ಎಚ್ಹೆಸ್ವಿ ಅನಾತ್ಮ ಕಥನ: ಅಲ್ಲಿ ಇದ್ದದ್ದು ಕೆಂಪು ಬಣ್ಣದ ಖಾಲಿ ಕವರು ಮಾತ್ರ.

ಅಳಿಯಲಾರದ ನೆನಹು-15 ಮರೆಯಲಾಗದ ಆ ಓಕುಳಿ ಸಂಜೆ… -ಎಚ್  ಎಸ್ ವೆಂಕಟೇಶ ಮೂರ್ತಿ ನನಗಾಗ ಹದಿನೆಂಟರ ನಂಟು. ಯಾವ ಮಾಯದಲ್ಲಿ ಬಂತೋ ಈ ವಸಂತ ಅನ್ನೋದು!  ಬೋಳು ಬಯಲಲ್ಲಿ ಹಚ್ಚನೆ ಹಸಿರು ವ್ಯಾಪಿಸಿ ಸದಾ ಅಲ್ಲೇ ಕಣ್ಣು. ಎಲ್ಲಿ ನೋಡಿದರಲ್ಲಿ ನಳನಳಿಸುವ ಬೆಟ್ಟ ಸಾಲು. ಭದ್ರಾವತಿಯ ಎಸ್.ಜೆ.ಪಾಲಿಟೆಕ್ನಿಕ್ ಇಂದ ರಾತ್ರಿ ತಡವಾಗಿ ನಾನಿದ್ದ ಬಾಡಿಗೆ ಮನೆಗೆ ವಾಪಸ್ ಬರುವಾಗ ಜನ್ನಾಪುರದ ಹತ್ತಿರ ಬಂದೆನೆಂದರೆ ಮೂಗಿನ ಸೆಲೆ ಬಿರಿಸುವಂಥ ರಾತ್ರಿರಾಣಿಯ ಹುಚ್ಚೆಬ್ಬಿಸುವ ಕಂಪು. ಪಂಪ ಹೇಳುವ ಹಾಗೆ : ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ- ನೋಳ್ಪೊಡಾವ ಬೆಟ್ಟುಗಳೊಳಮ್ ಆವ ನಂದನವನಂಗಳೊಳಮ್ ಬನವಾಸಿ ದೇಶದೊಳ್! ಬನವಾಸಿದೇಶದೊಳ್ ಎಂಬುದನ್ನು ಭದ್ರಾವತಿ ಪ್ರದೇಶದೊಳ್ ಎಂದು ಬದಲಿಸಿಕೊಂಡರೆ ಅರ್ಜುನ ಬೇರೆಯಲ್ಲ, ಅರಿಕೇಸರಿ ಬೇರೆಯಲ್ಲ, ನಾನು ಬೇರೆಯಲ್ಲ! ನನ್ನ ಜೊತೆಯಲ್ಲಿ ಸಹಪಾಠಿಗಳಾಗಿದ್ದ ಒಬ್ಬೊಬ್ಬ ತರುಣನೂ ಒಂದೊಂದು ಕನಸಿನ ಕನ್ನೆಯ ಕಣ್ಣಿಯಲ್ಲಿ ಸಿಕ್ಕಿಕೊಂಡವನೇ! ಚೆಲುವು ಕಂಡಲ್ಲಿ ಅದನ್ನು ಹಿಂಬಾಲಿಸುವ ಚಪಲದ ಕಾಲ ಅದು! ಯಾವ ಚೆಲುವೆ ಯಾವ ಬಸ್ಸ್ಟಾಪ್ ಬಳಿ ಎಷ್ಟು ಹೊತ್ತಿಗೆ ಬರುತ್ತಾಳೆ ಎಂಬುದು ನಮಗೆ ಕಣ್ಪಾಠವಾಗಿಹೋಗಿತ್ತು. ಬೆಳಿಗ್ಗೆ ಬೇಗ ಮನೆಬಿಟ್ಟು ಎಂಟು ಮೂವತ್ತಕ್ಕೆ ಸರಿಯಾಗಿ ಜನ್ನಾಪುರದ ಬಸ್ಸ್ಟಾಪ್ ಬಳಿ ಬರಬೇಕು. ಎಂಟೂ ಮೂವತ್ತೈದಕ್ಕೆ ಆ ಇಬ್ಬರು ಹುಡುಗಿಯರು ಅಲ್ಲಿಗೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಾರೆ. ಒಬ್ಬಳು ಎಣ್ಣೆಗೆಂಪುಬಣ್ಣದ ಹುಡುಗಿ. ಇನ್ನೊಬ್ಬಳು ಚಂದನದಗೊಂಬೆಯಂಥ ಕಪ್ಪುಹುಡುಗಿ. (ನಾನು ಈ ಚೆಲುವೆಯನ್ನು ನೋಡದಿದ್ದರೆ ಆ ಕಪ್ಪು ಹುಡುಗಿ ಪದ್ಯವನ್ನು ಬರೆಯುತ್ತಾ ಇದ್ದೆನೆ?). ಆ ಹುಡುಗಿಯರ ಹೆಸರು ಕುಲ ಗೋತ್ರ ಯಾವುದೂ ನಮಗೆ ತಿಳಿದಿರಲಿಲ್ಲ. ಅವರು ಶಿವಮೊಗ್ಗೆಗೆ ಸಹ್ಯಾದ್ರಿ ಕಾಲೇಜಿಗೆ ಹೋಗುತ್ತಿದ್ದರೆ? ಇರಬಹುದು. ಇಬ್ಬರೂ ಲಂಗ ದಾವಣಿಯಲ್ಲಿ ಇರುತ್ತಿದ್ದರು. ಪರಸ್ಪರ ಮಾತಾಡಿಕೊಂಡು ಗಟ್ಟಿಯಾಗಿ ನಗುತ್ತಾ ಇದ್ದರು. ಈ ಲೋಕದ ಪರಿವೆಯೇ ಅವರಿಗೆ ಇರುತ್ತಿದ್ದಿಲ್ಲ. ತಮ್ಮನ್ನು ಈ ಡ್ರಾಯಿಂಗ್ ಬೋರ್ಡಿನ  ಪಡ್ಡೆಹುಡುಗರು ಹಸಿದ ಕಣ್ಣಿಂದ ಕಿತ್ತು ತಿನ್ನುತ್ತಿದ್ದಾರೆಂಬ ಅರಿವೂ ಅವರಿಗೆ ಇದ್ದಂತಿಲ್ಲ. ಪ್ರಾಯಃ ವಸಂತ ಅವರ ಬಾಳಲ್ಲಿ ಇನ್ನೂ ದಾಳಿ ಮಾಡಿಲ್ಲವೋ? ನಾವು ಹೆಣಭಾರದ ಡ್ರಾಯಿಂಗ ಬೋರ್ಡ್ ಹೊತ್ತುಕೊಂಡು ಮೂಲೆಯಲ್ಲಿ ನಿಲ್ಲುತ್ತಾ ಇದ್ದೆವು. ಯಾವುದೋ ಬಸ್ ಕಾಯುತ್ತಾ ನಿಂತಿರುವ ಸಭ್ಯ ಹುಡುಗರ ಹಾಗೆ! ದೇವರೇ ಈಗ ಜೋರಾಗಿ ಗಾಳಿ ಬೀಸಲಿ ಎನ್ನೋನು ಶ್ರೀ-. ಗಾಳಿಬೀಸಿದರೆ? ಆಗ ಡೀಜಿ- ಉದ್ಗರಿಸೋನು: ಅವರು ಹೊದ್ದ ದಾವಣಿ ಮೇಲೆ ಹಾರಿ ಹೋಗುತ್ತೆ….ಪಟಪಟ ರೆಕ್ಕೆ ಬಡಿಯುತ್ತವೆ ಬಣ್ಣದ ಪಾರಿವಾಳ. ನಾನು ಆ ದಾವಣಿಗಳನ್ನ ಹಿಂಬಾಲಿಸಿಕೊಂಡು ಓಡುತ್ತೇನೆ. ಸಿಕ್ಕರೆ ಅವನ್ನ ಆ ಚೆಲುವೆಯರಿಗೆ ಹಿಂದಿರುಗಿಸಲಿಕ್ಕಾ? ಅಲ್ಲಲ್ಲ… ಅವನ್ನು ನನ್ನ ಟ್ರಂಕಲ್ಲಿ ಬಚ್ಚಿಟ್ಟುಕೊಳ್ಳುತ್ತೇನೆ. ನಿಮಗ್ಯಾರಿಗೂ ಅವನ್ನು ಮತ್ತೆ ತೋರಿಸುವುದಿಲ್ಲ… ಸ್ವಾರ್ಥೀ..!ಎನ್ನುತ್ತಾ ಡೀಜಿ-ಯ ಬೆನ್ನಿಗೆ ಗುದ್ದೋನು ಈ-. ಬಸ್ ಯಾವ ಮಾಯದಲ್ಲಿಯೋ ಬಂದು ಅವರನ್ನು ಹಾರಿಸಿಕೊಂಡು ಹೋಗಿರೋದು. ದಾವಣಿ ಸಮೇತ ಆ ಹುಡುಗಿಯರು ಮಂಗ ಮಾಯವಾಗಿರೋರು. ನಡೀರಿ…ನಾಳೆ ಗಾಳಿ ಬೀಸ ಬಹುದು..ಎಂದು ಖಾಲಿ ನಿಟ್ಟುಸಿರುಬಿಡುತ್ತಾ ನಾವು ಪಾಲಿಟೆಕ್ನಿಕ್ ಕಡೆ ಹೆಜ್ಜೆಹಾಕುತ್ತಿದ್ದೆವು. ನಮ್ಮಲ್ಲಿ ಆಗ ಡೀಜಿ- ಕಥೆಗಿತೆ ಬರೆಯೋನು. ಮೂರ್ತಿ..ಒಂದು ಕಲ್ಪನೆ ನನ್ನದು…ಒಂದು ವೇಳೆ ನಮ್ಮ ಬಳಿ ಆ ಹುಡುಗಿಯರ ಅಪ್ಪಂದಿರು ಬಂದು, ನಿಮಗೆ ನಮ್ಮ ಮಕ್ಕಳನ್ನು ಮದುವೆ ಮಾಡಿಕೊಡುತ್ತೇವೆ… ನಿಮ್ಮಲ್ಲಿ ಯಾರು ಅವರನ್ನು ಮದುವೆಯಾಗ್ತೀರಿ..? ಎಂದರೆ ನೀನು ಏನು ಹೇಳ್ತಿ? ನಾನು ನಗುತ್ತಾ ಹೇಳುತ್ತಿದ್ದೆ. ನನಗೆ ಆ ಕಪ್ಪು ಚಂದನದಗೊಂಬೆಯೇ ಇರಲಿ.  ಸದ್ಯ ಆ ದಂತದ ಗೊಂಬೆ ನನಗೆ ಅನ್ನಲಿಲ್ಲವಲ್ಲ ನೀನು..! ಏಯ್.. ದಂತದ ಗೊಂಬೆ ನನ್ನದೋ ಡೀಜಿ-. ಬೇಕೂಫಾ… ನೀನು ಅಲ್ಲಿ ಕಣ್ಣು ಹಾಕ ಬೇಡ…. “ಎಲಾ ಇವರಾ ನನ್ನನ್ನ ಯಾರೂ ಕೇಳೋರೇ ಇಲ್ಲವಲ್ಲ…ನನಗೆ ಆ ಇಬ್ಬರೂ ಬೇಕು…ನೀವೆಲ್ಲಾ ಮದುವೇಲಿ ವಾಲಗ ಊದಲಿಕ್ಕೆ ಬನ್ನಿ ಅಷ್ಟೆ!”- ಅನ್ನೋನು ಕಿಲಾಡಿ ಶ್ರೀ-. “ನಾನು ಅವರನ್ನು ಮದುವೆಯಾದ ಮೇಲೆ ನಿಮೆಲ್ಲರಿಗೂ ಅವರು ಅತ್ತಿಗೆಯರಾಗುತ್ತಾರೆ! ಮಕ್ಕಳಾ… ಯಾರೂ ಕಣ್ಣೆತ್ತಿ ನೋಡೋಹಾಗಿಲ್ಲ ಅವರನ್ನ…”ಅನ್ನೋನು ಡೀಜಿ-. “ಅರೇ ಇವನ …ಬರೀ ನೋಡಿದರೆ ಏನಾಗುತ್ತೋ…? ನಾವೇನು ತಿಂದುಬಿಡ್ತೀವಾ ಅವರನ್ನ? “ನೋಡ್ಕೂಡ್ದು ಅಂದರೆ ನೋಡ್ಕೂಡ್ದು ಅಷ್ಟೆ…ನಿಮ್ಮನೆಲ್ಲಾ ನಂಬಕ್ಕಾಗುತ್ತೇನ್ರೋ..ಯಾಸ್ಕಲ್ಸ್ ನೀವು..”-ಅನ್ನೋನು ಡೀಜಿ-. ಎಲ್ಲರೂ ಗಟ್ಟಿಯಾಗಿ ನಗುತ್ತಾ “ನೀನು ಮದುವೆ ಆಗೋತನಕ ನೋಡಬಹುದು ತಾನೇ? ಅಥವಾ ಅದಕ್ಕೂ ನಿನ್ನ ಪರ್ಮಿಷನ್ ತಗೋಬೇಕೋ? ಅನ್ನೋನು ಈ-. ಹೀಗೆ ಮಾತಾಡುತ್ತಾ ನಾವು ಹೊಸಬಾವಿ ಮನೇ ಹತ್ರ ಬಂದಿರುತಾ ಇದ್ದೆವು. ಹೊಸಬಾವಿ ಅನ್ನೋದು ಯಾವುದೋ ಮನೆ ಮುಂದೆ ನೇತಾಡುತ್ತಿದ್ದ ನಾಮಫಲಕ. ಹೊಸಬಾವಿ ಮನೆ ಹಾಗೆ ನೋಡಿದರೆ ನಮ್ಮ ಪಾಲಿಟೆಕ್ನಿಕ್ ಗೆ ಸ್ವಲ್ಪ ಬಳಸುದಾರಿಯೇ. ಆದರೆ ನಾವು ಸ್ವಲ್ಪ ಹೆಚ್ಚು ನಡೆದರೂ ಚಿಂತೆಯಿಲ್ಲ ಅಂದುಕೊಂಡು ಹೊಸಬಾವಿಯ ಮನೆ ಮಂದೇ ಬರುತ್ತಾ ಇದ್ದೆವು. ( ಸ್ವಲ್ಪ ಬಳಸು ದಾರಿಯಾದರೂ ಉಜ್ಜನಿಗೆ ಹೋಗದೆ ಇರಬೇಡ-ಅಂತ ಮೇಘಕ್ಕೆ ಯಕ್ಷ ಹೇಳಲಿಲ್ಲವೇ?). ಆಗ ಸರಿಯಾಗಿ ಒಂಭತ್ತು ಗಂಟೆ ಆಗಿರೋದು. ಶ್ರೀಮತಿ ಹೊಸಬಾವಿ ತನ್ನ ಮನೆಯ ಮುಂದಿದ್ದ ಮಲ್ಲಿಗೆ ಬಳ್ಳಿಯಿಂದ ಹೂಬಿಡಿಸುತ್ತಾ ಇರೋರು. ಆಕೆ ಸುಮಾರು ಇಪ್ಪತ್ತು ಇಪತ್ತೈದರ ತುಂಬು ಪ್ರಾಯದ ಚೆಲುವೆ. ಹೊಸದಾಗಿ ಹೊಸಬಾವಿಯನ್ನು ಕೈಹಿಡಿದು ಭದ್ರಾವತಿ ಪ್ರದೇಶಕ್ಕೆ ಬಂದಿರಬೇಕು ಆ ಹುಬ್ಬಳ್ಳಿಯ ಹೂಬಳ್ಳಿ. ಆಕೆ ಕೈಗೆ ನಿಲುಕದ ಹೂ ಬಿಡಿಸಲಿಕ್ಕಾಗಿ ಹಾರಿ ಹಾರಿ ಬೀಳೋರು. ಮತ್ತೆ ಮತ್ತೆ ಆ ಪಂಪ! ಸೊಗಯಿಸಿ ಬಂದ ಮಾಮರನೇ ತಳ್ತೆಲೆವಳ್ಳಿಯೇ ಪೂತ ಜಾತಿ ಸಂಪಗೆಯೇ ಕುಕಿಲ್ವ ಕೋಗಿಲೆಯೇ ಪಾಡುವ ತುಂಬಿಯೇ ನಲ್ಲರೊಳ್ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ- ನೋಳ್ಪೊಡಾವ ಬೆಟ್ಟುಗಳೊಳಮ್ ಆವ ನಂದನಗಳೊಳಮ್ ಭದ್ರಾವತಿ ಪ್ರದೇಶದೊಳ್! ದೇವೀ ದರ್ಶನ ಮುಗಿಸಿಕೊಂಡು ನಾವು ಪಾಲಿಟೆಕ್ನಿಕ್ ತಲಪಿದಾಗ ಆಗಲೇ ಬಿಎಂಎಸ್ ಕ್ಲಾಸ್ ಶುರುವಾಗಿರೋದು. ನಾವೆಲ್ಲಾ ಜಾಣವಿದ್ಯಾರ್ಥಿಗಳೆಂದು ಹೆಸರಾಗಿದ್ದುದರಿಂದ ಬಿಎಂಎಸ್ ಮುಗುಳ್ನಗೆಯೊಂದಿಗೇ ನಮ್ಮನ್ನು ಸ್ವಾಗತಿಸುತ್ತಿದ್ದರು. ಅದು ಡ್ರಾಯಿಂಗ್ ಕ್ಲಾಸ್. ನಮ್ಮಲ್ಲಿ ಈ- ಮತ್ತು ಶ್ರೀ- ಡ್ರಾಯಿಂಗ್ ನಲ್ಲಿ ನಿಸ್ಸೀಮರಾಗಿದ್ದರು. ಈ- ಸೊಗಸಾಗಿ ಡ್ರಾಯಿಂಗ್ ಮಾಡುತ್ತಿದ್ದ. ಎಂಥ ಕ್ಲಿಷ್ಟ ರಚನೆಗಳು ಅವನಿಗೆ ನೀರು ಕುಡಿದಷ್ಟು ಸುಲಭ. ಶ್ರೀ- ಕೆಲಸದಲ್ಲಿ ಆ ಚೆಲುವು ಇರುತ್ತಿರಲಿಲ್ಲ. ಆದರೆ ಇಡೀ ಕ್ಲಾಸಲ್ಲಿ ಎಲ್ಲರಿಗಿಂತಾ ಮೊದಲು ಡ್ರಾಯಿಂಗ್ ಮುಗಿಸುತ್ತಿದ್ದವನು ಅವನೇ. ನಮ್ಮ ಡೀಜಿ- ಡ್ರಾಯಿಂಗ್ ದೇವರಿಗೇ ಪ್ರೀತಿ. ಬೀಎಂಎಸ್ ರೌಂಡ್ ಬಂದವರು ಡೀಜಿ- ಬಳಿ ನಿಂತು ಗಟ್ಟಿಯಾಗಿ ನಗಲಿಕ್ಕೆ ಶುರುಹಚ್ಚೋರು. ಏನ್ರೀ ನಿಮ್ಮ ಡ್ರಾಯಿಂಗ್ ಗೆ ಸೊಂಟಾನೇ ಮುರಿದು ಹೋಗಿದೆಯಲ್ರೀ…ಡ್ರಾಯಿಂಗ್ ಹೇಗಿರ್ಬೇಕು ಗೊತ್ತಾ…ಒಳ್ಳೇ ವೈಜಯಂತಿಮಾಲ ಸೊಂಟದ ಥರ ಇರ್ಬೇಕು! ಅನ್ನೋರು. ಮತ್ತೆ ವೈಜಯಂತಿಯ ಸೊಂಟದ ಬಳುಕಿನ ಪ್ರಸ್ತಾಪ. ಆ ವಾರ ಶಂಕರ್ ನಲ್ಲಿ ವೈಜಯಂತಿ ಫಿಲಮ್ ಓಡ್ತಾ ಇತ್ತು. ನಮ್ಮಲ್ಲೆಲ್ಲಾ ಮಹಾರಸಿಕನಾದ ಡೀಜಿ- ಹೇಳೋನು: ಈವತ್ತು ಏನೇ ಆಗ್ಲಿ…ನಾನು ವೈಜಯಂತಿ ಸೊಂಟ ನೋಡ್ಲೇ ಬೇಕು…! ಟಿಕೆಟ್ ಕೊಡಿಸೋದಾದ್ರೆ ನಾವೂ ಬರ್ತೀವಿ ನೋಡಪ್ಪ ಅನ್ನೋನು ಶ್ರೀ-. ಬರ್ತೀಯೇನೋ ಈ-? ಎಂದರೆ ನಮ್ಮಲ್ಲಿ ತುಂಬ ಸ್ಟೂಡಿಯಸ್ ವಿದ್ಯಾರ್ಥಿಯಾಗಿದ್ದ ಈ-, ಸಿನಿಮಾ ಏನಿದ್ರೂ ಭಾನುವಾರ ಮಾತ್ರ..ಅನ್ನೋನು. ಏನ್ರೀ ಅದು ಮಾತು..ಅಂತ ಬೀಎಂಎಸ್ ನಗ್ತಾ ಕೇಳೋರು.ಅದೇಸಾರ್ ಡಾಯಿಂಗ್ ವಿಷಯ ಅಂತ ಡೀಜಿ ಹಲ್ಲುಬಿಡೋನು. ವಾಸ್ತವವಾಗಿ ಅವನು ಹಲ್ಲು ಬಿಡಬೇಕಾದ ಅಗತ್ಯವೇ ಇರಲಿಲ್ಲ. ಅವನವು ಸ್ವಲ್ಪ ಉಬ್ಬು ಹಲ್ಲಾದುದರಿಂದ ಅವನು ಸದಾ ಹಸನ್ಮುಖಿಯಾಗಿಯೇ ಕಾಣೋನು. ಈ ಡೀಜಿ- ತನ್ನ ಸೋದರ ಸೊಸೆಯ ಸೌಂದರ್ಯಕ್ಕೆ ಮರುಳಾಗಿ ಸದಾ ಅವಳದ್ದೇ ಜಪ ತಪ ಮಾಡುತ್ತಿದ್ದವನು. ಡೀಜಿ- ಹಾಗೆಯೇ ನನ್ನ ಉಳಿದ ಗೆಳೆಯರೂ ಆ ಕಾಲದಲ್ಲಿ ಒಂದಲ್ಲ ಒಂದು ಹುಡುಗಿಯ ಮೋಹಪಾಶಕ್ಕೆ ಸಿಕ್ಕಿ ವಿಲಿವಿಲಿ ಒದ್ದಾಡುತ್ತಿದ್ದವರೇ. ಇಂಥ ಸಂದರ್ಭದಲ್ಲಿ ಖಾಲಿಯಿದ್ದ ನನ್ನ ಕಣ್ಣಿಗೆ ಬಿದ್ದವಳು ಆ ಮಲೆಯಾಳಿ ಕುಟ್ಟಿ. ರಜಾಕ್ಕೆ ಅಂತ ಭಾವನ ಮನೆಗೆ ಬಂದವಳು. ನಮ್ಮ ಮನೆಯ ಪಕ್ಕದ ಮನೆಯಲ್ಲೇ ಅವಳ ಭಾವ ವಾಸವಾಗಿದ್ದರು.ಅವಳಿನ್ನೂ ಆಗಷ್ಟೇ ಎಸ್.ಎಸ್.ಎಲ್.ಸಿ ಮುಗಿಸಿದ್ದವಳು. ಮಹಾ ಚೂಟಿ ಹುಡುಗಿ. ಸದಾ ಪ್ರೇಮ ಗೀತೆಗಳನ್ನು ಗುನುಗುತ್ತಾ ಮುಸುರೆ ತಿಕ್ಕುತ್ತಿದ್ದವಳು! ಈ ಪ್ರೇಮಗೀತೆಗಳು ಬಲೇ ವಿಚಿತ್ರಾರೀ. ಅವನ್ನು ಹಾಡಿದ್ದು ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ. ಅಭಿನಯಿಸಿದ್ದು ರಾಜಕುಮಾರ್ ಮತ್ತು ಜಯಂತಿ. ಆ ಹಾಡನ್ನು ಪ್ರಾಕ್ಟಿಕಲ್ಲಾಗಿ ಪ್ರಯೋಗಿಸುತ್ತಿರುವವರು ಜಂಬೂದ್ವೀಪದ ಲಕ್ಷಾಂತರ ಮಂದಿ ತರುಣ ತರುಣಿಯರು! ಆ ಮಲೆಯಾಳಿ ಚೆಲುವೆ ಹಾಡುತ್ತಿರುವ ಪ್ರೇಮಗೀತೆಗಳು ನನ್ನನ್ನು ಕುರಿತೇ ಎಂಬ ತೀವ್ರ ಗುಮಾನಿ ನನಗೆ! ಅವಳು ಆಗಾಗ ನಮ್ಮ ಮನೆಯ ಕಿಟಕಿಯಲ್ಲಿ ಇಣುಕಿ ಮುಗುಳ್ ನಗುವುದು, ಹುಬ್ಬು ಹಾರಿಸುವುದು ಮಾಡಿದಾಗ ಅದು ನಿಜವಿದ್ದರೂ ಇರಬಹುದು ಅಂದುಕೊಂಡೆ. ಒಂದು ದಿನ ನಾನು ರೂಮಲ್ಲಿ ಕೂತು ಏನೋ ಓದುತ್ತಾ ಇದ್ದೇನೆ. ಒಮ್ಮೆಗೇ ತುಂತುರು ತುಂತುರು ಮಳೆ. ಎಲಾ ಇದರಾ.. ಮನೆಯ ಒಳಗೆ ಹೇಗೆ ಬಂತು ಈ ಮಳೆ ಅಂದರೆ…ಎರಡೇ ನಿಮಿಷದಲ್ಲಿ ಮತ್ತೆ ಮಳೆ. ಗಕ್ಕನೆ ಕಿಟಕಿಕಡೆ ತಿರುಗಿ ನೋಡಿದೆ! ಕಾಲು ಗೆಜ್ಜೆ ಘಿಲಿಘಿಲಿಸುತ್ತಾ ಕುಟ್ಟಿ ಓಡಿದ್ದು ನನ್ನ ಅರಿವಿಗೆ ಬಂತು. ಹೀಗೆ ನಮ್ಮ ತುಂತುರು ಪ್ರೇಮ ಪ್ರಾರಂಭವಾಯಿತು. ಕಪ್ಪಗಿದ್ದರು ತುಂಬ ಚೆಲುವೆಯಾಗಿದ್ದ ಹುಡುಗಿ. ಒಂದು ರಾತ್ರಿ ಕಿಟಕಿಯ ಬಳಿ ಏನೋ ಸದ್ದಾದಂತೆ ಅನ್ನಿಸಿ ಕೋಣೆಯ ಕಿಟಕಿ ತೆರೆದು ನೋಡಿದರೆ ಕುಟ್ಟಿ ನಗುತ್ತಾ ನಿಂತಿದ್ದಾಳೆ. ತಕ್ಷಣ ನನ್ನ ಕೈಗೆ ಒಂದು ಚೀಟಿ ತುರುಕಿ ಮಿಂಚಿನಂತೆ ಮಾಯವಾಗಿಬಿಟ್ಟಳು ಆ ಹುಡುಗಿ. ಚೀಟಿ ಬಿಡಿಸಿ ನೋಡುತ್ತೇನೆ. ಮಲೆಯಾಳಿ ಲಿಪಿಯಲ್ಲಿ ಏನೋ ಒಕ್ಕಣಿಕೆ. ಅದು ನನಗೆ ಓದಲಿಕ್ಕೆ ಬರದು. ಏನು ಬರೆದಿರಬಹುದು ಹುಡುಗಿ ಆ ಪತ್ರದಲ್ಲಿ. ಪ್ರೀತಿಯ ಸಂಗತಿಯೇ? ಮದುವೆಯ ಪ್ರಸ್ತಾಪವೇ? ಅಥವಾ ಅವಳ ಹಾಡುತ್ತಿದ್ದ ಯಾವುದಾದರೂ ಮಲೆಯಾಳೀ ಪ್ರೇಮಗೀತೆಯ ಸಾಲೇ? ಮತ್ತೆ ಆ ಹುಡುಗಿ ಕಾಣಿಸಲಿಲ್ಲ. ಏನಜ್ಜೀ… ಆ ಹುಡುಗಿ ಕಾಣ್ತಾ ಇಲ್ಲ? ಎಂದು ನಾನು ನನಗೆ ಅಡುಗೆ ಮಾಡಿ ಹಾಕಲಿಕ್ಕೆ ಬಂದಿದ್ದ ಸೀತಜ್ಜಿಯನ್ನು ಕೇಳಿದೆ. ಅಜ್ಜಿ ಕೋಪದಿಂದ ನನ್ನನು ಬಿರಿ ಬಿರಿ ನೋಡಿ…ಸದ್ಯ ಊರಿಗೆ ಹೋಯ್ತಂತೆ ಚೆಲ್ಲುಮುಂಡೇದು…ಎಂದರು. ಓದಲಿಕ್ಕೆ ಬರದ ಅರ್ಥಗರ್ಭಿತ ಮಲೆಯಾಳೀ ಪಂಕ್ತಿಯಷ್ಟೇ ನನ್ನ ಪಾಲಿಗೆ ಉಳಿದಿದ್ದು.ಅದನ್ನು ನನ್ನ ಟ್ರಂಕಿನ ಅಡಿಯಲ್ಲಿ ಒಂದು ಕೆಂಪು ಬಣ್ಣದ ಕವರಿನಲ್ಲಿ ಹಾಕಿ ಜೋಪಾನವಾಗಿ ಮುಚ್ಚಿಟ್ಟೆ.ಹೆಚ್ಚು ಕಮ್ಮಿ ಅದೇ ಸರಿಸುಮಾರಲ್ಲಿ ಹೊಸದುರ್ಗದಲ್ಲಿ ನನ್ನ ಚಿಕ್ಕಜ್ಜಿಯ ಮಗಳ ಮದುವೆ. ನಾನು ಮತ್ತು ಸೀತಜ್ಜಿ ಹೊಸದುರ್ಗಕ್ಕೆ ಹೋದೆವು.ನಾವು ಹೊಸದುರ್ಗ ಸೇರಿದಾಗ ಸೂರ್ಯ ಕೊಡಗಿನ ಕಿತ್ತಲೆಯ ಹಾಗೆ ಕಾಣುತಾ ಇದ್ದ. ಇಡೀ ಹೊಸದುರ್ಗದ ಕಲ್ಗುಡ್ಡ ಹೊಂಬಣ್ಣದ ಓಕಳಿಯಲ್ಲಿ ತೊಯ್ದುಹೋಗಿತ್ತು. ಅಷ್ಟು ಚೆಲುವಾದ ಪಾರದರ್ಶಕ ಕಿತ್ತಲೆಸಂಜೆಯನ್ನು ಮತ್ತೆ ನಾನು ನೋಡಲೇ ಇಲ್ಲ! ನೇರ ನಾವು ಛತ್ರದ ಬಳಿಗೇ ಹೋದೆವು. ಬೀಗರು ರಾಮಗಿರಿಯಿಂದ ಬರಬೇಕಾಗಿತ್ತು. ಅವರನ್ನು ಸ್ವಾಗತಿಸುವ ಗಡಿಬಿಡಿಯಲ್ಲಿ ಹೆಣ್ಣಿನ ಕಡೆಯವರಿದ್ದರು. ನಾನೂ ಈಗ ಹೆಣ್ಣಿನ ಕಡೆಯವನೇ ಆದುದರಿಂದ ಬೇಗ ಬೇಗ ಮುಖ ಗಲಬರಿಸಿಕೊಂಡು, ಇಸ್ತ್ರಿ ಮಾಡಿದ ಬಟ್ಟೆ ಧರಿಸಿ ಬೀಗರನ್ನು ಸ್ವಾಗತಿಸಲಿಕ್ಕೆ ಸಿದ್ಧನಾದೆ. ಹದಿಮೂರು ಎಂಟು ಸಾವಿರದೊಂಬತ್ತನೂರರವತ್ತುನಾಲ್ಕರ ಆ ಸಂಜೆಯನ್ನು ನಾನು ಮರೆಯುವಂತೆಯೇ ಇಲ್ಲ. ಕಾರಣ ಅವತ್ತೇ ನಾನು ನನ್ನ ಜೀವವನ್ನೇ ಹಿಡಿದು ಅಲ್ಲಾಡಿಸಿದ ಆ ಹುಡುಗಿಯನ್ನು ನೋಡಿದ್ದು! ಬೀಗರು ಬಂದರು..! ಬೀಗರು ಬಂದರು! ಎಂದು ಯಾರೋ ಕೂಗಿದರು. ನಾವು ವಾಲಗ ಸಮೇತ ಛತ್ರದ ತಿರುವಿಗೆ ಧಾವಿಸಿದೆವು. ಮುಂದೆ ಬೊಗಸೆಯಲ್ಲಿ ಒಂದು ಕಾಯಿ ಹಿಡಿದುಕೊಂಡ ವರ-ಹುಡುಗಿಗೆ ಒಪ್ಪಿಸಲು ತನ್ನ ಹೃದಯವನ್ನೇ ಬೊಗಸೆಯಲ್ಲಿ ಹಿಡಿದುಕೊಂಡು ಬರುತ್ತಿರುವ ಪರಮಮುಗ್ಧನಂತೆ! ಕಪ್ಪಗಿದ್ದರೂ ಸ್ಫುರದ್ರೂಪಿಯಾದ ತರುಣ. ವರನ ಪಕ್ಕದಲ್ಲಿ ತೆಳ್ಳಗೆ ಬೆಳ್ಳಗೆ ಮಿಂಚುತ್ತಿದ್ದ ಆ ಹುಡುಗಿ ಯಾವಳು ಮಾರಾಯರೇ?! ಕೈಯಲ್ಲಿ ಕಳಸ ಕನ್ನಡಿ ಹಿಡಿದವಳು. ಯಾರು ಆ ಹುಡುಗಿ ಎಂದು ವಿಚಾರಿಸಿದೆ. ಅವಳು ವರನ ತಂಗಿ ಎಂದು ತಿಳಿಯಿತು. ಆ ಹುಡುಗಿ ಗುಲಾಬಿ ಹೂ ಮೈ ತುಂಬ ಅರಳಿದ್ದ ಬಿಳಿಯ ಒಡಲಿನ ಲಂಗ ತೊಟ್ಟಿದ್ದಳು. ಅದೇ ಡಿಜೈನಿನ ದಾವಣಿ ಅವಳ ಎದೆಗಳನ್ನು ತಬ್ಬಿ ಹಿಡಿದು ಆಗಷ್ಟೆ ಹೊರಹೊಮ್ಮುತ್ತಿದ್ದ ಅವಳ ಹೆಣ್ತನವನ್ನು ಅಸ್ಪಷ್ಟವಾಗಿ ದರ್ಶನ ಮಾಡಿಸುತ್ತಾ ಇತ್ತು. ಎರಡು ಜಡೆಯ ಆ ಹುಡುಗಿ ಮಹಾ ವೈಯಾರಗಾತಿಯಾಗಿದ್ದಳು. ಅವಳ ಮಾರ್ಜಾಲನಡೆಯ ಚೆಲುವು ನನ್ನನ್ನು ಅಲ್ಲೋಲಕಲ್ಲೋಲ ಮಾಡಿತು.  ಹೆಣ್ಣಿನ ಕಡೆಯ ಹುಡುಗರು ಮಾತಾಡಿಕೊಂಡೆವು: ಎಷ್ಟು ಚೆನಾಗಿದ್ದಾಳಯ್ಯಾ ಆ ಹುಡುಗಿ! ನಾನು ಭೀಮಜ್ಜಿಯ ಬಳಿಗೆ ಹೋಗಿ, ದೊಡ್ಡಜ್ಜೀ..ಆ ಕಳಸಗಿತ್ತಿಯನ್ನ ನೋಡಿದೆಯ ನೀನು…ಹೇಗಿದ್ದಾಳೆ ಆ ಹುಡುಗಿ? ಎಂದು ಕೇಳಿದೆ. ಭೀಮಜ್ಜಿ ಗುಮಾನಿಯಿಂದ ನನ್ನನ್ನು ನೋಡುತ್ತಾ-ಎಲ್ಲಾ ಹುಡುಗಿಯರಂತೇ ಒಂದು ಮೂಗು, ಎರಡು ಕಣ್ಣು, ಒಂದು ಬಾಯಿ…ನಾನು ಅವಳ ವಯಸ್ಸಿನವಳಾಗಿದ್ದಾಗ ಅವಳ ತಾತನ ಹಾಗೆ ಇದ್ದೆ..! ಎಂದು ಮೂತಿ ತಿರುವಿದರು. ಜನ್ಮೇಪಿ ನಾನು ಮದುವೆ ಮನೆಯಲ್ಲಿ ಊಟ ಗೀಟ ಬಡಿಸಿದವನಲ್ಲ! ಆವತ್ತು ಮಾತ್ರ ಚಂ-, ರಾ-, ಪ್ರಾ- ಜತೆ ನಾನು ಬಡಿಸಲಿಕ್ಕೆ ನಿಂತೆ. ಬೀಗರೆಲ್ಲಾ ಮೊದಲ ಪಂಕ್ತಿಯಲ್ಲಿ ಕೂತಿದ್ದರು. ವಿಶೇಷ ಭಕ್ಷ್ಯ ಮೈಸೂರುಪಾಕು ನಾನು ಬಡಿಸಲಿಕ್ಕೆ ಎತ್ತಿಕೊಂಡೆ. ಆ ಹುಡುಗಿ ಮೊದಲ ಪಂಕ್ತಿಯಲ್ಲೇ ತನ್ನ ಗೆಳತಿಯರ ಜತೆಯಲ್ಲಿ ಕೂತಿದ್ದಳು. ಅವಳ ಎಲೆಯ ಮುಂದೆ ನಿಂತು “ಬಿಸಿಬಿಸಿ ಮೈಸೂರುಪಾಕು…ತಗೊಳ್ಳಿ..ಸಂಕೋಚ ಮಾಡಿಕೋ ಬೇಡಿ” ಅಂತ ಉಪಚಾರ ಮಾಡಿ ಬಡಿಸಿದೆ. ಐದೇ ನಿಮಿಷ. ಮತ್ತೆ ನನ್ನ ಸವಾರಿ ಅದೇ ಪಂಕ್ತಿಗೆ. “ಬಿಸಿಬಿಸೀ ಮೈಸೂರು ಪಾಕ ..ಸಂಕೋಚ ಮಾಡಿಕೋ ಬೇಡಿ..ತಗೊಳ್ಳಿ..”-ಮತ್ತೆ ಎರಡು ಮೈಸೂರು ಪಾಕ! ಅಡ್ಡ ಚಾಚಿದ ಹುಡುಗಿಯ ಕೈ ಮೇಲೇ ಮೈಸೂರು ಪಾಕ ಜಾರಿಸಿದೆ! ಬೇಡಾರೀ..ನಂಗೆ ಸೇರೋಲ್ಲ..ಅಂದಳು ಹುಡುಗಿ. ನಾನು ಬಿಡಬೇಕಲ್ಲ! ಮತ್ತೆ ಮೂರನೇ ಬಾರಿ ಅದೇ ಪಂಕ್ತಿಗೆ. ಮತ್ತೆ ಯಥಾ ಪ್ರಕಾರ ಅದೇ ಸವಕಲು ಡೈಲಾಗು. ಹುಡುಗಿಗೆ ರೇಗಿ ಹೋಯಿತು. ಏನ್ರೀ..ನಿಮಗೆ ಕಿವಿ ಕೇಳಿಸೋಲ್ಲವಾ…ಬೇಡ ಬೇಡಾ ಅಂದ್ರೂ ಹಾಕ್ತೀರಲ್ಲಾ..? ನಾನು ಪೆಚ್ಚಾಗಿ ಹಲ್ಲು ಗಿಂಜಿ…”ಸಂಕೋಚ ಮಾಡ್ಕೋ ಬೇಡಿ…”-ಎಂದು ತೊದಲಿದೆ. ಮದುವೆ ಮನೆಯಲ್ಲಿ ನಾನು ವಧೂವರರನ್ನು ನೋಡಿದ್ದಕ್ಕಿಂತ ಹೆಚ್ಚು ಕಳಸಗಿತ್ತಿಯನ್ನೇ ನೋಡಿದೆ ಅನ್ನಿಸುತ್ತೆ. ನಾನೂ ಆಗ ನೋಡಲಿಕ್ಕೆ ಚೆನ್ನಾಗಿಯೇ ಇದ್ದೆ! ಬೀಗರ ಕಡೆಯವರೂ ನನ್ನನ್ನು ಆಸಕ್ತಿಯಿಂದ ನೋಡಲಿಕ್ಕೆ ಪ್ರಾರಂಭಿಸಿದ್ದರು. ಮದುವೆ ಆದಮೇಲೆ, ನಮ್ಮ ಭೀಮಜ್ಜಿ, ವರನಿಗೆ-“ಏನಪ್ಪಾ ಸತ್ಯಣ್ಣಾ…ನಿನ್ನ ತಂಗೀನ ನನ್ನ ಮೊಮ್ಮಗನಿಗೆ ಕೊಡ್ತೀರಾ…?”ಎಂದು ಕೇಳಿಯೇ ಬಿಡೋದೇ?! ದೇವರ ಸಂಕಲ್ಪ ಇದ್ದರೆ ಯಾಕೆ ಆಗಬಾರದು ಎಂದರು ಸತ್ಯಣ್ಣ! ಆಗ ಆ ಹುಡುಗಿಗೆ ಕೇವಲ ಹದಿನಾರು ವಯಸ್ಸು ಅಷ್ಟೆ! ಅವಳು ಎಸ್.ಎಸ್.ಎಲ್.ಸಿ ಓದು ಮುಗಿಸಿದ ಮೇಲೆ ರಾಮಗಿರಿಯಿಂದ ನಮ್ಮ ಊರಿಗೆ ಒಂದು ಪತ್ರ ಬಂತು. ನಮ್ಮ ಭಾವೀ ಮಾವ ಹುಡುಗಿಯ ಜಾತಕ ಕಳಿಸಿ, ನೋಡಿ, ಜಾತಕ ಅನುಕೂಲವಾದರೆ ನಮ್ಮ ಹುಡುಗಿಯನ್ನ ನಿಮ್ಮ ಮೊಮ್ಮಗನಿಗೆ ಕೊಡುತ್ತೇವೆ ಎಂದು ಬರೆದಿದ್ದರು! ಜಾತಕ ತೋರಿಸುವುದಕ್ಕೆ ಎಲ್ಲಾ ಚಿತ್ರದುರ್ಗಕ್ಕೆ ಬಂದರು. ಆಗ ನಾನು ಮಾಡೆಲ್ ಕಾರ್ಪೆಂಟರಿ ಅಂಡ್ ಸ್ಮಿತಿ ಸೆಂಟ್ರ್ ನಲ್ಲಿ ಕೆಲಸ ಮಾಡುತಾ ಇದ್ದೆ. ನನ್ನ ಮತ್ತು ಹುಡುಗಿಯ ಜಾತಕ ಹಿಡಿದುಕೊಂಡು ನನ್ನ ಚಿಕ್ಕ ಅಜ್ಜ ಮತ್ತು ನಮ್ಮ ಭಾವೀ ಮಾವ ಪುರೋಹಿತರ ಹತ್ತಿರ ಹೋದರು. ಅರ್ಧಗಂಟೆಯ ಮೇಲೆ ಬಂದಾಗ ನಮ್ಮ ಚಿಕ್ಕ ಅಜ್ಜಂದಿರ ಮುಖ ಸಪ್ಪಗಾಗಿತ್ತು. ಜಾತಕ ಕೂಡಿ ಬರಲಿಲ್ಲ ಮೂರ್ತಿ ಅನ್ನೋದೇ ಅವರು. ಹೌಹಾರಿ ಹೋದೆ ನಾನು! ಆಮೇಲೆ ನಮ್ಮ ಮಾವ ಮತ್ತು ಚಿಕ್ಕ ಅಜ್ಜ ಗಟ್ಟಿಯಾಗಿ ನಗಲಿಕ್ಕೆ ಶುರು ಮಾಡಿದರು. ತಮಾಷೆಗೆ ಹೇಳಿದೆನಪ್ಪಾ….ಮೂವತ್ತು ಗುಣ ಕೂಡಿ ಬರತ್ತೆ…ಇನ್ನೇನು ವಾಲಗ ಊದಿಸೋದೇ! ಅಂದರು ನಮ್ಮ ಚಿಕ್ಕ ಅಜ್ಜ. ನಮ್ಮ ಮಾವ ಗಟ್ಟಿಯಾಗಿ ಇನ್ನೂ ನಗುತ್ತಲೇ ಇದ್ದರು. ಅವರ ನಗುವಿನ ಮುಗ್ಧತೆಗೆ ನಾನು ಮರುಳಾಗಿಹೋದೆ! ಕೆಲವೇ ತಿಂಗಳಲ್ಲಿ ನನಗೆ ಮಲ್ಲಾಡಿಹಳ್ಳಿಯ ಹೈಸ್ಕೂಲಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಹುಡುಗಿ ನಮ್ಮ ಮನೆಗೆ ಇನ್ನೂ ಬಂದೇ ಇರಲಿಲ್ಲ.ನಮ್ಮ ಅಜ್ಜಿಯರು, ಅಮ್ಮ, ಎಲ್ಲಾ “ಹುಡುಗಿಯ ಕಾಲ್ಗುಣ ಭಾಳ ಒಳ್ಳೇದು” ಎಂದು ಮಾತಾಡಿಕೊಂಡರು! ನಿಶ್ಚಿತಾರ್ಥದ ಶಾಸ್ತ್ರ ಮುಗಿದ ಮೇಲೆ ನಾನು ವಾರಕ್ಕೊಮ್ಮೆ ರಾಮಗಿರಿಗೆ ಹೋಗಿ ಬರುತ್ತಾ ಇದ್ದೆ! ಆದರೆ ನಾಚಿಕೆಯ ಸ್ವಭಾವದ ಹುಡುಗಿ ನನ್ನ ಕಣ್ಣುತಪ್ಪಿಸಿ ಓಡಾಡುತ್ತಾ ಇದ್ದಳು! ಒಂದು ರಾತ್ರಿ ನಮ್ಮ ಭಾವಿ ಅತ್ತೆ ತಮ್ಮ ಮಕ್ಕಳನ್ನ ಕರೆದುಕೊಂಡು ಯಾರ ಮನೆಗೋ ಅರಿಸಿನ ಕುಂಕುಮಕ್ಕೆ ಹೋಗಿದ್ದರು. ಮನೆಯಲ್ಲಿ ಇದ್ದವರು ನಾನೂ ಮತ್ತು ನನ್ನ ಭಾವೀ ವಧು ಇಬ್ಬರೇ! ನಾನು ಮೆಲ್ಲಗೆ ಅಡುಗೆ ಮನೆಗೆ ನುಗ್ಗಿ ಕುಡಿಯೋಕ್ಕೆ ನೀರು ಬೇಕಾಗಿತ್ತು ಎಂದೆ. ನನ್ನ ದರ್ಶನವಾದದ್ದೇ ನನ್ನ ಭಾವೀವಧು ಭಯಭೀತಳಾಗಿ ಗಡಗಡ ನಡುಗತೊಡಗಿದಳು. ಅವಳು ಕೈಯಲ್ಲಿ ನೀರಿನ ಲೋಟ ಹಿಡಿದಿದ್ದಳೋ ದೇವರ ಗಂಟೆ ಹಿಡಿದಿದ್ದಳೋ ಅನ್ನುವಂತೆ ಕೈ ನಡುಗುತ್ತಾ, ಲೋಟದ ನೀರು ಅತ್ತ ಇತ್ತ ಚೆಲ್ಲಾಡುತ್ತಾ ಇತ್ತು. ನಾನು ಲೋಟದ ಬದಲು ಈಗ ಹುಡುಗಿಯ ಕೈಯನ್ನೇ ಹಿಡಿದೆ. ಲೋಟ ಕೆಳಗೆ ಬಿದ್ದು ನೀರು ಚೆಲ್ಲಾಪಿಲ್ಲಿ. ನಾನು ಗಟ್ಟಿಯಾಗಿ, ಬೆದರಿದ ಹೆಣ್ಣು ಹರಿಣಿ ನುಸುಳದ ಹಾಗೆ ತೆಕ್ಕೆಯಲ್ಲಿ ತಬ್ಬಿ ಹಿಡಿದೆ. ಗೋಡೆಗೆ ಓರೆ ಮಾಡಿದ ಮುಖಕ್ಕೆ ಮುಖ ಹಚ್ಚಿ ತುಟಿಗೆ ತುಟಿ ಸೇರಿಸಿದಾಗ ಹುಡುಗಿ ಥಂಡಾ ಹೊಡೆದು ಹೋಗಿದ್ದಳು. ಊರಿಗೆ ಹಿಂದಿರುಗಿದ ಮೇಲೆ ಒಂದು ಪ್ರಶ್ನೆ ನನ್ನನ್ನ ಕಾಡುತಾ ಇತ್ತು. ನಾನು ತಬ್ಬಿ ಹಿಡಿದಾಗ ಸಿಕ್ಕದ್ದು ನನ್ನನ್ನು ಮದುವೆಯಾಗಬೇಕಾದ ಹುಡುಗಿಯೋ, ಬಸ್ಸ್ಟಾಪಿನಲ್ಲಿ ನಾವು ಕದ್ದು ನೊಡುತ್ತಿದ್ದ ಚಂದನದ ಬೊಂಬೆಯೋ? ಅಥವಾ ಪಕ್ಕದ ಮನೆಯ ಮಲೆಯಾಳಿಕುಟ್ಟಿಯೋ? ಇಲ್ಲಾ ಮಲ್ಲಿಗೆ ಹೂಗೆ ಜಿಗಿದಾಡುವ ಹೊಸಬಾವಿಯ ಹೆಂಡತಿಯೋ? ರಾತ್ರಿ ಬಹಳ ಹೊತ್ತು ನಿದ್ದೆ ಬರಲಿಲ್ಲ. ಯಾಕೋ ಮಲೆಯಾಳಿ ಕುಟ್ಟಿಯ ನಿಗೂಢ ಕರನ್ಯಾಸ ನೆನಪಾಯಿತು. ಢವಗುಟ್ಟುವ ಎದೆಯೊಂದಿಗೆ ಕೋಣೆಗೆ ಧಾವಿಸಿ ನನ್ನ ಟ್ರಂಕನ್ನು ಗಬರಾಡಿ ನೋಡುತ್ತೇನೆ-ನಾನು ಕವರಲ್ಲಿ ಮುಚ್ಚಿಟ್ಟಿದ್ದ ಕುಟ್ಟಿಯ ಒಸಗೆ ಪತ್ರ ಮಾಯವಾಗಿ ಹೋಗಿದೆ!  ಅಲ್ಲಿ ಇದ್ದದ್ದು ಕೆಂಪು ಬಣ್ಣದ ಖಾಲಿ ಕವರು ಮಾತ್ರ. ]]>

‍ಲೇಖಕರು avadhi

June 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. rAjashEkhara mALUru

    I have only one doubt…. pampa hechchu rasikano… athava HSV hechchu rasikaro…? HSV… hesaru heLO haage… Hechchu Savi.

    ಪ್ರತಿಕ್ರಿಯೆ
  2. Poornapragna

    ತುಂಬಾ ಚೆನ್ನಾಗಿದೆ. ನೆನಪಿನ ದೋಣಿಯಲ್ಲಿ ತೇಲಿ ಹೋದ ಹಾಗೆ ಆಯಿತು! ಎಲ್ಲರಲ್ಲೂ ಈ ರೀತಿಯ ಒಂದು nostalgic memories ಇರುತ್ತೆ. ಮೇಷ್ಟ್ರ ಬರಹ ಓದ್ತಾ ಓದ್ತಾ ನನ್ನ 30 ವರ್ಷದ ಹಿಂದಿನ ನೆನಪುಗಳನ್ನು ಕೆದಕೋ ಹಾಗೆ ಮಾಡಿತು. ಧನ್ಯವಾದಗಳು.

    ಪ್ರತಿಕ್ರಿಯೆ
  3. ಡಿ.ವಿ.ಶ್ರೀಧರ

    ಎಲ್ಲರ ಅನುಭವಲೊಕವನ್ನು ತಮ್ಮ ಅನುಭವದೊಂದಿಗೆ ಅನಾವರಣಗೊಳಿಸಿದ್ದಾರೆ.ನಾನು ನನ್ನಗೆಳೆಯರು ಚಿಂತಾಮಣಿಯ ರಾಮಮಂದಿರದ ಹಾಸ್ಟೆಲ್ ನಲ್ಲಿ ಕುಮಾರವ್ಯಾಸ ಭಾರತ ಓದಲು ಬರುತಿದ್ದವರ ಮೊಮ್ಮಗಳೂ ನಮಗೆ ನೆನಪಾಯ್ತು. ಅದು ರಾಮಮಂದಿರ ಭಕ್ತರಿಗೆ ಕೊರತೆಯೆ?

    ಪ್ರತಿಕ್ರಿಯೆ
  4. shalu

    ಈ ಭಾಗ ಓದುವಾಗ ತೀರಿಹೋದ ನಮ್ಮ ಅತ್ತೆಯವರ ನೆನಪಾಗಿ ಕಣ್ಣಂಚು ಒದ್ದೆಯಾಯಿತು.

    ಪ್ರತಿಕ್ರಿಯೆ
  5. ranganna k

    mestre, nimma lekhana thumbaa chennaagide.
    naalage neeru neeraagi hoythu devru…..
    konege nimma hendthi hesru helale illa nodi..

    ಪ್ರತಿಕ್ರಿಯೆ
  6. ನಾಡಿಗ್, ಕದರನಹಳ್ಳಿ

    ನಾವೂ ಕೂಡಾ ಯೌವನದಲ್ಲಿ ನಿಮ್ಮ ಹಾಗೇ ಮಾಡ್ತಿದ್ವಿ… ಆದ್ರೆ ಹೇಳಿಕೊಳ್ಳೋಕೆ ನಾಚಿಕೊಳ್ತೀವಿ… ಲೇಖನ ತುಂಬಾ ಸೊಗಸಾಗಿದೆ. ಆದ್ರೆ ನಿಮ್ಮನ್ನ ನೋಡಿದ್ರೆ ನೀವೂ ಹಂಗೆಲ್ಲಾ ಮಾಡಿದ್ರಾ… ಅಂತಾ ಆಶ್ಚರ್ಯವಾಗುತ್ತೆ.. ಹಾಗೇ ನಗು ಕೂಡಾ ಬರುತ್ತೆ… ಎಷ್ಟೇ ಆಗ್ಲಿ ಅದು `ಹುಚ್ಚು ಖೋಡಿ ಮನಸು…’

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: