ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಪ್ಲೀಸ್ ನಿಮ್ಮಲ್ಲೇ ಈ ವಿಷಯ ಇರಲಿ.

ಅಳಿಯಲಾರದ ನೆನಹು...

ಎಚ್ ಎಸ್ ವೆಂಕಟೇಶ ಮೂರ್ತಿ
ವೇಣು ಎಂದು ಹೇಳಿದಾಗ ಯಾರೋ ಹುಡುಗ ಎಂದೇ ನೀವು ಭಾವಿಸುತ್ತೀರಿ. ನಾನೂ ಮೊದಲು ಹಾಗೇ ಅಂದುಕೊಂಡಿದ್ದು. ಕ್ಲಾಸು ತೆಗೆದುಕೊಂಡ ಮೇಲೆ ಗೊತ್ತಾಯಿತು. ವೇಣು ಹುಡುಗಿ ಅಂತ. ನೋಡಿದ ಕೂಡಲೇ ಆಕರ್ಷಿಸುವ ಏನೋ ಶಕ್ತಿ ಆ ಹುಡುಗಿಯ ಕಣ್ಣುಗಳಲ್ಲಿತ್ತು. ತುಂಬ ಗಂಭೀರ ಸ್ವಭಾವ. ಅವಳ ಜೊತೆಗೆ ಸಾರಿಕಾ ಎನ್ನುವ ಇನ್ನೊಬ್ಬ ಹುಡುಗಿ ಯಾವಾಗಲೂ ಇರುತ್ತಿದ್ದಳು. ಕಾಲೇಜುಗಳಲ್ಲಿ ಹೀಗೆ ಹುಡುಗಿಯರು ಹುಡುಗಿಯರನ್ನು ಇಷ್ಟು ಗಾಢವಾಗಿ ಹಚ್ಚಿಕೊಳ್ಳುವುದು ಅಪರೂಪ.ಅವರಿಬ್ಬರೂ ಐದು ವರ್ಷಗಳ ಕಾಲ ನನ್ನ ವಿದ್ಯಾರ್ಥಿಗಳಾಗಿದ್ದರು. ಕೊನೆಯ ವರೆಗೂ ಹಾಗೇ ಆಪ್ತ ಗೆಳತಿಯರಾಗಿ ಉಳಿದರು. ಹುಡುಗರೊಂದಿಗೆ ಹೆಚ್ಚು ಸಲುಗೆ ಅವರಿಬ್ಬರೂ ಬೆಳೆಸಿದ್ದು ನನ್ನ ಗಮನಕ್ಕೆ ಬರಲಿಲ್ಲ.
ವೇಣುವಿನ ಮನೆ ಮಾತು ತಮಿಳಾಗಿತ್ತು. ಆದರೆ ಬಹಳ ಬೇಗ ಕನ್ನಡದಲ್ಲಿ ತರಗತಿಗೇ ಹೆಚ್ಚು ಅಂಕ ಪಡೆಯುವಷ್ಟು ಅವಳು ಬರವಣಿಗೆಯಲ್ಲಿ ಸುಧಾರಿಸಿದಳು. ವೇಣು ಮತ್ತು ಸಾರಿಕಾ ನನ್ನನ್ನು ತುಂಬ ಹಚ್ಚಿಕೊಂಡಿದ್ದು ನನಗೆ ಯಾರು ಏನು ತಪ್ಪು ತಿಳಿಯುವರೋ ಎಂಬ ಸಂಕೋಚವನ್ನೂ ಮುಜುಗರವನ್ನೂ ಉಂಟುಮಾಡುತ್ತಿತ್ತು. ವೇಣು ತನ್ನ ಗೆಳತಿಯೊಂದಿಗೆ ಸ್ಟಾಫ್ ರೂಮಿನ ಮುಂದೆ ಇದ್ದ ಕಾರಿಡಾರಲ್ಲಿ ಠಳಾಯಿಸುತ್ತಿದ್ದಾಳೆ ಎಂದರೆ ಅವಳು ನನ್ನನ್ನು ಮಾತಾಡಿಸುವ ಸಮಯಕ್ಕೆ ಹೊಂಚುಹಾಕುತ್ತಿದ್ದಾಳೆ ಎಂದೇ ಅರ್ಥ. ನಮ್ಮ ಸೀನಿಯರ್ ಕಲೀಗ್ ಒಬ್ಬರು ಆಗ ಹಾಸ್ಯ ಮಾಡುತ್ತಿದ್ದರು: ನೋಡಿ….ನಿಮ್ಮ ಪಟ್ಟಶಿಷ್ಯೆ ನಿಮ್ಮನ್ನ ಮಾತಾಡಿಸಬೇಕು ಅಂತ ಹಾತೊರೀತಿದಾಳೆ…ನಾನಿರೋದು ಅವರಿಗೆ ಕಷ್ಟವಗ್ತಾ ಇದೆ…ಹೋಗಿ ನೀವೇ ಏನೂ ಅಂತ ವಿಚಾರಿಸಬಾರದೆ? ಈ ಹಾಸ್ಯ ಶುದ್ಧಾಂಗ ಹಾಸ್ಯವೇ ಆಗಿತ್ತು ಎಂದು ನಾನು ನಂಬಲಾರೆ. ಅದರಲ್ಲಿ ಬೆಕ್ಕಿನ ಪಂಜದಲ್ಲಿ ಹುದುಗಿರುವ ಚೂಪುಗುರಿನಂತೆ ಅನೇಕ ಅಪಾರ್ಥಗಳು ಹುದುಗಿದ್ದವು ಎಂಬುದನ್ನು ನಾನು ಊಹಿಸಬಲ್ಲವನಾಗಿದ್ದೆ. ಈ ಹುಡುಗಿಯರು ಯಾಕೆ ಹೀಗೆ ಮಾಡುತ್ತಾರೆ ಎಂದು ಕೆಲವು ಬಾರಿ ನನಗೆ ವೇಣೂ ಮತ್ತು ಅವಳ ಗೆಳತಿಯ ಮೇಲೆ ಬೇಸರವೂ ಮೂಡುತಿತ್ತು. ಆದರೆ ಅದನ್ನು ವಿವರಿಸಿ ಹೇಳುವ ಹಾಗಿರಲಿಲ್ಲ. ಆ ಮುಗ್ಧ ಮನಸ್ಸಿನ ಹುಡುಗಿಯರಲ್ಲಿ ಸಲ್ಲದ ಭಾವನೆಗಳನ್ನು ಉತ್ಪಾದಿಸುವ ಯಾವುದೇ ಮಾತಾಡುವುದು ನನಗೆ ಸುತ್ರಾಂ ಇಷ್ಟವಿರಲಿಲ್ಲ. ವೇಣು ಹತ್ತು ಗಂಟೆಗೆ ಕನ್ನಡ ಕ್ಲಾಸಿದ್ದರೆ ಸಾರಿಕಾ ಜೊತೆಗೋ ಅಥವಾ ತಾನು ಒಬ್ಬಳೇಯೋ ಸ್ಟಾಫ್ ರೂಮಿಗೆ ಬಂದು ಕೀ ಕೊಡ್ತೀರಾ ಸರ್…ಬಾಗಿಲು ತೆರೀತೀನಿ ಅನ್ನುತ್ತಾ ಇದ್ದಳು. ಅದರ ಹಿನ್ನೆಲೆ ಇಷ್ಟೇ. ಕನ್ನಡ ಹುಡುಗರ ಸಂಖ್ಯೆ ಕಡಿಮೆ ಇದ್ದುದರಿಂದ ಕನ್ನಡ ತರಗತಿಗೆ ಒಂದು ಪುಟ್ಟ ಆಲಾಯಿದ ಕೋಣೆಯನ್ನು ಪ್ರಿನ್ಸಿಪಾಲರು ನನಗೆ ಕೊಟ್ಟು, ಅದರ ಕೀ ಕೂಡ ನನ್ನ ಬಳಿಯೇ ಇರಿಸಿಕೊಳ್ಳುವಂತೆ ಹೇಳಿದ್ದರು. ಕನ್ನಡ ಹುಡುಗರು ಯಾವುದೇ ತರಗತಿಯಲ್ಲಿ ಹದಿನೈದರಿಂದ ಇಪ್ಪತ್ತರ ವರೆಗೆ ಇರುತ್ತಾ ಇದ್ದರು. ಅದಕ್ಕೇ ಅರ್ಧ ಹಾಸ್ಯ, ಅರ್ಧ ಮತ್ಸರದಿಂದ ಕೆಲವರು ಕಲೀಗುಗಳು ಎಚ್ಚೆಸ್ವೀದು ಬಿಡಿಯಪ್ಪಾ…ಪೀಜೀ ಕ್ಲಾಸು ಅಂತ ರಾಗ ಎಳೆಯುತ್ತಿದ್ದರು. ಅವರ ತರಗತಿಗಳಲ್ಲಿ ಭರ್ತಿ ನೂರು ಜನ ವಿದ್ಯಾರ್ಥಿಗಳು ಸೇರುತ್ತಿದ್ದರು. ಅಷ್ಟು ಜನಕ್ಕೆ ಕೇಳುವಂತೆ ಅರಚುವುದು, ಅಷ್ಟು ಮಕ್ಕಳನ್ನು ನಿಯಂತ್ರಿಸುವುದು, ಅನೇಕರಿಗೆ ಕಷ್ಟವಾಗುತಾ ಇತ್ತು. ಹೊಸ ಲೆಕ್ಚರರಾದರಂತೂ ಹುಡುಗರು ಅವರ ಜೀವ ಹಿಂಡಿ ಬಿಡುತ್ತಾ ಇದ್ದರು. ನನ್ನ ಗೆಳೆಯ ರಾ ಪ್ರತಿನಿತ್ಯ ಕ್ಲಾಸಿಂದ ಬಂದ ಮೇಲೆ ಕರ್ಚೀಫಿನಿಂದ ಕಣ್ಣು ಒರೆಸಿಕೊಳ್ಳುವುದು ನೋಡುವಾಗ ನನಗೆ ಅಯ್ಯೋ ಪಾಪ ಅನ್ನಿಸುತ್ತಾ ಇತ್ತು. ಯಾವುದೇ ಕಾಲೇಜಾಗಲೀ ಉಪನ್ಯಾಸಕ ಸೇರಿದ ಮೊದಲ ಎರಡು ವರ್ಷ ಅಗ್ನಿಪರೀಕ್ಷೆಯ ಕಾಲಾವಧಿ.ನವ ನವ ಉತ್ಸಾಹಿಗಳಾಗಿ ಬಂದವರು ಒಂದೇ ವಾರದಲ್ಲಿ ಸಪ್ಪಗಾಗಿ ಹೋಗುತ್ತಾ ಇದ್ದರು. ಎಲ್ಲೋ ಹಿಂದಿನ ಬೆಂಚಲ್ಲಿ ಹಕ್ಕಿ ಒಂದು ಕೂಗುತ್ತದೆ. ಯಾರು ಅಂತ ಗೊತ್ತಾಗುವುದಿಲ್ಲ. ಕಿಟಕಿಯ ಪಕ್ಕ ಒಂದು ನಾಯಿ ಕುನ್ನಿ ಕೊಯ್ಗುಟ್ಟಿತು. ಅದೂ ಯಾರೂ ಅಂತ ತಿಳಿಯುವುದಿಲ್ಲ. ಇದು ಲೆಕ್ಚರರ್ರಿಗೆ ಪ್ರಾಣಹಿಂಸೆಗೆ ಇಟ್ಟುಕೊಳ್ಳುತ್ತದೆ. ಅವನು ಏಕಾಗ್ರತೆ ಕಳೆದುಕೊಳ್ಳುತ್ತಾನೆ. ಮಾತು ತೊದಲುತ್ತದೆ. ಬೆವರು ಕಿತ್ತುಕೊಂಡುಬರುತ್ತದೆ. ಮುಖ ಬಿಳಚಿಕೊಳ್ಳುತ್ತದೆ. ತುಂಟ ಹುಡುಗರಿಗೆ ಇದೆಲ್ಲಾ ಮನರಂಜನೆಯ ವಿಷಯ. ಪಾಪ. ಲೆಕ್ಚರರಿಗೆ ಈ ಹುದ್ದೆ ಹೊಟ್ಟೆಪಾಡು ಎಂಬುದೂ ಅವರಿಗೆ ಆ ಕ್ಷಣ ನೆನಪಿಗೆ ಬಾರದು. ಮೇಷ್ಟ್ರನ್ನು ಗೋಳು ಹೊಯ್ದುಕೊಂಡು ಅವರು ಕ್ಲಾಸನ್ನು ಅರ್ಧಕ್ಕೇ ಬಿಟ್ಟು ಹೋದರೆಂದರೆ ಆ ಯುದ್ಧದಲ್ಲಿ ಆವತ್ತು ಅವರು ಗೆದ್ದಂತೆ. ಸಭ್ಯ ಹುಡುಗರಿಗೆ ಈ ತುಂಟರೊಂದಿಗೆ ವೈಮನಸ್ಯಬೆಳೆಸುವುದು ಸಾಧ್ಯವಾಗುವುದಿಲ್ಲ. ಅವರಿಗೆ ಈ ತರಲೆ ಕೋರರ ಬಗ್ಗೆ ಚೆನ್ನಾಗಿಗೊತ್ತಿರುತ್ತದೆ. ಕಾಗೆ ಯಾವುದು, ನಾಯಿ ಮರಿ ಯಾವುದು , ಎಲ್ಲಾ ಗೊತ್ತಿರುತ್ತದೆ. ವಿದ್ಯಾರ್ಥಿಗಳಲ್ಲಿ ಇರುವ ವಿಚಿತ್ರವಾದ ಯೂನಿಟಿ ಎಂಥದೆಂದರೆ ಅವರು ಅಪರಾಧಿಯನ್ನು ಬಿಟ್ಟುಕೊಡುವುದಿಲ್ಲ! ಕ್ಷಾಮಾಪಣೆ ಕೇಳುತ್ತಾರೆ. ನನಗೆ ತಪ್ಪು ಮಾಡಿದವರ ಹೆಸರು ತಿಳಿಸಿ ಎಂದರೆ ಪ್ಲೀಸ್ ಅದನ್ನು ಮಾತ್ರ ಕೇಳ ಬೇಡಿ ಸರ್ ! ಎಂದೇ ಅವರು ಹೇಳುವುದು. ಕೆಲವರು ಇಡೀ ಡೆಸ್ಕನ್ನೇ ಹೊರಗೆ ಕಳಿಸುವುದುಂಟು. ಅಸಭ್ಯರೊಂದಿಗೆ ಸಭ್ಯರೂ ಕ್ಲಾಸ್ ಕಳೆದುಕೊಳ್ಳುತ್ತಾರೆ. ಹಾಗೆ ಅವರು ಕ್ಲಾಸು ಕಳೆದುಕೊಂಡರು ಗಲಾಟೆ ಕೋರ ಯಾರು ಎಂದು ಅವರು ಹೇಳರು. ಮೇಷ್ಟ್ರು ಬ್ಲಾಕ್ ಬೋರ್ಡ್ ಕಡೆ ತಿರುಗಿ ಏನೋ ಬರೆಯಲಿಕ್ಕೆ ತೊಡಗಿದ ಕೂಡಲೇ ಹಾರಿ ಬರುವ ಕಾಗದದ ಬಾಣಗಳು ಇಟ್ಟ ಗುರಿಗೇನೋ ಖಚಿತವಾಗಿ ತಾಗುತ್ತವೆ. ಬಿಟ್ಟದ್ದು ಎಲ್ಲಿಂದ ಎಂಬುದು ಮಾತ್ರ ಯಾರಿಗೂ ತಿಳಿಯುವಂತಿಲ್ಲ. ಈ ಬಗೆಯ ಆತ್ಮಹಿಂಸೆ ಸಹಿಸಲಾರದ ಕೆಲವರು ಈ ಹಿಂಸೆ ಬೇಡಪ್ಪಾ ಎನ್ನುತ್ತಾ ರಾಜೀನಾಮೆ ಕೊಟ್ಟು ಹೊರಟುಹೋಗಿದ್ದೂ ಇದೆ. ನಾನು ಆ ದೃಷ್ಟಿಯಲ್ಲಿ ಅದೃಷ್ಟವಂತ ಎನ್ನಬೇಕು. ನಾನು ಹೊಸದಾಗಿ ಕಾಲೇಜಿಗೆ ಸೇರಿದಾಗ ತರಗತಿಯಲ್ಲಿ ಇದ್ದದ್ದು ಕೇವಲ ಹದಿನೈದುಮಂದಿ ಹುಡುಗರು! ಹಾಗಾಗಿ ಗೊತ್ತಾಗದಂತೆ ತರಲೆ ಮಾಡುವುದು ಶಕ್ಯವಿಲ್ಲದೆ ಹುಡುಗರು ಸಭ್ಯರಾಗಲೇ ಬೇಕಾಯಿತು. ಒಮ್ಮೆ ಕ್ಲಾಸಿನ ರುಚಿ ಹತ್ತಿದ ಮೇಲೆ ಕೆಲವರು ಹಿಂದೀ ಹುಡುಗರು ನನ್ನ ಕ್ಲಾಸಿಗೆ ಬರಲು ಶುರು ಹಚ್ಚಿದರು. ಅಂಥವರಲ್ಲಿ ಈಗ ಬಹುದೊಡ್ಡ ಕುಳವಾಗಿರುವ ಇನ್ಫೋಸಿಸ್ಸಿನ ಮೋಹನದಾಸ ಪೈ ಕೂಡ ಒಬ್ಬರು. ಅವರು ತಮ್ಮ ಹಿಂದಿ ಟೀಚರ್ ಬಳಿಗೆ ಹೋಗಿ ಸರ್ ಈವತ್ತು ಕನ್ನಡ ಮೇಷ್ಟ್ರು ಕುಮಾರವ್ಯಾಸನ ಪಾಠ ಮಾಡುತ್ತಾರಂತೆ..ನನಗೆ ಅವರ ಕ್ಲಾಸಿಗೆ ಹೋಗಲು ಪರ್ಮಿಷ್ಷನ್ ಕೊಡ್ತೀರಾ ಅಂತ ಕೇಳಿದರೆ ಮಹಾ ದಿಲದಾರ್ ಮನುಷ್ಯರಾಗಿದ್ದ ಹಿಂದಿಮೇಷ್ಟ್ರು…ಚಲ್ರೇ ಬೇಟಾ…ಅಂತ ಒಪ್ಪಿಗೆಯ ಗ್ರೀನ್ ಚಿಟ್ ಕೊಟ್ಟೇ ಬಿಡುತ್ತಾ ಇದ್ದರು. ಅವು ಅಂಥ ಒಳ್ಳೇ ದಿನಗಳಾಗಿದ್ದವು! ವೇಣು ತಾನೇ ಬಂದು ಕ್ಲಾಸ್ ರೂಮಿನ ಬಾಗಿಲು ತೆರೆಯುವ ಅಗತ್ಯ ಖಂಡಿತ ಇರಲಿಲ್ಲ. ಆದರೆ ಅವಳಿಗೆ ಅದು ಕನ್ನಡ ಟೀಚರ್ ಬಗ್ಗೆ ತನಗಿರುವ ಅಭಿಮಾನವನ್ನು ತೋರಿಸುವ ಒಂದು ಕ್ರಮವಾಗಿತ್ತು. ನನ್ನ ಕ್ಲಾಸಲ್ಲಿ ಮೊದಲು ಹೋಗಿ ಕೋಣೆ ಬಾಗಿಲು ತೆರೆದು, ಕಿಟಕಿಗಳನ್ನೆಲ್ಲಾ ಓಪನ್ ಮಾಡಿ, ಫ್ಯಾನ್ ಹಾಕಿ ಕಾಯುತ್ತಾ ಕುಳಿತುಕೊಳ್ಳುತ್ತಿದ್ದ ಆ ಇಬ್ಬರು ವಿದ್ಯಾರ್ಥಿಗಳನ್ನು ನಾನು ಹೇಗೆ ತಾನೇ ಮರೆಯಬಲ್ಲೆ? ವೇಣು ಕನ್ನಡ ಸಂಘದಲ್ಲಿ ಕೆಲಸ ಮಾಡಿದಳು. ನಾಟಕದಲ್ಲಿ ಅಭಿನಯಿಸಿದಳು. ಮಾತ್ರವಲ್ಲ ಬೀಕಾಂ ಪರೀಕ್ಷೆಯಲ್ಲಿ ಯಾಂಕ್ ಪಡೆದು ನಮ್ಮ ಕಾಲೇಜಿಗೆ ಗೌರವವನ್ನೂ ತಂದಳು. ಸಂಘಗಳಲ್ಲಿ ಕೆಲಸ ಮಾಡುವ ಹುಡುಗರು ಓದಿನಲ್ಲಿ ಹಿಂದೆ ಬೀಳುತ್ತಾರೆ ಎಂಬ ಮಾತನ್ನು ಸುಳ್ಳುಮಾಡಿದಳು. ಆದರೆ ನಾನು ಅವಳಿಗೆ ಎಷ್ಟು ಸಲುಗೆ ಮತ್ತು ಆತ್ಮೀಯತೆ ತೋರಿಸ ಬೇಕಾಗಿತ್ತೋ ಅಷ್ಟು ಸಲುಗೆ ಮತ್ತು ಆತ್ಮೀಯತೆ ಕೊನೆವರೆಗೂ ಕೊಡಲಾಗಲಿಲ್ಲ ಎನ್ನುವುದಕ್ಕೆ ವೇಣು ಹುಡುಗಿಯಾಗಿದ್ದುದೇ ಕಾರಣವೆಂದು ಈಗ ಅನ್ನಿಸುತ್ತಾ ಇದೆ. ಅಧ್ಯಾಪಕರಿಗೆ ವಯಸ್ಸಾಗುತ್ತಾ ವಯಸ್ಸಾಗುತ್ತಾ ಇಂಥ ಸಂದಿಗ್ಧಗಳು ಕಡಿಮೆಯಾಗುತ್ತವೆ. ಒಳ್ಳೆಯ ಅಧ್ಯಾಪಕರನ್ನು ಹುಡುಗರು ಬಹುಬೇಗ ತುಂಬ ಹಚ್ಚಿಕೊಳ್ಳುತ್ತಾರೆ. ಹುಡುಗರಾದರೆ ನಮ್ಮೊಂದಿಗೆ ಕಾಫಿಗೆ ಬರುತ್ತಾರೆ. ಒಳ್ಳೇ ನಾಟಕ ಸಿನಿಮಾಗಳಿಗೆ ಬರುತ್ತಾರೆ. ನಮ್ಮ ಮನೇಗೇ ಬಂದು ಗಂಟೆಗಟ್ಟಲೆ ಹರಟೆ ಹೊಡೆಯುತ್ತಾರೆ. ಪ್ರಸನ್ನ, ವಿಜಯಕುಮಾರ್, ಹೆಗಡೇ, ರವಿ, ರಾಜು, ಫ್ರಾನ್ಸಿಸ್, ಎನ್.ರವಿ, ಸ್ವಾಮಿ, ಶ್ರೀನಿವಾಸ್-ಇಂಥ ಹುಡುಗರಿಗೆ ನನ್ನಲ್ಲಿ ಎಷ್ಟು ಸಲುಗೆಯಿತ್ತೆಂದರೆ ನಾನು ಇಲ್ಲದಾಗ ಕೂಡಾ ಮನೆಗೆ ಬಂದು ಗಂಟೆಗಟ್ಟಲೆ ನನ್ನ ಚಿಕ್ಕ ಕೋಣೆಯಲ್ಲಿ ಅಡಕಲಾಗಿ ಒಟ್ಟಿದ್ದ ಪುಸ್ತಕಗಳನ್ನು ಹೆಕ್ಕಿಕೊಂಡು ಓದುತ್ತಾ ಕೂಡುವಷ್ಟು. ನನ್ನ ಪತ್ನಿಗೂ ಆ ಹುಡುಗರು ಅಷ್ಟೇ ಪ್ರಿಯರು! ಅವರನ್ನು ತಿಂಡಿ ಕಾಫಿ ಕೊಡದೆ ಯಾವತ್ತೂ ಕಳಿಸಿದವಳಲ್ಲ. ಅವಳಿಗೆ ಅವರೆಲ್ಲಾ ತಮ್ಮಂದಿರೇ ಆಗಿಬಿಟ್ಟಿದ್ದರು. ಈ ಸಲುಗೆ ನಾನು ನನಗೆ ಎಷ್ಟೇ ಪ್ರಿಯರಾಗಿದ್ದರೂ ವಿದ್ಯಾರ್ಥಿನಿಯರಿಗೆ ಕೊಡುವಂತಿರಲಿಲ್ಲ. ಎಲ್ಲವನ್ನೂ ವಕ್ರವಾಗಿಯೇ ನೋಡುವ ಶುಕ್ರಾಚಾರ್ಯಎಷ್ಟೋ ಜನ ನಮ್ಮ ಸುತ್ತಾ ಇದ್ದರು. ನಮ್ಮ ಸಮಾಜವೇ ಹಾಗೆ ಇದೆ. ನಮ್ಮ ಅರಿವಿದ್ದೇ ಈ ತಾರತಮ್ಯವನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಡುವೆ ನಾವು ತರುತ್ತಿದ್ದೆವೇನೋ… ಅನೇಕ ಹುಡುಗಿಯರಿಗೆ ತಾವು ಯಾವುದನ್ನು ನಂಬುತ್ತಾರೋ ಅದನ್ನು ತಮ್ಮ ಮೆಚ್ಚಿನ ಮೇಷ್ಟ್ರೂ ನಂಬಬೇಕೆಂಬ ಬಲವತ್ತರವಾದ ಆಸೆ. ಒಂದು ದಿನ ಸ್ಟಾಫ್ ರೂಮಲ್ಲಿ ಯಾರು ಇಲ್ಲದಾಗ ವೇಣು ಮತ್ತು ಸಾರಿಕಾ ನನ್ನನ್ನು ನೋಡಲು ಬಂದರು. ವೇಣು ಸರ್…ನಿಮ್ಮಲ್ಲೊಂದು ಪರ್ಸನಲ್ ಪ್ರಶ್ನೆಯಿದೆ..ಕೇಳಲಾ? ಎಂದಳು. ಕೇಳು..ಏನು ಪ್ರಶ್ನೆ? ಎಂದೆ. ವೇಣು ನೇರವಾಗಿ ನನ್ನ ಕಣ್ಣಲ್ಲಿ ಕಣ್ಣಿಟ್ಟು: ನಿಜ ಹೇಳಿ ಸರ್…ನಿಮಗೆ ದೇವರಲ್ಲಿ ನಂಬಿಕೆ ಇಲ್ಲವಾ?ಎಂದಳು. ತರಗತಿಯಲ್ಲಿ ನನ್ನ ಮಾತಿನ ಧಾಟಿ ನಾನೊಬ್ಬ ನಾಸ್ತಿಕ ಎಂಬ ಕಲ್ಪನೆಯನ್ನ ಅವಳಲ್ಲಿ ಹುಟ್ಟಿಸಿರಬೇಕು. ಆ ಬಗ್ಗೆ ಇಬ್ಬರೂ ತಮ್ಮಲ್ಲೇ ವಾದ ಮಾಡಿಕೊಂಡಿದ್ದಾರೆ. ವೇಣು ತುಂಬಾ ಆರ್ತಳಾಗಿದ್ದಳು. ಅವಳ ಕಣ್ಣ ಗುಡ್ಡೆಯ ಮೇಲೆ ಸಣ್ಣ ನೀರಿನ ತೆರೆ ಆವರಿಸುತ್ತ ಇತ್ತು. ಮಹಾ ಆಸ್ತಿಕ ಪ್ರಾಣಿಯಾದ ಈ ಹುಡುಗಿ ನಾನು ದೇವರಲ್ಲಿ ನಂಬಿಕೆ ಇಲ್ಲದವ ಎಂದರೆ ಕುಸಿದೇ ಬೀಳಬಹುದಾಗಿತ್ತು! ಈಗ ತಲೆ ತಗ್ಗಿಸಿ ವೇಣು ಕಂಪಿತ ಕಂಠದಲ್ಲಿ ನುಡಿದಳು: ಐ ಆಮ್ ಶೂರ್…ನೀವು ದೇವರನ್ನು ನಂಬ್ತೀರಿ… ಎಚ್ಚೆಸ್ವೀಗೆ ದೇವರಲ್ಲಿ ನಂಬಿಕೆ ಇಲ್ಲ ಅಂತ ನಾನು ಅಂದದ್ದಕ್ಕೆ ಬೆಳಿಗ್ಗೆಯಿಂದ ಇವಳು ಅಪ್ಸೆಟ್ ಆಗಿದಾಳೆ ಸರ್..ಎಂದಳು ಸಾರಿಕ. ನನಗೆ ಆ ಮುಗ್ಧ ಹುಡುಗಿಯರಿಗೆ ಏನು ಉತ್ತರಿಸಬೇಕೋ ತಿಳಿಯಲಿಲ್ಲ. ದೇವರಲ್ಲಿ ನಂಬಿಕೆ ಅಪನಂಬಿಕೆ ನನ್ನ ಮನಸ್ಸೊಂದಿಗೆ ಕಣ್ಣಾಮುಚ್ಚಾಲೆ ಆಡುವ ಒಂದು ಚೋದ್ಯವಾಗಿತ್ತು. ಎಷ್ಟೋ ಬಾರಿ ನಮ್ಮ ತೀರ್ಮಾನ, ನಿಲುವುಗಳು ನಮ್ಮೊಬ್ಬರವೇ ಆಗಿರುವುದಿಲ್ಲ ಎಂಬ ಸತ್ಯವನ್ನು ಆ ಕಿಶೋರಿಯರಿಗೆ ನೋವಾಗದಂತೆ ಹೇಗೆ ಮನದಟ್ಟು ಮಾಡಿಕೊಡುವುದು? ಈ ವಿಷಯ ನನಗೆ ಖಚಿತವಾಗಿ ಗೊತ್ತಿಲ್ಲಮ್ಮಾ ಎಂದೆ ಸೋತ ಧ್ವನಿಯಲ್ಲಿ. ಮಾಸ್ತಿಯವರಷ್ಟು ದೃಢವಾಗಿ ಅಥವಾ ಮೂರ್ತಿರಾಯರಷ್ಟು ಗಟ್ಟಿಯಾಗಿ ದೇವರ ಬಗ್ಗೆ ಮಾತಾಡಲು ನಾನು ಅಸಮರ್ಥನಾದುದು ನನ್ನನ್ನು ಆದಿನ ಸ್ವಲ್ಪ ಪೆಚ್ಚಾಗಿಸಿದ್ದಂತೂ ನಿಜ. ಮಾರನೇ ದಿನ ವೇಣು ಕೊಟ್ಟ ನೋಟ್ ಬುಕ್ಕಲ್ಲಿ ಈ ಸಾಲುಗಳಿದ್ದವು: ಸರ್..ಈವತ್ತಲ್ಲಾ ನಾಳೆ ನೀವು ದೇವರನ್ನು ನಂಬಿಯೇ ನಂಬುತ್ತೀರಿ…!ಪ್ಲೀಸ್ ನಂಬಿ ದೇವರನ್ನು…! ಪರೀಕ್ಷೆಗಳು ಹತ್ತಿರ ಬರುತ್ತಾ ಇದ್ದವು. ವೇಣು ಮತ್ತು ಸಾರಿಕಾ ಈಗ ಓದಿನಲ್ಲಿ ಮಗ್ನರಾದುದರಿಂದ ಹೆಚ್ಚಾಗಿ ನನಗೆ ಸಿಕ್ಕುತ್ತಾ ಇರಲಿಲ್ಲ. ಕ್ಲಾಸ್ ರೂಮಲ್ಲಿ ಮಾತ್ರ ಅವರನ್ನು ನೋಡಬಹುದಾಗಿತ್ತು. ಕಾರಿಡಾರಲ್ಲಿ ಒಮ್ಮೆ ಇಬ್ಬರನ್ನೂ ನಿಲ್ಲಿಸಿ ಪರೀಕ್ಷೆಗೆ ಹೇಗೆ ಓದುತಾ ಇದೀರಿ? ಎಂದು ಕೇಳಿದೆ. ನೀವಿಬ್ಬರೂ ಫಸ್ಟ್ ಕ್ಲಾಸ್ ಬರಲೇ ಬೇಕು…ಫಾದರ್ ಅಂದ್ರಾದೆಯವರನ್ನು ಕಾಣಿ..ಅವರು ನಿಮಗೆ ಲೈಬ್ರರಿಯಿಂದ ಬೇಕಾದ ಪುಸ್ತಕ ತೆಗೆಸಿಕೊಡುತ್ತಾರೆ ಎಂದೆ…ಅವರು ಆಗಾಗಲೇ ಫಾದರ್ ಇಂದ ಅನೇಕ ಪುಸ್ತಕಗಳನ್ನು ಎರವಲು ಪಡೆದಿದ್ದರು. ಸಾರಿಕಾ ವೇಣುವಿನ ಮನೆಯಲ್ಲೇ ಉಳಿದಿದ್ದಾಳಂತೆ. ಇಬ್ಬರೂ ಕಂಬೈನ್ಡ್ ಸ್ಟಡಿ ಮಾಡುತ್ತಿರೋದಾಗಿ ಹೇಳಿದರು. ಒಳ್ಳೇದಾಗಲಮ್ಮ ಅಂತ ಹೇಳಿ ನಾನು ಸ್ಟಾಫ್ ರೂಮಿಗೆ ನಿರ್ಗಮಿಸಿದೆ. ಬೇಸಿಗೆ ಪ್ರಾರಂಭವಾಗಿ ಬೆಂಗಳೂರು ಹತ್ತಿಕೊಂಡು ಉರಿಯುತ್ತಾ ಇತ್ತು. ಕ್ಲಾಸು ಮುಗಿಸಿಕೊಂಡು ಬಂದು ನಾನು ಆಯಾಸದಿಂದ ಸುಸ್ತಾಗಿ ಟೇಬಲ್ ಮೇಲೆ ತಲೆಯೂರಿ ಮಲಗಿದ್ದೆ. ನನಗೆ ಸಣ್ಣ ಜೊಂಪೇ ಹತ್ತಿರಬಹುದು. ಸರ್…ಸರ್..ಅಂತ ಯಾರೋ ಕೂಗಿದಂತೆನೆಸಿ ಕಣ್ಣು ಬಿಟ್ಟಾಗ ವೇಣು ಕಾಣಿಸಿದಳು. ಜೊತೆಯಲ್ಲಿ ಸಾರಿಕಾ ಇರಲಿಲ್ಲ. ಏನಮ್ಮ ಎಂದೆ. ಸರ್ …ಐ ವಾಂಟ್ ಟು ಷೊ ಯು ಸಮ್ತಿಂಗ್…ಆದರೆ ಇಲ್ಲಿ ಅಲ್ಲ… ನೀವು ನನ್ನ ಜತೆ ಒಬ್ಬರೇ ಹೊರಗೆ ಬರೋದಾದರೆ… ಇಬ್ಬರೂ ಕಾಲೇಜಿನ ಹಿಂಭಾಗದ ಬಯಲಿಗೆ ಬಂದೆವು. ಏನು ವಿಷಯ ವೇಣೂ ಎಂದೆ. ವೇಣು ತನ್ನ ವ್ಯಾನಿಟಿಯಿಂದ ಒಂದು ಕವರ್ ಮೆಲ್ಲಗೆ ಹೊರಗೆ ತೆಗೆದಳು. ಸ್ವಲ್ಪ ನಾಚಿಕೆ ಸ್ವಲ್ಪ ಅಧೀರತೆಯೊಂದಿಗೆ ಕವರ್ ನನಗೆ ಕೊಟ್ಟು..ನೋಡಿ..ಎಂದಳು. ಕವರಲ್ಲಿ ಒಂದು ಫೋಟೋಗ್ರಾಫ್ ಇತ್ತು. ಒಬ್ಬ ಸುಂದರ ತರುಣನದ್ದು. ಯಾರು ಇದು ಅಂದೆ ನಗುತ್ತಾ. ನನ್ನ ಫಿಯಾನ್ಸಿ…ಮದುವೆ ಗೊತ್ತಾಗಿದೆ…ಮುಂದಿನವಾರವೇ..ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗೊತ್ತಾದರೆ ತಮಾಷೆ ಮಾಡ್ತಾರೆ…ಪ್ಲೀಸ್ ನಿಮ್ಮಲ್ಲೇ ಈ ವಿಷಯ ಇರಲಿ… ನಾನು ಫೋಟೋ ವೇಣುವಿಗೆ ಕೊಟ್ಟು, ಹುಡುಗ ಚೆನ್ನಾಗಿದ್ದಾನೆ.. ಅಭಿನಂದನೆಗಳು..ಎಂದೆ. ಆ ಹುಡುಗಿ ನನ್ನ ಮುಖವನ್ನೇ ಪಿಳಿ ಪಿಳಿ ನೋಡಿದಳು. ನಿಮಗೆ ಸಂತೋಷವಾ ಸರ್..?ಎಂದು ಕೇಳಿದಳು. ಯಾಕೆ ಹಾಗೆ ಕೇಳುತ್ತಿ ಎಂದೆ? ಸುಮ್ಮನೆ..ಎಂದಳು. ಸಾರಿಕಾ ಒಳಗೇ ಬೇಜಾರು ಮಾಡಿಕೊಂಡಿದಾಳೆ..ಎಂದೂ ಸೇರಿಸಿದಳು. ಕಾರಣ? ಮದುವೆ ಆದಮೇಲೆ ನಾವು ಗೆಳೆತಿಯರು ದೂರವಾಗಲೇ ಬೇಕಲ್ಲ? ಎಂದಳು. ಹಾಗೆ ಹೇಳಿದ್ದು ವೇಣುವೋ ಸಾರಿಕಾನೋ ಎಂಬಂತೆ ಬೇಸರ ಇವಳ ದನಿಯಲ್ಲೇ ಜಿನುಗುತ್ತಾ ಇತ್ತು. ಎಷ್ಟು ವಿಚಿತ್ರ, ಎಷ್ಟು ಸಂಕೀರ್ಣ ಈ ಮನಸ್ಸಿನ ಪ್ರಪಂಚ! ಬಹುಕಾಲ ಒಟ್ಟಿಗೇ ಇರಬೇಕೆಂದರೆ ಈ ದೇಶದಲ್ಲಿ ಹುಡುಗ ಮತ್ತು ಹುಡುಗಿಯಾಗಿ ಹುಟ್ಟಲೇ ಬೇಕು. ನಾನು ನನ್ನ ಹೆಂಡತಿ ಐವತ್ತು ವರ್ಷ ಒಟ್ಟಿಗೇ ಇದ್ದೆವು. ನನ್ನ ಅತ್ಯಾಪ್ತಗೆಳೆಯರೊಂದಿಗೆ ನಾನು ಸಂಬಂಧ ಇರಿಸಿಕೊಂಡಿದ್ದು ಎಷ್ಟು ದಿನ? ಬಾಲ್ಯದ ಗೆಳೆಯರೊಂದಿಗೆ ಕೆಲವು ವರ್ಷ? ಕಿಶೋರಾವಸ್ಥೆಯಲ್ಲಿ ಕೆಲವು ವರ್ಷ? ಮಧ್ಯಪ್ರಾಯದಲ್ಲಿ ಕೆಲವು ವರ್ಷ? ಮುಪ್ಪಿನಲ್ಲಿ ಒಂದೆರಡು ವರ್ಷ? ನನ್ನ ಪತ್ನಿ ನನ್ನ ಬಾಲ್ಯದ ಗೆಳತಿಯಾಗಿದ್ದಳು. ಯೌವನದ ಜತೆಗಾತಿಯಾಗಿದ್ದಳು. ಮಧ್ಯವಯಸ್ಸಿನಲ್ಲಿ ಆಧಾರವಾಗಿದ್ದಳು. ಮುಪ್ಪಿನಲ್ಲಿ ಊರುಗೋಲಾಗಿದ್ದಳು. ನಮ್ಮ ನಡುವೆ ಏನೇ ಕಿತ್ತಾಟವಿದ್ದರೂ. ಅವಳು ಹೋದ ಮೇಲೆ ತುಂಬಿದ ಮನೆಯಲ್ಲಿ ನಾನು ಒಬ್ಬಂಟಿ…ಗಿಲಿಗಿಲಿ ಎನ್ನುವ ಜಗತ್ತಲ್ಲಿ ನಾನು ಏಕಾಂಗಿ….ಅನಂತಾತ್ಮಗಳ ವರ್ತುಲದಲ್ಲಿ ನಾನೊಂದು ಅನಾತ್ಮ.. .
]]>

‍ಲೇಖಕರು avadhi

July 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. RJ

    ಆರ್ದ್ರ ಬರಹ.ಕಲ್ಮಶವಿಲ್ಲದ ಬರಹಗಳು ಯಾವಾಗಲೂ
    ಹೃದಯಕ್ಕೆ ತಂಪು ನೀಡುತ್ತವೆ.ಇದೂ ಕೂಡ.
    Thanks.

    ಪ್ರತಿಕ್ರಿಯೆ
  2. ಬೆಳ್ಳಾಲ ಗೋಪಿನಾಥ ರಾವ್

    ಹೌದು, ಸರ್
    ನಿಜವಾಗಿಯೂ ಇಂತಹವೆಲ್ಲ ವಿಷಯ ನನ್ನ ಭಾವ ಶ್ರೀಯುತ ಸುಭ್ರಮಣ್ಯ ಜೋಯ್ಶಿಯವರು ತಿಳಿಸುತ್ತಿದ್ದರು.
    ನಿಮ್ಮ ಆನಾತ್ಮ ಕಥನ ಚೆನ್ನಾಗಿದೆ

    ಪ್ರತಿಕ್ರಿಯೆ
  3. sritri

    ಎಚ್ಚೆಸ್ವಿ ಸರ್, ಕೊನೆಯ ಸಾಲು ಓದುತ್ತಿರುವಂತೆ ಕಣ್ತುಂಬಿ ಬಂದಿತು. ಅನಂತಾತ್ಮಗಳ ವರ್ತುಲದಲ್ಲಿ ನೀವು ಅನಾತ್ಮರಲ್ಲ, ನೀವೊಂದು ದಿವ್ಯಾತ್ಮ, ಪುಣ್ಯಾತ್ಮ!

    ಪ್ರತಿಕ್ರಿಯೆ
  4. ರಾಮಚಂದ್ರ ನಾಡಿಗ್, ಕದರನಹಳ್ಳಿ

    ತುಂಬಾ ಹಚ್ಚಿಕೊಂಡವರು ಬಿಟ್ಟು ಅಗಲಿದಾಗ ಎಂಥಹವರಿಗೂ ನೋವಿನ ವಿಷಯವೇ ಸರಿ. ಆ ನೆನಪನ್ನು ಮರೆಯಲು ಬಹಳಾ ದಿನ ಬೇಕು. ಅಗಲಿಕೆಯ ನೋವು ಒಳ ಗಾಯದಂತೆ ಪದೇ ಪದೇ ನೋವು ಕೊಡುತ್ತಲೇ ಇರುತ್ತೆ.

    ಪ್ರತಿಕ್ರಿಯೆ
  5. subraya Hegade

    sir Anatma oodide kannu manjayitu. Badukinalli sambhandhagalu
    ondonduu ondu ooyasis iddante allave ? Sameepya short adaru
    adara nenapu matra shashvata . Adu needuva anubhava ananya.
    Blog nalli koncha oodide ashte. Purti oodi daga matte bareyuttene.
    Namaskara. Subraya Mattihalli
    6,11,10

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: