ಎಚ್ಹೆಸ್ವಿ ಮತ್ತೆ ಬರೆದಿದ್ದಾರೆ: ಗಟ್ಟಿಯಾಗಿ ಅತ್ತುಬಿಡಬೇಕು ಅನ್ನಿಸುತ್ತಾ ಇತ್ತು.

ಮತ್ತೊಂದು ಮಳೆಗಾಲ.. -ಎಚ್.ಎಸ್.ವೆಂಕಟೇಶಮೂರ್ತಿ ಅರವತ್ತೇಳು ವರ್ಷಗಳಷ್ಟು ಹಿಂದಿನ ಒಂದು ಕಥೆ ಹೇಳಲಿಕ್ಕೆ ಹೊರಟಿದ್ದೇನೆ.ಆ ಹುಡುಗಿಗೆ ಗಂಡ ತೀರಿಕೊಂಡಾಗ ಕೇವಲ ಹದಿನೇಳರ ವಯಸ್ಸು. ಆಗ ಅವಳು ದಿನ ತುಂಬಿದ ಬಸುರಿ. ಸಾಯುವ ಮುನ್ನ ಗಂಡ ಅವಳನ್ನು ಕೂಗಿ ಕರೆದು ಅವಳ ಉಬ್ಬಿದ ಹೊಟ್ಟೆಯ ಮೇಲೆ ಪ್ರಯಾಸದಿಂದ ತನ್ನ ಕೈ ಆಡಿಸುತ್ತಾ ಕುಸಿದ ದನಿಯಲ್ಲಿ ಹೇಳಿದ್ದಿಷ್ಟೆ: “ನಾನಿನ್ನು ಉಳಿಯೋದಿಲ್ಲ…ಆದರೆ ನಾನು ಹೋದರೂ ನಿನ್ನ ಮಗ ಇರ್ತಾನೆ….ಅವನೇ ನಿನ್ನ ಕಾಪಾಡ್ತಾನೆ…ಸರಿಯಾಗಿ ನೋಡಿಕೋ….ಅವನು ಹು-ಟ್ಟಿ-ದ ಮೇ-ಲೆ”…. ಅಲ್ಲಿಗೆ ಕಥೆ ಮುಗಿಯಿತು. ಆದರೆ ವಾಕ್ಯ ಇನ್ನೂ ಮುಗಿದೇ ಇರಲಿಲ್ಲ. ಕೆಲವು ವಾಕ್ಯಗಳ ಹಣೇಬರ ಇದು. ಅವು ಅಪೂರ್ಣವಾಗಿಯೇ ಉಳಿಯುತ್ತವೆ. ಅಪೂಣವಾಗಿ ಉಳಿಯೋದರಿಂದಲೇ ಅವು ಯಾವತ್ತೂ ಮುಗಿಯೋದಿಲ್ಲ. ಹೀಗೆ ಸಾಯುವ ಗಂಡ ಒಂದು ಅಪೂರ್ಣ ವಾಕ್ಯವನ್ನು ಮುಗಿಯದಂತೆ ಉಳಿಸಿ ತನ್ನ ಋಣ ಹರಿದುಕೊಂಡ. ಹುಡುಗಿ ರಂಭಾಟ ಮಾಡಿ ಅಳುವುದಕ್ಕೂ ಮನೆಯಲ್ಲಿದ್ದ ಅಮ್ಮ, ದೊಡ್ಡಮ್ಮ ಅವಕಾಶ ಕೊಡಲಿಲ್ಲ. ನೀನು ಹೀಗೆ ಹೊಟ್ಟೆ ಬಡಿದುಕೊಂಡು ಅತ್ತರೆ ನಿನ್ನ ಕೂಸಿಗೇ ಅಪಾಯ ಕಣೇ…ಎಂದು ಗಿರಿಗಿರಿ ಕಣ್ಣು ತಿರುಗಿಸುತ್ತಾ ಭೀಮಜ್ಜಿ ಕೂಗಿದಾಗ, ಹುಡುಗಿ ಥಟಕ್ಕನೆ ಸ್ತಬ್ಧಳಾಗಿಬಿಟ್ಟಳು. ಹೀಗೆ ಸರಿಯಾಗಿ ಅಳುವುದಕ್ಕೂ ಅವಕಾಶವಿಲ್ಲದೆ ಗಂಡನ ಶವವನ್ನು ಬೀಳ್ಕೊಡಬೇಕಾಯಿತು. ದಿನತುಂಬಿದ ಮೇಲೆ ಹುಟ್ಟಿದ್ದು ಗಂಡು ಕೂಸು. ನಗುತ್ತಾ ಅಳುತ್ತಾ ಆ ಮಗುವನ್ನು ಅಮ್ಮ, ದೊಡ್ಡಮ್ಮ ಸ್ವಾಗತಿಸಿದರು. ಗಂಡ ಸತ್ತ ನಕ್ಷತ್ರ ಚೆನ್ನಾಗಿರಲಿಲ್ಲ. ಅದಕ್ಕಾಗಿ ಹುಡುಗಿಯ ಸಂಸಾರ ಮನೆಬಿಟ್ಟು ಇನ್ನೂ ಪೂರ್ತಿಯಾಗಿರದ ಯಾರದ್ದೋ ಹೊಸಮನೆಯಲ್ಲಿ ಬಿಡಾರ ಹೂಡಿತ್ತು. ಅದನ್ನ ಹೊಸಮನೆ ಅಂತಲೇ ಆ ಕೇರಿಯಲ್ಲಿ ಎಲ್ಲರೂ ಕರೆಯುತ್ತಾ ಇದ್ದರು. ಹೊಸಮನೆ ಅಪೂರ್ಣವಾಗಿ ಉಳಿದಿದ್ದುದರಿಂದ ಆ ಮನೆ ಹಳೆಯದಾಗುವ ಚಾನ್ಸೇ ಇರಲಿಲ್ಲ. ಆ ಹೊಸ ಮನೆಯ ಪಡಸಾಲೆಯ ಪಕ್ಕ ಇದ್ದ ಕೋಣೆಯಲ್ಲಿ ಹುಡುಗಿ ಬೆಸಲಾದದ್ದು. ಹೆರಿಗೆ ಆದಾಗ ಅಜ್ಜ ಊರಲ್ಲಿ ಇರಲಿಲ್ಲ. ಹಳ್ಳಿಗೆ ಹೋಗಿದ್ದ. ಬಂದ ಕೂಡಲೇ ಅವನಿಗೆ ಕಂಡದ್ದು ಮುಂಬಾಗಿಲ ಬಳಿ ಸೆಗಣೀಕಟ್ಟೆ ಕಟ್ಟಿ ಮಾಡಿದ್ದ ನೀರಿನ ಕುಣಿ. ಅಜ್ಜನಿಗೆ ಗೊತ್ತಾಯಿತು. ಓಹೋ ಮಗು ಹುಟ್ಟೇ ಬಿಟ್ಟಿದೆ. ಸೆಗಣಿ ಕುಣಿಯಲ್ಲಿ ಕಾಲು ಅದ್ದುತ್ತಾ ಅಜ್ಜ ಹೊರಗಿಂದಲೇ ಕೂಗಿದ: ಎಂಥ ಕೂಸೇ? ನನ್ನಂಥದೇ !ಎಂದು ಭೀಮಜ್ಜಿ ಒಳಮನೆಯಿಂದ ಉತ್ತರಿಸಿದಾಗ ಅಜ್ಜ, ನಿರಾಶೆ ಮುಚ್ಚಿಡಲಾಗದೆ ಹುಷ್ ಎಂದು ಉಸಿರುಬಿಡುತ್ತಾ ಕಟ್ಟೆಯ ಮೇಲೇ ಕುಸಿದು ಕೂತ. ಭಾವ ಒಳಗೆ ಬರದಿದ್ದ ಕಂಡು ಭೀಮಜ್ಜಿ ಹೊರಗೆ ಬಂದು ಕಿಸಿಕಿಸಿ ನಗುತ್ತಾ, ಹುಚ್ಚಾ…! ನಿನಗೆ ಮೊಮ್ಮಗ ಹುಟ್ಟಿದ್ದಾನೆ..ಎಂದು ನಕ್ಕವಳು ಅದರ ಜತೆಗೇ ಬಾಲಂಗೋಸಿ ಕಟ್ಟಿದಂತೆ ಗಟ್ಟಿಯಾಗಿ ಅಳುವುದಕ್ಕೆ ಶುರುಹಚ್ಚಿದಳು. ನೋಡಣ…ನೋಡಣ…ನಡಿ ಎನ್ನುತ್ತಾ ಅಜ್ಜ ಬಾಣಂತಿ ಕೋಣೆಗೆ ನುಗ್ಗಿದ. ತಲೆತುಂಬ ಗುಂಗರುಕೂದಲ ಮಗು ತಾಯಿಯ ಪಕ್ಕ ನಿಶ್ಚಿಂತೆಯಿಂದ ಮಲಗಿ ಬಲು ಸಣ್ಣ ಸದ್ದಲ್ಲಿ ಗುರ್ ಗುರ್ ಎಂದು ಗೊರಕೆ ಹೊಡೆಯುತ್ತಾ ಇತ್ತು. ಹಿಂಗೆ ಯಾಕೆ ಸದ್ದು ಬರ್ತಾ ಇದೆ? ಎಂದು ಅಜ್ಜ ಆತಂಕದಿಂದ ಕೇಳಿದ. ಕೆಲವು ಮಕ್ಕಳಿಗೆ ನಿದ್ದೆ ಮಾಡೋವಾಗ ಹಂಗೆ ಸದ್ದು ಬರ್ತದೆ ಬಿಡು ಎಂದು ಭೀಮಜ್ಜಿ ಸಮಾಧಾನ ಹೇಳಿದಳು. ಅಷ್ಟರಲ್ಲಿ ಸೀತಜ್ಜಿ ಗಂಡನಿಗೆ ಸ್ವೀಟು ಅಂತ ಇಷ್ಟು ದಪ್ಪ ಬೆಲ್ಲ ತಟ್ಟೆಯಲ್ಲಿಟ್ಟುಕೊಂಡು ಬಂದು ಕೈಚಾಚಿದಳು. ಅಜ್ಜ ಹೆಂಡತಿಯನ್ನು ನೋಡಿ ಮತ್ತೆ ತಾನೂ ಗಳ ಗಳ ಅಳಲಿಕ್ಕೆ ಶುರುಹಚ್ಚಿದ. ಒಳ್ಳೆ ಮಳೆಗಾಲ ಅದು. ಹೊಸಮನೆಗೆ ಬಚ್ಚಲೇ ಇರಲಿಲ್ಲ. ಹಿತ್ತಲಲ್ಲಿ ಹುಲ್ಲಿನ ತಡಿಕೆ ಕಟ್ಟಿ ಬಚ್ಚಲು ಮಾಡಿಕೊಂಡಿದ್ದರು. ಸುಡುಗಾಡು ಮಳೆ ಒಂದೇ ಸಮ ಹೊಯ್ಯುತ್ತಾ ಇತ್ತು. ಮಗುವಿಗೆ ನೀರು ಹಾಕುವುದು ಹೇಗೆ? ಭೀಮಜ್ಜಿ ಒಂದು ಉಪಾಯ ಮಾಡಿದಳು. ಬಾಣಂತಿ ಕೋಣೆಯಲ್ಲೇ ಮೂರಡಿ ಮೂರಡಿ ಅಳತೆಯ ಒಂದು ಗುಂಡಿ ತೋಡಿದಳು. ಗುಂಡಿಯ ತುದಿಯಲ್ಲಿ ಕೂತು ಗುಂಡಿಯ ಇನ್ನೊಂದು ಅಂಚಿಗೆ ಕಾಲು ಚಾಚಿ ಅವಳು ಕುಳಿತುಕೊಳ್ಳೋದು. ಸೀರೆ ತೊಡೆಯ ಬುಡಕ್ಕೆ ಏರಿಸಿ ಬೆತ್ತಲಾಗಿದ್ದ ಅವಳ ಜೋಡಿಸಿದ ಕಾಲುಗಳ ಮೇಲೆ ಸೀತಜ್ಜಿ ಮಗುವನ್ನು ತಂದು ಮಲಗಿಸೋಳು. ಮಗುವನ್ನು ಮುಖಾಡಿ ಮಲಗಿಸಿಕೊಂಡು ಭೀಮಜ್ಜಿ ಈ ವಿಚಿತ್ರ ಆಸನದಲ್ಲಿ ಕೂತದ್ದಾದ ಮೇಲೆ ಸೀತಜ್ಜಿ ಬಿಸಿ ನೀರು ಮಗುವಿನ ಬೆನ್ನು, ತಲೆ, ಸೊಂಟ, ಕಾಲುಗಳ ಮೇಲೆ ಸಣ್ಣ ಚಂಬಲ್ಲಿ ತುಂಬಿ ತುಂಬಿ ಗೋವಿಂದ ಬುಕೂಸಿ, ನಾರಾಯಣ ಬುಕೂಸಿ, ಶ್ರೀಹರಿ ಬುಕೂಸಿ ಎಂದು ದೇವರ ಹೆಸರು ಹೇಳುತ್ತಾ ಅಂಗೈ ಅಡ್ಡ ಇಟ್ಟುಕೊಂಡು ಸುರಿಯೋಳು. ಹನಿ ಹನಿಯಾಗಿ ತನ್ನ ಮೇಲೆ ಬಿಸಿನೀರು ಬಿದ್ದಾಗ ಆ ಸುಖಕ್ಕೋ ಏನೋ ಮಗು ಜೋರಾಗಿ ಕೈ ಕಾಲು ಬಡಿಯುತ್ತಾ ಗುರುಗುರುಗುರು ಸದ್ದು ಮಾಡೋದು. ನಿಧಾನಕ್ಕೆ ಕೆಳಗಿನ ಗುಂಡಿ ತುಂಬಿ, ಜಾಡಾಗಿ ಬೆಳೆದ ಮಗು ಅದರಲ್ಲಿ ತನ್ನರಿವಿಲ್ಲದೆ ಕೈಇಳಿಬಿಟ್ಟು ನೀರು ಚಲಪಲ ಮಾಡೋದು. ನೋಡೇ ಸೀತೇ ನಿನ್ನ ಮೊಮ್ಮಗನ ಆವಟ..ಅಂತ ಭೀಮಜ್ಜಿ ಮಗುವಿನ ಅಂಡಿನ ಮೇಲೆ ಮೆಲ್ಲಗೆ ಹುಸಿಪೆಟ್ಟು ಹಾಕೋಳು. ಮಗು ಹುಟ್ಟೋದು, ಬಾಣಂತನ ನಡೆಸೋದು ಎಲ್ಲ ಮನೆಗಳಲ್ಲೂ ಒಂದು ಸಂಭ್ರಮದ ಸಂಗತಿ. ಆದರೆ ಈ ಮನೆಯಲ್ಲಿ ಅದು ಸಂಭ್ರಮದ ಸಂಗತಿಯಾಗಿರಲಿಲ್ಲ. ತೀರಿಕೊಂಡ ಅಳಿಯನ ಶ್ರಾದ್ಧಕಾರ್ಯಗಳು ನಡೆಯುತ್ತಲೇ ಇದ್ದವು. ಎಲ್ಲ ಮುಳುಗಿಹೋದಾಗ ಕೃಷ್ಣ ಮಗುವಾಗಿ ಒಂದು ಆಲದ ಅಲೆ ಮೇಲೆ ಮಲಗಿ ಉಪ್ಪುಕಡಲಲ್ಲಿ ತೇಲುತಾ ಇರುತ್ತಾನಂತೆ. ಹಾಗೇ ಹೊಸಮನೆಯಲ್ಲಿ ಉಪ್ಪುಪ್ಪು ಕಣ್ಣೀರ ನಡುವೆ ಕೈ ಜಾರಿ ಬಿದ್ದ ನಗುವಿನ ಹಾಗೆ ಈ ಮಗು ತೇಲುತಾ ಇತ್ತು ಎನ್ನಬಹುದು. **** ತಿಂಗಳ ಮೇಲೆ ತಿಂಗಳು ಉರುಳಿ ಮಗುವಿಗೆ ಒಂದು ವರ್ಷ ತುಂಬೇ ಬಿಟ್ಟಿತು. ಹೊಸಮನೆಯಲ್ಲಿ ತಾತ್ಕಾಲಿಕ ಬಿಡಾರ ಹೂಡಿದ್ದ ಭೀಮಜ್ಜನ ಸಂಸಾರ ಮತ್ತೆ ತಮ್ಮ ಹಳೆಮನೆ ಬಾಗಿಲು ತೆರೆಸಿ, ಪುಣ್ಯಾವರ್ಚನೆ ಶಾಸ್ತ್ರ ಮಾಡಿಕೊಂಡು ಮರುವಸತಿ ಹೂಡಿದ್ದಾಯಿತು. ಅಳಿಯ ಪ್ರಾಣ ಬಿಟ್ಟಿದ್ದ ನಡುಮನೆಯ ಮೂಲೆಗೆ ಒಂದು ಮಂಚ ಸರಿಸಿ ಇಟ್ಟು ಅಲ್ಲಿ ಯಾರೂ ಸುಳಿಯದಂತೆ ಅಜ್ಜ ಏರ್ಪಾಡುಮಾಡಿದ. ಆ ಮಂಚದ ಮೇಲೆ ಈ ಮನೆಯವರು ಯಾರೂ ಕುಳಿತುಕೊಳ್ಳುತ್ತಲೇ ಇರಲಿಲ್ಲ. ಮದುವೆಯಾದ ಹೊಸದರಲ್ಲಿ ಅಳಿಯ ಮಗಳು ಬೆಂಗಳೂರಿಗೆ ಹೋಗಿ ತೆಗೆಸಿದ್ದ ಫೋಟೋವನ್ನ ಗೋಡೆಯಿಂದ ತೆಗೆದು ಪಿಟಾರಿಯ ತಳದಲ್ಲಿ ಅಡಗಿಸಿಟ್ಟಿದ್ದಾಯಿತು. ಇಲ್ಲಾ ಅಂದರೆ ಗಂಡಸತ್ತ ಹುಡುಗಿ ಅದನ್ನು ನೋಡಿ ನೋಡಿ ಅಳುತ್ತಾ ಇದ್ದಳು. ನಿಧಾನಕ್ಕೆ ಭೀಮಜ್ಜನ ಮನೆಯಲ್ಲಿ ದುಃಖ ಮಾಸುತ್ತಾ ಮೆಲ್ಲಗೆ ಅಲ್ಲಿ ದೈನಿಕದ ಲಗುಬಗೆ ಚಟುವಟಿಕೆ ಶುರುವಾಗಿ, ಆಗಾಗ ಅಳುವಿನ ಬಾಲಂಗೋಚಿ ಇಲ್ಲದೆ ನಗುವುದೂ ಸಾಧ್ಯವಾದ ದಿನಗಳವು. ಮಗುವಿನ ಅಳು ನಗು ಆ ಮನೆಯವರ ಬದುಕಿಗೆ ಹೊಸ ಅರ್ಥ ಪ್ರಸಾದಿಸಿದ ದಿನಗಳವು. ಸರಿ ಸುಮಾರು ಆ ದಿನಗಳಲ್ಲೇ ಕಲ್ಕತ್ತಾದಿಂದ ಆ ಪತ್ರ ಬಂದಿದ್ದು. ಅದನ್ನು ಬರೆದಿದ್ದವ ಭೀಮಜ್ಜನ ಅಕ್ಕನ ಮಗ. ಅವನು ಮಿಲಿಟರಿ ಸೇರಿ ಎಲ್ಲ ಸಂಬಂಧಿಗಳಿಂದ ದೂರವಾಗಿದ್ದ ಹುಡುಗ. ಭೀಮಜ್ಜ ಆ ಅಳಿಯನ ಪತ್ರ ಓದಿ ಥಂಡಾ ಹೊಡೆದು ಕೂತುಬಿಟ್ಟ. ಪತ್ರ ಅಂಗೈ ಮುಷ್ಟಿಯಲ್ಲಿ ಕಿವುಚಿ ಧಡ ಧಡ ಹೋಗಿ ಹಿತ್ತಿಲ ಬಾಗಿಲಾಚೆ ಒಗೆದು ಬಂದ. ಯಾಕರೀ…ಏನಾಯಿತು…ಯಾರದ್ದು ಕಾಗದ? ಎಂದು ಭೀಮಜ್ಜಿ ಮತ್ತು ಸೀತಜ್ಜಿ ಕೇಳಿದರೂ ಭೀಮಜ್ಜ ಉಸಿರುಬಿಡಲಿಲ್ಲ. ರುಮರುಮ ಬಚ್ಚಲು ಮನೆಗೆ ಹೋದವನು ತೆಂಗಿನ ಚಿಪ್ಪು ಒಡ್ಡಿ ಒಲೆ ಹಚ್ಚಿದ. ಹಂಡೆಯಲ್ಲಿ ಬಿಸಿನೀರು ಮರಳ ತೊಡಗಿತು. ಪತ್ರದಲ್ಲಿ ಯಾರದ್ದೋ ಸಾವಿನ ಸುದ್ದಿ ಇದೆ ಎಂದು ಭೀಮಜ್ಜಿ, ಸೀತಜ್ಜಿ ಊಹಿಸಿ ಗುಸು ಗುಸು ಮಾತಾಡಿಕೊಂಡರು. ಸ್ವಲ್ಪ ಹೊತ್ತಾದ ಮೇಲೆ ಆ ಅಕ್ಕತಂಗಿಯರಲ್ಲಿ ಹೆಚ್ಚು ಧೈರ್ಯಶಾಲಿಯಾಗಿದ್ದ ಭೀಮಜ್ಜಿ ಅಜ್ಜನ ಬಳಿ ಬಂದು ಸಮಾಧಾನ ಮಾಡಿಕೊ… ಕಾಗದ ಎಲ್ಲಿಂದ ಬಂದಿದೆ? ಯಾರು ಹೋದರಂತೆ? ಎಂದು ಕೇಳಿದಳು. ನೀರೊಲೆ ಉರಿಯಲ್ಲಿ ಕೆಂಪಗೆ ಕಾಣುತ್ತಿದ್ದ ಭೀಮಜ್ಜ ಭೀಮಜ್ಜಿಯ ಮುಖ ನೋಡದೆ ಹೇಳಿದ…ಮಿಲಿಟರಿಯಲ್ಲಿದ್ದನಲ್ಲ…ಶೀನ…ಅವನು ಹೋಗಿಬಿಟ್ಟನಂತೆ….ಈಗ ಎಲ್ಲರದ್ದೂ ಸೂತಕದ ಸ್ನಾನ ಆಗಬೇಕು… ಸಂಜೆ ಸೂರ್ಯ ಕಂತರಂಗನ ಮಟ್ಟಿಯ ಅಂಚಿನಲ್ಲಿದ್ದ ಸಮಯ. ಮನೆಮಂದಿಗೆಲ್ಲ ತಲೆ ಸ್ನಾನ ಆಯಿತು. ಭೀಮಜ್ಜ ಎದ್ದು ಹೊರಗೆ ಹೋದ ಮೇಲೆ ಭೀಮಜ್ಜಿ ಬುಡ್ಡಿ ಹಿಡಿದುಕೊಂಡು ಹಿತ್ತಲಿಗೆ ಹೋಗಿ ಹುಲ್ಲಿನ ಮೇಲೆ ಮುದುಡಿದ ಉಂಡೆಯಾಗಿ ಬಿದ್ದಿದ್ದ ಪತ್ರ ಎತ್ತಿಕೊಂಡು ಬಂದಳು. ಮುಂಬಾಗಿಲು ಹಾಕಿ ಮಗಳ ಕೈಯಿಂದ ಪತ್ರ ಓದಿಸಿದರು. ಅದರಲ್ಲಿ ಬರೆದದ್ದು ಇಷ್ಟು: ತೀರ್ಥರೂಪ ಸ್ವರೂಪರಾದ ಮಾವನವರಿಗೆ ಶೀನಿಯ ಶಿರಸಾಷ್ಟಾಂಗ ನಮಸ್ಕಾರಗಳು. ಅದಾಗಿ ಈವರೆಗೆ ಉಭಯ ಕುಶಲೋಪರಿ ಸಾಂಪ್ರತ. ನಿಮ್ಮ ಕಡೆ ಮಳೆ ಬೆಳೆ ಹೇಗಿದೆಯೋ ಈಚೆಗೆ ಗೊತ್ತಾಗಲಿಲ್ಲ. ನಾನು ಮಿಲಿಟರಿಯಲ್ಲಿ ಇರೋದರಿಂದ ಎಲ್ಲರ ಸಂಬಂಧವೂ ಕಡಿದುಹೋಗಿದೆ ಎನ್ನದೆ ವಿಧಿಯಿಲ್ಲ. ಮಠದಿಂದ ಬಹಿಷ್ಕಾರಪತ್ರವೂ ಮದ್ರಾಸಿನ ಮನೆಗೆ ಬಂದಿದೆಯಂತೆ. ಕಳೆದ ವಾರವಷ್ಟೆ ಮದ್ರಾಸಿಂದ ಒಂದು ಕಾಗದ ಬಂತು. ಅದರಲ್ಲಿ ನಿಮ್ಮ ಅಳಿಯ ಚಿಕ್ಕ ಪ್ರಾಯದಲ್ಲೇ ತೀರಿಕೊಂಡ ಸಂಗತಿ ತಿಳಿದು ಎದೆಗೆ ಬಾಂಬು ಬಿದ್ದ ಹಾಗೆ ಆಯಿತು. ಎಷ್ಟು ಒಳ್ಳೆಯ ಹುಡುಗ ಅವನು! ನಿಮ್ಮ ಮಗಳಿಗೆ ಹೀಗೆ ಆಗಬಾರದಿತ್ತು. ಅವಳಿಗೆ ಅವನು ಹೋದ ಮೇಲೆ ಗಂಡುಮಗು ಹುಟ್ಟಿದ ಸಂಗತಿಯೂ ತಿಳಿಯಿತು. ಇದು ಮನಸ್ಸಿಗೆ ಎಷ್ಟೋ ಸಮಾಧಾನ ಕೊಟ್ಟಿತು. ಮಾವ…ಈಗ ಮುಖ್ಯ ಸಮಾಚಾರಕ್ಕೆ ಬರುತಾ ಇದೀನಿ. ಸಣ್ಣ ವಯಸ್ಸಿನ ಹುಡುಗಿ ಅವಳು. ಜೀವನ ಪೂರ ಅವಳು ಕೊರಗುತ್ತಾ ಕೂಡುವುದು ಬೇಡ. ಅವಳಿಗೆ ಎಲ್ಲಾದರೂ ಒಂದು ಗಂಡು ಹುಡುಕಿ ಮತ್ತೊಂದು ಮದುವೆ ಮಾಡಿ. ನೀವು ಒಪ್ಪುವುದಾದರೆ ನಾನೇ ಅವಳನ್ನು ಮದುವೆಯಾಗಲು ಸಿದ್ಧ. ಮಗುವನ್ನು ನನ್ನ ಕೂಸಿನ ಹಾಗೇ ನೋಡಿಕೊಳ್ಳುತ್ತೇನೆ. ಯೋಚಿಸಿ ನಿರ್ಧಾರ ಮಾಡಿ. ನಿಮ್ಮ ಆಶೀರ್ವಾದ ಬೇಡುವ ಮಿಲಿಟರಿ ಶ್ರೀನಿವಾಸರಾವು. ಎಂಥ ಚಂಡಾಲನಮ್ಮ ಅವನು ಅಂತ ಅಕ್ಕ ತಂಗಿ, ಮಗಳನ್ನೂ ಕೂಡಿಕೊಂಡು ಎಷ್ಟೋ ಹೊತ್ತು ಅಳುತ್ತಾ ಕೂತಿದ್ದಾಯಿತು. ಅವನು ಚಂಡಾಲ ನಿಜ…ಆದರೆ ದೇವರಂಥ ಮನುಷ್ಯ ಎಂದು ಇಬ್ಬರೂ ಕೊನೆಗೆ ಮಾತಾಡಿಕೊಂಡರು. ಭೀಮಜ್ಜ ಬರುವದರೊಳಗೆ ಆ ಕಾಗದವನ್ನು ಒಲೆಗೆ ಹಾಕಿ ಸುಟ್ಟು, ತಮಗೆ ಏನೂ ಗೊತ್ತಿಲ್ಲವೆಂಬಂತೆ ಮತ್ತೆ ಆ ವಿಷಯವನ್ನೇ ಎಲ್ಲೂ ಪ್ರಸ್ತಾಪಿಸದೆ ತೆಪ್ಪಗಾಗಿಬಿಟ್ಟರು. ******* ನಾನಿನ್ನೂ ಪುಟ್ಟ ಹುಡುಗ. ಆಗ ನನಗೊಂದು ಮರೆಯಲಾಗದ ದಾರುಣ ಅನುಭವವಾಯಿತು. ಈಚೆಗೆ ಅದನ್ನೊಂದು ಕವಿತೆಯಾಗಿ ಬರೆದಿದ್ದೇನೆ. ನಿಮ್ಮ ಓದಿಗಾಗಿ ಆ ಕವಿತೆ: ಕನ್ನಡಿಯಲ್ಲಿ ಸೂರ್ಯನನ್ನು ತಿದ್ದಿದ ಹುಡುಗಿ ನಾನಿನ್ನೂ ಸಣ್ಣ ಹುಡುಗ. ಬೋಳು ಹಣೆ, ಬರಿಗೈಯ ನನ್ನ ಅಮ್ಮ ಕೂತಿದ್ದಳು ಕಿಟಕಿಯಲ್ಲಿ ಕಣ್ಣಿಟ್ಟು. ಪೂರ್ವದಲ್ಲಿ ಮೂ ಡಿರಲಿಲ್ಲ ಸೂರ್ಯ. ಮುಸುಕಿತ್ತು ಆಕಾ ಶದ ತುಂಬ ಮೆಕ್ಕೆಹಣ್ಣಂಥ ಆಷಾ ಢದ ಮೋಡ.   ಹನಿಯೂ ಶುರುವಾಯಿತು ಮೆಲ್ಲಗೆ. ಕಿ ಟಕಿ ಮುಚ್ಚಿ ಒಳ ಕೋಣೆಗೆ ಹೋದಳು ಅಮ್ಮ. ಸೆರಗ ಹಿಡಿದ ನಾನೂ. ಕನ್ನಡಿಯ ಮುಂದೆ ನಿಟ್ಟುಸಿರುಬಿಡುತ್ತಾ ಕೂತ ಅಮ್ಮ. ಮಳೆ ಈಗ ಜೋರಾಗಿಯೇ ಬರುತ್ತಿ ತ್ತು ಹೊರಗೆ.   ಕನ್ನಡಿಯಲ್ಲಿ ಕಾಣುತ್ತಿತ್ತು ಅಮ್ಮನ ಮುಖ. ಬೆಳ್ಳನೆ ಹಣೆ. ಕೆದರಿ ಹಾರಾ ಡುವ ಮುಡಿ. ಸುಮ್ಮನೆ ನೋಡುತ್ತಾ ಕೂ ತಿದ್ದಳು ಅಮ್ಮ ಕನ್ನಡಿಯಲ್ಲಿದ್ದ ತನ್ನ ಮು ಖವನ್ನ. ನಡುಗುವ ಕೈಯಲ್ಲಿ ಮೆಲ್ಲಗೆತ್ತಿಕೊಂಡಳು ಕುಂಕುಮದ ಭರಣಿ.   ಬೋಳುಗನ್ನಡಿ. ತೊಟ್ಟಿಕ್ಕುವ ಮಳೆಹನಿ. ಇನ್ನೂ ಇಪ್ಪತ್ತೈದೂ ತುಂಬದ ನನ್ನ ಅಮ್ಮ. ಮಳೆ ನಿಂತು ತೊಳೆದ ಕನ್ನಡಿಯಂಥ ಆಕಾಶ. ತನ್ನ ಮುಖವನ್ನೇ ನೋಡುತ್ತಾ ಮೆಲ್ಲಗೆ ಅಮ್ಮ ತಿದ್ದಿದಳು ಕನ್ನಡಿ ಮೇಲೆ ದುಂಡಗೆ ಹೊಳೆವ ಸೂರ್ಯನ್ನ.   ******* ನಾನು ದೊಡ್ಡವನಾದ ಮೇಲೆ ಭೀಮಜ್ಜಿಯ ಬಾಯಿಂದ ಮಿಲಿಟರಿಮಾವನ ಕಥೆ ಕೇಳಿದಾಗ ಮನೆಯನ್ನ ಮಸಣಮಾಡಿದ ಅಜ್ಜನ ಬಗ್ಗೆ ಕೋಪಿಸಿಕೊಳ್ಳುವುದೋ, ಕಲ್ಕತ್ತಾದ ಮಿಲಿಟಿರಿ ಮಾವನನ್ನ ಮೆಚ್ಚಿಕೊಳ್ಳುವುದೋ ಎಂದು ಒಂದು ಕ್ಷಣ ತೆಪ್ಪಗೆ ಗೋಡೆಗೊರಗಿ ಕೂತು ಯೋಚಿಸಿದೆ. ಹೊರಗೆ ಮತ್ತೊಂದು ಹುರುಪು ಮಳೆ ಶುರುವಾಗಿತ್ತು. ಹಂಚಿನ ಮನೆಯಾದುದರಿಂದ ನನ್ನ ಕಣ್ಣ ಮುಂದೇ ಸೂರಿಂದ ಹನಿ ಹನಿ ಹನಿ ಮಳೆ ತೊಟ್ಟಿಕ್ಕತೊಡಗಿತು. ಆಗ ನಾನು ಹೈಸ್ಕೂಲಲ್ಲಿ ಓದುತ್ತಿದ್ದ ಹುಡುಗ. ಸಾಧ್ಯವಾದರೆ ಒಂದಲ್ಲ ಒಂದು ದಿನ ಮಿಲಿಟರಿಮಾವನನ್ನ ನೋಡಿ ಕಣ್ಣು ತುಂಬಿಕೊಳ್ಳಬೇಕು ಅಂತ ಆ ಕತ್ತಲಲ್ಲೊಂದು ಹಿಡಿಗಾತ್ರದ ನಿಶ್ಚಯ ಮಾಡಿದೆ…ಯಾಕೋ ಕಾಣೆ…ಆಗ ನನಗೂ ಗಟ್ಟಿಯಾಗಿ ಅತ್ತುಬಿಡಬೇಕು ಅನ್ನಿಸುತ್ತಾ ಇತ್ತು.]]>

‍ಲೇಖಕರು G

January 22, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Rajashekhar Malur

    “ಉಪ್ಪುಪ್ಪ ಕಣ್ಣೀರ ನಡುವೆ ಕೈ ಜಾರಿ ಬಿದ್ದ ನಗುವಿನ ಹಾಗೆ” – ಅದ್ಭುತವಾಗಿದೆ ಸರ್.
    “ಮಿಲಿಟರಿಯಲ್ಲಿದ್ದನಲ್ಲ ಶೀನ… ಅವನು ಹೋಗಿಬಿಟ್ಟನಂತೆ…” ಓದಿದ ನಂತರ… ಶೀನನ ವಿಷಯ ಇಲ್ಲೇಕೆ ಬಂತು ಎಂದು ಅನ್ನಿಸಿದ್ದು ಒಂದು ಕ್ಷಣವಷ್ಟೆ. ತಕ್ಷಣ ಕಾದಿತ್ತು (ಬರೀ ಓದಿದ್ದಷ್ಟಕ್ಕೇ) ಆಘಾತ.
    “ಅಜ್ಜ ಬರುವಷ್ಟರಲ್ಲೇ ಕಾಗದ ಸುಟ್ಟುಹಾಕಿದರು”… ಮೂವರೂ ಹೆಣ್ಣು ಹೆಂಗಸರು… ಜೊತೆಗೆ ಬೆಣ್ಣೆ ಕದಿಯದ ಪುಟ್ಟ ಕೃಷ್ಣ… ಇನ್ನೇನು ತಾನೇ ಮಾಡ್ಯಾರು…?
    ’ಅಮ್ಮ ಕನ್ನಡಿಯಲ್ಲಿ ಸೂರ್ಯನ ತಿದ್ದಿದ’ ಕವಿತೆ ನಿಜಕ್ಕೂ ದಾರುಣ.
    ’ಆಡಾಡತ ಆಯುಷ್ಯ’ದ ಗಿರೀಶ ಈ ನಮ್ಮ ಬೆಣ್ಣೆ ಕದ್ದಿಲ್ಲದ ವೆಂಕಟೇಶನಿಗಿಂತ ಅದೃಷ್ಟವಂತನೇ ಎಂದನಿಸಿದರೂ ಹಾಗೆ ಹೇಳಲಾರೆ… ಅಕಸ್ಮಾತ್ ಹಾಗೆ ಹೇಳಿದರೆ, ಸೀತಜ್ಜಿ, ಭೀಮಜ್ಜಿ, ರತ್ನಮ್ಮನವರು ತಮ್ಮ ಮೂಲದೇವರಾದ ಈ ಕೃಷ್ಣನ ಮೇಲಿಟ್ಟು ಅವನನ್ನು ಬೆಳೆಸಿದ ಭಕ್ತಿಯನ್ನೂ, ಪ್ರೀತಿಯನ್ನೂ ಅಲ್ಲಗೆಳೆಯುವೆನೇ ಎಂಬ ಹೆದರಿಕೆ.
    ಯಾಕೋ ಕಾಣೆ… ಈಗ ನನಗೂ ಗಟ್ಟಿಯಾಗಿ ಅತ್ತುಬಿಡಬೇಕು ಅನ್ನಿಸುತ್ತಾ ಇದೆ…
    ಮಾಳೂರು ರಾಜಶೇಖರ

    ಪ್ರತಿಕ್ರಿಯೆ
  2. nagaraj vastarey

    ‘ಕನ್ನಡಿಯಲ್ಲಿ ಸೂರ್ಯವನ್ನು ತಿದ್ದಿದ ಹುಡುಗಿ…’
    ಓದಿ ನನಗೆ ನಾನೇ ಕೋಟಿ ಸರ್ತಿ ಮಿಡಿದೆ. ನಿಮ್ಮ ನೆನಪಷ್ಟೂ ನಮ್ಮದೇ ಅನಿಸುವ ಹಾಗೆ ಚಿತ್ರಿಸುತ್ತೀರಿ.

    ಪ್ರತಿಕ್ರಿಯೆ
  3. ಈಶ್ವರ ಭಟ್

    ಬೋಳುಗನ್ನಡಿ. ತೊಟ್ಟಿಕ್ಕುವ ಮಳೆಹನಿ.
    ಇನ್ನೂ ಇಪ್ಪತ್ತೈದೂ ತುಂಬದ ನನ್ನ ಅಮ್ಮ.
    ಮಳೆ ನಿಂತು ತೊಳೆದ ಕನ್ನಡಿಯಂಥ ಆಕಾಶ.
    ತನ್ನ ಮುಖವನ್ನೇ ನೋಡುತ್ತಾ ಮೆಲ್ಲಗೆ ಅಮ್ಮ
    ತಿದ್ದಿದಳು ಕನ್ನಡಿ ಮೇಲೆ ದುಂಡಗೆ ಹೊಳೆವ
    ಸೂರ್ಯನ್ನ.
    ಇದು ಕವನದ ಮಿಡಿವ ಭಾಗ “ತಿದ್ದಿದಳು ಕನ್ನಡಿ ಮೇಲೆ ದುಂಡಗೆ ಹೊಳೆದ ಸೂರ್ಯನ್ನ” ಹೊಸಬಾಳಿಗೆ ಮುನ್ನುಡಿ ಇಡುವ ಸಮಯ ಮನಸ್ಸನ್ನು ಕಲಕುವುದು.

    ಪ್ರತಿಕ್ರಿಯೆ
  4. savtri

    ಸರ್ ಮತ್ತೊಂದು ಮಳೆಗಾಲವನ್ನು ಓದುತ್ತಿದ್ದಂತೆ ಮನಸ್ಸು ಕಳವಳ, ಸಂಕಟಕ್ಕೆ ಈಡಾಯಿತು. ನನ್ನ ಗುರುಮಾತೆ ಶ್ರೀಮತಿ ಕಾಶೀಬಾಯಿ ಸಿದ್ಧೋಪಂತ ಅವರು ಸಂಭ್ರಮದಿಂದ ಹಣೆಯ ಮೇಲೆ ಸೂರ್ಯನನ್ನು ತಿದ್ದಿಕೊಳ್ಳಬೇಕಾದ ಹದಿಮೂರರ ಹರೆಯದಲ್ಲೇ ಬಾಲ ವಿಧವೆಯಾಗಿ, ತಲೆ ಬೋಳಿಸಿಕೊಂಡು, ಮಡಿ ಹೆಂಗಸಾಗಿ ಬರಿಗೈಯ ಬಾಳಿಗೆ ಶರಣಾದರಂತೆ. ಅವರು ನಮ್ಮೂರಿನ ಮಕ್ಕಳಿಗೆ(ನನ್ನನ್ನೂ ಸೇರಿಸಿ) ಸತತ ೬ ದಶಕಗಳಿಗಿಂತ ಹೆಚ್ಚು ಕಾಲ ಅಕ್ಷರ ದಾನ ಮಾಡುತ್ತ ಜೀವವನ್ನು ತೆಯ್ದುಕೊಂಡರು. ಮೊನ್ನೆ ಮೊನ್ನೆಯಷ್ಟೆ ಕಣ್ಣು ಹೋದ ನಂತರ ನಿವೃತ್ತಿ ಜೀವನಕ್ಕೆ ತೊಡಗಿ, ತಮ್ಮ ತೊಂಬತ್ತನೇ ವಯಸ್ಸಿನಲ್ಲಿ “ನಾರಾಯಣ” ಅಂತ ಎದ್ದು ಹೋದರು. ಅವರ ಪ್ರೀತಿಯ ಶಿಷ್ಯೆಯಾದ ನನಗೆ ಅವರನ್ನು ನೆನಪಿಸಿಕೊಂಡಾಗೆಲ್ಲ, ಇಂತಹ ಕಥೆ- ಕವನಗಳನ್ನು ಓದಿದಾಗೆಲ್ಲ ಬಹಳ ಸಂಕಟವಾಗುತ್ತದೆ.

    ಪ್ರತಿಕ್ರಿಯೆ
  5. ರಾಧಿಕಾ

    ಕಣ್ತುಂಬಿ ಬಂತು ಸರ್. ವೇಷ ಭೂಷಣಗಳ ಕಟ್ಟುಪಾಡು ಸಡಿಲವಾಗಿದ್ದು ಬಿಟ್ಟರೆ, ಬಹುತೇಕ ನೊಂದ ಮಹಿಳೆಯರ ಬದುಕು ಈಗಲೂ ಭಿನ್ನವಾಗಿಲ್ಲ ಸರ್.

    ಪ್ರತಿಕ್ರಿಯೆ
  6. usha

    “ತಿದ್ದಿದಳು ಕನ್ನಡಿ ಮೇಲೆ ದುಂಡಗೆ ಹೊಳೆದ ಸೂರ್ಯನ್ನ”
    ಕನ್ನಡಿ ಮೇಲೆ ತಿದ್ದಲೂ ಕಷ್ಟವಾಗಿದ್ದ ಕಾಲ ಅದು!
    ಎಲ್ಲರ ಕಣ್ಣು ತೊಯಿಸಿ ಬಿಟ್ಟಿರಿ ನಿಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿ.

    ಪ್ರತಿಕ್ರಿಯೆ
  7. Shalinisudhir

    ಎಚ್ಚೆಸ್ವಿ ಬರವಣಿಗೆಯಲ್ಲಿ ಒಬ್ಬ ಕಾಣದ ಮಾವನಿಗಾಗಿ ನಾಯಕ ಕಾಯುವ ಅನೇಕ ಪ್ರಸಂಗಗಳಿವೆ. ಸಾಮಾನ್ಯವಾಗಿ ಅವನನ್ನು ಮದ್ರಾಸ್ಮಾವ ಎಂದು ಕರೆಯಲಾಗುತ್ತದೆ. ಮತ್ತೊಂದು ಮಳೆಗಾಲ ಆ ಮದ್ರಾಸ್ಮಾವನ ಬಗ್ಗೆ ಹೊಸ ಬೆಳಕು ಚೆಲ್ಲುವಂತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: