ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ಐವಿ ಬಂದವರಿಗೆ ಬದುಕೇ ಇಲ್ಲ ಎಂದು ಹೇಳಿದ್ದಕ್ಕೆ ಪ್ರಶಸ್ತಿ ಬಂತೇ? – ಭಾರತಿ ಹೆಗಡೆ

ಭಾರತಿ ಹೆಗಡೆ

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ಪಿ. ಶೇಷಾದ್ರಿ ಅವರ ಡಿಸೆಂಬರ್ 1 ಸಿನಿಮಾ ನೋಡಿ ಹೊರಬಂದ ಮೇಲೆ ಅನೇಕ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಆ ಪ್ರಶ್ನೆಗಳೆಲ್ಲವನ್ನೂ ಸಾದ್ಯಂತವಾಗಿ ಇಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ :
ಬಡತನಕ್ಕೆ ಯಾವಾಗ್ಲೂ ಕನಸುಗಳು ಹೆಚ್ಚು. ಆ ಕನಸುಗಳು ತೀರಾ ಚಿಕ್ಕ ಚಿಕ್ಕವಾಗಿಯೇ ಇರುತ್ತವೆ. ಅಂಥ ಚಿಕ್ಕ ಚಿಕ್ಕ ಕನಸುಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡ ಕುಟುಂಬವೊಂದು ಈ ಕಷ್ಟಗಳಿಂದ ಬಿಡುಗಡೆ ಸಾಕಪ್ಪಾ ಎಂದು ನಿಟ್ಟುಸಿರು ಬಿಡುವ ಹೊತ್ತಿನಲ್ಲಿ ಅವರ ಮನೆಗೆ ಮುಖ್ಯಮಂತ್ರಿಗಳು ಬರುತ್ತಾರೆಂಬ ಸುದ್ದಿ ಸಿಗುತ್ತದೆ.
ಉತ್ತರ ಕರ್ನಾಟಕದ ಕುಗ್ರಾಮವೊಂದರ ಕಡು ಬಡತನದ ಆ ಕುಟುಂಬಕ್ಕೆ ಇದೊಂದು ಅನಿರೀಕ್ಷಿತ ಸುದ್ದಿ. ಸಮೀಪದ ಪಟ್ಟಣಕ್ಕೆ ಹೋಗಿ ರೊಟ್ಟಿ ಮಾರಿ ಜೀವನ ಸಾಗಿಸುವ ದ್ಯಾವಕ್ಕನಿಗೆ ರೊಟ್ಟಿ ದ್ಯಾವಕ್ಕ ಎಂದೇ ಹೆಸರು. ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ಗಂಡ ಮಹದೇವಪ್ಪ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಾನೆ. ಇಂಥ ಮನೆಗೆ ಮಖ್ಯಮಂತ್ರಿಗಳು ಬರುತ್ತಾರೆಂದರೆ ಅದೊಂದು ಸೋಜಿಗವಾಗುತ್ತದೆ. ಇಡೀ ಗ್ರಾಮದಲ್ಲಿ ಆ ಕುಟುಂಬಕ್ಕೆ ಇದ್ದಕ್ಕಿದ್ದ ಹಾಗೆ ಒಂದು ಮಾನ್ಯತೆ ಬಂದುಬಿಡುತ್ತದೆ. ಅದೇ ರೀತಿ ಈ ಕುಟುಂಬದ ಕನಸುಗಳೂ ಗರಿಗೆದರುತ್ತವೆ.
`ಮುಖ್ಯಮಂತ್ರಿಗಳ ತಾವ ಏನ್ ಕೇಳ್ಬೇಕು ಅಂದ್ಕಂಡಿದ್ದೀ’ ಗಂಡ ಕೇಳ್ತಾನೆ. ಗೊತ್ತಿಲ್ಲ ಎನ್ನುತ್ತಾಳೆ ಹೆಂಡ್ತಿ. `ರೊಟ್ಟಿ ಮಷಿನ್ ಕೇಳೋಣ’ ಎಂದು ಗಂಡ ಹೇಳಿದರೆ, `ಬೇಡ, ನಿನಗೊಂದು ಕೃತಕ ಕಾಲು ತರೋಣ’ ಎಂದು ಹೆಂಡತಿ ಹೇಳ್ತಾಳೆ. ಇವರಿಬ್ಬರ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದ ಮನೆಯ ಕಣ್ಣುಕಾಣದ ಅಜ್ಜಿ `ನನಗೆ ಕಣ್ಣು ಕೊಡಿಸ್ರೀ’ ಎಂದು ಕೇಳ್ತಾಳೆ.
ಹೀಗೆ ಆ ಕುಟುಂಬದ ಕನಸುಗಳ ರೆಕ್ಕೆ ಬಿಚ್ಚುತ್ತಲೇ ಹೋಗುತ್ತದೆ. ಇಡೀ ಊರವರೂ ಅವರನ್ನು ಗೌರವಿಸುತ್ತಾರೆ. ಒಬ್ಬರು ತನ್ನ ಕೆಲಸದ ಟ್ರಾನ್ಸ್ಫರ್ಗೆಂದು ಅರ್ಜಿ ಕೊಟ್ಟರೆ, ಮತ್ತೊಬ್ಬರು ಬೆಂಗಳೂರಿನಲ್ಲಿ ಸೈಟು ಕೇಳೆಂದು ಅರ್ಜಿ ಕೊಟ್ಟಿರುತ್ತಾರೆ. ಹೀಗೆ ಇಡೀ ಊರು ಕೇರಿಯವರೆಲ್ಲ ಅವರಿಗೆ ಅರ್ಜಿ ಕೊಟ್ಟಿರುತ್ತಾರೆ. ಅಂದರೆ ಆ ಕುಟುಂಬದ ಕನಸುಗಳ ಜೊತೆಗೆ ಇಡೀ ಊರವರ ಕನಸುಗಳೂ ಅಲ್ಲಿ ಅರಳತೊಡಗುತ್ತವೆ.
ಮುಖ್ಯಮಂತ್ರಿಗಳೊಬ್ಬರು ಮನೆಗೆ ಬರುತ್ತಾರೆಂದರೆ ಆ ಊರಿನ ರಸ್ತೆ ಚೆನ್ನಾಗಾಗುತ್ತದೆ. ಕರೆಂಟು ಪದೇಪದೇ ಹೋಗುವ ಆ ಹಳ್ಳಿಯಲ್ಲಿ ಕರೆಂಟು ಸದಾ ಉರಿಯತೊಡಗುತ್ತದೆ. ರೊಟ್ಟು ದ್ಯಾವಕ್ಕನ ಮನೆಯಂತೂ ಸುಣ್ಣಬಣ್ಣ ಹಚ್ಚಿ ಹೊಚ್ಚಹೊಸ ಮನೆಯಂತೆ ಕಂಗೊಳಿಸುತ್ತದೆ. ಆ ಮನೆಗೆ ಫ್ರಿಜ್ ಬರುತ್ತದೆ, ಟಿವಿ ಬರುತ್ತದೆ. ಶೌಚಾಲಯ ನಿಮಾರ್ಣಗೊಳ್ಳುತ್ತದೆ. ಹೀಗೆ ಆ ಮನೆಯ ಖದರೇ ಬದಲಾಗುತ್ತದೆ. ಇವೆಲ್ಲವೂ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿವೆ.
ರಾತ್ರಿ ಮನೆಯವರೆನ್ನೆಲ್ಲ ಹೊರಹಾಕಿ ಆ ಮನೆಯಲ್ಲಿ ಮನೆಯವರೇ ಅಪರಿಚಿತರಾಗುತ್ತಾರೆ. ಮುಖ್ಯಮಂತ್ರಿಗಳು ಮನೆಯೊಳಗೆ ಮಲಗುತ್ತಾರೆ. ಆಚೆಕಡೆ ಇರುವ ದಂಪತಿ `ನಾವು ಏನೇನೋ ಅಂದುಕೊಂಡಿದ್ದೆವು, ಅವ್ಯಾವದನ್ನೂ ಕೇಳೋಕೇ ಆಗ್ಲಿಲ್ಲ’ ಎನ್ನುತ್ತಾನೆ ಗಂಡ. `ಹೌದು, ಊರವರ ಅರ್ಜಿಗಳನ್ನೂ ಕೊಡೋಕಾಗ್ಲಿಲ್ಲ’ಎಂದು ನಿಟ್ಟುಸಿರು ಬಿಡುತ್ತಾಳೆ ಹೆಂಡತಿ. `ಇರ್ಲಿ ಬಿಡು, ಬೆಳಗ್ಗೆಯಾದರೂ ಕೊಡೋಣ’ ಎಂದು ಸಮಾಧಾನ ಮಾಡುತ್ತಾನೆ ಗಂಡ.
ಮುಂದೆ ರಾಜಕೀಯ ಆಟಗಳಿಗೆ ಇವರು ದಾಳವಾಗುತ್ತಾರೆ. ಇವರ ಕನಸುಗಳೆಲ್ಲ ಠುಸ್ಸೆಂದು ಒಡೆದು ಹೋಗುತ್ತವೆ. ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ, ರಾಜಕೀಯದಾಟದ ಗೊಂಬೆಗಳು ಇವರೆಲ್ಲ…ಹೀಗೆಲ್ಲ ನಾವು ಅಂದುಕೊಂಡರೆ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಂತೆ ಮಾಧ್ಯಮಗಳಲ್ಲಿ ದೊಡ್ಡದೊಡ್ಡ ಹೆಡ್ಲೈನ್ಸ್ಗಳಲ್ಲಿ `ಏಡ್ಸ್ ಪೀಡಿತರ ಮನೆಯಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ’ ಎಂದು ಬರುತ್ತದೆ. ಅಲ್ಲಿಂದ ಮುಂದೇನಾಗುತ್ತದೆಂದು ಎಲ್ಲರಿಗೂ ತಿಳಿದುಬಿಡುತ್ತದೆ.
ಯಾವಾಗ ಮಾಧ್ಯಮದಲ್ಲಿ ಈ ವಿಷಯ ಬಂತೋ ಆಗಲೇ ಪ್ರೇಕ್ಷಕರಿಗೆ ತಿಳಿಯುತ್ತದೆ. ಇನ್ನು ರೊಟ್ಟಿ ದ್ಯಾವಕ್ಕನ ಬದುಕು ನರಕವಾಗುತ್ತದೆಂದು. ಗಂಡನ ಕೆಲಸ ಹೋಗುತ್ತದೆ. ಇವಳ ರೊಟ್ಟಿ ಮಾರಾಟವಾಗಲಿಕ್ಕಿಲ್ಲ ಎಂಬುದು ತಿಳಿದು ಹೋಗುತ್ತದೆ. ಅಲ್ಲಿಂದ ಮುಂದೆ ಚಿತ್ರ ಯಾವ ಕುತೂಹಲವನ್ನೂ ಉಳಿಸಿಕೊಳ್ಳುವುದಿಲ್ಲ.
ಇಬ್ಬರೂ ಕೆಲಸ ಕಳೆದುಕೊಂಡು ಜೀವನವೇ ದುಸ್ತರವಾಗುತ್ತದೆ. ಆಗ ರೊಟ್ಟಿಗಳೆಲ್ಲವನ್ನೂ ತೆಗೆದುಕೊಂಡು ಹೋಗುವ ದ್ಯಾವಕ್ಕ ಜಿಲ್ಲಾಧಿಕಾರಿಯ ಮುಂದೆ ಎಸೆದು ನಿಮ್ಮ ಮುಖ್ಯಮಂತ್ರಿಗಳಿಗೆ ಹೇಳಿ, ನಮಗೂ ಬದುಕುವ ಹಕ್ಕಿದೆ ಎಂದು ಹೇಳುವ ರೀತಿ ಕೂಡ ಅದ್ಭುತವಾಗಿದೆ.


ಆದರೆ ಏಡ್ಸ್ ರೋಗಿಗಳಿಗೆ, ಎಚ್ಐವಿ ಸೋಂಕಿತರಿಗೆ ಇನ್ನು ನಿಮಗೆ ಬದುಕಿಲ್ಲ ಎಂಬುದನ್ನು ಪರೋಕ್ಷವಾಗಿ ಈ ಚಿತ್ರ ಹೇಳಿದಂತಾಗುವುದಿಲ್ಲವೇ? ಇಷ್ಟಕ್ಕೂ ಈಗ ಏಡ್ಸ್ಗೆ ಸಾಕಷ್ಟು ಔಷಧಿಗಳು ಬಂದಿವೆ. ಅವನ್ನೆಲ್ಲ ತೆಗೆದುಕೊಂಡು ಸಾವನ್ನು ಮುಂದೂಡಿದವರು ಬೇಕಾದಷ್ಟು ಜನ ಇದ್ದಾರೆ. ಎಚ್ಐವಿ ಸೋಂಕಿತರು ಎಚ್ಐವಿಯನ್ನೇ ಗೆದ್ದವರು ನಮ್ಮ ನಡುವೆ ಇದ್ದಾರೆ. ವೀಣಾಧರಿ, ಮೈಸೂರಿನ ಧನಲಕ್ಷ್ಮೀ ಮುಂತಾದ ಮಹಿಳೆಯರು ಇದಕ್ಕೆ ಉದಾಹರಣೆ. ಏಡ್ಸ್ಗಾಗಿ, ಎಚ್ಐವಿ ಕುರಿತು ಸರ್ಕಾರ, ಮಾಧ್ಯಮ, ಸ್ವಯಂಸೇವಾ ಸಂಸ್ಥೆಗಳು ಅತಿಯಾಗಿ ಜಾಗೃತಿ ಮೂಡಿಸುತ್ತಿದೆ. ಸರ್ಕಾರ ಉಚಿತವಾಗಿಯೇ ಔಷಧವನ್ನು ಕೊಡುತ್ತಿದೆ.
ಇವೆಲ್ಲವುಗಳನ್ನೂ ಬದಿಗಿಟ್ಟು ಏಡ್ಸ್ ಬಂದದ್ದಕ್ಕಾಗಿ ಆ ಕುಟುಂಬಕ್ಕೆ ಬದುಕೇ ಇಲ್ಲ ಎಂಬಂತೆ ಚಿತ್ರಿಸಲಾಗಿದೆ. ಏಡ್ಸ್ ರೋಗಿಗಳಿಗೆ ಕೆಲವು ಮಟ್ಟಿಗೆ ಸಾಮಾಜಿಕವಾದ ಬಹಿಷ್ಕಾರ ರೀತಿಯ ನಡವಳಿಕೆಗಳು ಇಂದಿಗೂ ನಮ್ಮ ಸಮಾಜದಲ್ಲಿ ಇದೆ ಎಂಬುದನ್ನು ಒಪ್ಪಿಕೊಂಡರೂ, ಅಂತಹ ಸಾಮಾಜಿಕ ಬಹಿಷ್ಕಾರವನ್ನೂ ಮೀರಿ ನಿಂತವರಿದ್ದಾರೆ. ಅವರಿಗಾಗಿ ಸ್ವಯಂ ಸೇವಾ ಸಂಸ್ಥೆಗಳಿವೆ. ಅವರಿಗೆ ಕೆಲಸ ನೀಡಿದವರಿದ್ದಾರೆ. ಸರ್ಕಾರವಂತೂ ಎಚ್ಐವಿ ಸೋಂಕಿತ ಗರ್ಭಿಣಿಯರಿಗೆ ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರೆ ಹುಟ್ಟುವ ಮಗು ಎಚ್ಐವಿಯಿಂದ ದೂರವಿರಿಸಬಹುದು ಎಂಬ ಅಭಿಯಾನವನ್ನೇ ಮಾಡುತ್ತಿದೆ. ಅಂಥದ್ದರಲ್ಲಿ ಅವರಿಗೆ ಬದುಕೇ ಇಲ್ಲವೆಂಬಂತೆ ಚಿತ್ರಿಸುವುದು ಅಷ್ಟು ಸರಿಎನಿಸುವುದಿಲ್ಲ.
ಇಷ್ಟಕ್ಕೂ ರೊಟ್ಟಿ ದ್ಯಾವಕ್ಕನ ಕುಟುಂಬಕ್ಕೆ ಏಡ್ಸ್ ಇದ್ದದ್ದು ನಿಜವೆ? ಏಡ್ಸ್ ಇದ್ದದ್ದು ನಿಜವೇ ಆಗಿದ್ದರೆ ಯಾವ ಪತ್ರಕರ್ತರೂ, ಯಾವ ಮಾಧ್ಯಮದವರೂ ಒಂದೇ ಒಂದು ಸಾಲು ಕೂಡ ಬರೆಯುತ್ತಿರಲಿಲ್ಲವೇ? ಎಚ್ಐವಿ ಸೋಂಕಿತ ಕುಟುಂಬವೊಂದರಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಎಂದು ಮೊದಲೇ ಬ್ರೇಕಿಂಗ್ ನ್ಯೂಸ್ ಮಾಡುತ್ತಿರಲಿಲ್ಲವೇ? ಸ್ವತಃ ಮುಖ್ಯಮಂತ್ರಿಗಳೇ ತಮ್ಮ ರಾಜಕೀಯ ಲಾಭಕ್ಕಾಗಿ ತಾವೇ ಎಲ್ಲಕಡೆ ಹೇಳಿಕೊಳ್ಳುತ್ತಿರಲಿಲ್ಲವೇ? ಈ ವಿಷಯವನ್ನು ಪ್ರೇಕ್ಷಕರಿಂದ ಮುಚ್ಚಿಟ್ಟಿದ್ಯಾಕೆ?
ನಮ್ಮನ್ನು ಕಾಡುವ ಇನ್ನೂ ಒಂದು ಅಂಶವೆಂದರೆ ಆ ಕುಟುಂಬವನ್ನು ನೋಡಿದಾಗ ಅವರಿಗೆ ಏಡ್ಸ್ ಬಂದಿದೆ ಎಂದು ಎಲ್ಲಿಯೂ ಅನಿಸುವುದೇ ಇಲ್ಲ. ಮುಖ್ಯಮಂತ್ರಿಗಳು ಅವರ ಮನೆಗೆ ಬರುತ್ತಾರೆಂದಾದಾಗ ಒಮ್ಮೆ ಜಿಲ್ಲಾಧಿಕಾರಿಗಳು ಅವರ ಮನೆಗೆ ಬಂದು ದ್ಯಾವಕ್ಕ ಮತ್ತು ಮಹದೇವಪ್ಪ ಇಬ್ಬರನ್ನೇ ಕೂರಿಸಿಕೊಂಡು ಏನೋ ಹೇಳುತ್ತಾರೆ. ಅದೇನೆಂದು ಪ್ರೇಕ್ಷಕರಿಗೆ ತಿಳಿಯುವುದಿಲ್ಲ. ಅಂದರೆ ಜಿಲ್ಲಾಧಿಕಾರಿಗಳು ಏಡ್ಸ್ ಇದೆ ಎಂದು ಬಲವಂತವಾಗಿ ಇವರನ್ನು ಒಪ್ಪಿಸಿದರೇ? ಹಾಗೇನಾದರೂ ಆಗಿದ್ದರೆ ನಮ್ಮ ಮಾಧ್ಯಮದವರು ಸುಮ್ಮನಿರುತ್ತಿದ್ದರೇ? ಅದುವೇ ದೊಡ್ಡ ಸುದ್ದಿಯಾಗುತ್ತಿರಲಿಲ್ಲವೇ? ನಿಜವಾಗಿಯೂ ಆ ಕುಟುಂಬದಲ್ಲಿ ಯಾರಿಗಾದರೂ ಏಡ್ಸ್ ಇದ್ದದ್ದೇ ಹೌದಾಗಿದ್ದರೆ ಇಡೀ ಹಳ್ಳಿಗೆ ತಿಳಿಯದೇ, ಯಾರಿಗೂ ತಿಳಿಯದಂತೆ ಅದುವರೆಗೆ ಅವರು ಹೇಗೆ ಇರಲು ಸಾಧ್ಯವಾಯಿತು? ಅಷ್ಟರ ಮಟ್ಟಿಗೆ ರಹಸ್ಯವಾಗಿರಿಸಲು ಸಾಧ್ಯವೇ ಮುಂತಾದ ಪ್ರಶ್ನೆಗಳನ್ನು ನಮ್ಮನ್ನು ಕಾಡುತ್ತವೆ.
ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದ ಮಾರನೇ ದಿನ ಏಡ್ಸ್ ನಿಮಗಿತ್ತಾ ಎಂದು ಕೇಳಿದರೆ ಹಾಗಂದರೇನು ಎಂದು ಅಜ್ಜಿ ಕೇಳುತ್ತಾಳೆ. ಈ ಸುದ್ದಿಯನ್ನು ಕೇಳಿದ ಅಜ್ಜಿಗೆ ಸಿಟ್ಟು ಬಂದು ಟಿವಿಯನ್ನೇ ಒಡೆದು ಹಾಕುತ್ತಾಳೆ. ಅವಳ ಆಕ್ರೋಶ ಆ ಮಟ್ಟಿಗಿರುತ್ತದೆ.
ಅಷ್ಟಲ್ಲದೇ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದ ನಂತರ ಮಾಧ್ಯಮ ಪ್ರತಿನಿಧಿಯೊಬ್ಬ ಮಾದೇವಪ್ಪನನ್ನು ಸಂದರ್ಶನ ಮಾಡುತ್ತಾನೆ. ಮುಖ್ಯಮಂತ್ರಿಗಳು ಇವರ ಮನೆಗೆ ಬಂದಿದ್ದರಿಂದ ಇವರಿಗೆ ಮಾತೇ ಹೊರಡದಂತಾಗಿದೆ, ಅಷ್ಟು ಖುಷಿಯಿಂದ ಅವನು ಮೈಮರೆತಿದ್ದಾನೆ ಎಂಬಂತೆ ಹೇಳುತ್ತಾನೆ. ಅಂದರೆ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದ ಹಿನ್ನೆಲೆ ಮುನ್ನೆಲೆಗಳೆರಡನ್ನೂ ತಿಳಿದುಕೊಂಡು ಅದನ್ನು ವರದಿ ಮಾಡಲಾರದಷ್ಟು ನಮ್ಮ ಮಾಧ್ಯಮ ಮಂದಿ ಧಡ್ಡರೇ?
ಒಟ್ಟಾರೆಯಾಗಿ ಡಿಸೆಂಬರ್ 1 ಸಿನಿಮಾದಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಜೊತೆಯಲ್ಲಿ ಏಡ್ಸ್ ವಿಷಯವನ್ನು ಬಲವಂತವಾಗಿ ಎಳೆದು ತಂದಂತೆನಿಸುತ್ತದೆ.
ಮೊದಲರ್ಧ ಚಿತ್ರ ಚೆನ್ನಾಗಿ ಓಡುತ್ತದೆ. ಗ್ರಾಮೀಣ ಬದುಕಿನ ಸೊಗಡು, ಜೋಗತಿಯರ ಹಾಡು, ದ್ಯಾವಕ್ಕನ ಮಗ ಚಪ್ಪಲಿಕೊಳ್ಳುವುದು, ಚಪ್ಪಲಿಯನ್ನು ರಾತ್ರಿ ಮಲಗುವಾಗಲೂ ಹಾಕಿಕೊಂಡೇ ಮಲಗುವುದು, ಇವೆಲ್ಲವೂ ಅದ್ಭುತವಾಗಿ ಬಂದಿದೆ. ಅದೇ ರೀತಿ ದ್ಯಾವಕ್ಕನ ಮಗ `ಅವ್ವಾ… ಮುಕ್ಷ ಮಂತ್ರಿಗಳು ನಮ್ಮನ್ಯಾಗೆ ಉಳುದ್ರಲ್ಲ, ಹಾಗೇ ನಾವ್ಯಾವಾಗ ಅವರ ಮನೆಗೆ ಹೋಗಿ ಉಳ್ಕಳಾದು…?’ ಎಂದು ಕೇಳುವ ಪರಿ ಮಾತ್ರ ತುಂಬ ಮಾರ್ಮಿಕವಾಗಿದೆ.
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದಾಗಿಯೇ ಆ ಮನೆಯ ಬದುಕು ಕಸಿದುಕೊಳ್ಳಲಾಯಿತು ಎಂಬ ಆಶಯ ಬಹುಶಃ ನಿರ್ದೇಶಕರಿದ್ದರಬಹುದು. ಆದರೆ ಸಿನಿಮಾವನ್ನು ನೋಡಿದಾಗ ಅನಿಸುವುದು ಮಾಧ್ಯಮ ಇವರ ಬದುಕನ್ನು ಕಸಿದುಕೊಂಡಿದ್ದು ಎಂದೆನಿಸತೊಡಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನು ಸದಾ ಕಾಡುವ ಪ್ರಶ್ನೆ ಏನೆಂದರೆ, ಏಡ್ಸ್ ರೋಗಿಗಳಿಗೆ ಬದುಕಿಲ್ಲ, ನಿಮ್ಮ ಬದುಕು ನಾಶವಾಗುತ್ತದೆ ಎಂದು ನೆಗೆಟಿವ್ ಅಂಶಗಳನ್ನು ಹೇಳಿದ್ದಕ್ಕಾಗಿ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂತೇ?

‍ಲೇಖಕರು G

7 May, 2014

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. prathibha nandakumar

    sooooperrrr

  2. Siddalingamurthy BG

    The parameters to give awards in India is itself is rarely correct. We are not encouraging technological efforts everything is based on what is called as social concern. This is one type of superstition.
    We let govt to pass resolution on FDA and then make a film about it to win award. This is next award winning movie concept

  3. gangadharamudaliar

    channagide, Odalagide.

  4. Uday Itagi

    ಈ ಚಿತ್ರದ ಬಗ್ಗೆ ಇದುವರೆಗೂ ಯಾರೂ ಎತ್ತದ ಪ್ರಶ್ನೆಗಳನ್ನು ನಿಮ್ಮ ಲೇಖನ ಎತ್ತುತ್ತದೆ. ನಿಮ್ಮ analysis ತುಂಬಾ ಚನ್ನಾಗಿದೆ.

  5. Chand

    Tumba sogasaada niroopane, ee chitrada bagge elloo barde iruva vishleshane.
    ರೊಟ್ಟಿ ದ್ಯಾವಕ್ಕನ ಕುಟುಂಬಕ್ಕೆ ಏಡ್ಸ್ ಇದ್ದದ್ದು ನಿಜವೆ? ಏಡ್ಸ್ ಇದ್ದದ್ದು ನಿಜವೇ ಆಗಿದ್ದರೆ ಯಾವ ಪತ್ರಕರ್ತರೂ, ಒಂದೇ ಒಂದು ಸಾಲು ಕೂಡ ಬರೆಯುತ್ತಿರಲಿಲ್ಲವೇ? ಎಚ್ಐವಿ ಸೋಂಕಿತ ಕುಟುಂಬದಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಎಂದು ಮೊದಲೇ ಬ್ರೇಕಿಂಗ್ ನ್ಯೂಸ್ ಮಾಡುತ್ತಿರಲಿಲ್ಲವೇ? ಸ್ವತಃ ಮುಖ್ಯಮಂತ್ರಿಗಳೇ ತಮ್ಮ ರಾಜಕೀಯ ಲಾಭಕ್ಕಾಗಿ ತಾವೇ ಎಲ್ಲಕಡೆ ಹೇಳಿಕೊಳ್ಳುತ್ತಿರಲಿಲ್ಲವೇ? ಈ ವಿಷಯವನ್ನು ಪ್ರೇಕ್ಷಕರಿಂದ ಮುಚ್ಚಿಟ್ಟಿದ್ಯಾಕೆ?
    idu ellara prasheneyoo houdu.

  6. raghurama.ar

    olleya Grahike.
    good Writeup
    -Raghurama AR

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading