ಎಚ್ಚೆಸ್ವಿ ಬರೆಯುತ್ತಾರೆ: ಮತ್ತೆ ಮತ್ತೆ ಯುಗಾದಿ…

ಎಚ್.ಎಸ್.ವೆಂಕಟೇಶಮೂರ್ತಿ

 

ಯುಗಾದಿ ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೆ ನನಗೆ ಮೊದಲು ನೆನಪಾಗುವುದು ಬೇಂದ್ರೆಯವರ ಪದ್ಯ. ಯುಗಪರಿವರ್ತನೆಯ ಸಂದರ್ಭದ ಎಲ್ಲ ಬೆಡಗು ಬಿನ್ನಾಣ ವೈಭವದ ನಡುವೆಯೂ ಅಲ್ಲಿ ಕಾಣುವ ಒಂದು ವಿಷಾದದ ದನಿ ನನಗೆ ಮುಖ್ಯವೆನಿಸಿದೆ. ನಾವು ಅನೇಕ ಬಾರಿ ಕವಿತೆಯ ಈ ವಿಷಾದವನ್ನು ಗ್ರಹಿಸದೆಯೇ ಮುಂದೆ ಹೋಗಿಬಿಡಬಹುದು. ಕವಿತೆಯಲ್ಲಿ ಬೇಂದ್ರೆ ಬಹು ಮುಖ್ಯವಾದ ಒಂದು ಪ್ರಶ್ನೆಯನ್ನೆತ್ತಿದಾರೆ:

Photo Courtesy: Udaan Photo School

ವರುಷಕೊಂದು ಹೊಸತು ಜನ್ಮ

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ!

ಒಂದೆ ಒಂದು ಜನ್ಮದಲ್ಲಿ

ಒಂದೆ ಬಾಲ್ಯ ಒಂದೆ ಹರೆಯ

ನಮಗದಷ್ಟೆ ಏತಕೆ?

 

ನಿದ್ದೆಗೊಮ್ಮೆ ನಿತ್ಯ ಮರಣ

ಎದ್ದ ಸಲ ನವೀನ ಜನನ

ನಮಗೆ ಏಕೆ ಬಾರದೊ?

ಎಲೆ ಸನತ್ಕುಮಾರ ದೇವ!

ಸಲೆ ಸಾಹಸಿ ಚಿರಂಜೀವ!

ನಿನಗೆ ಲೀಲೆ ಸೇರದೊ?

 

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ

ಹೊಸತು ಹಸತು ತರುತಿದೆ

ನಮ್ಮನಷ್ಟೆ ಮರೆತಿದೆ!(೧೯೩೨)

 

ಪ್ರತಿ ಯುಗಾದಿಯೂ ಪ್ರಕೃತಿಗೆ ಹೊಸ ಬಾಲ್ಯ ಯೌವನವನ್ನು ಕರುಣಿಸುತ್ತಾ ಇದೆ. ಆದರೆ ನಮಗೆ ಮಾತ್ರ ಒಂದೆ ಬಾಲ್ಯ ಒಂದೆ ಹರೆಯ! ಮತ್ತೆ ಮತ್ತೆ ನವೀಕರಣಗೊಳ್ಳುವ ಉಲ್ಲಾಸ ನಮಗೆ ಏಕೆ ಇಲ್ಲ? ಬೇಂದ್ರೆಯ ಪದ್ಯದಲ್ಲೇ ಇದಕ್ಕೆ ಒಂದು ಪರಿಹಾರವೂ ಸೂಚಿತವಾಗಿದೆ. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ಎಂದು ನಾವು ತೀವ್ರವಾಗಿ ಭಾವಿಸುವುದು ಸಾಧ್ಯವಾದರೆ ಮನುಷ್ಯನಿಗೆ ವರುಷಕೆ ಒಂದಲ್ಲ, ಮುನ್ನೂರರವತ್ತೈದು ಯುಗಾದಿಗಳಾಗಬಹುದು! ಅದನ್ನು ನಾವು ಭಾವಿಸ ಬೇಕಷ್ಟೆ! ಹೀಗೆ ಪ್ರತಿ ಸೂರ್ಯೋದಯವೂ ದೇವರ ದಯ ಎಂದು ಭಾವಿಸಿದಾಗ, ನಮ್ಮನ್ನು ಯುಗಾದಿ ಮರೆತಿಲ್ಲ ಎಂಬ ಸಮಾಧಾನವು ಉಂಟಾದೀತು. ಇದು ಬೇಂದ್ರೆಯವರ ಅತ್ಯಂತ ನವೋನವ ವಿಚಾರ. ಪ್ರತಿಯೊಂದು ಪದ್ಯವೂ ರೂಢಿಯ ಚಪ್ಪರದಲ್ಲಿ ಹಾಯುತ್ತಾ, ನವೀನವಾದ ಒಂದು ಅರ್ಥಗುಂಫನದ ಕಡೆ ತನ್ನ ಕುಡಿಚಾಚಬೇಕೆಂದು ನಾನು ನಿರೀಕ್ಷಿಸುತ್ತೇನೆ. ಹಾಡಿದ್ದೇ ಹಾಡುವುದಾದರೆ ಅದು ಕಿಸುಬಾಯಿದಾಸನ ಪುನರಾವತನೆಯ ಪುಂಗಿ ಮಾತ್ರ ಆದೀತು. ಮಹತ್ವದ ಕವಿಗಳ ಘನತೆ ಇರುವುದೇ ಅವರು ಹೇಗೆ ಜಡ್ಡುಗಟ್ಟಿದ ರೂಢಿಯನ್ನು ತಮ್ಮ ಹೊಸ ಅರ್ಥವಂತಿಕೆಯಿಂದ ಮೀರಬಲ್ಲರು ಎಂಬುದರಲ್ಲಿ ಇರುತ್ತದೆ.

ಈ ದೃಷ್ಟಿಯಲ್ಲಿ ನೋಡಿದಾಗ ಆಚಾರ್ಯ ಬಿ.ಎಂ.ಶ್ರೀ ಅವರ ವಸಂತ (ನ್ಯಾಶ್ ಕವಿಯ ಸ್ಪ್ರಿಂಗ್ ಕವಿತೆಯ ಅನುವಾದ)ಕವಿತೆಯನ್ನು ಕೇವಲ ಯುಗಾದಿಯ ಗೂಟಕ್ಕೆ ಕಟ್ಟಿ ಹಾಕಲಿಕ್ಕೆ ಬರುವುದಿಲ್ಲ.

 

ವಸಂತ ಬಂದ ಋತುಗಳ ರಾಜ ತಾ ಬಂದ

ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ

ಚಳಿಯನು ಕೊಂದ ಹಕ್ಕಿಗಳುಲಿಗಳೆ ಚೆಂದ

ಕುವೂ ಜಗ್ ಜಗ್ ಪುವ್ವೀ ಟುವ್ವಿಟ್ಟವೂ!

 

ಈ ಕವಿತೆಯು ಯುಗಾದಿಯನ್ನು-ಪರ್ಯಾಯವಾಗಿ ವಸಂತವನ್ನು-ಋತುರಾಜನೆಂದು ಕರೆಯುತ್ತಾ ವರ್ತಮಾನಕ್ಕೆ ಸ್ವಾಗತಿಸುತ್ತಾ ಇದೆ. ತನ್ನ ಋತುಸಂಹಾರದಲ್ಲಿ ಕಾಳಿದಾಸನೂ ವಸಂತವನ್ನು ರಾಜಪುರುಷನೆಂದೇ ಪರಿಭಾವಿಸುತ್ತಾನೆ. ಋತುಮಾನಕ್ಕೆ ಹೀಗೆ ಪುರುಷತ್ವಾರೋಪ ಮಾಡುವುದು ಇಲ್ಲಿ ಗಮನಿಸಬೇಕಾದ ಅಂಶ. ಜೊತೆಗೆ ಇಡೀ ಪದ್ಯವು ಬಿ.ಎಂ.ಶ್ರೀ ಹೊಸದಾಗಿ ಪ್ರಾರಂಭಿಸಿದ್ದ ನವೋದಯದ ಸಂಭ್ರಮವನ್ನೂ ಧ್ವನಿಸುತ್ತಿದೆ ಎಂಬುದನ್ನು ಆವತ್ತಿನ ಸಾಹಿತ್ಯಕ ಸಂದರ್ಭಬಲ್ಲವರಿಗೆ ವಿವರಿಸಬೇಕಾಗಿಲ್ಲ. ಹಕ್ಕಿಗಳುಲಿಗಳೆ ಚಂದ ಎಂಬ ಸಾಲನ್ನು ಗಮನಿಸಿ! ನವೋದಯದ ಸಂಭ್ರಮವನ್ನು ಮುಂದೆ ಬೇಂದ್ರೆ ಸಹ ನೂರು ಮರ ನೂರು ಸ್ವರ ಒಂದೊಂದೂ ಅತಿ ಮಧುರ ಎಂದು ಹಕ್ಕಿಗಳ ಕೂಗಿನ ಪರಿಭಾಷೆಯಲ್ಲಿ ಗ್ರಹಿಸಿದ್ದನ್ನು ನಾವಿಲ್ಲಿ ನೆನೆಯ ಬಹುದು.

 

ಮತ್ತೆ ಮತ್ತೆ ಬರುತ್ತಿರುವ ಯುಗಾದಿಯೇನೋ ಅದೆ! ಆದರೆ ಅದನ್ನು ಗ್ರಹಿಸುವ ಕವಿನೋಟ ಒಂದಕ್ಕಿಂತ ಒಂದು ಭಿನ್ನ. ಒಂದು ವಸ್ತುವನ್ನು ಅನಂತವಾಗಿಸುವುದೇ ಕಾವ್ಯಗ್ರಹಿಕೆಯ ಹುನ್ನಾರವಲ್ಲವೇ? ಜಿ.ಎಸ್.ಶಿವರುದ್ರಪ್ಪನವರ ಈ ಸಾಲುಗಳನ್ನು ಗಮನಿಸಿ:

 

ಇಗೋ ಬಂತು ಹೊಸ ವರುಷವು ಮರ ಮರದಲಿ

ಹೂ ಚಿಗುರಿನ ಹಿಗ್ಗು

ಹಗಲಿರುಳಿನ ಬಾಗಿಲ ಬಳಿ ನಾ ಬಿದ್ದಿರುವೆನು

ಕಾಲೊರಸುವ ರಗ್ಗು.

 

ಎದೆ ನಡುಗಿಸುವ ಕಲ್ಪನೆಯಿದು. ಯುಗಾದಿ ಬಂತು ಎಂಬುದನ್ನು ಮಾತ್ರ ನಾವು ಗಮನಿಸುತ್ತಿದ್ದೇವೆ. ಆದರೆ ಪ್ರತಿಯುಗಾದಿಯೂ ನಮ್ಮ ಆಯುಷ್ಯದ ಒಂದು ವರುಷವನ್ನು ನುಂಗಿರುವುದು ನಮ್ಮ ಅರಿವಿಗೆ ಎಲ್ಲಿ ಬರುತ್ತದೆ? ಹಿಗ್ಗು ಎನ್ನುವ ರಮ್ಯ ಉದ್ಗಾರಕ್ಕೆ ರಗ್ಗು ಎಂಬ ಒರಟಾದ ಮತ್ತು ಅರಮ್ಯವಾದ ಶಬ್ದವನ್ನು ಪ್ರಾಸವಾಗಿ ಜೋಡಿಸುತ್ತಾ ಕವಿ ಈ ಕಟುವಾಸ್ತವದ ದಾರುಣ ಅರಿವನ್ನು ನಮ್ಮ ಗಮನಕ್ಕೆ ತರುತ್ತಾ ಇದ್ದಾರೆ.

 

ಅಗದೀ ರೊಮ್ಯಾಂಟಿಕ್ ಎಂದು ನಾವು ಗ್ರಹಿಸುವ ಕೆ ಎಸ್ ನರಸಿಂಹ ಸ್ವಾಮಿ ಅವರ ಯುಗಾದಿ ಪದ್ಯದಲ್ಲಿ ಕವಿಯ ಜೀವನದರ್ಶನ ಅಯಾಚಿತವಾಗಿ ಅಪರಿಚಿತರಂತೆ ಕವಿಯ ಪರಿಚಿತ ಸಾಮಗ್ರಿಯ ನಡುವೆ ಹಾದು ಹೋಗುವ ಚೋದ್ಯವೇ ಚೋದ್ಯ. ಇಡೀ ಪದ್ಯವನ್ನು ಅವರು ತಮ್ಮ ಕಾವ್ಯದ ಬಹು ಮುಖ್ಯ ದರ್ಶನವಾದ ನೆಲದ ಪ್ರೀತಿ ಮತ್ತು ನೆಲದ ಸಂತಾಪವನ್ನು ಸೂಚಿಸಲು ತಮ್ಮ ಅರಿವಿಲ್ಲದೆಯೇ ಬಳಸಿದ್ದಾರೇನೋ ಅನ್ನಿಸಿಬಿಡುತ್ತದೆ. ಬೋಳುದಾರಿಯಲ್ಲಿ ಇದ್ದಕ್ಕಿದ್ದಂತೆ ಥಟ್ಟನೆ ಬರುವ ದೀಪದ ಕಂಭಗಳಂತೆ ಇವೆ ಇಂಥ ಸಾಲುಗಳು:

 

ಹುಟ್ಟು ಬೆಂಕಿ ನಮ್ಮ ತಾಯಿ;

ಉಟ್ಟ ಸೀರೆ ಸಾಗರ.

ಅವಳ ಮುಗಿಲ ತುರುಬಿನಲ್ಲಿ

ಹೆಡೆಯ ತೆರೆದ ನಾಗರ.

 

ಉಟ್ಟ ಸೀರೆ ಸಾಗರ ಎನ್ನುವುದು ಸಮುದ್ರವಸನೇ ದೇವಿ ಎಂಬ ಸಾಲಿನಿಂದ ಪ್ರೇರಿತವಾಗಿದೆ ಅಂದುಕೊಳ್ಳೋಣ. ಆದರೆ ಹುಟ್ಟು ಬೆಂಕಿ ನಮ್ಮ ತಾಯಿ-ಎಂಬ ಸಾಲು ಎಲ್ಲಿಂದ ಬಂತು? ಭೂತಾಯಿಯ ಒಳಗುದಿಯನ್ನು ಇದಕ್ಕಿಂತ ಧ್ವನಿಪೂರ್ಣವಾಗಿ ಸೂಚಿಸುವುದು ಸಾಮಾನ್ಯ ಕವಿಯಿಂದ ಸಾಧ್ಯವೇ? ಅವಳ ಮುಗಿಲ ತುರುಬಿನಲ್ಲಿ ಹೆಡೆ ತೆರೆದ ನಾಗರ ಎಂಬ ಸಾಲಲ್ಲಿ ಬರುವ ನಾಗರ ಪದ ಕೇವಲ ನಾಗ ಸರ್ಪವನ್ನು( ಸಮುದ್ರದ ಅಲೆಗಳನ್ನು) ಮಾತ್ರ ಸೂಚಿಸುತ್ತಿದೆಯೇ? ಅದು ಗಗನಚುಂಬಿಗಳಿಂದ ಕಿಕ್ಕಿರಿದಿರುವ ನಗರ ಸಂಸ್ಕೃತಿಯನ್ನೂ ಸೂಚಿಸುತ್ತಿಲ್ಲವೇ? ಹಾವಿನ ಹೆಡೆಯಿಂದ ತಲೆ ತುರುಸಿಕೊಳ್ಳುವ ದುರಂತ ಸಂದರ್ಭದ ಸೂಚಿಯಾಗಿಯೂ ಇದನ್ನು ನೋಡಬಹುದಲ್ಲವೇ? ನಗರೀಕರಣದ ದುರಂತವನ್ನೂ ಈ ಸಾಲುಗಳು ಸೂಚಿಸುತ್ತಿವೆ ಎಂದು ಗ್ರಹಿಸುವುದು ತಪ್ಪಾಗಲಾರದು.

 

ಕುವೆಂಪುವಿಗೋ ಯುಗಾದಿ ಹೊಸ ನಿರ್ಣಯಗಳ ಪರ್ವದಿನವಾಗಿ ಪರಿಣಮಿಸುತ್ತದೆ. ಯುಗಾದಿ ಜಗತ್ತಿಗೆ ಏನು ಕೊಡುತ್ತದೆ ಎಂಬುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಾವು ಯುಗಾದಿಗೆ ಏನು ಕೊಡುತ್ತೇವೆ ಎಂಬುದು! ಪ್ರಕೃತಿಯಿಂದ ನಾವು ಸ್ವೀಕರಿಸಿದರೆ ಮಾತ್ರ ಸಾಲದು. ಯುಗಾದಿ ಕೇವಲ ಬಹಿರಂಗದ ಸಂಭವವಲ್ಲ. ಅಂತರಂಗದಲ್ಲಿ ನಾವು ಹೊಸ ಯುಗಾದಿಯನ್ನು ನಿರ್ಮಿಸಬೇಕಾಗಿದೆ. ಕುವೆಂಪು ಕರೆಕೊಡುತ್ತಾರೆ:

 

ಗತವರ್ಷದ ಮೃತ ಪಾಪವ ಸುಡು ತೊರೆ

ಅಪಜಯ ಅಪಮಾನಗನು ಬಿಡು ಮರೆ

ಕಳಚಲಿ ಬೀಳಲಿ ಬಾಳಿನ ಹಳೆ ಪೊರೆ

ನವ ವತ್ಸರವನು ಕೂಗಿ ಕರೆ!

 

ಸಂಶಯ ದ್ವೇಷಾಸೂಯೆಯ ದಬ್ಬು

ಸುಖ ಶ್ರದ್ಧಾ ಧೈರ್ಯಗಳನು ತಬ್ಬು

ಉರಿಯಲಿ ಸತ್ಯದ ಊದಿನ ಕಡ್ಡಿ

ಚಿರ ಸೌಂದರ್ಯುದ ಹಾಲ್ಮಡ್ಡಿ!

 

ತೊಲಗಲಿ ದುಃಖ ತೊಲಗಲಿ ಮತ್ಸರ

ಪ್ರೇಮಕೆ ಮೀಸಲು ನವ ಸಂವತ್ಸರ!

ನಮ್ಮೆದೆಯಲ್ಲಿದೆ ಸುಖನಿಧಿಯೆಂದು

ಹೊಸ ಹೂಣಿಕೆಯನು ತೊಡಗಿಂದು!(೧೯೩೩)

 

ಕನ್ನಡದ ಯುಗಾದಿ ಕವನಗಳಲ್ಲೇ ತುಂಬ ಭಿನ್ನವೆಂದು ತೋರುವುದು ಗೋಪಾಲಕೃಷ್ಣ ಅಡಿಗರ ಪದ್ಯ. ಆ ಕವಿತೆ ಪ್ರಾರಂಭವಾಗುವುದು ಹೀಗೆ!

 

ಹಳೆಮನೆಯ ಮುರುಕು ಜಂತಿಯ ಮೇಲೆ ಮುದಿಗೂಬೆ

(ಹಗಲಿರುಳು ಗೊರಕೆ, ಗೊಣಗಾಟ ಕಣೊ, ಪಾಪಿ-ದ್ರಾಬೆ!)

ಮೊಳೆತರೂ ಬೆಳಕು, ಮೂಡಲಲ್ಲಿ ನೆತ್ತರ ಧಾರೆ

ಧುಮುಕಿದರು, ಗಿಡಗಂಟಿ ನರನಾಡಿಯಲ್ಲಿ ಹೊಸ ಉದಯರಾಗೋದ್ವೇಗ

ಕೂ ಎಂದರೂ ಕೂಡ

ಮಬ್ಬು ಹರಿಯದು ಹರಿಯದಿದರ ಸರಪಣಿ ಕೂಗು, ಸೋಗು.

 

ಈ ಕವಿತೆಯ ಹಿಂದೆ ಬೇಂದ್ರೆಯ ಬೆಳಗು ಪದ್ಯದ ನೆನಪಿದೆ. ಬೆಳಗಿನ ವರ್ಣನೆಯಲ್ಲಿ ಗಿಡಗಂಟೆ, ಕೋಗಿಲೆಯ ಕುಹೂ ಎಲ್ಲವನ್ನೂ ಅರಮ್ಯಗೊಳಿಸಿ ನೋಡಲಾಗಿದೆ. ಜೊತೆಗೆ ಕೋಗಿಲೆಯ ಕುಹೂ ಜತೆಯೇ ಮುದಿಗೂಬೆಯ ಕೂಗೂ ಕವಿತೆಗೆ ಗ್ರಹಿಸಬೇಕಾದ್ದಿದೆ. ಸಿದ್ಧವಸ್ತುವನ್ನು ಸಿದ್ಧಕ್ರಮದಲ್ಲಿ ನಿವೇದಿಸುವುದೇ ರೂಢಿಯಾಗಿದ್ದಾಗ ಅದನ್ನು ಸಂಪೂರ್ಣ ಬದಲಿಸಿ ಹೊಸ ನೆಲೆಯಲ್ಲಿ ನೋಡುವ ಯತ್ನ ಇಲ್ಲಿ ಕಂಡು ಬರುತ್ತದೆ. ಸುಕುಮಾರ ಕಲ್ಪನೆಯ ಭರಾಟೆಯಲ್ಲಿ ಕಠೋರ ವಾಸ್ತವಗಳನ್ನು ಮರೆಯಬೇಡಪ್ಪ ಎನ್ನುತ್ತದೆ ಈ ಕವಿತೆ. ಮಂಗಲ ಅಮಂಗಲಗಳೆರಡನ್ನೂ ಸಮಭಾವದಲ್ಲಿ ಸ್ವೀಕರಿಸಿ ಓದುಗರ ಮುಂದಿಡುವ ಕವಿತೆ ಜಡ್ಡುಗಟ್ಟಿದ ವಸ್ತುವನ್ನು ಸುಮ್ಮನೆ ಗತಾನುಗತಿಕವಾಗಿ ಭಾವಿಸಿ ಫಲವಿಲ್ಲ. ಅದನ್ನು ಬುದ್ಧಿಯ ನಿಕಷಕ್ಕೆ ಹಚ್ಚಿ ಯೋಚಿಸು ಎನ್ನುತ್ತದೆ. ಕಡೆಯಲ್ಲಿ ಕವಿತೆ ಮನುಷ್ಯನ ಕ್ರಿಯಾಶೀಲ ಜವಾಬುದಾರಿ ನಿರ್ವಹಣೆಗೆ ಆಹ್ವಾನ ಕೊಡುತ್ತದೆ. ಆಮೋದಕೀಗ ಪೂರ್ಣವಿರಾಮ ಎನ್ನುವುದೇ ಕವಿತೆಯ ದರ್ಶನವಾಗಿದೆ. ಪ್ರಕೃತಿ ಕೊಡುವುದನ್ನು ಕೊಡುತ್ತದೆ ನಿಜ! ಆದರೆ ನೀನು ಮಾಡ ಬೇಕಾದದ್ದನ್ನು ಮಾಡುವುದು ಕೂಡಾ ಬದುಕು ಹಸನಾಗಲು ಅಷ್ಟೇ ಅಗತ್ಯ ಎಂದು ಯುಗಾದಿಯ ಸಂದರ್ಭದಲ್ಲಿ ಮಾವು, ಹೊಂಗೆ, ಹೂವು, ಚಿಗುರು, ಕೋಗಿಲೆ ಕುಕಿಲುಗಳನ್ನು ಸ್ವಲ್ಪ ಬದಿಗೆ ತರಿಸಿ ವಾಸ್ತವದ ಕಠೋರತೆಯ ಕಡೆ ನಮ್ಮ ಮನಸ್ಸನ್ನು ಸೆಳೆಯುತ್ತದೆ ಎನ್ನುವುದು ಅಡಿಗರ ಕವಿತೆಯ ವಿಶೇಷವಾಗಿದೆ.

 

ಹಿಂದಿನ ಕವಿಗಳು ಯುಗಾದಿಯನ್ನು(ವಸಂತ ಋತುವನ್ನು) ರಾಜಪುರುಷನೆಂದು ಭಾವಿಸಿ ಅವನಿಗೆ ಪರಾಕು ಹೇಳಿದರೆ ಆಧುನಿಕ ಕವಿ ಪ್ರಜ್ಞೆ ಯುಗಾದಿಯನ್ನು ಅಕಸ್ಮಾತ್ ವರ್ಷದ ನಂತರ ಮನೆಗೆ ಬಂದ ಸಾಮಾನ್ಯ ಅತಿಥಿಯಂತೆ ಪರಿಭಾವಿಸುತ್ತದೆ. ಕಣವಿಯವರ ಈ ಸಾಲುಗಳನ್ನು ಗಮನಿಸಿ:

 

ಕರೆಯದಿದ್ದರೂ ನೀನು ಬಂದೇ ಬರುವಿ

ಅಲ್ಲವೇ ಯುಗಾದಿ? ಬಾ ಮತ್ತೆ ಬಾ ಯುಗಾದಿ;

ಎಂಥ ಬಿಸಿಲೊಳು ಬಂದೆ!

ಬೇಕೆ ಬಾಯಾರಿಕೆಗೆ ಬೇವು ಬೆಲ್ಲ?

ಚಹಕೆ ಸಕ್ಕರೆಯಿಲ್ಲ; ನಡೆದೀತೆ ಬರಿಯ ತಣ್ಣೀರ ಗುಟುಕು?

 

ಯುಗಾದಿಯ ಸಂದರ್ಭಕ್ಕೆ ಆಧುನಿಕ ಕಾಲವನ್ನು ಆವಾಹಿಸುವುದು ಕಣವಿಯವರ ಕವಿತೆಯ ಹುನ್ನಾರವಾಗಿದೆ. ಕೊನೆಗೆ ಬೋಧಿ ಮತ್ತು ಕಲ್ಯಾಣದ ಆಶಯಗಳನ್ನು ಕವಿತೆ ಮರೆಯುವುದಿಲ್ಲ.ಇಲ್ಲಿ ಕಾಣುವ ಭಾಷೆ ಲಯ ಚಿತ್ರ ಧೋರಣೆ ಎಲ್ಲ ಹೊಸವಾಗಿವೆ-ಹೊಸ ಯುಗಾದಿಯ ಹಾಗೆಯೇ!

 

ಇಡೀ ಕನ್ನಡ ಯುಗಾದಿ ಕವನಗಳ ಸಂದರ್ಭದಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿರುವ ಕವಿತೆ ಪು.ತಿ.ನ ಅವರ ಪರ್ವೋಲ್ಲಾಸ. ಯುಗಾದಿಯಂಥ ಪರ್ವ ದಿನವು ಹೇಗೆ ಮುಪ್ಪಿಗೆ ಯೌವನವನ್ನು ಕರುಣಿಸುತ್ತದೆ ಎನ್ನುವುದನ್ನು ಈ ಹಿರಿಯ ಕವಿಯ ಪರ್ವೋಲ್ಲಾಸ ಧ್ವನಿಸುತ್ತಾ ಇದೆ.

 

ಮುತ್ತಿಟ್ಟಳಿಂದೆನಗೆ ನಡು ಹರೆಯದವಳು

ನಟ್ಟ ನಡು ಹಗಲಿನೊಳೆ ನನ್ನ ಮನೆಯಾಕೆ

ಕಾಡದೆಯೆ ಬೇಡದೆಯೆ ಎಂದೂ ನೀಡದ ಲೋಭಿ

ದುಂಡು ಮೊಗ ಅಗಲಗಣ್ ಮಿಸುನಿಮೈ ಸಿಂಗಾರಿ(೧೯೯೨)

 

ಕವಿ ತಮ್ಮ ನಡುಹರೆಯದ ಹೆಂಡತಿ ಯುಗಾದಿಯ ನಡುಹಗಲಲ್ಲಿ ಮನೆಯಲ್ಲಿ ಕಿರಿಯರು ಯಾರೂ ಇಲ್ಲದ ಹೊತ್ತಲ್ಲಿ, ತಾನಾಗಿ ಬಂದು ಕವಿಯ ಗಲ್ಲ ಹಿಡಿದೆತ್ತಿ ಮುತ್ತು ಕೊಡುತ್ತಾಳೆ! ಹಬ್ಬವು ಅವಳಲ್ಲಿ ಉಕ್ಕಿಸಿದ ಉಲ್ಲಾಸದ ಪರಿಣಾಮವದು! ಅದನ್ನು ಪರ್ವದ(ಅಂದರೆ ಹಬ್ಬದ) ಪವಾಡ ಎನ್ನುತ್ತಾರೆ ಪುತಿನ! ಒಂದೆ ಬಾಲ್ಯ ಒಂದೆ ಹರೆಯ ನಮಗದಷ್ಟೆ ಏತಕೆ? ಎಂಬ ಬೇಂದ್ರೆಯವರ ಕವಿತೆಯ ವಿಷಾದವನ್ನು ಪುತಿನ ಕವನವು ಪರಿಹರಿಸುತ್ತಿದೆ ಎನ್ನಿಸುವುದಿಲ್ಲವೇ?

 

ಇಂತಹ ಮುಪ್ಪಿಗೂ ಹೊಸ ಯೌವನವನ್ನು ಕರುಣಿಸುವ ಯುಗಾದಿಯನ್ನು ಮತ್ತೆ ನಾವು ಪ್ರೀತಿಯಿಂದ ಸ್ವಾಗತಿಸೋಣ!

 

********

 

 

‍ಲೇಖಕರು G

April 4, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. rAjashEkhar mAlUr

    superb analysis! especially ಒಂದೆ ಬಾಲ್ಯ ಒಂದೆ ಹರೆಯ ನಮಗದಷ್ಟೆ ಏತಕೆ…? Thanks a lot for giving a snapshot of all great poets…. jotege nimmadU oMdu padyaviddiddare chennittalvE mEShTre?

    ಪ್ರತಿಕ್ರಿಯೆ
  2. ಎಚ್ಚೆಸ್ವಿ

    ಅನಾತ್ಮ ಸಾಧ್ಯವಾದಷ್ಟು ಪರದೆಯ ಮರೆಯಲ್ಲಿ ಇರಬೇಕು….

    ಪ್ರತಿಕ್ರಿಯೆ
  3. ಎಂ.ಆರ್.ದತ್ತಾತ್ರಿ

    ಎಚ್ಚೆಸ್ವಿಯವರ ವಸಂತ ಕವಿತೆ ಕೂಡ ತುಂಬ ಚೆನ್ನಾಗಿದೆ:

    ವಸಂತ ಬರಲು ಮರ ಚಿಗುರುವುದೇಕೆ
    ಯಾರನು ಕೇಳಲಿ ನಾನು?
    ಗಾಳಿ ಬೀಸೆ ಹೂ ಕಂಪು ಬಯಲಿಗೆ
    ಯಾರನು ದೂರಲಿ ನಾನು?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: