ಎಚ್ಎಸ್ವಿ ಕಂಡ ಹೊಸ ವರ್ಷ: ಈಗ ಹೋಳಿಗೆಯ ಕಾಲ ಮುಗಿದಿದೆ

-ಎಚ್.ಎಸ್.ವೆಂಕಟೇಶಮೂರ್ತಿ (ಉದಯವಾಣಿಯಲ್ಲಿ ಬಂದ ಲೇಖನ) ಮೊದಲೆಲ್ಲ ನಾವು ಯುಗಾದಿಯನ್ನೇ ಹೊಸ ವರ್ಷದ ಆದಿ ಅಂದುಕೊಂಡಿದ್ದೆವು! ದುಂಡನೆಯ ರೊಟ್ಟಿಯನ್ನು ಎಲ್ಲಿಂದಲೂ ತಿನ್ನಲು ಶುರುಹಚ್ಚಬಹುದು ಎಂಬುದು ತಿಳಿಯದಿದ್ದ ಕಾಲವದು! ಈಚೀಚೆಗೆ ಜನವರಿ ಒಂದು ವರ್ಷಾರಂಭ ಎನ್ನುವುದು ನಮ್ಮ ಅರಿವಿಲ್ಲದೆಯೇ ಅನುಭವಕ್ಕೆ ಬಂದುಬಿಟ್ಟಿದೆ. ಅದೀಗೀಗ ಯುಗಾದಿಗೆ ಪರ್ಯಾಯವೆನ್ನುವಂತೆ ಮನೆಯೊಳಗೂ ಪ್ರವೇಶಿಸಿಬಿಟ್ಟಿದೆ. ಆದರೆ ಇದರ ಮುಖಚರ್ಯೆ ಯುಗಾದಿಗಿಂತ ಭಿನ್ನವಾಗಿರುವುದನ್ನು ಯಾರೂ ಗಮನಿಸಬಹುದು. ಆ ದಿನಗಳಲ್ಲಿ ಮನೆಯ ಧೂಳು ಹೊಡೆಯುವುದರಿಂದ ಶುರುಹಚ್ಚಿ, ಸುಣ್ಣ ಬಣ್ಣ ಕಾರಣೆ ಕಿಗ್ಗಾರಣೆ ಅಂತ ನಮ್ಮ ಅಜ್ಜಿ ಮತ್ತು ಅಮ್ಮ ತಿಂಗಳುಗಟ್ಟಲೆ ಹಬ್ಬದ ಸವರಣೆ ಮಾಡುತ್ತಿದ್ದರು. ಧೂಳು ಜಾಡಿಸುವುದು ಎಂದರೆ ಅದೇನು ಸಾಮಾನ್ಯ ಸಾಹಸವೇ? ಮಡಿಕೋಲಿಗೆ ಕಡ್ಡಿಪೊರಕೆ ಕಟ್ಟಿ ಅಜ್ಜ ಅಟ್ಟದ ದೆಬ್ಬೆಯ ಮೇಲೆ ನಿಂತು ಸೂರಿಗೆ ಕಟ್ಟಿಕೊಂಡ ಜೇಡದ ಬಲೆಗಳನ್ನು ಕೆಳಕ್ಕೆ ಬೀಳಿಸುತ್ತಿದ್ದರು.ಅಟ್ಟದ ಎರಡು ಗೋಡೆ ಸಂಧಿಸುವ ಯಾವುದೇ ಮೂಲೆ ನೋಡಿದರು ಅಲ್ಲಿ ಜೇಡ ಬಲೆ ಹೆಣೆದೇ ಇರುತ್ತಿತ್ತು. ಅದೆಲ್ಲವನ್ನು ಪೊರಕೆಯಿಂದ ಕೆರೆದು ಕೆಳಕ್ಕೆ ಕೆಡವುದರೊಳಗೆ ಅಜ್ಜನ ತೋಳು ಬಿದ್ದುಹೋಗುತ್ತಿತ್ತು

ತಲೆ ಮೂಗಿಗೆಲ್ಲಾ ಬಟ್ಟೆ ಸುತ್ತಿಕೊಂಡು ಅಜ್ಜ, ಅಜ್ಜಿ ಧೂಳು ಝಾಡಿಸುವ ದೃಶ್ಯ ಯಾರೋ ಮುಸುಕು ಹಾಕಿದ ದರೋಡೆಗಾರರು ಮನೆಗೆ ನುಗ್ಗಿರುವ ಕಲ್ಪನೆ ಕೊಡುತ್ತಾ ಇತ್ತು. ಎನ್.ನರಸಿಂಹಯ್ಯನವರ ಕಾದಂಬರಿಗಳಲ್ಲಿ ಇಂಥ ಮುಸುಕಿನ ಖೂಳರ ಕಥೆಗಳು ಅನೇಕ ಬರುತ್ತಾ ಇದ್ದವಲ್ಲಾ! ಅಟ್ಟದ ಮೇಲೆ ದೊಣ್ಣೆ ಹಿಡಿದು ಹೋರಾಡುತ್ತಿರುವ ಅಜ್ಜ ಅಜ್ಜಿ ಯಾವುದೋ ಪುರಾತನ ಹಗೆಯನ್ನು ಚುಕ್ತಾ ಮಾಡಲು ಖಡಾಖಾಡಿಯಲ್ಲಿ ತೊಡಗಿರುವಂತೆ ನನಗೆ ಭಾಸವಾಗುತ್ತಿತ್ತು. ನಮ್ಮ ದೊಡ್ಡಜ್ಜಿ ಮತ್ತು ಅಮ್ಮ ಇಂಥ ಸಾಹಸದ ಕೆಲಸಗಳಿಗೆಲ್ಲಾ ಕೈ ಹಾಕುತ್ತಿರಲಿಲ್ಲ. ನಮ್ಮ ಅಜ್ಜನಿಗೆ ಸಮಾಸಮವಾಗಿ ಇಂಥ ಕೆಲಸ ಮಾಡುತ್ತಿದ್ದಾಕೆ ಸೀತಜ್ಜಿಯೇ.ಧೂಳು ಝಾಡಿಸಿದ್ದಾದ ಮೇಲೆ ಸುಣ್ಣ ಬಳಿಯುವ ತಯಾರಿ. ಹಿತ್ತಲ ಕಟ್ಟೆಯ ಕೆಳಗೆ ಒಂದು ಸುಣ್ಣ ಬೇಯಿಸುವ ಗುಡಾಣವಿತ್ತು. ಸಂತೆಯಿಂದ ಸುಣ್ಣಕಲ್ಲನ್ನು ಆ ಕಡಾಯಿಯಲ್ಲಿ ಸುರುವಿ ಮೇಲೆ ಎರಡು ಕೊಡ ನೀರು ಹೊಯ್ದರೆ ಸುಣ್ಣ ಕೊತ ಕೊತ ಕುದಿಯುವುದಕ್ಕೆ ಪ್ರಾರಂಭವಾಗುತ್ತಿತ್ತು. ತಣ್ಣೀರಲ್ಲಿ ಸುಣ್ಣದ ಕಲ್ಲು ಕುದ್ದು ಕುದ್ದು ಬೆಳ್ಳಗೆ ಮಲ್ಲಿಗೆಯಂತೆ ಅರಳಿಕೊಳ್ಳುವುದು ನನಗಂತೂ ತುಂಬಾ ಚೋದ್ಯದ ವಿಷಯವಾಗಿತ್ತು. ಹಬ್ಬದ ಮುಂಚಿನ ದಿನಗಳಲ್ಲಿ ಹೆಣ್ಣಾಳುಗಳು ಸಿಗುತ್ತಾ ಇರಲಿಲ್ಲ. ಹೆಣ್ಣಾಳು ಸಿಗಲಿಲ್ಲಾ ಅಂತ ವರ್ಷಾವರಿ ಹಬ್ಬದಲ್ಲಿ ಮನೆಗೆ ಸುಣ್ಣ ಹಚ್ಚದೆ ಬಿಡುವುದಕ್ಕಾದೀತೆ? ಅಜ್ಜಿ ಅಮ್ಮ ತಾವೇ ಸುಣ್ಣ ಬಳಿಯುವುದಕ್ಕೆ ಸಿದ್ಧವಾಗುತ್ತಿದ್ದರು. ಸುಣ್ಣ ಬಳಿಯುವುದು ಅಷ್ಟು ಹಗುರವಾದ ಕೆಲಸವೇನಲ್ಲ! ಮೊದಲು ಬಲಗೈಯಿನ ಐದೂ ಬಟ್ಟುಗಳಿಗೆ ಬಟ್ಟೆ ಸುತ್ತಿಕೊಳ್ಳಬೇಕು. ಆಮೇಲೆ ಸುಣ್ಣ ತೆಳ್ಳಗೆ ಕದಡಿ ರೆಡಿ ಮಾಡಿಕೊಂಡು ಸಣ್ಣ ಸಣ್ಣ ತಪ್ಪಲೆಯಲ್ಲಿ ಸುಣ್ಣದ ತಿಳಿ ತುಂಬಿಕೊಂಡು ಗೋಡೆಗೆ ಬಳಿಯ ಬೇಕು. ಪಟ್ಟೆ ಬೀಳದಂತೆ ಗೋಡೆಗೆ ಸುಣ್ಣ ಬಳಿಯುವುದೇ ಒಂದು ಕಲೆ. ಅದರಲ್ಲಿ ನಮ್ಮ ಸೀತಜ್ಜಿ ಪರಿಣತೆಯಾಗಿದ್ದಳು. ಒಂದೊಂದೇ ಅಂಕಣ ಮುಗಿಸಿಕೊಂಡು, ಮಧ್ಯಾಹ್ನದವೇಳೆಗೆ ನಡುಮನೆಯ ಸುಣ್ಣ ಮುಗಿಸುತ್ತಿದ್ದರು. ಆಮೇಲೆ ಬೆರಳಿಗೆ ಸುತ್ತಿದ್ದ ಬಟ್ಟೆ ಬಿಚ್ಚಿದರೆ, ಎಷ್ಟೇ ಎಚ್ಚರ ವಹಿಸಿದ್ದರು ಬೆಟ್ಟಿನ ತುದಿಗಳಿಗೆ ಅದು ಹೇಗೋ ಸುಣ್ಣ ತಾಗಿ ಅಲ್ಲಿ ಕೆಂಪಗೆ ವ್ರಣವಾಗಿರೋದು. ಬಿಸಿನೀರು ತಾಗುವಹಾಗಿಲ್ಲ. ಖಾರ ಮುಟ್ಟುವ ಹಾಗಿಲ್ಲ. (ಆ ಒಂದುವಾರ ಮಾತ್ರ ಅಜ್ಜಿ ಅಮ್ಮ ಸ್ಪೂನಲ್ಲಿ ಊಟಮಾಡುತ್ತಿದ್ದರು!) ಬೆರಳ ತೂತುಗಳಿಗೆ ಅರಿಸಿನ ತುಂಬಿಕೊಂಡು ಮತ್ತೆ ಮರುದಿನ ಸುಣ್ಣ ಬಳಿಯುವುದಕ್ಕೆ ನಮ್ಮ ಅಮ್ಮ ಅಜ್ಜಿ ಹೇಗೋ ಸಿದ್ಧವಾಗಿಯೇ ಬಿಡುತ್ತಿದ್ದರು. ನೆನ್ನೆ ಬಲಗೈಯಾದರೆ ಈವತ್ತು ಎಡಗೈಯಲ್ಲಿ ಸುಣ್ಣ ಬಳಿಯುತ್ತಿದ್ದರು. ಮತ್ತೆ ಪೋಟು ವಾಸಿಯಾಗುವ ತನಕ ಕಾದು ಅಂತೂ ತಿಂಗಳೊಪ್ಪತ್ತರಲ್ಲಿ ಮನೆಗೆಲ್ಲಾ ತಾವೇ ಸುಣ್ಣ ಬಳಿದು ಮುಗಿಸುತ್ತಿದ್ದರು. ಅಲ್ಲಿಗೆ ಮುಗಿಯಲಿಲ್ಲ. ನೆಲದಿಂದ ಮೂರಡಿ ಎತ್ತರದವರೆಗೆ ಗೋಡೆ ಇನ್ನೂ ಬೆಳ್ಳಗೆ ಕಾಣುವ ಹಾಗೆ ಸುಣ್ಣದ ಸೆಕೆಂಡ್ ಕೋಟ್ ಮಾಡಬೇಕು. ಆಮೇಲೆ ಗೋಡೇಯ ಉದ್ದಕ್ಕೂ ಕಾರಣೆ ಎಳೆಯ ಬೇಕು. ಒಂಟಿ ಎಳೆ ಎಳೆದು ಮುಗಿಸುವುದು ಸುಲಭ. ಆದರೆ ಒಂಟಿ ಎಳೆ ಎಳೆದು ಕೈ ತೊಳೆದುಕೊಳ್ಳುವ ಜೀವವೇ ನಮ್ಮ ಭೀಮಜ್ಜಿಯದು? ಬಾತುಕೋಳಿ, ಬಳ್ಳಿ, ಹೂವು, ಕುದುರೆಸಾಲು, ಒಂಟೆಸಾಲು ಹೀಗೆ ಗೋಡೆಯುದ್ದಕ್ಕೂ ನೆಲಕ್ಕೆ ಸಮಾನಾಂತರವಾಗಿ ಹುರಿಮಂಜಿನ ಕಾರಣೆ ಆಗಲೇ ಬೇಕು. ಇದೆಲ್ಲಾ ಸೂಕ್ಷ್ಮ ಕೆಲಸವಾದುದರಿಂದ ಈಗ ನಮ್ಮ ಭೀಮಜ್ಜಿಯ ಕೈಕಸುಬಿನ ಕೆಲಸ ಪ್ರಾರಂಭವಾಗುತ್ತಿತ್ತು. ಹೀಗೆ ತಿಂಗಳು ಗಟ್ಟಲೆ ಸವರಣೆ ಮುಗಿನಡೆಸಿ ಯುಗಾದಿಯನ್ನು ಬರಮಾಡಿಕೊಳ್ಳುವುದೆಂದರೆ ಅದೆಷ್ಟು ಖುಷಿಯೋ ನಮಗೆ! ಯುಗಾದಿಯ ಚುಮುಚುಮುಬೆಳಗಲ್ಲೇ ಎದ್ದು ನಮ್ಮ ಅಮ್ಮ ಕಟ್ಟೆ ಸಾರಿಸಿ ಎಳೆಬಟ್ಟು ಎಳೆಯುತ್ತಿದ್ದರು. ಅಂಗಳಕ್ಕೆ ಸೆಗಣಿನೀರು ಹಾಕಿ ಗೌರಿಮುಡಿ ಎಂಬ ರಂಗೋಲಿ ಬಿಡಿಸುತ್ತಿದ್ದರು. ನಮ್ಮ ಅಜ್ಜ ಮುಸುಮುಸು ತೇಗುತ್ತಾ ಬೋರಲು ಹಾಕಿದ ನೀರಿನ ಡಬರಿಯ ಮೇಲೆ ಹೇಗೋ ಬ್ಯಾಲೆನ್ಸ್ ಮಾಡುತ್ತಾ ನಿಂತು ಮುಂಬಾಗಿಲಿಗೆ ಹಚ್ಚನೆ ಮಾವಿನ ತೋರಣ ಹಾಕುತ್ತಿದ್ದರು. ಅಮ್ಮ ಅಂಗಳದಲ್ಲಿ ಗೌರಿಮುಡಿ ಹಾಕಿದರೆ ಅದು ರಸ್ತೆಯ ಮುಕ್ಕಾಲು ಭಾಗವನ್ನು ಆವರಿಸುತ್ತಿತ್ತು. ಅದನ್ನು ಚೆಲುವಿನಲ್ಲಿ ಮತ್ತು ವಿಸ್ತಾರದಲ್ಲಿ ಮೀರಿಸ ಬೇಕೆನ್ನುವ ಅಘೋಷಿತ ಸ್ಪರ್ಧೆಯಲ್ಲಿ ನಮ್ಮ ಕೇರಿಯ ಇತರ ಹೆಣ್ಣುಮಕ್ಕಳು ತೊಡಗುತ್ತಿದ್ದರು. ನಾನು ಮಂಕಿ ಟೋಪಿ ಸಮೇತ ಕೇರಿಯ ಉದ್ದಕ್ಕೂ ಓಡಾಡಿ ಯಾರ್ಯಾರ ಮನೆಯ ಮುಂದೆ ಯಾವ ಯಾವ ರಂಗೋಲಿ ಬಿಡಿಸಲಾಗಿದೆ ಎಂದು ಪರಿವೀಕ್ಷಣೆ ಮಾಡಿಕೊಂಡು ಬರುತ್ತಾ ಇದ್ದೆ. ಗೌರಿಮುಡಿ ಹಾಕುವುದು ಪಕ್ಕದ ಮನೆ ಸುಬ್ಬಚಿಕ್ಕಿ, ಎದುರು ಮನೆ ಪಾತತ್ತೆ, ಮೂಲೆ ಮನೆ ಅಂಡಾಳಮ್ಮ ಯಾರಿಗೂ ಬರುತ್ತಿರಲಿಲ್ಲ. ಅದಕ್ಕೇ ನಮ್ಮ ಅಮ್ಮ ಬೇರೆ ಯಾರೂ ಅದನ್ನು ಹಾಕುವುದನ್ನು ನೋಡಬಾರದೆಂದು ಆಪಾಟಿ ನಸುಕಲ್ಲಿ, ಬುಡ್ಡಿದೀಪದ ಬೆಳಕಲ್ಲಿ ಗೌರಿಮುಡಿ ಹಾಕುತ್ತಿದ್ದುದು! ನಾನು ಕೌದಿ ಡುಬುರು ಹಾಕಿಕೊಂಡು ಹಸಿ ಹಸಿ ಜಗಲಿ ಮೇಲೆ ಕೂತು ದಾರಿಯಲ್ಲಿ ಹಾಲಿನವರು ಬರುತ್ತಿದ್ದರೆ, ರಂಗೋಲಿ ತುಳೀ ಬೇಡಿ ರಂಗೋಲಿ ತುಳೀ ಬೇಡಿ ಎಂದು ತಾಖೀತು ಮಾಡುತ್ತಾ ಕೂಡುತ್ತಿದ್ದೆ. ಅದು ಯುಗಾದಿಯ ಬೆಳಿಗ್ಗೆ ನನಗೆ ನಾನೇ ಕೊಟ್ಟುಕೊಂಡ ಬಿಟ್ಟಿ ಕೆಲಸ! ಅಷ್ಟರಲ್ಲಿ ಭೀಮಜ್ಜಿ ಬಂದು ನನಗೆ ಬಿಸಿಬಿಸಿ ಕಾಫೀ ಕೊಡುತ್ತಿದ್ದಳು. ನಾನು ಕೌದಿಯ ಅಂಚಲ್ಲಿ ಸುಡುಸುಡು ಕಾಫೀಕಪ್ಪು ಹಿಡಿದುಕೊಂಡು ಉಫ್ ಉಫ್ ಎಂದು ಊದಿಕೊಳ್ಳುತ್ತಾ ಗುಟುಕು ಗುಟುಕಾಗಿ ಕಾಫಿ ಹೀರುತ್ತಿದ್ದೆ! ಓಹೋ! ಈಗ ಕೇರಿತುಂಬ ಬೆಳಗಾಗುತ್ತಿದೆ. ಗೌಡರ ಹುಡುಗರು ಮೋಟು ಚಡ್ಡಿಯಲ್ಲಿ ಮೈ ತುಂಬ ತೊಪ ತೊಪ ಹರಳೆಣ್ಣೆ ಬಡಿದುಕೊಂಡು ಬೀದಿಗೆ ಬರುತ್ತಿದ್ದಾರೆ. ನಮ್ಮ ಮನೆಯ ಹತ್ತಿರಾನೂ ಬಂದು ಖಾಲೀ ಚಿಪ್ಪಿದೆಯಾ ಅಂತ ಕೇಳುತಾ ಇದ್ದಾರೆ.ಖಾಲಿ ಚಿಪ್ಪು ಕೊಟ್ಟರೆ ಅದರ ಜುಟ್ಟು ಕಿತ್ತು ಅದನ್ನು ಲಗಾರಿ ಹೂಡುವುದಕ್ಕೆ ಸಿದ್ಧ ಮಾಡಿಕೊಳ್ಳುತ್ತಾರೆ. ಸೂರ್ಯ ನಿಧಾನಕ್ಕೆ ಮೇಲೆ ಬರುತ್ತಾ ಇದ್ದಾನೆ. ಯಂಕಾ ಬಚ್ಚಲು ಇಳಿಯುವಂತೆ ಬಾರೋ ಎಂದು ಭೀಮಜ್ಜಿ ಕೂಗುತಾ ಇದ್ದಾಳೆ. ಇದೀಗ ನನ್ನ ನಿಜವಾದ ಸಂಕಟ ಪರ್ವ ಪ್ರಾರಂಭವಾಗಲಿಕ್ಕಿದೆ. ಅಂಗಿ, ಬನೀನು, ಕಿತ್ತು ಹಾಕಿ ದೊಡ್ಡಜ್ಜಿ ನನ್ನನ್ನ ಬಚ್ಚಲು ಮನೆಯಲ್ಲಿ ಕೂಡಿಸಿಕೊಂಡು ದಣೇ ಅಂತ ತಲೆಗೆ ಎಣ್ಣೆ ಬಡಿಯುತ್ತಾಳೆ. ಹರಳೆಣ್ಣೆ ವಾಸನೆ ಮೂಗಿಗೆ ಅಡರುತ್ತಾ ವಾ ಅಂತ ನಾನು ವಾಕರಿಸಿದರೂ ಬಿಡದೆ ಕುಂಬಾರ ಮಡಕೆಗೆ ಬಡಿಯುವಂತೆ ವಿಚಿತ್ರ ತಾಳಗತಿಯೊಂದರಲ್ಲಿ ದೊಡ್ಡಜ್ಜಿ ಘಟವಾದ್ಯ ವಾದನಕ್ಕೆ ತೊಡಗುತ್ತಾಳೆ. ಕುಕ್ಕುರುಗಾಲಲ್ಲಿ ಕೂತು ದೊಡ್ಡಜ್ಜಿ ಎಣ್ಣೆ ಬಡಿಯುವಾಗ ಅವಳ ಘಲ ಘಲ ಬಳೆ ಸದ್ದು ನಾನು ಕೇಳುತ್ತಾ ಕೂಡುತ್ತೇನೆ. ಈಗ ತಲೆಯ ಸರ್ತಿ ಮುಗಿಯಿತು. ದೊಡ್ಡಜ್ಜಿ ಮಣೆ ತಿರುಗಿಸಿ ಬೆನ್ನಿಗೆ ಎಣ್ಣೆ ಹಚ್ಚಲು ಶುರು ಹಚ್ಚುತ್ತಾಳೆ. ಕೊಂಕುಳ ಸಂದಿಯಲ್ಲಿ ಅವಳು ಕೈ ತೂರಿಸಿ ಎಣ್ಣೆ ಹಚ್ಚುವಾಗ ಬುಳು ಬುಳು ಆಗಿ ನಾನು ಕೂತಲ್ಲೇ ಹಾ ಹಾ ಅಂತ ಮೈ ನುಲಿಯಲಿಕ್ಕೆ ಪ್ರಾರಂಭಿಸುತ್ತೇನೆ. ಈಗ ನೋಡಿಯಪ್ಪ! ನಾಚಿಕೆ ಹೇಚಿಕೆ ಚೂರೂ ಇಲ್ಲದ ದೊಡ್ಡಜ್ಜಿ ಚಡ್ಡಿಯೊಳಗೆ ಕೈ ಹಾಕಿದಳು. ಮೂಲೆ ಮುಡುಕಿಗೆಲ್ಲಾ ಎಣ್ಣೆ ಹಚ್ಚಿ ನೀವ ತೊಡಗಿದಳು. ಆಗೆಲ್ಲಾ ಸ್ವಲ್ಪವೇ ಹಲ್ಲು ಬಿಟ್ಟು ಕತ್ತರಿಸಿದ ನಗೆ ನಗುತ್ತಾ , ಮುಸುಕರಿಯುತ್ತಾ ದೊಡ್ಡಜ್ಜಿ ಎಣ್ಣೆ ಹಚ್ಚುವುದು ನೋಡಿ ನನಗೆ ಕೋಪವೇ ಬಂದು ಬಿಡುತ್ತೆ. ಸಾಕು ಬಿಡೇ ಸಾಕು ಬಿಡೆ ಎಂದು ನಾನು ಕೂಗಾಡಲು ಪ್ರಾರಂಭಿಸುತ್ತೇನೆ. ಸ್ವಲ್ಪ ಇರೋ ಕಂಡಿದೀನಿ ಅನ್ನುತ್ತಾ ಬೆಲ್ಲ ಹಿಡಿದು ಬಲೂನಿನಂತೆ ಜಗ್ಗುತ್ತಾ ಪೋಲಿ ದೊಡ್ಡಜ್ಜಿ ಕಿಸಿಕಿಸಿ ನಗುತ್ತಾಳೆ! ಥೂ ಮಾನ ಬಿಟ್ಟವಳೇ ಎಂದು ನಾನು ಮುಖ ಊದಿಸಿಕೊಳ್ಳುತ್ತೇನೆ. ದೊಡ್ಡಜ್ಜಿ ನನ್ನ ತೊಡೆಯಮೇಲೆ ಚಿರಂಜೀವಿ ಬಟ್ಟು ಇಟ್ಟು , ನನ್ನನ್ನು ನಿಲ್ಲಿಸಿ ತೊಡೆಯಿಂದ ಮುಂಗಾಲ ವರೆಗೆ ಎರಡೂ ಕೈಯಲ್ಲಿ ಹುಸ್ ಹುಸ್ ಎಂದು ಸದ್ದು ಮಾಡುತ್ತಾ ಕೆಳಮುಖೀ ತಿಕ್ಕಾಟ ಶುರು ಹಚ್ಚುತ್ತಾಳೆ. ಆಮೇಲೆ ಚಡ್ಡಿ ಬಿಚ್ಚಿ,ಸೊಂಟಕ್ಕೆ ಒಂದು ಲಂಗೋಟಿ ಸಿಕ್ಕಿಸಿ ಹಿತ್ತಲಲ್ಲಿ ಸ್ವಲ್ಪ ನೆನಕೊಂಡು ಬರೋ ಹೋಗು ಎಂದು ನನ್ನನ್ನು ಹಿತ್ತಲಿಗೆ ಗದುಮುತ್ತಾಳೆ. ನಾನು ಹಿತ್ತಲ ಹೂಬಿಸಿಲಲ್ಲಿ ಕಟ್ಟೆಯ ಮೇಲೆ ಕೂತು ಎದೆಯ ಮೇಲೆ ನಾನಾ ರೀತಿ ಉಗುರಲ್ಲಿ ಚಿತ್ತಾರ ಬಿಡಿಸಿಕೊಳ್ಳುತಾ ನೆನೆಯಲಿಕ್ಕೆ ಶುರು ಮಾಡುತ್ತೇನೆ. ನಾಡಿಗರ ಬಾಗಿ ಮರದಿಂದ ಒಣಗಿದ ಎಲೆಗಳು ತಟಪಟ ಉದುರುತ್ತಾ ಚಿನಕುರುಳಿ ಹುರಿದ ಸದ್ದಿನಂತೆ ಕೇಳುತ್ತಾ ಇರುತ್ತದೆ. ಬಾಗಿ ಈಗ ಮೆಲ್ಲಗೆ ಚಿಗುರಲಿಕ್ಕೆ ಶುರು ಹಚ್ಚಿದೆ. ಅದನ್ನು ನೋಡಿದರೆ ಬಾಗಿಮರಕ್ಕೆ ಯಾರೋ ಬೆಳಗಾಬೆಳಿಗ್ಗೆ ಅಭ್ಯಂಗ ಮಾಡಿಸಿ ಕೆನ್ನೆಗೆ ಅರಿಸಿನ ಮೆತ್ತಿದ ಹಾಗೆ ಕಾಣಿಸುತ್ತಾ ಇದೆ. ಇತ್ತ ಹಾಳಾದ ಹರಳೆಣ್ಣೆ ನಿಧಾನವಾಗಿ ತಲೆಯಿಂದ ಕೆಳಕ್ಕಿಳಿಯುತ್ತಾ ಹಣೆ ಮೇಲೆ ಸೊಟ್ಟಂಬಟ್ಟ ಹರಿದು, ಹುಬ್ಬಿನ ಬಳಿ ಬುಳು ಬುಳು ಮಾಡಿ ರೆಪ್ಪೆಗೆ ಜಾರುತ್ತಿದೆ. ಅದನ್ನೀಗ ವರೆಸಿಕೊಳ್ಳದಿದ್ದರೆ ಶುರುವಾಗುತ್ತದೆ ನೋಡಿ ಲಬೋಲಬೊ ಕಣ್ಣುರಿ! ನೀರು ಕಾದಿದೆ ಬಾರೋ ಎಂದು ದೊಡ್ಡಜ್ಜಿ ಕೂಗುವ ವೇಳೆಗೆ ಬಿಸಿಲಿಗೆ ಆಗಲೇ ಚುರುಕುಹತ್ತಿರುತ್ತದೆ. ಸೂರ್ಯ ತುದಿಬೆರಳಲ್ಲಿ ಬೆನ್ನ ಮೇಲೆ ಕಚಕುಳಿ ಇಡುತ್ತಿರುವಂತೆ ಈ ಚಳಿ ಬಿಸುಪಿನ ದ್ವಂದ್ವಾನುಭವ.ಆ ವೇಳೆಗೆ ಅಜ್ಜಿ ಬಂದು ನನ್ನನ್ನು ನೀರುಮನೆಗೆ ಎಳೆದುಕೊಂಡು ಹೋಗಿ, ಕೈ ಹಿಡಿದು ಬಚ್ಚಲಿಗೆ ಇಳಿಸುತ್ತಾರೆ. ಕೂತರೆ ತಲೆ ಮಟ್ಟ ಮುಚ್ಚಿಹೋಗುವಂತಿರುವ ನಮ್ಮ ಬಚ್ಚಲು ವಾಸ್ತವವಾಗಿ ಒಂದು ಗುಂಡಿಯೇ! ಎಷ್ಟು ತಿಕ್ಕಿದರೂ ಅದರ ಅಂಚು ಹಾವುಸೆಗಟ್ಟಿ ಕಾಲಿಟ್ಟರೆ ಜರ್ರನೆ ಜಾರುತ್ತೆ . ನಾವು ಹುಷಾರಾಗಿ ಬ್ಯಾಲನ್ಸ್ ಮಾಡುತ್ತಾ ಬಚ್ಚಲ ನಡುವಲ್ಲಿ ನಿಲ್ಲ ಬೇಕು. ಅಜ್ಜಿ ಕಾಲ ಕೆಳಗೆ ಒಂದು ಮಣೆ ತಳ್ಳುತ್ತಾಳೆ. ನಾನೀಗ ಮಣೆಯ ಮೇಲೆ ಕೂಡಬೇಕು. ನಿಂತರೆ ನನ್ನ ಮಂಗ ಚೇಷ್ಟೆಯಿಂದ ಬಚ್ಚಲ ಹೊರಗೇ ಅವಳಿಗೆ ಅಭ್ಯಂಜನವಾಗುತ್ತದಲ್ಲಾ! ಬಲವಂತವಾಗಿ ನನ್ನನ್ನು ಕೂಡಿಸಿ ಕೊಳಗಕ್ಕೆ ನೀರು ತೋಡಿಕೊಂಡು ಸುಡು ಸುಡು ನೀರು ಧಡ ಧಡ ತಲೆಯ ಮೇಲೆ ಸುರಿಯೋದರಲ್ಲಿ ನನ್ನ ಅಜ್ಜಿಗೆ ಅದೇನು ಹುರುಪೋ….ಬೆರಕೇ ಹಾಕು ಬೆರಕೇ ಹಾಕು ಎಂದು ನಾನು ಕೂಗುವುದಕ್ಕೆ ಶುರು ಹಚ್ಚುತ್ತೇನೆ. ಒಂದು ಚಟ್ಟಿತಪ್ಪಲೆ ತಣ್ಣೀರು ಹಾಕಿ ಅಜ್ಜಿ ಮತ್ತೆ ಎರಡು ಚಟ್ಟಿತಪ್ಪಲೆ ಕುದಿನೀರು ಸುರುವಿಕೊಂಡು ಹುಸ್ ಹುಸ್ ಎಂದು ನೆತ್ತಿಯ ಮೇಲೆ ನೀರು ಹೊಯ್ಯಲು ಶುರುಹಚ್ಚುತ್ತಾಳೆ. ಈ ಜಲವರ್ಷ ಮುಗಿದ ಮೇಲೆ ಶುರು ಭಗ ಭಗ ಸೀಗೇ ಪರ್ವ. ಸೀಗೇ ಪುಡಿಯ ಚಟ್ಟಿಗೆ ಬಿಸಿನೀರು ಚುಮುಕಿಸಿ, ಧಸ್ಸನೇಳುವ ಘಾಟಿಗೆ ಚಟ್ ಚಟಾರೆಂದು ಸೀನುತ್ತಾ , ತೆಳ್ಳಗೆ ಸೀಗೆ ಬಗ್ಗಡ ಮಾಡಿಕೊಂಡು ಪುಣ್ಯಾತ್ಗಿತ್ತಿ ತಲೆ ತಿಕ್ಕಲು ಶುರುಮಾಡುವಳು. ಎಷ್ಟು ಬಿಗಿಯಾಗಿ ಕಣ್ಣುಮುಚ್ಚಿಕೊಂಡರೂ ಸೀಗೇ ರಸ ಅದ್ಯಾವ ನಿಗೂಢ ಗುಪ್ತಮಾರ್ಗದಲ್ಲಿ ಕಣ್ಣೊಳಕ್ಕೆ ಇಳಿಯುವುದೋ ಶಿವನೇ ಬಲ್ಲ! ನಾನು ಲಬೊ ಲಬೋ ಬಡುಕೊಳ್ಳುವುದಕ್ಕೆ ಶುರು ಹಚ್ಚುತ್ತೇನೆ! ತಲೆ ಮೇಲೆತ್ತು ತಲೆ ಮೇಲೆತ್ತು ಎಂದು ಆರ್ಭಟಿಸುತ್ತಾ ದೊಡ್ಡಜ್ಜಿ ಗಸ ಗಸ ಗಸ ಸೀಗೆರಸ ತಲೆಗೆ ತಿಕ್ಕುತ್ತಾಳೆ. ನನ್ನ ಮೇಲೆ ಅವಳದ್ದು ಜನ್ಮಜನ್ಮಾಂತರದ ದ್ವೇಷವೇ ಇರಬೇಕು!ಮಜ್ಜನ ಮುಗಿದುಕಣ್ಣುಕೆಂಪಾಗಿ, ಮೈಯೆಲ್ಲಾ ಕೆಂಪಾಗಿ, ಬಿಸಿಬಿಸಿ ಹಬೆ ಹಾಯುತ್ತಾ ನಾನು ಬಚ್ಚಲಲ್ಲಿ ನಿಂತರೆ ಮತ್ತೆ ಬಲವಂತವಾಗಿ ನನ್ನನ್ನು ಅಜ್ಜಿ ಮಣೆಯ ಮೇಲೆ ಕೂಡಿಸಿ ಏಳು ತಂಬಿಗೆ ನೀರು ಆಶಿರ್ವಾದ ಮಾಡುತ್ತಾ ಹಾಕಿ, ಬೆವೆತ ಮುಖ ಒರೆಸಿಕೊಂಡು-ಸದ್ಯ….ಒಂದು ಯಜ್ಞಮಾಡಿದ ಹಾಗಾಯಿತು ಮಾರಾಯ!…ಎನ್ನುತ್ತಾ ನೆಂದಿರುವ ಸೀರೆ ಅಂಚು ಹಿಂಡಿಕೊಳ್ಳುತ್ತಾ ನಿರ್ಗಮಿಸುವಾಗ ನಾನು ಬಾಳೆಯ ದಿಂಡಿನಂತಿರುವ ಅವಳ ಹಿಂಗಾಲುಗಳನ್ನೇ ನೋಡುತ್ತೇನೆ! ಇತ್ತ ಒಳಮನೆಯಲ್ಲಿ ಸೀತಜ್ಜಿ ಈರುಳ್ಳಿ ಹಾಕದ ಉಪ್ಪಿಟ್ಟು ಬೇಯಿಸಿ ಇಟ್ಟಿದ್ದಾಳೆ. ಈರುಳ್ಳಿ ಇಲ್ಲದ ಉಪ್ಪಿಟ್ಟು ಯಾವ ದೇವರಿಗೆ ಪ್ರೀತಿ ನೀವೇ ಹೇಳಿ? ನಾನು ಅದನ್ನ ತಿನ್ನ ಬೇಕು! ಬೇರೆ ದಾರಿಯಿಲ್ಲ. ಗೌಡರ ಕೇರಿಯಲ್ಲಿ ಆಗಲೇ ಲಗ್ಗೆ ಆಟ ಪ್ರಾರಂಭವಾಗಿದೆ. ನಾನು ಹೊಸ ಬಟ್ಟೆ ಹಾಕಿಕೊಂಡು, ಅಮ್ಮ ಹೇಗೋ ಹಿಡಿದು ಹಣೆಗೆ ದುಂಡಗೆ ಸಾದು ಹಚ್ಚಿದ ಮೇಲೆ, ದೇವರ ಮುಂದೆ ಧಿಡಿಲ್ಲನೆ ಬಿದ್ದು, ಗಬ ಗಬ ಉಪ್ಪಿಟ್ಟು ನುಂಗಿ ಗೌಡರ ಕೇರಿಗೆ ಓಡುತ್ತೇನೆ. ಓಹೋ! ಈಗಾಗಲೇ ಆಟಕ್ಕೆ ಒಳ್ಳೇ ರಂಗೇರಿದೆ. ಆಟ ಶುರುಮಾಡುವವರು ಹುಡುಗರು. ಆಮೇಲೆ ನಿಧಾನಕ್ಕೆ ಮೀಸೆ ಗಡ್ಡ ಬಂದೋರೂ ಆಟಕ್ಕೆ ಸೇರಿಕೊಳ್ಳುತ್ತಾರೆ. ಈಶ್ವರನ ಗುಡಿಯ ಮುಂದೆ ಚಿಪ್ಪುಹೂಡಿದ್ದಾರೆ. ಅಂದರೆ ಒಂದು ಚಿಪ್ಪಿನ ಮೇಲೆ ಒಂದು ಚಿಪ್ಪು ಇಟ್ಟು ಗೋಪುರ ಮಾಡಿದ್ದಾರೆ. ಆಟದಲ್ಲಿ ಎರಡು ಟೀಮು. ಲಗ್ಗೆ ಬಿದ್ದ ಕೂಡಲೇ ವಿರುದ್ಧ ಟೀಮಿನವರು ಬಟ್ಟೆಚಂಡಿನ ಹೊಡೆತ ತಪ್ಪಿಸಿಕೊಳ್ಳಲು ಹಾರಿಗ್ಗಾಲು ಓಡುತ್ತಾರೆ. ಮಹಾನ್ ಧಡಿಯರೆಲ್ಲಾ ಬೀದಿಯಲ್ಲಿ ಓಡುವಾಗ ಧಣ ಧಣ ಸದ್ದಾಗುತ್ತದೆ. ಎಷ್ಟೇ ಹೊಡೆತ ಬಿದ್ದರು ಸಹಿಸಿಕೊಂಡು ಅವರು ಲಗ್ಗೆ ಹೂಡ ಬೇಕು. ಹಾಗೆ ಲಗ್ಗೆ ಹೂಡಿದರೆ ಆಟದ ಮುಂದಿನ ಟರ್ನು ಅವರದ್ದು. ಈಗ ಅವರು ಕೈಗೆ ಚಂಡು ಎತ್ತಿಕೊಂದು ವಿರೋಧಪಕ್ಷದವರನ್ನು ಅಟ್ಟಿಸಿಕೊಂಡು ತದಕಲಿಕ್ಕೆ ಶುರುಮಾಡುತ್ತಾರೆ. ಹುಡುಗರೆಲ್ಲಾ ಹೀಗೆ ಲಗ್ಗೆ ಆಟದಲ್ಲಿ ತೊಡಗಿದಾಗ ಮುದುಕರು ಗುಡಿಯ ಪೌಳಿಯಲ್ಲಿ ಕೂತು ನೊಣಕಾಸು ಆಡುತ್ತಾರೆ. ಎಲ್ಲರೂ ಮೊದಲು ನಾಣ್ಯ ಹಾಕಬೇಕು. ಯಾರ ನಾಣ್ಯದ ಮೇಲೆ ನೊಣ ಬಂದು ಕೂಡುವುದೋ ಅವನ ಪಾಲಿಗೆ ಎಲ್ಲ ನಾಣ್ಯಗಳೂ ಸೇರುತ್ತವೆ. ಬುಗ್ಗಿರೇವಣ್ಣನ ನಾಣ್ಯದ ಮೇಲೆ ಮತ್ತೆ ಮತ್ತೆ ಯಾಕೆ ನೊಣ ಕೂಡುತ್ತಾ ಇದೆ? ರೇವಣ್ಣ ಮಹಾ ಕಿಲಾಡಿ. ನಾಣ್ಯಕ್ಕೆ ಹೂರಣ ಹಚ್ಚಿಕೊಂಡು ಬಂದಿದ್ದಾನೆ ಅವ! ಅದನ್ನು ಪತ್ತೆ ಮಾಡಿದ್ದು ನಮ್ಮ ಕುಂಟಸಿಂಗ್ರಿ! ಹೋಗು ನಿನ್ನ ಬಿಲ್ಲೆ ತೊಳ್ಕಂಬಾ ತೊಳ್ಕಂಬಾ…ಎಂದು ಅವನು ದೊಡ್ಡ ಗಲಾಟೆಯನ್ನೇ ಶುರುಮಾಡಿದ. ಗಲ್ಲಿಮೀಸೆ ಗೌಡರು ಹುಸಿ ನಗೆ ನಗುತ್ತಾ..ರೇವಣ್ಣಾ ನೀನು ಐನಾತಿ ನನ್ ಮಗ ಕಾಣಲೇ ಎಂದು ಪ್ರೀತಿಯಿಂದ ಬೈದದ್ದಾದ ಮೇಲೆ ರೇವಣ್ಣ ಪಂಚೆ ಅಡರು ಗಟ್ಟಿ ನಾಣ್ಯವನ್ನ ತೊಳೆದುಕೊಂಡು ಬರಲು ಹೋದವ ಮತ್ತೆ ಗುಡಿಯ ಹತ್ತಿರ ಸುಳಿದಿದ್ದರೆ ಕೇಳಿ! ಈಗ ಮಟಮಟ ಮಧ್ಯಾಹ್ನದ ಎರಡು ಗಂಟೆ ಸಮಯ. ನನಗೋ ಹೊಟ್ಟೆ ಚುರುಗುಟ್ಟಲಿಕ್ಕೆ ಹತ್ತಿದೆ. ನಮ್ಮ ಸೀತಜ್ಜಿ ಇಷ್ಟಿಷ್ಟಗಲ ಹೋಳಿಗೆ ಬೇಯಿಸಿ ಅದನ್ನು ಅರ್ಧಕ್ಕೆ ಮಡಿಸಿ ಪೇರಿಸಿ ಪೇರಿಸಿ ಬಾಳೆ ಎಲೆ ಮೇಲೆ ಇಡುತ್ತಾ ಇದ್ದಾಳೆ. ಇವಳೇ ಆಯಿತೇನೆ ನೇವೇದ್ಯಕ್ಕೆ ರೆಡಿ…? ನಾವು ಗುಡಿಗೆ ಹೋಗಿ ಬರುತ್ತೇವೆ ಎಂದು ಅಜ್ಜ ಕೂಗುತ್ತಿದ್ದಾರೆ. ನಾನು ಮತ್ತು ಅಜ್ಜ ನೈವೇದ್ಯ ತೆಗೆದುಕೊಂಡು ಹನುಮಪ್ಪನ ಗುಡಿಗೆ ಹೋಗುತ್ತೇವೆ. ನಮ್ಮೂರ ಹನುಮನ ಗುಡಿ ಹೇಗಿದೆ ಎಂಬುದನ್ನು ವಿವರಸದೇ ಇದ್ದರೆ ನೀವು ಸುಮ್ಮ ಸುಮ್ಮಗೆ ಏನೇನೋ ಹುಚ್ಚುಚ್ಚಾರ ಕಲ್ಪನೆ ಮಾಡಿಕೊಳ್ಳಬಹುದು. ಹೆಸರಿಗೆ ಗುಡಿ ಅದು ಅಷ್ಟೆ. ವಾಸ್ತವವಾಗಿ ಒಂದು ಮುರುಕು ಮಂಟಪ. ಮೇಲೆ ಸೂರು ಇಲ್ಲ. ಅಲ್ಲಲ್ಲಿ ಹಿಂದೆ ಸೂರು ಇತ್ತು ಅಂತ ವಾದ ಮಾಡಲಿಕ್ಕೆ ಉಳಿದುಕೊಂಡಿರುವ ಕಲ್ಲಿನ ತೊಲೆಗಳಿವೆ. ಅದರ ಮೇಲೆ ಅಲ್ಲಲ್ಲಿ ಮಣ್ಣಿನ ಹರಕುಮುರುಕು ಪಾಗರ. ಅದರ ಮೇಲೆ ಬೆಳೆದಿರುವ ಮುಳ್ಳುಗಿಡ ಮತ್ತು ಕರಿಕೆಹುಲ್ಲು. ಒಪ್ಪಾರದ ಸಂಗತಿ ಇಷ್ಟಾದರೆ ಇನ್ನು ನೆಲಹಾಸು ಹನುಮಪ್ಪನಿಗೇ ಪ್ರೀತಿ. ಅಲ್ಲೆಲ್ಲಾ ರಗಡ್ಡಾಗಿ ಮೂರುನಮಾದ ಮುಳ್ಳುಗಳು ಬೆಳೆದು ಕಾಲಿಡುವಂತಿಲ್ಲ. ದೇವಸ್ಥಾನವಾದುದರಿಂದ ಚಪ್ಪಲಿ ಹಾಕಿ ಕೊಂಡು ಒಳಗೆ ಬರುವಂತೆಯೂ ಇಲ್ಲ. ನಾನು ಟಣ್ ಪುಣ್ ಹಾರಿಕೊಂಡು ಗರ್ಭಗುಡಿಯ ಹತ್ತಿರಕ್ಕೆ ಹೋಗುತ್ತೇನೆ. ಯಾವಾಗ ಬೇಕಾದರೂ ತಲೆಯ ಮೇಲೆ ಬೀಳಬಹುದು ಹಾಗಿದೆ ಹನುಮಪ್ಪನ ಗರ್ಭಗುಡಿ. ಇನ್ನೂ ಸರಿಯಾದ ಮುಹೂರ್ತ ಕೂಡಿಲ್ಲ ಅಂತ ಈವತ್ತಿನವರೆಗೆ ಬಿದ್ದಿಲ್ಲ ಅಷ್ಟೆ! ಹನುಮಪ್ಪನಿಗೆ ಆಗಾಗಲೇ ಯಾರೋ ನೆತ್ತಿಯ ಮೇಲೆ ನೀರು ಸುರಿದು ಮದನಮಲ್ಲಿಗೆ ಹೂವು, ಕಾಮಕಸ್ತೂರಿ ಪತ್ರೆ ಇಟ್ಟು ಪೂಜೆ ಮಾಡಿಹೋಗಿದ್ದಾರೆ.ಅದೊಳ್ಳೆ ಗಮ್ಮಂತ ನಾತಹೊಡೆಯುತ್ತಾ ಇದೆ. ನಮ್ಮ ಅಜ್ಜ ಅದರ ಮೇಲೆ ಮತ್ತೆ ನೀರು ಸುರುವಿ ದೇವರನ್ನು ಮಡಿ ಮಾಡಿಕೊಂಡು ಸಾಂಗೋಪಾಂಗ ಪೂಜೆ ಮುಗಿಸುತ್ತಾರೆ. ಹನುಮಪ್ಪನ ಮೈ ತುಂಬ ಚುಕ್ಕಿ ಚುಕ್ಕಿ ಅರಿಸಿನ ಕುಂಕುಮದ ಬಟ್ಟಿಟ್ಟು, ಪಾರಿಜಾತದ ಹೂ ಮುಡಿಸಿ ನೈವೇದ್ಯ ಮಾಡಿದ್ದಾದ ಮೇಲೆ ಅಜ್ಜ ಕರ್ಪೂರಾರತಿ ಮಾಡಿ ಢಣ ಢಣ ಗಂಟೆ ಜಾಮಾಯಿಸುತ್ತಾರೆ. ಗಂಟೆ ಸದ್ದು ಕೇಳಿದ್ದೇ ಆಸುಪಾಸಿನ ಮನೆಯ ಮಕ್ಕಳೆಲ್ಲಾ ಬಂದು ಗುಡಿಯಲ್ಲಿ ಮುಕುರಿಕೊಳ್ಳುತ್ತವೆ. ಮಕ್ಕಳು ಮೂರುನಾಮದ ಮುಳ್ಳು ತುಳಿದು ಆ ನೋವಿಗೆ ಮೈ ವಕ್ರಮಾಡಿಕೊಂಡು ತೂಗಾಡುತ್ತಾ ನಿಲ್ಲುವುದನ್ನು ನೋಡಲಿಕ್ಕೆ ನನಗೆ ಮಜವೋ ಮಜ. ಅಜ್ಜ ಎಲ್ಲರಿಗೂ ಹೋಳಿಗೆ ಹರಿದು ಪ್ರಸಾದ ಕೊಡುತ್ತಾರೆ. ಮತ್ತೆ ಗುಡಿಯ ಹೊರಗೆ ಬರಲಿಕ್ಕೆ ಮೂರುನಾಮದ ಮುಳ್ಳಿನ ಗಿಡ ತುಳಿಯದಂತೆ ಹಾರಿ ಹಾರಿ ಪಾರಾಗಬೇಕು. ಅಜ್ಜಾ…ಈ ಮುಳ್ಳು ಕೀಳಿಸ ಬಾರದೆ ? ಎಂದು ನಾನು ಕೂಗುತ್ತೇನೆ. ಆ ಮುಳ್ಳಿನ ಗಿಡ ಮಹಾ ವಿಷ್ಣುಭಕ್ತನೆಂದೂ, ಅದಕ್ಕೇ ಅವನು ಮೈ ತುಂಬಾ ಮೂರು ನಾಮ ಇಟ್ಟುಕೊಂಡಿದ್ದಾನೆಂದೂ, ಆ ಗಿಡ ಕೀಳಿಸುವುದು ಪಾಪವೆಂದೂ ನಮ್ಮ ಅಜ ಸಮಜಾಯಿಸಿ ಹೇಳಿ ನನ್ನನ್ನು ಗುಡಿಯಿಂದ ಗದುಮಿಕೊಂಡು ಮನೆಗೆ ಬರುತ್ತಾರೆ. ನಮ್ಮೂರಲ್ಲಿ ಸಂಜೆಯಾಯಿತೆಂದರೆ ಚಂದ್ರದರ್ಶನದ ಅಡಾವುಡಿ ಪ್ರಾರಂಭವಾಗುತ್ತಿತ್ತು. ಊರ ಜನ ಗಮ್ಮಂತ ಬಟ್ಟೆವಾಸನೆ ಬರುವ ಹೊಸಬಟ್ಟೆ ಹಾಕಿಕೊಂಡು ಈಶ್ವರಗುಡಿ ಪೌಳಿ ಏರಿ ನಿಲ್ಲುತ್ತಾ ಇದ್ದರು. ಆ ಎತ್ತರದಿಂದ ಚಂದ್ರ ಚೆನ್ನಾಗಿ ಕಾಣುತ್ತಾನೆ ಎಂದು ಅವರ ನಿರೀಕ್ಷೆ. ಮತ್ತೆ ಕೆಲವರು ವೇದಿಕೆಗುಡಿಯ ಬುರುಜು ಹತ್ತಿ ನಿಲ್ಲುತ್ತಾ ಇದ್ದರು. ನಾವಂತೂ ಪಶ್ಚಿಮಾಭಿಮಖವಾಗಿದ್ದ ನಮ್ಮ ಮನೆಯ ಜಗಲಿ ಹಿಡಿದು ಕೂಡುತ್ತಾ ಇದ್ದೆವು. ಮನೆಯವರಿಗೆಲ್ಲ ಹೊಸಬಟ್ಟೆ ತರುತ್ತಿದ್ದ ಅಜ್ಜ ತಮಗೆ ಮಾತ್ರ ಒಂದು ಚೌಕಳಿ ಟವೆಲ್ಲು ಕೊಂಡುಕೊಳ್ಳುತ್ತಿದ್ದರು. ಅದನ್ನಾದರೂ ಯಾಕೆ ತೆಗೆದುಕೊಳ್ಳುತ್ತಿದ್ದರು ಎಂದರೆ ಚಂದ್ರದರ್ಶನವಾದ ಮೇಲೆ ಹೊಸಬಟ್ಟೆಯ ಒಂದು ಎಳೆ ಕಿತ್ತು ಚಂದ್ರನಿಗೆ ಅರ್ಪಿಸಬೇಕು ಎಂಬುದು ನಮ್ಮ ಊರಿನಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ಸೂರ್ಯ ಕಂತರಂಗನ ಮಟ್ಟಿಯ ಮೇಲೆ ಕೆಂಪಗೆ ಇಳಿಯುವಾಗ ಚಂದ್ರದರ್ಶನದ ಮುಹೂರ್ತ ಸಮೀಪಿಸಿದೆ ಎಂದು ಅರ್ಥ. ಎಲ್ಲರ ಉಸಿರಾಟವೂ ಈಗ ತ್ವರಿತಗೊಳ್ಳುತ್ತಿತ್ತು. ಚಂದ್ರನನ್ನು ಯಾವ ಕೇರಿಯವರು ಮೊದಲು ನೋಡುತ್ತಾರೆ ಎಂಬುದು ಸ್ಪರ್ಧೆಯ ವಿಷಯವಾಗಿತ್ತು. ಅಕೋ..ನೋಡ್ರಿ ತೆಂಗಿನ ಮರದ ತುದೀಲಿ ಚಂದ್ರ ಕಾಣ್ತಾ ಅವ್ನೆ…! ಎಂದು ಯಾರೋ ಕೂಗಿದರು. ಎಲ್ಲಿ ಎಲ್ಲಿ…ಯಾವ ತೆಂಗಿನ ಗರಿ..ಎಡದ್ದೋ ಬಲದ್ದೋ ಎಂದು ಎಲ್ಲರು ಚಂದ್ರನನ್ನು ನೋಡುವುದಕ್ಕಿಂತ ಹೆಚ್ಚಾಗಿ ತೆಂಗಿನ ಮರ ನೋಡೋದರಲ್ಲೇ ಮಗ್ನರಾಗಿಬಿಟ್ಟರು! ಅಯ್…! ಎಲ್ಲಿ ಚಂದ್ರ…ಸುಮ್ಕೆ ನಗೆಚಾಟಿಕೆಗೆ ಅಂದೆ ಕಣಣ್ಣ ಅಂತ ಆ ಕಿಲಾಡಿ ಅಂದರೆ ಎಲ್ಲಾ ಟುಸುಮುರಗಿ ಹೊಡೆದಂತೆ ಟುಸ್ಸಾಗಿ ಹೋಗೋರು. ಅಷ್ಟರಲ್ಲಿ ಕಬ್ಬಾರ್ರ ಕೇರಿಯಿಂದ ದೊಡ್ಡ ಹುಯಿಲು ಕೇಳೋದು. ಓ…ನೋಡಿದಿರಾ ಮ್ಯಾಗ್ಳ ಕೇರೀಯೋರು ಮೊದಲು ಚಂದ್ರನ್ನ ನೋಡಬಿಟ್ರಪ್ಪೋ…ಎಂದು ನಮ್ಮ ಕೇರಿಯ ಜನ ಮೂಗು ಮುರಿಯೋರು. ಆಮೇಲೆ ಚಂದ್ರ ಇವರಿಗೂ ಕಾಣೋನು ಅನ್ನಿ. ಒಂದು ಸಣ್ಣ ಉಗುರಿನ ತುಣುಕಿನಂತಹ ಚಂದ್ರ! ಕಂಡವರಿಗೆ ಕಂಡ. ಕಾಣದವರಿಗೆ ಇಲ್ಲ. ಕಂಡಿಲ್ಲ ಅಂದರೆ ಕಣ್ಣು ಸುಮಾರು ಅಂತ ಎಲ್ಲಿ ಜನ ಅನ್ನುತ್ತಾರೋ ಅಂತ ಎಲ್ಲಾ ಚಂದ್ರ ದರ್ಶನ ಆಯ್ತು ಆಯ್ತು ಅಂತ ತಲೆ ಆಡಿಸೋರೇ. ಚಂದ್ರ ದರ್ಶನ ಒಮ್ಮೆ ಆಯಿತೆಂದರೆ ಊರಿಗೆ ಊರೇ ಒಂದಾಗಿ ಬಿಡೋದು. ಆ ಕೇರಿಯಿಂದ ಈ ಕೇರಿಗೆ, ಈ ಕೇರಿಯಿಂದ ಆ ಕೇರಿಗೆ ಜನ ಪ್ರವಾಹ ಹರಿಯೋಕ್ಕೆ ಶುರು ಆಗೋದು. ಊರ ಹಳೇ ತಲೆಗಳು ಶರಣು ಮಾಡೋರಿಗೆ ಅನುಕೂಲವಾಗಲೀ ಅಂತ ಜಗಲೀ ಮೇಲೆ ಕಾಲು ಇಳಿಬಿಟ್ಟು ಕೂತುಕೊಳ್ಳುತ್ತಾ ಇದ್ದರು. ಈವತ್ತು ಮಾತ್ರ ನಮ್ಮ ಕೇರಿಯ ಹಿರೀಮುತ್ತೈದೆಯರ ಕಾಲನ್ನೂ ಎಲ್ಲರೂ ಮುಟ್ಟಬಹುದಿತ್ತು. ನಮ್ಮ ಅಜ್ಜ ಅಜ್ಜಿಯರು ಜಗಲಿ ಮೇಲೆ ಶರಣು ಮಾಡಿಸಿಕೊಳ್ಳೋದಕ್ಕೆ ರೆಡಿಯಾಗಿ ಕೂತುಕೊಳ್ಳೋರು. ಚಂದ್ರ ದರ್ಶನವಾಯ್ತಾ ಸ್ವಾಮಿ, ಚಂದ್ರ ದರ್ಶನ ಆಯ್ತಾ ತಾಯಿ. ಚಂದ್ರನ್ನ ನೋಡಿದ್ರಾ ಅಜ್ಜಮ್ಮಾ? ಎಂದು ಪರಸ್ಪರ ಕೇಳಿಕೊಳ್ಳುತ್ತಾ ಹಿರಿಯರು ಜಾತಿ ಮತ ಭೇದವಿಲ್ಲದೆ ಕಿರಿಯರಿಂದ ಶರಣು ಮಾಡಿಸಿಕೊಂಡು ಆಶಿರ್ವಾದ ಮಾಡುತ್ತಾ ಇದ್ದರು. (ನಮ್ಮ ಕೇರಿಯ ಮಡಿಹೆಂಗಸರು ಮಾತ್ರ ಇದೆಲ್ಲಾ ಮುಗಿದ ಮೇಲೆ ತಣ್ಣೀರು ಸ್ನಾನ ಮಾಡಿ ಮತ್ತೆ ಮಡಿಉಟ್ಟುಕೊಳ್ಳುತ್ತಾ ಇದ್ದರು!)ಮಾರಾಮಾರಿ ಜಗಳ ಆಗಿ ಮಾತು ಬಿಟ್ಟವರು ಯುಗಾದಿ ದಿನ ಸಂಜೆ ಎದುರಾಬದರಾದರೆ ಚಂದ್ರದರ್ಶನ ಆತೇನಣ್ಣಾ ಎಂದು ಕೇಳದೆ ಮುಂದುವರೆಯುತ್ತಿರಲಿಲ್ಲ! ******* ನಾನು ಇಜೀಚೇರಲ್ಲಿ ಕೂತು ಪೇಪರ್ ಹಿಡಿದುಕೊಂಡಿದ್ದೆನಾದರೂ ನನ್ನ ಮನಸ್ಸಲ್ಲಿ ಸುಳಿಯುತ್ತಿದ್ದುದು ಈ ಹಳೇ ನೆನಪುಗಳು. ಅಷ್ಟರಲ್ಲಿ ನನ್ನ ಸೊಸೆ ಬಂದು ಸುಬ್ಬಣ್ಣನವರ ಫೋನು…ವಿಶ್ ಮಾಡಬೇಕಂತೆ ಅನ್ನುತ್ತಾಳೆ. ಹೊಸವರ್ಷದ ಶುಭಾಶಯಗಳು ಸ್ವಾಮಿ ಅಂತ ಆ ಕಡೆಯಿಂದ ದಪ್ಪ ದನಿ ಕೇಳುತ್ತದೆ!ಆಮೇಲೆ ಮತ್ತೆ ಮೊಬಾಯಿಲ್ ರಿಂಗಾಗುತ್ತಲೇ ಇದೆ. ಅನೇಕರು ಶುಭಾಶಯ ಹೇಳುತ್ತಿದ್ದಾರೆ. ಹ್ಯಾಪೀ ನ್ಯೂ ಇಯರ್ ಎಂದು ಶ್ರೀ ಮೆಸೇಜು ಕಳಿಸಿದಾಳೆ. ಹೊಸವರ್ಷದ ಶುಭ ಆಶಯಗಳು ಎಂದು ರಾಧಕ್ ಮೆಸೇಜು. ಮತ್ತೆ ಫೋನಿನ ಗಣ ಗಣ! ಮುಂಬಯಿಯಿಂದ ನನ್ನ ಹಳೆಯ ವಿದ್ಯಾರ್ಥಿಮಿತ್ರ! ಅಷ್ಟರಲ್ಲಿ ಫ್ರಾನ್ಸಿಸ್ ಬಂದ್ರು ಫ್ರಾನ್ಸಿಸ್ ಬಂದ್ರು ಎಂದು ಮೊಮ್ಮಕ್ಕಳು ಕೂಗಿದರು. ಫ್ರಾನ್ಸಿಸ್ ಯಥಾ ಪ್ರಕಾರ ಕ್ರಿಸ್ಮಸ್ ಕೇಕ್ ತೆಗೆದುಕೊಂಡು ಬಂದಿದಾನೆ. ಸಿಸ್ಟರ್ ಯಾಕೆ ಇನ್ನೂ ಬಂದಿಲ್ಲ ಎಂದು ಮೊಮ್ಮಕ್ಕಳು ಅಲವತ್ತುಕೊಳ್ಳುತ್ತಿದ್ದಾರೆ. ಅವರು ಬಂದರೆ ತಮಗೆಲ್ಲಾ ನಾನಾ ಬಗೆಯ ಗಿಫ್ಟ್ ಸಿಕ್ಕುತ್ತದೆ ಎಂದು ಅವರು ಬಲ್ಲರು! ಈಗ ಹೋಳಿಗೆಯ ಕಾಲ ಮುಗಿದಿದೆ. ರೆಡಿಮೇಡ್ ಸ್ವೀಟ್ ಬಂದು ಡೈನಿಂಗ್ ಟೇಬಲ್ ಮೇಲೆ ಕೂತಿದೆ. ನಮ್ಮ ಹಬ್ಬದ ಸ್ವೀಟು ಯಾವುದೋ ಕಾಣದ ಕೈಯಿನ ಚಮತ್ಕಾರ! ಅಜ್ಜಿ ಮಾಡಿ ಬಡಿಸುವ ಬಿಸಿಬಿಸಿ ಹೋಳಿಗೆಯ ರುಚಿ ಅದಕ್ಕೆಲ್ಲಿಂದ ಬಂದೀತು? ನಮ್ಮಲ್ಲಿ ಪಾರ್ಟಿಗೆ ಬನ್ನಿ ನಮ್ಮಲ್ಲಿ ಪಾರ್ಟಿಗೆ ಬನ್ನಿ ಎಂದು ಗೆಳೆಯರಿಂದ ಫೋನ್ಗಳು ಬರುತ್ತಾ ಇವೆ. ಅಶ್ವಥ್ ಇದ್ದಾಗ ಯಾವುದಾದರೂ ಹೋಟೆಲ್ ರೂಮ್ ಬಾಡಿಗೆ ಹಿಡಿದು ನ್ಯೂ ಇಯರ್ ಪಾರ್ಟಿ ಮಾಡುತ್ತಾ ಇದ್ದರು! ಹನ್ನೆರಡು ಗಂಟೆಗೆ ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿಕೊಂಡು, ಮುದ್ದಾಡಿ, ಶುಭಾಶಯ ಹೇಳಿಕೊಳ್ಳುತ್ತಾ ಮನೆ ಕಡೆ ಹೊರಟಾಗ ದಾರಿಯುದ್ದಕ್ಕೂ ತೂರಾಡುವ ಪಡ್ಡೆ ಹುಡುಗರು ಹ್ಯಾಪೀ ನ್ಯೂ ಇಯರ್ ಎಂದು ಕೂಗುತ್ತಾ ಕೈ ಬೀಸುತ್ತಾ ಇದ್ದಾರೆ! ಹನ್ನೆರಡು ಆದರೂ ಬೆಂಗಳೂರಿನ ಬೀದಿ ಸಂಚಾರ ಚೂರೂ ಕಮ್ಮಿ ಆಗಿಲ್ಲ. ಮಧ್ಯೆ ಮಧ್ಯೆ ಭರ್ ಭರ್ ಎಂದು ಎದೆ ಝಲ್ಲೆನಿಸುವ ವೇಗದಲ್ಲಿ ಹಾದು ಹೋಗುವ ಕಾರು, ಟೂ ವ್ಹೀಲರುಗಳು. ನಮ್ಮ ಚಡ್ಡೀ ದೋಸ್ತರಂತೆ ಅವರೆಲ್ಲಾ ಶುಭಾಶಯ ಅರಚುವ ಕೂಗು! ಸಾಮಾನ್ಯವಾಗಿ ಹನ್ನೆರಡು ಗಂಟೆ ವೇಳೆಗೆ ನಾನು ಗೆಳೆಯ ಸಿಂಹ ಅವರ ಮನೆಗೆ ಹೋಗುತ್ತೇನೆ. ಬಣ್ಣ ಬಣ್ಣದ ದೀಪಗಳಿಂದ ಅವರ ಮನೆ ಅಲಂಕೃತವಾಗಿದೆ. ಸೌಂಡ್ ಸಿಸ್ಟಮ್ನಲ್ಲಿ ಜೋರಾಗಿ ಕುಣಿತದ ಹಾಡುಗಳು. ಹುಡುಗರು ಮಧ್ಯವಯಸ್ಕರು ವಯೋವೃದ್ಧರು ಎಲರೂ ಯಾವುದೇ ಮುಜುಗರವಿಲ್ಲದೆ ಹಾಡಿನ ಲಯಕ್ಕೆ ಹೆಜ್ಜೆಹಾಕತೊಡಗುತ್ತೇವೆ! ನಮ್ಮ ಮನೆಯಲ್ಲಿ ಹೊಸವರ್ಷದ ಬರವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಕ್ರಮವನ್ನು ನನ್ನ ಹೆಂಡತಿ ಇದ್ದಾಗಲೇ ಆಚರಣೆಗೆ ತಂದಳು. ನಾನು ನ್ಯೂ ಇಯರ್ ಪಾರ್ಟಿಗಳಿಗೆ ಹೋಗದಂತೆ ತಡೆಯಲು ಇದು ಅವಳು ಕೈಗೊಂಡ ನಿಗೂಢ ಕಾರ್ಯಾಚರಣೆ ಇರಬಹುದು ಎನ್ನುವ ಗುಮಾನಿ ನನಗಂತೂ ಇದ್ದೇಇದೆ! ಮೂವತ್ತೊಂದರ ಬೆಳಿಗ್ಗೆಯಿಂದಲೇ ನಮ್ಮಲ್ಲಿ ಗಡಿಬಿಡಿ ಶುರುವಾಗುತ್ತದೆ! ದೊಡ್ಡಮನೆಯಲ್ಲಿ ಎಲ್ಲಾ ಸೊಸೆಯರೂ ಸೇರುತ್ತಾರೆ. ಕಾಫಿ ಉಪ್ಪಿಟ್ಟಿನ ದೈನಿಕ ಒಬ್ಬರು ನಿರ್ವಹಿಸಿದರೆ ಉಳಿದವರೆಲ್ಲಾ ಸಾಮೂಹಿಕವಾಗಿ ಅವರೇ ಕಾಯಿ ಬಿಡಿಸುವುದರಲ್ಲಿ ತೊಡಗಿದ್ದಾರೆ. ನಾಗಸಂದ್ರ ಸರ್ಕಲ್ಗೆ ಹೋಗಿ ತಂದ ಫ಼್ರೆಶ್ಶಾದ ಜಿಡ್ಡು ಜಿಡ್ಡು ಸೊಗಡವರೇನೇ ಆಗಬೇಕು!ನಾನೂ ಸೊಸೆಯರ ಜತೆ ಸೇರಿಕೊಳ್ಳುತ್ತೇನೆ. ಮಕ್ಕಳನ್ನೂ ಈ ಸುಲಿಯಾಟಕ್ಕೆ ಸೇರಿಸಿಕೊಳ್ಳಲು ಸೊಸೆಯರು ಹೊಸ ಉಪಾಯ ಹೂಡುತ್ತಾರೆ. ಯಾರು ಸುಲಿದ ಕಾಯಲ್ಲಿ ಐದು ಕಾಳು ಇರುತ್ತದೋ ಅವರಿಗೆ ಹತ್ತು ಪೈಸೆ ಮುಫತ್ತು ಬಹುಮಾನ! ಐದುಕಾಳಿನ ಕಾಯಿ ಹುಡುಕುವ ಆಸೆಯಲ್ಲಿ ಎಲ್ಲಾ ಪಿಳ್ಳೆಗಳೂ ಗಲಾಟೆಯೋ ಗಲಾಟೆ ಮಾಡುತ್ತಾ ಅವರೇ ಕಾಯಿ ಸುಲಿಯತೊಡಗುತ್ತಾರೆ. ಇಷ್ಟರ ಮಧ್ಯೆ ಈ ಪಿಸುನಾರಿ ಸೌಖ್ಯ ಯಾಕೆ ಹಾಗೆ ಕಿಟಾರನೆ ಕಿರುಚಿಕೊಂಡಳು? ಇನ್ನೇನಿಲ್ಲ. ಅವಳು ಸುಲಿದ ಅವರೇ ಕಾಯಿಯಲ್ಲಿ ಒಂದು ಹಸುರು ಹುಳ ಪವಡಿಸು ಪರಮಾತ್ಮ ಅಂತ ಮೈಚಾಚಿ ಮಲಗಿಕೊಂಡಿದೆ!ಟಣಪಣ ಹಾರಾಡುತ್ತಿದ್ದ ಅವಳ ಕೈಯಿಂದ ಅವರೇ ಕಾಯಿ ಕಿತ್ತುಕೊಂಡು ಅವಳನ್ನು ಸಮಾಧಾನಪಡಿಸಿದ್ದಾಯಿತು. ಸಂಹಿತ ಮಹಾ ಜೋರುಗಾತಿ! …ಈ ಸಣ್ಣ ಪುಟ್ಟ ಹುಳುಗಳಿಗೆಲ್ಲಾ ಅವಳು ಮೈಟ್ ಮಾಡುವಳೇ? ಅದನ್ನು ಅಂಗೈಯಲ್ಲಿ ಇಟ್ಟುಕೊಂಡು ಹೆದರು ಪುಕ್ಕಲು ಅಣ್ಣಂದಿರನ್ನು ಅಟ್ಟಾಡಿಸುತ್ತಾ ಇದ್ದಾಳೆ ಆ ಪೋರಿ! ರಾತ್ರಿ ನಾನಾ ಬಗೆಯ ಅವರೇಕಾಯಿ ಭಕ್ಷ್ಯಗಳನ್ನು ನಮ್ಮ ಸೊಸೆಯರು ತಯಾರಿಸುತ್ತಾರೆ. ಅವರೇಕಾಯಿ ಎಂದರೆ ಜೀವ ಬಿಡುವ ನನ್ನ ಮಕ್ಕಳು ಗೆಳೆಯರ ಎಲ್ಲ ಪಾರ್ಟಿಗಳನ್ನೂ ಬಹಿಷ್ಕರಿಸಿ ಹೆಂಡತಿಯರ ಸೆರಗು (ಅಥವಾ ವೇಲು )ಹಿಡಿದುಕೊಂಡು ಅವರ ಹಿಂದೆ ಹಿಂದೇ ಓಡಾಡುತ್ತಾ ಇದ್ದಾರೆ. ಅವರೇ ಕಾಯಿ ಕಡುಬು ಸುಮ ಮಾಡಿದ್ದಾಳೆ. ಅವರೇಕಾಯಿ ಉಪ್ಪಿಟ್ಟು ವೇದಾ ತಯಾರಿಕೆ. ಉಸುಳಿ ಶಾಲೂದು. ಪ್ರತಿಮಾ ಅವರೇಕಾಯಿ ತಾಲೀಪೆಟ್ಟು ಬಡಿಯುತ್ತಾ ಇದ್ದಾಳೆ. ಇನ್ನೂ ಅವರೇ ಕಾಯಿ ಬೋಂಡ ಆಗುವುದಿದೆ. ಅದನ್ನು ಯಾವ ಮಾರಾಗಿತ್ತಿ ಕೈಗೆತ್ತಿಕೊಳ್ಳುತ್ತಾಳೋ ನಾನು ಕಾಣೆ! ರಾತ್ರಿ ಹನ್ನೆರಡರವರೆಗೆ ಕನ್ನಡ ಭಾವ ಗೀತೆಗಳನ್ನ ಹಾಕಿಕೊಂಡು ನಾವು ಅವರೇಕಾಯಿ ಭಕ್ಷಣದಲ್ಲಿ ಶಕ್ತ್ಯಾನುಸಾರ ತೊಡಗುತ್ತೇವೆ. ನಮ್ಮ ಸಿಸ್ಟಮ್ ಮೊದಲು ಬಿತ್ತರಿಸುವುದು ದಾಸರ ಪದಗಳನ್ನು. ಆಮೇಲೆ ಕುವೆಂಪು, ಬೇಂದ್ರೆ, ಕೆ ಎಸ್ ನ. ಈ ಮಧ್ಯೆ ಉಪಾಸನ ಬಂದು ಇಳಿದುಬಾ ತಾಯಿ ಹೇಳಿ ತನ್ನ ಕೆಲಸ ಮುಗಿಯಿತು ಎನ್ನುವಂತೆ ಅಯ್ಯರ್ರೊಂದಿಗೆ ಅಂತರ್ಧಾನವಾಗುತ್ತಾನೆ. ಸಿಸ್ಟಮ್ನಲ್ಲಿ ಮುಂದಿನ ಸರದಿ ಕೆ ಎಸ್ ನ, ಜಿಎಸ್ಸೆಸ್, ಭಟ್ಟರು, ಲಕ್ಷ್ಮಣರಾವ್ದು. ನನ್ನ ಹಾಡುಗಳು ಬಂದಾಗ ಮಕ್ಕಳು ಕುಣಿಯಲಿಕ್ಕೆ ಶುರು ಹಚ್ಚುತ್ತಾರೆ. ಜಯಶ್ರೀಅರವಿಂದ ಮಾಡಿರುವ ಚುಮು ಚುಮು ಹಾಡು ಹೇಳಿಕೊಂಡು ಮಕ್ಕಳೊಂದಿಗೆ ತೀರ ಗಂಭೀರೆಯಾದ ಒಬ್ಬಳು ಸೊಸೆ ಬಿಟ್ಟು ಉಳಿದವರೆಲ್ಲಾ ನರ್ತನ ಮಾಡುತ್ತಿದ್ದಾರೆ. ಅಗೋ ಹನ್ನೆರಡು ಹೊಡೆಯಿತು. ಈಗ ನಾನು ಮಕ್ಕಳೊಂದಿಗೆ ಹೆಜ್ಜೆಹಾಕದೆ ನಿರ್ವಾಹವೇ ಇಲ್ಲ! ಹೊರಗೆ ಪಟಾಕಿ ಸದ್ದು ಕೇಳಿದೊಡನೆ ಹೊಸವರ್ಷ ಬಂತು ಅಂತಲೇ ಲೆಕ್ಖ….! ****]]>

‍ಲೇಖಕರು G

January 6, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Bellala Gopinatha Rao

    ಅಯ್ಯೋ ಸರ್
    ನಿಮ್ಮ ಮನೆಯಲ್ಲಿ ಹೊಸ ವರ್ಷದ ಗಮ್ಮತ್ತು ಇಷ್ಟೆಲ್ಲಾ ಇದೆ ಅಂತ ಮೊದಲೇ ಗೊತ್ತಿದ್ದಿದ್ದರೆ ಒಬ್ಬಟ್ಟಿನೊಡನೆ ನಾನೂ ಬರ್ತಾ ಇದ್ದೆನಲ್ಲಾ ನಿಮ್ಮ ಮನೆಗೆ?
    ತುಂಬಾ ಚೆನ್ನಾಗಿತ್ತು ಸರ್ ನಿಮ್ಮ ಮೊದಲಿನ ನೆನಪುಗಳು.
    ಮೊನ್ನೆ ತಾನೇ ಊರಿಗೆ ಹೋಗಿ ಹಳೆಯ ನೆನಪುಗಳನ್ನೆಲ್ಲಾ ತಾಜಾ ಮಾಡಿಕೊಂದು ಬಂದೆ.(http://sampada.net/blog/gopinatha/03/01/2011/29819)
    ನನಗೂ ನಮ್ಮ ಮನೆಯಲ್ಲಿ ಆಚರಿಸುವ ಯುಗಾದಿ ನೆನಪಿಗೆ ಬಂತು, ನಮ್ಮಲ್ಲಿ ಹಸಿ ಗೇರು ಬೀಜದ ವಿವಿಧ ಭಕ್ಷಗಳು ಪಲ್ಯ ಎಲ್ಲವೂ ಅದರದ್ದೇ ಅವೆಲ್ಲಾ ನೆನಪಿಗೆ ಬಂದವು
    ಧನ್ಯವಾದಗಳು

    ಪ್ರತಿಕ್ರಿಯೆ
  2. ಗಾಣಧಾಳು ಶ್ರೀಕಂಠ

    ವೆಂಕಟೇಶ್ ಮೂರ್ತಿ ಸರ್,
    ನಿಮ್ಮದು 50-60ರ ದಶಕದ ಕಥೆ ಅಲ್ಲವೇ ? ಈ ಕಥೆ 79-80ರ ದಶಕದವರೆಗೂ ಮುಂದುವರಿದಿತ್ತು. ಇದೆಲ್ಲಾ ನಮ್ಮೂರಿನಲ್ಲೂ, ನನ್ನ ಮನೆಯಲ್ಲೂ ಡಿಟೋ.. ಡಿಟೋ.. ಡಿಟೋ…! ನೀವು ಹೇಳುವ, ನನ್ನ ಓರಗೆಯವರು ಅನುಭವಿಸಿರುವ ಆ ಹೊಸ ವರ್ಷದ ಮುಂಜಾವಿನ ಮಜವೇ ಬೇರೆ ಬಿಡಿ.
    ಮತ್ತೊಂದು ವಿಶೇಷ ಅನ್ನಿಸಿದ್ದು, ನೀವು ಬಳಸಿರುವ ಪದಗಳು. ಅವು ಜನಮೇಪಿ ಬದಲಾಗಲ್ಲಾ ನೋಡಿ. ‘ಬುಳು ಬುಳು’, ಗಸ ಗಸ ಸಿಗೇಪುಡಿ ನೊರೆ, ಎಣ್ಣೆ ಸ್ನಾನದ ಅನುಭವದ ಉದ್ಘಾರ, ಏಳು ಚಂಬು ಆಶೀರ್ವಾದದ ನೀರು.. ಎಣ್ಣೆ ಸ್ನಾನದ ನಂತರ ‘ಯಜ್ಞ ಮಾಡಿದ ಹಾಗಾಯ್ತು’ ಎನ್ನುವ ಅಜ್ಜಿಯಂದಿರ ಮಾತುಗಳು.. ದಶಕಗಳು ಕಳೆದರೂ ಬದಲಾಗುವುದಿಲ್ಲ.
    ಹೊಸ ವರ್ಷದ ನೆಪದಲ್ಲಿ ಹೊದಿಗೆರೆಯ ಬೀದಿಗಳಲ್ಲಿ ನೀವು ಕಳೆದ ಬಾಲ್ಯದ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದೀರಿ. ಅವುಗಳ ಜೊತೆ ನನ್ನ ನೆನಪುಗಳು ಮೆರವಣಿಗೆ ಹೊರಟಿವೆ. ಸ್ವಾರಸ್ಯಕರವಾಗಿದೆ ಬರಹ. ಧನ್ಯವಾದಗಳು.

    ಪ್ರತಿಕ್ರಿಯೆ
  3. Suresh

    idu UDAYAVANI sapthahika sampadadalli monne banda barahavallave? neevu adakkondu link kodabahudittu or credit kodabahudittu embudu nannanisike.

    ಪ್ರತಿಕ್ರಿಯೆ
  4. armanikanth

    akkareya HSV sir,
    tumbaa tadavaagi ee baraha odide.
    estu khushi aaytu andre….adannu vivarisoke aagtaa illa sir…
    Manikanth.

    ಪ್ರತಿಕ್ರಿಯೆ
  5. Rajashekhar Malur

    HSV Sir,
    I am in a train and I don’t have ‘baraha’ in my office laptop! First of all thanks to Avadhi for bringing this story… I would have missed it as I get only Prajavani!
    Thanks to you for this great hosavarushada kathana… hopefully this will be the beginning of ‘anaatma kathana – part 2’ that you have promised. Thanks to you again for bringing back memories of seethajji and bheemajji. They have become part of my family now!
    One thing that I felt excited about was “berake neeru haaku”… this is exactly what I was telling my mother when she was giving me oil bath! And only after reading this did I remember it…wow!!
    Great to know about avarekalu special in your home for new year. Now I will not wish you on phone… I think it should be in person only…!!
    Vandanegalu nimage hechchu savi sir…. idanne continue maadi… anatma kathana part 2….
    Rajashekhar

    ಪ್ರತಿಕ್ರಿಯೆ
  6. ramu

    ನಮ್ಮ ಅಮ್ಮನೂ ಹಾಗೇ ಸುಣ್ಣ ಬಳಿಯುತ್ತಾರೆ.. (ಇನ್ನ ಮೇಲೆ ಸುಣ್ಣ ಬಳಿಯೋ ಗೋಜು ಇಲ್ಲ.. ಕದರನಹಳ್ಳಿ ಮನೆ ರಿಪೇರಿ ಆಗ್ತಿದೆ.. ಪೂರ್ತಿ ಸಿಮೆಂಟ್) ಅಮ್ಮ ಈಗಲೂ ಒಬ್ಬರೇ ಇಡೀ ಮನೆ ಸುಣ್ಣ ಬಳೀತಾರೆ… ಅದು ಟಿವಿ, ಟೇಬಲ್.. ಎಲ್ಲಾ ವಸ್ತುಗಳ ಮೇಲೆ ಬಿದ್ದು ಇಡೀ ಮನೆ ಸುಣ್ಣಮಯ… ನೀನು ಎಲ್ಲಾ ಕಡೆ ಸುಣ್ಣ ಮಾಡ್ತೀಯ ಅಂತಾ ರೇಗಾಡ್ತಿದ್ದೆ… ನಾನು ಒಬ್ಬಳೇ ಇಷ್ಟು ಮಾಡಿದ್ದೀನಿ ಅಂತಾ ನೀನು ಯೋಚ್ನೆ ಮಾಡಲ್ಲ ಅಂತಾ ಅಮ್ಮ ಬೈತಿದ್ರು….
    ಇನ್ನು ಯುಗಾದಿ ವರ್ಣನೆ ಚೆನ್ನಾಗಿದೆ… ಅಂದು 4 ಗಂಟೆಗೆ ಎದ್ದು ಅಪ್ಪಯ್ಯ ನೀರೊಲೆಗೆ ಉರಿ ಹಾಕೋರು… ನಾವು ಆರೂ ಜನ ೊಬ್ಬೊಬ್ಬರಾಗಿ ಎದ್ದು ಎರೆದುಕೊಳ್ತಾಇದ್ದದ್ದು, ಗಂಗಕ್ಕ ಬಣ್ಣದ ರಂಗೋಲಿ ಹಾಕ್ತಾ ಇದ್ದದ್ದು.. ಮನೆ ಸೂರಿಗೆ ಮಾವಿನ ಸೊಪ್ಪು ಕಟ್ತಾ ಇದ್ದದ್ದು… ಮಧ್ಯಾಹ್ನ ನಾವೆಲ್ಲಾ ಒಟ್ಟಿಗೆ ಕೂತು ಊಟ ಮಾಡ್ತಾ ಇದ್ದದ್ದು… ಊರಿನ ಜನ `ಹೆಡ್’ ಆಡ್ತಾ ಇದ್ದದ್ದು… ಸಂಜೆ ಹೊಸ ಬಟ್ಟೆ ಹಾಕ್ಕೊಂಡು ಚಂದ್ರನನ್ನ ನೋಡೋದು… ಆಹಾ ಎಂಥಾ ಸಂಭ್ರಮ… ಈಗ ಅದೇ ಮನೆ ಇದೆ(ಮನೆ ಚಿತ್ರಣ ಬದಲಾಗುತ್ತಿದೆ) ಆದ್ರೆ ಮೊದಲಿನ ಹಬ್ಬದ ಕಳೆ ಇಲ್ಲ…
    ————–
    ರಾಮಚಂದ್ರ ನಾಡಿಗ್
    ಕದರನಹಳ್ಳಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: