ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಆ ನೋವು ನನ್ನ ಎದೆಯೊಳಗೆ ತುಂಬಿಕೊಳ್ಳತೊಡಗಿತು

ಎಚ್ ಎಸ್ ವೆಂಕಟೇಶ ಮೂರ್ತಿ ನಾವು ಬನಶಂಕರಿಯ ಮನೆಯಲ್ಲಿ ಇದ್ದ ವರ್ಷ. ೧೯೯೧ನೇ ಇಸವಿ. ನನ್ನ ಕೊನೆಯ ಮಗ ಸಂಜಯ ಇನ್ನೂ ಚಿಕ್ಕವನು. ಅವನ ಆಸಕ್ತಿಗಳು ಅನೇಕ. ಪಾರಿವಾಳಗಳಿಗಾಗಿ ಒಂದು ಗೂಡು. ಅಲ್ಲಿ ಪಾರಿವಾಳ ಸಾಕಾಣಿಕೆ. ಒಂದು ಬಿಳೀ ಮೊಲ. ಮೀನಿನ ಒಂದು ಅಕ್ವೇರಿಯಮ್. ಇಷ್ಟು ಸಾಲದು ಎಂಬಂತೆ ಒಂದು ದಿನ ತನ್ನ ಗೆಳೆಯನ ಮನೆಯಲ್ಲಿ ಹೊಸದಾಗಿ ಹುಟ್ಟಿದ ನಾಯಿ ಮರಿಯೊಂದನ್ನು ಎತ್ತಿಕೊಂಡು ಬಂದು ಬಿಟ್ಟ. ಇದನ್ಯಾಕೋ ತಂದೆ ಅಂದರೆ-ಇದು ಜಾತಿ ನಾಯಿ ಅಣ್ಣಾ..ಡ್ಯಾಶ್ ಹಾಂಡ್ ಅಂತ. ಮಾರುಕಟ್ಟೆಯಲ್ಲಿ ಇದರ ಬೆಲೆ ಸಾವಿರ ರುಪಾಯಿ. ನನ್ನ ಫ್ರೆಂಡ್ ನನಗೆ ಇದನ್ನ ಬರ್ತ್ ಡೇ ಗಿಫ್ಟ್ ಆಗಿ ಕೊಟ್ಟಿದ್ದಾನೆ-ಎಂದು ಹಲ್ಲು ಕಿರಿದ. ಗಿಫ್ಟ್ ಆಗಿ ಬಂದದ್ದನ್ನ, ಅದೂ ಬರ್ತ್ ಡೇ ಗಿಫ್ಟ್ ಆಗಿ ಬಂದದ್ದ ಹ್ಯಾಗೆ ಮನೆಯ ಆಚೆ ಓಡಿಸೋದು? ಮೇಲೆ ಜಾತಿನಾಯಿ ಅಂತ ಬೇರೆ ಹೇಳುತಾ ಇದ್ದಾನೆ. ಮರಿ ಚೆನ್ನಾಗಿದೆ… ಇರಲಿ…ಇರಲಿ ಅಂತ ಉಳಿದ ಮಕ್ಕಳೂ ದುಂಬಾಲು ಬಿದ್ದರು. ಇದ್ದುಕೊಂಡು ಹೋಗಲಿ ಅಂತ ನಾನೂ ಸುಮ್ಮನಾಗಿಬಿಟ್ಟೆ. ಮರಿ ಅರ್ಧ ಅಡಿ ಎತ್ತರ; ಒಂದಡಿ ಉದ್ದ ಇತ್ತು. ಹೊಟ್ಟೆಯನ್ನು ನೆಲಕ್ಕೆ ತಾಕಿತೋ ತಾಕಲಿಲ್ಲವೋ ಎಂಬಂತೆ ತೇಲಿಸಿಕೊಂಡು ಹೋಗುತ್ತಿದ್ದ ಮರಿಗೆ ಕಪ್ಪು ವೆಲ್ವೆಟ್ ಬಟ್ಟೆಯ ಮಿರಿಮಿರಿ ಜಾರು ಬಣ್ಣ. ಹೊಟ್ಟೆಯ ಕೆಳಗೆ ಬಂಗಾರದ ಪಟ್ಟಿ. ಹಣೆಯ ಮೇಲೆ ಒಂದು ಹಳೂದಿ ಚುಕ್ಕಿ. ಮಗ ಅದಕ್ಕೆ ರೂಬಿ ಎಂದು ನಾಮಕರಣ ಮಾಡಿದ. ಕರ್ಕಿ ಎಂದಿದ್ದರೆ ಚೆನ್ನಾಗಿತ್ತು ಅಂತ ನಾನು. ಥೂ..! ರೂಬಿ ಚೆನ್ನಾಗಿದೆ ಬಿಡಿ! ಎಂದು ನನ್ನ ಹೆಂಡತಿ ಮಧ್ಯೆ ಬಾಯಿಹಾಕಿದಳು. ಇನ್ನೂ ತಿಂಗಳೂ ತುಂಬಿರದ ಈ ರೂಬಿ ಮಹಾ ಉಚ್ಚೆಬುರುಕಿ. ಮನೆಯ ತುಂಬ ಒದ್ದೆ ಮಾಡುತ್ತಾ, ಅದಕ್ಕಿಂತ ಬೇರೆ ಉದ್ದೇಶವೇ ತನಗೆ ಇಲ್ಲ ಎಂಬಂತೆ ಪುಷ್ಠ ತಿರುವಿಕೊಂಡು ಓಡಾಡುತ್ತಾ ಇದ್ದಳು! ಮೊದಲೆರಡು ದಿನ ರಾತ್ರಿಯೆಲ್ಲಾ ಅದರ ಗೋಳಾಟ ಕೇಳಿಲಿಕ್ಕಿಲ್ಲ. ಮೂರನೇ ದಿನ ನಮ್ಮ ಮನೆ ಮತ್ತು ಮಕ್ಕಳಿಗೆ ಹೊಂದಿಕೊಂಡವಳು ಸಖತ್ ಚಿನ್ನಾಟ ಶುರುಮಾಡಿದಳು. ಠಣ್ ಠಣ್ ಅಂತ ನಮ್ಮ ಸೊಂಟದ ಎತ್ತರ ಅವಳು ಹಾರುತ್ತಾ ಇದ್ದರೆ ಅವಳ ಮೋಟು ಕಾಲುಗಳು ಎಲ್ಲಿ ಮುರಿದೇ ಹೋಗುತ್ತವೆಯೋ ಎಂದು ನನಗೆ ಭಯವಾಗುತಾ ಇತ್ತು. ಮೊದಲ ತಿಂಗಳು ತನ್ನ ಮಡಿಯ ದೆಸೆಯಿಂದ ಮರಿಯನ್ನು ದೂರದಿಂದಲೇ ಮಾತಾಡಿಸುತ್ತಾ ಇದ್ದ ನನ್ನ ಪತ್ನಿ ಅದ್ಯಾವ ಮಾಯದಲ್ಲೋ ರೂಬಿಯ ಮೋಡಿಗೆ ಒಳಗಾಗಿ ಮೆಲ್ಲಗೆ ತನ್ನ ಮಡಿಯನ್ನ ಸಡಿಲ ಮಾಡತೊಡಗಿದಳು. ಮುಟ್ಟಿ ಕೈತೊಳೆದುಕೊಳ್ಳುವುದು ಪ್ರಾರಂಭದಲ್ಲಿ. ಕ್ರಮೇಣ ತೊಡೆಯ ಮೇಲೆ ಮಲಗಿಸಿಕೊಳ್ಳೋದು. ಆಮೇಲೆ ಹೆಗಲ ಮೇಲೆ ಕೂಡಿಸಿಕೊಂಡು ಓಡಾಡೋದು ಶುರುವಾಯಿತು. ರೂಬಿಯ ದೆಸೆಯಿಂದ ನಮ್ಮ ನಂಟರು ಕೆಲವರು ನಮ್ಮ ಮನೆಯ ಕಡೆ ಸುಳಿಯುವುದನ್ನೂ ನಿಲ್ಲಿಸಿದರು. ಮಡಿಯಿಲ್ಲ, ಹುಡಿಯಿಲ್ಲ, ನಾಯಿಮರಿಯನ್ನ ಅಡುಗೆ ಮನೆಗೂ ಬಿಟ್ಟುಕೊಳ್ಳುತ್ತಾರೆ! ಅಸಹ್ಯವಾಗುತ್ತಪ್ಪಾ ನಮಗೆ. ನಾಳೆ ಆ ನಾಯಿ ದೇವರ ಮನೆಗೂ ಹೋಗಬಹುದು…ಯಾವುದಕ್ಕೂ ಒಂದು ಇತಿಮಿತಿ ಇರಬೇಕುರೀ..ಎಂದು ನಮ್ಮ ಹತ್ತಿರದ ಬಂಧುಗಳೂ ನಮ್ಮಲ್ಲಿಗೆ ಬರುವುದನ್ನು ನಿಲ್ಲಿಸಿದರು. ಅಂಥವರು ಮನೆಗೆ ಬರದಿದ್ದರೇ ಒಳ್ಳೆಯದು ಬಿಡಿ ಎಂದಳು ನನ್ನ ಹೆಂಡತಿ! ನಮಗೆ ಇದ್ದದ್ದು ಬರೀ ಗಂಡುಮಕ್ಕಳು. ಹಾಗಾಗಿ ಈ ಹುಡುಗಿ ಮನೆಗೆ ಬಂದದ್ದು ಮನಸ್ಸಿನ ಮೂಲೆಯಲ್ಲಿದ್ದ ಒಂದು ಆಸೆಯ ತೀರುವಳಿಯಾಯಿತೇನೋ ಅನ್ನುವಂತೆ ರೂಬಿಯನ್ನು ನಾವೆಲ್ಲಾ ತುಂಬಾ ಹಚ್ಚಿಕೊಂಡೆವು. ರೂಬಿ ಹೇಳೀ ಕೇಳಿ ಜಾತಿನಾಯಿ. ಅಂದಮೇಲೆ ಅದಕ್ಕೆ ತಕ್ಕ ಉಪಚಾರವೂ ಅದಕ್ಕೆ ಆಗಲೇಬೇಕಲ್ಲ. ಜಯನಗರದಲ್ಲಿ ಇದ್ದ ಡಾಗ್ ಕೇರ್ ಸೆಂಟರ್ನಲ್ಲಿ ನಮ್ಮ ರೂಬಿಯ ಹೆಸರನ್ನು ರಿಜಿಸ್ಟರ್ ಮಾಡಿಸಿದೆವು. ಅದಕ್ಕೆ ಕೊಡಬೇಕಾದ ಇಂಜಕ್ಷನ್ ಇತ್ಯಾದಿ ಕೊಡಿಸಿದ್ದಾಯಿತು. ತಿಂಗಳಿಗೊಮ್ಮೆ ಅದರ ಹೆಲ್ತ್ ಚೆಕಪ್ಗೆ ರೂಬಿಯನ್ನು ಕಾರಲ್ಲಿ ಕೂಡಿಸಿಕೊಂಡು ನಾವು ಜಯನಗರದ ಕಡೆ ಹೋಗಿಬರುವುದು ಪ್ರಾರಂಭವಾಯಿತು. ಡಾಗ್ ಕೇರ್ ಸೆಂಟರ್ಗೆ ಹೋಗ ತೊಡಗಿದ ಮೇಲೇ ನನಗೆ ನಾನಾ ಬಗೆಯ ನಾಯಿಗಳ ಪರಿಚಯವಾದದ್ದು. ಅದೆಷ್ಟು ವೈವಿಧ್ಯ ಆ ನಾಯಿಗಳ ಬ್ರೀಡ್ನಲ್ಲಿ. ಅವನ್ನು ಡಾಕ್ಟರ್ ಬಳಿ ಕರೆದು ತರುವವರು ಅವುಗಳ ಬಗ್ಗೆ ವಹಿಸುವ ಕಾಳಜಿ ಅದೆಷ್ಟು ತೀವ್ರವಾದದ್ದು! ಸಣ್ಣ ಮರಿಗಳ ಚಿನ್ನಾಟ; ಮುಪ್ಪುಹಿಡಿದ ನಾಯಿಗಳ ಕಣ್ಣು ಕಿವಿ ನಡಗೆಯ ಸಮಸ್ಯೆ. ಅವುಗಳ ನಾನಾ ಬಗೆಯ ಕಾಯಿಲೆಗಳು. ತುರ್ತು ಚಿಕಿತ್ಸೆಗಳು. ಕೆಲವಕ್ಕೆ ಗ್ಲೂಕೋಸ್ ಡ್ರಿಪ್ ಹಾಕುವುದು. ಕೆಲವಕ್ಕೆ ಓಟಿಯಲ್ಲಿ ಆಪರೇಷನ್. ಮತ್ತೆ ಕೆಲವರು ನಾಯಿಗಳನ್ನು ಕೂಡಿಕೆಗೆ ತರುವವರು. ವರಾನ್ವೇಷಣೆ..ಕನ್ಯಾನ್ವೇಷಣೆ…ಬಸುರಿ…ಬಾಣಂತನ…ಒಂದೇ ..ಎರಡೇ…?ಮನುಷ್ಯ ಜಗತ್ತಿನ ಎಲ್ಲ ಏರುಪೇರುಗಳೂ ಅಲ್ಲೂ ಇದ್ದವು. ಪೆಟ್ ಡಾಗ್ಗಳನ್ನು ಮನೆಯ ಮಕ್ಕಳ ಹಾಗೇ ನೋಡಿಕೊಳ್ಳುವ ಪೋಷಕರನ್ನು ನೋಡಿದಾಗ ಹೃದಯ ತುಂಬಿ ಬರುತಿತ್ತು. ನನಗೆ ಪರಿಚಯವಿರುವ ಕೆಲವರ ನಾಯಿಗಳ ವಿಷಯವನ್ನೇ ಹೇಳುತ್ತೇನೆ. ನಮ್ಮ ಅಡಿಗರ ಮನೆಯಲ್ಲಿ ಪುಟ್ಟ ಎಂಬ ನಾಯಿಯಿತ್ತು. ಪಾಮರಿನ್ ಜಾತಿಯದು. ಅದು ಅಪರಿಚಿತರು ಯಾರಾದರೂ ಮನೆಗೆ ಹೋದಾಗ ಭೂಚಕ್ರ ಹಚ್ಚಿಟ್ಟಂತೆ ಗಿರ್ರನೆ ತಿರುಗುತಾ ಇತ್ತು. ಭಿಕ್ಷುಕರನ್ನು ನೋಡಿದರೆ ಮಾತ್ರ ಬಗುಳುತಿತ್ತು. ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದವರಿಗೆ ಕಾಲು ಮೂಸಿ ಸ್ವಾಗತ ಬಯಸುತಿತ್ತು. ಪಪ್ಪಾಯಿ ಹಣ್ಣೆಂದರೆ ಅದಕ್ಕೆ ಪ್ರಾಣ! ಅದರ ಜಾಣತನವನ್ನು ಅಡಿಗರು ಮನೆಗೆ ಬಂದವರ ಮುಂದೆಲ್ಲಾ ವರ್ಣಿಸಿ ವರ್ಣಿಸಿ ಆನಂದಪಡುತ್ತಿದ್ದರು. ನಾವು ಅಡಿಗರ ಮನೆಗೆ ಹೋದಾಗ ಸಾಹಿತ್ಯ ಚರ್ಚೆಗಿಂತ ಅವರ ನಾಯಿ ಪುಟ್ಟ, ಮತ್ತು ಅವರ ಮನೆಯಲ್ಲಿ ಬೀಡುಬಿಟ್ಟಿದ್ದ ಮೂರುನಾಕು ಬೆಕ್ಕುಗಳ ಬಗ್ಗೆಯೇ ಅಡಿಗರು ಹೆಚ್ಚು ಮಾತಾಡುತ್ತಿದ್ದರು. ನಾಡಿಗರ ಮನೆಯಲ್ಲಿ ಇದ್ದ ನಾಯಿಯನ್ನು ರಾಣಿ ಎಂದು ಕರೆಯುತ್ತಿದ್ದರು. ಕಪ್ಪುಬಣ್ಣದ ನಾಯಿ. ರಾತ್ರಿ ಅವರ ಹಾಸಿಗೆಯಲ್ಲೇ ಮಲಗುತ್ತಿದ್ದ ರಾಣಿಯನ್ನು ನಾಡಿಗರು ಸ್ನೇಹಿತರಿಗೆ ತಮ್ಮ ಮಗಳು ಎಂದೇ ಪರಿಚಯಿಸುತ್ತಿದ್ದರು. ಶರ್ಮರ ಮನೆಯಲ್ಲಿ ನಾಯಿಯಿತ್ತು. ಸಿಂಹ ಅವರ ಮನೆಯಲ್ಲಿ ಇದ್ದ ನಾಯಿಯಂತೂ ನಮ್ಮ ಸೊಂಟದ ಎತ್ತರದ್ದು. ಅದನ್ನು ನೋಡಿದರೇ ಭಯವಾಗುತ್ತಿತ್ತು. ಪಾಪ. ನೋಡೋಕೆ ಹಾಗೆ ಭಯಾನಕವಾಗಿದ್ದರೂ ತುಂಬಾ ಮುದ್ದು ನಾಯಿ. ನನ್ನ ಸೊಸೆ ಸುಮಾನ ತಾಯಿಯ ಮನೆಯಲ್ಲಿ ಒಂದಲ್ಲ ಎರಡು ನಾಯಿಗಳಿವೆ. ಅವುಗಳ ಕೂಗಾಟ ಹೇಳತೀರದು. ಒಂದು ಸಾಕಲ್ಲ? ಎರಡು ನಾಯಿಗಳನ್ನ ಯಾಕೆ ಇಟ್ಟುಕೊಂಡಿದ್ದೀರಿ? ಎಂದರೆ ಎರಡೂ ನಮ್ಮನ್ನು ತುಂಬಾ ಹಚ್ಚಿಕೊಂಡುಬಿಟ್ಟಿವೆ. ಅವೂ ಒಂದನ್ನು ಬಿಟ್ಟು ಒಂದು ಇರಲಾರವು- ಎನ್ನುವ ಉತ್ತರ ಬರುತ್ತದೆ. ನಮ್ಮ ಬಿಆರೆಲ್ ಮನೆಯಲ್ಲಿ ಜರ್ಮನ್ ಶೆಪರ್ಡ್ ನಾಯಿಯಿತ್ತು. ನನಗೆ ಅಭ್ಯಾಸವಾಗಿದ್ದುದರಿಂದ ನನ್ನ ತಂಟೆಗೆ ಅದು ಬರುತ್ತಾ ಇರಲಿಲ್ಲ. ಒಮ್ಮೆ ನೋಡಿ ನೀನೊಂದು ಯಕಸ್ಚಿತ್ ಪ್ರಾಣಿ ಎನ್ನುವಂತೆ ತನ್ನ ಪಾಡಿಗೆ ತಾನು ಹಿತ್ತಲಿಗೆ ಹೋಗಿಬಿಡುತ್ತಾ ಇತ್ತು. ನಮ್ಮ ಮನೆಗೆ ರೂಬಿ ಬಂದಮೇಲೆ ಬೇರೆಯವರ ಮನೆಗಳ ನಾಯಿಗಳ ಬಗ್ಗೆ ನನಗೆ ಭಯ ಕಡಿಮೆ ಆಯಿತು. ನನ್ನ ಮೈಗೆ ರೂಬಿಯ ವಾಸನೆ ಹತ್ತಿರುವುದರಿಂದಲೋ ಏನೋ ಬೇರೆ ನಾಯಿಗಳೂ ನನ್ನ ಬಗ್ಗೆ ಒಂದು ಬಗೆಯ ಮಮಕಾರವನ್ನೇ ತೋರಿಸುತ್ತಾ ಇದ್ದವು. ನರಹಳ್ಳಿಯ ಮನೆಯ ಆಲ್ಶೇಷನ್ ಆಗಲೀ, ಜಯಶ್ರೀ ಅರವಿಂದರ ಮನೆಯ ಜುಗುಳಬಂದಿ ಜಾತಿನಾಯಿಗಳಾಗಲೀ, ಅಶ್ವತ್ಥರ ಮನೆಯ ಎರಡು ಪಾಮರಿನ್ ನಾಯಿಗಳೇ ಆಗಲೀ ನನ್ನನ್ನು ನೋಡಿದಾಗ ಮುದ್ದುಮಾಡಲಿಕ್ಕೆ ಬರುತ್ತವೆ. ಅಂಗಾಲು ತಣ್ಣಗೆ ಬೆಚ್ಚಗೆ ನೆಕ್ಕುತ್ತಾ ಕಚಗುಳಿ ಇಡುತ್ತವೆ. ನನ್ನ ಬೆವರಿನ ಮೂಲಕ ತಾವು ನೋಡಿಯೇ ಇರದ ಬೇರೆವೊಂದು ನಾಯಿಯ ಪ್ರಪಂಚವನ್ನು ಕಲ್ಪಿಸುತ್ತಾ ಅವು ಒಂದು ಬಗೆಯ ತಾದಾತ್ಮ್ಯಭಾವವನ್ನು ಅನುಭವಿಸುತ್ತವೆಯೋ ಏನೋ…! ದಿನೇ ದಿನೇ ಬಣ್ಣತಿರುಗುತ್ತಾ ನಮ್ಮ ರೂಬಿ ಓರ್ವ ವರ್ಚಸ್ವೀ ಚೆಲುವೆಯಾಗಿ ಬೆಳೆದಳು. ಬೆಳಿಗ್ಗೆ ಹಾಲು ಮೊಟ್ಟೆ. ಮಧ್ಯಾಹ್ನ ಹಾಲು ಅನ್ನ. ಸಂಜೆ ಸೌತೇಕಾಯಿ ಕೋಸಂಬರಿ. ರಾತ್ರಿ ಹಾಲು.ಮಹಾ ಕ್ಲೀನುಗಾತಿಯಾದ ರೂಬಿ ತನ್ನ ಊಟದ ತಟ್ಟೆಯನ್ನ ಥಳ ಥಳ ತೊಳೆಯದೇ ಮುಸುರೆ ಬಟ್ಟಲಿಗೆ ಊಟ ಹಾಕಿದರೆ ಅದನ್ನು ಮೂಸಿನೋಡಿ, ಸುಮ್ಮಗೆ ದೂರ ಹೋಗಿಬಿಡುತ್ತಿದ್ದಳು! ಮಕ್ಕಳೆಂದರೆ ರೂಬಿಗೆ ತುಂಬ ಪ್ರೀತಿ. ನನ್ನ ಮೊದಲ ಮೊಮ್ಮಗಳು ಸೌಖ್ಯ ಹುಟ್ಟಿದ್ದಳು. ಅವಳು ರೂಬಿಯ ಬಾಲ ಹಿಡಿದು ಎಳೆದಾಡಿದರೂ ಸುಮ್ಮನೆ ಗುರುಗುಟ್ಟುವಳೇ ವಿನಾ ಮಗುವಿಗೆ ಬಾಯಿ ಹಾಕಿದವಳಲ್ಲ. ಅದೇ ದೊಡ್ಡವರು ಅವಳ ಬಾಲ ಮುಟ್ತಿದರೆ ಗು ಎಂದು ಮುಕ್ಕಾಲು ಮೂತಿ ವರೆಗೆ ಹಲ್ಲು ಕಿಸಿದು ತನ್ನ ಕೋಪವನ್ನ ಪ್ರದರ್ಶಿಸುತ್ತಾ ಇದ್ದಳು. ಒಂದು ದಿನ ನಾನು ಸಂಜೆ ಕಾಲೇಜಿಂದ ಬಂದಾಗ ನನ್ನ ಹೆಂಡತಿ ಒದ್ದೆ ಬಟ್ಟೆ ಮಾಡಿಕೊಂಡು ನೆಲ ಒರೆಸುತ್ತಾ ಇದ್ದಳು. ಯಾಕೆ ಇಷ್ಟು ಹೊತ್ತಲ್ಲಿ ನೆಲ ವರೆಸುತ್ತಾ ಇದ್ದೀ? ಎಂದೆ. ರೂಬಿ ದೊಡ್ಡವಳಾಗಿದ್ದಾಳೆ. ಒಂದು ಕಡೇ ಸುಮ್ಮನೆ ಕೂಡುವುದು ಅವಳಿಗೆ ಸಾಧ್ಯವೇ? ಮನೆಯೆಲ್ಲಾ ಕಲೆ ಮಾಡುತ್ತಾಳೆ. ಏನು ಮಾಡುವುದು ಎಂದಳು ನನ್ನ ಪತ್ನಿ ಕಕ್ಕುಲಾತಿಯಿಂದ. ಅದಕ್ಕೇ ಯಾರೂ ಹೆಣ್ಣು ನಾಯಿಯನ್ನು ಸಾಕುವುದಿಲ್ಲ. ಗಂಡು ನಾಯಿಯಾಗಿದ್ದರೆ ಈ ಫಜೀತಿ ಇರುತ್ತಿತಲಿಲ್ಲ ಎಂದೆ ನಾನು. ನನ್ನ ಹೆಂಡತಿ ಹಾಗನ್ನ ಬೇಡಿ…ಪಾಪ…ಎಲ್ಲ ಪ್ರಕೃತಿಧರ್ಮ ಅಲ್ಲವಾ? ಎಂದು ರೂಬಿಯ ಪಕ್ಷಹಿಡಿದು ಮಾತಾಡಿದಳು. ಪ್ರಾಯದ ಕಾವು ರೂಬಿಯ ನಡಾವಳಿಯನ್ನು ವಿಚಿತ್ರವಾಗಿಸಿತ್ತು. ಯಾರ ಕಾಲು ಸಿಕ್ಕರೂ ಅಡರಿಕೊಂಡು ಅವಳು ಲೈಂಗಿಕ ಚೇಷ್ಟೆಗೆ ತೋಡಗುತ್ತಿದ್ದರೆ ಕೆಲವು ಬಾರಿ ಅವಳ ಬಗ್ಗೆ ಕೋಪ ಬರುತ್ತಾ ಇತ್ತು. ಕೆಲವು ಬಾರಿ ಅಯ್ಯೋ ಪಾಪ ಅನ್ನಿಸುತ್ತಾ ಇತ್ತು. ಮಕ್ಕಳೆದುರು ಅಥವಾ ಯಾರಾದ್ರೂ ಅತಿಥಿಗಳು ಬಂದಾಗ ರೂಬಿ ಬಂದವರ ಕಾಲು ಅಡರು ಲೈಂಗಿಕ ಚೇಷ್ಟೆಗೆ ತೋಡಗಿದರೆ ನಮಗೆ ತುಂಬ ಮುಜುಗರವಾಗುತ್ತಿತ್ತು. ಅದನ್ನು ಕಟ್ಟಿಯಾದರೂ ಹಾಕು ಎಂದರೆ..ಹೆಂಡತಿ…ಪಾಪ..ಅವಳಿಗೆ ಅದೆಲ್ಲಾ ಏನು ಗೊತ್ತಾಗತ್ತೆ? ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಜೋಡಿಕೂಡಿಸಿಕೊಂಡು ಬನ್ನಿ ಎಂದಳು . ಒಂದೆರಡು ಬಾರಿ ಪ್ರಯತ್ನಿಸಿದ್ದಾಯಿತು. ರೂಬಿಗೆ ಸರಿಯಾದ ಅದರದೇ ಜಾತಿಯ ಮೇಟ್ ಸಿಗದೆ ನಮ್ಮ ಪ್ರಯತ್ನ ವ್ಯರ್ಥವಾಯಿತು. ಅದಕ್ಕಾಗಿ ಮತ್ತೆ ಮತ್ತೆ ಅವಳನ್ನು ಡಾಕ್ಟರ್ ಬಳಿ ಕರೆದೊಯ್ಯುವಷ್ಟು ವ್ಯವಧಾನವೂ ನಮಗೆ ಇರಲಿಲ್ಲ. ಅವಳಿಗೆ ಅವಳ ದೇಹ ಬಯಸುವ ಅದರದ್ದೇ ಅಗತ್ಯಗಳಿವೆ ಎಂಬುದರ ಕಲ್ಪನೆಯೇ ನಮಗಿರಲಿಲ್ಲ. ಇದ್ದರೂ ಅದರ ತೀವ್ರತೆ ನಮ್ಮ ಅರಿವಿಗೆ ಬರುವುದು ಸಾಧ್ಯವಿರಲಿಲ್ಲ. ರೂಬಿ ತನ್ನ ಯೌವನವನ್ನು ಹೀಗೆ ನಿಷ್ಫಲವಾಗಿ ಕಳೆದು ನಿಧಾನಕ್ಕೆ ಮುದುಕಿಯಾಗ ತೊಡಗಿದಳು. ಬರುಬರುತ್ತಾ ಅವಳ ಜಿಗಿದಾಟ ಚಿನ್ನಾಟ ಕಡಿಮೆಯಾಗತೊಡಗಿತು. ಊಟದ ಆಸಕ್ತಿ ಕೂಡ. ಹೆಚ್ಚುತಿಂದರೆ ಅರಗದೆ ಅಜೀರ್ಣವಾಗುತ್ತಾ ಇತ್ತು. ಡಾಕ್ಟರ್ ಅದಕ್ಕೆ ತಕ್ಕ ಔಷಧೋಪಚಾರ ಮಾಡಿದರು. ವಾಂತಿ ಭೇದಿ ಶುರುವಾದಾಗ ಎರಡು ಬಾರಿ ಡ್ರಿಪ್ ಹಾಕಿಸಿಕೊಂಡು ಬಂದೆವು. ಹುಡುಗರು ಓದಿನಲ್ಲಿ, ನಾನು ಕಾಲೇಜಿನ ಕೆಲಸದಲ್ಲಿ ಕಳೆದು ಹೋಗಿದ್ದೆವು. ರೂಬಿಯ ಬಗ್ಗೆ ಈಗ ಕಕ್ಕುಲಾತಿಪಡುವವರು ನನ್ನ ಹೆಂಡತಿ ಮತ್ತು ಸೊಸೆ ಮಾತ್ರ. ಅವರು ಅವಳನ್ನು ಡಾಕ್ಟರ್ ಬಳಿ ಕರೆದೊಯ್ಯುವುದು ಕಷ್ಟವಾಗುತ್ತಿತ್ತು. ಕೆರೆಕೋಡಿಯ ಬಳಿಯೇ ಒಬ್ಬರು ನಿವೃತ್ತ ಪಶುವೈದ್ಯರು ಇದ್ದರು. ಅವರು ವಾರಕ್ಕೊಮ್ಮೆ ಮನೆಗೆ ಬಂದು ರೂಬಿಯನ್ನು ನೋಡಿಕೊಂಡು ಹೋಗುತ್ತಾ ಇದ್ದರು. ಒಂದು ದಿನ ನಾನು ಕಾಲೇಜಿಂದ ಬಂದಾಗ ಹೆಂಡತಿ ರೂಬಿಯನ್ನು ತೊಡೆಯ ಮೇಲೆ ಹಾಕಿಕೊಂಡು ಅಳುತ್ತಾ ಕೂತಿದ್ದಳು. ಏನು ವಿಷಯ ಎಂದೆ. ರೂಬಿ ಬೆಳಗಿನಿಂದ ಕಣ್ಣೇ ಬಿಡುತ್ತಿಲ್ಲ. ಸುಮ್ಮನೆ ನರಳುತ್ತಾ ಇದ್ದಾಳೆ-ಎಂದಳು. ನಾನು ಸೊಸೆಯನ್ನು ಜೊತೆಮಾಡಿಕೊಂಡು ಗಿರಿನಗರದಲ್ಲಿ ಹೊಸದಾಗಿ ಪರಿಚಯವಾಗಿದ್ದ ವೈದ್ಯರ ಬಳಿಗೆ ರೂಬಿಯನ್ನು ಕರೆದೊಯ್ದೆ. ಡಾಕ್ಟರ್ ರೂಬಿಯನ್ನು ಪರೀಕ್ಷೆಮಾಡಿ ಇವಳಿಗೆ ಲಿವರ್ ಡ್ಯಾಮೇಜ್ ಆಗಿದೆ. ಏನೂ ತಿನ್ನಲಾರಳು. ಅರಗಿಸಿಕೊಳ್ಳಲಾರಳು. ಡ್ರಿಪ್ ಹಾಕುತ್ತೇನೆ. ನೋಡೋಣ. ಒಂದೆರಡು ದಿನದಲ್ಲಿ ಚೇತರಿಸಿಕೊಂಡರೂ ಚೇತರಿಸಿಕೊಳ್ಳಬಹುದು ಎಂದರು. ರೂಬಿಗೆ ಡ್ರಿಪ್ ಹಾಕಿಸಿಕೊಂಡು ಮನೆಗೆ ಕರೆತಂದೆವು. ಮನೆಯಲ್ಲಿ ಒಂದು ಮಂಕು ವಾತಾವರಣ ಕವಿಯಿತು. ರೂಬಿ ಸುಮ್ಮನೆ ಸುತ್ತಿಕೊಂಡು ಮಲಗಿರುತ್ತಾ ಇದ್ದಳು. ಕೂಗಿದರೆ ಕಷ್ಟಪಟ್ಟು ಕಣ್ಣುಬಿಟ್ಟು ಒಮ್ಮೆ ನೋಡಿ ಮತ್ತೆ ಕಣ್ಣುಮುಚ್ಚಿಕೊಳ್ಳುತ್ತಿದ್ದಳು. ಧ್ವನಿಯ ಮೇಲೆ ಇಂಥವರು ಎಂದು ಗುರುತು ಹಿಡಿದು ಮೆಲ್ಲಗೆ ಬಾಲ ಆಡಿಸಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಇದ್ದಳು. ಮೂರು ದಿನಗಳು ಹೀಗೆ ಕಳೆದವು. ಮತ್ತೆ ಬೆಳಿಗ್ಗೆಯಿಂದ ರೂಬಿ ಕಣ್ಣೇಬಿಟ್ಟಿಲ್ಲ ಎಂದು ಸಂಜೆ ನಾನು ಮನೆಗೆ ಬಂದಾಗ ಹೆಂದತಿ ಹೇಳಿದಳು. ಅತ್ತೂ ಅತ್ತೂ ಅವಳ ಕಣ್ಣು ಕೆಂಪಾಗಿತ್ತು. ಹಿರೀಸೊಸೆ ರೂಬಿಯನ್ನು ಎತ್ತಿಕೊಂಡು ಕಾರಿನ ಹಿಂಬದಿಯ ಸೀಟಿನಲ್ಲಿ ಕೂತಳು. ನಾನು ಕಾರನ್ನು ಗಿರಿನಗರದ ಡಾಕ್ಟರ್ ಬಳಿ ಓಡಿಸಿದೆ. ಡಾಕ್ಟರ್ ರೂಬಿಯ ಅಂತಿಮ ಕ್ಷಣ ಸಮೀಪಿಸಿದೆ. ಅವಳು ಭಯಂಕರವಾದ ನೋವು ಅನುಭವಿಸುತ್ತಿದ್ದಾಳೆ. ಆದರೆ ಕೂಗುವುದಕ್ಕೂ ಅವಳಿಗೆ ಶಕ್ತಿಯಿಲ್ಲವಾಗಿದೆ. ಹೀಗೇ ಅವಳು ಸಂಕಟಪಡುತ್ತಾ ತಿಂಗಳುಗಟ್ಟಳೆ ಬದುಕಿರುವುದಕ್ಕಿಂತ ಅವಳಿಗೆ ಇಂಜಕ್ಷಣ್ ಕೊಟ್ಟು ಮುಕ್ತಿ ನೀಡುವುದು ಒಳ್ಳೆಯದು ಎಂದರು. ಎದೆ ಝಲ್ಲೆಂದಿತು ನನಗೆ. ನಾವಾಗೇ ಅವಳನ್ನು ಕೊಲ್ಲುವುದಕ್ಕೆ ಮುಂದಾಗುವುದೇ. ಬೇಡ ಮಾವ..ಎಂದು ಸೊಸೆ ಅಳತೊಡಗಿದಳು. ಅವಳ ಸಂಕಟ ನೀವು ನೋಡುವುದು ಕಷ್ಟ..ನೋವು ಇನ್ನೂ ಉಲ್ಬಣಿಸಿದಾಗ ರಾತ್ರಿಯಿಡೀ ಅವಳು ಗೋಳಾಡುತ್ತಾಳೆ. ಅದು ಬದುಕೂ ಅಲ್ಲ; ಸಾವೂ ಅಲ್ಲ. ಯಾಕೆ ಅವಳನ್ನು ಇಟ್ಟುಕೊಂಡು ಹೀಗೆ ಚಿತ್ರಹಿಂಸೆ ಕೊಡುತ್ತೀರಿ? ಎಂದರು ವೈದ್ಯರು. ಅವರ ಧ್ವನಿಯೂ ಅನುಕಂಪದಿಂದ ಭಾರವಾಗಿತ್ತು. ಆ ನೋವಿನಲ್ಲೂ ಡಾಕ್ಟರ್ ಹತ್ತಿರ ಬಂದರೆ ರೂಬಿ ಸಿರ್ ಎನ್ನುತ್ತಿದ್ದಳು. ನೀವು ಅವಳನ್ನು ಎತ್ತಿಕೊಳ್ಳಿ ಎಂದರು ವೈದ್ಯರು. ನಾನು ಎತ್ತಿಕೊಂಡಾಗ ರೂಬಿಗೆ ಅದೇನು ನಚ್ಚುಗೆ ಮೂಡಿತೋ, ಒಮ್ಮೆ ಕರುಣಾಸ್ಪದವಾಗಿ ನನ್ನನ್ನು ನೋಡಿ ಮತ್ತೆ ಕಣ್ಣುಮುಚ್ಚಿಕೊಂಡಳು. ನನ್ನ ತೋಳಲ್ಲೇ ಅವಳು ಕೊನೆ ಉಸಿರುಬಿಟ್ಟು ತನ್ನ ದಾರುಣ ನೋವಿನಿಂದ ಕ್ಷಾಣಾರ್ಧದಲ್ಲಿ ಮುಕ್ತಳಾದಳು. ರೂಬಿಯ ನೋವು ಈಗ ನಿಧಾನವಾಗಿ ನನ್ನ ಎದೆಯೊಳಗೆ ತುಂಬಿಕೊಳ್ಳತೊಡಗಿತು. ಹಾಗೂ ಆ ನೋವು ದ್ರವರೂಪದಲ್ಲಿ ಎರಡೂ ಕಣ್ಣುಗಳಲ್ಲಿ ಲೀಕಾಗತೊಡಗಿತು.]]>

‍ಲೇಖಕರು avadhi

July 2, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. savitri

    Yes the dogs can love us more than our children. while reading this article about Roobi i recalled our Ranga who lived around 14 years and he died 12 years ago. I never forget his love, care, obedience towards our family members. Now another Bheema is in our home. He looks like Huliya of “Maleyalli Madhumagalu”. we all love him as our brother, son. Now he is 5 yrs old.

    ಪ್ರತಿಕ್ರಿಯೆ
  2. ರಾಮಚಂದ್ರ ನಾಡಿಗ್, ಕದರನಹಳ್ಳಿ

    ಹೌದು ಆ ಗಿಡ್ಡನೆಯ ಕಪ್ಪು ರೂಬಿ ನನ್ನ ಕಣ್ಮುಂದೆ ಬರ್ತಾ ಇದ್ದಾಳೆ.. ನಾನು ಬಂದಾಗಲೆಲ್ಲಾ ನನ್ನನ್ನು ಓಡಿಸುವ ಪ್ರಯತ್ನವನ್ನ ಅವಳೆಂದೂ ಮಾಡಲಿಲ್ಲ.. ಸಧ್ಯ…
    ಮತ್ತೊಂದು ನೆನಪಿಗೆ ಬಂತು, ನಾವೂ ಕೂಡಾ ಒಂದು ನಾಯಿ ಸಾಕಿದ್ವಿ. ಅದು ಅಲ್ಲೇ ಪಕ್ಕದ ಅರೇಹಳ್ಳಿಯಿಂದ ತಂದಿದ್ರೂ ಅದು ಒಳ್ಳೆ ಜಾತಿ ನಾಯಿಯ ಹಾಗೇ ಇತ್ತು. ಬಿಳಿ ಬಣ್ಣದ ನಾಯಿ ನೋಡಲು ಸುಂದರವಾಗಿತ್ತು. ಅದಕ್ಕೆ `ರಾಜ’ ಎಂದು ನಾಮಕರಣ ಮಾಡಿದ್ವಿ. ಈ ಹೆಸರನ್ನ ಉದ್ದೇಶಪೂರ್ವಕವಾಗಿ ಇಟ್ಟಿರಲಿಲ್ಲ. ಆದ್ರೂ ಕೂಡಾ ನಮ್ಮ ಬಂಧುಗಳು ಬೇಕೂ ಅಂತಾನೇ ಇವ್ರು ನಾಯಿಗೆ `ರಾಜ’ ಎಂದು ಹೆಸರಿಟ್ಟಿದ್ದಾರೆ ಎಂದು ಹೇಳ್ತಾ ಇದ್ರು….
    ಅದರ ಆಟಗಳು ಇನ್ನೂ ನಮ್ಮ ಕಣ್ಮುಂದೆ ಇವೆ. ಪಾಪ ಒಂದು ದಿನ ಭೀಮನ ಅಮಾವಾಸ್ಯೆ ದಿನ ರಾಜ ನಮ್ಮನ್ನು ಬಿಟ್ಟು ಅಗಲಿದ. ಈಗ ಅವನು ನಮ್ಮನೆ ತೆಂಗಿನ ಮರದ ಕೆಳಗೆ ಮಲಗಿದ್ದಾನೆ…

    ಪ್ರತಿಕ್ರಿಯೆ
  3. Sudheera

    ಮನುಷ್ಯನ ಆಯುಷ್ಯ ಮಿತಿ, ಸಾಕು ಪ್ರಾಣಿಗಳ ಆಯುಷ್ಯ ಮಿತಿಗಿಂತ ಹೆಚ್ಚಾಗಿರುವುದರಿಂದ ಸಾಕುಪ್ರಾಣಿಗಳನ್ನು ಸಾಕಿದವರೆಲ್ಲಾ ಅನುಭವಿಸಲೇ ಬೇಕಾದ ದಾರುಣ ನೋವು ಪ್ರಬಂಧದಲ್ಲಿ ವ್ಯಕ್ತವಾಗಿದೆ. ತುಂಬ ದುಃಖ ಪ್ರದ.

    ಪ್ರತಿಕ್ರಿಯೆ
  4. ranganna k

    mestre……………….
    manushya kooda ondu parani.
    alli nimma shwana kooda namma nimmanthe anubhavisiruva novugalannu artisikondiddakke dhanyavaadagalu…

    ಪ್ರತಿಕ್ರಿಯೆ
  5. HSV

    ಇಡೀ ರೂಬಿಯ ಜೀವಿತ ಅನೇಕ ಬಾರಿ ನನ್ನ ಕಣ್ಣ ಮುಂದೆ ಹಾದುಹೋಗುತ್ತದೆ; ನಿಜ. ಆದರೆ ನೆನಪಿನಲ್ಲಿ ಜೀರ್ಣವಾಗದ ಗಂಟಾಗಿ ಈವತ್ತಿಗೂ ಉಳಿದಿರುವುದು ಯಾವುದೋ ನಚ್ಚಿನಿಂದ ಅದು ನನ್ನ ಹೆಗಲ ಮೇಲೆ ಪ್ರಾಣ ಒಪ್ಪಿಸಿದ ರೂಬಿಯ ಅಂತಿಮ ಕ್ಷಣ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: