸಾಲುಗಳಿಲ್ಲ, ತಿರಸ್ಕಾರವಿಲ್ಲ.

ಧಕ್ಕಿರುವುದರ -ಧಕ್ಕಬೇಕಿರುವುದರ ಬಗೆಗಾಗಲಿ ಮರುಕವಿಲ್ಲ, ಇದ್ದದ್ದನ್ನು ಇದ್ದಂತೆ ಸ್ವೀಕರಿಸುವ ಗುಣದಿಂದ ಕೃತಿ ಮತ್ತಷ್ಟು ಆಪ್ತವಾಗುತ್ತದೆ.

ಮೊದಮೊದಲು ಬಾಲ್ಯದ ಕಣ್ಣೋಟದಿಂದ ಕಾಣುವ “ಟ್ರಂಕು ತಟ್ಟೆ”, ಪುಡಿ ರೌಡಿತನವ ದಾಟಿ ನಂತರ ಹೋರಾಟದ ದಾರಿಯಲ್ಲಿ ಮುಂದುವರೆದು ಸಂಘಟನೆಯ, ಅಂಬೇಡ್ಕರ್ ಅವರ ಮಹತ್ವವನ್ನು ಕಾಣಿಸುಸುತ್ತದೆ. ನಂತರ ಸಮುದಾಯದ ಪ್ರತಿಬಿಂಬವು ಆಗಿದೆ.

ದುಡಿದು ದುಡಿದು ಬಡವರಾದವರ ಮಕ್ಕಳಿಗೆ ಶಿಕ್ಷಣದ ಅಗತ್ಯ, ಹಸಿವೆಗಾಗಿ ಎಲ್ಲವನ್ನು ಸಹಿಸಿಕೊಳ್ಳುವ ದೈತ್ಯ ಶಕ್ತಿಯ ಚಿತ್ರಣಗಳು ಓದುಗರನ್ನು ಎದುರುಗೊಳ್ಳುತ್ತವೆ. ಕೇವಲ ಗೆಲುವು, ನಂಬರ್1 ಸ್ಪರ್ಧೆ ಮಾತ್ರವೇ ಬದುಕಿನ ಸಂಭ್ರಮವಾಗಿರುವ ಇಂದಿನ ಕಾಲಘಟ್ಟದಲ್ಲಿ ಬದುಕಿನ ಆದ್ಯತೆಗಳಾವುವು ಆಗಿದ್ದವು, ಆಗಿರಬೇಕು ಎಂಬುದನ್ನು ಈ ಕೃತಿ ಸ್ಪಷ್ಟವಾಗಿ ಸೂಚಿಸುತ್ತದೆ. ಕೃತಿಕಾರರು ಹಾಸ್ಟೆಲ್‌ ಅನುಭವಗಳ ತಮ್ಮ ಕಣ್ಣೋಟದಲ್ಲಿ ಸಿಕ್ಕಿರುವುದನ್ನು ಸಶಕ್ತ ಪದಗಳಲ್ಲಿ ಸೆರೆಹಿಡಿದಿದ್ದಾರೆ.

ಹಾಗೆಯೆ ತಮ್ಮ ಅಂತರಂಗದ ಭಾವನೆ-ಬದಲಾವಣೆಯನ್ನು, ಮನೋತೊಳಲಾಟಗಳನ್ನು ದಾಟಿಸಿದ್ದರೆ ಪುಸ್ತಕದ ವ್ಯಾಪ್ತಿ ಹಿಗ್ಗುತ್ತಿತ್ತೇನೊ ಎಂಬುದು ನನ್ನ ಅನಿಸಿಕೆ. ಕೃತಿಗೆ ಹಿನ್ನುಡಿ ಬರೆದಿರುವ ಕೃಷ್ಣಮೂರ್ತಿ ಬಿಳಿಗೆರೆ ಅವರ “ನಿನ್ನ ಈ ಬರಹಗಳಲ್ಲಿ ಅವಮಾನದ ದಾಖಲೆಗಳಿವೆ, ಪ್ರತಿರೋಧದ ನೆಲೆಗಳಿವೆ, ಆದರೆ ದ್ವೇಷದ ಪ್ರತೀಕಾರದ ಛಾಯೆಗಳಿಲ್ಲ. ಇದು ನಿನ್ನ ಬರವಣಿಗೆಯನ್ನು ಬಿನ್ನ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಒತ್ತಾಯಿಸುತ್ತದೆ” ಎಂಬ ಮಾತುಗಳು ಓದುಗರ ಭಾವಗಳಾಗಿ ನಿಲ್ಲುತ್ತವೆ.

ಹುಳ ಕಚ್ಚಿದ ಅನ್ನವಿದು, ಇದು ಅರ್ಧಂಬರ್ಧ ತಿಂದು ಬಿಟ್ಟಿರುವುದು ಎಂಬ ಅಳುಕಿಲ್ಲದೆ ಉಣ್ಣುವಾಗ “ಎಂಜಲ ತಿಂಬರೆ ಅಂಜದೆ ಅಳುಕದೆ” ಜೇಡರ ದಾಸಿಮಯ್ಯನವರ ವಚನವನ್ನ ಇಲ್ಲಿನ ಪುಟಗಳು ಆಗಾಗ್ಗೆ ನೆನಪಿಗೆ ತರುತ್ತದೆ.

‍ಲೇಖಕರು avadhi

28 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading