ಎಚ್ಹೆಸ್ವಿ ಅನಾತ್ಮ ಕಥನ: ಆ ಹುಡುಗಿ

ಅಳಿಯಲಾರದ ನೆನಹು

ಎಚ್.ಎಸ್.ವೆಂಕಟೇಶ ಮೂರ್ತಿ

ನನ್ನ ಮೂವತ್ತು ವರ್ಷಗಳ ಅಧ್ಯಾಪನವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅರಳುಗಣ್ಣಲ್ಲಿ ಕುಳಿತು ನನ್ನ ಪಾಠಪ್ರವಚನ ಕೇಳಿದ್ದು ನೆನೆಸಿಕೊಂಡಾಗ ಎಳಸು ಮುಖಗಳ ಒಂದು ಪೆರೇಡೇ ಕಣ್ಣಮುಂದೆ ಹಾದುಹೋಗುತ್ತದೆ. ಅಂಥ ಮುಖಗಳಲ್ಲಿ ಒಂದು ಮುಖವನ್ನ ಮಾತ್ರ ನನಗೆ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಕಾರಣ ಅದು ನನ್ನನ್ನು ತುಂಬ ಪೇಚು ಮತ್ತು ಇಕ್ಕಟ್ಟಲ್ಲಿ ಸಿಕ್ಕಿಸಿದ ಮುಖ. ೧೯೭೭-೭೮ ಇರಬೇಕು. ಆ ದಿನಗಳಲ್ಲಿ ನಾನು ಸೂಟ್ ಹಾಕಿಕೊಂಡು ಕಾಲೇಜಿಗೆ ಹೋಗುತಾ ಇದ್ದೆ. ಸೇಂಟ್ ಜೋಸೆಪ್ಫಲ್ಲಿ ಸೂಟ್ ಇಲ್ಲದೆ ನಡೆಯೋದಿಲ್ಲ ಎಂದು ನಮ್ಮ ಸೀನಿಯರ್ಸ್ ಹೇಳಿದ ಹಿತವಚನದ ಪರಿಣಾಮ! ನಮ್ಮ ಎಲ್ಲ ಸೀನಿಯರ್ಸೂ ಆಗ ಸೂಟಲ್ಲೇ ಬರುತಾ ಇದ್ದರು. ನಾನು ಹೇಳೀ ಕೇಳಿ ಹಳ್ಳಿಯಿಂದ ಬಂದವ.
ಸೂಟ್ ಎಂಬೋದನ್ನು ನಾವು ಜೀವಮಾನದಲ್ಲಿ ಒಮ್ಮೆ ಮಾತ್ರ ಹೊಲಿಸೋದು. ಅದೂ ನಾವು ಹೊಲಿಸೋದು ಅಲ್ಲ. ಹೆಣ್ಣುಕೊಟ್ಟ ಮಾವ ಹೊಲಿಸೋದು. ನಮ್ಮ ಮಾವ ಮದುವೆಯಲ್ಲಿ ನನಗೂ ಒಂದು ಸೂಟ್ ಕೊಟ್ಟಿದ್ದರು. ಚಿತ್ರದುರ್ಗದಲ್ಲಿ ಹೊಲಿಸಿದ್ದು ಅದು. ಬೆಂಗಳೂರಿನ ಫ್ಯಾಷನ್ನಿಗೆ ಇನ್ನೂರು ಕಿಲೋಮೀಟರ್ ಹಿಂದೆ ಇದ್ದದ್ದು. ಅದನ್ನು ನಾನು ಹಾಕಿದ್ದು ಮದುವೆ ಸಂಜೆ ಮಾತ್ರ. ಆಮೇಲೆ ಅದು ಕೈಕಾಲು ಮಡಿಸಿಕೊಂಡು ಆರಾಮಾಗಿ ಟ್ರಂಕಲ್ಲಿ ನಿದ್ದೆಹೊಡೆಯುತ್ತಾ ಬಿದ್ದಿತ್ತು. ಬಹಳ ಕಾಲ ಹೀಗೆ ಸೆರೆವಾಸದಲ್ಲಿದ್ದ ಸದರೀ ಸೂಟ್ ನಾನು ಬೆಂಗಳೂರಿಗೆ ಬಂದಮೇಲೆ ಮತ್ತೆ ಬಿಸಿಲ ಮುಖ ನೋಡಿತು! ಅಲ್ಲಲ್ಲಿ ಬೂಸ್ಟು ಹಿಡಿದಿದ್ದ ಸೂಟನ್ನು ಡ್ರೈವಾಷಿಗೆ ಕೊಟ್ಟು ಅದನ್ನು ಧರಿಸಿ ಕಾಲೇಜಿಗೆ ಹೊರಟಾಗ ನನ್ನ ಹೆಂಡತಿ ಕಿಸಕ್ಕಂತ ನಕ್ಕಿದ್ದು ಯಾಕೆ ಅನ್ನೋದು ಇವತ್ತಿನವರೆಗೂ ನನಗೆ ಗೊತ್ತಾಗಿಲ್ಲ.

ಮೈಮೇಲೆ ಭರ್ಜರಿ ಸೂಟು. ನೆಕ್ಟೈ ಎಂಬ ಕೊರಳ ಲಂಗೋಟಿ ಮುಂದೆ ಇಳಿಬಿಟ್ಟುಕೊಂಡು ನನ್ನ ಮೊಪೆಡ್ ಏರಿ ಕಾಲೇಜ್ ಕ್ಯಾಂಪಸ್ಸಿಗೆ ಬಂದಾಗ ಸ್ಟಾಫ್ರೂಮಲ್ಲಿ ಎಲ್ಲ ಹುಳ್ಳಗೆ ನಗುವವರೇ! ಯಾಕ್ಸಾರ್ ಚೆನ್ನಾಗಿಲ್ವಾ ಅಂದೆ ಜೀಕೇಜಿಗೆ. ಚೆನ್ನಾಗಿಲ್ಲ ಅನ್ನೋಕಾಗತ್ತಾ? ನಿಮ್ಮ ಮುಖಕ್ಕೆ ಸೂಟ್ ಚೆನ್ನಾಗೇ ಒಪ್ಪತ್ತೆ ಅಂದರು ಜೀಕೇಜಿ. ಅದುಬಿಟ್ಟರೆ ಬೇರೆ ಸೂಟ್ ನನ್ನ ಬಳಿ ಇರಲಿಲ್ಲ. ಹೊಲಿಸುವ ಆರ್ಥಿಕ ಅನುಕೂಲವೂ ಇರಲಿಲ್ಲ. ಹೀಗಾಗಿ ವಾರದ ಏಳು ದಿನವೂ ಒಂದೇ ಸೂಟ್ ನನ್ನದು! ಒಕ ಮಾಟ ಒಕ ಬಾಣ ಎಂದು ತ್ಯಾಗರಾಜರು ರಾಮನನ್ನು ವರ್ಣಿಸುತ್ತಾರೆ.  ಒಕ ಸ್ಕೂಟಿ; ಒಕ ಸೂಟು ಎಂದು ಯಾರಾದರೂ ಪುಣ್ಯಾತ್ಮರು ನನ್ನನ್ನು ವರ್ಣಿಸಬಹುದಾಗಿತ್ತು.
ಹುಡುಗರು ನನ್ನನ್ನು ತುಂಬ ಹಚ್ಚಿಕೊಂಡದ್ದಕ್ಕೆ ಕಾರಣ ನನ್ನ ಸೂಟಂತೂ ಖಂಡಿತ ಕಾರಣವಲ್ಲ. ಹುಡುಗರೊಂದಿಗೆ ನಗುನಗುತ್ತಾ ಮಾತಾಡುವುದು ನಮ್ಮಲ್ಲಿ ಒಂದು ಗುನ್ಹೆ ಆಗಿದ್ದ ದಿನಗಳು ಅವು. ಪ್ರೊಫೆಸ್ಸರೆಂದರೆ ಘನಗಂಭೀರಕಠೋರಾತ್ಮರಾಗಿರಬೇಕೆಂಬುದು ಒಂದು ಬಗೆಯ ಅಲಿಖಿತ ವಿಧಿಯಾಗಿದ್ದ ಕಾಲದಲ್ಲಿ ನಾನು ಮತ್ತು ನನಗಿಂತ ಸ್ವಲ್ಪ ವಯಸ್ಸಲ್ಲಿ ಹಿರಿಯರಾಗಿದ್ದ ಜಿಕೆಜಿ ಹುಡುಗರೊಂದಿಗೆ ಸಲೀಸಾಗಿ ಬೆರೆಯುವ ಮೇಷ್ಟ್ರಾಗಿದ್ದೆವು. ನಮ್ಮ ಇನ್ನೊಬ್ಬ ಮಿತ್ರರು ಹಿಂದಿ ಕಲಿಸುವ ಅಮಾನುಲ್ಲಾ ಸಾಹೇಬರು. ಅವರಂತೂ ಹುಡುಗರನ್ನು ಮಕ್ಕಳು ಅಂತಲೇ ಕರೆಯುವ ಪರಿಪಾಠ ಇಟ್ಟುಕೊಂಡಿದ್ದರು. ನಾನು ಮತ್ತು ನನ್ನ ಇನ್ನಿಬ್ಬರು ಗೆಳೆಯರು ಹುಡುಗರಿಗೆ ಹೆಚ್ಚು ಪ್ರಿಯರಾಗಲು ನಾವು ವಿದ್ಯಾರ್ಥಿಗಳಿಗೆ ಕೊಟ್ಟ ಸಲುಗೆಯೂ ಒಂದು ಕಾರಣವಿರಬಹುದು. ಜೊತೆಗೆ ಸಾಹಿತ್ಯ ಕಲಿಸುವ ಮೇಷ್ಟ್ರು ತರಗತಿಯಲ್ಲಿ ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಿ ಮಾತಾಡುವ ಅವಕಾಶವಿರುತ್ತದೆ. ಅದನ್ನು ನಾವು ಚೆನ್ನಾಗಿ ಬಳಸಿಕೊಳ್ಳುತ್ತಿದ್ದೆವು. ಸಾಹಿತ್ಯ, ರಾಜಕೀಯ, ಸಿನಿಮಾ, ನಾಟಕ-ಯಾವ ವಿಷಯವೂ ನಮ್ಮ ಪ್ರಸ್ತಾಪದ ಕಕ್ಷೆಯ ಹೊರಗಿರಲಿಲ್ಲ. ಇದು ವಿದ್ಯಾರ್ಥಿಗಳನ್ನು ನಮ್ಮ ತರಗತಿಗಳಿಗೆ ವಿಶೇಷವಾಗಿ ಸೆಳೆಯುತ್ತಾ ಇತ್ತು.
ಬರವಣಿಗೆಯ ಪ್ರಾರಂಭದಲ್ಲಿ ನನ್ನನ್ನು ಪೇಚಿಗೆ ಸಿಕ್ಕಿಸಿದ ಒಂದು ಮುಖದ ಬಗ್ಗೆ ಪ್ರಸ್ತಾಪಿಸಿದ್ದೆ. ಆ ಎಳೆ ಹಿಡಿದು ಮತ್ತೆ ಈಗ ಮುಂದುವರೆಯುತ್ತೇನೆ.ಪ್ರಿಯ(ಹೆಸರು ಬದಲಾಗಿದೆ) ಇನ್ನೂ ಹದಿನೆಂಟರ ಪುಟ್ಟ ತರುಣಿ. ನೋಡಲಿಕ್ಕೆ ಚೆಲುವಾಗಿದ್ದಳು. ಚೂಟಿಯಿಂದ ಪುಟುಪುಟು ಓಡಾಡುತ್ತಾ (ಅವಳ ಸುತ್ತ ಯಾವಾಗಲೂ ಒಂದು ಪಟಾಲಮ್ಮೇ ಇರುತ್ತಾ ಇತ್ತು) ನಮ್ಮೆಲ್ಲರಿಗೂ ಪ್ರಿಯಳಾಗಿದ್ದಳು. ಮೊದಲ ವರ್ಷ ಇಷ್ಟು ಚೂಟಿಯಾಗಿ ಪಾದರಸಂದಂತೆ ಇದ್ದ ಹುಡುಗಿ, ಓದು, ಯೂನಿಯನ್ ಚಟುವಟಿಕೆ ಎಲ್ಲದರಲ್ಲೂ ಮುಂದಾಗಿದ್ದವಳು ಎರಡನೇ ವರ್ಷ ಯಾಕೋ ಇದ್ದಕ್ಕಿದ್ದಂತೆ ಡಲ್ಲಾಗಿಹೋದಳು. ಯಾರ ಜೊತೆಯಲ್ಲೂ ಬೆರೆಯೋಣಿಲ್ಲ. ತರಗತಿಯಲ್ಲಿ ಮಂಕಾಗಿ ಕುಳಿತುಕೊಳ್ಳೋದು. ಒಬ್ಬಳೇ ಬಂದು ಒಬ್ಬಳೇ ತರಗತಿಯಿಂದ ನಿರ್ಗಮಿಸುವುದು ಇತ್ಯಾದಿ ಶುರುವಾಯಿತು. ಒಮ್ಮೆ ಯಾಕಮ್ಮಾ ಹೀಗಿದ್ದೀ ಅಂದಾಗ , ಆರೋಗ್ಯ ಚೆನ್ನಾಗಿಲ್ಲ ಸರ್ ಎಂದು ಚುಟುಕಾಗಿ ಉತ್ತರಿಸಿ ತಲೆತಗ್ಗಿಸಿ ಹೊರಟುಹೋಗಿದ್ದಳು. ಹೆಣ್ಣುಮಕ್ಕಳ ವಿಷಯ. ಮನೆಯಲ್ಲಿ ಯಾವ ಸಮಸ್ಯೆಯೋ ಎಂದುಕೊಂಡು ನಾನೂ ಸುಮ್ಮನಾಗಿ ಬಿಟ್ಟೆ. ಕಾಲೇಜಿಗೆ ಸೇರಿದ್ದ ಹೊಸದಲ್ಲವಾ? ಇಲ್ಲದ ಉಪದ್ವ್ಯಾಪ ಹಚ್ಚಿಕೊಳ್ಳುವ ಧೈರ್ಯವೂ ನನಗಿರಲಿಲ್ಲ. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಪ್ರಿನ್ಸಿಪಾಲರ ಬುಲಾವು. ನಾನು ಸ್ವಲ್ಪ ಆತಂಕದಿಂದಲೇ ಪ್ರಿನ್ಸಿಪಾಲರ ಚೇಂಬರ್ಸಿಗೆ ಹೋದೆ. ನಮ್ಮ ಪ್ರಾಚಾರ್ಯರು ಆರು ಅಡಿಯ ಆಜಾನುಬಾಹು. ಹೋತದ ಗಡ್ಡದ ತೇಜಸ್ವೀ ವೃದ್ಧರು. ಕ್ರೈಸ್ತ ಸನ್ಯಾಸಿಗಳಿಗೆ ಅಲಂಕಾರಪ್ರಾಯವಾದ ಮುಗುಳ್ನಗೆ ಯಾವಾಗಲೂ ಅವರ ತುಟಿಯಮೇಲೆ ಇರುತ್ತಾ ಇತ್ತು. ಅವರನ್ನು ನೋಡಿದಾಗೆಲ್ಲಾ ನನಗೆ ನಮ್ಮ ಪುರಾಣಕಾಲದ ಋಷಿಮುನಿಗಳು ನೆನಪಾಗುತ್ತಿದ್ದರು. ಅವರ ಬಗ್ಗೆ ಹೇಳಲೇ ಬೇಕಾದ ಮಾತು- ವಿದ್ಯಾರ್ಥಿಗಳೊಂದಿಗೆ, ಪ್ರಾಧ್ಯಾಪಕರೊಂದಿಗೆ ಹೇಗೆ ನಗುನಗುತ್ತಾ ಮಾತಾಡುತ್ತಿದ್ದರೋ ಹಾಗೇ ಅವರು ತಾವು ಸಾಕಿದ ಕುರಿ, ನಾಯಿ, ಬೆಳಸಿದ ಎಳೆಮಾವಿನ ಗಿಡದ ಜತೆಯಲ್ಲೂ ಮಾತಾಡುತ್ತಿದ್ದರು. ಅದೂ ಇಂಗ್ಲಿಷ್ ಭಾಷೆಯಲ್ಲಿ! ನಮ್ಮ ಗೊರೂರರು ತಮ್ಮ ಎಮ್ಮೆಗೆ ಮಾತು ಬರುವ ಬಗ್ಗೆ ಒಂದು ಪ್ರಬಂಧ ಬರೆದಿದ್ದಾರಲ್ಲಾ! ನಮ್ಮ ಪ್ರಿನ್ಸಿಪಾಲರೂ ಪಶು, ಪಕ್ಷಿ, ಗಿಡಮರಗಳಿಗೂ ಭಾಷೆ ತಿಳಿಯುತ್ತದೆ ಎಂದು ನಂಬಿದ್ದರು. ಅದಕ್ಕೆ ಸಾಕ್ಷಿಯಾಗಿ ಅವರು ಹೇಳುತ್ತಿದ್ದ ಒಂದು ಪ್ರಸಂಗ ನಮ್ಮಲ್ಲಿ ಜನಜನಿತವಾಗಿತ್ತು. ಸ್ಟಾಫ್ ರೂಮಿನ ಹಿಂದಿದ್ದ ಹಿತ್ತಲಲ್ಲಿ ಅವರು ಒಂದು ಮಾವಿನ ಗಿಡವನ್ನು ಮಂಗಳೂರಿಂದ ತಂದು ಬೆಳೆಸಿದ್ದರು. ಅದರ ಬೆನ್ನು ತಟ್ಟಿ ದಿನವೂ ಸ್ವಲ್ಪ ಹೊತ್ತು ಮಾವಿನ ಗಿಡದೊಂದಿಗೆ ಮಾತಾಡುತ್ತಿದ್ದರು. ಗಿಡ ಈಗ ದೊಡ್ಡ ಮರವಾಗಿದ್ದರೂ ಒಮ್ಮೆಯೂ ಹೂಬಿಟ್ಟಿರಲಿಲ್ಲ. ಒಂದು ದಿನ ಪ್ರಿನ್ಸಿಪಾಲರು ಗಿಡದ ಬಳಿನಿಂತು ನಮ್ಮ ಅಟೆಂಡರ್ ಸಿದ್ದಯ್ಯನೊಂದಿಗೆ ಮಾತಾಡುತ್ತಿದ್ದಾರೆ. “ಸಿದ್ದಯ್ಯಾ..ಈ ಗಿಡ ಯಾಕೋ ಹೂ ಬಿಡಲೇ ಇಲ್ಲ. ಈ ಮಾರ್ಚ್ ವರೆಗೆ ನೋಡೋಣ…ಹೂ ಬಿಡಲಿಲ್ಲಾ…ತೆಗೆದು ಹಾಕಿಬಿಡು…ಬೇರೆ ಗಿಡ ಹಾಕಿದರಾಯಿತು…”. ಆಶ್ಚರ್ಯ ಎಂದರೆ ಆ ಮಾರ್ಚ್ ತಿಂಗಳಲ್ಲಿ ಗಿಡದಲ್ಲಿ ಭರ್ದಂಡು ಹೂವು! ಪ್ರಿನ್ಸಿಪಾಲರು ನಮ್ಮನ್ನು ಕೂಗಿ ಉತ್ಸಾಹದಿಂದ ಹೇಳಿದರು: ನೋಡಿ… ಹೇಗೆ ಹೂ ಗಿಡಿದಿದೆ ನೋಡಿ ನಮ್ಮ ಮಾವು! ಹೂ ಬಿಡದಿದ್ದರೆ ಕಡಿಸಿ ಹಾಕುತ್ತಾರೆ ಎಂದು ಅದಕ್ಕೆ ಗೊತ್ತಾದದ್ದೇ ಜೀವ ಭಯದಿಂದ ಪಾಪ ಈ ವರ್ಷ ಮೈತುಂಬ ಹೂಬಿಟ್ಟಿದೆ…ಗಿಡಕ್ಕೆ ಮಾತು ಬರೋಲ್ಲ ಅನ್ನುತ್ತೀರಲ್ಲಾ ನೀವು…ಈಗಾದರೂ ಒಪ್ಪುತ್ತೀರಿ ತಾನೇ?”.
ನಾನು ಪ್ರಿನ್ಸಿಪಾಲರ ಕೋಣೆಗೆ ಹೋದಾಗ ಏನೂ ಬರೆಯುತ್ತಾ ಕೂತಿದ್ದ ಅವರು , ಹೆಜ್ಜೆಸಪ್ಪುಳ ಕೇಳಿದ್ದೇ ತಲೆಯೆತ್ತಿ ನನ್ನ ನೋಡಿದರು. ನಾನು ಯಥಾಪ್ರಕಾರ ಗುಡ್ ಮಾರ್ನಿಂಗ್ ಹೇಳಿದೆ. ಪ್ರಿನ್ಸಿಪಾಲರ ಮುಖ ಯಾವತ್ತಿನ ಹಾಗಿರಲಿಲ್ಲ. ನನ್ನ ಜಂಗಾಬಲವೇ ಉಡುಗಿ ಹೋಯಿತು!ಹಾಗೆ ಮುಖ ಸಿಂಡರಿಸಿಕೊಂಡು ಯಾವತ್ತೂ ಅವರು ಕೂತಿದ್ದವರೇ ಅಲ್ಲ. ಈಗ ಸಹಜವಾಗಿಯೇ ನನ್ನ ತುಟಿಗಳು ಒಣಗ ಹತ್ತಿದವು. ಪ್ರಿನ್ಸಿಪಾಲರು ಗಂಭೀರ ದನಿಯಲ್ಲಿ ಸಣ್ಣಗೆ ಹೇಳಿದರು: ಕುಳಿತುಕೊಳ್ಳಿ…ಈಗ ಗೋಡೆ ಗಡಿಯಾರದ ಸದ್ದು ಮಾತ್ರ ಪ್ರಾಚಾರ್ಯರ ಕೋಣೆಯಲ್ಲಿ. ಉಳಿದ ಜಗತ್ತಿನ ಸದ್ದುಸುಳಿವಿಲ್ಲ.
ಕುಳಿತಿದ್ದ ನನ್ನ ಮುಖವನ್ನೇ ನೋಡುತ್ತಾ ಪ್ರಿನ್ಸಿಪಾಲ್ ಹೇಳಿದರು: “ನಿಮ್ಮ ವಿರುದ್ಧ ಒಬ್ಬಳು ಹುಡುಗಿ ಒಂದು ಕಂಪ್ಲೇಂಟ್ ಕೊಟ್ಟಿದ್ದಾಳೆ….ರಿಟನ್ ಕಂಪ್ಲೇಂಟ್….ಐ ಆಮ್ ಎಕ್ಸ್ಟ್ರೇಮ್ಲಿ ಸಾರಿ ಮಿಸ್ಟರ್ ಮೂರ್ತಿ!”. ಚರ್ಚಿನ ಗಂಟೆ ಹೊಡೆದ ಹಾಗೆ ತಡೆ ತಡೆದು ಮಾತಾಡಿದರು ಫಾದರ್. ತಮ್ಮ ಡ್ರಾ ಎಳೆದು ಒಂದು ಎನ್ವಲಪ್ ಬಿಡಿಸಿ ನನ್ನ ವಿರುದ್ಧ ಯಾರೋ ವಿದ್ಯಾರ್ಥಿನಿ ಬರೆದಿದ್ದ ಕಂಪ್ಲೇಂಟ್ ನನ್ನ ಕೈಗೆ ಕೊಟ್ಟರು. ಡವಡವಿಸುವ ಎದೆಯಲ್ಲಿ ನಾನು ಆ ಬರೆಹ ಓದಿದೆ. ಪ್ರಿಯಾ ಬರೆದಿದ್ದ ಪತ್ರ ಅದು. ಪತ್ರದ ಸಾರಾಂಶ ಇಷ್ಟು… ಕಳೆದ ಆರುತಿಂಗಳಿಂದ ಎಚ್ಚೆಸ್ವಿ ಸರ್ ನನ್ನನ್ನು ನೋಡದೆ ಕ್ಲಾಸಲ್ಲಿ ಪಾಠ ಮಾಡುತ್ತಿದ್ದಾರೆ! ಬೇರೆ ಎಲ್ಲರನ್ನೂ ನೋಡುತ್ತಾರೆ. ನನ್ನನ್ನು ಮ್ಕಾತ್ರ ನೋಡುತ್ತಿಲ್ಲ…! ನಾನು ಮಾಡಿರುವ ಅಪರಾಧವಾದರೂ ಏನು? ನನಗೆ ಜೀವನದಲ್ಲೇ ಜಿಗುಪ್ಸೆ ಉಂಟಾಗಿದೆ…ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದೇನೆ.. ಈ ಬಗ್ಗೆ ತಾವು ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ನಾನು ಕಾಲೇಜು ಬಿಟ್ಟರೂ ಬಿಡಬಹುದು!
ಈ ಕಂಪ್ಲೇಂಟ್ ಓದಿ ಅಳಬೇಕೋ ನಗಬೇಕೋ ನನಗೆ ತಿಳಿಯಲಿಲ್ಲ! ನಾನು ಪೆಚ್ಚಾಗಿ ಕುಳಿತುಕೊಂಡೆ.
“ಅಲ್ಲ ಮಿಸ್ಟರ್ ಮೂರ್ತಿ…ಮೂವತ್ತು ಜನ ವಿದ್ಯಾರ್ಥಿಗಳನ್ನು ನೋಡಿಕೊಂಡು ಮಾತಾಡುವ ನಿಮ್ಕಗೆ ಈ ಒಂದು ಹುಡುಗಿಯನ್ನು ನೋಡಿ ನೋಡಿ ಪಾಠ ಮಾಡೋದು ಕಷ್ಟಾನಾ? ನಾಳೆ ಈ ಹುಡುಗೀನಾ ನಿಮ್ಮ ಮುಂದೇ ಫಸ್ಟ್ ಬೆಂಚಲ್ಲೇ ಕೂಡಿಸಿಕೊಳ್ಳಿ…ಮುಖ ನೋಡದಷ್ಟು ಅವಳು ಕುರೂಪಿ ಅಲ್ಲ…ಅಲ್ಲವಾ…?”.
ನಾನು ಪೆಚ್ಚು ಪೆಚ್ಚಾಗಿ ನಕ್ಕು, ಏನು ಹೇಳಬೇಕೋ ತಿಳಿಯದೆ-ಸಾರೀ ಫಾದರ್ ಎಂದು ವಟಗುತ್ತಿದೆ. ಪ್ರಿನ್ಸಿಪಾಲರು ತಮ್ಮ ಎಡ ವಸಡಿನ ಬಂಗಾರದ ಹಲ್ಲು ಹೊಳೆಯುವಂತೆ ಒಮ್ಮೆಗೇ ಫಕ್ಕನೆ ನಕ್ಕರು:
“ಐ ಫೀಲ್ ಸಾರೀ ಫಾರ್ ಯೂ…!”

‍ಲೇಖಕರು avadhi

February 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Beluru Raghunaandan

    ಸರ್ …..ಓದುತ್ತ ಓದುತ್ತ ಆತ್ಮ ಕಥನದ ಆನಂದ ಮತ್ತು ವಯುಕ್ತತೆಯನ್ನು ಮೀರಿದ ನಿಮ್ಮ ಅನುಭವಗಳು ಮನ ಸೆಳೆಯುತ್ತದೆ………

    ಪ್ರತಿಕ್ರಿಯೆ
  2. K.V.Tirumalesh

    ಪ್ರಿಯ ಎಚ್.ಎಸ್.ವಿ.,
    ನಿಮ್ಮ ನಿಜ ಅನುಭವದ ಸ್ವಾರಸ್ಯ ಕೇಳಿ ನನಗೊಂದು ಜೋಕ್ ನೆನಪಾಗ್ತದೆ.ಒಬ್ಬ ಪ್ರೊಫೆಸರ್ ಕ್ಲಾಸಿಗೆ ಬಂದು ಒಬ್ಬಾಕೆ ಹುಡುಗಿಯನ್ನು ನೋಡುತ್ತಲೇ ದಿನಾ ಪಾಠ ಮಾಡುತ್ತಿದ್ದರು. ಒಂದು ದಿವಸ ಆ ಹುಡುಗಿ ಕ್ಲಾಸಿಗೆ ಬಂದಿರಲಿಲ್ಲ. ಪ್ರೊಫೆಸರ್ ಕ್ಲಾಸಿಗೆ ಬಂದು ತಬ್ಬಿಬ್ಬಾದರು! “Where is the class?” ಎಂದು ಕೇಳಿದರು. “There is no class!” ಎಂದರು ಹುಡುಗರು!
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  3. Jayalaxmi Patil

    ಸರ್, ಹೊಟ್ಟೆ ತುಂಬಾ ನಕ್ಕುಬಿಟ್ಟೆ. ನಾನು ಪಿ ಯು ಓದುವಾಗ ಕಾಲೇಜಿನಲ್ಲಿ ಮೇಟಿ ಎಂಬ ಅಡ್ಡೆಹ್ಸರಿನ ಮೇಸ್ಟ್ರು ಫಿಸಿಕ್ಸ್ ಹೇಳಿಕೊಡ್ತಿದ್ರು, ಅವರ ಮಟ್ಟಿಗೆ ನಾವು ಹುಡುಗಿಯರೆಲ್ಲಾ ಈ ‘ಪ್ರಿಯಾ’ನೇ! 🙂

    ಪ್ರತಿಕ್ರಿಯೆ
  4. Prasad V Murthy

    ಹ್ಹ ಹ್ಹ ಹ್ಹ ಹ್ಹಾ..:-D ಬಹಳ ಚೆಂದದ ಬರಹ.. ನಿಮ್ಮ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡುವ ಪರಿ ಮನಸ್ಸೆಳೆಯುವಂತದ್ದು ಸರ್.
    – ಪ್ರಸಾದ್.ಡಿ.ವಿ.

    ಪ್ರತಿಕ್ರಿಯೆ
  5. h. r. laxmivenkatesh

    ನಿಜವಾಗಿಯೂ ಇಂತಹ ಸನ್ನಿವೇಶವನ್ನು ಎಲ್ಲೋ ಓದಿದ್ದೆ. ಕೆಲವು ಭಾವುಕ ಹುಡುಗ ಹುಡುಗಿಯರು ತಮ್ಮ ಟೀಚರ್ ನ್ನು ಹೀಗೆಯೇ ಹೆಚ್ಚು ಹಚ್ಚಿಕೊಂಡ ಸಂಗತಿ ನನಗೆ ತಿಳಿದಿದೆ !

    ಪ್ರತಿಕ್ರಿಯೆ
  6. ಡಿ.ವಿ.ಪಿ

    ನಿಮ್ಮ ಬರವಣಿಗೆಯ ಶೈಲಿ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆದುಬಿಡುತ್ತದೆ ಸರ್., ಆದ್ದರಿಂದಲೇ ಕವಿತೆ., ಮಕ್ಕಳ ಕವಿತೆ., ನಾಟಕ ರಂಗಗಳಲ್ಲಿ ಮಹಾನ್ ವೃಕ್ಷವಾಗಿದ್ದೀರಿ. ಹುಚ್ಚುಕೋಡಿ ಮನಸ್ಸಿನ ಅನಾವರಣವಾಗಿದೆ ನಿಮ್ಮ ಈ ಬರಹದಲ್ಲಿ. ಶುಭವಾಗಲಿ.

    ಪ್ರತಿಕ್ರಿಯೆ
  7. h. r. laxmivenkatesh

    ಇತ್ತೀಚೆಗೆ ಎಚ್ಚೆಸ್ವಿ ಮುಂಬೈಗೆ ಬಂದು, ಮೈಸೂರ್ ಅಸೋಷಿಯೇಷನ್ ಎಂಬ ಅತಿ ಹಳೇ ಕನ್ನಡ ಸಂಘದಲ್ಲಿ ಅದರ ಗೋಲ್ಡನ್ ಜ್ಯುಬಿಲಿ ದತ್ತಿ ಉಪನ್ಯಾಸಮಾಲೆಯಲ್ಲಿ ಆಹ್ಹ್ವಾನಿತ ಪಹುಣೆಯಾಗಿ ಅಲ್ಲಿ ನೆರೆದಿದ್ದ ರಸಿಕ ಕನ್ನಡಿಗರ ಮನಸ್ಸನ್ನು ಸಂತೋಷಗೊಳಿಸಿದರು. ನನಗೆ ಆಗ ಮೇಲೇಹೇಳಿದ ಹುಡುಗಿಯ ನೆಪ ಆತು ನೋಡ್ರಿ. ಅರೆ ನನ್ನ ಬಾಲ್ಯದ ಗೆಳೆಯ, ಮೂರ್ತಿ, ತನ್ನ ಮಾತಿನ ಮಧ್ಯೆ ಒಮ್ಮೆಯಾದರೂ ನನ್ನನ್ನು ನೋಡಲಿಲ್ಲವಲ್ಲ ಅಂತ.
    ಆಮೇಲೆ ನನ್ನ ವಿವೇಕ ಕಿವಿಯಲ್ಲಿ ಹೇಳಿತು. ‘ಅಯ್ಯೋ ಮಂಕೇ, ಆ ಗುಂಪಿನಲ್ಲಿ ಅವರು ನಿನ್ನನ್ನು ಗುರುತಿಹಿಡಿದರಲ್ಲ ಅದೇ ನಿನ್ನ ಪುಣ್ಯ ಅಂತ ತಿಳಿ,’ ಅದು ಹಾಗಲ್ಲದಿದ್ದರು, ಕವಿಪುಂಗವನಾಗಿ ಮುಗಿಲೆತ್ತರಕ್ಕೆ ಬೆಳೆದು, ಕನ್ನಡಮ್ಮನ ಸೇವೆಮಾಡುತ್ತಿರುವ ಅತಿ ಬೇಡಿಕೆಯ ಕವಿ ಎಚ್ಚೆಸ್ವಿ ಎಲ್ಲಿ; ಕೇವಲ ಅವರು ನನ್ನ ಬಾಲ್ಯದ ಗೆಳೆಯ ಎಂದು ಹೇಳುವಷ್ಟೇ ಸೀಮಿತನಾದ ನಿನ್ನ ಗೆಳೆಯ ವೆಂಕಟೇಶಮೂರ್ತಿ ಎಲ್ಲಿ ?
    ಇದು ನನ್ನ ಭ್ರಮೆ ಎಂದು ಅನ್ನಿಸಲು ಹೆಚ್ಚು ಸಮಯ ಆಗಲಿಲ್ಲ. ತಮ್ಮ ಭಾಷಣ ಮುಗಿದಕೂಡಲೆ ಮೂರ್ತಿ ಮೊದಲಿನಂತೆ ಹತ್ತಿರಕ್ಕೆ ಬಂದು ನನ್ನನ್ನು ಪ್ರೀತಿಯಿಂದ ಆಲಿಂಗಿಸಿ ಹೇಗಿದ್ದೀಯ ? ಎಂದು ವಿಚಾರಿಸಿದಾಗ ನಾವು ಕರಗಿ ಹೋಗಿ ಮೊದಲಿನ ತರಹದ ಪ್ರಪಂಚಕ್ಕೆ ಬಂದೆವು.
    ಬೆಂಗಳೂರಿಗೆ ಹೋದಾಗ, ನಾನು ಮತ್ತು ನಮ್ಮ ಗೆಳೆಯ ಶಂಕ್ರ, ಮೂರ್ತಿ ಮನೆಗೆ ಹೋಗಿ ಅಲ್ಲಿ ದಿನವಿಡೀ ಕಳೆದ ಅನುಭವ ನಿಜಕ್ಕೂ ಮರೆಯಲಾರದ್ದು. ಮೂರ್ತಿಯವರ ಅಮ್ಮ, ನಾಗರತ್ನಮ್ಮನವರು ನಮ್ಮನ್ನು ಸುಮಾರು 5 ದಶಕಗಳ ಲೋಕಕ್ಕೆ ಕರೆದೊಯ್ದು, ನಾನು ಮತ್ತು ಮೂರ್ತಿ ನಂಟರು ಎನ್ನುವ ಮಾತನ್ನು ಸಾಬೀತು ಮಾಡಿದರು. ಕೇವಲ 16 ವರ್ಷಕ್ಕೆ ವೈಧವ್ಯದ ಹಣೆಪಟ್ಟಿ ಧರಿಸಿ ಇಡೀ ಜೀವನವನ್ನು ಮಗನ ಏಳಿಗೆಗಾಗಿ ಕಳೆದ ಮಹಾಚೇತನಗಳಲ್ಲಿ ಅವರೊಬ್ಬರು. ಅವರಿಗೆ ನಮ್ಮ ನಮಸ್ಕಾರಗಳು.
    -ಹೊರಾಂಲವೆಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: