ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಅವರು ಅನಂತಸ್ವಾಮಿ

ಅಳಿಯಲಾರದ ನೆನಹು-೨೦

ಎಚ್ ಎಸ್ ವೆಂಕಟೇಶ ಮೂರ್ತಿ

ಆ ಬೆಳಿಗ್ಗೆ ಏನು ಕಾರಣಕ್ಕೋ ಕಾಣೆ ಎನ್.ಎಸ್.ಎಲ್ ಅವರ ಮನೆಗೆ ಹೋಗಿದ್ದೆ. ಅವರು ಯಾರೋ ಅತಿಥಿಯೊಂದಿಗೆ ಮಾತಾಡುತ್ತಾ ಕುಳಿತಿದ್ದರು. ಬನ್ನಿ…ಬನ್ನಿ…ನಿಮಗೆ ದೂರದ ಅತಿಥಿಯೊಬ್ಬರನ್ನ ಪರಿಚಯಿಸುತ್ತೇನೆ ಎಂದು ನನಗೆ ಸ್ವಾಗತ ಬಯಸಿದರು. ಅತಿಥಿ ಸ್ಟೇಟ್ಸ್ ಇಂದ ಬಂದವರು. ನಳಿನೀ ಮೈಯ್ಯ ಅಂತ ಎಂದು ಆಕೆಯನ್ನು ಎನ್.ಎಸ್.ಎಲ್ ನನಗೆ ಪರಿಚಯಿಸಿದರು. ಒಂದು ಕ್ಷಣ ನಳಿನಿ ಮೈಯ್ಯ ನನ್ನನ್ನು ನೆಟ್ಟ ನೋಟದಿಂದ ನೋಡಿ ಮುಖ ಅರಳಿಸಿ ನುಡಿದರು: ಅಂದರೆ…ಇವರು …ಲೋಕದ ಕಣ್ಣಿನ ಎಚ್ಚೆಸ್ವಿ…?!

ಆ ಕಾಲದಲ್ಲಿ ನನ್ನ ಲೋಕದ ಕಣ್ಣಿಗೆ ಎಂಬ ಗೀತೆ ಗಳಿಸಿದ್ದ ಜನಪ್ರೀತಿ ಎಂಥದಿತ್ತೆಂದು ತಾವು ಈ ಪ್ರಕರಣದಿಂದ ಕಲ್ಪಿಸಬಹುದು. ನಾನು ಅಮೆರಿಕೆಗೆ ಹೋಗುವ ಎಷ್ಟೋ ವರ್ಷಗಳ ಮೊದಲೇ ನನ್ನ ಭಾವಗೀತೆಗಳು ಅಮೆರಿಕೆಯ ಸಹೃದಯರನ್ನು ತಲಪಿಯಾಗಿತ್ತು. ಹೀಗೆ ದೂರ ದೂರದ ಕನ್ನಡ ಮನಸ್ಸುಗಳಿಗೆ ಕವಿಗಳನ್ನು ಕೊಂಡೊಯ್ದವರು ನಮ್ಮ ಸುಗಮ ಸಂಗೀತ ಕಲಾವಿದರು! ನನಗೆ ಈ ಪಾಟಿ ಜನಪ್ರೀತಿಯನ್ನು ಕರುಣಿಸಿದ ಈ ಭಾವಗೀತೆ ಹಾಡಾದ ಪರಿ ಕೂಡ ಆಶ್ಚರ್ಯಕರವಾದದ್ದು.

ನನಗೆ ಚೆನ್ನಾಗಿ ನೆನಪಿದೆ. ೧೯೯೫ನೇ ಇಸವಿ. ನಾನಾಗ ಸಿಂಡಿಕೇಟ್ ಬ್ಯಾಂಕ್ ಕಾಲೋನಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಾ ಇದ್ದೆ. ಅದು ಪದ್ಮನಾಭನಗರಕ್ಕೆ ತುಂಬ ಸಮೀಪ. ಸಿಂಡಿಕೇಟ್ ಬ್ಯಾಂಕ್ ಕಾಲೋನಿಯಲ್ಲಿ ನಾನು ಎರಡು ವರ್ಷ ಇದ್ದಾಗ ನಾನು ಮತ್ತು ಜಿ.ಎಸ್.ಎಸ್. ಪ್ರತಿನಿತ್ಯ ಬೆಳಿಗ್ಗೆ ನಸುಕಿನಲ್ಲೇ ಒಂದು ಗಂಟೆಯ ವಾಕ್ ಮಾಡುತ್ತ ಇದ್ದೆವು. ಆ ಸ್ವಾರಸ್ಯವನ್ನು ಕುರಿತು ಮತ್ತೆ ಬರೆಯುತ್ತೇನೆ. ಈಗ ಲೋಕದ ಕಣ್ಣಿಗೆ ಹಾಡಿನ ಬಗ್ಗೆ ಕೆಲವು ಮಾತು ಬರೆಯಬೇಕಾಗಿದೆ. ಲೋಕದ ಕಣ್ಣಿಗೆ ರಾಧೆಯು ಕೂಡ, ಅಮ್ಮಾ ಯಶೋಧೆ, ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಆ ನೀಲಿ ಕೊಳದಲ್ಲಿ… ಮೊದಲಾದ ಹಾಡುಗಳನ್ನು ನಾನು ಬರೆದ ಸಮಯ. ಹತ್ತು ಹಾಡುಗಳನ್ನು ಫೈಲ್ನಲ್ಲಿ ಹಾಕಿ ಗೆಳೆಯ ಸಿ. ಅಶ್ವತ್ಥರಿಗೆ ತಲಪಿಸಿದ್ದೆ.

ಅಶ್ವಥ್ ಒಂದು ತಿಂಗಳು ಗೀತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಆಮೇಲೆ ಒಂದು ದಿನ ಅವರು ನಮ್ಮ ಮನೆಗೆ ಬಂದು: ಸಾರಿ ಎಚ್ಚೆಸ್ವಿ…ಯಾಕೋ ಈ ಹಾಡುಗಳು ನನ್ನನ್ನು ಇನ್ ಸ್ಪಯರ್ ಮಾಡ್ತಾ ಇಲ್ಲ…! ಎಂದು ಹೇಳಿ ಫೈಲ್ ವಾಪಸ್ಸು ಕೊಟ್ಟು, ಬೇರೆ ಹಾಡು ಬರೆದು ಕೊಡಲು ಸೂಚಿಸಿ ನಿರ್ಗಮಿಸಿದರು! ಯೋಗಾಯೋಗ ಅಂದರೆ ಅದು.

ಮಾರನೇ ದಿನ ಬೆಳಿಗ್ಗೆ ಒಂಭತ್ತು ಗಂಟೆ ಸಮಯ. ಆವತ್ತು ಭಾನುವಾರ. ಮೈಸೂರು ಅನಂತಸ್ವಾಮಿಗಳು ನಮ್ಮ ಮನೆಗೆ ಬಂದರು. ಲೋಕಾಭಿರಾಮವಾಗಿ ಮಾತು ನಡೆಯುತ್ತಿರುವಾಗ ಅನಂತಸ್ವಾಮಿ ಹೇಳಿದರು: “ಸ್ವಾಮೀ…ನಿಮ್ಮದೇ ಒಂದು ಹೊಸ ಕ್ಯಾಸೆಟ್ ಮಾಡಬೇಕು ಅಂತ ಅಂದುಕೊಂಡಿದ್ದೀನಿ… ನಿಮ್ಮ ಭಾವಗೀತೆ ಆರಿಸಿ ಕೊಡ್ತೀರಾ?”

ನಾನು ಅಶ್ವಥ್ ಹಿಂದಿರುಗಿಸಿದ್ದ ಗೀತೆಗಳ ಫೈಲ್ ತಂದು ಅನಂತಸ್ವಾಮಿಗಳ ಕೈಗೆ ಹಾಕಿದೆ. ಅನಂತಸ್ವಾಮಿ ಹಾಗೇ ಹೀಗೇ ಫೈಲ್ ತಿರುಗಿಸಿ ನೋಡಿ, ಇವು ನನ್ನ ಬಳಿ ಇರಲಿ..ಎಂದು ಫೈಲ್ ಕೊಂಡೊಯ್ದರು. ಇದಾದ ಮೇಲೆ ಒಂದು ವಾರ ಆಗಿರಬಹುದು. ಫೈಲ್ ವಿಷಯ ನಾನೂ ಮರೆತೇಬಿಟ್ಟೆ. ಆವತ್ತು ಮಧ್ಯರಾತ್ರಿ ಹನ್ನೆರಡರ ಸಮಯ. ನನ್ನ ಫೋನ್ ರಿಂಗಣಿಸ ತೊಡಗಿತು. ಇಷ್ಟು ಹೊತ್ತಿನಲ್ಲಿ ಯಾರು ಮಾಡಿರಬಹುದು ಎಂದು ಆತಂಕ ಪಡುತ್ತಾ ನಾನು ಫೋನ್ ಎತ್ತಿಕೊಂಡೆ.

ಆ ಕಡೆಯಿಂದ ಅನಂತಸ್ವಾಮಿಯವರ ಧ್ವನಿ: “ಪಾಪ…ಮಲಗಿದ್ದಿರೇನೋ…ತೊಂದರೆ ಕೊಡ್ತಾ ಇದೀನಿ…ಮತ್ತೇನಿಲ್ಲ…ನಿಮ್ಮ ಒಂದು ಹಾಡಿಗೆ ರಾಗ ಹಾಕಿದೀನಿ…ನಿಮಗೆ ಕೇಳಿಸಬೇಕು ಅನ್ನಿಸ್ತು…ಮನಸ್ಸು ತಡೀಲಿಲ್ಲ…ಕೇಳ್ತೀರಾ..?” ಆಗ ಅನಂತಸ್ವಾಮಿ ಫೋನಿನಲ್ಲೇ ನನಗೆ ಹಾಡಿತೋರಿಸಿದ ಗೀತೆ ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು! ಮುಂದೆ ನಾಡಿನುದ್ದಗಲಕ್ಕೂ ನಿನದಿಸಿದ ಆ ಗೀತೆಯನ್ನು ನಾನು ಮೊದಲು ಕೇಳಿದ್ದು ಮಧ್ಯರಾತ್ರಿ ಫೋನಿನ ಮೂಲಕ! ಆಮೇಲೆ ತಿಂಗಳೊಪ್ಪತ್ತಲ್ಲಿ ಅನಂತಸ್ವಾಮಿ ನನ್ನ ಅನೇಕ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದರು. ನೀರು ತಿಳಿಯಿದ್ದರೂ ಕೊಳವಿರಲಿ ಆಳ, ಅಮ್ಮಾ ನಾನು ದೇವರಾಣೆ, ಅಮ್ಮಾ ಬೇಕೇಬೇಕು ನಂಗೆ ಚಂದ್ರ ಆಡೋಕೆ, ಅಮ್ಮಾ ಯಶೋಧಾ ತೂಗುತ ಜೋಲಿ-ಈ ಮೊದಲಾದ ಅದ್ಭುತವಾದ ಸಂಯೋಜನೆಗಳು ಅನಂತಸ್ವಾಮಿಯವರ ಪ್ರತಿಭಾಸ್ಪರ್ಶದಿಂದ ಮೈತಾಳಿದ ಸ್ವರ್ಣ ದಿನಗಳು ಅವು.

ಅನಂತಸ್ವಾಮಿ ಹೀಗೆ ಅದ್ಭುತವಾದ ಸೃಷ್ಟಿಶೀಲತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ದಿನಗಳಲ್ಲೇ ಅವರ ಆರೋಗ್ಯದ ಮೇಲೆ ಕರಿನೆರಳೊಂದು ಆವರಿಸಿದ್ದು. ಗಂಟಲ ನೋವಾಗಿ ಪ್ರಾರಂಭವಾದದ್ದು ಕೊನೆಗದು ಕ್ಯಾನ್ಸರ್ ಎಂಬುದು ತಿಳಿದಾಗ ನಾವೆಲ್ಲಾ ಹೌಹಾರಿಹೋದೆವು. ಹಾಡುವ ಹಕ್ಕಿಯ ಗಂಟಲಿಗೇ ಗ್ರಹಣವಾಗಬೇಕೇ? ವೈದ್ಯರು ಅನಂತಸ್ವಾಮಿಯವರಿಗೆ ಹಾಡುವುದು ಕೂಡದು ಎಂದು ನಿಷೇಧಿಸಿದ್ದರು. ಅನಂತಸ್ವಾಮಿಗಳ ಗಂಟಲು ವ್ರಣ ತೀವ್ರಸ್ವರೂಪ ತೆಗೆದುಕೊಳ್ಳುತ್ತಾ ಇತ್ತು. ಆಗ ಅವರ ಗೆಳೆಯರೆಲ್ಲಾ ಸೇರಿ ಅವರಿಗೊಂದು ಸನ್ಮಾನ ಸಮಾರಂಭ ಏರ್ಪಡಿಸಿದರು. ಎಚ್.ಎನ್.ಕಲಾಕ್ಷೇತ್ರದಲ್ಲಿ ಆ ಸಂಜೆ ಅದ್ಧುರಿಯ ಕಾರ್ಯಕ್ರಮ. ಜನ ಕಿಕ್ಕಿರಿದು ಸೇರಿದ್ದರು. ಕಾರ್ಯಕ್ರಮದ ಯೋಜಕರು ಅಂದುಕೊಂಡಿದ್ದು ಅನಂತಸ್ವಾಮಿಯವರ ಸಂಯೋಜನೆಗಳನ್ನ ಆವತ್ತು ಅವರ ಮಕ್ಕಳು ಮತ್ತು ಶಿಷ್ಯರು ಹಾಡಬೇಕು ಎಂದು.. ಆದರೆ ಆದದ್ದೆ ಬೇರೆ.

ಅನಂತಸ್ವಾಮಿಯವರಿಗೆ ಅದೇನು ಉಕ್ಕಿ ಬಂತೋ ತಾವೇ ಒಂದು ಹಾಡು ಹಾಡುತ್ತೇನೆಂದು ವೇದಿಕೆಗೆ ಬಂದೇ ಬಿಟ್ಟರು. ಒಂದಲ್ಲ. ಅನೇಕ ಹಾಡುಗಳನ್ನು ಹಾಡಿದರು. ಅವರನ್ನು ಹಾಡದಂತೆ ತಡೆಯುವುದು ಯಾರಿಗೂ ಸಾಧ್ಯವಿರಲಿಲ್ಲ. ಅವರ ಪತ್ನಿ, ಮಕ್ಕಳು, ಗೆಳೆಯರು ಆತಂಕದಿಂದ ನೋಡುವುದು ಮಾತ್ರ ಸಾಧ್ಯವಾಯಿತು. ಆವತ್ತು ಅವರು ಹಾಡಿದ ಕೊನೆಯ ಹಾಡು-ಎದೆ ತುಂಬಿ ಹಾಡಿದೆನು ಅಂದು ನಾನು…ಆ ಹಾಡು ಕೇಳುತ್ತಲೇ ಸಭೆಯಲ್ಲಿ ಮಿಂಚಿನ ಸಂಚಾರ ಆಯಿತು. ಅಷ್ಟು ಅದ್ಭುತವಾಗಿ ಅನಂತಸ್ವಾಮಿ ಆ ಹಾಡು ಹಾಡಿದ್ದು ನಾನು ಕೇಳಿಯೇ ಇರಲಿಲ್ಲ. ಅನಂತಸ್ವಾಮಿ ಹಾಡುತ್ತಾ ಇರಲಿಲ್ಲ; ತಮ್ಮ ಅಂತರಂಗವನ್ನೇ ಹೊರಗೆ ಹಾಕುತ್ತಾ ಇದ್ದರು.ಕೇಳುಗರ ಕಣ್ಣುಗಳು ಒದ್ದೆಯಾದವು. ಕೆಲವರು ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ನಾನು ನೋಡಿದೆ. ಅದೇ ಅನಂತಸ್ವಾಮಿಗಳ ಕೊನೆಯ ಸಾರ್ವಜನಿಕ ಕಚೇರಿ.
ಕೆಲವೇ ತಿಂಗಳಲ್ಲಿ ಅನಂತಸ್ವಾಮಿ ಸೇಂಟ್ ಜಾನ್ ಆಸ್ಪತ್ರೆ ಸೇರಿದರು. ಅವರ ಜೀವಿತದ ಅಂತಿಮ ದಿನಗಳವು. ಅಶ್ವಥ್ ಆ ಬೆಳಿಗ್ಗೆ ನಮ್ಮ ಮನೆಗೆ ಬಂದರು. ಅನಂತಸ್ವಾಮಿಯವರ ಆರೋಗ್ಯ ಏನೇನೂ ಚೆನ್ನಾಗಿಲ್ಲ. ಜಿ.ಎಸ್.ಎಸ್. ನೋಡಬೇಕು ಅನ್ನುತ್ತಿದ್ದಾರೆ. ನೀವೂ ಬರುವುದಾದರೆ ಹೊರಡಿ ಬೇಗ..ಎಂದರು. ನಾವು ಐ.ಸಿ.ಯು ದಲ್ಲಿ ಅನಂತಸ್ವಾಮಿಗಳನ್ನು ನೋಡಿದಾಗ ಕರುಳು ಕಿವುಚಿದಂತಾಯಿತು. ಅವರು ವೆಂಟಿಲೇಟರ್ನಲ್ಲಿ ಇದ್ದುದರಿಂದ ಮಾತಾಡುವಂತಿರಲಿಲ್ಲ. ಆದರೆ ಅವರು ನಮ್ಮ ಗುರುತು ಹಿಡಿದರು. ನನ್ನ ಕೈ ಬಲವಾಗಿ ಹಿಡಿದುಕೊಂಡು ಪ್ರೀತಿಯಿಂದ ಎಷ್ಟೋ ಹೊತ್ತು ಒತ್ತಿ ಹಿಡಿದಿದ್ದರು. ಅವರ ಕಣ್ಣುಗಳಲ್ಲಿ ಸ್ನೇಹ ಭಾವ ತುಂಬಿ ತುಳುಕುತ್ತಾ ಇತ್ತು.
ಅನಂತಸ್ವಾಮಿ ನಮ್ಮಿಂದ ದೂರವಾದ ಮೇಲೆ ರಾಜುಅನಂತಸ್ವಾಮಿ ಒಂದು ದಿನ ನಮ್ಮ ಮನೆಗೆ ಬಂದರು. ಹುಡುಗ ತುಂಬ ಇಳಿದುಹೋಗಿದ್ದು ಕಂಡು ಮನಸ್ಸಿಗೆ ತುಂಬ ನೋವಾಯಿತು. ನಾನು ಇನ್ನುಮುಂದೆ ಹಾಡುವುದೇ ಇಲ್ಲ ಎಂದರು. ಅವರಿಗೆ ಏನು ಸಮಾಧಾನ ಹೇಳುವುದು? ಮುಂದೆ ರಾಜು , ಅನಂತಸ್ವಾಮಿಯವರು ತಮ್ಮ ಜೀವಿತದ ಕೊನೆಯ ಅವಧಿಯಲ್ಲಿ ಸಂಯೋಜಿಸಿದ್ದ ನನ್ನ ಗೀತೆಗಳನ್ನು ಸಿ.ಡಿ.ರೂಪದಲ್ಲಿ ತರಬೇಕೆಂದು ನಿಶ್ಚಯಿಸಿ ಮತ್ತೆ ನನ್ನನ್ನು ಸಂಪರ್ಕಿಸಿದರು.ಹೀಗೆ ಅನಂತನಮನ ಸಿ.ಡಿ ರೂಪದಲ್ಲಿ ಹೊರಬಂತು.

ಅದರಲ್ಲಿ ರಾಜು, ಸುನೀತ, ಅನಿತಾ, ಸೌಗಂಧಿಕ(ಅನಂತಸ್ವಾಮಿಯವರ ಮೊಮ್ಮಗಳು) ಹಾಡಿದ್ದರು. ಸಿ.ಡಿ ತುಂಬ ಜನಪ್ರಿಯವಾಯಿತು ಎಂಬುದನ್ನು ಹೇಳಬೇಕಾದ ಅಗತ್ಯವಿಲ್ಲ. ಮುಂದೆ ಅಲ್ಲಿನ ಕೆಲವು ಹಾಡುಗಳನ್ನು ಪಲ್ಲವಿ ಮೊದಲಾದವರು ಹಾಡಿ ತುಂಬ ಜನಪ್ರಿಯಗೊಳಿಸಿದರು. ಅಮ್ಮಾ ನಾನು ದೇವರಾಣೆ ರಮೇಶ್ ಅರವಿಂದರು ತಮ್ಮ ಕ್ರೇಜಿಕುಟುಂಬ ಎಂಬ ಸಿನಿಮಾದಲ್ಲಿ ಕೂಡ ಬಳಸಿಕೊಂಡರು. ಅವರು ನನ್ನನ್ನು ಅನುಮತಿಗಾಗಿ ಸಂಪರ್ಕಿಸಿದಾಗ ನಾನು ಹೇಳಿದ್ದು ಇಷ್ಟೆ: ನೀವು ಹಾಡು ಬಳಸಿಕೊಳ್ಳುವುದು ನನಗೆ ಸಂತೋಷದ ಸಂಗತಿಯೇ. ಎರಡು ನಿಬಂಧನೆಗಳ ಮೇಲೆ ನಿಮಗೆ ನಾನು ಅನುಮತಿ ಕೊಡುತ್ತೇನೆ. ಒಂದು: ಹಾಡಿನ ಮೂಲ ಧಾಟಿಯನ್ನು ಬದಲಾಯಿಸ ಕೂಡದು. ಎರಡು: ಟೈಟಲ್ನಲ್ಲಿ ಅನಂತಸ್ವಾಮಿಯವರಿಗೆ ಕ್ರೆಡಿಟ್ ಕೊಡಬೇಕು. ರಮೇಶ್ ಈ ನಿಬಂಧನೆಗಳಿಗೆ ಒಪ್ಪಿದರು. ಹಾಗೂ ಸುಸಂಸ್ಕೃತರಾದ ಅವರು ತಾವು ಕೊಟ್ಟ ಮಾತನ್ನೂ ಉಳಿಸಿಕೊಂಡರು.

ಅನಂತಸ್ವಾಮಿಯವರನ್ನು ನೆನೆದಾಗ ಅನೇಕ ತುಣುಕು ತುಣುಕು ದೃಶ್ಯಗಳು ನನ್ನ ಕಣ್ಣ ಮುಂದೆ ಹಾದು ಹೋಗುತ್ತವೆ. ಅಂಥ ಕೆಲವು ಚಿತ್ರಗಳನ್ನು ನಿಮ್ಮ ಮುಂದೆ ಬಿಚ್ಚಿಡಬೇಕಾಗಿದೆ.

ಚಿತ್ರ ೧: ಚಿಂತಾಮಣಿಯಲ್ಲಿ ಬಿ.ಆರ್. ಎಲ್ ಮನೆ. ರಾತ್ರಿ ಸುಬ್ಬಾಭಟ್ಟರ ಮಗಳೆ ಎಂಬ ಅವರ ಕ್ಯಾಸೆಟ್ ಬಿಡುಗಡೆ ಮುಗಿಸಿಕೊಂಡು ಮಾರನೆ ಬೆಳಿಗ್ಗೆ ನಾವೆಲ್ಲಾ ಬೆಂಗಳೂರಿಗೆ ಹೊರಟಿದ್ದೇವೆ. ಆ ಗುಂಪಿನಲ್ಲಿ ಜಿ.ಎಸ್.ಎಸ್; ಸಿ.ಅಶ್ವಥ್; ಮೈಸೂರು ಅನಂತಸ್ವಾಮಿ ಮೊದಲಾದ ಘಟಾನುಘಟಿಗಳೆಲ್ಲಾ ಇದ್ದಾರೆ. ಬೆಳಿಗ್ಗೆ ತಿಂಡಿ ಕಾಫಿ ಮುಗಿಸಿದ ಮೇಲೆ, ಬಿ ಆರ್ ಎಲ್ ಅವರ ತಂದೆ ರಾಜಾರಾವ್ ಅವರು ಅನಂತಸ್ವಾಮಿಗಳನ್ನು ಒಂದು ಹಾಡು ಹೇಳಬೇಕೆಂದು ಕೋರುತ್ತಾರೆ. ಅದಕ್ಕೇನಂತೆ ? ಹಾಡೋಣೇಳಿ..ಎನ್ನುತ್ತಾ ಅನಂತಸ್ವಾಮಿ ಆಗ ಕೈಗೆ ಸಿಕ್ಕ ಯಾವುದೋ ಹಾರ್ಮೋನಿಯಮ್ ಕೈಗೆತ್ತಿಕೊಂಡು ಹಾಡಲು ತೊಡಗುತ್ತಾರೆ. ಯಾವ ಪಕ್ಕವಾದ್ಯಗಳ ಅಬ್ಬರವೂ ಇಲ್ಲ. ಆವತ್ತು ಅನಂತಸ್ವಾಮಿ ಹಾಡಿದ್ದು ಇನ್ನೂ ನನ್ನ ಕಿವಿಗಳಲ್ಲಿ ಮೊಳಗುತ್ತಾ ಇದೆ.

ಚಿತ್ರ ೨: ಮಗನ ಮದುವೆಗೆ ಕರೆಯುವುದಕ್ಕೆ ನಾನು ಮತ್ತು ನನ್ನ ಪತ್ನಿ ಬೆಂಗಳೂರು ದಕ್ಷಿಣವನ್ನೆಲ್ಲಾ ತಿರುಗಿ ಮಧ್ಯಾಹ್ನ ಎರಡು ಗಂಟೆ ಸಮಯಕ್ಕೆ ಅನಂತಸ್ವಾಮಿಯವರ ಮನೆಗೆ ಬಂದಿದ್ದೇವೆ. ಮೊದಲು ಊಟ ಮಾಡಿ..ಆಮೇಲೆ ಬೇರೆ ಮಾತು ಎನ್ನುತ್ತಾರೆ ಅನಂತಸ್ವಾಮಿ. ಹಸಿದ ಹೊಟ್ಟೆಗೆ ಆವತ್ತು ರುಚಿರುಚಿಯಾದ ಅನಂತಸ್ವಾಮಿಯವರ ಮನೆಯ ಊಟ ಅದೆಷ್ಟು ಪ್ರಿಯವಾಯಿತು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಆದರಾತಿಥ್ಯಕ್ಕೆ ಅನಂತಸ್ವಾಮಿ ಮತ್ತು ಅವರ ಶ್ರೀಮತಿ ಶಾಂತ ಪ್ರಸಿದ್ಧರಾದವರು. ಅನಂತಸ್ವಾಮಿ ಜತೆಯಲ್ಲಿ ಇರುವಾಗ ಹೊರಗೆ ನಾವು ಎಲ್ಲೇ ತಿಂಡಿತೀರ್ಥತೆಗೆದುಕೊಳ್ಳಲಿ ಬೇರೆಯವರಿಗೆ ಅವರು ಬಿಲ್ ಎತ್ತಿಕೊಳ್ಳಲು ಬಿಟ್ಟುದನ್ನು ನಾನು ಕಾಣೆ. ಈ ನೆಲೆಯಲ್ಲಿ ಅವರು ನಿಜಕ್ಕೂ ದೊರೆಯೇ. ಅನಂತಸ್ವಾಮಿ ಮತ್ತು ಸಿ.ಅಶ್ವಥ್ ಇವರಿಬ್ಬರ ಮನೆಯಲ್ಲಿ ನಾನು ಊಟಮಾಡಿದಷ್ಟು ಬೇರೆ ಯಾವ ಗೆಳೆಯರ ಮನೆಯಲ್ಲೂ ಊಟ ಮಾಡಿಲ್ಲ. ಇಬ್ಬರ ಮನಸ್ಸೂ ಬಹಳ ಧಾರಾಳ. ಅದಕ್ಕೆ ತಕ್ಕ ಸದ್ಗೃಹಿಣಿಯರೂ ಅವರ ಪತ್ನಿಯರಾಗಿದ್ದರು. ಅಶ್ವಥ್ ಎಲ್ಲದರಲ್ಲೂ ಧಾಂಧೂಂ. ಅನಂತಸ್ವಾಮಿ ಎಲ್ಲದರಲ್ಲೂ-ಹಿತಮಿತಮಧುರ.

ಚಿತ್ರ ೩: ೧೯೬೨. ತರೀಕೆರೆಯಲ್ಲಿ ಗಣಪತಿ ಉತ್ಸವ. ಅಲ್ಲಿ ಅನಂತಸ್ವಾಮಿ ಮತ್ತು ಶ್ಯಾಮಲ ಜಾಗೀರ್ದಾರ್ ಅವರ ಸಂಗೀತ. ಮ್ಯಾಂಡಲೀನ್ ನುಡಿಸುತ್ತಾ ಅನಂತಸ್ವಾಮಿ ಹಾಡಿದ್ದು. ಅದು ನಾನು ಅನಂತಸ್ವಾಮಿಯವರನ್ನು ಮುಖಾಮುಖಿ ಕೇಳಿದ ಮೊದಲ ಕಚೇರಿ. ಆವತ್ತು ಅನಂತಸ್ವಾಮಿ ಹಾಡಿದ ರಾಜರತ್ನಂ ಅವರ ರತ್ನನ ಪದಗಳು-ಅದರಲ್ಲೂ ನೀನ್ ನನ್ನ್ ಹಟ್ಟೀಗ್ ಬೆಳಕಂಗ್ ಇದ್ದೆ ಮಲ್ಲೀ, ಮಡಕೇರೀಲಿ ಮಂಜು-ಈ ಹಾಡುಗಳು ಹದಿನೇಳರ ಹರಯದ ನನ್ನನ್ನು ಅನೇಕ ತಿಂಗಳ ಕಾಡಿದ್ದು ಮರೆಯುವಂತೆಯೇ ಇಲ್ಲ….

ಚಿತ್ರ ೪: ಶಿವಮೊಗ್ಗದ ಕರ್ನಾಟಕ ಸಂಘದ ಸಭಾಭವನ. ವೇದಿಕೆಯ ಮೇಲೆ ಜಿ.ಎಸ್.ಎಸ್., ಅನಂತಸ್ವಾಮಿ ಮತ್ತು ಬಿ.ಕೆ.ಎಸ್.ವರ್ಮ. ನಾನು, ಆ ಕಪ್ಪು ಹುಡುಗಿ ಎಂಬ ಕವನವನ್ನು ಓದಿದೆ. ಅನಂತಸ್ವಾಮಿ ಆ ಕವಿತೆಯನ್ನು ಮೊಟ್ಟ ಮೊದಲು ಸಾರ್ವಜನಿಕವಾಗಿ ಪ್ರಸ್ತುತ ಪಡಿಸಿದರು. ಬಿ.ಕೆ.ಎಸ್.ವರ್ಮ ಆ ಕವಿತೆಗೆ ಚಿತ್ರರೂಪ ಕೊಟ್ಟರು. ಚಿತ್ರ ಬೇಗ ಮುಗಿಯದ್ದರಿಂದ ಅನಂತಸ್ವಾಮಿ ಮತ್ತೆ ಮತ್ತೆ ಆ ಹಾಡನ್ನು ಪುನರ್ಗಾಯನ ಮಾಡಬೇಕಾಗಿ ಬಂತು! ಕವಿತೆಯ ಓದು ಗಾಯನ ಚಿತ್ರರಚನೆಯ ಮೊಟ್ಟಮೊದಲ ಕಾರ್ಯಕ್ರಮವದು…

ಚಿತ್ರ ೫: ಸೇಂಟ್ ಜಾನ್ಸ್ ನ ಐ.ಸಿ.ಯೂನಿಟ್. ಬಾಯಿ ಮೂಗಿಗೆಲ್ಲಾ ನಳಿಕೆ ಹಾಕಿಸಿಕೊಂಡ ಅನಂತಸ್ವಾಮಿ ಹಾಸಿಗೆಯ ಮೇಲೆ ಅದಕ್ಕೆ ಹತ್ತಿಕೊಂಡಂತೆ  ಮಲಗಿದ್ದಾರೆ. ನಾನು ಅನಂತಸ್ವಾಮಿಗಳೇ ಅಂದಾಗ ನಿಧಾನವಾಗಿ ಅವರು ಕಣ್ಣು ತೆರೆಯುತ್ತಾರೆ. ಕಣ್ಣು ಒದ್ದೆಯಾಗುತ್ತದೆ. ನನ್ನ  ಚಾಚಿದ ಕೈಯನ್ನು ಅವರು ಗಟ್ಟಿಯಾಗಿ ಒತ್ತುತ್ತಾರೆ…ಕೆಲವೇ ಕ್ಷಣ…ನಿಧಾನಕ್ಕೆ ಆ ಹಿಡಿತ ಸಡಿಲವಾಗುತ್ತೆ…

‍ಲೇಖಕರು avadhi

July 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಬೆಳ್ಳಾಲ ಗೋಪಿನಾಥ ರಾವ್

    ನಿಮ್ಮ ಕಥನ ಓದಿ ನನ್ನ ಕಣ್ಣುಗಳೂ ಒದ್ದೆಯಾದುವು ಸಾರ್
    ನಿಜ ಅನಂತಸ್ವಾಮಿಯವರು ಇಂದೂ ನಮ್ಮೊಡನಿದ್ದಾರೆ
    ಅನ್ನಿಸುತ್ತೆ, ಧನ್ಯವಾದಗಳು ಸರ್

    ಪ್ರತಿಕ್ರಿಯೆ
  2. Manjula

    Sir, nimma Anmathakathana oduttha arivilladanthe kanninalli neeru banthu. Estu chennagi kannige kattidanthe Mysore Anantha swamy yavara bagge barediddiri. Che, thumba novaagutthe. Anantha swamy avra bagge oduttha nammannu bittu agalididha Raju Ananthaswamy avara nenapu marukalisithu. Thumba dhanyavadagalu Sir.

    ಪ್ರತಿಕ್ರಿಯೆ
  3. Prashanth Ignatius

    ನಿಮ್ಮ ಬರಹ ಓದಿದಾಗಿನಿಂದ ’ಲೋಕದ ಕಣ್ಣಿಗೆ’ ಹಾಡಿನ ಮೊದಲ ಸಾಲಿನ ಗುನುಗು ಇನ್ನೂ ಜಾರಿಯಲ್ಲಿದೆ.

    ಪ್ರತಿಕ್ರಿಯೆ
  4. ranganna k

    mestre, nijavaagiyuu lokada kannige raadhe kooda ondu henne,

    anantha swamy’yavaranthe..

    kannu theevagolluthive.

    ಪ್ರತಿಕ್ರಿಯೆ
  5. ರಾಮಚಂದ್ರ ನಾಡಿಗ್, ಕದರನಹಳ್ಳಿ

    ಅವತ್ತೊಂದಿನ ನಾನು ಹೊಸಕೆರೆಹಳ್ಳಿ ಮನೆಗೆ ಬಂದಿದ್ದೆ. ಮೈಸೂರು ಅನಂತಸ್ವಾಮಿ ಆಗಲೇ ನಿಧನರಾಗಿದ್ದರು. `ಅನಂತ ನಮನ’ ಕ್ಯಾಸೆಟ್ ಇನ್ನೂ ಬಿಡುಗಡೆ ಆಗಿರ್ಲಿಲ್ಲ. ಆದರೆ ಮೊದಲೇ ಕ್ಯಾಸೆಟಿನ ಒಂದು ಕಾಪಿ ನಿಮ್ಮ ಮನೆಯಲ್ಲಿತ್ತು. ಇದು ಅನಂತಸ್ವಾಮಿಯವರ ಕೊನೆಯ ರಾಗಸಂಯೋಜನೆಯ ಕ್ಯಾಸೆಟ್ ಎಂದು ನೀವು ಹೇಳಿದ್ರಿ. ಅವತ್ತು ನಾನು ಹಾಲ್ ನಲ್ಲಿ ಕೂತು ಆ ಹಾಡುಗಳನ್ನು ಕೇಳಿದ್ದು ಇನ್ನೂ ಕಣ್ಣ ಮುಂದೆ ಬರ್ತಿದೆ. ಮೊದಲ ಸಲ ಕೇಳಿದಾಗಲೇ ಎಲ್ಲಾ ಹಾಡುಗಳ ಸಾಹಿತ್ಯ ಹಾಗೂ ರಾಗ ಸಂಯೋಜನೆ ಗಮನ ಸೆಳೆದಿದ್ದವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: