ಎಚ್ಚೆಸ್ವಿ ಅನಾತ್ಮ ಕಥನ: ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಆ ನಕ್ಷತ್ರ…

ಅನಾತ್ಮಕಥನ-ಹನ್ನೆರಡು

 

ಹುಡುಗಿಗೆ ಮದುವೆ ಫಿಕ್ಸ್ ಆದ ಮೇಲೆ ತಾಯಿ ಮಗಳಿಗೆ ಮೂರುಬಾರಿ ಮೂಗು ಚುಚ್ಚಿಸುವ ಪ್ರಯತ್ನ ಮಾಡಿದರು. ಮೂರು ಸಾರಿಯೂ ಕೂಕು ಬೆಳೆದು, ವಿಪರೀತ ನೋವಾಗಿ ಮೂಗಿಗೆ ತೂರಿಸಿದ್ದ ದಾರ ತೆಗೆಸಬೇಕಾಯಿತು. ಮದುವೆ ಬೇರೆ ಹತ್ತಿರ ಬರುತ್ತಾ ಇತ್ತು. ಮದುವೆ ಹುಡುಗಿಗೆ ಮೂಗು ಚುಚ್ಚದಿದ್ದರೆ ಹೇಗೆ? ಹುಡುಗಿಯ ನೀಳವಾದ ಮೂಗಿಗೆ ಒಂದು ಕಿರುಮುತ್ತಿನ ಮೂಗುಬಟ್ಟು ಇಟ್ಟರೆ ಅದರ ಲಕ್ಷಣವೇ ಲಕ್ಷಣ..! ಎಂಬುದಾಗಿ ಮದುವೆ ಹುಡುಗನ ಪತ್ರಬಂದಿತ್ತು. ಹೈಸ್ಕೂಲೊಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಪದ್ಯ ಬೇರೆ ಬರೆಯುತ್ತಾ ಇದ್ದ. ಅವ ಹುಡುಗಿಗೆ ಬರೆದು ಕಳಿಸಿದ್ದ ಪದ್ಯದ ಕೆಲವು ಸಾಲುಗಳು ಹೀಗಿದ್ದವು:

ನೀನು ಮೂಗಿನ ಮೇಲೆ ಇಡಲು ಮುತ್ತಿನ ಬಟ್ಟು

ನಾಚುವುದು ಚಿಗುರೆಲೆ ಹೊಳೆಯುವಿಬ್ಬನಿ ತೊಟ್ಟು

 

ಹುಡುಗ ಪದ್ಯ ಬೇರೆ ಬರೆದಿದ್ದಾನೆ! ಮತ್ತೆ ಮೂಗು ಚುಚ್ಚಿಸದೆ ನಿರ್ವಾಹವೇ ಇಲ್ಲ..! ಎಂದು ಹುಡುಗಿಯ ತಂದೆ ಗಟ್ಟಿಯಾಗಿ ನಕ್ಕರು.ಎಲ್ಲ ಬಗೆಯ ಟೆನ್ಷನ್ನುಗಳನ್ನು ಕಡಿಮೆ ಮಾಡುವುದಕ್ಕೆ ಹೀಗೆ ಗಟ್ಟಿಯಾಗಿ ನಗುವುದು ಹುಡುಗಿಯ ತಂದೆ ಅನೇಕ ವರ್ಷಗಳಿಂದ ರೂಢಿಸಿಕೊಂಡುಬಂದ ಉಪಾಯವಾಗಿತ್ತು. ಆದರೆ ತಂದೆಯ ನಗು ಹುಡುಗಿಗೆ ಧೈರ್ಯ ನೀಡುವಲ್ಲಿ ಸಮರ್ಥವಾಗಲಿಲ್ಲ. ಅವಳು ಮುಖ ಮುಚ್ಚಿಕೊಂಡು ಗೊಳೋ ಅಂತ ಅಳತೊಡಗಿದಳು. ಮೂರು ಸಾರಿ ಚುಚ್ಚಿದಾಗಲೂ ಕೂಕು ಬೆಳೆದು ವಿಪರೀತ ರಂಪವಾಗಿತ್ತಲ್ಲ! ಅದು ಹುಡುಗಿಯ ಮನಸ್ಸಲ್ಲಿ ನಿಂತುಬಿಟ್ಟಿತ್ತು. ನೀವು ಬಲವಂತ ಮಾಡಬೇಡಿ! ನಾನೇ ಬಂದು ಅವಳ ಹತ್ತಿರ ಮಾತಾಡುತ್ತೇನೆ ಎಂಬುದಾಗಿ ಹುಡುಗನಿಂದ ಪತ್ರಬಂತು.

ಯಥಾಪ್ರಕಾರ ಶನಿವಾರ ಸಂಜೆ ಹುಡುಗನ ಸವಾರಿ ರಾಮಗಿರಿಗೆ ಚಿತ್ತೈಸಿತು. ಮದುವೆ ನಿಶ್ಚಯವಾದ ಮೇಲೆ ದೇವರ ತಲೆಯ ಮೇಲೆ ಹೂವು ತಪ್ಪಿದರೂ ತಪ್ಪಬಹುದು, ಹುಡುಗನ ರಾಮಗಿರಿಯಾತ್ರೆ ತಪ್ಪುವಂತಿರಲಿಲ್ಲ. ಶನಿವಾರ ಮಾರ್ನಿಂಗ್ ಸ್ಕೂಲ್. ಮಧ್ಯಾಹ್ನ ನಾಕು ಗಂಟೆಗೆ ವೆಂಕಟೇಶ ಅಂತ ಒಂದು ಬಸ್ಸಿತ್ತು. ಅದು ಮಲ್ಲಾಡಿಹಳ್ಳಿಯಿಂದ ರಾಮಗಿರಿಗೆ ನೇರವಾಗಿ ಹೋಗುವಂಥದ್ದು. ಅದರಲ್ಲಿ ಒಬ್ಬ ಖಾಯಂ ಗಿರಾಕಿ ಎಂದರೆ ನಮ್ಮ ವರಮಹಾಶಯ. ಪ್ರತಿಶನಿವಾರ ಶಾನುಭೋಗರ ಅಳಿಯ ಹೀಗೆ ಬರುವುದು ಗಮನಿಸಿದ ಹಳ್ಳಿಯ ಮಂದಿ ಅವನಿಗೆ ಶನಿವಾರದ ಅಯ್ಯನೋರು ಅಂತ ಹೆಸರಿಟ್ಟಿದ್ದರು.

ಹುಡುಗ ಬರುವುದು ಖಾತ್ರಿಯಿದ್ದುದರಿಂದ ಹುಡುಗಿ ಎರಡು ಜಡೆ ಹಾಕಿಕೊಂಡು, ತನ್ನ ಕೆಂಪು ಹಳದಿ ಲಂಗದಲ್ಲಿ ಕಂಗೊಳಿಸುತ್ತಾ , ಜಡೆಯ ಉದ್ದಕ್ಕೂ ಕನಕಾಂಬರಿ ಜೋತುಬಿಟ್ಟುಕೊಂಡು ರೆಡಿಯಾಗಿದ್ದಳು. ಹುಡುಗಿ ಎರಡು ಜಡೆ ಹಾಕಿಕೊಳ್ಳುವುದಕ್ಕೆ ಫ್ಯಾಸನ್ನೇತರ ಕಾರಣವಿತ್ತೆಂಬುದನ್ನು ತಮ್ಮ ಗಮನಕ್ಕೆ ತರಲೇ ಬೇಕಾಗಿದೆ. ಒಂದೇ ಜಡೆ ಹಾಕಿದರೆ ಅವಳ ದಟ್ಟ ಕೂದಲು ಒಂದು ಮುಷ್ಟಿಗಾತ್ರದ ಜಡೆಗೆ ಕಾರಣವಾಗುತ್ತಿತ್ತು. ಅದಕ್ಕಾಗಿ ಹುಡುಗಿಗೆ ಬೆನ್ನು ನೋವು ಕಡಿಮೆ ಮಾಡಲೆಂದು ಭಾರವನ್ನು ಎರಡಾಗಿ ವಿಭಜಿಸಿ ಎರಡು ಜಡೆ ಹಾಕಲಾಗುತ್ತಿತ್ತು. ಅವುಗಳಲ್ಲಿ ಎಡಗಡೆ ಜಡೆ ಎದೆಯ ಮೇಲೆ ಬೀಳೋದು. ಬಲ ಜಡೆ ಬೆನ್ನ ಹಿಂದೆ. ಮುಂದಲೆಯಲ್ಲಿ ಸುಳಿ ಇದ್ದುದರಿಂದ ಹುಡುಗಿ ಎಡಕ್ಕೆ ಓರೆ ಬೈತಲೆ ತೆಗೆಯುತ್ತಾ ಇದ್ದಳು. ಅವಳು ಎಳಸು ಮುಖದಲ್ಲಿ ಸೇತುಪ್ರಾಯವಾದದ್ದು ಅವಳ ನೀಳವಾದ ಉದ್ದನೆಯ ಮೂಗು. ಸೂಕ್ಷ್ಮವಾಗಿ ನೋಡಿದರೆ ಆ ಮೂಗು ಕೊಂಚ ಎಡಕ್ಕೆ ಬಾಗಿದಂತೆ ಇತ್ತು. ಅಸೂಕ್ಷ್ಮ ನೋಟಕ್ಕೆ ಆ ಐಬು ಕಾಣುತ್ತಿರಲಿಲ್ಲ. ಅವಳ ಹಲ್ಲಿನ ಸಾಲು ಮುತ್ತು ಜೋಡಿಸಿದ ಹಾಗೇ ಇದ್ದದ್ದು ನಿಜ. ಆದರೆ ಮುತ್ತನ್ನು ಸ್ವಲ್ಪ ವಿರಲವಾಗಿ ಜೋಡಿಸಿದಂತೆ ಪ್ರತಿಯೊಂದು ಹಲ್ಲಿನ ನಡುವೆಯೂ ಒಂದು ದಾರ ತೂರಿಸುವಷ್ಟು ಬಿಡುವಿರುತ್ತಿತ್ತು. ಅವಳು ಮನಃಪೂರ್ತಿನಕ್ಕಾಗ ಹಲ್ಲಿನ ಎರಡೂ ಸಾಲಿನ ಜತೆಗೆ ಸ್ವಲ್ಪು ವಸಡಿನ ಭಾಗವೂ ಕಾಣುತ್ತಾ ಆ ನಗೆ ತುಂಬ ಮೋಹಕವಾಗುತ್ತಿತ್ತು. ಆದರೆ ಆ ಹುಡುಗಿ ಹಾಗೆ ಮನಃಪೂರ್ವಕವಾಗಿ ನಗುವುದು ತುಂಬ ಅಪರೂಪವಾಗಿತ್ತು. ಆಕೆ ಸ್ವಲ್ಪು ಸಿಡುಕುಮೂತಿ ಸಿಂಗಾರಿಯೇ! ಮದುವೆಯಾದಮೇಲೇ ಅವಳು ತನ್ನ ಮೂವತ್ತೆರಡು ಹಲ್ಲೂ ಕಾಣುವಂತೆ ಧಾರಾಳವಾಗಿ ನಗಲಿಕ್ಕೆ ಶುರುಹಚ್ಚಿದ್ದು!

ಹುಡುಗ ಬಂದು ಕಾಫಿ ಗೀಫಿ ಕುಡಿದಾದ ಮೇಲೆ ಬಚ್ಚಲಿಗೆ ಹೋಗಿ ಸೋಪಲ್ಲಿ ತಿಕ್ಕೀ ತಿಕ್ಕಿ ಮುಖ ತೊಳೆದುಕೊಂಡು ವರಾಂಡದಲ್ಲೇ ಬಟ್ಟೆ ಬದಲಿಸಿ( ಆ ಮನೆಯಲ್ಲಿ ಪ್ರತ್ಯೇಕ ಕೋಣೆ ಎನ್ನುವುದು ಇರಲಿಲ್ಲ….!)ನಾನು ರೆಡಿ ಅಂತ ಕೂಗಿದ.ಚೀಲದಲ್ಲಿ ಹಣ್ಣೂ ಕಾಯಿ ಹೂವು, ಅರಿಸಿನ ಕುಂಕುಮ ಕರ್ಪೂರ ಊದಿನಕಡ್ಡಿ ಪ್ಯಾಕ್ ಇಟ್ಟುಕೊಂಡು ಹುಡುಗಿ ಹೊರಟಳು. ಹುಡುಗ ಹುಡುಗಿ ಮದುವೆಗೆ ಮೊದಲೇ ಆ ಹಳ್ಳಿ ಊರಲ್ಲಿ ವಿಹಾರಕ್ಕೆ ಅಂತ ಬೆಟ್ಟದ ಮೇಲೆ ಹೋಗಲಿಕ್ಕುಂಟೆ? ದೇವಸ್ಥಾನಕ್ಕೆ ಹಣ್ಣು ಕಾಯಿ ತೆಗೆದುಕೊಂಡು ಹೋಗಿದಾರೆ ಅಂದರೆ ಅಡ್ಡಿಯಿಲ್ಲ. ಜೊತೆಗೆ ಸೇರು ಪಾವು ಚಟಾಕು ಸೈಜಿನ ಭಾವಮೈದುನರ ದಂಡೂ ಜತೆಯಲ್ಲಿ ಇರುತ್ತಾ ಇತ್ತು. ತ್ರಿಲೋಕಸುಂದರಿಯಾದ ಅಕ್ಕನ ಮೇಲೆ ಯಾವುದೇ ದಾಳಿದಂಡು ನಡೆಯದಿರಲಿ ಎಂಬುದರ ಮುನ್ನೆಚ್ಚರಿಕೆಯ ಕ್ರಮವಾಗಿತ್ತು ಅದು!

ಸಂಜೆ ಸಮಯ. ಹಚ್ಚಗೆ ಹಸಿರುಹೊದ್ದಿದ್ದ ರಾಮಗಿರಿಗುಡ್ಡ. ಬೆಟ್ಟದ ಹಿಂದೆ ಬಂಗಾರದ ಬಣ್ಣದ ಆಕಾಶ. ಬೆಟ್ಟದ ಮೇಲೆ ಬೆಳ್ಳಗೆ ಹೂ ಬಿಟ್ಟ ಹತ್ತಾರು ಮರಕಣಗಿಲೆ ಗಿಡಗಳು. ದೇವಸ್ಥಾನಕ್ಕೆ ಹೋಗುವ ತನಕ ಸೋಪಾನಪಂಕ್ತಿ. ಹುಡುಗರು ಮುಂದೆ. ಹುಡುಗಿ ಅವರ ಹಿಂದೆ. ಅವಳನ್ನು ನಿಷ್ಠೆಯಿಂದ ಫಾಲೋ ಮಾಡಿಕೊಂಡು ವರಮಹಾಶಯ. “ನೀವು ಮುಂದೆ ಬನ್ನಿ . ಯಾಕೆ ಹಿಂದೆ ಹಿಂದೆ ಉಳಿಯುತ್ತೀರಿ…? ” ಎಂದಳು ಹುಡುಗಿ ಕಣ್ಣಲ್ಲೇ ಸಣ್ಣಗೆ ನಗುತ್ತ. “ಬೆಟ್ಟ ತುಂಬ ಕಡಿದಾಗಿದೆ. ನೀನು ಹಿಂದಕ್ಕೆ ವಾಲಿ ಬಿದ್ದರೆ ನಾನು ಹಿಡಿದುಕೊಳ್ಳಬಹುದು!”. “ಸುಳ್ಳು! ಯಾಕೆ ಹಿಂದೆ ಹಿಂದೆ ಬರುತ್ತೀರಿ ನನಗೆ ಗೊತ್ತು!” ಕೋಪ ಮತ್ತು ನಾಚಿಕೆ ಹುಡುಗಿಯ ಮುಖದಲ್ಲಿ ಒಮ್ಮೆಗೇ ಪ್ರತ್ಯಕ್ಷವಾಗುತ್ತಿತ್ತು.

ದೇವಸ್ಥಾನದಲ್ಲಿ ಜನ ತುಂಬಿರುತ್ತಾ ಇದ್ದರು. ಶಿವನ ಗುಡಿಯ ಪಕ್ಕ( ರಾಮಗಿರಿಯಲ್ಲಿ ಕರಿಸಿದ್ದೇಶ್ವರ ಎಂದು ಕರೆಯುತ್ತಾ ಇದ್ದರು) ಸಣ್ಣ ವೀರಭದ್ರನ ಗುಡಿಯಿತ್ತು. ವೀರಭದ್ರನಿಗೆ ಮೈ ತುಂಬ ಕಣಗಿಲೆ ಹೂವಿನ ಎಸಳುಗಳನ್ನು ಮುಡಿಸಿದ್ದರು. ಕೆಲವರು ಭಕ್ತರು ಗುಡಿಯ ಮುಂದೆ ಕೂತು ಹೂವಿನ ಅಪ್ಪಣೆ ಕೇಳುತಾ ಇದ್ದರು. ಬಹಳ ಶಕ್ತಿವಂತ ದೇವರಂತೆ. ಈ ಹುಡುಗಿಯನ್ನು ಈ ಹುಡುಗನಿಗೆ ಕೊಡಬಹುದೇ ಅಂತ ಹೂವಿನ ಅಪ್ಪಣೆ ಕೇಳಿ ಅಪ್ಪಣೆ ಆದಮೇಲೇ ಹುಡುಗಿಯ ತಂದೆ ಹುಡುಗನ ಮನೆಗೆ ಒಪ್ಪಿಗೆ ಪತ್ರ ಬರೆದಿದ್ದಂತೆ. ದೇವರು ಆವತ್ತು ಎಲ್ಲಿಂದ ಹೂ ಪ್ರಸಾದ ಕೊಟ್ಟ ಎಂದು ಹುಡುಗ ಕಳ್ಳನಗೆ ನಗುತ್ತಾ ಕೇಳಿದ. ಉತ್ತರಿಸಲು ಹುಡುಗಿ ನಾಚಿಕೊಂಡಳು. ಕಾರಣ ವೀರಭದ್ರ ಅವತ್ತು ಹೂ ಕೊಟ್ಟಿದ್ದು ಕಟೀಪ್ರದೇಶದ ಕೆಳಭಾಗದಿಂದ! ಮದುವೆಗೆ ಸಂಬಂಧಿಸಿದಂತೆ ಅದು ಬಹಳ ಪ್ರಶಸ್ತವಾದ ಪ್ರಸಾದವಂತೆ!

ದೇವಸ್ಥಾನದ ಮೂಲೆಯಲ್ಲಿ ಪಾತಾಳಗಂಗೆ ಭಾವಿಯಿತ್ತು. ಅದರಲ್ಲಿ ಬೇಸಿಗೆಯಲ್ಲಿ ನೀರು ಕೈ ನಿಲುಕಿಗೆ ಬರೋದು, ಮಳೆಗಾಲದಲ್ಲಿ ಪಾತಾಳಕ್ಕೆ ಇಳಿಯೋದು ಅರ್ಚಕರು ನೂರಾ ಒಂದನೆ ಬಾರಿ ಹೇಳಿ ಟಾರ್ಚ್ ಹಾಕಿ ಗಂಗೆಯ ದರ್ಶನ ಮಾಡಿಸಿದರು. ಅಲ್ಲಿ ಜಂಗಮರ ಪೂಜೆ. ಅಯ್ಯನೋರು ಹುಡುಗ ಹುಡುಗಿಯ ತಲೆಯ ಮೇಲೆ ಧಾರಾಳವಾಗಿ ತೀರ್ಥ ಚುಮುಕಿಸಿ, ಕುಡಿಯಲಿಕ್ಕೆ ಕೂಡ ಅದೇ ನೀರು ಮೂರು ಉದ್ಧರಣೆಯಷ್ಟು ಸುರಿದರು. ಶಾನುಭೋಗರಮನೆಯವರು ಅನ್ನುವ ಕಾರಣಕ್ಕೆ ಎಲ್ಲವೂ ಸ್ವಲ್ಪ ಧಾರಾಳವಾಗಿತ್ತು! ಪ್ರಸಾದವಾಗಿ ಕೊಟ್ಟ ಕಣಗಿಲೆ ಹೂ ಹುಡುಗಿ ಮುಡಿದುಕೊಂಡಳು. ಹುಡುಗ ಜೋಬಲ್ಲಿ ಹಾಕಿಕೊಂಡ. ಹೊರಗೆ ಬಂದು ಕಾಯಿ ಜಬ್ಬಿ ಎಲ್ಲರೂ ಪ್ರಸಾದ ತಿಂದರು. ಅಲ್ಲಿ ದಂಡಿಯಾಗಿ ಮತ್ತು ನಿರ್ಭಯವಾಗಿ ಹಲ್ಲುಕಿರಿಯುತ್ತಿದ್ದ ಕೋತಿಗಳು ತಮ್ಮ ಪಾಲನ್ನು ಪಡೆದದ್ದೂ ಆಯಿತು. ಹುಡುಗರಲ್ಲಿ ಧೈರ್ಯಶಾಲಿಯಾಗಿದ್ದ ಕೃಷ್ಣ ತೆಂಗಿನ ಕಾಯಿ ಚೀಲ ತಾನು ಹಿಡಿದುಕೊಂಡ. ಎಲ್ಲರೂ ದೇವಸ್ಥಾನ ಪಕ್ಕದಲ್ಲಿದ್ದ ಹಾಸುಬಂಡೆಯ ಮೇಲೆ, ಕಣಗಿಲೆ ಮರದ ನೆರಳಲ್ಲಿ ಕೂತರು. ಆಗ ಹುಡುಗ ಹುಡುಗಿಗೆ ಹೇಳಿದ: ನೀನು ಕಣ್ಣು ಮುಚ್ಚಿಕೊಂದರೆ ಒಂದು ತಮಾಷೆ ಕೊಡುತ್ತೇನೆ ನಿನಗೆ! ಹುಡುಗಿ ಸಟಕ್ಕನೆ ರೇಗಿದಳು.

“ಇಲ್ಲಿ ತಮ್ಮಂದಿರಿದ್ದಾರೆ! ನೀವು ಏನೂ ಕೊಡುವುದು ಬೇಕಾಗಿಲ್ಲ!”

ಹುಡುಗ ತನ್ನ ಪ್ಯಾಂಟ್ ಜೇಬಿಂದ ಚಿತ್ರದುರ್ಗದಿಂದ ತಾನು ತಂದಿದ್ದ ಆಭರಣ ಹೊರಗೆ ತೆಗೆದ. ಅದು ಸಣ್ಣ ಮುತ್ತಿನ ಚಿನ್ನದ ಮೂಗುಬಟ್ಟು! ಹುಡುಗಿ ಕಣ್ಣರಳಿಸಿ ಮೂಗುಬಟ್ಟು ನೋಡಿದಳು. ಅವಳ ಕಣ್ಣು ಸಂಜೆಯ ಬೆಳಕಲ್ಲಿ ಥಳಗುಟ್ಟಿದವು. ಆ ಪುಟ್ಟ ಮೂಗುಬಟ್ಟು ನೋಡಿ ಅವಳು ಆಶ್ಚರ್ಯಸ್ತಂಭಿತಳಾಗಿದ್ದಳು. ಅವಳ ಕಣ್ಣುಗಳು ನಿಧಾನಕ್ಕೆ ಆ ಮೂಗುಬಟ್ಟಲ್ಲಿ ಕರಗಿಹೋಗುತಾ ಇದ್ದವು.

ಈ ಬಾರಿ ಹುಡುಗಿಗೆ ಆಸ್ಪತ್ರೆಯಲ್ಲಿ ಮೂಗು ಚುಚ್ಚಿಸುವುದು ಬೇಡ…ಹುಸೇನ್ಬೀಬಿಯ ಕಡೆಯಿಂದ ಚುಚ್ಚಿಸೋದು ಎಂದು ಹುಡುಗಿಯ ತಾಯಿ ನಿರ್ಧಾರಮಾಡಿದ್ದರು. ಎಷ್ಟೇ ನೋವಾಗಲಿ ತಾನು ಮೂಗು ಮತ್ತೆ ಚುಚ್ಚಿಸಿಕೊಳ್ಳುವುದೇ ಸೈ ಎಂದು ಹುಡುಗಿಯೂ ಧೀರನಿರ್ಧಾರ ಮಾಡಿದ್ದಳು. ಆವತ್ತು ಮನೆಯಲ್ಲೆ ಮೂಗಿನ ಮೇಲೆ ಸುಣ್ಣದ ಚುಕ್ಕಿಇಟ್ಟುಕೊಂಡು ಹುಡುಗಿ ತಾಯಿಯೊಂದಿಗೆ ಹುಸೇನ್ಬೀಬಿಯ ಮನೆಗೆ ಬಂದಳು. ಬೀಬಿ ದಾಳಿಂಬೆ ಮುಳ್ಳು ತಂದು ಶುಚಿಗೊಳಿಸಿಕೊಂಡು ಹುಡುಗಿಯನ್ನೇ ಕಾಯುತ್ತ ಜಗಲಿಯ ಮೇಲೆ ನಿಂತಿದ್ದಳು. ನನ್ನ ಕೈಗುಣ ಪಸಂದಗದೆ…ಈ ದಫ ಕೂಕು ಬೆಳೆದರೆ ಕೇಳ್ರಿ..! ಎಂದು ಆತ್ಮವಿಶ್ವಾಸದಿಂದ ಬೀಬಿ ಘೋಷಣೆ ಮಾಡಿ ಕ್ಷಣಾಮತ್ತಲ್ಲಿ ದಾಳಿಂಬೆ ಮುಳ್ಳಿಂದ ಮೂಗು ಚುಚ್ಚಿಯೇ ಬಿಟ್ಟಳು. ಹುಡುಗಿ ಹಲ್ಲು ಕಚ್ಚಿ ಹ್ಹಾ ಎಂದಳು ಅಷ್ಟೆ. ಕಣ್ಣಲ್ಲಿ ಬಳ ಬಳ ನೀರು ಬರುತ್ತಾ ಇತ್ತು. ಬೀಬಿ ಆ ಕೂಡಲೇ ಒಸರುತ್ತಿದ್ದ ರಕ್ತ ವರೆಸಿ ಹೊಸ ಮುತ್ತಿನ ಮೂಗುಬಟ್ಟು ಇಟ್ಟೇಬಿಟ್ಟಳು. ಅಮ್ಮೋರೇ ನೀವೇನು ಕಾಳಜಿ ಮಾಡಬ್ಯಾಡ್ರಿ…ಮೂರುದಿನ ಗುಬ್ಬಿಹೇಲು ಕೊಬ್ಬರಿಎಣ್ಣೇನಾಗೆ ರಂಗಳಿಸಿ ಮೂಗಿಗೆ ಹಚ್ಚಿರಿ …ಬಸ್! ಎಂದು ಹುಸೇನ್ ಬೀಬಿ ಅಭಯಪ್ರದಾನ ಮಾಡಿದಳು. ಅಯ್ಯವ್ವಾ…ಎಂಥ ಚಂದ ಕಾಣ್ತದರೀ ಈ ಮುಖಕ್ಕೆ ಮೂಗಬಟ್ಟು ಎಂದು ಹುಡುಗಿಗೆ ಬೆರಳು ಮುರಿದು ನೆಟಿಗೆ ತೆಗೆದಳು.

ಆಶ್ಚರ್ಯ ನೋಡಿ! ಗುಬ್ಬಿಹೇಲಿನ ಮಹಿಮೆಯೇ ಮಹಿಮೆ. ಈ ಬಾರಿ ಕೂಕು ಬರಲೇ ಇಲ್ಲ. ಮೂಗು ವಾಸಿಯಾಗಿದೆ…ಬಂದು ನೋಡಿಕೊಂಡು ಹೋಗಿ…ಎಂದು ಹುಡುಗನ ಮನೆಯವರಿಗೆ ಹುಡುಗಿಯ ತಂದೆ ಪತ್ರ ಬರೆದರು. ಅದರ ಮಜಕೂರು ಕೂಡ ಉಲ್ಲೇಖಕ್ಕೆ ತಕ್ಕದ್ದು: ಮ ರಾ ಶ್ರೀ ಅಳಿಯಂದಿರಿಗೆ ಶಾನುಭೋಗರಾಮರಾಯನು ಮಾಡುವ ಆಶಿರ್ವಾದಗಳು. ಉಭಯ ಕುಶಲೋಪರಿ ಸಾಂಪ್ರತ. ನಾವುಗಳೆಲ್ಲಾ ಇಲ್ಲಿ ಸೌಖ್ಯ. ನೀವುಗಳೆಲ್ಲಾ ಅಲ್ಲಿ ಸೌಖ್ಯವೆಂದು ಭಾವಿಸುತ್ತೇನೆ. ಚಿ ಸೌ ರಾಜಲಕ್ಷ್ಮಿಗೆ ಮೊನ್ನೆ ಮೂಗುಚುಚ್ಚಿಸಲಾಯಿತು. ಎರಡು ದಿನಗಳಾದರೂ ಕೂಕು ಬೆಳೆದಿರುವುದಿಲ್ಲ. ನೋವು ಕೂಡ ಇರುವುದಿಲ್ಲ. ಗಾಯವು ಸಂಪೂರ್ಣವಾಗಿ ಒಣಗಿರುವುದು. ಮೂಗುಬಟ್ಟು ಚಿರಂಜೀವಿಗೆ ಚೆನ್ನಾಗಿ ಒಪ್ಪುತ್ತಿರುವುದು. ತಾವುಗಳು ಬಿಡುವುಮಾಡಿಕೊಂಡು ಬಂದು ನೋಡಿಕೊಂಡು ಹೋಗಿರಿ.

ಮುಂದೆ ನಲವತ್ತು ವರ್ಷ ರಾಜಲಕ್ಷ್ಮಿ ಆ ಮುತ್ತಿನ ಮೂಗುಬಟ್ಟು ಮೂಗಲ್ಲೇ ಇಟ್ತುಕೊಂಡಿದ್ದಳು. ಮೂಗಿನ ತೂತಿನ ಸುತ್ತ ಮಾಂಸ ಬೆಳೆದು ಮೂಗುಬಟ್ಟನ್ನು ತೆಗೆಯುವುದೇ ಸಾಧ್ಯವಿರಲಿಲ್ಲ.ಶಕ್ತಿ ಉಪಯೋಗಿಸಿ ತೆಗೆಯುವುದಕ್ಕೆ ಅವಳಿಗೆ ಭಯ. ಹೀಗಾಗಿ ಆ ಮೂಗು ಬಟ್ಟು ನಮ್ಮ ದಾಂಪತ್ಯದ ಸುಖ ದುಃಖ ನೋವು ನಲವುಗಳಿಗೆಲ್ಲಾ ಸಾಕ್ಷಿಯಾಗಿ ದಶಕಗಳ ಕಾಲ ಅವಳ ಮೂಗಿನ ತುದಿಯಲ್ಲೇ ವಿರಾಜಮಾನವಾಗಿತ್ತು. ನೀವು ಏನೇ ಅನ್ನಿ. ಮೂಗುಬಟ್ಟು ಒಂದು ರೀತಿಯಲ್ಲಿ ಅವಳ ನೋವಿನ ಕೇಂದ್ರವಾಗಿತ್ತು. ಮಕ್ಕಳು ಆಡುವಾಗ ಅನೇಕ ಬಾರಿ ಅವಳು ಮೂಗು ನೋಯಿಸಿಕೊಂಡು ಕಂಬನಿ ಸುರಿಸಿದ್ದಾಳೆ. ಬಹಳ ಎಚ್ಚರವಾಗಿ ಅವಳು ತನ್ನ ಮೂಗನ್ನು ನೋಡಿಕೊಳ್ಳುತ್ತಿದ್ದಳಾದರೂ ಯಾವಾಗಲೋ ಒಮ್ಮೆ ಎಚ್ಚರ ತಪ್ಪಿ ನೋವು ಮಾಡಿಕೊಳ್ಳುತ್ತಿದ್ದಳು. ಈಚೆಗೆ ನಮ್ಮ ಎರಡನೇ ಮಗನಿಗೆ ಒಳ್ಳೆ ಕೆಲಸವಾದ ಮೇಲೆ ತನ್ನ ಮೊದಲ ಸಂಬಳದಲ್ಲಿ ಅಮ್ಮನಿಗೆ ಅವನೊಂದು ವಜ್ರದ ಮೂಗುಬಟ್ಟು ಮಾಡಿಸಿಕೊಟ್ಟ. ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮುತ್ತಿನ ಮೂಗುಬಟ್ಟು ತೆಗೆಸಿ ವಜ್ರದ ಮೂಗುಬಟ್ಟು ಹಾಕಿಸಿಕೊಂಡು ಬಂದೆವು. ಆವತ್ತು ರಾತ್ರಿ ಮಲಗುವ ಮನೆಯಲ್ಲಿ ಮೆಲುದನಿಯಲ್ಲಿ ಅವಳು ಕೇಳಿದ್ದು: “ನಿಮಗೆ ಬೇಜಾರಿಲ್ಲ ತಾನೆ?” . “ಬೇಜಾರೇಕೆ?”- ಎಂದೆ ನಾನು. “ನೀವು ನನಗೆ ಕೊಡಿಸಿದ ಮೊದಲ ಉಡುಗರೆ ಅದು. ಅದನ್ನು ಕಟ್ಟುಮಾಡಿಸಿ ತೆಗೆಸಬೇಕಾಯಿತು….!”

“ಆ ಬಗ್ಗೆ ಯೋಚಿಸಬೇಡ…ಮಗ ವಜ್ರದ ಮೂಗುಬಟ್ಟು ಮಾಡಿಸಿಕೊಟ್ಟಿದ್ದಾನೆ…ಸಂತೋಷಪಡೋಣ”- ಎಂದೆ. ಆ ವಜ್ರದ ಮೂಗುಬಟ್ಟು ಕೊನೆಯವರೆಗೂ ಅವಳ ಮೂಗಲ್ಲಿತ್ತು. ಅವಳ ಮೂಗಿನ ಸೂಕ್ಷ್ಮತೆ ಗೊತ್ತಿದ್ದುದರಿಂದ ಕೊನೆಯಲ್ಲಿ ಸಹ ಅದನ್ನು ಮೂಗಿನಿಂದ ತೆಗೆಯುವುದೇ ಬೇಡ ಎಂದೆ ನಾನು…

 

ಬಿಂದಿಗೆ ಬಿಂದಿಗೆ ತಣ್ಣೀರು ಸುರಿದು ಹಣೆಯಲ್ಲಿದ್ದ

ಬಿಂದಿ ಕರಗಿ ಮುಚ್ಚಿದ್ದ ಕಣ್ಣಂಚಿಂದ ಹರಿಯುತ್ತಿತ್ತು ಕೆನ್ನೀರು

ಮೂಗ ತುದಿಯಲ್ಲೊಂದು ವಜ್ರದ ನತ್ತು-ಹೊತ್ತಿಲ್ಲ ಗೊತ್ತಿಲ್ಲ-

ಹೊಳೆಯುತ್ತಿತ್ತು. ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಆ ನಕ್ಷತ್ರ.

 

*********

 

 

‍ಲೇಖಕರು G

April 24, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. premalatha

    ಅಲ್ಲಿವರೆಗೂ ಹುಡುಗ-ಹುಡುಗಿ..
    ಮುಂದೆ ನಲುವತ್ತು ವರುಷ ಎಂದಾಗ ಹುಡುಗಿ ‘ಅವಳು’ ಆಗುವುದು, ಹುಡುಗ ‘ನಾನು’ ಆಗುವುದು ಆಪ್ಯಾಯಮಾನ!

    “ಇಷ್ಟು ನಗು ಮೂಗುತಿಯ ಮಿಂಚು..ಒಳ ಹೊರಗೆ..”
    ಹೆಣ್ಣಿಗೆ ಸಹಜ ಪ್ರಿಯವಾದ ಮೂಗುತಿಯ ಮಿಂಚು ಎದೆಗಿಳಿಯುತ್ತದೆ!

    ಪ್ರತಿಕ್ರಿಯೆ
  2. rAjashEkhar mAlUr

    tuMbA manOjnavAgide… ಆವತ್ತು ರಾತ್ರಿ ಮಲಗುವ ಮನೆಯಲ್ಲಿ ಮೆಲುದನಿಯಲ್ಲಿ ಅವಳು ಕೇಳಿದ್ದು: “ನಿಮಗೆ ಬೇಜಾರಿಲ್ಲ ತಾನೆ?” . “ಬೇಜಾರೇಕೆ?”- ಎಂದೆ ನಾನು. “ನೀವು ನನಗೆ ಕೊಡಿಸಿದ ಮೊದಲ ಉಡುಗರೆ ಅದು. ಅದನ್ನು ಕಟ್ಟುಮಾಡಿಸಿ ತೆಗೆಸಬೇಕಾಯಿತು….!”… wow! yEnsAr… yeMthaaa preeti idu… Akeyannu kaNNAre nODuva bhAgya sigalillavalla yeMbudoMdE bEsara…

    ಪ್ರತಿಕ್ರಿಯೆ
  3. Jayalaxmi Patil

    ಬಿಂದಿಗೆ ಬಿಂದಿಗೆ ತಣ್ಣೀರು ಸುರಿದು ಹಣೆಯಲ್ಲಿದ್ದ
    ಬಿಂದಿ ಕರಗಿ ಮುಚ್ಚಿದ್ದ ಕಣ್ಣಂಚಿಂದ ಹರಿಯುತ್ತಿತ್ತು ಕೆನ್ನೀರು
    ಮೂಗ ತುದಿಯಲ್ಲೊಂದು ವಜ್ರದ ನತ್ತು-ಹೊತ್ತಿಲ್ಲ ಗೊತ್ತಿಲ್ಲ-
    ಹೊಳೆಯುತ್ತಿತ್ತು. ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಆ ನಕ್ಷತ್ರ…

    ದೇವ್ರೇ!!!!!!!!!!!!!!!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: