ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಮತ್ತೆ ಊರಿನತ್ತ…


-ಎಚ್.ಎಸ್.ವೆಂಕಟೇಶಮೂರ್ತಿ
ಒಂದು ವರ್ಷದ ಹಿಂದಿನ ಸಮಾಚಾರ. ಊರಿಂದ ಮಗ ಫೋನ್ ಮಾಡಿ, ಅಜ್ಜಿ ಮತ್ತೆ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆಂದೂ, ನೀವು ಆದಷ್ಟು ಬೇಗ ಬಂದು ನೋಡಿಕೊಂಡು ಹೋಗೀ ಎಂದೂ ಹೇಳಿದ. ಈ ಸಂಗತಿ ನನ್ನ ಮನಸ್ಸನ್ನು ಕಲಕಿತು. ಆದರೆ ವಿಷಯ ಆಶ್ಚರ್ಯಪಡುವಂಥದಿರಲಿಲ್ಲ. ಈಚೆಗೆ ಅಜ್ಜಿ ಮತ್ತೆ ಮತ್ತೆ ಬೀಳುತ್ತಾ , ಬೀಳುವುದನ್ನೇ ಒಂದು ಅಭ್ಯಾಸ ಮಾಡಿಕೊಂಡಿದ್ದರು. ಅವರಿಗೆ ನೂರಾ ಎರಡು ವಯಸ್ಸಿನ ಪೂರ್ಣಪ್ರಾಯ. ಎದ್ದಾಗ , ನಡೆಯುವಾಗ ಜೋಲಿ ಬರುತ್ತಿತ್ತು. ಆದರೂ ಯಾರ ಹಂಗೂ ಇಲ್ಲದೇ ತಾನೇ ನಡೆಯುತ್ತೇನೆ ಎಂಬ ಹಠ ಅವರಿಗೆ.
ಮಗಳು, ಮೊಮ್ಮಗ ಹೇಳಿದ ಮಾತು ಕೇಳುವ ತಾಳ್ಮೆ ಅವರಿಗಿರಲಿಲ್ಲ. ಗಾಲಿ ಕುರ್ಚಿಯನ್ನು ಬಳಸುತ್ತಿರಲಿಲ್ಲ. ವ್ಯರ್ಥ ಎಂಬಂತೆ ಅದನ್ನು ಅಟ್ಟದ ಮೇಲೆ ಇಡಲಾಗಿತ್ತು. ನಡೆಯುವುದು ಕಷ್ಟ. ಆದರೆ ಬೆಡ್ಪಾನ್ ತೆಗೆದುಕೊಳ್ಳೋದು ಅವರಿಗೆ ಇಷ್ಟವಿರಲಿಲ್ಲ. ಬಾತ್ರೂಮಿಗೆ ತಾವೇ ಹೋಗಬೇಕು. ಯಾರಾದರೂ ಎದುರಿಗೆ ಇದ್ದಾಗ ಗಪ್ಪಾಗಿ ಕುಳಿತುಕೊಳ್ಳುತ್ತಿದ್ದವರು, ಮನೆಯವರು ತಮ್ಮ ಕೆಲಸದಲ್ಲಿ ತಾವು ತೊಡಗಿದಾಗ ಎದ್ದು ತಟರಾಡುತ್ತಾ ಬಾತ್ ರೂಮಿಗೆ ಧಾವಿಸುತ್ತಿದ್ದರು. ಬೇರೆಯವರು ಬರುವುದರೊಳಗೆ ತಮ್ಮ ಕೆಲಸ ಮುಗಿಸ ಬೇಕೆಂಬ ಆತುರ. ಈ ಆತುರದಲ್ಲಿ ಆಯ ತಪ್ಪಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದರು. ಮುಪ್ಪಿನಲ್ಲಿ ಸಾಮಾನ್ಯವಾಗಿ ಈ ಸ್ವಾವಲಂಬನೆಯ ಹಠ ಅಂಟಿಕೊಳ್ಳುತ್ತದೋ ಏನೋ. ಅಜ್ಜಿಯಂತೂ ಮೊದಲಿಂದಲೂ ಹತ್ತು ಜನಕ್ಕೆ ನೆರವಾಗಿ ಬದುಕಿದವರೇ ವಿನಾ ತಾವು ಯಾವತ್ತೂ ಯಾರ ಅವಲಂಬನೆಗೂ ಬಿದ್ದವರಲ್ಲ.

ಈ ಬಾರಿ ಗಾಯದ ಸ್ವರೂಪವೇನು ಎಂಬುದು ತಿಳಿಯಲಿಲ್ಲ. ಚೆನ್ನಗಿರಿಗೆ ಕಾರು ಮಾಡಿಕೊಂಡು ಹೋಗಿಬಂದೆವು. ಅಜ್ಜಿ ಆರಾಮಾಗಿದ್ದಾರೆ ಎಂದು ಮಗನೇನೋ ಹೇಳಿದ. ಆದರೂ ಮನಸ್ಸು ನಿಲ್ಲಲಿಲ್ಲ. ಎರಡು ದಿನ ಮೀನಾ ಮೇಷ ಎಣಿಸಿ ಕೊನೆಗೆ ಊರಿಗೆ ಹೊರಟಿದ್ದೂ ಆಯಿತು. ಚಿತ್ರದುರ್ಗಕ್ಕೆ ನಮ್ಮ ಬಸ್ಸು ತಲಪಿದಾಗ ಏಳು ಗಂಟೆ. ಏಳು ಗಂಟೆಗೆ ನಮ್ಮ ಹಳ್ಳಿಯ ಕಡೆ ಹೋಗುವ ಕೊನೆಯ ಬಸ್ಸ್ ನಾನು ಹಿಡಿಯಬೇಕಾಗಿತ್ತು. ಬಸ್ಸ್ ಸ್ಟಾಂಡ್ ಬಳಿ ವಿಚಾರಿಸಿದಾಗ ಈಗಷ್ಟೇ ಆ ಬಸ್ಸ್ ಹೊರಟಿತೆಂದೂ ಸರ್ಕಲ್ ಬಳಿ ಸಿಕ್ಕರೂ ಸಿಗಬಹುದು ಪ್ರಯತ್ನಿಸಿ ಎಂದೂ ಯಾರೋ ಹೇಳಿದರು. ಸಿಕ್ಕರೆ ಸರಿ, ಇಲ್ಲಾ ರಾತ್ರಿ ಭಾವಮೈದುನನ ಮನೆಯಲ್ಲಿ ಉಳಿದು ಬೆಳಿಗ್ಗೆ ಊರಿಗೆ ಹೋಗುವುದು ಎಂದು ನಿರ್ಧರಿಸಿ ಸರ್ಕಲ್ ಸ್ಟಾಪಿಗೆ ರಿಕ್ಷಾ ಏರಿ ದೌಡಾಯಿಸಿದೆ. ಪುಣ್ಯಕ್ಕೆ ಬಸ್ ನನಗಾಗಿ ಕಾಯುತ್ತಿರುವಂತೆ ಸರ್ಕಲ್ ಸ್ಟಾಪಿನಲ್ಲಿ ನಿಂತಿತ್ತು. ರಿಕ್ಷಾದವನಿಂದ ಚೇಂಜ್ ಸಹ ಪಡೆಯದೆ ಓಡಿಕೊಂಡು ಬಂದು ಬಸ್ ಹತ್ತಿದ್ದೂ ಆಯಿತು. ಬಸ್ಸಿನಲ್ಲಿ ಡ್ರೈವರ್ ಸಮೀಪದ ಸೀಟಲ್ಲಿ ಕುಳಿತುಕೊಳ್ಳುವುದಕ್ಕೆ ಸ್ಥಳವೂ ಸಿಕ್ಕಿತು.
ಸದ್ಯ ಬಸ್ಸ್ ಒಂದು ಸಿಕ್ಕಿತಲ್ಲಾ, ಇನ್ನು ಎಷ್ಟು ಹೊತ್ತಾದರೂ ಪರವಾಗಿಲ್ಲ, ಊರು ಸೇರುವುದೊಂದು ಗ್ಯಾರಂಟಿ ಅಂದುಕೊಂಡು ಕಾಲು ಚಾಚಿ ಕೂತೆ ಎನ್ನುವಾಗ ಬಸ್ಸಿನಲ್ಲಿ ಒಂದು ದೊಡ್ಡ ಮೆಲೋಡ್ರಾಮವೇ ನಡೆದು ಹೋಯಿತು. ಬಸ್ಸಲ್ಲಿ ಕಂಡಕ್ಟರ್ರೇ ಮಂಗಮಾಯ. ಎಲ್ಲಪ್ಪಾ ಅಳಸಿಂಗ್ರಿ? ಎಂದು ಡ್ರೈವರ್ ಅಣ್ಣ ಕೂಗುತ್ತಾ ಇದ್ದಾನೆ. ಅಳಸಿಂಗ್ರಿ ಬಸ್ಸ್ ಹೊರಡುವಾಗ ಇದ್ದವನು ಈಗ ಇದ್ದಕ್ಕಿದ್ದಂತೆ ಎಲ್ಲಿಗೆ ಹೋಗಿಬಿಟ್ಟ? ಸಣ್ಣಗೆ ಒಂದು ಗುಂಡು ಹಾಕಲಿಕ್ಕೆ ಎಲ್ಲಾದರೂ ಮಾಯವಾಗಿಬಿಟ್ಟನೋ? ಸದ್ಯ ನಮ್ಮ ಡ್ರೈವರ್ ಸೀಟ್ ಮೇಲೆ ಇದ್ದಾನಲ್ಲ ಅದೇ ನಮ್ಮ ಪುಣ್ಯ ಅಂದುಕೊಳ್ಳುತ್ತಿರುವಾಗ ನೀನು ಅವನಿಗೆ ಸ್ವೀಟ್ ಕೊಟ್ಟಿದ್ದೇ ತಪ್ಪಾಯಿತು ನೋಡಣ್ಣ ಎಂದು ಪಕ್ಕದಲ್ಲಿದ್ದವ ಬಾಯ್ಬಿಟ್ಟ. ಎಲಾ ಇವ್ನಾ ಇವನ ಕಥೆ ನಂಗೇನ್ ಗೊತ್ತೋ ಮಾರಾಯ….? ಎಂದು ಡ್ರೈವರ್ ಉದ್ಗಾರ ತೆಗೆದ. ನೋಡು…ಬಷೀರ್ ಮನೆಗೆ ಹೋಗಿದಾನೋ ಏನೋ ಅಂದ ಡ್ರೈವರ್ ಅಣ್ಣ.
ನಮ್ಮ ಕಂಡಕ್ಟರ್ಗೆ ಷುಗರ್ ಇದ್ದು ಅವನಿಗೆ ಈ ಡ್ರೈವರ್ ಅಣ್ಣ ಸ್ವೀಟ್ ಕೊಟ್ಟು ಕೆರಳಿಸಿದನೋ ಹೇಗೆ ಅಂತ ನಾನು ಯೋಚಿಸುತ್ತಿರುವಾಗ, ಡ್ರೈವರ್ ಕಥೆಗೆ ಇನ್ನೊಂದು ಸಣ್ಣ ತಿರುವು ಕಲ್ಪಿಸಿದ. ರಂಗಾಚಾರಿ ಬಂದು ತನ್ನ ಮದುವೇದೂ ಅಂತ ಸ್ವೀಟ್ ಕೊಟ್ನಪ್ಪ. ಈ ಮುಂಡೇಮಗಂಗೆ ಸ್ವೀಟ್ ಇಷ್ಟಾ ಅಂತ ಇವನಿಗೂ ಕೊಟ್ಟೆ ಅಷ್ಟೆ! ಸದರೀ ಕ್ಲೀನರ್ರು ಮತ್ತು ಡ್ರೈವರ್ ಅಣ್ಣ ಮಾತಾಡುತ್ತಿರುವಾಗ ಮೆಲ್ಲ ಮೆಲ್ಲಗೆ ಇನ್ನೂ ಕೆಲವು ಎಳೆಗಳು ಕಥೆಗೆ ಕೂಡಿಕೊಂಡು ಕಂಡಕ್ಟರ್ ಅಳಸಿಂಗ್ರಿ ಬಗ್ಗೆ ನನಗೂ ಅನುಕಂಪ ಉಂಟಾಗ ತೊಡಗಿತು. ವಾಸ್ತವದ ಹಿನ್ನೆಲೆ ಇಷ್ಟು. ರಂಗಾಚಾರಿ ಮತ್ತು ಅಳಸಿಂಗ್ರಿ ಒಂದೇ ಊರಿನವರು. ಇಬ್ಬರೂ ಸ್ನೇಹಿತರು. ಇಬ್ಬರೂ ಒಬ್ಬಳೇ ಹುಡುಗಿಯನ್ನು ಹಚ್ಚಿಕೊಂಡಿದ್ದರು. ಅಲಮೇಲು ಅಂತ ಆ ಕನ್ನೆಯ ಹೆಸರು. ಕೊನೆಗೆ ಆ ಹುಡುಗಿಯನ್ನು ಯಾರು ಕೈ ಹಿಡಿಯುತ್ತಾರೆ ಎಂಬ ಬಗ್ಗೆ ಇಬ್ಬರಿಗೂ ಕಟ್ಥ್ರಾಟ್ ಕಾಂಪಿಟೇಶನ್ನು! ಹುಡುಗಿಯ ಅಪ್ಪ ಹೇಳಿದ ಯಾರು ಸರ್ಕಾರಿ ನೌಕರಿ ಹಿಡಿತೀರೋ ಅವರಿಗೆ ನಾನು ನನ್ನ ಮಗಳನ್ನ ಕೊಡ್ತೀನಿ! ಅಳಸಿಂಗ್ರಿ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ಬರ್ದಂಡು ವ್ಯಾಪಾರ ಮಾಡ್ತಾ ಇದ್ದ. ಮಾವ ಆಗೋನು ಈ ಚಾಲೆಂಜ್ ಹಾಕಿದ ಮೇಲೆ ಅಂಗಡೀನ ಯಾರಿಗೋ ಮಾರಿ, ಅದೇ ದುಡ್ಡು ಯಾರ ಬಾಯಿಗೋ ಹಾಕಿ ಕೊನೆಗೆ ಈ ಕಂಡಕ್ಟರ್ಗಿರಿ ಸಂಪಾದಿಸಿದನಂತೆ! ಇವಾ ಕಂಡಕ್ಟರ್ ಆಗಿ ಊರೂರು ಅಲೆಯೋದು ಶುರು ಮಾಡಿದನೋ, ಇತ್ತ ರಂಗಾಚಾರಿ ಅಲಮೇಲೂ ಹಿಂದೇ ಬೆಂಬಿಡದ ಭೂತದ ಹಾಗೆ ತಿರುಗಾಡುತ್ತಾ ನಿಧಾನ ನಿಧಾನಕ್ಕೆ ಅವಳಿಗೆ ಹತ್ತಿರವಾಗಿ ಹೋಗಿದ್ದಾನೆ. ಕೊನೆಗೆ ಆ ಹುಡುಗಿ ನಾನು ಆದರೆ ರಂಗಾಚಾರೀನೇ ಅಂತ ಮುಷ್ಕರ ಉಪವಾಸ ಸತ್ಯಾಗ್ರಹ ಇತ್ಯಾದಿಗಳಿಗೆ ತೊಡಗಿದ ಕಾರಣ ಅವಳ ಅಪ್ಪ ನಿರ್ವಾಹವಿಲ್ಲದೆ ಸರ್ಕಾರಿ ಕೆಲಸದ ಆಸೆ ಬಿಟ್ಟು ಅರ್ಚಕ ರಂಗಾಚಾರಿಗೆ ಮಗಳನ್ನು ಕೊಟ್ಟು ಮದುವೆ ಮಾಡಿ ಕೈ ತೊಳೆದುಕೊಂಡಿದ್ದಾನೆ. ಅಲಮೇಲು ಹೀಗೆ ತನ್ನ ಕೈತಪ್ಪಲಿಕ್ಕೆ ಕಂಡಕ್ಟರ್ ಕೆಲಸವೇ ಕಾರಣವಾದದ್ದು ಒಂದು ವ್ಯಂಗ್ಯವಿನೋದ ಅನ್ನಬಹುದು. ಲಗ್ನಪತ್ರಿಕೆ ನೋಡಿ ಭೂಮಿಗೆ ಕುಸಿದ ಅಳಸಿಂಗ್ರಿ ಆ ಬಳಿಕ ದೇವದಾಸನಂತೆ ಕುರುಚಲು ಗಡ್ಡ ಬಿಟ್ಟುಕೊಂಡು ಅಲೆಯುತ್ತಾ ಇರುವಾಗ, ಈವತ್ತು ರಂಗಾಚಾರಿ ಬಂದು ತನಗೆ ಮದುವೆ ಸ್ವೀಟ್ ತಲಪುವಂತೆ ಮಾಡಿದ್ದು ಸದರೀ ಅಳಸಿಂಗ್ರಿಗೆ ದುರ್ದಮ್ಯವಾದ ಹೃದಯ ಶೂಲೆಯನ್ನು ಉಂಟು ಮಾಡಿದ ಪರಿಣಾಮವಾಗಿಯೇ ಬಸ್ಸಿಂದ ಅವ ಇದ್ದಕ್ಕಿದ್ದಂತೆ ನಾಪತ್ತೆ ಯಾಗಿರೋದು. ಹೋಗೋ ಮಾರಾಯ … ಕತ್ತೆ ಕಳೆದ್ರೆ ಹಾಳುಗೋಡೆ ಹಿಂದೆ ಅನ್ನೋ ಹಂಗೆ ತನ್ನ ಜಿಗರೀದೋಸ್ತ ಬಷೀರ್ ಮನೇಲಿ ಮಲಗಿರ ಬೇಕು ಅಂತ ಡ್ರೈವರ್ ಅಣ್ಣ ಮತ್ತೆ ಘೋಷಿಸಿದಾಗ ಕ್ಲೀನರ್ ಬಷೀರ್ ಮನೆಯ ಕಡೆ ಹೋಗುತ್ತಾನೆ. ಹೋಗುವಾಗ ಅವನ ಬಾಯಿಂದ ಉದುರಿದ ಆಣಿಮುತ್ತುಗಳು: ಅವನಕ್ಕನ… ಪ್ರಪಂಚದಾಗೆ ಅವಳು ಒಬ್ಬಳೇನಾ ತಿಲೋತ್ತಮಾ?
ಈ ವೇಳೆಗೆ ನಿಲ್ಲಿಸಿದ ಬಸ್ಸ ಹತ್ತೀ ಹತ್ತೀ ಇಡೀ ಬಸ್ ತುಂಬಿ ತುಳುಕುತಾ ಇದೆ. ಬಸ್ ಮೂವ್ ಆದರೆ ಸ್ವಲ್ಪ ಗಾಳಿ ಗೀಳಿ ಬೀಸೀತು. ಒಂದುಕಡೇ ಚಿತ್ರದುರ್ಗದ ದರಿದ್ರ ಸೆಖೆ. ಇನ್ನೊಂದು ಕಡೇ ಬೆವರ ನಾತ. ಪಕ್ಕದ ಆಸಾಮಿ ಆ ಹೊತ್ತಿಗೆ ಟೈಟ್ ಆಗಿರೋದರಿಂದ ದೇವಿ ವಾಸನೆ ಬೇರೆ ಗಮ್ಮಂತ ಹೊಡೀತಾ ಇದೆ. ಬಸ್ಸಲ್ಲಿ ಮಕ್ಕಳು ಸೆಖೆ ತಡೀಲಾರದೆ ಅಳಲಿಕ್ಕೆ ಶುರು ಹಚ್ಚಿವೆ. ಹೊಳಲಕೆರೆ ಕಡೆ ಹೋಗೋ ಇನ್ನೊಂದು ಪ್ರೈವೇಟ್ ಬಸ್ಸಿನ ಏಜೆಂಟ್ ಈಗ ಏರುಗಂಟಲಲ್ಲಿ ನಮ್ಮ ಡ್ರೈವರ್ ಜತೆ ಜಗಳ ಶುರು ಹಚ್ಚಿದ್ದಾನೆ. ತನ್ನ ಗಿರಾಕಿಗಳು ಸರ್ಕಾರೀ ಪಾಲಾಗ್ತಾರಲ್ಲ ಅಂತ ಅವನ ಉದರದುರಿ. ಹೊರಡ್ರೋ ನಿಮ್ಮವ್ನಾ…. ಏಳಕ್ಕೆ ಸ್ಟಾಂಡ್ ಬಿಡಬೇಕು ನೀವು…ಎಂದು ಅವಾ ಜೋರು ಗಂಟಲಲ್ಲಿ ಕಿರುಚುತ್ತಾ, ಬಸ್ಸಿನ ಪಕ್ಕೆಗೆ ದಬ ದಬ ಬಡಿಯುತ್ತಾ ರಂಪ ಮಾಡುತ್ತಾ ಇದ್ದಾನೆ. ಓಹೋಹೋ ಬಸ್ಸೊಂದು ನರಕವೇ ಆಗಿಬಿಟ್ಟಿದೆ ಈಗ!ಡ್ರೈವರ್ ತನ್ನ ಮಾತೃ ಭಾಷೇಲಿ, ಕಂಡಕ್ಟರ್ರೂ ಏಜೆಂಟೂ, ರಂಗಾಚಾರಿ, ಅಲಮೇಲು, ಸರ್ಕಾರ ಎಲ್ಲವನ್ನೂ ಬೈಯುತ್ತಾ, ತನ್ನ ಕೋಪ ತೋರಿಸುವುದಕ್ಕಾಗಿ ಡೋರ್ ಜೋರಾಗಿ ಓಪನ್ ಮಾಡಿ ಕೆಳಕ್ಕೆ ಹಾರಿದೋನು ಇಡೀ ಬಸ್ಸೇ ಒಮ್ಮೆ ಕಂಪಿಸೋವಷ್ಟು ಜೋರಾಗಿ ಡೋರ್ ಕ್ಲೋಜ್ ಮಾಡಿ ರಸ್ತೆ ಬದೀನಲ್ಲಿ ಬೀಡಿ ಸೇದುತ್ತಾ ನಿಲ್ಲುತ್ತಾನೆ. ಸರ್ಕಲ್ ಸ್ಟಾಂಡ್ ಪಕ್ಕದಲ್ಲೇ ಬಷೀರನ ಮನೆ. ಅಲ್ಲಿ ಜನ ಜಮಾಯಿಸಿರೋದು ನನಗೆ ಬಸ್ಸಿನ ಕಿಟಕಿಯಿಂದಲೇ ಕಾಣ್ತಾ ಇದೆ. ಈ ಬಿಟ್ಟಿ ನಾಟಕದ ಬೈಪಾಸ್ ಪ್ರೇಕ್ಷಕನೊಬ್ಬ ಬಷೀರ್ ಮನೆಯಿಂದ ಬಸ್ ಬಳಿ ಬಂದು ನನ್ನ ನೋಡಿ ಹಲ್ಲು ಕಿಸಿಯುತ್ತಾ ಒಳಗೆ ಸೇರ್ಕಂಡು ಬಾಗ್ಲು ಮಡಗಿಕೊಂಡವ್ನೇ…!ಎಂದು ನಾನು ಅವನಿಗೆ ಹತ್ತಾರು ವರ್ಷದ ಪರಿಚಯದವನು ಅನ್ನೋ ಹಾಗೆ ಹೇಳಿದ್ದು ನನಗೆ ಬೆರಗು ತರುತ್ತದೆ. ಈ ಅಳಸಿಂಗ್ರೀ ಪ್ರಸಂಗ ನಡೀದಿದ್ದರೆ ಈ ಮನುಷ್ಯ ನನ್ನ ಮಾತಾಡಿಸ್ತಾ ಇದ್ದನಾ? ಅಪರಿಚಿತರು ಪರಿಚಿತರ ಹಾಗೆ ಮಾತಾಡಲಿಕ್ಕೆ ಇಂಥ ಒಬ್ಬೆಗದ ಘಟನೆಗಳು ಸಂಭವಿಸ ಬೇಕಾಗತ್ತೆ! ಇಲ್ಲವಾದರೆ ಅವನ್ಯಾರೋ ನಾನ್ಯಾರೋ! ಇಷ್ಟರ ಮಧ್ಯ ಊರಿಂದ ಮಗನ ಫೋನು ಬೇರೆ. ಅಜ್ಜಿ ನಿಮ್ಮನ್ನ ಕಾಯ್ತಾ ಪಡಸಾಲೆ ಬಾಗ್ಲಲ್ಲೇ ಕುರ್ಚಿ ಹಾಕಿಸಿಕೊಂಡು ಕೂತುಬಿಟ್ಟಿದಾರೆ!
ಈ ಸಂದರ್ಭದಲ್ಲಿ ನನ್ನಲ್ಲಿ ಇದ್ದಕ್ಕಿದ್ದಂತೆ ಉಂಟಾದ ಒತ್ತಡ ಏನು ಗೊತ್ತಾ? ಇಷ್ಟೆಲ್ಲಾ ರಂಪಾಟಕ್ಕೆ ಕಾರಣನಾದ ಅಳಸಿಂಗ್ರಿ ಎಂಬ ದುರಂತ ನಾಯಕನ ಆಕಾರ ಮುಖ ಮೂತಿ ಹೇಗಿದ್ದಿರಬಹುದು? ಅವಾ ರೂಮಿನಲ್ಲಿ ಒಬ್ಬನೇ ಸೇರಿಕೊಂಡು ಏನು ಮಾಡ್ತಾ ಇರಬಹುದು? ಮಲಗಿರಬಹುದೋ? ಕೂತಿದ್ದಾನೋ? ಅಥವಾ ಶತಪಥ ಹಾಕುತ್ತಿದ್ದಾನಾ? ಅಥವಾ ಮುರುಕಲು ಸ್ಟೂಲು ಮಧ್ಯಕ್ಕೆ ಎಳಕೊಂಡು ಫ್ಯಾನಿಗೆ ಜೋತು ಬೀಳುವ ಹುನ್ನಾರದಲ್ಲಿದ್ದಾನೋ? ಈಗ ಒಂದೊಂದು ಕ್ಷಣಾನೂ ಅವನ ಬದುಕಲ್ಲಿ ನಿರ್ಣಾಯಕವಾದುದಲ್ಲವೇ? ಹಾಗಿರುವಾಗ ನಾನು ಹೀಗೆ ಸುಮ್ಮನೆ ಬಸ್ಸಿನ ಸೀಟಿಗೆ ಂಟಿಕೊಂಡು ಕೂಡೋದು ಯಾವ ನ್ಯಾಯ? ಸಾಧ್ಯವಾದರೆ ಅವನ ಆತ್ಮಹತ್ಯೆ ತಪ್ಪಿಸ ಬೇಕಲ್ಲವಾ? ಬಷೀರ್ ಮನೆಗೆ ಈಗ ಪೋಲೀಸರೂ ಬಂದಿರಬಹುದೇ? ಇದು ನೋಡಿ ಕಥೆಯಲ್ಲಿ ಒಮ್ಮೆ ನಾವು ಸಿಕ್ಕಿಕೊಂಡರೆ ಉಂಟಾಗುವ ಫಜೀತಿ! ಜೇಡನ ಬಲೆಯಲ್ಲಿ ನೊಣ ಸಿಕ್ಕಿಕೊಳ್ಳುವ ಹಾಗೆ ಅದು. ನನ್ನ ಜೀವ ಕುರು ಕುರು ಅನ್ನತೊಡಗಿತು. ನನ್ನ ಸೀಟಲ್ಲಿ ನನ್ನ ಪ್ರತಿನಿಧಿಯೆಂಬಂತೆ ಬ್ಯಾಗಿರಿಸಿ ಜನರಲ್ಲಿ ತೂರಿಕೊಂಡು ಹ್ಯಾಗೋ ಬಸ್ಸಿಂದ ಕೆಳಗಿಳಿದೆ! ನಾನು ಬಷೀರನ ಮನೆ ಸಮೀಪಿಸುವಷ್ಟರಲ್ಲಿ ಜನ ದುಬು ದುಬು ಹೊರಗೆ ಬರ್ತಾ ಇದ್ದಾರೆ. ಅವರ ಮಧ್ಯದಲ್ಲಿ ಕಾಣ್ತಾ ಇರೋನೇ ಅಳಸಿಂಗ್ರಿ ಎಂದು ನನಗೆ ತಕ್ಷಣ ಗೊತ್ತಾಯ್ತು. ಹಣೆಯ ಮೇಲೆ ಉದ್ದಕ್ಕೆ ಮೂರು ನಾಮ ಇದ್ದವಲ್ಲಾ!ಅಳಸಿಂಗ್ರಿ ಬಹಳ ನಾಚಿಕೊಂಡವನಂತೆ ಕಂಡ. ನಾನು ನಿರೀಕ್ಷಿಸಿದಂತೆ ಅವನ ಕಣ್ಣಿಂದ ಧಾರಾಕಾರವಾಗಿ ಕಣ್ಣೀರೇನೂ ಹರಿಯುತ್ತಾ ಇಲ್ಲ. ತನ್ನ ಕರ್ಚೀಫಿಂದ ಮುಖ ಒರೆಸಿಕೊಳ್ಳುವ ನೆಪದಲ್ಲಿ ಅವ ಜನರಿಂದ ಯಾಕೋ ಮುಖ ಮರೆಸುತಾ ಇದ್ದಾನೆ ಅನ್ನಿಸಿತು. ಅವನ ಸುತ್ತಾ ಇದ್ದ ಜನ ಬಹಳ ಹಗುರಾದವರಂತೆ ನಗುತ್ತಾ ಮಾತಾಡುತ್ತಾ ಬರುತ್ತಿದ್ದರು! ಅಳಸಿಂಗ್ರಿ ಮತ್ತೆ ರಥಾರೋಹಣ ಮಾಡಿ ಧನುಸ್ಸನ್ನು ಅನುಷ್ಠಾನ ಮಾಡಿದ. ಅವನ ಬಾಯಲ್ಲಿ ಹೊರಳಾಡುತ್ತಾ ಇದ್ದ ವಿಷಲ್ ವೃತ್ತಾತ್ಮಕ ಚಲನೆಯ ಮೂಲಕ ಉರುಳಿ ಉರುಳಿ ಬರುವ ಒಂದು ಬಗೆಯ ವಿಚಿತ್ರ ಸದ್ದನ್ನು ಉತ್ಪಾದಿಸಿತು. ಇದು ದೇವದತ್ತವನ್ನ ಅರ್ಜುನ ಮತ್ತೆ ಊದಿದ ಮಹೋನ್ನತ ಗಳಿಗೆ. ಡ್ರೈವರ್ ಅಣ್ಣನೂ ಈಗ ನಗು ನಗುತ್ತಾ ಬಸ್ಸೊಳಗೆ ಹಾರಿಕುಳಿತ. ಬಸ್ ಮತ್ತೆ ಮತ್ತೆ ಮೈ ಕುಲುಕಿ ಬಿಸಿ ಉಸಿರು ಬಿಡತೊಡಗಿತು. ಪ್ರಾಯಃ ಅಳಸಿಂಗ್ರಿ ಬಗ್ಗೆ ನಿಜವಾದ ಅನುಕಂಪೆ ಇರೋದು ಆ ಲಟೂರಿ ಸರ್ಕಾರೀ ಬಸ್ಸಿಗೆ ಮಾತ್ರ ಅಂತ ಆ ಕ್ಷಣ ನನಗೆ ಅನ್ನಿಸಿದ್ದು ಸುಳ್ಳಲ್ಲ. ಮುಂದೆ ರಸ್ತೆಯುದ್ದಕ್ಕೂ ನಾನು ಅಲಮೇಲುವನ್ನ, ರಂಗಾಚಾರಿಯನ್ನ, ಅಲಮೇಲುವಿನ ಅಪ್ಪನನ್ನ ಕಲ್ಪಿಸುತ್ತಾ, ಅವರ ಸಂಭಾಷಣೆಗಳನ್ನು ಕಲ್ಪಿಸುತ್ತಾ, ಅವರು ಅಲೆದಾಡಿರಬಹುದಾದ ಜಾಗಗಳನ್ನು ಕಲ್ಪಿಸುತ್ತಾ ಮನಸುಖರಾಯನಾಗಿರುವಾಗ ನಮ್ಮ ಊರು ಬಂದೇ ಬಿಟ್ಟಿರು. ರಿಕ್ಷಾ ಹಿಡಿದು ಮನೆಗೆ ಬಂದಾಗ ನಮ್ಮ ಅಜ್ಜಿ ಪಡಸಾಲೆಯ ಬಾಗಿಲಲ್ಲೇ , ಬಾಗಿಲ ಚೌಕವನ್ನೇ ಒಂದು ಫ್ರೇಮ್ ಮಾಡಿಕೊಂಡು , ಗ್ರಾಮದೇವತೆ ಕೆಂಚವ್ವ ತನ್ನ ಗರ್ಭಗುಡಿಯ ಬಾಗಿಲಲ್ಲಿ ಕೂತುಕೊಳ್ಳುವ ಹಾಗೆ ಪಗಡದಸ್ತಾಗಿ ಕೂತಿದ್ದು ಕಂಡಾಗ ಕರುಳು ಚುರುಕ್ ಎಂದಿದ್ದು ಸುಳ್ಳಲ್ಲ.

‍ಲೇಖಕರು avadhi

May 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಅಧಿತಿ

    ಎಚ್.ಎಸ್.ವಿ ರವರಿಗೆ
    ನಿಮ್ಮ ಈ ಅನಾತ್ಮ ಕಥನವು ಮನಸ್ಸಿಗೆ ಬಹಳ ಹತ್ತಿರವಾಗಿದೆ. ಆ ಸನ್ನಿವೇಶಗಳಲ್ಲಿ ನಾನು ಒಬ್ಬಳಾಗಿ ಹೋಗಿರುತ್ತೇನೆ. ನಿಮ್ಮ ಭೀಮಜ್ಜಿಯ ಬಗ್ಗೆಯಂತೂ ನನಗೆ ಬಹಳ ಕುತೂಹಲ . ಸಾಧ್ಯವಾದರೆ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಬರೆಯಿರಿ.
    ಅಧಿತಿ

    ಪ್ರತಿಕ್ರಿಯೆ
  2. Rajashekhar Malur

    Yes, I agree with Adhiti. The language is so near to us that I think of Gorur and Masti when I read you. Thank you HSV… I aam enjoying each and every kathana.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: