ಎಚ್ಚೆಸ್ವಿ ಅನಾತ್ಮ ಕಥನ: ತುಂಗಭದ್ರಾ ತೀರದಲ್ಲಿ ಚನ್ನಕೇಸರಿ ನೆರಳು

ಚರಿತ್ರೆ ಎನ್ನುವ ಬಕಪಕ್ಷಿ ಸುಮ್ಮನೆ ಬಂದು ಸುಮ್ಮನೆ ಹೋಗುವುದಿಲ್ಲ. ಹೋಗುವ ಮುನ್ನ ಅದು ತನ್ನ ಅಸ್ತಿಪಂಜರವನ್ನು ವರ್ತಮಾನದ ಎದೆಯ ಮೇಲೆ ಒಗೆದು ಹೋಗುತ್ತದೆ. ಹಂಪಿಯನ್ನು ನೋಡಿದಾಗ ಅದು ನನಗೆ ವಿಜಯನಗರದ ಮಹಾಸಾಮ್ರಾಜ್ಯದ ಅಸ್ತಿಪಂಜರದ ಹಾಗೆ ಭಾಸವಾಗಿ ಎದೆ ಝಲ್ಲೆಂದಿದ್ದುಂಟು. ಹಂಪಿಯ ಆತ್ಮವನ್ನು ಮತ್ತೆ ವರ್ತಮಾನಕ್ಕೆ ಆವಾಹಿಸದೆ ಈ ಭೂತಕ್ಕೆ ಮೋಕ್ಷವೆಂಬುದಿಲ್ಲ. ಆತ್ಮಧಾರಣೆಗೆ ಅಲ್ಲಿ ಹೊಸ ಹಸಿರು ಕಾಯುತ್ತಾ ಇದೆ. ಹರಿದ್ರಾಕುಂಕುಮಶೋಭಿತೆಯಾದ ತುಂಗಭದ್ರೆ ಅಲ್ಲಿ ಈ ಕ್ಷಣವೂ ತರಂಗಲೀಲಾಲೋಲೆಯಾಗಿ ಹರಿಯುತ್ತಳೇ ಇದ್ದಾಳೆ. ಕಬ್ಬಿನ ಗದ್ದೆಗಳು ಸಾಮೂಹಿಕ ಮದುವೆ ದಿಬ್ಬಣದ ವರಮಹಾಶಯರಂತೆ ಬಾಸಿಂಗ ತೂಗುತ್ತಾ ನಿಂತಿವೆ. ನರಸಿಂಹನ ಭಗ್ನ ತೊಡೆಯ ಮೇಲೆ ಜೋಡಿ ಹಕ್ಕಿ ಚಿಲಿಮಿಲಿ ಮಾಡುತ್ತಾ ಇವೆ. ಅದಕ್ಕೇ ಅನ್ನುತ್ತೇನೆ: ಹಂಪಿ ಬರೀ ಹಾಳು ಮಾತ್ರ ಅಲ್ಲ. ಮಣ್ಣಿಂದ ಒಡಮುರಿದೇಳುತ್ತಿರುವ ಬಾಳೂ ಹೌದು. ಹಂಪಿಯ ದರ್ಶನಕ್ಕೆ ಬರುವ ಲಕ್ಷಾಂತರ ಕಣ್ಣುಗಳನ್ನು ಪ್ರಾಚೀನದಿಂದ ಅರ್ವಾಚೀನಕ್ಕೆ ಹೊರಳಿಸುವ ಪವಾಡ ಸಂಭವಿಸುವುದಾದರೂ ಎಂದು? ಹೀಗೆ ಧ್ಯಾನಿಸುತ್ತಾ ನಾನು ಗೆಳೆಯ ಎಸ್ಸೆಮ್ ಜೊತೆ ಸೂರ್ಯ ನೆತ್ತಿ ಮೇಲೆ ಉರಿಯುತ್ತಿರುವ ಹೊತ್ತಲ್ಲಿ ಹಂಪಿಯಲ್ಲಿ ಅಲೆಯುತ್ತಾ ಇದ್ದೆ. ಸರಿಯಾಗಿ ನಲವತ್ತು ವರ್ಷಗಳ ಹಿಂದಿನ ಮಾತು ಇದು.

ಇದೇ ತಿಂಗಳು. ಹೋದ ವರ್ಷ ನಾನು ಇಲ್ಲಿಗೆ ಬಂದಿದ್ದೆ. ಅದ್ಭುತವಾಗಿ ಮೈ ತುಂಬ ಹೂಬಿಟ್ಟ ಚೆನ್ನಕೇಸರಿ ಮರವೊಂದನ್ನು ನಾನು ನೋಡಿದ್ದೆ. ಬಾ ಅದನ್ನು ಪತ್ತೆ ಮಾಡಿ ಹೇಗಾದರೂ ನಿನಗೆ ತೋರಿಸುತ್ತೇನೆ ಅಂತ ಎಸ್ಸೆಮ್ ಹಾಳು ಹಂಪಿಯಲ್ಲಿ ನನ್ನನ್ನು ಅಲೆಸಿದ್ದೂ ಅಲೆಸಿದ್ದೇ. ನೆತ್ತಿಯ ಮೇಲೆ ಸುಡುವ ಸೂರ್ಯ. ಪಕ್ಕದಲ್ಲಿ ಕಾದ ಬಂಡೆಗಳು. ಬಂಡೆಯ ಸಂದಿನಿಂದ ಕೈಚಾಚಿ ಎತ್ತಿಕೋ ಎಂದು ಮೋಡಕ್ಕೆ ಮೊರೆಯಿಡುತ್ತಿರುವ ಬಸಿರಿಗಿಡಗಳು. ನೀನು ಯಾವತ್ತೋ ನೋಡಿದ ಮರವನ್ನು ಹೇಗಯ್ಯಾ ಪತ್ತೆ ಮಾಡುತ್ತೀ? ಅದನ್ನು ಪ್ರಾಚ್ಯವಸ್ತು ಸಂರಕ್ಷಕರು ಯಾವುದೋ ಹಾಳುಗುಡಿಗೆ ಅಪಾಯಕಾರಿ ಎಂದು ಕಡಿದು ಬಿಸಾಕಿರಲಿಕ್ಕೂ ಸಾಕು. ಎಸ್ಸೆಮ್ ತೀವ್ರವಾಗಿ ತಲೆ ಕೊಡವಿ , ನನಗೆ ನನ್ನ ಒಳ ಮನಸ್ಸು ಹೇಳುತಾ ಇದೆ. ಆ ಮರ ಇಲ್ಲೇ ಎಲ್ಲೋ ಇದೆ. ನಮಗಾಗಿ ಹೂವಿನ ಛತ್ರಿ ಹಿಡಿದುಕೊಂಡು ಕಾಯುತಾ ಇದೆ. ಇಲ್ಲೇ ಹತ್ತಿರದಲ್ಲೇ. ಇಗೋ..ಈ ಕೋಡುಗಲ್ಲು ದಾಟಿ ನಾನು ಮುಂದೆ ಹೋಗಿದ್ದು ನೆನಪಾಗುತಾ ಇದೆ. ಇನ್ನು ಸ್ವಲ್ಪೇ ಸ್ವಲ್ಪ ದೂರ.

ನನ್ನ ತಲೆ ಸಿಡಿಯುತ್ತಾ ಇತ್ತು. ಅಂಗಿ ಬಿಚ್ಚಿ ನೆತ್ತಿಯ ಮೇಲೆ ಹಾಕಿಕೊಂಡೆ. ಕಾಲಿಟ್ಟಲ್ಲಿ ಕಾದ ಮಣ್ಣಿನ ಹುಡಿ ಹಾರಿ, ಮುಂಗಾಲಿಗೆ ಚುರುಕು ಮುಟ್ಟಿಸುತ್ತಾ ಇತ್ತು. ಮುರುಕು ಗುಡಿ, ಸೂರು ಜಾರಿದ ಕಲ್ಲು ಮಂಟಪ, ದಾರಿಯ ನಡುವೆ ಯಾರದ್ದೋ ಅಡ್ಡಗೈಗಳೆಂಬಂತೆ ಉದ್ದೋಉದ್ದ ಬಿದ್ದ ಕಲ್ಲಿನ ಕಂಭಗಳು, ಮೂತಿ ಮುಸುಡಿ ಕೆತ್ತಿಸಿಕೊಂಡ ದೇವ ಮೂರ್ತಿಗಳು…..ದಾಟಿ ದಾಟಿ ನಾವು ನಡೆದೇ ನಡೆದೆವು. ಇಲ್ಲೇ ಹತ್ತಿರದಲ್ಲಿ…ಬಹಳ ದೂರವಿಲ್ಲ…ಎಂದು ಎಸ್ಸೆಮ್ ತಲೆಕೆರೆದುಕೊಳ್ಳುತ್ತಾ ನಿಂತಿದ್ದ. ಹಂಪಿಯಲ್ಲಿ ಹೂಬಿಟ್ಟಿರಬಹುದಾದ ಒಂದು ಚೆನ್ನಕೇಸರಿ ಮರವನ್ನು ಹುಡುಕಿಕೊಂಡು ಅಬ್ಬೆಪಾರಿಗಳ ಥರ ನಾವು ಅಲೆಯುತ್ತಾ ಇದ್ದೆವು. ಬೆನ್ನಿನ ಮೇಲೆ ಛಾವಟಿ ಬೀಸುವ ಬಿಸಿಲು. ಸುಟ್ಟ ಚರ್ಮ ಚಿಟಿ ಪಿಟಿ ಸದ್ದಿನೊಂದಿಗೆ ಚುಟು ಚುಟು ಕಡಿಯಲಿಕ್ಕೆ ಶುರುವಾಗಿತ್ತು. ಕಣ್ಣ ಮುಂದೆ ಇದ್ದಕ್ಕಿಂದ್ದಂತೆ ನೀಲಿ ಕಪ್ಪು ಕೆಂಪು ಸೊನ್ನೆಗಳು ತಿರುಗಲಿಕ್ಕೆ ಹತ್ತಿದ ಸಮಯವದು. ವಿರೂಪಾಕ್ಷನ ಗುಡಿಯ ಸಮೀಪದಲ್ಲಿ ಇದ್ದ ಹೋಟೆಲಿನಲ್ಲಿ ತಿನ್ನುವುದಕ್ಕೆ ಏನಾದರೂ ಕಟ್ಟಿಸಿಕೊಂಡು ಬಂದಿದ್ದರೆ ನಾವು ಜಾಣರಾಗುತ್ತಿದ್ದೆವು.ಎಸ್ಸೆಮ್ ಪೆಚ್ಚುಪೆಚ್ಚಾಗಿ ನಕ್ಕು ಹೌದು ಅನ್ನಿಸತ್ತೆ ಎಂದ.

ಬ್ಯಾಗಲ್ಲಿದ್ದ ನೀರಿನ ಬಾಟಲ್ಲೂ ಖಾಲಿಯಾಗಿತ್ತು. ಮರದ ಆಸೆ ಬಿಟ್ಟು ನದಿಯ ಕಡೆ ಹೋಗೋಣ ನಡಿ…ಹೊಟ್ಟೆ ತುಂಬ ನೀರಾದರೂ ಕುಡಿಯಬಹು ಎಂದೆ…ಒಣಗಿ ತುರಿತುರಿಯಾಗಿದ್ದ ತುಟಿಗಳನ್ನ ಎಂಜಲ ನಾಲಗೆಯಲ್ಲಿ ಒರೆಸಿಕೊಳ್ಳುತ್ತಾ. ಎದುರಿಗೆ ಕುರಿಕಾಯುವ ಹುಡುಗ ಒಬ್ಬ ಬಂದ. ಅಣ್ಣಾ…ನದಿಯಕಡೆ ಹೋಗಬೇಕು…ಸ್ವಲ್ಪ ದಾರಿ ತೋರಿಸಪ್ಪಾ…! ಈ ಸಣ್ಣ ದಿಣ್ಣೆ ಐತಲ್ಲ ಅದನ್ನ ತಡಾದು ಹೋಗಿ..! ಅಂದ ಹಂಪಿಯ ಚಕ್ರವ್ಯೂಹದ ರಹಸ್ಯವನ್ನೆಲ್ಲಾ ಬಲ್ಲಂತಿದ್ದ ಆ ಪೋರ. ನನಗೆ ನಿಜಕ್ಕೂ ದಿಗಿಲಾಗುತ್ತಿತ್ತು. ನಾವು ದಾರಿ ತಪ್ಪಿಸಿಕೊಂಡಿದ್ದೇವೆ… ಮತ್ತೆ ನಮಗೆ ಜನವಸತಿ ಕಂಡೀತೆ? ಅಥವಾ ಹೀಗೇ ನಾವು ಬಂಡೆಗಳ ಈ ಚಕ್ರತೀರ್ಥದಲ್ಲಿ ಸುಳಿದಿರುಗುತ್ತಾ ಇರುತ್ತೇವೆಯೋ? ತಮ್ಮಾ ಹತ್ತು ರೂಪಾಯಿ ಕೊಡುತೀವಿ…ನಮಗೆ ಹೊಳೆ ತೋರಿಸಪ್ಪಾ…! ಹುಡುಗ ನಕ್ಕ. ಅದಕ್ಕೆ ಕಾಸು ಯಾಕೆ ಬುಡಿ ಸಾ….ನಾನು ಹೊಳೆ ತೋರಿಸ್ತೀನಿ ಬನ್ನಿ….

ಹುಡುಗ ಆ ಚಕ್ರವ್ಯೂಹದಲ್ಲಿ ಅಲ್ಲಿ ಇಳಿಸಿ, ಇಲ್ಲಿ ಹತ್ತಿಸಿ, ಮತ್ತೆಲ್ಲೋ ಸುತ್ತಿಸಿ ಮುನ್ನಡೆಸಿದ. ಹೊಳೆಯ ಜುಳು ಜುಳು ಕಿವಿಗೆ ಕೇಳ ತೊಡಗಿತು. ಗುರಿ ತಲಪಿದೆವಲ್ಲಾ ಎಂಬ ಖುಷಿಗೆ ಕಾಲೂ ಚುರುಕಾಯಿತು. ಹತ್ತೇ ನಿಮಿಷ. ನಾವು ಹೊಳೆಯ ದಂಡೆಯಲ್ಲಿದ್ದೆವು. ನಾನು ಬಟ್ಟೆ ಬಿಚ್ಚಿ ಒಗೆದು ನೀರಿಗೆ ನುಗ್ಗಿದೆ. ಮೆಲ್ಲಗೋ ಮೆಲ್ಲಗೋ ಎನ್ನುತ್ತಾ ಎಸ್ಸೆಮ್ ನನ್ನನ್ನು ಹಿಂಬಾಲಿಸಿದ. ತುಂಗಭದ್ರೆಯ ನೀರು ಕೂಡ ಬೆಚ್ಚಗಿತ್ತು! ಗುಳು ಗುಳು ಇಬ್ಬರೂ ನೀರಲ್ಲಿ ಮುಳುಗಿದೆವು. ನೀರಲ್ಲಿ ಮುಳುಗಿ ದಂಡೆಗೆ ಬಂದದ್ದೇ ತಡ ಹೊಟ್ಟೆಯಲ್ಲಿ ಭಯಂಕರ ಸಂಕಟ! ಓ…ಇದು ಹಸಿವು ಕಣೋ ಎಂದ ಎಸ್ಸೆಮ್. ಕರುಳನ್ನು ಗಟ್ಟಿಯಾಗಿ ಹಿಂಡಿ ತುದಿಯನ್ನು ಬೆಂಕಿಗೆ ಹಿಡಿದಂಥ ಸಂಕಟ. ಇಲ್ಲಿ ಎಲ್ಲಾದರೂ ಊಟ ಸಿಕ್ಕತ್ತಾ? ಎಂದ ಎಸ್ಸೆಮ್. ಅಕೋ..ಆ ದಿಣ್ಣೆಯ ಹಿಂದೆ ಮಠ ಐತ್ರಿ…ಯಾತ್ರಾರ್ಥಿಗಳಿಗೆ ಅಲ್ಲಿ ಊಟ ಹಾಕುತಾರ್ರಿ….

ನಡಿ ಮಠಕ್ಕೆ ಹೋಗೋಣ ಮೊದಲು…! ಅಂದ ಎಸ್ಸೆಮ್. ತಲೆಯ ಮೇಲೆ ಒದ್ದೆ ಟವೆಲ್ಲು ಹಾಕಿಕೊಂಡು ಇಬ್ಬರೂ ಮಠದ ಪೌಳಿ ಸಮೀಪಿಸಿದೆವು. ಕಟ್ಟೆಯ ಮೇಲೆ ದ್ವಾರಪಾಲಕನ ಹಾಗೆ ಒಬ್ಬ ಶೊಬಚ ಕೂತಿದ್ದ. ಪ್ರಾಸಾದ ಸಿಕ್ಕುತ್ತದೋ? ಎಂದ ಎಸ್ಸೆಮ್. ಸ್ನಾನ ಆಗಿದೆಯಾ ಎಂಬ ಪ್ರಶ್ನೆ ಬಂತು. ಪ್ರವರ ಹೇಳಿ ಒಳಗೆ ಹೋಗಿ ಕೂತುಕೊಳ್ಳಿ…ಎರಡು ಗಂಟೆಗೆ ಎಲೆ ಹಾಕುತಾರೆ…ಎಂದ ಶೊಬಚ. ಎಸ್ಸೆಮ್ ಮಿಕಿ ಮಿಕಿ ನನ್ನ ಮುಖ ನೋಡಿದ. ಸತ್ತರೂ ಚಿಂತೆಯಿಲ್ಲ…ಪ್ರವರ ಹೇಳಿ ಊಟ ಮಾಡೋದಿಲ್ಲ ಅಂದವನು ನಾನೇ ಇರಬೇಕು. ಹಂಗಾದರೆ ಉಪವಾಸ ಬಿದ್ದು ಸಾಯಿ…ಎಂದು ಎಸ್ಸೆಮ್ ತಣ್ಣಗೆ ನುಡಿದ. ಇಬ್ಬರೂ ಮತ್ತೆ ಸೋಪಾನವಿಳಿದು ಕೆಳಕ್ಕೆ ಬಂದೆವು. ಇದನ್ನು ನೋಡಿದ ಕುರಿ ಕಾಯೋ ಹುಡುಗ…ಯಾಕೆ ಏನಂದರು ಅಂದ. ನಾನು ನಕ್ಕು ಆ ಊಟ ನಮಗೆ ಹಿಡಿಸೋದಿಲ್ಲ ಅಂದೆ. ನಾನು ಬುತ್ತಿ ಕೊಡುತೀನಿ…ಪರವಾಗಿಲ್ಲ ಅಂದರೆ…ಎಂದ ಹುಡುಗ. ಮೂವರೂ ಹೊಳೆಯ ಪಕ್ಕದಲ್ಲಿದ್ದ ಬಂಡೆಯ ನೆರಳಲ್ಲಿ ಕೂತೆವು. ಮರದ ನೆರಳು ಅಲ್ಲಾಡುವ ನೆರಳು. ಬಂಡೆಯ ನೆರಳು ಹಾಗಲ್ಲ. ಇದ್ದಲ್ಲೇ ಬಿದ್ದುಕೊಂಡು ಕಾದು ಚಕ್ಕಳಕಟ್ಟಿರುತ್ತೆ. ಗವಿಯ ಒಳಗಿಂದ ಕಪಟಗಳ ಕಿಲುಬು ವಾಸನೆ ಬೇರೆ ಹೊಡೆಯುತ್ತಾ ಇತ್ತು. ಮುತ್ತಗದ ಎಲೆ ಕಿತ್ತು ತಂದ ಹುಡುಗ ಇಬ್ಬರಿಗೂ ಮೊಸರನ್ನ ಕೊಟ್ಟ.ಎಷ್ಟೋ ದಿನ ಊಟಮಾಡದವರ ಹಾಗೆ ನಾವು ಗಬ ಗಬ ಮೊಸರನ್ನ ತಿಂದೆವು. ಹೊಟ್ಟೆ ನಿಧಾನಕ್ಕೆ ತಣ್ಣಗಾಗತೊಡಗಿತು. ನನಗೋ ಕಣ್ಣು ಒತ್ತಿಕೊಂಡು ಬರುತ್ತಾ ಇತ್ತು. ಅನ್ನಸೊಕ್ಕಿನ ನಿದ್ದೆ ಅಂದರೆ ಇದೇ ಇರಬೇಕು. ಇಲ್ಲೇ ಒಂದು ಚೆನ್ನಕೇಸರಿ ಮರ ಇತ್ತು ಕಾಣಯ್ಯ…ಹೋದ ವರ್ಷ ನೋಡಿದ್ದೆ…ಭಾಳ ಎತ್ತರದ ಮರ ಬಿಡು…ಎಲ್ಲಿದೆ ನಿಂಗೆ ಗೊತ್ತಾ? ಎಂದು ಎಸ್ಸೆಮ್ ಹುಡುಗನನ್ನು ಕೇಳುತಾ ಇದ್ದ. ಓ…! ಆ ಮರಾನಾ…? ಇಲ್ಲೇ ಹತ್ತಿರದಾಗೇ ಐತ್ರಿ…ತೋರಿಸ್ತೀನಿ ಬೇಕಾದ್ರೆ…

ಅಯ್ಯಾ….ನಾನು..ಮಲಗಬೇಕು…ಒಂದು ಹೆಜ್ಜೆ ಎತ್ತಿಡಲಾರೆ….

ಎಲಾ ಇವನ…ಅಲ್ಲೇ ಮರದ ನೆರಳಲ್ಲಿ ಮಲಗುವೆಯಂತೆ ಬಾರಯ್ಯಾ…

ಇಬ್ಬರೂ ಹುಡುಗನನ್ನು ಹಿಂಬಾಲಿಸಿದೆವು. ನಾನು ಮೆಲ್ಲಗೆ ಜೋಲಿ ಹೊಡೆಯುತ್ತಾ ಇದ್ದೆ. ಸುಮಾರು ದೂರ ನಡೆದೆವು…ಅಕೋ…ಮರ ಕಾಣಸ್ತೈತಾ ಅಲ್ಲಿ…ಬಂಡೆ ತುದೀಲಿ…?

ಬಂಡೆ ಬಳಸಿಕೊಂಡು ನಾವು ಮರದ ಬಳಿಗೆ ಹೋದೆವು. ಇದೇ ನೋಡಪ್ಪ ನಾನು ನೋಡಿದ ಮರ..! ಎಂದ ಎಸ್ಸೆಮ್. ಎಷ್ಟು ಎತ್ತರದ ಮರ ಗೊತ್ತಾ? ಅಂಥ ಬೃಹತ್ ಚೆನ್ನ ಕೇಸರಿ ನಾನು ನೋಡೇ ಇರಲಿಲ್ಲ. ಮರ ನೋಡುತ್ತಲೇ ನಾನು ಹಿಂದೆ ನೋಡಿದ್ದ ಇನ್ನೂ ಎರಡು ಮರ ನನ್ನ ಕಣ್ಮುಂದೆ ಬಂದವು. ಅದಕ್ಕೇ ಹೇಳೋದು. ಪ್ರಕೃತಿಯಲ್ಲಿ ಯಾವ ವಸ್ತುವೂ ಒಂಟಿಯಾಗಿರೋದಿಲ್ಲ ಅಂತ. ಒಂದು ಮರ ನಮ್ಮ ಮಿಡ್ಲ್ ಸ್ಕೂಲ್ ಗಾರ್ಡನ್ನಲ್ಲಿ ಇತ್ತು. ಇಷ್ಟು ಎತ್ತರದ್ದಲ್ಲ.  ಅದರ ಕೊಂಬೆಯ ಮೇಲೆ ಒಂದು ಹೆಜ್ಜೇನು ಕಟ್ಟಿತ್ತು. ಒಂದು ದೊಡ್ಡ ಸೋರೆ ದಪ್ಪದ್ದು. ಒಂದು ರಾತ್ರಿ ನನ್ನ ಜತೆಗಾರ ಮಾರುದ್ರ ಗಳ ಸಮೇತ ಬಂದು ಸ್ಕೂಲಿನ ಕಾಂಪೌಂಡ್ ಹಾರಿ ಜೇನಿಗೆ ಗಳ ಚುಚ್ಚಿಬಿಟ್ಟಿದ್ದ. ಜೇನಲ್ಲಿ ಒಂದು ಸಣ್ಣ ತೂತ ಆಗಿ ತೊಟ್ ತೊಟ್ ಅಂತ ಅದರಿಂದ ಜೇನು ತೊಟ್ಟಿಕ್ಕಲಿಕ್ಕೆ ಶುರುವಾಗಿತ್ತು. ಮಾರನೇ ದಿನ ಇಡೀ ಹಗಲು ಜೇನು ತೊಟ್ಟಿಕ್ಕುತ್ತಾ ಇತ್ತು. ಹುಡುಗರಿಗೆಲ್ಲಾ ಖುಷಿಯೋ ಖುಷಿ. ಗಾಳಿಯಲ್ಲಿ ಹಾರಿ ಬರುವ ಜೇನ ಹನಿಗೆ ಬಾಯಿ ಒಡ್ಡುವುದು ಒಂದು ಆಟ ನಮಗೆ. ಇಲ್ಲಿ ಬೀಳತ್ತೆ ಅಂದರೆ…ಆ ಹಾಳಾದ ಹನಿ ಅಲ್ಲಿ ಬೀಳೋದು. ಗಾಳಿಯ ಮರ್ಜಿ . ನಾವು ಮರದ ಸುತ್ತ ಪೇರಿಹೊಡೆಯುತ್ತಾ ಜೇನು ಹನಿಗಾಗಿ ಬಾಯಿ ಅಗಲಿಸಿಕೊಂಡು ಒಬ್ಬರಿಗೊಬ್ಬರು ಢಿಕ್ಕಿ ಹೊಡೆಯುತ್ತಾ ದೊಡ್ಡ ರಂಪಾಟ ಶುರು ಹಚ್ಚಿದ್ದೆವು. ನಮ್ಮ ಮೇಷ್ಟ್ರುಗಳೂ ಕ್ಲಾಸು ತಗೊಳ್ಳದೆ…ಈಕಡೆ …ಈಕಡೆ ಬಾರಲೆ…ಅಲ್ಲಿ ಬೀಳ್ತಾ ಅಯ್ತೆ ನೋಡು ಜೇನು…ಅಂತ ಸ್ಕೂಲಿನ ಕಟ್ಟೆಯ ಮೇಲೇ ನಿಂತು ನಮಗೆ ಮಾರ್ಗದರ್ಶನ ಮಾಡುತಾ ಇದ್ದರು. ಇನ್ನೊಂದು ಚೆನ್ನ ಕೇಸರಿ ನಮ್ಮ ಅಜ್ಜನ ಊರು ಕೂನಬೇವಲ್ಲಿ ನಾನು ನೋಡಿದ್ದು. ನಮ್ಮ ಚಿಕ್ಕಮ್ಮನ ಮದುವೆಗೆ ನಾವು ಹೋಗಿದ್ದೆವು. ಮದುವೆ ಚಪ್ಪರಕ್ಕೆ ಅಂತ ರಾಶಿ ರಾಶಿ ಚೆನ್ನಕೇಸರಿ ಹೂವಿನ ಟೊಂಗೆ ಕಿತ್ತುಕೊಂಡು ಬಂದಿದ್ದರು. ಆ ಚೆನ್ನ ಕೇಸರಿ ಮರವಾದರೋ ನಮ್ಮ ಅಜ್ಜನ ಮನೆಯ ಮೇಲೇ ಕೆಂಬಣ್ಣದ ಛತ್ರಿ ಹಿಡಿದಿತ್ತು. ನಾವು ಮಾಳಿಗೆ ಹತ್ತಿ ಕೈಚಾಚಿದರೆ ಹೂವಿನ ಟೊಂಗೆ ಕೈಗೆ ನಿಲುಕುತಾ ಇದ್ದವು. ನಾವು ಹೂ ಕಿತ್ತುಕೊಂಡು ಅದರ ಒಳಗಿದ್ದ ಕೇಸರ ಬಿಡಿಸಿಕೊಂಡು ಕೊಂಡಿ ಜಗ್ಗುವ ಆಟ ಆಡುತಾ ಇದ್ದೆವು. ಚನ್ನಕೇಸರಿಯ ಕೇಸರಗಳು ಹೇಗಿರತ್ತವಪ್ಪ ಅಂದರೆ, ಪ್ರತಿಯೊಂದು ಕೇಸರವೂ ಒಂದೊಂದು ಅಂಗುಲ ಉದ್ದ, ಪ್ರಶ್ನಾರ್ಥಕ ಚಿಹ್ನೆಗಳ ಹಾಗೆ. ಆ ಪ್ರಶ್ನೆಗಳ ತುದಿಯಲ್ಲಿ ಸಣ್ಣ ಗೋಧಿಬುಡ್ಡಿನಂಥ ಬೀಜಗಳಿರುತ್ತಾವೆ. ಇಬ್ಬರು ಹುಡುಗರು ಎರಡು ಕೊಕ್ಕೆ ಪರಸ್ಪರ ಸಿಕ್ಕಿಸಿ ಎಳೆಯುವುದು. ಯಾರ ಕೊಕ್ಕೆ ಮುರಿದು ಹೋಗುತ್ತೋ ಅವರು ಸೋತ ಹಾಗೆ! ಈ ಆಟದಲ್ಲಿ ಕೆಲವು ಸಲ ಹುಡುಗಿಯರೂ ನಮ್ಮ ಜತೆ ಸೇರಿಕೊಳ್ಳುತ್ತಾ ಇದ್ದರು…ಸೋತಾಗ ಗೊಳೋ ಅಂತ ಅಳುತ್ತಾ ಇದ್ದರು! ಹುಡುಗರು ಪಾಪ ಸೋತರೂ ಅಳುವ ಹಾಗಿಲ್ಲ…ಅತ್ತರೆ ಅಳುಬುರುಕ, ಹೆಣ್ಬುಡ್ಡಿ ಅಂತ ನಾವು ಹಾಸ್ಯ ಮಾಡುತಾ ಇದ್ದೆವು…

ಚೆನ್ನಕೇಸರಿಮರದ ಕೆಳಗೆ ಉದುರಿದ ಮಾಸಲು ಕೆಂಪು ಹೂಗಳ ರಾಶಿಯೇ ಬಿದ್ದಿತ್ತು. ಗಾಳಿ ಬೀಸಿದ ಹಾಗೆಲ್ಲಾ ಹೊಸ ಹೊಸ ಕೆಂಪು ಹೂ ತಟ ತಟ ನಮ್ಮ ಮೇಲೆ ಬೀಳುತಾ ಇದ್ದವು. ಚೆನ್ನಕೇಸರಿ ಮರದ ನೆರಳು ಬಲೇ ವಿಚಿತ್ರ ಇರುತ್ತೆ. ಅದೊಂದು ಥರ ಬಿಸಿಲು ನೆರಳಿನ ಬಲೆ. ಆ ನೆರಳು ಮುಖದ ಮೇಲೆ ಬಿದ್ದರೆ ಮುಖದ ಮೇಲೆ ಚಿತ್ರ ಬರಕೊಂಡ ಹಾಗೆ ವಿಚಿತ್ರವಾಗಿ ಕಾಣುತ್ತೆ. ಬುಡದಲ್ಲಿ ಮಲಗಿ ತಲೆ ಎತ್ತಿ ನೋಡಿದರೆ ಅದೆಷ್ಟು ಎತ್ತರವಪ್ಪಾ ಈ ಚೆನ್ನಕೇಸರಿ. ಅದರ ಬುಡದ ಮೇಲೆ ಸಾಲು ಸಾಲು ಕರಿಗೊದ್ದ ಹತ್ತುತಾ ಇಳಿಯುತಾ ಎಂಥದೋ ಕೆಲಸಕ್ಕೆ ಬಾರದ ಚಟುವಟಿಕೆಯಲ್ಲಿ ತೊಡಗಿದಾವೆ. ಮೇಲೆ ನೀಲಿ ಆಕಾಶ ಇತ್ತಲ್ಲಾ…ಅದು ಈಗ ಕೆಂಪು ರಂಗವಲ್ಲಿಯ ಹಿನ್ನೆಲೆಯಲ್ಲಿ ಬಹಳ ಚಂದಾಗಿ ಕಾಣುತಾ ಇದೆ. ಹಂಗೇ ನೋಡುತಾ ನೋಡುತಾ ಆ ಮರದ ಎತ್ತರದ ರೆಂಬೆ ಮೇಲೆ ನಾನಾ ಥರದ ಹಕ್ಕಿಗಳು ಕಾಣುತಾ ಇವೆ. ಎಲಾ…ಇಷ್ಟೊಂದು ಹಕ್ಕಿಗಳಿದ್ದವಾ ಇಲ್ಲಿ ಅಂತ ನಾವು ಆಶ್ಚರ್ಯ ಪಡೋ ಹಾಗೆ. ಅವು ಯಾಕೆ ಎಲ್ಲೂ ಹಾರಿ ಹೋಗಿಲ್ಲ. ಮಧ್ಯಾಹ್ನದ ಬಿಸಿಲಿಗೆ ಅಂಜಿ ಅವೂ ರೆಂಬೆಯ ಮೇಲೆ ಜೂಬರಿಸುತ್ತಾ ರೆಸ್ಟು ತೆಗೆದುಕೊಳ್ಳುತ್ತಿದ್ದಾವ ಹೇಗೆ?ಅಥವಾ ಅವು ಹಾರಲಿಕ್ಕೆ ಬಾರದ ಎಳೆ ಮರಿಗಳ? ಅಥವಾ ಗರಿ ಉದುರಿದ ಮುದಿಹಕ್ಕಿಗಳಾ?

ನಾವು ಮಾತಾಡದೆ ಆ ಚೆನ್ನಕೇಸರಿಯ ನೆರಳಲ್ಲಿ ಮಲಗಿದ್ದೇವೆ. ಈಗ ಹಂಪಿ ಹಾಳು ಹಂಪಿ ಅಂತ ನನಗಂತೂ ಅನ್ನಿಸುತ್ತಾ ಇಲ್ಲ.  ಯಾವ ಹಾಳಾದವನು ಅದನ್ನ ಹಾಗೆ ಕರೆದನೋ…?

ಚೆನ್ನಕೇಸರಿಯ ನೆರಳಲ್ಲಿ ಮಲಗಲಿಕ್ಕೆ ಪ್ರವರ ಹೇಳಬೇಕಾಗಿಲ್ಲ…ಎಂದು ಎಸ್ಸೆಮ್ ಮುಸಿ ಮುಸಿ ನಗುತ್ತಾನೆ. ಮಠದ ನೆರಳಿಗೆ ಮಾತ್ರ ಪ್ರವರ….ಮರದ ನೆರಳಿಗಲ್ಲ….ಅಂತ ನನ್ನೊಳಗೇ ಅನ್ನಿಸುತ್ತೆ. ಯಾಕೋ ಅದನ್ನ ಬಾಯಿ ಬಿಟ್ಟು ಹೇಳಲು ಆಗುವುದಿಲ್ಲ. ನಮಗೆ ಆಗಾಗ ಇಂಥ ಅನುಭವವಾಗುವುದುಂಟು. ಕೆಲವು ಮಾತು ಆಡಿ ಎಂಜಲು ಮಾಡಬಾರದು…ಸುಮ್ಮನೆ ಮನಸ್ಸಲ್ಲೇ ಅಂದುಕೊಳ್ಳಬೇಕು…

 

 

‍ಲೇಖಕರು G

March 13, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. savitri

    ಚೆನ್ನಕೇಸರಿ ಬಗ್ಗೆ ಇಷ್ಟು ಚೆಂದಗೆ ಬರೆದು ಓದಲು ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್‍.

    ಪ್ರತಿಕ್ರಿಯೆ
  2. ರಾಮಚಂದ್ರ ನಾಡಿಗ್

    ಚೆನ್ನಕೇಸರಿ ಮರ ಅಂದ್ರೆ ನನಗೆ ನೆನಪಿಗೆ ಬರೋದು ತ್ಯಾವಣಿಗೆ ಹೈಸ್ಕೂಲ್…. ಶಾಲೆ ಆವರಣದ ತುಂಬಾ ಬರೀ ಕೇಸರಿ ಮತ್ತು ದಟ್ಟ ಕೆಂಬಣ್ಣದ ಚೆನ್ನಕೇಸರಿ ಮರಗಳು…. ಬೇಸಿಗೆ ರಜೆ ಮುಗಿದು ನಾವು ಶಾಲೆಗೆ ಹೋಗುತ್ತಿದ್ದ ಹಾಗೆ ಮರಗಳು ಹೂವಿನ ಹೊದಿಕೆ ಹೊದ್ದು ನಮ್ಮನ್ನೆಲ್ಲಾ ಸ್ವಾಗತಿಸುತ್ತಿದ್ವು…. ಇನ್ನು ಮರದ ಉದ್ದನೆಯ ಕಾಯಿಯನ್ನ ಕತ್ತಿಯ ಹಾಗೆ ಕೈಯಲ್ಲಿ ಹಿಡಿದು ನಾವು ಹುಡುಗ್ರೆಲ್ಲಾ ಆಡ್ತಾ ಇದ್ವಿ… ಇನ್ನು ನಮ್ಮ ಅಕ್ಕಂದ್ರು ಅಲ್ಲಿಂದ ಎರಡು ಸಣ್ಣ ಗಿಡಗಳನ್ನ ಕಿತ್ತು ನಮ್ಮನೆ ಅಂಗಳದಲ್ಲಿ ನೆಟ್ಟಿದ್ದು…. ಅದ್ರಲ್ಲಿ ಒಂದು ಮರ ಈಗ ಇದೆ… ಮತ್ತೊಂದು ಮರವನ್ನ ಅಪ್ಪಯ್ಯ ನಾವಿಲ್ಲದಾಗ ಕಡಿಸಿ ಹಾಕಿದ್ರು……

    ಇದನ್ನ ಓದಿದ ಮೇಲೆ ಹಳೆಯ ನೆನಪುಗಳೆಲ್ಲಾ ಕಣ್ಮುಂದೆ ಬಂದ್ವು….ಚೆನ್ನಕೇಸರಿ ಮರದ ಬಗ್ಗೆ ಬರೆದಿರೋದು ಬಾಳಾ ಚೆನ್ನಾಗಿದೆ….

    ಪ್ರತಿಕ್ರಿಯೆ
  3. subbanna

    ಒ೦ದು ಚೆ೦ದದ ಚಿತ್ರ ಇದ್ದಿದ್ದರೆ, ಚೆನ್ನಕೇಸರಿಯ ಪರಿಚಯ ಪರಿಪೂರ್ಣ.

    ಪ್ರತಿಕ್ರಿಯೆ
  4. mala

    tumbaa chennaagide
    chennakEsari andare yaava mara antha tiLiyalilla
    adu “gul mohar” irabahudaa?
    tiLidavaru dayaviTTu tilisikoDi

    ಪ್ರತಿಕ್ರಿಯೆ
    • ಎಚ್ಚೆಸ್ವಿ

      ಹೌದು. ಚೆನ್ನಕೇಸರಿಯೇ ಬೆಂಗಳೂರಿನ ಗುಲ್ಮೊಹರ್.

      ಪ್ರತಿಕ್ರಿಯೆ
  5. Rajashekhar Malur

    channAgide! A hasivinallU pravara hELuvudilla eMdiralla! ‘marada neraLu mattu maThada neraLu’ – prakritige pravara bEkilla… idu nAvE mADikoMDaddu. idu nalavattu varShagaLa hiMde nimma vichAradhAre aMdare… great.

    ಪ್ರತಿಕ್ರಿಯೆ
  6. Subramanya hegde

    “ಮಠದ ನೆರಳಿಗೆ ಮಾತ್ರ ಪ್ರವರ….ಮರದ ನೆರಳಿಗಲ್ಲ….” ಬಹಳ ಒಳ್ಳೆಯ ಸಾಲುಗಳು. ಅಜ್ಜ, ನಿಮ್ಮ ವಿಚಾರನಿಷ್ಠೆ ನೋಡಿ ನಾವೆಲ್ಲ ಕಲಿಯಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: