ಎಚ್ಚೆಸ್ವಿ ಬರೆಯುತ್ತ್ತಾರೆ: ಸೇಡಂ ಯಾನ…

ಎಚ್.ಎಸ್.ವೆಂಕಟೇಶಮೂರ್ತಿ

ಮಿತ್ರ ಮಹಿಪಾಲರೆಡ್ಡಿ ಮುನ್ನೂರ್, ಸೇಡಂಗೆ ಬರುವಂತೆ ಮತ್ತೆ ಮತ್ತೆ ಕರೆಯುತ್ತಾ ಇದ್ದರು. ಪ್ರಯಾಣ ಅಲಸಿಗನಾದ ನಾನು ಏನೇನೋ ಕಾರಣ ಒಡ್ಡಿ ಅವರ ಆಹ್ವಾನವನ್ನು ನಯವಾಗಿ ನಿವಾರಿಸುತ್ತಾ ಇದ್ದೆ. ಈ ಬಾರಿ ಅವರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಈ ವರ್ಷ ನಿಮ್ಮ ಅನಾತ್ಮಕಥನಕ್ಕೆ ಅಮ್ಮಪ್ರಶಸ್ತಿ ಕೊಟ್ಟಿದೀವ್ರಿ. ಅದನ್ನು ಸ್ವೀಕರಿಸಲು ನೀವು ಸೇಡಮ್ ಗೆ ಬರಲಿಕ್ಕೇ ಬೇಕು. ನಿರಾಶೆ ಮಾಡೋ ಹಂಗೇ ಇಲ್ಲ! ಎಂದರು. ಜೊತೆಗೆ ಬೇರೆ ಬೇರೆ ಆಮಿಶಗಳನ್ನೂ ತೋರಿಸಿದರು. ಕಾರ್ಯಕ್ರಮಕ್ಕೆ ನಾಗತಿಹಳ್ಳಿ ಬರ್ತಾ ಇದ್ದಾರೆ, ಜಯಂತಕಾಯ್ಕಿಣಿ ಬರ್ತಾ ಇದ್ದಾರೆ.ಜಿ.ಎನ್.ಮೋಹನ್ ಬರ್ತಾ ಇದ್ದಾರೆ. ಸುಬ್ಬುಹೊಲೆಯಾರ್ ಬರ್ತಾ ಇದ್ದಾರೆ.ಶ್ರೀನಿವಾಸಗೌಡ ಬರ್ತಾ ಇದ್ದಾರೆ. ಅಕ್ಷತ ಬರ್ತಾ ಇದ್ದಾರೆ. ಕಾರ್ಯಕ್ರಮ ಮುಗಿದ ಮೇಲೆ ವನಭೋಜನ ಇರ್ತದೆ. ನಮ್ಮ ಕಡೆ ರೊಟ್ಟಿ ಊಟ ಸರ್…ಕಡಕ್ ರೊಟ್ಟೀನೂ ಇರ್ತದೆ..!ಬೆಳಿಗ್ಗೆ ನಮ್ಮ ಮನೇಲೇ ಮಂಡಕ್ಕಿ ತಿಂಡಿ ಮಾಡಿಸ್ತೀನಿ ಸರ್….ಮಿರ್ಚಿ ಮಾಡೋದರಲ್ಲಿ ಸ್ಪೆಷಲಿಸ್ಟು ಸರ್ ನಮ್ಮ ಮನೆಯೋರು…..ಇತ್ಯಾದಿತ್ಯಾದಿತ್ಯಾದಿ. ಈ ವರ್ಷ ಬೆಂಗಳೂರಲ್ಲಿ ಯಾಕೋ ಚಳಿ ವಿಪರೀತ ಅನ್ನಿಸ್ತಾ ಇದೆ. ನಾನು ನನ್ನ ಉಲ್ಲನ್ ಎದೆಗವಚ, ಕಿಷ್ಕಿಂಧಾಶಿರಸ್ತ್ರಾಣ ಮೊದಲಾದವುಗಳಿಂದ ಭೂಷಿತನಾಗಿ ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಬಂದಾಗ ಯಥಾ ಪ್ರಕಾರ ಒಂದು ಅನಾಥ ಭಾವ ನನ್ನನ್ನು ಸುತ್ತಿಕೊಳ್ಳಲಿಕ್ಕೆ ಶುರು ಮಾಡಿತು. ಅದ್ಯಾಕೋ ಕಾಣೆ…ರೈಲ್ವೇನಿಲ್ದಾಣಕ್ಕೆ ಬಂದಾಗಲೆಲ್ಲಾ ಇಂಥ ಏಕಾಂಗಿ ಅನಾಥತ್ವ ನನ್ನನ್ನು ಆಕ್ರಮಿಸುತ್ತೆ. ಬಸ್ ನಿಲ್ದಾಣದಲ್ಲಿ ಹಾಗಾಗುವುದಿಲ್ಲ.ಬಸ್ ನಿಲ್ದಾಣದಲ್ಲಿ ಸೇರಿರುವವರೆಲ್ಲಾ ನಮ್ಮ ಲೋಕದ ಪ್ರಾಣಿಗಳೇ ಅನ್ನಿಸುತ್ತೆ. ಆದರೆ ರೈಲ್ವೇ ನಿಲ್ದಾಣದಲ್ಲಿ ಕೂತವರು, ನಿಂತವರು, ಅಲೆದಾಡುತ್ತಿರುವವರು ಬೇರೆ ಬೇರೆ ಲೋಕಗಳಿಗೆ ಸೇರಿದ ಅನಿವಾಸಿಅನಾತ್ಮರು ಅನ್ನಿಸುತ್ತೆ. ಅವರ ಹಿಂದಿರಬಹುದಾದ ನಿಗೂಢ ಜಗತ್ತು ಮನಸ್ಸನ್ನು ತ್ರಸ್ತಗೊಳಿಸುತ್ತದೆ. ನನಗೆ ತಲೆಬುಡ ತಿಳಿಯದ ಯಾವುದೋ ಶಬ್ದ ಸ್ಫೋಟಗಳು ಅವರ ಮೆಲ್ಲಗೆ ಅಲುಗಾಡುವ ತುಟಿಬಿರುಕುಗಳಿಂದ ಹೊರ ತುಳುಕುತ್ತಾ ಅರಿಯದ ಮಾತು, ಅವರ ಕಥೆಯನ್ನು ಮತ್ತಷ್ಟು ನಿಗೂಢಗೊಲಿಸುತ್ತದೆ. ಗುಂಪು ಗುಂಪಾಗಿ ಕೂತಿರುವ ಖಾಸಗಿ ಲೋಕಗಳು , ಅವುಗಳ ಅಂತರ್ಸಂಬಂಧವನ್ನು ಊಹಿಸಲು ನನ್ನನ್ನು ಅನಾವಶ್ಯಕ ಒತ್ತಾಯಿಸುತ್ತಾ ನಾನಾ ಬಗೆಯ ಕಗ್ಗಂಟುಗಳು ನಿರ್ಮಾಣಗೊಳ್ಳುತ್ತವೆ. ಸಾಮಾನ್ಯವಾಗಿ ನನ್ನ ರೈಲ್ವೇಪ್ರಯಾಣಗಳೆಲ್ಲಾ ರಾತ್ರಿ ಹತ್ತು ಹನ್ನೊಂದರ ಮೇಲೇ ನಿಯೋಜಿತವಾಗುವುದರಿಂದ ಅರೆ ಎಚ್ಚರ ಅರೆ ಮಂಪರಲ್ಲಿ ಸುತ್ತಲ ಜಗತ್ತು ಒಂದು ಮಾಯಾವರಣವನ್ನು ಹೊದ್ದು ನನ್ನನ್ನು ವ್ಯಾಕುಲಗೊಳಿಸುತ್ತದೆ. ನಾನು ಅಪರಿಚಿತಲೋಕವೊಂದರ ಆಕಸ್ಮಿಕ ಯಾತ್ರಿಯಾಗಿಬಿಡುತ್ತೇನೆ. ಬಹಳ ಹೊತ್ತು ನಾನು ಆ ನಿಬಿಡ ಜೀವಸಂಮರ್ದದ ನಡುವೆ ಏಕಾಂಗಿಯಾಗಿ ಕಳೆದ ಮೇಲೆ ನನ್ನ ಸಹಪ್ರಯಾಣಿಕರಾದ ಸತೀಶ್ ಮತ್ತು ಶ್ರೀನಿವಾಸ ಗೌಡ ಬರುತ್ತಾರೆ. ಅರೇ..! ಅವರು ಸ್ವಲ್ಪ ಮುಂಚೆ ಬಂದಿದ್ದರೆ ನಾವು ನಮ್ಮ ಒಂದು ಸಣ್ಣ ಕೋಟರಿಯನ್ನು ನಿರ್ಮಿಸಿಕೊಂಡು ಅಲ್ಲೋಲಕಲ್ಲೋಲ ಕ್ಷುಬ್ಧಶರಧಿಯಲ್ಲೊಂದು ತೇಲ್ಮುಳುಗಿನ ತೆಪ್ಪಕಟ್ಟಿಕೊಂಡು ನಿಟ್ಟುಸಿರು ಬಿಡಬಹುದಿತ್ತಲ್ಲ! ಸದ್ಯ ಕೊನೆಗೂ ಪುಣ್ಯಾತ್ಮರು ಬಂದರಲ್ಲ…ನಡೆಯಿರಿ ಒಳಕ್ಕೆ…ಡಬ್ಬಿಯಲ್ಲಿ ಈ ರಾತ್ರಿಯ ನಮ್ಮ ಮಲಗುವ ಕೋಣೆಯನ್ನ ಆಕ್ರಮಿಸಿಕೊಳ್ಳೋಣ…ನಿಮ್ಮ ಬರ್ತ್ ಯಾವುದು…ಸ್ವಾಮೀ ಇದು ನನ್ನ ಬರ್ತು…ಏಳಿ ಮತ್ತೆ…ಓಹೋ..ಅವರಿಗೆ ಕನ್ನಡ ಬರುತ್ತಾ ಇಲ್ಲ…ಏ ಹಮಾರಾ ಬರ್ತ್ ಹೈ…ಹಮಾರಾ….ಒಂದು ಇರುಳಿನ ಈ ಆಸ್ತಿವಹಿವಾಟಿಗಾಗಿ ಎಷ್ಟೊಂದು ತೀವ್ರ ನೆಲೆಯ ಬರ್ತ್ರೈಟಿನ ಸ್ಥಾನಿಕ ಹೋರಾಟ….ನಮ್ಮದು ಸ್ವಾಮಿ ಈ ಬರ್ತು….ನಮ್ಮ ಸಾಮಾನು ಸರಂಜಾಮು ಹರಡಿ ನಾವು ನಮ್ಮ ನಮ್ಮ ಬರ್ತುಗಳನ್ನು ಆವರಿಸುತ್ತಾ ಇದ್ದೇವೆ! ರೈಲು ಹೊರಡಲಿಕ್ಕೆ ಇನ್ನೂ ಸಮಯವಿದೆ. ಪ್ರಯಾಣಿಕರು ತಮ್ಮ ತಮ್ಮ ಬರ್ತುಗಳ ಹುಡುಕಾಟದಲ್ಲಿ ಉದ್ವಿಗ್ನಮನರಾಗಿ ಅತ್ತಿತ್ತಾ ತಳ್ಳಿಕೊಂಡು ಓಡಾಡುತಾ ಇದ್ದಾರೆ. ತಮ್ಮ ಬರ್ತು ಸಿಕ್ಕವರು ತಮ್ಮ ಬಹುಕಾಲದ ನಂಟ ಜತೆಯಾದಂತೆ ಅದರ ಬೆನ್ನು ತಟ್ಟುತ್ತಾ, ತಮ್ಮ ತಮ್ಮ ಬರ್ತಿಗೆ ಅಂಟಿಕೊಂಡ ವಿಂಡೋ ಶೆಟ್ಟರ್ ಎಳೆದು ಮುಚ್ಚಿ ಮಾಡುತ್ತಾ , ತಮ್ಮ ಹಕ್ಕುದಾರಿಕೆಯನ್ನ ಸ್ಥಾಪಿಸುತ್ತಾ ಇದ್ದಾರೆ. ಸ್ವಾಮೀ…ಯಾಕೆ ಆ ಕಿಡಕಿ ಮುಚ್ಚುತಾ ಇದ್ದೀರಿ. ರೈಲಿಗೇ ವಿಶಿಷ್ಟವಾದ ಹಡಕಲು ವಾಸನೆ ಡಬ್ಬಿಯ ತುಂಬ ತುಂಬಿಕೊಂಡು ನಮಗೆ ಉಸುರು ಕಟ್ಟುತಾ ಇದೆ. ಫ್ಯಾನು ಆರಿಸ ಬೇಡಿ. ಹೋಗಲಿ ದರಿದ್ರ ಕಿಲುಬುವಾಸನೆ ಕಿಡಕಿಯಿಂದ ಹೊರಕ್ಕೆ…. ಇನ್ನೇನು ಗಾಡಿ ಸ್ಟೇಷನ್ ಬಿಡಬೇಕು. ಮೆಲ್ಲಗೆ ಅದು ಒಮ್ಮೆ ಹಿಂದಕ್ಕೆ ಜಗ್ಗಿ, ಮತ್ತೆ ಮುಂದಕ್ಕೆ ಉಗ್ಗಿ, ಉಕ್ಕಿನ ಕರ್ಕಶ ಉಜ್ಜು ದನಿಯೊಂದಿಗೆ ಚಲಿಸ ಹತ್ತುತ್ತದೆ. ಈಗ ಒಮ್ಮೆಗೇ ಟ್ರೈನಿನ ಹೊರಗೆ ಒಳಗೆ ಚಟುವಟಿಕೆ ದ್ವಿಗುಣಗೊಳ್ಳುತ್ತದೆ. ಹತ್ತಿದವರು ಇಳಿಯುತ್ತಾ, ಇಳಿದವರು ಹತ್ತುತ್ತಾ ವಿಚಿತ್ರ ಗಡಿಬಿಡಿ. ಯಾರೋ ಯಾರಿಗೋ ಕೈ ಆಡಿಸುತ್ತಾ ಬೀಳ್ಕೊಡುತ್ತಿದ್ದಾರೆ. ಈಗ ಸ್ವಲ್ಪ ನಿರಾಳ. ನಮ್ಮ ಡಬ್ಬಿಯ ಒಳಗೆ ಗಂಟುಮೂಟೆಗಳ ಜೊತೆಗೆ ತಾವೂ ಗಂಟುಮೂಟೆಗಳೊ ಎನ್ನುವಂತೆ ಮುದುರಿಕೊಂಡು ಕೂತಿರೋ ಹಿಂದೀ ಕುಟುಂಬವನ್ನ ಈಗ ನಾನು ವಿವರವಾಗಿ ಗಮನಿಸುತ್ತೇನೆ. ಕಿಡಕಿಯ ಪಕ್ಕ ಕೂತಿರುವ ಮುದುಕಿ ಅವ್ವ. ಪಕ್ಕದಲ್ಲಿ ಕೂತಿರುವವನು ಅವಳ ಮಗ ಅಥವಾ ಅಳಿಯ. ಅವನ ಪಕ್ಕ ಶಾಲು ಹೊದ್ದು, ಅಲ್ಲಾಡುವ ಜೀವವೊಂದನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅದನ್ನು ಮಲಗಿಸುವ ಯತ್ನದಲ್ಲಿ ತೊಡಗಿರುವ ಹುಡುಗಿ ಮುದುಕಿಯ ಮಗಳು ಅಥವಾ ಸೊಸೆ. ಅವಳು ತನ್ನ ಸೆರಗನ್ನು ಮೂಗಿನ ವರೆಗೆ ಎಳಕೊಂಡು ಕಿವಿಗೆ ಸಿಕ್ಕಿಸಿಕೊಂಡಿದ್ದಾಳೆ. ಅವಳು ಗಂಡನೊಂದಿಗೆ ಮೆಲುದನಿಯಲ್ಲಿ ಆಡುತ್ತಿರುವ ಮಾತು ಅವಳ ಮುಚ್ಚಿದ ಬಾಯಿನ ಹತ್ತಿರದ ಸೆರಗನ್ನು ಮೆಲ್ಲಗೆ ಉಬ್ಬಿಸಿ ಇಳಿಸಿ ಮಾತುಗಳು ಸೆರಗಿನಲ್ಲಿ ಸೋಸಿಕೊಂಡು ಹೊರಗೆ ಬರುತ್ತಾ ಇವೆ. ಪಾಪ! ಎಳೆಯ ಮಗುವಿಗೆ ಸೀತವಾಗಬಾರದು ಎಂದು ಅವಳು ಹಾಗೆ ಮೂಗಿಗೆ ಸೆರಗು ಸಿಕ್ಕಿಸಿಕೊಂಡಿದ್ದಾಳೆ ಕಾಣುತ್ತೆ. ಅವಳ ತಲೆಯನ್ನು ಒಂದು ಹರಿದು ಮಾಸಿದ ಉಲ್ಲನ್ನು ಟೋಪಿ ಬಿಗಿಯಾಗಿ ಕವಚಿಕೊಂಡಿದೆ. ತುಂಬ ಆಕರ್ಷಕವಾಗಿರುವ ಕಣ್ಣುಗಳು ಅವಳವು. ಹಣೆಯ ಮೇಲೆ ಒಂದು ಸಾದುಗಪ್ಪಿನ ಚುಕ್ಕಿ. ಕರುಣೆ ತುಂಬಿರುವ ಅವಳ ಕಣ್ಣುಗಳಲ್ಲಿ ಸಣ್ಣಗೆ ಏಂಥದೋ ಒಂದು ಆರ್ದ್ರ ದ್ರವ ಜಿನುಗುತ್ತಿರುವಂತಿದೆ. ಒಂದಲ್ಲ ಎರಡಲ್ಲ ಅವರ ಸಾಮಾನು ಸರಂಜಾಮುಗಳು. ಬಟ್ಟೆಯ ಗಂಟುಗಳು. ಟ್ರಂಕು, ಸೂಟ್ಕೇಸುಗಳು. ಅಲ್ಲ್ಯೂಮಿನಿಯಮ್ ಡಬರಿಗಳನ್ನು ಇಟ್ಟಿರುವ ಪ್ಲಾಸ್ಟಿಕ್ ಚೀಲಗಳು. ಬಿಸಿನೀರು ಕಾಫಿಯ ಪ್ಲಾಸ್ಕುಗಳು. ಬಾಣಂತಿಯ ಊಟ ವಗೈರೆ. ಹುಡುಗಿ ಪಕ್ಕದಲ್ಲೇ ಇಟ್ಟುಕೊಂಡಿರುವ ಒಂದು ಖಾಸಗಿ ಚೀಲ. ಅದರಲ್ಲಿ ಕೂಸಿಗೆ ಅಗತ್ಯವಾಗಿರುವ ಬಟ್ಟೆ ಬರಿ ಔಷಧಿ ವಗೈರೆ ವಗೈರೆ. ಒಟ್ಟಲ್ಲಿ ಒಂದು ಬಾಣಂತಿಕೋಣೆಯೇ ಯಾತ್ರೆಗೆ ಹೊರಟಹಾಗಿದೆ. ಜೊತೆಗೆ ಕೇಂದ್ರದಲ್ಲಿ ಅವ್ವ ಮತ್ತು ಆಕೆಯ ನಿರ್ಮಾಣವಾದ ಒಂದು ಜೀವಂತ ಕ್ರಿಯಾಚೇತನ-ಆಗಾಗ ಸಣ್ಣ ಅಲಾಪ ಮತ್ತು ನಿರಂತರ ಶ್ರುತಿಹಿಡಿದ ಗುರುಗುರುವಿನೊಂದಿಗೆ. ಇತ್ತ ಮುದುಕಿ ಪುರುಷನಿಗೆ ಏನೋ ಹೇಳುತ್ತಿದ್ದಾಳೆ. ಅವಳದ್ದು ಗಟ್ಟಿ ದನಿ. ಪ್ರಾಯಃ ಕಿಡಕಿ ಬಾಗಿಲುಗಳನ್ನೆಲ್ಲಾ ಮುಚ್ಚು ಎಂದು ಮಗ ಅಥವಾ ಅಳಿಯನಿಗೆ ಆಕೆ ಅಪ್ಪಣೆ ಮಾಡುತ್ತಿರಬಹುದು. ಹೊರಗಿನಿಂದ ತಣ್ಣಗೆ ಗಾಳಿ ಬಿಸುತ್ತಾ ಇದೆ. ಮಗು ಬಾಣಂತಿಗೆ ಸೀತವಾದರೆ ಎಂಬುದು ಆ ಹೆಣ್ಣುಮಗಳ ಕಾಳಜಿ. ಪುರುಷ ಹಿರೀಕರ ಮಾತನ್ನು ಶಿಸರಾವಹಿಸಿ ನಡೆಸುವ ರಾಮಚಂದ್ರನ ವಂಶಸ್ಥ ಇರಬಹುದು. ತಕ್ಷಣವೇ ಆತ ಎದ್ದು ಕಂಪಾರ್ಟಮೆಂಟಿನ ಎಲ್ಲ ವಿಂಡೋಗಳನ್ನು ಕೆಳಕ್ಕಿಳಿಸಿ ಭದ್ರಪಡಿಸುತ್ತಾ ಇದ್ದಾನೆ. ಸ್ವಾಮೀ…ನೀವು ಹಾಗೆ ಬಾಗಿಲುಗಳನ್ನೆಲ್ಲಾ ಮುಚ್ಚಿದರೆ ನಾವು ಉಸಿರುಕಟ್ಟಿ ಸಾಯಬೇಕಷ್ಟೆ…ಹಾಕಬೇಡಿ ಬಾಗಿಲು…ಎನ್ನುತ್ತೇನೆ ನಾನು. ಅವನು ಹಲ್ಲುಗಿಂಜಿ ಚೋಟಾ ಬಚ್ಚಾ ಸಾಬ್ ಅನ್ನುತ್ತಾನೆ. ಈಗ ಮುದುಕಿಯ ಮಾರ್ಗದರ್ಶನದಂತೆ ಸಣ್ಣ ಪುಟ್ಟ ಗಾಳಿಸೀಳುಗಳನ್ನು ಆ ಪತಿರಾಯ ಬಟ್ಟೆ ತುರುಕಿ ಬಂದೋಬಸ್ತ್ ಮಾಡಲಿಕ್ಕೆ ಹತ್ತಿದ್ದಾನೆ. ಮೇಲಿನ ಬರ್ತಲ್ಲಿ ಅಗಲೇ ಅರೆನಿದ್ರೆಯಲ್ಲಿರುವ ಶ್ರೀನಿವಾಸ ಗೌಡರು ಒಂದಾದರೂ ವಿಂಡೋ ತೆಗಿದಿಡ್ರೀ ಅನ್ನುತ್ತಾರೆ. ಮಗುವಿನ ತಂದೆ ಯಥಾಪ್ರಕಾರ ತನ್ನ ಮೂವತ್ತೂವರೆ ಹಲ್ಲು ಕಾಣುವಂತೆ ಹಲ್ಲು ಗಿಂಜಿ ಚೋಟ ಬಚ್ಚಾ ಸಾಬ್ ಎಂದು ತನ್ನ ಹಳೇ ಡಯಲಾಗನ್ನೇ ಮತ್ತಷ್ಟು ನೀರಲ್ಲಿ ಅದ್ದಿ ಹರವಿಹಾಕುತ್ತಾನೆ. ನಾನು ನಿಟ್ಟುಸಿರು ಬಿಡುತ್ತಾ ಓದಲಿಕ್ಕೆಂದು ತಂದ ಪುಸ್ತಕದಿಂದ ಗಾಳಿಹಾಕಿಕೊಳ್ಳತೊಡಗುತ್ತೇನೆ. ಅರ್ಧ ಗಂಟೆ ಕಳೆದಿರಬೇಕು. ಕೂಸಿನ ತಾಯಿ ಬಾಯಿ ಬಳಿಯ ಸೆರಗು ಮೃದುವಾಗಿ ಅಲ್ಲಾಡುವಂತೆ ಮಾಡುತ್ತಾ ಮತ್ತೇನನ್ನೋ ತನ್ನ ಗಂಡನಿಗೆ ನಿವೇದಿಸುತ್ತಾಳೆ. ಕೂಸಿನ ತಂದೆ ಪತ್ನಿಯ ಮಾತನ್ನೂ ಜನ್ಮೇಪಿ ಮೀರಿದವನಿರಲಿಕ್ಕಲ್ಲ. ಅವ ಮಾತಾಡದೆ ಮೇಲೆದ್ದು ನನ್ನ ಬರ್ತಿನ ಮೇಲೆ ಒಂದು ಕಾಲು ಊರಿ ಫ್ಯಾನನ್ನು ಇನ್ನೊಂದು ದಿಕ್ಕಿಗೆ ತಿರುವುತ್ತಾ ಇದ್ದಾನೆ. ಹೀಗಾಗಿ ಬರುತ್ತಿದ ಸ್ವಲ್ಪ ಗಾಳಿಯೂ ನನಗೆ ದಕ್ಕದೆ ಹೋಗುತ್ತದೆ. ಈಗ ನಿಧಾನಕ್ಕೆ ಬಾಣಂತಿಕೋಣೆಯ ವಾಸನೆ ನಮ್ಮ ಡಬ್ಬಿಯನ್ನು ಆವರಿಸತೊಡಗುತ್ತೆ. ಅದು ಲೋಭಾನ , ಬೆಳ್ಳುಳ್ಳಿ, ವಿಕ್ಸ್ ಗಮ್ಮು ಬೆರೆತ ಘಾಟು ಹಿಡಿಸುವ ಒಂದು ವಾಸನೆ. ದೀಪ ಆರಿಸಿ ಎಂದು ಮೇಲಿನ ಬರ್ತಿಂದ ಗೌಡರ ಧ್ವನಿ ನಿರ್ಭಾವುಕ ಆಕಾಶವಾಣಿಯ ಹಾಗೆ ಕೇಳುತ್ತೆ. ನಿದ್ದೆಯಲ್ಲಿ ಅದ್ದಿದ ಹಾಗೆ ಇರುವ ಧ್ವನಿ ಅದು.]]>

‍ಲೇಖಕರು G

February 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Swarna

    ‘ಸೇಡಂ’ ಊರಿನ ಹೆಸರು ಮಜವಾಗಿದೆ ಸರ್.
    ಮುಂದಿನ ಭಾಗಕ್ಕೆ ಕಾಯುತ್ತೇವೆ.
    “ಗುಂಪು ಗುಂಪಾಗಿ ಕೂತಿರುವ ಖಾಸಗಿ ಲೋಕಗಳು ,
    ಅವುಗಳ ಅಂತರ್ಸಂಬಂಧವನ್ನು ಊಹಿಸಲು
    ನನ್ನನ್ನು ಅನಾವಶ್ಯಕ ಒತ್ತಾಯಿಸುತ್ತಾ ನಾನಾ ಬಗೆಯ ಕಗ್ಗಂಟುಗಳು ನಿರ್ಮಾಣಗೊಳ್ಳುತ್ತವೆ.”
    ಅವು ನನ್ನನ್ನು ಒತ್ತಾಯಿಸುತ್ತವೆ
    ಸ್ವರ್ಣಾ

    ಪ್ರತಿಕ್ರಿಯೆ
  2. ಸುಬ್ರಹ್ಮಣ್ಯ ಹೆಗಡೆ

    ನನಗೆ ಎಷ್ಟೋ ರೈಲ್ವೇ ನಿಲ್ದಾಣಗಳಲ್ಲಿ ನಿಂತಾಗ ಹೀಗನ್ನಿಸಿದ್ದಿದೆ,ಆದರೆ ನಿಮ್ಮ ಲೇಖನ ಓದಿನ್ನಾನು ತಿಂಗಳಿಗೆ ಹತ್ತು ಬಾರಿ ನೋಡುವ ರೈಲ್ವೆಯನ್ನು ಹೆಚ್ಚು ಕಣ್ತೆರೆದು ನೋಡಿದಂತಾಯಿತು. ಇನ್ನೊಂದೇ ವಾರದಲ್ಲಿ ಮತ್ತೊಂದು ಎರಡು ಸಾವಿರ ಕಿಮೀಗಳ ಪ್ರಯಾಣ ಕಾದಿದೆ. ಹೀಗೇಯೇ ಎರಡು ದಿನ ಅನಾಮಧೇಯನಾಗಬೇಕು. ಇಂದೆಂದೂ ನೋಡದ ಸಹ ಪ್ರಯಾಣಿಕರೊಡನೆ ಬರೀ ‘ಇನ್ನೊಬ್ಬ’ ಮನುಷ್ಯನಂತಷ್ಟೇ ಆಗಿ ಫ್ಯಾನು, ಲೈಟು, ಮೊಬೈಲ್ ಚಾರ್ಜಿಂಗ್ ಪಾಯಿಂಟುಗಳಿಗೆಲ್ಲ ತಿಣುಕಾಡಬೇಕು.

    ಪ್ರತಿಕ್ರಿಯೆ
  3. Vijaya lakshmi S.P.

    ನಾವೇ ರೈಲಿನಲ್ಲಿ ಪಯಣಿಸಿದಂತೆ ಭಾಸವಾಯ್ತು. ಸರ್ , ನಿಮ್ಮ ಪದಸಂಪತ್ತು, ನಿಮ್ಮ ಬರವಣಿಗೆ ವೈಖರಿಗೆ ಮನಸೋಲದವರಿಲ್ಲ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: