ಎಚ್ಚೆಸ್ವಿ ಬರೆಯುತ್ತಾರೆ: ಸ್ಮೃತಿ ಸಂಪಾದನೆ

“ನಾನು” ಅನ್ನುವುದು ಒಂದು ಕಾಲಾತೀತವೂ ದೇಶಾತೀತವೂ ಆದ ಕಲ್ಪನೆ ಅಲ್ಲವೇ ಅಲ್ಲ. ಸ್ವಲ್ಪ ವಿವರಣೆಯಿಂದ ಈ ಅಂಶವನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ. ಸಾಯುವ ಸ್ವಲ್ಪ ದಿನದ ಹಿಂದೆ ನನ್ನ ಪತ್ನಿ ನನಗೆ ಹೇಳಿದ್ದು-ನೀವು ನನ್ನ ಮರೆಯಬೇಡಿ ಅಂತ. ಕೆಲವು ಬಾರಿ ನಾನು ಇಚ್ಛಿಸಿ, ಕೆಲವು ಬಾರಿ ತಾನಾಗಿಯೇ ಆಕೆ ನನ್ನ ನೆನಪಿನಲ್ಲಿ ಸುಳಿದಾಡುವುದುಂಟು. ಹಾಗೆ ನೆನಪಾದಾಗಲೆಲ್ಲಾ ಅವಳೊಬ್ಬಳೇ ನನ್ನ ಅರಿವಿನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಪ್ರತಿಬಾರಿಯೂ ಯಾವುದೋ ಒಂದು ಸಂದರ್ಭದಲ್ಲಿ, ಒಂದು ನಿಶ್ಚಿತ ಕಾಲ ಘಟ್ಟದಲ್ಲಿ, ಒಂದು ನಿರ್ದಿಷ್ಟ ಪರಿಸರದ ಹಿನ್ನೆಲೆಯಲ್ಲೇ ನಾನವಳನ್ನು ಕಾಣುವುದು ಸಾಧ್ಯವಾಗುತ್ತಿತ್ತು. ಆಗ ಅನ್ನಿಸಿದ್ದು ನಾನು ಅನ್ನುವ ಅಸ್ತಿತ್ವ ಪರಿಮುಕ್ತವಾದುದಲ್ಲ; ಅದು ಒಂದು ಕಾಲ ಮತ್ತು ದೇಶಕ್ಕೆ ಬದ್ಧವಾದುದು.

ಉದಾಹರಣೆಗೆ ಗಮನಿಸಿ. ರಾಮಗಿರಿಯ ಬೆಟ್ಟ ತುದಿಯಲ್ಲಿ ಸೂರ್ಯಾಸ್ತಮದ ಸಮಯ. ಬೆಳ್ಳಗೆ ಅರಳಿರುವ ಮರಕಣಗಿಲೆ ಹೂಗಳು. ಅವುಗಳ ನವುರಾದ ಕಂಪು. ಆ ಮರಗಳು ಬಂಡೆಗಳ ಮೇಲೆ ನೆರಳಿನ ಬಲೆ ಎಸೆದ ಹಾಗೆ ಕಾಣುತ್ತೆ. ಆ ನೆರಳ ಬಲೆಯಲ್ಲಿ ನನ್ನ ಪತ್ನಿ ಕುಳಿತಿದ್ದಾಳೆ. ಅವಳು ಉಟ್ಟ ವಸ್ತ್ರ ಕೂಡ ಸ್ಪಷ್ಟವಾಗಿ ನನಗೆ ನೆನಪಿದೆ. ಆ ವಸ್ತ್ರದ ಬಣ್ಣ ಕೂಡ. ಅವಳು ಹಾಡುತ್ತಾ ಇದ್ದಾಳೆ. ಆ ಹಾಡು ಆ ಪರಿಸರದ ಉಳಿದ ಸದ್ದಿನ ಸಾಮ್ರಾಜ್ಯದಲ್ಲಿ ಅದು ಹೇಗೋ ಕೂಡುಬಾಳುವೆ ಮಾಡುತ್ತಾ ಇದೆ. ಇದು ಒಂದು ನೆನಪಿನ ಚಿತ್ರ. ಇನ್ನೊಂದು ನೆನಪಲ್ಲಿ ನರ್ಸಿಂಗ್ ಹೋಮಲ್ಲಿ ಮಂಕು ಬೆಳಕು. ನನ್ನನ್ನು ಅವಚಿಕೊಂಡು ಗಟ್ಟಿಯಾಗಿ ನನ್ನ ಪತ್ನಿ ಅಳಲಾರಂಭಿಸುತ್ತಾಳೆ. ನನ್ನ ಮೊದಲ ಸೊಸೆಗೆ ಮಗು ಸತ್ತುಹುಟ್ಟಿದ ಸಂದರ್ಭವದು. ಆಸ್ಪತ್ರೆಯ ಉದ್ದೋ ಉದ್ದದ ಕಾರಿಡಾರುಗಳು ಕಬಂಧವ್ಯಕ್ತಿತ್ವವೊಂದರ ಚಾಚಿತ ಕತ್ತಲ ತೋಳುಗಳಂತೆ ಕಾಣುತ್ತಾ ಇವೆ. ಅಲ್ಲಿ ಹಾಕಿದ್ದ ಬೆಂಚೊಂದರ ಮೇಲೆ ಯಾರೋ ಸಣ್ಣ ದನಿಯಲ್ಲಿ ಬಿಕ್ಕಳಿಸುತ್ತಾ ಇದ್ದಾರೆ. ಅದು ಯಾರು ಎನ್ನುವುದು ಸ್ಪಷ್ಟವಿಲ್ಲ. ಆ ಬಿಕ್ಕಳಿಕೆ ಧ್ವನಿ ಮಾತ್ರ ನನಗೆ ಮರೆಯುವುದಾಗಿಲ್ಲ. ಅವಳು ಆಗ ಆಡಿದ ಒಂದು ಮಾತು ಇನ್ನೂ ನನ್ನ ಕಿವಿಯಲ್ಲಿ ಗುಂಗಿಕೊರೆತ ನಡೆಸುತ್ತಲೇ ಇದೆ. “ನಮ್ಮ ಮನೆಗೆ ಯಾರೋ ಏನೋ ಮಾಡಿಬಿಟ್ಟಿದ್ದಾರ್ರಿ…” .ನನ್ನಾಕೆಯ ಕಣ್ಣೀರಿಂದ ನನ್ನ ಹೆಗಲು ತೊಯ್ಯುತ್ತಾ ಬಟ್ಟೆಯ ಒಳಗಿದ್ದ ಭುಜಕ್ಕೆ ಒದ್ದೊದ್ದೆ ಅನುಭವಾಗುತ್ತಾ ಇದೆ. ಈ ಅನೀರಿಕ್ಷಿತ ಸಾವಿನ ಅನುಭವವನ್ನು ನಾನು ನಿಧಾನವಾಗಿ ಪ್ರಜ್ಞೆಗೆ ತಂದುಕೊಳ್ಳುತ್ತಾ ಇದ್ದೀನಿ. “ಡಾಕ್ಟರ್ ಸ್ವಲ್ಪ ಬೇಗ ಬಂದಿದ್ದರೆ ಮಗು ಬದುಕುತಿತ್ತೋ ಏನೋ…..” . ಈ ಮಾತನ್ನು ಮತ್ತೆ ಮತ್ತೆ ಒಟಗುಟ್ಟುತ್ತಿದ್ದಾಳೆ ನನ್ನ ಪತ್ನಿ…

ನೆನಪುಗಳು ಎಂದರೆ ಹೀಗೆ. ಅಹ್ಲಾದಕರವಾದ ಅನುಭವಗಳಾಗಿರಬಹುದು; ದಾರುಣವಾದ ಅನುಭವಗಳಾಗಿರಬಹುದು. ಒಂದು ಸಂದರ್ಭದ ಸಮೇತವೇ ಅವು ಮತ್ತೆ ನಮ್ಮ ಕಣ್ಣೆದುರು ನಿಲ್ಲತಕ್ಕದ್ದು. ನಿಲ್ಲತಕ್ಕದ್ದು ಎನ್ನುವ ಮಾತು ಒಂದು ಸ್ಥಿರಚಿತ್ರದ ಕಲ್ಪನೆಯನ್ನು ಕೊಡಬಾರದು. ನೆನಪುಗಳು ತಮ್ಮ ಕ್ರಿಯಾಶೀಲತೆಯ ಸಮೇತ ಪುನರಭಿನೀತವಾಗುತ್ತವೆ. ಸದ್ದಿರುತ್ತದೆ. ಅವು ಬಾಹ್ಯೇಂದ್ರಿಯಕ್ಕೆ ಕೇಳುವುದಿಲ್ಲ. ಬಣ್ಣ ಬೆಳಕು ಕತ್ತಲ ಮೇಳಾಟವಿರುತ್ತದೆ(ಮೇಲಾಟವಲ್ಲ). ಆದರೆ ಅವು ಹೊರಗಿನ ಕಣ್ಣಿಗೆ ಕಾಣುವುದಿಲ್ಲ. ಶಬ್ದ ಅರ್ಥಗಳಿರುತ್ತವೆ. ಆದರವು ಕಿವಿಗೆ ಅತೀತವಾಗಿರುತ್ತವೆ. ಈ ಎಲ್ಲವೂ ತತ್ ಕ್ಷಣದ ಸಂಭವ ಎನ್ನುವಂತೆ ಮನಸ್ಸಿಗೆ ಬೋಧೆಯಾಗುತ್ತವೆ. ಆರಂಭದಲ್ಲಿ ಈ ನೆನಪುಗಳ ಧ್ವನಿಶಕ್ತಿ, ದೃಶ್ಯ ಶಕ್ತಿ, ಆಘ್ರಾಣತ್ವ ತುಂಬ ಪ್ರಖರವಾಗಿರುತ್ತದೆ. ಕ್ರಮ ಕ್ರಮೇಣ ಇವು ಮಾಸಲಿಕ್ಕೆ ಪ್ರಾರಂಭವಾಗುತ್ತದೆ. ಧ್ವನಿಗಳು ಅಸ್ಪಷ್ಟವಾಗುತ್ತವೆ. ದೃಶ್ಯಗಳು ಮಸಕುಮಸಕಾಗುತ್ತವೆ.

ಕಾಲದ ಧೂಳಿ ಅವುಗಳ ಮೇಲೆ ನಿರಂತರವಾಗಿ ಕೂಡುತ್ತಾ ನೆನಪುಗಳು ತಮ್ಮ ನಿಖರತೆಯನ್ನು ಕಳೆದುಕೊಳ್ಳುತ್ತಾ ಕೊನೆಗವು ಸಮೆದ ಶಾಸನವಾಗಿ ಪರಿಣಮಿಸುತ್ತವೆ. ಹಾಗಾಗದಿರಬೇಕಾದರೆ ಮತ್ತೆ ಮತ್ತೆ ಅವನ್ನು ಪ್ರಜ್ಞೆಯ ಪಾತಳಿಗೆ ತಂದುಕೊಳ್ಳುತ್ತಾ ಅವುಗಳ ನಿಖರತೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಸತ್ತವರನ್ನು ಮರೆಯುವುದು ಎಂದರೆ ಅವರನ್ನು ಮತ್ತೊಮ್ಮೆ ಕೈಯಾರೆ ಕೊಂದಂತೆ ಎಂದು ಎಲಿ ವಿಸೆಲ್ ಹೇಳಿದ ಮಾತು ನನಗಿಲ್ಲಿ ನೆನಪಾಗುತ್ತಾ ಇದೆ.

ಕಲಾಕೃತಿಯೊಂದು ನೀಡಿದ ಅನುಭವವನ್ನು ನಾವು ಪುನಶ್ಚರಣದಿಂದ ಹರಿತ್ತಾಗಿ ಉಳಿಸಿಕೊಳ್ಳುವುದಿಲ್ಲವೇ? ಅದೇ ರೀತಿ ಈ ನೆನಪುಗಳ ಸಾಗುವಳಿ ಕೂಡ. ಮತ್ತೆ ಮತ್ತೆ ನಡೆಯದೆ ಹೋದರೆ ಕಾಲ್ದಾರಿಯಲ್ಲಿ ಹುಲ್ಲು ಬೆಳೆದು ಅದು ಮರೆಯಾಗಿ ಹೋಗುತ್ತದೆ. ಪುನರ್ಶ್ಚರಣ ಅತ್ಯಗತ್ಯವಾದ ಉಳಿಬಾಳಿಕೆಯ ಅನುಸಂಧಾನ. ಹಾಗೆ ಮಾಡದಿದ್ದರೆ ಏನಾಗುತ್ತದೆ ಗೊತ್ತೇ? ಮನಸ್ಸು ಎಂಬ ವಿಲಕ್ಷಣ ವಸ್ತು ಮಾಸಿದ ನೆನಪಿನ ಭಾಗಗಳಲ್ಲಿ ತನಗೆ ಬೇಕಾದ ಪ್ರಕ್ಷೇಪ ಕ್ರಿಯೆಗಳನ್ನು ನಡೆಸಿ ಬಿಡುತ್ತದೆ! ಮತ್ತು ಕೆಲವು ಕಾಲಕ್ಕೆ ಅದು ನಡೆದದ್ದೇ ಹಾಗೆ ಎಂದು ನಂಬಲಿಕ್ಕೆ ಶುರುಮಾಡುತ್ತದೆ! ಒಂದು ಉದಾಹರಣೆ ಕೊಡುತ್ತೇನೆ. ಹುಡುಗಿಯೊಬ್ಬಳ ವಿವಾಹದ ಸಂದರ್ಭ. ಗಂಡಿನ ಕಡೆಯವರು ಹುಡುಗಿಗೆ ಎಲ್ಲಾದರೂ ಕೆಲಸ ಸಿಕ್ಕರೆ ಮಾತ್ರ ನಾವು ಹುಡುಗಿಯನ್ನು ಒಪ್ಪುತ್ತೇವೆ!-ಎನ್ನುತ್ತಾರೆ. ಇದೊಂದು ಬಗೆಯ ವಿಚಿತ್ರ ನಿಬಂಧನೆ!

ಕಲಾಕೃತಿ: ಪೆರ್ಮುದೆ ಮೋಹನ್ ಕುಮಾರ್

ಹುಡುಗಿಯ ದಾಯಾದಿಸೋದರ ಅವಳಿಗೆ ಒಂದು ತಾತ್ಕಾಲಿಕ ಕೆಲಸ ಕೊಡಿಸುತ್ತಾನೆ. ವರ್ಷಗಳು ಕಳೆದ ಹೋದ ಮೇಲೆ ಹುಡುಗಿಯ ಬಂಧುವೊಬ್ಬರಲ್ಲಿ ಉಳಿದ ನೆನಪಿನ ಸ್ವರೂಪ-ಹುಡುಗಿ ತನ್ನ ಛಾತಿಯಿಂದ ತಾನೇ ಕೆಲಸ ಸಂಪಾದಿಸಿದಳು ಎನ್ನುವುದು. ನನ್ನ ಸ್ವಂತ ಅನುಭವವೊಂದನ್ನು ಹೇಳುತ್ತೇನೆ. ನನ್ನ ಗೆಳೆಯ ತಾನು ಕಾಸು ಹಾಕಿ ನನ್ನ ಪುಸ್ತಕವೊಂದನ್ನು ಪ್ರಕಟಿಸಿದ್ದು ಕಾಲಾನುಕಾಲಕ್ಕೆ ನನಗೆ ಮರೆತೇಹೋಗಿದೆ. ಅದನ್ನು ಪ್ರಕಟಿಸಿದ್ದು ಬೇರೆ ಯಾರೋ ಎನ್ನುವ ಪ್ರಕ್ಷೇಪ ಕ್ರಿಯೆ ನನ್ನ ಅರಿವಿಲ್ಲದೆಯೇ ನಡೆದುಬಿಟ್ಟಿದೆ. ಮೊನ್ನೆ ನನ್ನ ಹಳೆಯ ಗೆಳೆಯ ನಿಮ್ಮ ಆ ಪುಸ್ತಕವನ್ನು ನಾನು ಪ್ರಕಟಿಸಿದ್ದು ಎಂದು ಹೇಳಿದಾಗ, ನನ್ನ ಮರೆವು ಮತ್ತು ಆ ಮರೆವಿನ ಭಾಗದಲ್ಲಿ ನಡೆದ ಪ್ರಕ್ಷೇಪಗಳನ್ನು ನೆನೆದಾಗ ನನಗೆ ನೆಲಕ್ಕೆ ಕುಸಿಯುವಷ್ಟು ಲಜ್ಜಾಭಾವ ಉಂಟಾಗುತ್ತದೆ. ಅದಕ್ಕೇ ನನಗನ್ನಿಸೋದು, ಆಗಾಗ ನಾವು ಕಳೆಯ ನೆನಪುಗಳ ಧೂಳು ಝಾಡಿಸಿ ಸ್ಪಷ್ಟಗೊಳಿಸುತ್ತಲೇ ಇರಬೇಕಾಗುತ್ತದೆ. ನೆನಪಿನ ಸಂದರ್ಭದಲ್ಲಿ ಇದ್ದ ಅನೇಕ ಅಂಶಗಳು ಜಾರಿಹೋಗುವುದನ್ನು ಇದರಿಂದ ತಡೆಯಬಹುದೇನೋ….

ಪ್ರಕ್ಷೇಪಗಳು ಧನಾತ್ಮಕವಾಗಿ ನಡೆಯಬಹುದಾದ ಸಾಧ್ಯತೆಗಳ ಬಗ್ಗೆ ಈಗ ಯೋಚಿಸೋಣ. ಪಾಸಿಟೀವ್ ಥಿಂಕಿಂಗ್ ಇಂದ ಇದು ಸಾಧ್ಯವಾಗುತ್ತದೆ. ದ್ರೌಪದಿಯ ಸೀರೆಯನ್ನು ದುಶ್ಶಾಸನ ಸೆಳೆದಾಗ ಅವಳ ಸ್ವೀಕೃತ ಸೋದರ ಕೃಷ್ಣ ದ್ವಾರಕೆಯಲ್ಲಿ ಇದ್ದೇ ಅವಳಿಗೆ ವಸ್ತ್ರದಾನ ಮಾಡಿದ ಎನ್ನುವ ಪ್ರಕ್ಷೇಪ ಈ ಬಗೆಯದು. ಈ ಹೊಸ ನೆನಪನ್ನು ನಾವು ನಂಬಲಿಕ್ಕೆ ತೊಡಗಿದಾಗ ದ್ರೌಪದಿಯ ಮಾನಾಭಿಮಾನದ ಜೊತೆಗೆ ಕೃಷ್ಣನ ವ್ಯಕ್ತಿತ್ವ ಸಾಧಿಸುವ ಔನ್ನತ್ಯವೂ ಅದ್ಭುತವಾದುದೆನ್ನಿಸುತ್ತದೆ. ಜೊತೆಗೆ ಈ ವಸ್ತ್ರದಾನವು ಭೀಷ್ಮಾದಿಗಳ ಚಡಪಡಿಕೆಯನ್ನು ನಿವಾರಿಸುತ್ತದೆ. ದುರ್ಯೋಧನ ಕರ್ಣರ ಮಹಾಬೀಳಿಗೂ ಒಂದು ತಡೆಗೋಡೆ ಕಟ್ಟುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಸಂದರ್ಭವನ್ನು ಸಾಂಸ್ಕೃತಿಕ ಅಧಃಪತನದಿಂದ ಬಚಾವು ಮಾಡುತ್ತದೆ. ವಸ್ತ್ರಾಪಹರಣ ಆಯಿತೋ ಇಲ್ಲವೋ ಎನ್ನುವುದು ಇಲ್ಲಿ ಅಷ್ಟೊಂದು ಮುಖ್ಯವಾಗುವುದಿಲ್ಲ. ಕೈಜಾರುತ್ತಿದ್ದ ಕಥೆಯ ಸೆರಗನ್ನು ಮತ್ತೆ ವಕ್ಷಸ್ಥಲಕ್ಕೆ ಹೊದಿಸುವುದರಿಂದ ವಾಸ್ತವದ ಪ್ರಖರತೆಯನ್ನು ಇದು ಸಹ್ಯಗೊಳಿಸುತ್ತದೆ. ಇದು ಅಸಂಭವ ಎಂದೂ ಹೇಳುವಂತಿಲ್ಲ. ಕೈಗೆ ದೂರವಾದದ್ದು ಕರುಳಿಗೆ ದೂರವಾಗಬೇಕಾದ್ದಿಲ್ಲ. ಜಗತ್ತಿನ ಯಾವುದೋ ಭಾಗದಲ್ಲಿ ಆಗುವ ಪ್ರಾಕೃತಿಕವೋ ಮಾನುಷವೋ ಆದ ವಿಕೋಪಕ್ಕೆ ನಾವು ಕೂತಲ್ಲೇ ಕೂತು ಸಹಾಯ ಅಥವಾ ಸಹಾನುಭೂತಿಯ ಹಸ್ತವನ್ನು ಚಾಚುವುದಿಲ್ಲವೇ? ಯಾವ ರಾಜಕೀಯ, ಧಾರ್ಮಿಕ ತಡೆಗೋಡೆಗಳು ಅದನ್ನು ನಿವಾರಿಸಬಲ್ಲವು? ನಮ್ಮ ಕಹಿನೆನಪುಗಳ ದಟ್ಟಣೆಯನ್ನು ಪರಿಷ್ಕರಣದಿಂದ ಸ್ವಲ್ಪ ತಿಳಿ ಮಾಡಿಕೊಳ್ಳುವುದು ಸಾಧ್ಯವಾಗುವುದಾದರೆ ಅಂತಹ ಪ್ರಕ್ಷೇಪಗಳು ಯಾಕೆ ಆಗಬಾರದು? ಕಲೆಯಂತೂ ಇಂತಹ ಪ್ರಕ್ಷೇಪಗಳ ಸೃಷ್ಟಿಗೆ ಸದಾ ಚಿಂತಿಸುತ್ತಾ ಇರುತ್ತದೆ.

ಭಾರತ ವಿಭಜನೆಯ ಕಾಲದಲ್ಲಿ ರಕ್ತದ ಕೋಡಿ ಹರಿಯುತ್ತಿರುವಾಗ ಒಬ್ಬ ಹಿಂದು, ಮುಸ್ಲಿಮ್ ಕುಟುಂಬವನ್ನು ರಕ್ಷಿಸಿದ ಘಟನೆಯನ್ನು, ಅಥವಾ ಒಬ್ಬ ಕರುಣಾಳು ಮುಸ್ಲಿಮ್ ಹಿಂದೂ ಸಂಸಾರಿಯನ್ನು ಕಾಪಾಡಿದ ಘಟನೆಯನ್ನು ಕಲಾಕೃತಿಯು ಮುನ್ನೆಲೆಗೆ ತಂದು ಇದನ್ನು ನೋಡಿ ಎನ್ನುತ್ತದೆ. ರಾಜಕಾರಣಿಯೋ, ಧರ್ಮಗುರುವೋ ತೋರಿಸುವ ಸಾರ್ವತ್ರಿಕ ಚಿತ್ರಕ್ಕಿಂತ ಈ ಖಾಸಗಿ ಚಿತ್ರ ಘನವಾದುದಾಗಿರುತ್ತದೆ. ಉತ್ಪಾತಗಳನ್ನು ಸೃಷ್ಟಿಸಿ ಖುಷಿಪಡುವ ವ್ಯಗ್ರೋಗ್ರ ಮನಸ್ಸುಗಳಿಗೆ ಇದು ಸಹ್ಯವಾಗುವುದಿಲ್ಲ. ಇತ್ತೀಚೆಗೆ ಜಿ.ರಾಜಶೇಖರ ಹೇಳಿದಂತೆ ನಾವು ಯಾರಲ್ಲಿ ನಿಷ್ಕಾರಣ ಸಂದೇಹ ಮತ್ತು ಆಶಂಕೆ ಬೆಳೆಸಿಕೊಳ್ಳುತ್ತಿದ್ದೇವೋ ಅವರೂ ಕೂಡ ಥೇಟ್ ನಮ್ಮಂತೆಯೇ ಇದ್ದಾರೆ ನೋಡಿ ಎಂದು ಹೃದಯಗಳನ್ನು ಬೆಸೆಯುವ ಕೆಲಸವನ್ನು ಒಬ್ಬ ಕಲಾವಿದ ಮಾಡುತ್ತಾನೆ. ಅದೇನು ಸ್ವಕಪೋಲ ಕಲ್ಪಿತ ಸುಳ್ಳಿನ ಬೊಂತೆ ಆಗಿರಬೇಕಾಗಿಲ್ಲ. ಕಣ್ತೆರೆದು ನೋಡಿದರೆ ಅಂತಹ ಮಾನವ್ಯದ ಘನತೆ ಎತ್ತಿಹಿಡಿಯುವ ಘಟನೆಗಳು ನಮ್ಮ ಸುತ್ತುಮುತ್ತಲೇ ಪ್ರತಿನಿತ್ಯವೂ ನಡೆಯುತ್ತಾ ಇರುತ್ತವೆ. ಧರ್ಮಾಂಧರಿಗೆ ಅವನ್ನು ನೋಡುವ ಮನಸ್ಸಾಗಲೀ ವ್ಯವಧಾನವಾಗಲೀ ಇರುವುದಿಲ್ಲ ಅಷ್ಟೆ.

ನಾನು ಹಿಂದೆ ಉದ್ಧರಿಸಿದ ಎಲೀ ವಿಸೆಲ್ ಇನ್ನೊಂದು ಅಪಾಯಕಾರಿ ಹೇಳಿಕೆಯನ್ನೂ ಮಾಡಿದ್ದಾನೆ. ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಯಾತನಾ ಶಿಬಿರಗಳಲ್ಲಿ ಯಹೂದಿಗಳು ಅನುಭವಿಸಿದ ಅಮಾನವೀಯ ಸಾವು ನೋವುಗಳ ಕರಾಳ ನೆನಪನ್ನು ಜೀವಂತವಾಗಿ ಇಡುವುದು ನಮ್ಮ ಕರ್ತವ್ಯ ಅಂತ. ಹಾಗೆ ಇಡುವುದರಿಂದ ಮತ್ತೊಮ್ಮೆ ಚರಿತ್ರೆಯಲ್ಲಿ ಇಂಥ ಘಟನೆಗಳು ಸಂಭವಿಸುವುದಿಲ್ಲ ಎನ್ನುವುದು ಅವನ ವಾದ. ಇದನ್ನು ಒಪ್ಪುವುದು ಕಷ್ಟ. ಹಂಪಿಯ ಪಳೆಯುಳಿಕೆಗಳು ನಮ್ಮನ್ನು ವರ್ತಮಾನದಲ್ಲಿ ಒಂದು ಗುಂಪಿನ ವಿರುದ್ಧ ವ್ಯಗ್ರಗೊಳಿಸುತ್ತವೆ ಎನ್ನುವುದಾದರೆ ಅಂಥ ಕರಾಳ ನೆನಪುಗಳನ್ನು ಶುದ್ಧೀಕರಿಸುವ, ಪ್ರಕ್ಷೇಪಿಸಿ ಮತ್ತೆ ಒಪ್ಪಮಾಡಿಕೊಳ್ಳುವ ಅಗತ್ಯವಿದೆ ಎಂದೇ ನಾನು ಭಾವಿಸುತ್ತೇನೆ. ಶತಮಾನಗಳಿಂದ ಸಾಹಿತ್ಯ ಕೈಕೊಂಡಿರುವುದೇ ಇಂಥ ಪರಿಷ್ಕರಣ ಉದ್ಯಮವನ್ನು. ದುಷ್ಟತೆಗೆ ವಿರುದ್ಧವಾಗಿ ಒಲವಿನ ಪ್ರತೀಕಗಳನ್ನು ನಿರ್ಮಿಸುವುದನ್ನು; ಮರೆತುಹೋದ ಮಾನವತೆಯ ಮುಖವನ್ನು ಫೋಟೋ ಆಲ್ಬಮ್ಮಲ್ಲಿ ಮತ್ತೆ ಮತ್ತೆ ಸುತ್ತುಕಟ್ಟಿ ತೋರಿಸುವುದನ್ನು…

****

ಮೂಲಮೂರ್ತಿಯನ್ನು ವರ್ತಮಾನಕ್ಕೆ ಆಹ್ವಾನಿಸುವ ನನ್ನ ಹೊಸ ಸಂಗ್ರಹದ ಒಂದು ಪದ್ಯವನ್ನು ಈಗ ನೋಡೋಣ. ಮೂಲಮೂರ್ತಿಗೆ ಮೊರೆ ಎನ್ನುವುದು ಆ ಕವಿತೆಯ ಶೀರ್ಷಿಕೆ.

ಛಿನ್ನ ಭಿನ್ನ ಪಾಳ್ಗುಡಿಯನ್ನು ತೊರೆದು ದಿಕ್ಕಾಪಾಲಾದ

ಮೂಲಮೂರ್ತೀ , ದಯವಿಟ್ಟು ಬಾ ಹಿಂತಿರುಗಿ…

ಎಂದು ಕವಿತೆ ಪ್ರಾರ್ಥಿಸುತ್ತಾ ಇದೆ. ಮೂಲಮೂರ್ತಿ ಎಂದರೆ ಏನು? ಸ್ವಲ್ಪ ಹಿನ್ನೆಲೆಯೊಂದಿಗೆ ಅದನ್ನು ನಿವೇದಿಸಲು ಬಯಸುತ್ತೇನೆ. ಈವತ್ತು ಹಂಪಿ ಕಹಿಯಾದ ನೆನಪುಗಳನ್ನು ತನ್ನ ಭಗ್ನಾವಸ್ಥೆಯಿಂದ ನಿರಂತರವಾಗಿ ಕೆರಳಿಸುತ್ತಾ ಇದೆ. ಈ ಭಗ್ನತೆಗೆ ಕಾರಣರಾದವರನ್ನು ನೋಟಕ ದ್ವೇಷಿಸಲು ಪ್ರೇರಿಸುವಂತೆ ಇದೆ ಈ ನೆನಪಿನ ಜಾಗರಣೆ. ಘಾತಕರು ಅನ್ಯಧರ್ಮೀಯರಿರಬಹುದು. ಅಥವಾ ಇಡೀ ಕಥೆ ಶೈವ ವೈಶ್ಣವ ಘರ್ಷಣೆಯ ಪರಿಣಾಮ ಇರಬಹುದು. ಸಂದರ್ಭ ಹೀಗೆ ಸಂದೇಹಾಸ್ಪದ ಆಗಿರುವಾಗ ಇತಿಹಾಸವನ್ನು ನಮಗೆ ಬೇಕಾದಂತೆ ಅರ್ಥೈಸುವ ಯತ್ನ ನಡೆಯುತ್ತದೆ. “ಹಾಳು ಹಂಪಿ” ಎಂದು ಒಂದು ಪ್ರದೇಶವನ್ನು ಕರೆಯುವ ಬಗ್ಗೆಯೇ ನನಗೆ ಅಭಿಪ್ರಾಯ ಸಮ್ಮತವಿಲ್ಲ. ಸ್ಥಾವರವನ್ನು ನೋಡಿ ಮಾತ್ರ ನಾವು ಹಂಪಿ ಹಾಳಾಗಿದೆ ಎಂದು ಹೇಳುತ್ತಿದ್ದೇವೆ. ಅಲ್ಲಿ ಜಂಗಮ ಶಕ್ತಿ ಇನ್ನೂ ಜೀವಂತವಾಗಿದೆ. ನಿಂತ ಕಲ್ಲಿನ ರಥಕ್ಕೆ ಹರಿಯುವ ತುಂಗಭದ್ರಾ ನದಿಯನ್ನು ಮುಖಾಮುಖಿಮಾಡುವ ಮೂಲಕ ಹಂಪಿ ಜೀವಂತವಾಗಿದೆ ಎಂಬುದನ್ನು ಕವ್ಬಿತೆಯು ಪ್ರತಿಪಾದಿಸುತ್ತಾ ಇದೆ. ಅದಕ್ಕಾಗೊಇಯೇ ಹಂಪಿಯ ದೈವ(ಅದರ ಮೂಲಮೂರ್ತಿ) ತಿರುಗಿ ಹಂಪಿಗೆ ಬರಬೇಕಾಗಿದೆ. ಪ್ರತೀಕಾತ್ಮಕವಾಗಿ ಅದನ್ನು ಮೂರ್ತಿ ಎಂದು ಕರೆಯಲಾಗುತ್ತಿದೆ. ಅಂತರಂಗದ ಆರ್ತ ಸತ್ವವನ್ನೇ ಮೂಲಮೂರ್ತಿಯೆಂದು ಪದ್ಯದಲ್ಲಿ ಕರೆಯಲಾಗಿದೆ. ಕೆಳಗಿನ ಸಾಲುಗಳನ್ನು ಗಮನಿಸಿ:

ಮೂಲಮೂರ್ತಿಯೇ ಬಾ…

: ಮೊರೆಯಿಡುತ್ತಿದೆ ಛಿನ್ನ ಭಿನ್ನ ಶರೀರ, ಅಂತರಂಗದ ಅನೂನ ಆರ್ತ ಸತ್ವಕ್ಕೆ!

ಇದು ನೆನಪನ್ನು ಧನಾತ್ಮಕವಾಗಿ ಪರಿಷ್ಕರಿಸುವ ಸಾಹಿತ್ಯೋದ್ಯಮ. ಅನಾತ್ಮಕಥನದ ಒಂದು ಪ್ರಬಂಧದಲ್ಲಿ ನಾನು ಹೂಬಿಟ್ಟ ಚೆನ್ನ ಕೇಸರಿಯನ್ನು ಹಂಪಿಯ ಜೀವಂತಿಕೆಯ ಪ್ರತೀಕವಾಗಿ ಅಭಿವರ್ಣಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

 

‍ಲೇಖಕರು G

July 8, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. sritri

    ಹಳೆ ಘಟನೆ, ನೆನಪುಗಳನ್ನು ನಮನಮಗೆ ಬೇಕಾದಂತೆ (ಹಿತವೆನಿಸುವಂತೆ) ಮರುನಿರ್ಮಿಸಿಕೊಳ್ಳುತ್ತಾ ಹೋದರೆ ಇತಿಹಾಸಕ್ಕೆ ಏನರ್ಧ?

    ಪ್ರತಿಕ್ರಿಯೆ
    • hsv

      Dont bother about ITIHASA. We have to live in VARTAMANA. Think about future of the next generation. Please….We have not learnt any leson from itihasa. Please read a poem written by GSS on Itihasa.Itihasa ignores common man’s life.Itihasa is written abou kings, and their inhuman wars.No body knows the real picture.samaaja mattu shrIsaamaanyana hitavannu anulakShisi(nama namage bEkaadaMte alla) naavu itihaasavannu punar yOjisabEkaagide.vyakti kEMdritavaada nijavaada itihaasa saahityavE.raajariMda pOShitaraada “so called charitrakaararu” bareyuva birudaavaLiya bhajaavaNeyalla….

      ಪ್ರತಿಕ್ರಿಯೆ
  2. NagarajaM

    idu bahala sahajavaada chintane, pratyobbara anubhavavuu sahaa. naavu bhaaratiiyaru bahala abhimaanigalu(sentimental). ondu dampatigalaagi 40-50 varushagalu joteyalli kaledu, kashta ukha hanchikondu, yeradu deha ondu aatmavaagi nadedu obbarannu innobbaru agalidaaga aaguva anubhava avarige gottu. aadare yeenu maaduvudu ibbaruu ottige hoguvahaage illavalla kurtukotiyavarahaage. punyavantaru avaribbaruu.

    ಪ್ರತಿಕ್ರಿಯೆ
  3. Subramanya Hegde

    “ಪ್ರತಿಬಾರಿಯೂ ಯಾವುದೋ ಒಂದು ಸಂದರ್ಭದಲ್ಲಿ, ಒಂದು ನಿಶ್ಚಿತ ಕಾಲ ಘಟ್ಟದಲ್ಲಿ, ಒಂದು ನಿರ್ದಿಷ್ಟ ಪರಿಸರದ ಹಿನ್ನೆಲೆಯಲ್ಲೇ ನಾನವಳನ್ನು ಕಾಣುವುದು ಸಾಧ್ಯವಾಗುತ್ತಿತ್ತು. ಆಗ ಅನ್ನಿಸಿದ್ದು ನಾನು ಅನ್ನುವ ಅಸ್ತಿತ್ವ ಪರಿಮುಕ್ತವಾದುದಲ್ಲ; ಅದು ಒಂದು ಕಾಲ ಮತ್ತು ದೇಶಕ್ಕೆ ಬದ್ಧವಾದುದು.” bahaLa oLLeya drushTikOna. satya thaTTendu hoLedantide. nenapugaLa swaroopada bagge, asthitvada bagge ee lEkhanada vivaraNe tumba chennagide.

    ಪ್ರತಿಕ್ರಿಯೆ
  4. M.S.Rudreswaraswamy

    kaLeduhOda baduku nenapina kaNajaviddaMte. bEkaadare adannu itihaasa anni. alldei sihi, kahi, huLi-ogaru eallvU. muNdina baduku kaTTikoLLuvaaga, nenapugaLu sahakaari annuvudu satyavaadarU, ecchara irabEkaaguttade. kahi Ghatanegalu eccharikeya gaMteyaagabEkE vinaha, dveShakke mane maaDikoDabaaradu. idannE, HAV avaru tuMbaa sukShamavaagi avara lEKanadalli pratipaadisiruvudu. mareyabEku kahiyellavannu; aaga maatra kShamisuvudu saadyavaaguttae. Forget then you will forgive annuvudu idakkagiyE. oMdu saNNa saMgatiyannettikoMDu vivarisutta, manssina baagilu taTTuvudu HSV avarige siddhiside. nUrukaala baaLali avaru, hIge nagunagutta.

    ಪ್ರತಿಕ್ರಿಯೆ
  5. shama

    hsv avara I lEkhana priyavaayiotu. nenapina svarUpada bagge illi kelavu sUkShma nirIkShaNegaLive.

    ಪ್ರತಿಕ್ರಿಯೆ
  6. SumathiSK

    kaledu hoda itihasa ondu kshana kanna munde nintu kannanchu tevavagiddu sullalla. bhavaneya bugge ondu kshanakkadaru ukki kaviya bhavakke vandisida pari

    ಪ್ರತಿಕ್ರಿಯೆ
  7. hsv

    ಈ ಲೇಖನಕ್ಕೆ ಸ್ಪಂದಿಸಿದ ಎಲ್ಲ ಆಪ್ತರಿಗೂ, ವಿಶೇಷವಾಗಿ ನನ್ನ ಪ್ರಿಯ ಗೆಳೆಯರಾಗಿದ್ದ ಎನ್.ಎಸ್.ಸಿ ಅವರ ಮೊಮ್ಮಗ ಸುಬ್ರಹ್ಮಣ್ಯನ ಪ್ರತಿಸ್ಪಂದನಕ್ಕೆ ಹೇಗೆ ನನ್ನ ಸಂತೋಷ ಸೂಚಿಸಲಿ? Tkanks a lot.
    ಎಚ್ಚೆಸ್ವಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: