ಎಚ್ಚೆಸ್ವಿಕಾಲಂ: ಉಗ್ಗುಸುಬ್ಬಜ್ಜನ ಕುದುರೇ ಬಾಕಿ….

-ಎಚ್.ಎಸ್.ವೆಂಕಟೇಶಮೂರ್ತಿ ನಮ್ಮ ಪುಟ್ಟಜ್ಜನ ಅಣ್ಣನ ಹೆಸರು ಸುಬ್ಬಣ್ಣ ಅಂತ. ಆತನಿಗೆ ಸ್ವಲ್ಪ ಉಗ್ಗು ಇದ್ದುದರಿಂದ ಎಲ್ಲರೂ ಸುಬ್ಬಜ್ಜನನ್ನು ಉಗ್ಗುಸುಬ್ಬಣ್ಣ ಎಂದೇ ಕರೆಯುತ್ತಿದ್ದರು. ನಾನು ನೋಡಿದ ಹಾಗೆ ಸುಬ್ಬಜ್ಜನಿಗೆ ಹೆಂಡತಿ ಮಕ್ಕಳು ಯಾರೂ ಇರಲಿಲ್ಲ. ಮನೆ ಮಾರಿನ ಜವಾಬುದಾರಿಯೂ ಇರಲಿಲ್ಲ. ಹಾಗಾಗಿ ಆತ ಅಲಕ್ ನಿರಂಜನ್ ಅಂತ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಇದ್ದರು. ಪುಟ್ಟಜ್ಜ ಅರ್ಧ ಹಾಸ್ಯ ಅರ್ಧ ವ್ಯಂಗ್ಯದಿಂದ ನಮ್ಮ ನಾರದ ಮಹರ್ಷಿಗಳು ಇನ್ನೂ ಉಪಹಾರಕ್ಕೆ ಆಗಮಿಸಿಲ್ಲವೇ? ಎಂದು ನರಸಮ್ಮಜ್ಜಿಯನ್ನು ಕೇಳುತ್ತಾ ಇದ್ದರು. ಸುಬ್ಬಜ್ಜನ ಮೂಲ ನೆಲೆ ಅವರ ತಮ್ಮ ಪುಟ್ಟಣ್ಣ ವಾಸ್ತವ್ಯ ಹೂಡಿದ್ದ ಕೆಲ್ಲೋಡೇ ಆಗಿದ್ದರೂ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಾದುದರಿಂದ ವರ್ಷಪೂರ ತಮ್ಮ ಬಂಧುಬಳಗದ ಮನೆಗಳಿಗೆ ಭೆಟ್ಟಿ ಕೊಡುತ್ತಾ ದಿಮ್ ರಂಗ ಎಂದುಕೊಂಡು ಆರಾಮವಾಗಿ ಬಾಳು ನೂಕುತ್ತಾ ಇದ್ದರು. ಒಂದು ವಿಶೇಷ ಎಂದರೆ ಅವರು ಯಾರ ಮನೆಯಲ್ಲೂ ಒಂದು ರಾತ್ರಿಗಿಂತ ಹೆಚ್ಚು ಉಳಿಯುತ್ತಿರಲಿಲ್ಲ. ಸುಬ್ಬಜ್ಜ ನಮ್ಮೂರಿಗೂ ವರ್ಷಕ್ಕೊಂದು ಬಾರಿಯಾದರೂ ಭೆಟ್ಟಿ ಕೊಡುತ್ತಾ ಇದ್ದರು. ದೊಡ್ಡಪ್ಪಾ ಇನ್ನೂ ಒಂದು ದಿನ ಇದ್ದು ಹೋಗಬಾರದೆ? ಎಂದು ಸೀತಜ್ಜಿ ಉಪಚಾರದ ಮಾತು ಹೇಳಿದರೆ, ಸುಬ್ಬಜ್ಜ ತುಟಿಯ ಸಂದಿಯಲ್ಲೇ ನಕ್ಕು “ನಂಟರ ಮನೇಲಿ…ಒಂದು ದಿ ದಿ ದಿನಕ್ಕಿಂತ ಹೆಚ್ಚು ನಿಲ್ಲ ಬಾರದವ್ವಾ…” ಅನ್ನುತ್ತಿದ್ದರು. ದಕಾರ ಬಂದಾಗಲೆಲ್ಲಾ ಅವರಿಗೆ ಉಗ್ಗು ಒತ್ತಿಕೊಂಡು ಬರುತ್ತಾ ಇತ್ತು. ಸುಬ್ಬಜ್ಜನನ್ನು ಕಂಡರೆ ನನಗಂತೂ ವಿಪರೀತ ಪ್ರೀತಿ. ಅದಕ್ಕೆ ಕಾರಣ ಅವರು ಬಂದವರೇ ,” ಪುಟ್ಟಾ ಬಾರೋ ಇಲ್ಲಿ. ದಿ ದಿ ದಿವಿನಾದ ಉತ್ತುತ್ತಿ ತಂದಿದೀನಿ…ಬಾ…ಒಂದು ಮುತ್ತಿಗೆ ಒಂದು ಉತ್ತುತ್ತಿ….ಬಾ ….ಬಾ…” ಎನ್ನುತ್ತಾ ಹತ್ತಿರ ಹೋದರೆ ನನ್ನನ್ನು ಬಾಚಿತಬ್ಬಿಕೊಂಡು ಮುಖದ ತುಂಬ ಲೊಚ ಲೊಚ ಮುದ್ದುಕೊಡುತ್ತಾ ಇದ್ದರು. ಸೀತಜ್ಜಿಗೆ ಇದು ಕಸವಿಸಿಯ ಸಂಗತಿಯಾಗಿತ್ತು. ನಾನು ಎಲ್ಲಿ ಸುಬ್ಬಜ್ಜ ಕೊಟ್ಟ ಉತ್ತುತ್ತಿ ತಿಂದು ಬಿಡುತ್ತೇನೋ ಅಂತ ಅವಳ ಆತಂಕ. ಆ ಆತಂಕಕ್ಕೆ ಏನು ಕಾರಣ ಎಂದು ನಾನು ಊಹಿಸದವನಾಗಿದ್ದೆ. ಸುಬ್ಬಜ್ಜನ ವೇಷ ಭೂಷಣ ಮರೆಯಲಿಕ್ಕೇ ಸಾಧ್ಯವಿಲ್ಲ. ಈಶ್ವರನ ಗುಡಿ ತಿರುವಿನಲ್ಲಿ ಅವರು ಕಂಡ ಕೂಡಲೇ ಅದು ಸುಬ್ಬಜ್ಜನೇ ಎಂಬುದು ನನಗೆ ತಿಳಿಯುತ್ತಿತ್ತು. ಓ..ಸುಬ್ಬಜ್ಜ ಬಂತು ಅಂತ ನಾನು ಗಟ್ಟಿಯಾಗಿ ಅರಚುತ್ತಾ ಇದ್ದೆ. ಸುಬ್ಬಜ್ಜನದು ಬಣ್ಣ ಮಾಸಿದ ಕರೀಟೋಪಿ. ಕರೀಬಣ್ಣದ ಕೋಟು. ಹೆಗಲಿಗೆ ಒಂದು ಚೀಲ, ಒಂದು ಸಿಲವರ ಚೊಂಬು ಹುರಿ ಕಟ್ಟಿ ಜೋತುಬಿಟ್ಟುಕೊಂಡಿರುತ್ತಿದ್ದರು. ಚೀಲವೇನೋ ಸರಿ. ಆದರೆ ಆ ಸಿಲವರ ಚೊಂಬನ್ನು ಹೆಗಲಿಗೆ ನೇಲಿಸಿಕೊಂಡು ಈ ಮುದುಕ ಯಾಕೆ ಅಲೆಯುತ್ತಾರೋ ಎಂದು ನಾನು ಕುತೂಹಲದಿಂದ ಸುಬ್ಬಜ್ಜನ ಸಿಲವರ್ ಚೊಂಬನ್ನೇ ನೋಡುತ್ತಾ ಇದ್ದೆ. ಸುಬ್ಬಜ್ಜನ ಕಚ್ಚೆಪಂಚೆ ಮಾಸಿ ಗಿಮಟವಾಗಿರುತ್ತಾ ಇತ್ತು. ಅವರ ಬಾಯಿಂದ ಬೀಡಿ ವಾಸನೆ ಗಮ್ಮಂತ ಹೊಡೆಯುತ್ತಾ ಇತ್ತು. ಬಂದವರೇ ಸುಬ್ಬಜ್ಜ ತಮ್ಮ ಕೈಚೀಲವನ್ನು ಮಂಚದ ಮೇಲೆ ಇಟ್ಟು, ಸಿಲವರದ ಚೊಂಬನ್ನು ಮಾತ್ರ ಪಡಸಾಲೆ ಮೂಲೆಯಲ್ಲಿ ಇಟ್ಟು, ಏ ಹುಡುಗ ಇದನ್ನ ಮುಟ್ಟಿಗಿಟ್ಟೀ ಮತ್ತೆ…ಇದರಲ್ಲಿ ನಮ್ಮೂರ ಚೌಡೀನ ಮಡಗಿದೀನಿ…ದು ದು ದು ದ್ದೂರ ಇರಬೇಕು ಇದರಿಂದ…”ಅನ್ನುತ್ತಿದ್ದರು!. ನಾನು ಒಳಕ್ಕೆ ಓಡಿ, ಅಜ್ಜೀ…ಸುಬ್ಬಜ್ಜ ಉತ್ತುತ್ತಿ ಕೊಟ್ಟಿದೆ…ಎಂದರೆ ಸೀತಜ್ಜಿ ಅವನ್ನ ಪರಕ್ಕನೆ ನನ್ನ ಅಂಗೈಯಿಂದ ಕಿತ್ತುಕೊಂಡು ಹಿತ್ತಿಲ ಬೇಲಿಯಾಚೆ ಬಿಸಾಕಿ ಬಿಡುತ್ತಾ ಇದ್ದಳು. ನಾನು ಸೀತಜ್ಜಿಗೆ ಉತ್ತುತ್ತಿ ತೋರಿಸುವ ಮೊದಲೇ ಎರಡು ಉತ್ತುತ್ತಿ ನನ್ನ ಚಡ್ಡಿ ಜೇಬಲ್ಲಿ ಸೇರಿಸಿದ್ದು ಅವಳಿಗೇನು ಗೊತ್ತು ಪಾಪ! ಅಜ್ಜಿ ಹೊರಗೆ ಬಂದು, ” ದೊಡ್ಡಪ್ಪಾ…ಎಷ್ಟು ಹೊತ್ತಿಗೆ ಊಟ ಮಾಡಿದ್ದೆಯೋ ಏನೋ…ಏಳು…ಸೊಪ್ಪಿನ ಬಸ್ಸಾರು ಮಾಡಿದ್ದೆ. ಬಿಸಿಬಿಸಿ ಮುದ್ದೆ ಮಾಡುತ್ತೇನೆ…ಹೊಟ್ಟೆ ತುಂಬ ಊಟ ಮಾಡುವಿಯಂತೆ..” ಎನ್ನುತ್ತಿದ್ದಳು. ಹೊತ್ತಿಲ್ಲದ ಹೊತ್ತಲ್ಲಿ ಊಟ ಯಾತಕ್ಕವ್ವ? ಇನ್ನೇನು ರಾತ್ರಿಯಾಗೇ ಬಿಡತ್ತೆ…ಆಗ ಭೀಮಣ್ಣನ ಜೋಡಿ ಉಟ್ಟಿಗೆ ಊಟಕ್ಕೇಳುತ್ತೇನೇಳು…” ಎಂದು ಸುಬ್ಬಜ್ಜ ಕೋಟು ಬಿಚ್ಚಿ ಗೋಡೆಗೆ ಬಡಿದಿದ್ದ ಗಿಣಿಮೂತಿ ಸ್ಟಾಂಡಿಗೆ ಜೋತು ಹಾಕುತಾ ಇದ್ದರು. ಸೀತಜ್ಜಿ ಪಿಟಾರಿಯಿಂದ ಒಗೆದು ಮಡಿ ಮಾಡಿದ್ದ ಭೀಮಜ್ಜನ ಬಿಳೀ ಪಂಚೆ ತಂದು ಸುಬ್ಬಜ್ಜನಿಗೆ ಕೊಟ್ಟು, ಈ ಪಂಚೆ ಉಟ್ಟುಕೋ…ನಿನ್ನ ಪಂಚೆ ಬಿಚ್ಚಿಕೊಡು…ಅದನ್ನು ಒಗೆದು ಹಾಕುತೀನಿ…ನೀನು ಬೆಳಿಗ್ಗೆ ಹೊರಡೋ ಹೊತ್ತಿಗೆ ಒಣಗಿರತ್ತೆ…” ಅನ್ನೋಳು. ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳವ್ವಾ…ಎನ್ನುತ್ತಾ, ಸುಬ್ಬಜ್ಜ ನನ್ನ ಎದುರಿಗೇ ಪಂಚೆ ಉದುರಿಸಿ, ನಮ್ಮ ಭೀಮಜ್ಜನ ಒಗೆದ ಪಂಚೆ ಸುತ್ತಿಕೊಳ್ಳೋರು. ಅಜ್ಜಿ ಸುಬ್ಬಜ್ಜನ ಮಾಸಿದ ಪಂಚೆ ಹಿತ್ತಲಿಗೆ ಎತ್ತಿಕೊಂಡು ಹೋಗಿ, ಐನೂರು ಬಿಲ್ಲೆ ಸೋಪನ್ನು ಒಂದು ಚೂರು ಕತ್ತರಿಸಿಕೊಂಡು, ಸುಬ್ಬಜ್ಜನ ಪಂಚೆ ತಿಕ್ಕೀ ತಿಕ್ಕೀ, ಕುಕ್ಕೀ ಕುಕ್ಕೀ, ಬಡಿದೂ ಬಡಿದೂ ಶುಚಿಮಾಡುತ್ತಿದ್ದಳು. ನಾನು ಸುಬ್ಬಜ್ಜನ ಪಂಚೆಯಿಂದ ಗೊಜ್ಜಿನಂತ ಕೊಳೆ ಹೊರ ಬರುತ್ತಾ, ಅದು ಕ್ರಮೇಣ ತನ್ನ ಪೂರ್ವ ಜಮಾನಾದ ನೆನಪು ಅರಳಿಸಿಕೊಳ್ಳೋದ ನೋಡುತ್ತಾ ಹಿತ್ತಲ ಕಟ್ಟೆಯ ಮೇಲೇ ಕೂಡುತ್ತಾ ಇದ್ದೆ. ರಾತ್ರಿಯಾದಮೇಲೆ, ಸುಬ್ಬಜ್ಜ, ಅವ್ವಾ..ಒಂದು ಪಂಚ ಪಾತ್ರೆ, ಒಂದು ಉದ್ಧರಣೆ ಕೊಡೆ…ಸಂಧ್ಯಾವಂದನೆ ಮಾಡಬೇಕು ಅನ್ನುತ್ತಿದ್ದರು. ಅಜ್ಜಿ ಅಡುಗೇ ಮನೆಯಲ್ಲಿ ಒಂದು ಮಣೆ ಹಾಕಿ, ವಿಭೂತಿ, ಪಂಚಪಾತ್ರೆ, ಉದ್ಧರಣೆ, ಅರ್ಘ್ಯಪಾತ್ರೆ, ತಾಮ್ರದ ಚಂಬು ತುಂಬ ನೀರು ಇಟ್ಟು ಸಿದ್ಧ ಮಾಡುತ್ತಾ ಇದ್ದಳು. ಸುಬ್ಬಜ್ಜ ಅಂಗಿ ಬಿಚ್ಚಿ ಹಾಕಿ, ಅದೆಷ್ಟೋ ಹೊತ್ತು ಮಣ ಮಣ ಮಂತ್ರ ಹೇಳುತ್ತಾ, ಫಟ್ ಫಟ್ ಎಂದು ಹಿಂದೆ ಮುಂದೆ ಎಲ್ಲಾ ಚಪ್ಪಾಳೆ ಕುಟ್ಟುತ್ತಾ, ಮೂಗು ಹಿಡಿಯುತ್ತಾ ಬಿಡುತ್ತಾ, ಮಾಸಿದ ಜನಿವಾರ ಎಳಕೊಂಡು ಗಾಯತ್ರಿ ಹೇಳುತ್ತಾ, ಮತ್ತೆ ಉದ್ಧರಣೆಯಲ್ಲಿ ಪಂಚಪಾತ್ರೆಯಿಂದ ನೀರು ತಕ್ಕೊಂಡು, ಉಸಿರೆಳೆದು ನೀರು ಕುಡಿಯುತ್ತಾ, ನೀರು ಅರ್ಘ್ಯ ಪಾತ್ರೆಗೆ ಬಿಡುತ್ತಾ ಸಂಧ್ಯಾವಂದನೆ ಮಾಡೇ ಮಾಡುತ್ತಿದ್ದರು! ಅಜ್ಜಾ…ಮುಂಜಿಯಾದವರೆಲ್ಲಾ…ಇದನ್ನ ಮಾಡಲೇ ಬೇಕ..ಎಂದು ನಾನು ಸುಬ್ಬಜ್ಜನನ್ನ ಕೇಳುತಾ ಇದ್ದೆ. ಮತ್ತೆ? ಮುಂಜಿವೀ ಅಂದರೆ ಏನು ಸಾಮಾನ್ಯ ಸಂಗತಿಯೇನೋ ಹುಡುಗ? ನೋಡು ಬಾ ಇಲ್ಲಿ…ಇಲ್ಲಿ ನನ್ನ ತೊಡೆ ನೋಡು…ಕಾಣಿಸ್ತಾ ಇದೆಯಾ ಕುಯ್ದು ಹೊಲಿದಿರೋ ಗುರ್ತು? ಕಾಣುತಾ ಇತ್ತು. ಅಜ್ಜನ ತೊಡೆ ಮೇಲೆ ಗೇಣುದ್ದ ಕುಯ್ದ ಗಾಯದ ಕಲೆಯ ಗುರ್ತು. ಇದು ಏನು ಅಂದುಕೊಂಡಿದೀ ಹುಡುಗ…ಮುಂಜಿವೆ ಮಾಡೋವಾಗ ಪುರೋಹಿತರು ಏನು ಮಾಡುತಾರಪ್ಪಾ ಅಂದರೆ…ಮೊದಲು ಚಾಕು ತಕ್ಕೊಂಡು ಕಟ್ಟೆ ಕಲ್ಲಿಗೆ ಗಸಗಸ ಮಸೆದು ಹರಿತ ಮಾಡಿಕೋತಾರೆ…ಆಮೇಲೆ ಮುಂಜಿವೆ ಮಾಡೋ ವಟೂನ ಮತ್ತು ಅವನ ಅಪ್ಪನ್ನ ಒಂದು ಪಂಚೆ ಹೊಚ್ಚಿ ತಾವೂನೂ ಒಳಗೆ ಸೇರಿಕೋತಾರೆ….ಆಮೇಲೆ ಹಲಸು ಹೆಚ್ಚೋ ಹಂಗೆ ಚರಕ್ಕನೆ ಹುಡುಗನ ತೊಡೆ ಗೇಣುದ್ದಾ ಕೊಯ್ಯುತಾರೆ…..ದ ದ ದ ದಪ್ಪನೆ ಕಪ್ಪೆ ಒಂದ ಮೊದಲೇ ಹಿಡಕೊಂಡು ಬಂದಿರತಾರೆ…ಆ ಕಪ್ಪೇನ ತೊಡೇಲಿ ಅಮುಕಿ ಅಮುಕಿ ತುರುಕಿದ್ದಾದ ಮೇಲೆ, ಮೇಲೆ ಹೊಲಿಗೆ ಹಾಕಿ ಬಿಡತಾರೆ… ಮತ್ತೆ ಮತ್ತೆ ಆ ಕಪ್ಪೆ ಗತಿ? ಅನ್ನುತಾ ಕಣ್ಣು ಬಾಯಿ ಬಿಟ್ಟು ನಾನು ಕೇಳುತಾ ಇದ್ದೆ. ಸುಬ್ಬಜ್ಜ ನಕ್ಕು, ಅದೇನು ಸಾಯೋದಿಲ್ಲವೋ…ಹುಡುಗನ ಮೈಯಲ್ಲಿ ಕುಪ್ಪಳಿಸಿಕೋತ ಆರಾಮಾಗಿ ಇದ್ದು ಬಿಡತ್ತೆ…ಅಂತ ಹೇಳಿ ಸುಬ್ಬಜ್ಜ ತಮ್ಮ ಬಲಗೈ ತೋಳು ಮಡಿಸಿ ಮಾಂಸಖಂಡ ಉಬ್ಬಿಸಿ…ಈಗ ಕಪ್ಪೆ ತೋಳಿಗೆ ಬಂತು….ಎಡಗೈ ತೋಳು ಮಡಿಸಿ ಉಬ್ಬಿಸಿ, ಕಪ್ಪೆ ಈಗ ಇಲ್ಲಿಗೆ ಬಂತು…ಪಂಚೆ ಎತ್ತಿ ಕಾಲಿನ ಮೀನು ಖಂಡ ಕುಣಿಸಿ, ಈಗ ಇಲ್ಲಿ ಹೆಂಗೆ ಆ ಕಪ್ಪೆ ಕುಣಿತಾ ಇದೆ ನೋಡು…ಅನ್ನೋರು. ಹಂಗಾರೆ ಮುಂಜೀನಲ್ಲಿ ನಂಗೂ ಹಂಗೇ ಮಾಡತಾರ ಅಂದರೆ… ಕಪ್ಪೆ ಇಲ್ಲದೆ ಮುಂಜಿ ಹೆಂಗೆ ಆಗತದೋ ಮಳ್ಳ! ಎಂದು ಸುಬ್ಬಜ್ಜ ಹುಬ್ಬು ಎಗರಿಸೋರು. ನಾನು ರಾತ್ರಿ ಅಜ್ಜನ ಮಗ್ಗುಲಲ್ಲಿ ಪಡಸಾಲೆಯಲ್ಲೇ ಮಲಗಿಕೊಳ್ಳುತ್ತಾ ಇದ್ದೆ. ಮೂಲೇಲಿ ಸುಬ್ಬಜ್ಜ ಮಲಗಿರೋರು. ಅವರು ಗುರ್ ಗುರ್ ಅಂತ ಗರಗಸ ಮಸೀತಾ ಇದ್ದರೆ ನಂಗೆ ನಿದ್ದೆ ಹ್ಯಾಗೆ ಬಂದೀತು? ನಾನು ಅಜ್ಜನನ್ನ ಕೇಳುತಾ ಇದ್ದೆ. ಅಜ್ಜಾ…ಮುಂಜಿ ಅಂದರೆ ತೊಡೆ ಕೊಯ್ದು ಕಪ್ಪೆ ಬಿಡುತಾರಾ? ಯಾರು ಹೇಳಿದ್ದು ನಿಂಗೆ ಈ ಲೊಂಗು ಲೊಟ್ಟೇ ಎಲ್ಲಾ?…. ಮತ್ತ್ಯಾರು ಈ ಸುಬ್ಬಜ್ಜ ಅನ್ನುತ್ತಿದ್ದೆ ನಾನು! ಅವನು ಹುಡುಗನಾಗಿದ್ದಾಗ ತೆಂಗಿನ ಕಾಯಿ ಕದಿಯಕ್ಕೆ ಹೋಗಿದ್ದನಂತೆ. ಕೈ ಜಾರಿ ಮರಕ್ಕೆ ಹೊಡೆದಿದ್ದ ಕಬ್ಬಿಣದ ಮೊಳೆಗೆ ತೊಡೆ ಸಿಕ್ಕಿಕೊಂಡು ಗೇಣುದ್ದ ಸೀಳಿ ಹೋಯಿತಂತೆ. ಮುಂದೆ ಅವ ದೊಡ್ಡವನಾದ ಮೇಲೆ ತಾನು ಕಳ್ಳತನ ಮಾಡೋವಾಗ ತೊಡೆ ಸೀಳಿ ಕಲೆಯಾಗಿದೆ ಅಂತ ಹೆಂಗೆ ಹೇಳತಾನೆ ಪಾಪ…ಅದಕ್ಕೇ ಎಲ್ಲ ಹುಡುಗರ ಮುಂದೆ ಈ ಕಪ್ಪೆ-ಮುಂಜಿ ಕಥೆ ಹೇಳುತಾನೆ! ಉಷ್ಷಪ್ಪ ಅಂತ ನಿಟ್ಟುಸಿರುಬಿಟ್ಟೆ ನಾನು. ಆದರೂ ಸುಬ್ಬಜ್ಜನ ತೊಡೆ ಕಬ್ಬಿಣದ ಮೊಳೆಗೆ ಸಿಕ್ಕಿ ಸೀಳಿದ್ದು ಕಲ್ಪನೆಗೆ ಬಂದು ಮೈ ಗಡ ಗಡ ನಡುಗುತಾ ಇತ್ತು. ಅದನ್ನೇ ಯೋಚಿಸುತ್ತಾ ನಾನು ಮಲಗಿದ್ದೀನಿ. ರಾತ್ರಿ ಒಂದು ಹೊತ್ತು ಯಾವುದೋ ಕೆಟ್ಟ ಕನಸು ಬಿದ್ದು ಥಟ್ಟನೆ ಎಚ್ಚರವಾಗಿ ಧಡಕ್ಕನೆ ಎದ್ದು ಕೂತಿದ್ದೇನೆ ನಾನು. ಅಜ್ಜಾ…ಏಳು..ಏಳು….ಎಮ್ಮೆ ಪಡಸಾಲೆಗೆ ಬಂದಿದೆ…ಲೊಳಲೊಳಲೊಳ ಗ್ವಾತ ಹುಯ್ಯುತಾ ಇದೆ…ಎಂದೆ ಅಳು ಬರುವ ಧ್ವನಿಯಲ್ಲಿ. ಅಜ್ಜನಿಗೆ ಎಚ್ಚರವಾಯಿತು. ಎಮ್ಮೆ ಅದು ಹೆಂಗೋ ಪಡಸಾಲೆಗೆ ಗ್ವಾತ ಹೊಯ್ಯುತ್ತಿದೆ ಎಂದೆ. ಭೀಮಜ್ಜ ನಕ್ಕು…ಅದು ಎಮ್ಮೆಯಲ್ಲಾ…ನಿಮ್ಮ ಸುಬ್ಬಜ್ಜ…ನೀನು ಸುಮ್ಮಗೆ ಮಲಕ್ಕಾ ಮಗಾ…! ಎನ್ನುತ್ತಾ ತಲೆಯ ತುಂಬ ಹೊದಿಕೆ ಹೊದಿಸಿ, ನಿದ್ದೆ ತರಿಸಲಿಕ್ಕಾಗಿ ಮೆಲ್ಲಗೆ ಬೆನ್ನು ತಟ್ಟ ತೊಡಗಿದರು.ಸುಬ್ಬಜ್ಜ ಸಿಲವರ ಚೊಂಬನ್ನು ಯಾವಾಗಲೂ ತಮ್ಮ ಜೊತೆಯಲ್ಲೇ ಒಯ್ಯುತ್ತಿದ್ದುದು ಯಾಕೆ ಅನ್ನೋದು ಆಗ ನನಗೆ ಹೊಳೆಯಿತು. ಸುಬ್ಬಜ್ಜನಿಗೆ ಅದೆಂಥದೋ ಬಹುಮೂತ್ರ ರೋಗವಂತೆ. ಅದಕ್ಕೇ ಅವರು ಪಕ್ಕದಲ್ಲೇ ಚೊಂಬು ಇಟ್ಟುಕೊಂಡು ಮಲಗುತ್ತಾರೆ ಅಂತ ಸೀತಜ್ಜಿ ನನಗೆ ಬೆಳಿಗ್ಗೆ ಕಾಫಿಕುಡಿಯುವಾಗ ಹೇಳಿ, ಪಾಪ ಅಂತ ಲೊಚಗುಟ್ಟಿದರು. ಬೆಳಿಗ್ಗೆ ಸುಬ್ಬಜ್ಜ ತಮ್ಮ ಚೊಂಬು, ಮತ್ತು ಚಿಗಬಸಪ್ಪ ಸೀರೆ ಅಂಗಡಿ ಎಂಬ ಕೆಂಪಕ್ಷರದ ಮುದ್ರಣವಿದ್ದ ಗೋಣಿ ಚೀಲ ಹೆಗಲಿಗೆ ಏರಿಸಿಕೊಂಡು ಮುಂದಿನ ಊರಿನ ಪ್ರಯಾಣಕ್ಕೆ ರೆಡಿಯಾಗಿ ನಿಂತಿದ್ದರು. ದೊಡ್ಡಪ್ಪ…ರೊಟ್ಟಿ ಎಣೆಗಾಯಿ ಮಾಡುತೀನಿ…ತಿಂದು ಹೋಗು…ಮತ್ತೆ ಯಾವಾಗಲೋ ನೀನು ಬರೋದು ಅನ್ನೋಳು ಸೀತಜ್ಜಿ. ಅವಳು ಒಗೆದು ಶುಚಿ ಮಾಡಿದ್ದ ಪಂಚೆ ಉಟ್ಟಿದ್ದ ಸುಬ್ಬಜ್ಜ, ಬ್ಯಾಡ ಕಣೇ ಹುಡುಗಿ…. ಹಿರೇಹಳ್ಳಿಯಲ್ಲಿ ನಂಗೆ ಅರ್ಜೆಂಟ್ ಕೆಲಸ ಇದೆ ಅನ್ನುತ್ತಿದ್ದರು. ಅಲ್ಲಿ ಎಂಥ ಅರ್ಜೆಂಟು ಕೆಲಸ ನಿಂದು? ಎಂದು ಸೀತಜ್ಜಿ ಮೂತಿ ತಿರುವೋಳು. ನನ್ನ ಮಾತು ನಂಬಮ್ಮ…ಕೊಟ್ರಶೆಟ್ಟಿ ಹತ್ರ ಬಾಕಿ ವಸೂಲು ಮಾಡೋದಿದೆ…ಕುದುರೇ ಕಡೇದು…ಅನ್ನುತ್ತಿದ್ದರು ಸುಬ್ಬಜ್ಜ. ಹಿಂದೆ ಯಾವಾಗಲೋ ತಾವು ಶಾನುಭೋಕೆ ಮಾಡುತ್ತಿದ್ದ ಕಾಲದಲ್ಲಿ ಕೊಟ್ರಶೆಟ್ಟರ ಹತ್ರ ಸುಬ್ಬಜ್ಜ ಒಂದು ಮರಿಕುದುರೆ ತಗೊಂಡಿದ್ದರಂತೆ. ನೂರಾಒಂದು ರೂಪಾಯಿಗೆ ಕ್ರಯ ಪತ್ರ ಆಗಿತ್ತು. ಶೆಟ್ರು ಕೆಲ್ಲೋಡಿಗೆ ಒಂದು ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಬಂದು ಮರಿ ಕುದುರೆಯನ್ನು ಸುಬ್ಬಜ್ಜನಿಗೆ ಒಪ್ಪಿಸಿಯೂ ಆಯಿತು. ಮರಿ ಕುದುರೆ ತುಂಬ ಕುಳ್ಳಾಗಿತ್ತು. ಅಜ್ಜ ಅದರ ಮೇಲೆ ಹತ್ತಿದರೆ ಅವರ ಕಾಲು ನೆಲ ಗುಡಿಸುತ್ತಾ ಇದ್ದವು. ಎಷ್ಟು ಆರೈಕೆ ಮಾಡಿದರೂ ಕುದುರೆ ಎತ್ತರಕ್ಕೆ ಬೆಳೆಯಲೇ ಇಲ್ಲ. ಹುಲ್ಲು ಹುರುಳಿ ಎಷ್ಟು ದಂಡಿ ಹಾಕಿದರೂ. ತಿನ್ನೋದೇನೋ ತಿನ್ನುತಾ ಇತ್ತು. ಆದರೆ ಎತ್ತರಕ್ಕೆ ಬೆಳೆಯೋ ಹುಮ್ಮಸ್ಸೇ ಅದಕ್ಕೆ ಇರಲಿಲ್ಲ. ಒಂದು ವರ್ಷ ಕಾದು ನೋಡಿದರು ಸುಬ್ಬಜ್ಜ! ನರಸೇ ಗೌಡ ಬಂದು ಇದು ಕುದುರೇನೇ ಅಂತೀರಾ ನೀವು? ಎಂದು ಒಂದು ಬೆಳಿಗ್ಗೆ ಉದ್ಗಾರ ತೆಗೆದ. ಆಗಿನಿಂದ ಶುರುವಾಯಿತು ನೋಡಿ. ನಮ್ಮ ಸುಬ್ಬಜ್ಜನ ಅನುಮಾನ. ಮನೆಗೆ ಯಾರೇ ಬರಲಿ ಅವರನ್ನು ಹಿತ್ತಲಿಗೆ ಕರೆದುಕೊಂಡು ಹೋಗಿ ತನ್ನ ವಾಹನ ತೋರಿಸಿ…ಇದು ಯಾವ ಜಾತಿ ಅಂತೀರಿ… ಕುದುರೆ ಹೌದೋ ಅಲ್ಲೋ ಸ್ವಲ್ಪ ಹೇಳಿ ಮತ್ತೆ…ದ ದ ದ್ದರಿದ್ರದ್ದು ಬೆಳೆಯೋದೇ ಬ್ಯಾಡ ಅಂತ ಮೊಂಡು ಹಿಡಿದು ಬಿಟ್ಟಿದೆ ನೋಡ್ರಿ ಎಂದು ಅಲವತ್ತು ಕೊಳ್ಳುತ್ತಾ ಇದ್ದರು. ಹಳ್ಳಿಯ ಜನ ಹಿಂದಿನಿಂದ ನನ್ನ ನೋಡಿ ನಗುತಾ ಇದ್ದಾರೆ ಅಂತ ಅದ್ಯಾಕೋ ಸುಬ್ಬಜ್ಜನಿಗೆ ಬಲವಾದ ಸಂದೇಹ ಬರಲಿಕ್ಕೆ ಶುರುವಾಯಿತು. ಪಾಪಿ..ನಾರ್ಸೇ ಗೌಡ ಅದ್ಯಾವ ಮುಹೂರ್ತದಲ್ಲಿ ನನ್ನ ಕುದುರೆ ಕುದುರೇನಾ ಅಂತ ಕೇಳಿದನೋ ಅವನ ಬಾಯಲ್ಲಿ ಹುಳ ಬೀಳ ಎಂದು ಸುಬ್ಬಜ್ಜ ಶಪಿಸ ತೊಡಗಿದರು. ಕೊನೆಗೆ ಜಮಾಬಂದಿಯಲ್ಲಿ ತಾಲ್ಲೋಕು ದನಿ ಅಮಲ್ದಾರರು ಸುಬ್ಬಜ್ಜ ದಫ್ತರ ಸಮೇತ ಬಂದಾಗ ” ಏನು ಸುಬ್ಬಣ್ಣೋರೇ? ಕುದುರೆ ತಗೊಂಡೀರಂತೆ… ಅರಬೀ ಠಾಕಣವೋ? ಒಮ್ಮೆ ನಮಗೂ ತೋರಿಸೋಣಾಗಲಿ…! ಎಂದು ಮುಸಿಮುಸಿ ನಕ್ಕುಬಿಟ್ಟ್ರಂತೆ . ಬಂತು ನೋಡಿ ಸುಬ್ಬಜ್ಜನಿಗೆ ಬ್ರಹ್ಮೇತಿ ಕೋಪ. ಊರಿಗೆ ಬಂದವರೇ ಧಪ್ತರ ಮೂಲೆಗೆ ಬಿಸಾಕಿ, ಉರಿಯುವ ಕೋಪದಲ್ಲಿ ಹಿತ್ತಲಿಗೆ ಹೋಗಿ, ಕುದುರೆ ಕಾಲು ಹಗ್ಗ ಬಿಚ್ಚಿ ಅದರ ಬೆನ್ನ ಮೇಲೆ ಕೂತು. ಎರಡೂ ಕಾಲು ಮೇಲಕ್ಕೆ ಮಡಿಸಿಕೊಂಡು ಸೆಪ್ಪೆದಂಟಿನಿಂದ ಅದರ ಪೃಷ್ಠಕ್ಕೆ ನಾಲಕ್ಕು ಹಾಕಿದ್ದೇ ತಡ, ಎಂದೂ ಯಾರನ್ನೂ ಬೆನ್ನ ಮೇಲೆ ಹತ್ತಿಸಿಕೊಂಡು ಅಭ್ಯಾಸವಿಲ್ಲದ ಆ ಅಮಾಯಕ ಪ್ರಾಣಿ ಒಮ್ಮೆ ಹೇಷಾರವ ಮಾಡಿ ಓಡಿತು ನೋಡಿ ಬೀದಿಗೆ. ಎಷ್ಟು ಲಗಾಮು ಜಗ್ಗಿದರೂ ಕುದುರೆ ನಿಲ್ಲೋ ಹಂಗೇ ಇಲ್ಲ. ಠಕ ಠಕ ಠಕ ಠಕ ಓಡುತಾನೇ ಇದೆ. ರಥದ ಬೀದಿಯಲ್ಲಿ ಲಗ್ಗೆ ಆಡುತ್ತಿದ್ದ ಹುಡುಗರು ಭಯದಿಂದ ಚೀರಿಕೊಂಡು ಕುದುರೆಗೆ ದಾರಿ ಬಿಟ್ಟರು. ಕುದುರೆ ಸುಬ್ಬಜ್ಜನ ಸಮೇತ ಮೇನ್ ರೋಡಿಗೆ ಬಂದು ಮತ್ತೋಡು ದಾರಿ ಹಿಡಿದು ಓಡತೊಡಗಿತು. ಸುಬ್ಬಜ್ಜನ ಪಕ್ಕೆ ತೊಡೆ ಎಲ್ಲಾ ಗಡ ಗಡ ನಡುಗಲಿಕ್ಕೆ ಹತ್ತಿದ್ದಾವೆ. ನಿಲ್ಲು ನಿಲ್ಲು…ಹುರುಳಿ ಹಾಕುತೀನಿ ನಿಲ್ಲು…ಹುಲ್ಲು ಹಾಕುತೀನಿ ನಿಲ್ಲು..ಎಂದು ಸುಬ್ಬಜ್ಜ ಗೋಗರೆಯುತ್ತಾ ಇದ್ದಾರೆ. ದುರಾದೃಷ್ಟವಶಾತ್ ಕುದುರೆಗೆ ಕನ್ನಡ ಭಾಷೆ ತಿಳಿಯದಾದುರಿಂದ ಅದು ಓಡೋದೊಂದೇ ತನ್ನ ಕಾಯಕ ಮಾಡಿಕೊಂಡು ಓಡುತಾನೇ ಇದೆ. ಮುಂದೆ ವೇದಾವತಿ ನದಿಯ ಸೇತುವೆ ಬಂತು. ಕುದುರೆ ಸೇತುವೆಯ ಅಡ್ಡಗೋಡೆಗೆ ಒಂದೇ ಇಂಚು ಅಂತರದಲ್ಲಿ ಓಡುತಾ ಇದೆ. ಸುಬ್ಬಜ್ಜನ ಹೃದಯ ಬಾಯಿಗೇ ಬಂತು ಈಗ. ಸೇತುವೆ ದಾಟಿ ಕುದುರೆ ಓಡುತ್ತಲೇ ಇತ್ತು. ಸುಬ್ಬಜ್ಜ ನುಣುಪಾದ ಕುದುರೆಯ ಬೆನ್ನಿಂದ ನಿಧಾನಕ್ಕೆ ಹಿಂದೆ ಹಿಂದೆ ಜಾರುತ್ತಾ ಯಾವುದೋ ಒಂದು ಮಾಯಕ ಕ್ಷಣ ಧಿಡಿಲ್ಲನೆ ಬಿದ್ದೇ ಬಿಟ್ಟರು ನೆಲಕ್ಕೆ. ಒಮ್ಮೆಲೇ ಬೆನ್ನ ಮೇಲಿನ ಹೊರೆ ಇಳಿದಿದ್ದಕ್ಕೆ ಕುದುರೆಗೆ ಅದೇನೆನ್ನಿಸಿತೋ! ಒಮ್ಮೆ ಜೋರಾಗಿ ಕೆನೆದು ತಾತಿಕ್ಕಿಟ ಥೈ ಅಂತ ನಿಂತಲ್ಲೇ ಒಂದು ರಿಂಗಣ ಕುಣಿತ ಹಾಕಿ ಬದುಕಿದೆಯಾ ಬಡಜೀವವೇ ಅಂತ ಅದು ಕತ್ತಲಲ್ಲಿ ಅಂತರ್ಧಾನವಾಗಿಯೇಬಿಟ್ಟಿತು. ಸುಬ್ಬಜ್ಜ ಕುಯ್ಯೋಮರ್ರೋ ಎಂದು ಕುಂಟುತ್ತಾ ಹೇಗೋ ಮನೆಗೆ ಬಂದು ಬಿದ್ದರು. ಮೂರು ದಿನ ಹಿಡಿದು ಬಾರಿಸುವ ಚಳಿ ಜ್ವರ. ವಿಷಯ ತಿಳಿದು ಕೊಟ್ರಶೆಟ್ಟರು ಕೆಲ್ಲೋಡಿಗೇ ಬಂದರು. ಸುಬ್ಬಜ್ಜ ಕರಾರು ಪತ್ರ ಶೆಟ್ಟರ ಮುಖಕ್ಕೆ ಬಿಸಾಕಿ…” ನಿನ್ನ ಕುದುರೆ ಹೇಳದೆ ಕೇಳದೆ ನಿಮ್ಮೂರಿಗೆ ಓಡಿ ಹೋಗಿದೆ…ಅದನ್ನ ಮುಚ್ಚಿಟ್ಟು ನಾಟಕ ಮಾಡಲಿಕ್ಕೇ ಬಂದಿದೀಯಾ…ದು ದು ದುಡ್ಡು ಮಡಗಿ ದು ದು ದು ದೂಸರಾ ಮಾತಾಡದೆ ಎದ್ದುಹೋಗು ಇಲ್ಲಿಂದ…ಅಂತ ಕೂಗು ಹಾಕಿದರು. “ಆವತ್ತಿಂದ ಶೆಟ್ಟರು ಬ್ರಾಹ್ಮಣನ ಶಾಪ, ಯಾಕೆ ಬೇಕು ಅಂತ, ಸುಬ್ಬಜ್ಜ ಬಂದಾಗೆಲ್ಲಾ ಹತ್ತು ಇಪ್ಪತ್ತು ಆತನ ಕೈಗೆ ಬಡಿಯುತ್ತಾ ಬಾಕಿ ತೀರಿಸುತ್ತಾ ಇದ್ದರು…ಆದರೆ ಪೂರಾ ಬಾಕಿ ಅಂತೂ ಕೊನೆಗೂ ತೀರಲೇ ಇಲ್ಲ ಪಾಪ…!”ಎಂದು ಸುಬ್ಬಜ್ಜನ ಮಾತು ಬಂದಾಗೆಲ್ಲಾ ಭೀಮಜ್ಜ ನನಗೆ ಕುದುರೆ ಕಥೆ ಹೇಳಿ ಖೊಖೊಕ್ಕೋ ಎಂದು ನಗುತ್ತಾ ಇದ್ದರು. **********]]>

‍ಲೇಖಕರು G

January 26, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. rajashekhar malur

    “ದಿಮ್ ರಂಗ ಎಂದು ಆರಾಮವಾಗಿ”, “ದಿವೀನಾದ ಉತ್ತುತ್ತಿ ತಂದಿದೀನಿ”, “ಸಿಲವರ ಚೊಂಬು ಹುರಿಕಟ್ಟಿ ಜೋತುಬಿಟ್ಟು”, “ಕಚ್ಚೆಪಂಚೆ ಮಾಸಿ ಗಿಮಟವಾಗಿ”, “ಗೋಡೆಗೆ ಬಡಿದ ಗಿಣಿಮೂತಿ ಸ್ಟಾಂಡಿಗೆ”, “ಯಾರು ಹೇಳಿದ್ದು ಈ ಲೊಂಗು ಲೊಟ್ಟೇ ಎಲ್ಲಾ”, “ಲೊಳ ಲೊಳ ಲೊಳ ಗ್ವಾತಹುಯ್ಯುತಾ ಇದೆ”, “ಎಂದು ಅಲವತ್ತು ಕೊಳ್ಳುತ್ತಾ”, – ಹೀಗೆ ಹುಡುಕುತ್ತಾ ಹೋದರೆ ಕೊನೆಯಿಲ್ಲದ ಅಪ್ಪಟ ದೇಸೀತನ ಎದ್ದುಕಾಣುತ್ತೆ ಸರ್. ಈ ಪದಪ್ರಯೋಗಗಳನ್ನು ಓದುವುದೇ ಒಂದು ಮಜಾ.
    ಸೀತಜ್ಜಿಯ ದೊಡ್ಡಪ್ಪ…ನ ಕುದುರೆ ಸವಾರಿ ನಾವೇ ಮಾಡಿದ ಹಾಗಿದೆ! ಕುದುರೆ ವೇದಾವತಿ ನದಿಯ ಸೇತುವೆ ಏರಿದಾಗ ಹೃದಯ ಝಲ್ ಎಂದಿತು! ಅಬ್ಬಾ… ಅಂತೂ ಸೇತುವೆ ದಾಟಿದೆವು!
    ತುಂಬ ಥ್ಯಾಂಕ್ಸ್!!
    ಮಾಳೂರು ರಾಜಶೇಖರ

    ಪ್ರತಿಕ್ರಿಯೆ
  2. armanikanth

    kudure astu speed aagi odidaaga kooda beelade tumbaa hottu hootidralla?
    avara dhairya doddadu saar…baraha bombaat.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: