‘ಹಳ್ಳ ಬಂತು ಹಳ್ಳ’ ಎಂಬ ಕಾಲದ ಗತಿ ಸ್ಥಿತಿ, ವ್ಯಕ್ತಿತ್ವಗಳ ವಿಕಸನದ ಕಥನ

ಎಚ್ ಆರ್ ರಮೇಶ
ಈ ಕಾದಂಬರಿ ತನ್ನೊಡಲಲ್ಲಿ ಸುಮಾರು ನೂರು ವರ್ಷಗಳ ಕಾಲವನ್ನು ಇಟ್ಟುಕೊಂಡಿದೆ. ಸೃಷ್ಟಿಯಲ್ಲಿ ಮತ್ತು ಕಾಲದ ಗತಿಯಲ್ಲಿ ನೂರುವರ್ಷಗಳು ಕೇವಲ ಒಂದು ಬಿಂದು ಅಥವಾ ಬಿಂದುವಿನೊಳಗಿನ ಅಣುವಿನಲ್ಲಿನ ಕಣ ಅಥವಾ ಏನೂ ಅಲ್ಲದೇ ಇರಬಹುದು. ಆದರೆ ಮನುಷ್ಯನ ಬಾಳಿನಲ್ಲಿ ನೂರುವರ್ಷ ಬಹಳ ದೊಡ್ಡ ಸಂಗತಿ. ನೂರು ವರ್ಷಗಳ ಕಥನದಲ್ಲಿ ನಾಲಕ್ಕು ತಲೆಮಾರುಗಳು ಬಾಳಿ, ಬದುಕಿ, ಅಳಿದು ಹೋಗುವ ಕತೆಯಿದೆ ಮತ್ತು ವ್ಯಥೆಯಿದೆ. ಮತ್ತು ಮುಂದೆ ಬರುವ ತಲೆಮಾರಿಗೆ ದಟ್ಟ ನೆನಪುಗಳನ್ನು ಉಳಿಸಿದೆ. ಮೊಗೆದಾಗ ಅವನ್ನೆಲ್ಲ ಸದ್ಯದ ಬದುಕು ರೂಪುಗೊಂಡ ಬದುಕಿನ ಪದರುಗಳು ಸಿಗುತ್ತವೆ. ಮತ್ತು ಪ್ರಸ್ತುತದ ಬದುಕು ಅನೇಕ ಬಗೆಯಲ್ಲಿ ಅರ್ಥಗಳನ್ನು ಚಿಮ್ಮುತ್ತದೆ.
ಇತಿಹಾಸಕ್ಕೆ ಸಾಕ್ಷಿ, ಘಟನೆಗಳು ಮತ್ತು ರಾಜಕೀಯ ಮುಖ್ಯವಾದರೆ, ಕಲೆಗೆ/ಸಾಹಿತ್ಯಕ್ಕೆ ಮನುಷ್ಯನ ಖಾಸಗೀ ಬದುಕು, ವ್ಯಕ್ತಿತ್ವಗಳ ವಿಕಸನ ಬಹಳ ಮುಖ್ಯವಾಗಿ ಕಾಣುತ್ತವೆ. ಸಾಹಿತ್ಯ ಹೊರಗನ್ನಷ್ಟೇ ಕಾಣಿಸದೆ, ಮನುಷ್ಯನ ಒಳಗನ್ನು ಹೊಕ್ಕು ಕಾಲದಲ್ಲಿ ಮನುಷ್ಯರು ಹೇಗೆಲ್ಲ ಬದುಕಿನ ಪಾಡುಗಳನ್ನು ಅನುಭವಿಸುತ್ತ ಬಂದರು ಕಥಿಸುತ್ತ ಬದುಕಿನ ಸತ್ಯದ ವಿವಿಧ ಆಯಾಮಗಳನ್ನು ಶೋಧಿಸುತ್ತದೆ. ಇದೆಲ್ಲದರ ಪ್ರತೀಕದಂತೆ ಈ ಹಳ್ಳ ಬಂತು ಹಳ್ಳ ಎನ್ನುವ ಕಾದಂಬರಿ ಇದೆ.
ಮೇಲ್ನೋಟಕ್ಕೆ ಒಂದು ಕುಟುಂಬದ ಕತೆಯಾಗಿ ಕಂಡರೂ ಮತ್ತು ಒಂದು ಜಾತಿಯ ಕಥನವಾಗಿ ತೋರಿದರೂ ಅದು ಕೇವಲ ಒಂದೇ ಕುಟುಂಬದ ಕತೆಯಲ್ಲಿ ಮತ್ತು ಅದು ಹೇಳುವುದು ಜಾತಿಯತೆಯನ್ನಲ್ಲ. ಬದಲಿಗೆ, ಕಾಲದಲ್ಲಿ ಆಗುವ ಬದಲಾವಣೆಗೆ ಸಂಪ್ರದಾಯಗಳು ಹೇಗೆ ಶಿಥಿಲಗೊಳ್ಳುತ್ತವೆ ಹಾಗೂ ಜಾತಿ ಎನ್ನುವುದು ಮೆಲ್ಲಗೆ ಹೇಗೆ ಛಿದ್ರಗೊಳ್ಳುತ್ತದೆ ಎನ್ನವುದನ್ನು ನಿಧಾನವಾಗಿ ಮತ್ತು ಮೆಲ್ಲನೆ ದನಿಯಲ್ಲಿ ಹೇಳುತ್ತದೆ. ಈ ಕಥನದ ನಿರೂಪಣೆ ಯಾವ ಐಡಿಯಾಲಜಿಗಳಿಗೆ ಆತುಕೊಳ್ಳದೆ ಬದುಕನ್ನು ಕಾಣಿಸಲು ಬದುಕಿಗೆ ನಿಷ್ಟವಾಗಿದೆ. ಹಾಗಾಗಿಯೇ ಇಲ್ಲಿ ನಿರೂಪಿತವಾಗಿರುವ ಬದುಕು ಪಥೇರ್ ಪಾಂದೆಲಿ ಥರ ಖುಲ್ಲಮ್ ಖುಲ್ಲ ವಾಸ್ತವದ ಚಿತ್ರಣ.

ಕಥನ ಯಾವ ಅಲಂಕಾರವಿಲ್ಲದೆ ಬದುಕನ್ನು ನೇರವಾಗಿ ಹೇಗಿದೆಯೋ ಹಾಗೆ ತೋರಿಸಲು ಪ್ರಯತ್ನಿಸುತ್ತದೆ. ಹೇಗಿದೆಯೋ ಹಾಗೆ ಇರುವುದನ್ನು ಕಾಣುವುದಾದರೂ ಹೇಗೆ, ಅದು ಅಷ್ಟು ಸುಲಭವೇ, ಮತ್ತೂ ಅದು ಓದುಗರನ್ನು ಡಿಸ್ಟರ್ಬ್ ಮಾಡದೆ ಒಳಗೆ ಇಳಿಯುವುದಿಲ್ಲ. ಇರುವ ಬದುಕು ಮತ್ತು ಅದು ಸಾಗುವ ಹಾದಿಯನ್ನು ಅಥವಾ ಹಾದಿಗಳನ್ನು ಸತ್ಯಜಿತ್ ರೇ ತನ್ನ ಸಿನಿಮಾದಲ್ಲಿ ಕಾಲದ ಚಲನೆಯಲ್ಲಿ ಕಾಣಿಸುವ ಪರಿಯನ್ನು ಹಳ್ಳ ಬಂತು ಹಳ್ಳದ ಕರ್ತೃ ಶ್ರೀನಿವಾಸ ವೈದ್ಯ ಅವರು ಮಾಡುತ್ತಾರೆ.
ಮಳೆ ನೀರು ಹರಿಯುವಾಗ ತನಗೆ ಮುಂದಿನ ಪಥ ಗೊತ್ತಿಲ್ಲದೆ, ಹರಿಯುತ್ತಲೇ ಮುಂದಿನ ಪಥದ ಗತಿಯನ್ನು ಗೊತ್ತುಮಾಡಿಕೊಳ್ಳುತ್ತ ಸಾಗಿದಂತೆ ಇಲ್ಲಿಯ ನಿರೂಪಣೆ. ಒಂದು ಕುಟುಂಬದ ಕತೆ ಇಲ್ಲಿ ಒಂದು ಕುಟುಂಬದ ಕತೆಯಷ್ಟೇ ಅಲ್ಲ, ಅದು ಒಂದು ಊರಿನ ಕತೆ, ಮತ್ತು ಅದನ್ನು ಹೇಳುತ್ತಲೇ ನಾಗರೀಕತೆಯ ಹಾದಿಗೆ ಟಾರ್ಚನ್ನು ಹಿಡಿಯುತ್ತದೆ ಇಲ್ಲಿಯ ನಿರೂಪಣೆ. ಅಲ್ಲಿ ಕಾಣುವುದು ಸಮಾಜ, ರಾಜಕೀಯ, ನಂಬಿಕೆ, ಸಂಪ್ರದಾಯ, ಆಚರಣೆ, ಸಂಸ್ಕೃತಿ, ಮನೋ ವಿಕಸನದ ಗುರುತುಗಳು.
ವೈಷ್ಣವೋ ಜನತೋ ಕಾದಂಬರಿಯ ನಾಯಕ/ಮುಖ್ಯಪಾತ್ರ ವಾಸಣ್ಣನ ಥರ ಹಳ್ಳ ಬಂತು ಹಳ್ಳದ ಕಥಾನಾಯಕ ವಾಸುದೇವಾಚಾರ್ಯ ತಲೆಯ ತುಂಬಾ ಆದರ್ಶಗಳನ್ನಿಟ್ಟುಕೊಂಡಿರುವಂತಹವನೂ ಅಲ್ಲ, ಸಂಸ್ಕಾರದ ಪ್ರಾಣೇಶಾಚರ್ಯರ ಥರ ದ್ವಂದ್ವದ ಮನಸ್ಸಿನವನೂ ಅಲ್ಲ, ಬದಲಿಗೆ, ತನ್ನದೇ ಆದಂತಹ ತಾಪತ್ರಯಗಳು, ವ್ಯಥೆಗಳನ್ನು ಇಟ್ಟುಕೊಂಡಿರುವ, ಶಾಸ್ತ್ರ, ಸಂಪ್ರದಾಯ, ಮತ್ತು ರೂಢಿಗತ ಮೌಲ್ಯಗಳನ್ನು ಪಾಲಿಸುತ್ತ, ಬದುಕಿಗೆ ನಿಷ್ಟನಾಗಿರುವಂತಹನು. ಆದರೂ ಕಾಲದ ಅನಿವಾರ್ಯತೆಗಳಿಗೆ ಬದುಕು ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ, ಬದಲಾವಣೆಗಳಿಗೆ ತೆರೆದುಕೊಳ್ಳುವುದನ್ನು ನೋಡುತ್ತ, ಬದುಕನ್ನು ಬಾಳಿ ಹೋಗುತ್ತಾನೆ.
ಹೊರಗಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳಿಗೆ ಅಷ್ಟು ಬೇಗೆ ಪ್ರಭಾವಕ್ಕೆ ಒಳಗಾಗದೆ ತನ್ನ ಆಂತರ್ಯದ ಜೊತೆ ಮತ್ತು ಬದುಕಿನ ಕಷ್ಟ ಸುಖ, ಸಾವು,ನೋವುಗಳನ್ನು ಎದುರಿಸುತ್ತ ಸಾಗುತ್ತ ಇಡೀ ಕಾದಂಬರಿ ಕೇಂದ್ರವೇ ಆಗಿ ಪರಿಣಮಿಸಿ, ಆವರಿಸಿಕೊಳ್ಳುತ್ತಾನೆ. ತನ್ನ ಟಿಸಿಲುಗಳು ಅಂದರೆ ಬಳಗ, ಕುಟುಂಬದ ಕುಡಿಗಳು ಊರನ್ನು ದಾಟಿ ಧಾರವಾಡ ಮತ್ತು ಬಾಂಬೆ ಶಹರಗಳವರೆಗೆ ಚಾಚುತ್ತವೆ. ಇದರ ಮೂಲಕ ಬದುಕು ವಿಸ್ತಾರಗೊಂಡಂತೆ ಕುಟುಂಬ ಕಿರಿದಾಗುತ್ತ, ಹಳೆಯ ಮೌಲ್ಯಗಳು ಶಿಥಿಲಗೊಂಡು ಹೊಸ ಮೌಲ್ಯಗಳು ಚಿಗುರೊಡೆಯುವುದನ್ನು ಕಾಣುತ್ತೇವೆ.
ಸಂಪ್ರದಾಯನಿಷ್ಟ ಬ್ರಾಹ್ಮಣ ಕುಟುಂಬ ಹೇಗೆಲ್ಲ ಬದಲಾವಣೆಗಳಿಗೆ ಕಾರಣವಾಗುತ್ತ, ಜಾತಿಯನ್ನು ಅಲುಗಾಡಿಸಿ ಒಡೆದು ಸಂಕರಗೊಳ್ಳುವುದನ್ನು ಮೆಲುದನಿಯಲ್ಲಿ ಮಂದ್ರಸ್ಥಾಯಿಯ ಹಾಗೆ ಇದರ ಕಥನ ಪ್ರಾದೇಶಿಕ ಭಾಷೆಯ ಪಲುಕುಗಳನ್ನು ಮೆತ್ತಿಕೊಂಡು ಸಾಗುತ್ತದೆ. ವಾಸುದೆಲೀವಾಚಾರ್ಯ ಮತ್ತು ಅವನ ಮಡದಿ ತುಳಸಕ್ಕ ಮತ್ತು ಇವರ ಮನೆಯಲ್ಲೇ ಬೆಳೆದ ರುಕುಮ ಎನ್ನುವ ಮರಾಠಿ ಹೆಣ್ಣುಮಗಳು ಆಡಿಸಿ ಬೆಳೆಸಿದ ನಾರಾಯಣ ಜಾತಿಯನ್ನು ಮತ್ತು ಸಂಪ್ರದಾಯವನ್ನು ಮೀರಿ ನಾಟಕದ ನಟಿಯನ್ನು ಮದುವೆಯಾಗುತ್ತಾನೆ.
ಹಳೆಯದರ ನಡುವೆಯೇ ಹೊಸತನವೆನ್ನುವದು ಹೇಗೆ ಮೂಡುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿ ನಿಲ್ಲುತ್ತದೆ. ತನ್ನ ಅಪ್ಪನಂತಿರುವ ವಾಸುದೇವಾಚಾರ್ಯರ ವೇದ ಮಂತ್ರಗಳ ನಡುವೆಯೇ ನಾರಾಯಣ ಸಣ್ಣ ರೀತಿಯಲ್ಲಿ ಬಂಡಾಯ ಮಾಡುತ್ತಾನೆ. ಇದರಿಂದ ವಾಸುದೇವಾಚಾರ್ಯರು ವಿಚಲಿತರಾದರೂ ಎಲ್ಲೋ ಒಂದು ಕಡೆ ತನ್ನೊಳಗೇ ಸಮಾಧಾನ ಪಟ್ಟುಕೊಂಡು ಬದುಕಿನ ಬಂಡಿಯನ್ನು ಮುಂದಕ್ಕೆ ತಳ್ಳಿಕೊಂಡು ಹೋಗುತ್ತಾನೆ.

ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಕೊಂಡಿಯಂತಿರುವ ವಾಸುದೇವಾಚಾರ್ಯ ಅನೇಕ ಬಗೆಯ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಾನೆ. ಇವನ ಕುಟುಂಬದಲ್ಲಿ ಅಂತಃಕರಣದ ರುಕುಮ, ಸಾವು, ನೋವುಗಳ ಅನುಭವಿಸುತ್ತ ಕುಟುಂಬದ ಒಳಗಿನ ಎಲ್ಲ ಆಗುಹೋಗುಗಳನ್ನು ಸಂಭಾಳಿಸುವ, ಕುಟುಂಬವನ್ನು ಪೊರೆಯುವ ವಾಸುದೇವಾಚಾರ್ಯರ ಹೆಂಡತಿ ತುಳಸಕ್ಕ, ಯಾವ ಮೌಲ್ಯಗಳು ಇಲ್ಲದೆ ಸ್ವೇಚ್ಚಾಚಾರದ ಬದುಕನ್ನು ಬದುಕುವ ಹಿರಿಯ ಮಗ ಭೋದರಾಯ, ಸ್ವಾತಂತ್ರಹೋರಾಟ ಗಾರನಾದ ತಮ್ಮನ ಮಗ ರಾಮು, ಆಧುನಿಕ ಶಿಕ್ಷಣದಿಂದ ಹೊಸ ಬಗೆಯ ಬದುಕನ್ನು ಕಟ್ಟಿಕೊಂಡು ಅಂತರ್ಜಾತಿ ವಿವಾಹವಾಗಿ ಬಾಂಬೆ ಶಹರದಲ್ಲಿ ಬದುಕನ್ನು ರೂಪಿಸಿಕೊಂಡಿರುವ ಮಗ ಪಾಂಡು, ಉನ್ನತ ಶಿಕ್ಷಣ ಪಡೆದು ತನ್ನ ಕಾಲ ಮೇಲೆ ನಿಂತು ಕುಟುಂಬದ ಆಗುಹೋಗುಗಳಿಗೆ ಸ್ಪಂದಿಸುವ, ಧಾರವಾಡದಲ್ಲಿ ನೆಲೆಗೊಂಡಿರುವ ತಮ್ಮನ ಮಗ ಕೇಶವ, ಅತೀ ಸಂಪ್ರದಾಯ ಶೀಲೆ, ವಿಧವೆ ಅಂಬಕ್ಕ ಹೀಗೆ ಹತ್ತಾರು ಜನರ ಬದುಕಿನ ಕಥನವನ್ನು ಕಾದಂಬರಿಯ ಕೇಂದ್ರ ಪಾತ್ರ ವಾಸುದೇವಾಚಾರ್ಯರ ಮೂಲಕವೇ ತುಂಬಾ ಆದ್ರ್ರವಾಗಿ ತೋರಿಸುತ್ತದೆ ಈ ಕಾದಂಬರಿ.
ವಾಸುದೇವಾಚಾರ್ಯರ ಮಡದಿ ತುಳಸಕ್ಕ ತನ್ನ ಗಂಡನಿಗೆ ಪೂಜೆ ಮಾಡುವ ಒಂದು ಸಂದರ್ಭದಲ್ಲಿ ಮಡಿಮೈಲಿಗೆ ವಿಚಾರ ಬಂದಾಗ ಪೂಜೆ ಮಾಡುವುದು ಕೈಯಿಂದಲೋ ಅಥವಾ ಮನಸ್ಸಿನಿಂದಲೋ ಎನ್ನುವ ಮಾತು ಹೇಳುತ್ತಾಳೆ. ಇನ್ನೂ ಸಾಕ್ಷರತೆಗೆ ಸಂಪೂರ್ಣವಾಗಿ ತೆರೆದಕೊಂಡಿರದ ಸಮಾಜದಲ್ಲಿ, ಅದರಲ್ಲೂ ನಾಲಕ್ಕು ಗೋಡೆಗಳ ನಡುವೆಯೇ ತಮ್ಮ ಬದುಕಿನ ಅಮೂಲ್ಯಕ್ಷಣಗಳನ್ನು ಕಳೆದ ಹೆಣ್ಣೊಬ್ಬಳ ಬಾಯಲ್ಲಿ ಬರುವ ಈ ಮಾತುಗಳು ನಮ್ಮನ್ನು ಕ್ಷಣ ಝಿಲ್ಲೆನ್ನಿಸುತ್ತವೆ. ಮತ್ತು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದೊಳಗಿನ ಹೆಂಗಸರು (ಬಾಲ್ಯದಲ್ಲಿಯೇ ವಿವಾಹವಾದವರು, ಆಗಿ ವಿಧವೆಯಾದವರು, ಮದುವೆಯಾಗದೇ ಉಳಿದಿರವವರು) ಪಡುವ, ಅನುಭವಿಸುವ ವ್ಯಥೆ ಈ ಕೃತಿಯಲ್ಲಿ ತುಂಬಾ ದಟ್ಟವಾಗಿ ನಿರೂಪಿತವಾಗಿದೆ.
ಸಿಪಾಯಿದಂಗೆಯ ದಿನಗಳ ಹಿನ್ನಲೆಯಲ್ಲಿ ಪ್ರಾರಂಭವಾಗುವ ಈ ಕಾದಂಬರಿ ಗಾಂಧಿಯ ಹತ್ಯೆಯ ಹಿನ್ನಲೆಯಲ್ಲಿ ಕೊನೆಗೊಳ್ಳುತ್ತದೆ. ಈ ಹಿನ್ನಲೆಗಳಲ್ಲಿ ಒಂದು ಕುಟುಂಬ ಹೇಗೆಲ್ಲ ಬದುಕಿ, ಬಾಳಿ ಮತ್ತು ಅಲ್ಲಿನ ಕೆಲವರು ಹೊರಗಿನ ಆಗುಹೋಗುಗಳಿಗೂ ತೆರೆದುಕೊಂಡು ಬದುಕನ್ನು ವಿಸ್ತರಿಸಿಕೊಳ್ಳುತ್ತ ಸಾಗಿತು ಎನ್ನುವುದನ್ನು ಈ ಕಾದಂಬರಿ ಮನಸ್ಸಿನೊಳಗೆ ಇಳಿದು ಮೀಟುತ್ತದೆ ಅಂತಃಕರಣವನ್ನು.






0 Comments