ಎಚ್ಚೆಸ್ವಿ ಅನಾತ್ಮ ಕಥನ: ಮರೆಯಲಾಗದ ಆ ಅಗರಬತ್ತಿ ಕಂಪು..

ನಾನು ಓದಿದ್ದಿ ಮ.ಮಾ.ಮು ಹೈಸ್ಕೂಲಿನಲ್ಲಿ. ಅಂದರೆ ಮಲ್ಲಾಡಿಹಳ್ಳಿ ಮಾದಣ್ಣನವರ ಮುನಿಸಿಪಲ್ ಹೈಸ್ಕೂಲಿನಲ್ಲಿ. ೧೯೫೭ರಿಂದ ೫೯ರ ವರೆಗೆ. ನಾನು ಕನ್ನಡ ಮೀಡಿಯಮ್ ತಗೊಂಡಿದ್ದೆ. ಜಿ.ಸೀತಾರಾಮಯ್ಯ ಅಂತ ನಮ್ಮ ಹೆಡ್ ಮಾಸ್ಟರ್. ಅವರ ವೇಷ ವಿಶೇಷವಾಗಿದ್ದುದರಿಂದ ನನಗೆ ಈವತ್ತೂ ಅವರನ್ನು ಮರೆಯಲಿಕ್ಕೇ ಆಗಿಲ್ಲ. ಮಲ್ಲು ಪಂಚೆಯನ್ನು ಕಚ್ಚೆ ಹಾಕಿ ಉಡುತ್ತಾ ಇದ್ದರು. ಮೇಲೆ ಒಂದು ಕರೀ ಕೋಟು. ತೆಳ್ಳನೆಯ ಚಪ್ಪಲಿಗಳು. ಬಿಸಿಲು ಇರಲಿ ಇಲ್ಲದಿರಲಿ ತಲೆಯ ಮೇಲೆ ಒಂದು ಕೊಡೆ. ಅದು ಮಾಮೂಲಿ ಕರೀಕೊಡೆಯಾಗಿದ್ದರೂ ಅದರ ಮೇಲೆ ಒಂದು ಬಿಳಿ ಬಟ್ಟೆಯ ಕವರ್ ಇರುತ್ತಾ ಇತ್ತು.

ಇಂಥ ಕೊಡೆ ನಾನು ಮೊಟ್ಟಮೊದಲು ನೋಡಿದ್ದು ನಮ್ಮ ಎಚ್.ಎಮ್ ಕೈಯಲ್ಲೇ. ಅವರು ತಲೆಗೆ ಮೈಸೂರು ರುಮಾಲು ಹಾಕುತ್ತಿದ್ದುದರಿಂದ ಅವರ ತಲೆಯ ಮೇಲೆ ಕ್ರಾಪಿತ್ತೆ, ಅಥವಾ ಜುಟ್ಟಿತ್ತೆ, ಅಥವಾ ಬೊಕ್ಕ ತಲೆಯೇ ಯಾವುದೂ ತಿಳಿಯುವಂತಿರಲಿಲ್ಲ. ಅವರಿಗೆ ಬೇರೆ ವೇಷವನ್ನು ನಾನು ಕಲ್ಪಿಸುವುದೂ ಸಾಧ್ಯವಿರಲಿಲ್ಲ. ಕೊಂಚ ಉಬ್ಬುಹಲ್ಲಿದ್ದ ಒಳ್ಳೆ ಕೆಂಬಿಳಿ ಬಣ್ಣದ ಅವರು ಹಣೆಯ ಮೇಲೆ ಸಣ್ಣಗೆ ಮತ್ತು ದುಂಡಗೆ ಒಂದು ಸಾದು ಇಟ್ಟುಕೊಳ್ಳುತ್ತಿದ್ದರು. ಬಂದಿದ್ದೇನೇಯೇ, ಹೋದದ್ದೇನೆಯೇ, ಕೊಟ್ಟಿದ್ದೇನೆಯೇ ಎಂದು ಯೇ ಸೇರಿಸಿ ದೀರ್ಘವೆಳೆದು ಮಾತಾಡುವುದು ಅವರ ರೂಢಿಯಾಗಿತ್ತು.

ಅವರು ನಮಗೆ ಭೌತ ಶಾಸ್ತ್ರ ತೆಗೆದುಕೊಳ್ಳುತ್ತಿದ್ದರು. ತಪ್ಪು ಉತ್ತರ ಕೊಟ್ಟವರಿಗೆ ಕೈ ಚಾಚಿಸಿ ಪೆಟ್ಟು ಹಾಕಲು ಅವರ ಬಳಿ ಒಂದು ಮೋಟಾದ ಮತ್ತು ದುಂಡನೆಯ ಧಪ್ತರಕ್ಕೆ ಗೆರೆ ಹಾಕುವ ರೂಲುಕೋಲು ಇರುತ್ತಿತ್ತು. ಅದನ್ನು ತರದೆ ಅವರು ತರಗತಿಗೆ ಬಂದದ್ದು ನನಗೆ ನೆನಪಾಗುತ್ತಿಲ್ಲ. ಅವರು ಅಂಥ ಒಳ್ಳೇ ಟೀಚರ್ ಕೂಡ ಆಗಿರಲಿಲ್ಲ. ಆದರೆ ಅವರ ಶಿಸ್ತು ನಮ್ಮಲ್ಲಿ ಅವರ ಬಗ್ಗೆ ಗೌರವ ಹುಟ್ಟಿಸಿತ್ತು. ಅವರ ಬಗ್ಗೆ ತಿಳಿದ ಕೆಲವು ಬೇರೆ ಸಂಗತಿಗಳು ಅವರ ಬಗ್ಗೆ ನಮ್ಮ ಗೌರವ ಇಮ್ಮಡಿಯಾಗುವಂತೆ ಮಾಡಿದ್ದವು. ನಮ್ಮದು ಸರಕಾರಿ ಅನುದಾನದ ಶಾಲೆಯಾಗಿದ್ದರೂ ಸರಿಯಾಗಿ ಗ್ರಾಂಟ್ಸ್ ಬರುತ್ತಾ ಇರಲಿಲ್ಲ. ಹಾಗಾಗಿ ಎರಡು ಮೂರು ತಿಂಗಳಾದರೂ ನಮ್ಮ ಮೇಷ್ಟ್ರುಗಳಿಗೆ ಸಂಬಳ ಸಿಗುತ್ತಾ ಇರಲಿಲ್ಲ. ಆಗೆಲ್ಲಾ ಎಚ್ಚೆಮ್ ತಮ್ಮ ಊರಿಂದ ಹಣ ತರಿಸಿ ಮೇಷ್ಟ್ರುಗಳಿಗೆ, ಅಟ್ಟೆಂಡರುಗಳಿಗೆ ಸಂಬಳ ಕೊಡುತ್ತಾರೆ ಎಂದು ವದಂತಿ ಹಬ್ಬಿತ್ತು.

ಹಾಗೆ ಸಂಬಳ ಕೊಡುವಾಗಲೂ ಅವರು ಒಂದು ಕ್ರಮ ಅನುಸರಿಸುತ್ತಾ ಇದ್ದರಂತೆ. ಕೆಳ ದರ್ಜೆಯ ನೌಕರರಿಗೆ ಪೂರ್ಣ ಸಂಬಳ. ಜೂನಿಯರ್ ಅಧ್ಯಾಪಕರಿಗೆ ಭಾಗಶಃ ಸಂಬಳ. ಸೀನಿಯರ್ರುಗಳಿಗೆ ಇನ್ನೂ ಸ್ವಲ್ಪ ಕಮ್ಮಿ. ಆದರೆ ಯಾರೂ ಉಪವಾಸ ಬೀಳದಂತೆ ಅವರು ನೋಡಿಕೊಳ್ಳುತ್ತಾರೆ ಎಂಬುದು ವಿದ್ಯಾರ್ಥಿಗಳಲ್ಲಿ ಪ್ರಚಲಿತವಾದ ಸಂಗತಿಯಾಗಿತ್ತು. ಅವರು ಪಾಠ ಹೇಗೇ ಮಾಡಲಿ ಅವರ ಈ ಔದಾರ್ಯ ನಮ್ಮಲ್ಲಿ ಅನೇಕರಿಗೆ ಅವರಲ್ಲಿ ಗೌರವ ಮೂಡಲು ಕಾರಣವಾಗಿತ್ತು. ನಮ್ಮ ಎಚ್ಚೆಮ್ ಬಗ್ಗೆ ಇನ್ನೊಂದು ವಿಶೇಷ ಸಂಗತಿ ಹೇಳಬೇಕು. ನಮ್ಮ ಸ್ಕೂಲಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಿದ್ದವು ಎಂದು ನಾನು ಮೊದಲೇ ಹೇಳಿದ್ದೇನೆ. ಎಕೆ, ಎಡಿ ಮತ್ತು ಬೋವಿ ಹಾಸ್ಟೆಲ್ಲಿಂದ ಬರುವ ಹೆಚ್ಚು ಹುಡುಗರು ಇಂಗ್ಲಿಷ್ ಮೀಡಿಯಮ್ ತೆಗೆದುಕೊಂಡಿದ್ದರು. ಅವರ ಜೊತೆಯಲ್ಲಿ ಇಂಗ್ಲಿಷ್ ಮೀಡಿಯಮ್ ತೆಗೆದುಕೊಳ್ಳುತ್ತಿದ್ದ ಇತರ ಮಕ್ಕಳೆಂದರೆ ಮುಸ್ಲಿಮ್ ಮಕ್ಕಳು. ಉಳಿದ ಮಕ್ಕಳು ಸಾಮಾನ್ಯವಾಗಿ ಕನ್ನಡ ಮೀಡಿಯಮ್ನಲ್ಲಿದ್ದರು.

ಆಶ್ಚರ್ಯವೆಂದರೆ ಸ್ವತಃ ಎಚ್ಚೆಮ್ ಮಗ ನಮ್ಮ ಜತೆಯಲ್ಲಿ ಕನ್ನಡ ಮೀಡಿಯಮ್ನಲ್ಲೇ ಓದುತ್ತಾ ಇದ್ದ. ಅದಕ್ಕೆ ಕಾರಣ ಏನು ಎಂಬುದು ನಮಗೆ ಸ್ಪಷ್ಟವಾಗಿರಲಿಲ್ಲ. ಶಂಕರನಾರಾಯಣರಾವ್ ಅಂತ ಆ ಹುಡುಗನ ಹೆಸರು. ಸ್ಕೂಲಿಗೆ ಹೋದ ಮೊದಲ ದಿನವೇ ಅವನ ಪರಿಚಯವಾಯಿತು. ನಾವಿಬ್ಬರೂ ಮೊದಲ ಬೆಂಚಲ್ಲೇ ಕುಳಿತುಕೊಳ್ಳಿತ್ತಿದ್ದೆವು. ಜೊತೆಗೇ ಫುಟ್ ಬಾಲ್ ಆಡುತ್ತಿದ್ದೆವು. ಹೆಚ್ಚು ಅಂಕ ಪಡೆಯಲು ನಮ್ಮ ನಡುವೆ ತೀವ್ರವಾದ ಸ್ಪರ್ಧೆ ಇರುತ್ತಾ ಇತ್ತು. ನಮ್ಮ ಜೊತೆಯಲ್ಲಿ ಓದುತ್ತಿದ್ದ ಇತರ ಕೆಲವು ಹುಡುಗರ ನೆನಪಿದೆ. ಲಕ್ಷ್ಮೀವೆಂಕಟೇಶ ಅಂತ ಒಬ್ಬ ಸುಂಕದವರ ಮನೆಯ ಹುಡುಗ. ಮುತ್ತಿನ ಹಾಗೆ ಅಕ್ಷರ ಬರೆಯುತ್ತಿದ್ದವನು. ಇನ್ನೊಬ್ಬ ರೇಂಜರ್ ಮಗ ದಿವಾಕರ. ಎರಡನೇ ಬೆಂಚಲ್ಲಿ ಕೂತುಕೊಳ್ಳುತ್ತಿದ್ದ ಬೆಲ್ಲದ ಮುರುಗೇಂದ್ರಯ್ಯ. ತುಂಬ ಎತ್ತರ ಇದ್ದ ಶಿವರುದ್ರಯ್ಯ ಎಂಬ ಹುಡುಗ. ಅವನು ತುಂಬ ಎತ್ತರ ಇದ್ದುದರಿಂದಲೋ ಏನೋ ಅವನಿಗೆ ಬೆನ್ನು ಬಾಗಿಸಿ ನಡೆಯುವುದು ಅಭ್ಯಾಸ ಆಗಿತ್ತು. ಮೂರನೇ ಬೆಂಚಲ್ಲಿ ನಮ್ಮೂರಿಂದ ನನ್ನ ಜೊತೆ ಓದಲು ಬಂದಿದ್ದ ಹಾಲಯ್ಯ ಎಂಬ ಹುಡುಗ ಇದ್ದ. ಇನ್ನೊಬ್ಬ ಎಲ್.ಕೃಷ್ಣರಾವ್. ಕಷ್ಟಪಟ್ಟು ಓದಿ ಯಾವಾಗಲೂ ಹೆಚ್ಚು ಅಂಕ ತೆಗೆದುಕೊಳ್ಳುವ ಹುನ್ನಾರದಲ್ಲಿರುತ್ತಿದ್ದ ಹುಡುಗ.ಅವನೂ ಓದಿನಲ್ಲಿ ತುಂಬಾ ಚುರುಕಾಗಿದ್ದ. ರುದ್ರಪ್ಪ, ತಿಪ್ಪಣ್ಣ,ಎಕೆ ಹಾಸ್ಟೆಲ್ಲಿಂದ ಬರುತ್ತಾ ಇದ್ದರು. ಅವರು ನನಗೂ ಮತ್ತು ಶಂಕರ್ಗೂ ತುಂಬ ಆಪ್ತ ಗೆಳೆಯರಾದುದರಿಂದ ನಾವು ಬಿಡುವಿನ ವೇಳೆ ಅವರ ಹಾಸ್ಟೆಲ್ಲಿಗೆ ಲೆಕ್ಖ ಮಾಡಲು ಹೋಗುತ್ತಾ ಇದ್ದೆವು.

ತರಗತಿಯಲ್ಲಿ ಬಲಪಕ್ಕಕ್ಕೆ ಎರಡು ಬೆಂಚುಗಳನ್ನು ಪ್ರತ್ಯೇಕ ಹಾಕಿದ್ದರು. ಅಲ್ಲಿ ಹುಡುಗಿಯರು ಕುಳಿತುಕೊಳ್ಳುತ್ತಿದ್ದರು. ಸೌಭಾಗ್ಯಲಕ್ಷ್ಮಿ ಎಂಬ ಹುಡುಗಿ ಓದಿನಲ್ಲಿ ನಮಗೆ ಯಾವಾಗಲೂ ಸ್ಪರ್ಧೆ ಕೊಡುತ್ತಾ ಇದ್ದಳು. ಇನ್ನೊಬ್ಬಳು ಶಹರಹ್ಬಾನು ಎಂಬ ತುಂಬ ಚೆಲುವೆಯಾದ ಹುಡುಗಿ. ನಾಗರತ್ನ, ಮುನಿಷಾದ್ ಬಾನು, ಭಾರ್ಗವಿ…ಇವರೆಲ್ಲಾ ನಮ್ಮ ಕ್ಲಾಸ್ ಮೇಟುಗಳು. ಅವರೊಂದಿಗೆ ಬೆರೆಯುವ ಮಾತಾಡುವ ಅವಕಾಶವಿರಲಿಲ್ಲ. ಆದರೂ ಆ ಕಾಲದಲ್ಲಿ ಅವರು ನಮ್ಮನ್ನು ವಿಚಿತ್ರ ರೀತಿಯಲ್ಲಿ ಕಾಡುವವರಾಗಿದ್ದರು. ಆಗಷ್ಟೆ ನಮ್ಮ ಧ್ವನಿ ಒಡೆಯುತ್ತಾ, ಸಣ್ಣಗೆ ಮೀಸೆ ಮೂಗಿನ ಕೆಳಗೆ ಬರುತ್ತಾ ಇತ್ತಲ್ಲ! ಅದರ ಪರಿಣಾಮ ಇರಬೇಕು ಅದು. ಆಗಾಗ ಕನಸಲ್ಲಿ ಈ ಹುಡುಗಿಯರು ಬಂದು ನಮ್ಮನ್ನು ಕಾಡುತ್ತಿದ್ದುದೂ ಉಂಟು. ನೀನು ಮದುವೆಯಾಗುವುದಾದರೆ ಯಾರನ್ನು ಆರಿಸಿಕೊಳ್ಳುತ್ತೀ ಎಂದು ನಾವು ತಮಾಷೆಗೆ ಮಾತಾಡಿಕೊಳ್ಳುತ್ತಿದ್ದೆವು. ಪಾಠದ ನಡುವೆ ಆಗಾಗ ಅವರನ್ನು ಅದರಲ್ಲೂ ಚೆಲುವೆಯರಾಗಿದ್ದ ಹುಡುಗಿಯರನ್ನು ಕದ್ದು ನೋಡುವ ಹವ್ಯಾಸವೂ ಇತ್ತು. ಅದು ಮೇಷ್ಟ್ರ ಗಮನಕ್ಕೆ ಬಂದಿದೆ ಅನ್ನಿಸಿದರೆ ತಕ್ಷಣ ದೃಷ್ಟಿ ಬದಲಿಸುತ್ತಾ ಇದ್ದೆವು.

ಕನ್ನಡ ಮೀಡಿಯಮ್ ಮತ್ತು ಇಂಗ್ಲಿಷ್ ಮೀಡಿಯಮ್ ಹುಡುಗರೆಲ್ಲಾ ಒಂದೇ ಕ್ಲಾಸಲ್ಲಿ ಕುಳಿತುಕೊಳ್ಳಿತ್ತಿದ್ದೆವು. ಮೇಷ್ಟ್ರುಗಳು ಮೊದಲು ಕನ್ನಡದಲ್ಲಿ ಪಾಥಮಾಡಿ ಆಮೇಲೆ ಕೊನೆಯ ಸ್ವಲ್ಪ ಹೊತ್ತು ಅದನ್ನೇ ಇಂಗ್ಲಿಷ್ನಲ್ಲಿ ಹೇಳಿ ಬರೆಸುತ್ತಾ ಇದ್ದರು. ಹೀಗಿತ್ತು ಆಗಿನ ವ್ಯವಸ್ಥೆ! ಹೀಗಾಗಿ ಕನ್ನಡ ಮೀಡಿಯಮ್ ಹುಡುಗರಾದ ನಾವು ಅದೇ ವೇಳೆಗೆ ಇಂಗ್ಲಿಷ್ ಮೀಡಿಯಮ್ ಹುಡುಗರು ಕೂಡ ಆಗಿದ್ದೆವು.

ನಮ್ಮ ಅಧ್ಯಾಪಕರ ಬಗ್ಗೆ ಕೆಲವು ಮಾತು ಹೇಳಲೇ ಬೇಕು. ಕನ್ನಡ ಪಂಡಿತರು ನನಗೆ ತುಂಬ ಪ್ರಿಯರಾಗಿದ್ದ ಮೇಷ್ಟ್ರು. ಅವರದ್ದೂ ಕಚ್ಚೆ ಪಂಚೆ. ಪಟ್ಟೆ ಪಟ್ಟೇ ಅಂಗಿ. ಬೂದುಬಣ್ಣದ ಕೋಟು. ತಲೆಯ ಮೇಲೆ ಕರೀ ಟೋಪಿ. ವಿಶೇಷವೆಂದರೆ ತಲೆಯ ಹಿಂದೆ ಟೋಪಿಯ ಕೆಳಗೆ ಅವರ ಜುಟ್ಟಿನ ಗಂಟು ಕಾಣುತಾ ಇತ್ತು. ಅದು ನಮ್ಮ ಅಜ್ಜನ ಜುಟ್ಟಿನ ಹಾಗೆ ತೆಳ್ಳನೆಯ ಏಳೆಂಟು ಕೂದಲ ಜುಟ್ಟಲ್ಲ. ಸಣ್ಣ ನಿಂಬೇ ಕಾಯಿ ಗಾತ್ರದ ಜುಟ್ಟು. ಆ ಜುಟ್ಟೆ ಅವರನ್ನು ಬೇರೆಲ್ಲ ಮೇಷ್ಟ್ರುಗಳಿಂದ ಬೇರ್ಪಡಿಸಿತ್ತು. ಪಂಡಿತರ ಸ್ಪಷಾಲಿಟಿ ಅವರ ಜುಟ್ಟಿನ ಗಂಟು ಎಂದೇ ಹೇಳಬಹುದಾಗಿತ್ತು. ಇನ್ನೊಬ್ಬರು ಅನಂತರಾಮಯ್ಯ. ತುಂಬಾ ಕೋಪಿಷ್ಟ ಮೇಷ್ಟ್ರು. ನಮಗೆ ಚರಿತ್ರೆ ಪಾಠಕ್ಕೆ ಬರುತ್ತಾ ಇದ್ದರು. ಕೋಪ ಬಂದಾಗ ಹುಡುಗನ ಕತ್ತುಪಟ್ಟಿ ಹಿಡಿದು ಕುರಿಯ ಆಕಾರಕ್ಕೆ ಅವನನ್ನು ಬಗ್ಗಿಸಿ, ಮುಷ್ಠಿ ಬಿಗಿಮಾಡಿಕೊಂಡು ಧಡ್ ಧಡ್ ಎಂದು ಅವನ ನಡು ಬೆನ್ನಿನ ಮೇಲೆ ತೃಪ್ತಿಯಾಗುವಷ್ಟು ಗುದ್ದುತ್ತಿದ್ದರು. ಅವರ ಬಳಿ ಅನೇಕ ಕೋಟುಗಳಿದ್ದವು. ಆದರೆ ಅವರು ಕರೀಕೋಟು ಹಾಕಿಕೊಂಡ ದಿನ ಅವರಿಗೆ ಕೋಪ ಹೆಚ್ಚು ಕೆರಳುತ್ತದೆ ಎಂಬುದು ಹುಡುಗರ ನಂಬಿಕೆಯಾಗಿತ್ತು. ಅನಂತರಾಮಯ್ಯ ಕರೀಕೋಟಲ್ಲಿ ಪ್ರತ್ಯಕ್ಷರಾದರೆಂದರೆ ನಮ್ಮ ಜಂಗಾಬಲವೇ ಉಡುಗಿ ಹೋಗುತ್ತಿತ್ತು.

ಇನ್ನು ಭಾರಿ ಗಾತ್ರದ ಸುಬ್ಬರಾವ್ ಎಂಬ ಟೀಚರ್. ಅವರು ಭೂಗೋಳ ತೆಗೆದುಕೊಳ್ಳುತ್ತಿದ್ದರು. ಭೂಗೋಳಕ್ಕೂ ಅವರ ಬೃಹದ್ ಆಕಾರಕ್ಕೂ ಹೇಗೋ ಏನೋ ಒಂದು ಸಂಬಂಧ ಕಲ್ಪಿತವಾಗಿಹೋಗಿತ್ತು. ಇವರು ಅನಂತರಾಮಯ್ಯನ ಗೆಳೆಯರಾಗಿದ್ದರು ಎಂದು ನಾವು ಭಾವಿಸಿದ್ದೆವು. ಕಾರಣ ಅವರಿಬ್ಬರೂ ಸ್ಕೂಲಿಗೆ ಒಟ್ಟಿಗೇ ಬಂದು ಹೋಗಿ ಮಾಡುತ್ತಾ ಇದ್ದರು. ಇನ್ನೊಬ್ಬರು ಇಂಗ್ಲಿಷ್ ತೆಗೆದುಕೊಳ್ಳುತ್ತಿದ್ದ ಮುಸ್ಲಿಮ್ ಟೀಚರ್ . ಅವರು ಒಂದು ವರ್ಷ ಮಾತ್ರ ನಮ್ಮ ಟೀಚರ್ ಆಗಿದ್ದುದರಿಂದ ಅವರ ಹೆಸರು ನೆನಪಲ್ಲಿ ಉಳಿದಿಲ್ಲ. ಅಧ್ಯಾಪಕರಾಗಿಯೂ ಅವರು ನಮ್ಮ ಮೇಲೆ ಪರಿಣಾಮ ಬೀರಲಿಲ್ಲ. ಆಗೆಲ್ಲಾ ಕ್ರಿಕೆಟ್ ಟೆಸ್ಟ್ ಮ್ಯಾಚುಗಳ ಕಾಮೆಂಟರಿಯನ್ನು ನಾವು ರೇಡಿಯೋದಲ್ಲಿ ಕೇಳುತಾ ಇದ್ದೆವು.

ನಮ್ಮ ಇಂಗ್ಲಿಷ್ ಟೀಚರ್ ಕ್ರಿಕೆಟ್ ಪ್ರಿಯರಾಗಿದ್ದುದರಿಂದ ಟೆಸ್ಟ್ ನಡೆಯೋ ಐದೂ ದಿನ ಅವರು ಸ್ಕೂಲಿಗೆ ಬರುತ್ತಾ ಇರಲಿಲ್ಲ. ಆ ಐದು ದಿನ ನಮಗೆ ಹೋಮ್ವರ್ಕ್ಕಿನ ತಾಪತ್ರಯ ತಪ್ಪುತಾ ಇತ್ತು! ಈಗ ನನ್ನ ಮೇಲೆ ಗಾಢ ಪ್ರಭಾವ ಬೀರಿದ ನನ್ನ ನಚ್ಚಿನ ಮೇಷ್ಟ್ರ ಬಗ್ಗೆ ಕೆಲವು ಮಾತು ಬರೆಯ ಬೇಕು. ಅವರೇ ಆರ್ ಎಸ್ ಎಮ್ ಎಂಬ ಸಂಕ್ಷಿಪ್ತ ನಾಮದಿಂದ ನಮ್ಮ ಸ್ಕೂಲಲ್ಲಿ ಲೋಕ ಪ್ರಸಿದ್ಧರಾಗಿದ್ದ ಲೆಕ್ಖದ ಮೇಷ್ಟ್ರು. ಅವರು ಕುಳ್ಳಗೆ ಬೆಳ್ಳಗೆ ಇದ್ದರು. ಸದಾ ಸೂಟಲ್ಲಿ ಇರುತ್ತಾ ಇದ್ದರು. ಅವರ ಕರೀ ಬೂಟುಗಳು ಯಾವಾಗಲೂ ಥಳ ಥಳ ಹೊಳೆಯುತ್ತಾ ಇರುತ್ತಿದ್ದವು. ಅವರಿಗೂ ಸ್ವಲ್ಪ ಉಬ್ಬುಹಲ್ಲಿತ್ತು. ಕೂದಲು ಮೆಟ್ಟಿಲು ಮೆಟ್ಟಿಲಾಗಿ, ಅವರ ಕ್ರಾಪು ತುಂಬಾ ಆಕರ್ಷಕವಾಗಿತ್ತು. ಅವರು ಒಂದು ದಿನ ಒಬ್ಬ ಹುಡುಗನನ್ನು ಬೈದದ್ದಾಗಲೀ ಹೊಡೆದದ್ದಾಗಲೀ ನಾನು ನೋಡಲಿಲ್ಲ. ಅವರ ಆಕಾರ, ಬಟ್ಟೇ ಬರಿಯ ಚಂದ, ಕೊಂಚ ಬಾಯಿ ಸೊಟ್ಟ ಮಾಡಿಕೊಂಡು ಆಡುವ ಮೆಲುಮಾತು ಇವುಗಳಿಗೆ ನಾನು ಮರುಳಾಗಿ ಹೋಗಿದ್ದೆ. ಕನ್ನಡ ಮತ್ತು ಲೆಕ್ಖ ಎರಡರಲ್ಲೂ ನಾನು ಮುಂದಿದ್ದೆ. ಈ ವಿಷಯಗಳಲ್ಲಿ ನನ್ನನ್ನು ಮೀರಿಸುವವರಿರಲಿಲ್ಲ. ಉಳಿದ ವಿಷಯಗಳಲ್ಲಿ ಶಂಕರ್ರೋ, ದಿವಾಕರ್ರೋ, ಲಕ್ಷ್ಮೀವೆಂಕಟೇಶನೋ, ಸೌಭಾಗ್ಯಲಕ್ಷ್ಮಿಯೋ, ಕೃಷ್ಣರಾವೋ ನನಗಿಂತ ಮುಂದಿರುತ್ತಿದ್ದರು.

ಆರೆಸ್ಸೆಮ್ ಎಷ್ಟು ಚೆನ್ನಾಗಿ ಕಲಿಸುತ್ತಿದ್ದರೆಂದರೆ ಲೆಕ್ಖದಲ್ಲಿ ಯಾವ ಹುಡುಗನೂ ಫೇಲ್ ಆಗುತ್ತಿರಲಿಲ್ಲ. ಕೆಲವರು ತೊಂಬತ್ತಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಾ ಇದ್ದರು. ನೂರಕ್ಕೆ ನೂರು ತೆಗೆಯುವಲ್ಲಿ ನನಗೂ, ಶಂಕರಗೂ ಸ್ಪರ್ಧೆ ನಡೆಯುತ್ತಾ ಇತ್ತು. ಆರೆಸ್ಸೆಮ್ ಹೇಳಿಕೊಟ್ಟಿದ್ದಕ್ಕಿಂತ ಭಿನ್ನ ರೀತಿಯಲ್ಲಿ ನಾನು ಪ್ರಮೇಯಗಳನ್ನು ಬಿಡಿಸುತ್ತಾ ಇದ್ದೆ. ಅದು ಅವರ ಆಶ್ಚರ್ಯಕ್ಕೆ ಕಾರಣವಾಗುತ್ತಿತ್ತು. ಅವರು ನನ್ನ ಬೆನ್ನು ತಟ್ಟಿ ನೀನು ಆಸಾಧ್ಯ ಕಾಣಯ್ಯ ಎಂದು ತರಗತಿಯಲ್ಲಿ ಎಲ್ಲರ ಮುಂದೆ ಹೊಗಳಿ ನನ್ನ ಟೋಪಿ ತೂರಿಕೊಂಡು ಒಂದು ಕೊಂಬು ಮೂಡುವಂತೆ ಮಾಡುತ್ತಾ ಇದ್ದರು. ಹೈಸ್ಕೂಲಿನ ಕೊನೇ ವರ್ಷದಲ್ಲಿ ನಾನು ಆರೆಸ್ಸೆಮ್ ಮನೆಗೆ ಪಾಠಕ್ಕೆ ಹೋಗುತ್ತಿದ್ದೆ. ಆಗ ದಡ್ಡರು ಮಾತ್ರ ಪಾಠಕ್ಕೆ ಹೋಗುತಾ ಇದ್ದರು. ಲೆಕ್ಖದಲ್ಲಿ ನಾನು ವೀಕು ಎಂದು ಸುಳ್ಳು ಬೊಂಕಿ, ನಮ್ಮ ಅಜ್ಜಿಯಲ್ಲಿ ಭೀತಿ ಹುಟ್ಟಿಸಿ ನಾನು ಆರೆಸ್ಸೆಮ್ ಮನೆಗೆ ಟ್ಯೂಷನ್ಗೆ ಹೋಗಲು ಪ್ರಾರಂಭಿಸಿದೆ. ನಿನಗೆ ಟ್ಯೂಷನ್ ಯಾಕೆ ಬೇಕು ಮಗು? ಎಂದು ಆರೆಸ್ಸೆಮ್ ಎಂದಿನಂತೆ ಸೊಟ್ಟಬಾಯಿ ಮಾಡಿಕೊಂಡು ನಕ್ಕಿದ್ದರು. ನನಗೆ ಬೇಕಾದದ್ದು ಅವರ ಸಾನ್ನಿಧ್ಯ. ಅದು ಅವರಿಗೆ ಹೇಗೆ ಗೊತ್ತಾಗಬೇಕು. ಸ್ಕೂಲು ಮುಗಿದ ಮೇಲೆ ನಾವು ಆರೆಸ್ಸೆಮ್ ಮನೆಗೆ ಟ್ಯೂಷನ್ಗೆ ಹೋಗುತಾ ಇದ್ದೆವು.

ನಾವು ಐದಾರು ಮಂದಿ ಅಷ್ಟೆ. ತಿಂಗಳಿಗೆ ಹತ್ತು ರೂಪಾಯಿ ಟ್ಯೂಷನ್ ಫ಼ೀಜ್. ಲೆಕ್ಖ ಮಾತ್ರ ಆರೆಸ್ಸೆಮ್ ಹೇಳಿಕೊಡುತ್ತಾ ಇದ್ದರು. ನಾವು ಸರಿಯಾಗಿ ಏಳುಗಂಟೆಗೆ ಅವರ ಮನೆಗೆ ಹೋಗುತಾ ಇದ್ದೆವು. ಹಾಲಯ್ಯ ನನ್ನ ಜೊತೆಯಲ್ಲಿ ಟ್ಯೂಷನ್ ಗೆ ಬರುತ್ತಾ ಇದ್ದ. ಉಳಿದವರ ಹೆಸರು ಮರೆತು ಹೋಗಿದೆ. ಆರೆಸ್ಸೆಮ್ ಸೋದರಳಿಯ ಒಬ್ಬ ಹೊಸದಾಗಿ ನಮ್ಮ ಶಾಲೆ ಸೇರಿಕೊಂಡಿದ್ದ. ಸೋಡಗಾಜಿನ ಕನ್ನಡಕದವನು. ಲೆಕ್ಖದಲ್ಲಿ ತುಂಬ ಹಿಂದೆ ಇದ್ದ. ಅವನೂ ನಮ್ಮ ಜತೆ ಸೇರಿಕೊಳ್ಳುತ್ತಿದ್ದ. ಆರೆಸ್ಸೆಮ್ ಇನ್ನೂ ಮದುವೆಯಾಗಿರದ ತರುಣರು. ನಾವು ಹೋಗುವ ವೇಳೆಗೆ ಕಡ್ಡಿ ಚಾಪೆ ಹಾಕಿ ರೆಡಿ ಮಾಡಿರುತ್ತಾ ಇದ್ದರು. ಪುಟ್ಟ ಮನೆ. ಅದರ ತುಂಬೆಲ್ಲಾ ಅಗರುಬತ್ತಿಯ ಸುವಾಸನೆ ತುಂಬಿರುತ್ತಾ ಇತ್ತು. ಆ ಅಗರುಬತ್ತಿ ವಾಸನೆಯನ್ನು ನಾನು ಜನ್ಮೇಪಿ ಮರೆಯಲಾರೆ. ಅಂಥ ಸುವಾಸನೆಯನ್ನು ನಾನು ಈವರೆಗೆ ಎಲ್ಲೂ ಆಘ್ರಾಣಿಸಿಲ್ಲ. ಅದು ಯಾವ ಬ್ರಾಂಡ್ ಎಂದು ಕೇಳುವಷ್ಟು ಸಲುಗೆ ನಮಗೆ ಮೇಷ್ಟ್ರಲ್ಲಿ ಇರಲಿಲ್ಲ. ಹೀಗೆ ಅದೊಂದು ನಿಗೂಢವಾದ ಕನಸಿನ ಪರಿಮಳವಾಗಿ ನನ್ನ ಮನಸ್ಸಲ್ಲಿ ಈವತ್ತಿಗೂ ಉಳಿದಿಬಿಟ್ಟಿದೆ.

ಈವತ್ತು ಯಾರಾದರೂ ಅಗರುಬತ್ತಿ ಹಚ್ಚಿದಾಗ ತಕ್ಷಣ ನನಗೆ ನಮ್ಮ ಆರೆಸ್ಸೆಮ್ ಹಚ್ಚಿಡುತ್ತಿದ್ದ ಅಗರುಬತ್ತಿಯ ನೆನಪಾಗುತ್ತದೆ. ಅದರ ಮುಂದೆ ಇದು ಎಂಥದೂ ಅಲ್ಲ ಎನ್ನಿಸಿ ಮನಸ್ಸಿಗೆ ಪಿಚ್ಚೆನ್ನಿಸುತ್ತದೆ. ಆ ಅಗರುಬತ್ತಿ ಕಣ್ಣಾರೆ ನೋಡುವುದು ನನಗೆ ಸಾಧ್ಯವಾಗಿರಲಿಲ್ಲ. ಅವರು ಅಡುಗೆ ಮನೆಯಲ್ಲಿ ದೇವರ ಮುಂದೆ ಆ ಅಗರುಬತ್ತಿ ಹಚ್ಚಿಡುತ್ತಾ ಇದ್ದರು. ಅದನ್ನು ಅವರು ಬೇರೆ ಯಾವುದೋ ಊರಿಂದ ತರುತ್ತಾರೆ ಎಂಬುದು ನನ್ನ ನಂಬಿಕೆಯಾಗಿತ್ತು. ಹೊಳಲಕೆರೆಯ ಸಂಜೀವ ಶೆಟ್ಟರ ಅಂಗಡಿಯಲ್ಲಿ ಆ ಬಗೆಯ ದಿವ್ಯ ಪರಿಮಳದ ಊದುಬತ್ತಿ ಸಿಗಬಹುದೆಂದು ನಾನು ನಂಬಲಾರದವನಾಗಿದ್ದೆ!

*****

ಈ ಕಥನವನ್ನು ಇನ್ನು ಹೆಚ್ಚುಬೆಳೆಸುವ ಅಗತ್ಯವಿಲ್ಲ. ನಾನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಐಚ್ಚಿಕ ಗಣಿತದಲ್ಲಿ ನೂರಕ್ಕೆ ತೊಂಬತ್ತಾರು ಅಂಕಗಳನ್ನೂ, ಸಾಮಾನ್ಯ ಗಣಿತದಲ್ಲಿ ತೊಂಬತ್ತೆರಡು ಅಂಕಗಳನ್ನೂ ಪಡೆದದ್ದು ಆರೆಸ್ಸೆಮ್ ಅವರಿಗೆ ತುಂಬ ಸಂತೋಷನೀಡಿತ್ತು ಎಂದು ನನ್ನ ಭಾವನೆ. ಪರೀಕ್ಷೆ ಮುಗಿದು, ಮುಂದೆ ಓದಲಿಕ್ಕೆ ಹಾಲ್ ಟಿಕೆಟ್ ಪಡೆಯಲಿಕ್ಕೆ ಸ್ಕೂಲಿಗೆ ಹೋದಾಗ ನನ್ನನ್ನು ಕರೆದು ಬೆನ್ನುತಟ್ಟಿ ಒಂದು ಪೆನ್ನನ್ನು ನನಗೆ ಗಿಫ್ಟ್ ಆಗಿ ಕೊಟ್ಟರು. ಅದು ಈಗಲೂ ನನ್ನ ಬಳಿ ಇದೆ. ಇಂಕ್ ಪೆನ್ನಾದುದರಿಂದ ನಾನದರಲ್ಲಿ ಬರೆಯುತ್ತಿಲ್ಲ ನಿಜ. ಆದರೆ ಬರೆಯದೇ ಇರೋದರಿಂದಲೇ ಆ ಪೆನ್ನಲ್ಲಿ ಅನೇಕ ಬರೆಯಲಾಗದ ಸಂಗತಿಗಳಿವೆ ಎಂದು ನಾನು ನಂಬಿದ್ದೇನೆ. ಆಗಾಗ ಅದನ್ನು ನನ್ನ ಸುಕ್ಕಿಟ್ಟಿರುವ ಹಣೆಯ ಮೇಲೆ ಈಗಲೂ ನಾನು ಮೃದುವಾಗಿ ಆಡಿಸಿಕೊಳ್ಳುವುದುಂಟು.

ನನ್ನ ಜತೆ ಕೊನೆಯವರೆಗೆ ಸಂಬಂಧ ಇಟ್ಟುಕೊಂಡಿದ್ದ ಮೇಷ್ಟ್ರುಗಳೆಂದರೆ ನಮ್ಮ ಕನ್ನಡಪಂಡಿತರು, ನಮ್ಮ ಆರೆಸ್ಸೆಮ್ ಮತ್ತು ನನ್ನ ಹೆಡ್ ಮಾಸ್ಟರ್. ಎಚ್ ಎಮ್ ಬೆಂಗಳೂರಲ್ಲೆ ನೆಲೆಸಿದ್ದುದರಿಂದ ಮತ್ತು ಅವರ ಮಗ ಶಂಕರ್ ನನ್ನ ಪ್ರಿಯ ಗೆಳೆಯನಾದುದರಿಂದ ಅವರು ತೀರಿಕೊಳ್ಳುವವರೆಗೂ ಆಗಾಗ ಅವರ ಮನೆಗೆ ಭೆಟ್ಟಿಕೊಟ್ಟು ನಮಸ್ಕಾರ ಮಾಡಿಕೊಂಡು ಬರುವುದು ನನಗೆ ರೂಢಿಯಾಗಿತ್ತು. ಒಂದು ಥರ ಅವರು ನಮ್ಮ ಮನೆಯ ಹಿರಿಯರೇ ಆಗಿಬಿಟ್ಟಿದ್ದರು. ಇನ್ನು ನಮ್ಮ ಕನ್ನಡ ಪಂಡಿತರಿಗೆ ನಾನು ನನ್ನ ಮೊದಲ ಕವಿತಾ ಸಂಗ್ರಹ ಪರಿವೃತ್ತ ಅರ್ಪಿಸಿದ್ದೇನೆ. ಅವರ ವಿಳಾಸವನ್ನು ಹೇಗೋ ಪತ್ತೆ ಮಾಡಿ ಅವರಿಗೆ ಪುಸ್ತಕ ಕಳಿಸಿದಾಗ ಅವರು ಬರೆದಿದ್ದ ಪತ್ರ ಎಷ್ಟೋ ವರ್ಷ ನನ್ನ ಸಂಗ್ರಹದಲ್ಲಿತ್ತು. ಅಯ್ಯಾ…ನಾನು ಮೇಷ್ಟರಾಗಿ ಸಂಬಳ ತೆಗೆದುಕೊಂಡು ಮಾಡಬೇಕಾದ ಕರ್ತವ್ಯ ಮಾಡಿದ್ದೆ ಅಷ್ಟೆ. ಅದಕ್ಕೆ ನೀನು ಇಷ್ಟೊಂದು ಗೌರವ ತೋರಿಸುವುದೇ? ನಿನ್ನನ್ನು ದೇವರು ಚೆನ್ನಾಗಿ ಇಟ್ಟಿರಲಪ್ಪ! ತಮ್ಮ ಕೊನೆಗಾಲವನ್ನು ಪಂಡಿತರು ಅರಕಲಗೂಡಲ್ಲಿ ಕಳೆದರೂ ಅಂತ ಕಾಣುತ್ತೆ. ಹೈಸ್ಕೂಲಲ್ಲಿ ನೋಡಿದ್ದು ಎಷ್ಟೋ ಅಷ್ಟೆ. ನಮ್ಮ ನಡುವೆ ಪತ್ರವ್ಯವಹಾರ ಇತ್ತಾದರೂ ಪರಸ್ಪರ ಭೆಟ್ಟಿಯಾಗಲೇ ಇಲ್ಲ. ಈಚೆಗೆ ನಾನು ಎಸ್.ಮಂಜುನಾಥ್ ಅವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಕೆ ಆರ್ ನಗರಕ್ಕೆ ಹೋಗಿದ್ದೆ. ಜೊತೆಗೆ ಅನಂತಮೂರ್ತಿಗಳು ಬಂದಿದ್ದರು. ಸಭೆ ಮುಗಿದ ಮೇಲೆ ಒಬ್ಬ ಮಧ್ಯವಯಸ್ಕ ಗೃಹಣಿ ನನ್ನ ಬಳಿ ಬಂದು ಬಹಳ ಪ್ರೀತಿಯಿಂದ ನನ್ನ ಬಳಿ ಮಾತಾಡಿದರು. ಅವರು ಬೇರೆಯಾರೂ ಅಲ್ಲ. ನಮ್ಮ ಪಂಡಿತರ ಮಗಳು. ನಾನು ಹೈಸ್ಕೂಲಲ್ಲಿ ಓದುತ್ತಿದ್ದಾಗ ಲಂಗ ಹಾಕಿಕೊಳ್ಳುತ್ತಿದ್ದ ಪುಟ್ಟ ಹುಡುಗಿ. ಬೆಳಿಗ್ಗೆ ಉಪಹಾರಕ್ಕೆ ಬರಬೇಕೆಂದೂ ಆ ಗೃಹಿಣಿ ನನ್ನನ್ನು ಸ್ವಾಗತಿಸಿದರು. ನಾನು ಅವರ ಮನೆಗೆ ಮಂಜುನಾಥ್ ಜೊತೆಗೆ ಹೋದೆ. ಬರುವಾಗ, ನಮ್ಮ ಮೇಷ್ಟ್ರ ಫೋಟೊ ಇದ್ದರೆ ಕೊಡಿ ಎಂದು ಅವರನ್ನು ಪ್ರಾರ್ಥಿಸಿದೆ. ಅವರು ಒಳಗೆ ಹೋಗಿ ಪೆಟ್ಟಿಗೆ ತಡಕಾಡಿ ನಮ್ಮ ಮೇಷ್ಟ್ರು ತಮ ಇಳಿಗಾಲದಲ್ಲಿ ತಮ್ಮ ಪತ್ನಿಯ ಜೊತೆ ಕುಳಿತಿರುವ ಭಾವಚಿತ್ರವೊಂದನ್ನು ತಂದುಕೊಟ್ಟರು. ನನಗೆ ದೊಡ್ಡ ನಿಧಿಯೇ ಸಿಕ್ಕ ಹಾಗಾಯಿತು. ನಮ್ಮ ಮೇಷ್ಟ ಫೋಟೊ ಕಣ್ಣಿಗೆ ಒತ್ತಿಕೊಂಡು ಬೆಂಗಳೂರಿಗೆ ಅದನ್ನು ತಂದೆ. ಈಗ ನನ್ನ ಬರೆಯುವ ಮೇಜಿನ ಮೇಲೆ ಅದನ್ನು ಇಟ್ಟುಕೊಂಡಿದ್ದೇನೆ.

ನಮ್ಮ ಆರೆಸ್ಸೆಮ್ ತಮ್ಮ ಕೊನೆಯ ದಿನಗಳನ್ನು ಮಂಡ್ಯದಲ್ಲಿ ಕಳೆದರು. ಕೊನೆದಿನಗಳಲ್ಲಿ ಕ್ಯಾನ್ಸರ್ ಪೀಡಿತರಾಗಿ ತುಂಬ ಸಂಕಟಪಟ್ಟರು. ಚಿಕಿತ್ಸೆಗೆಂದು ಬೆಂಗಳೂರಿಗೆ ಬಂದಿದ್ದಾಗ ಹೇಗೋ ನನ್ನ ವಿಳಾಸದ ಪತ್ತೆ ಹಚ್ಚಿ, ಬಂದು ನನ್ನನ್ನು ನೋಡಿಕೊಂಡು ಹೋಗು ಎಂದು ಕಾಗದ ಬರೆದರು. ನಾನು ಶಿವಣ್ಣನ ಟ್ಯಾಕ್ಸಿಯಲ್ಲಿ ಬಹಳ ಕಷ್ಟಪಟ್ಟು ಅವರ ಬಂಧುಗಳ ಮನೆ ಪತ್ತೆಹಚ್ಚಿ ಅವರ ದರ್ಶನ ಪಡೆದೆ. ತುಂಬ ಬಳಲಿ ಹೋಗಿದ್ದರು ನಮ್ಮ ಮೇಷ್ಟ್ರು. ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದೆ. ಸ್ವಲ್ಪ ಹಣ್ಣು ಹಂಪಲು, ಮತ್ತು ನನ್ನ ಕೆಲವು ಪುಸ್ತಕಗಳನ್ನು ಅವರಿಗೆ ಕೊಟ್ಟೆ. ಆಗ ಅವರ ಕಣ್ಣು ಒದ್ದೆಯಾದದ್ದು ನಾನು ಮರೆಯುವಂತೆಯೇ ಇಲ್ಲ. ಮಂಡ್ಯಕ್ಕೆ ಅವರು ಹಿಂದಿರುಗಿದರು. ಅವರ ಎಂಭತ್ತನೇ ಹುಟ್ಟುಹಬ್ಬದ ಆಹ್ವಾನ ಬಂದಾಗ ನಾನು ಮತ್ತು ಶಂಕರ್ ಮಂಡ್ಯಕ್ಕೆ ಹೋಗಿ ಆ ಕಾರ್ಯಕ್ರಮದಲ್ಲಿ ಭಾಗಿಯಾದೆವು. ಆದಾದ ಕೆಲವೇ ತಿಂಗಳಲ್ಲಿ ಆರೆಸ್ಸೆಮ್ ತೀರಿಕೊಂಡರು. ಪ್ರಿಯರಾದವರನ್ನೆಲ್ಲಾ ಹೀಗೆ ಕಳೆದುಕೊಂಡು ಬದುಕುವ ಹಿಂಸೆ ಹಾಗೆ ಬದುಕುತ್ತಿರುವವರು ಮಾತ್ರ ಬಲ್ಲರು.

*****

‍ಲೇಖಕರು G

February 15, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. noushad

    gurugala mele intha bhakti ittiruvare munde dodda vyaktiglaaguttare anta anisuttide,heart touch article i like it very much

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: