ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಡಿ ಪಲ್ಲವಿಯ ಒಂದು ಹಾಡಿನಿಂದ ಏನೆಲ್ಲಾ..

ಜಿ ಎನ್ ಮೋಹನ್

ಯಾರಿಗೂ ಹೇಳೋಣು ಬ್ಯಾಡ.. ಎನ್ನುವುದು ನಮ್ಮ ಯೌವನದ ರಾಷ್ಟ್ರಗೀತೆಯೇ ಆಗಿ ಹೋಗಿತ್ತು.

ಹಾರಗುದರಿ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗ
ದೂರ ದೂರ ಹೋಗೋಣಾಂತ…

ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತ…

ಸಾಲುಗಳಂತೂ ಹುಚ್ಚು ಹಿಡಿಸಿ ಹಾಕಿತ್ತು. ಅಂದಿಗೂ ಇಂದಿಗೂ ಆ ಸಾಲುಗಳು ನನ್ನನ್ನು ಸದ್ದಿಲ್ಲದೇ ನಿಜಕ್ಕೂ ರೆಕ್ಕೆಗುದುರೆಯನ್ನು ಏರಿಸಿ ದೂರಕ್ಕೆ ಒಯ್ದೆ ಬಿಡುತ್ತವೆ.

ಮತ್ತೆ ಹಾಗೇ ಆಯ್ತು ಮೊನ್ನೆ- ನಾನು ತುಂಬಾ ಗೌರವಿಸುವ, ಸದಾ ಪ್ರಯೋಗಶೀಲರಾದ, ದನಿಯಲ್ಲಿ ಕಾಡುವ ಬನಿಯನ್ನು ಉಳ್ಳ ಎಂ ಡಿ ಪಲ್ಲವಿ ಫೋನ್ ಮಾಡಿದ್ದರು. ಬೇಂದ್ರೆಯವರ ‘ಯಾರಿಗೂ ಹೇಳೋಣು ಬ್ಯಾಡ’ ಹಾಡಿದ್ದೇನೆ. ಸುಸ್ಮಿತ್ ಸೇನ್ ಅವರ ಬ್ಯಾಂಡ್ ನೊಂದಿಗೆ ಎಂದರು. ಪಲ್ಲವಿ ಅವರ ಯಾವುದೇ ಪ್ರಯೋಗವನ್ನೂ, ಮಾತನ್ನು, ನಿಲುವನ್ನೂ ಕುತೂಹಲದಿಂದ ಕೇಳಿಸಿಕೊಂಡೇ ಬಂದಿರುವ ನನಗೆ ತಕ್ಷಣ ಅದನ್ನು ಕೇಳಬೇಕು ಅನಿಸಿತು. ಪಲ್ಲವಿ ಮರುಕ್ಷಣವೇ ಅದನ್ನು ಅಂಗೈನಲ್ಲಿಟ್ಟಿದ್ದರು.

ಥೇಟ್ ಅಂತೆಯೇ, ಆ ಪ್ರೇಮಿಗಳಂತೆಯೇ

ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ದಣಿಯದಲೇ ಆಡೋಣಂತ

ಯಾರಿಗೂ ಹೇಳದಂತೆ ಕಳೆದೇ ಹೋದೆ.

ತಾತ ಎ ಎಸ್ ಮೂರ್ತಿ ಅವರ ಗರಡಿಯಲ್ಲಿ ಜಿಗಿದಾಡುತ್ತಿದ್ದ ಪುಟ್ಟ ಬಾಲಕಿಯಾಗಿದ್ದಾಗಿನಿಂದಲೂ ಎಂ ಡಿ ಪಲ್ಲವಿ ಪರಿಚಯ. ‘ಗುಲಾಬಿ ಟಾಕೀಸ್’ನಲ್ಲಿ ಪಲ್ಲವಿಯ ಅಭಿನಯ ಕಂಡು ದಂಗಾಗಿದ್ದೇನೆ. ಬಿಂದುಮಾಲಿನಿ ಜೊತೆ ನಡೆಸಿದ ಸಂಗೀತ ಪ್ರಯೋಗವಂತೂ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

‘ಮಾತು ಸೋತ ಭಾರತ’ದಲ್ಲಿ ಪಲ್ಲವಿ ದನಿ ಸೋತಿಲ್ಲ. ಮಾತಿಗೂ.. ಹಾಡಿಗೂ.. ಎನ್ನುವುದು ಇವರ ಹೆಗ್ಗಳಿಕೆ. ಜೊತೆಯಾಗಿ ಬಾಳುವ, ಎಲ್ಲರೂ ಸಮನಾಗಿ ಬಾಳುವ ಬಗ್ಗೆ ಸ್ಪಷ್ಟ ನೋಟ ಹೊಂದಿರುವ ಪಲ್ಲವಿ ತೆರೆದುಕೊಂಡ ಅಸಂಖ್ಯಾತ ಪ್ರಯೋಗಗಳಲ್ಲಿ ಇದು ಇನ್ನೊಂದು ಹೆಜ್ಜೆ.

ಮೀಸೆ ಮೂಡುವ ಮುನ್ನವೇ ಧಾರವಾಡದಲ್ಲಿ ಹಾದಿ ತಪ್ಪಿ, ಮಳೆಯಲ್ಲಿ ತೊಯ್ದು ಹೊರಟವನಿಗೆ ಅಚಾನಕ್ಕಾಗಿ ಬೇಂದ್ರೆ ಮನೆಯೇ ಸಿಕ್ಕು ರೋಮಾಂಚನಗೊಂಡಿದ್ದೆ.

ಈಗ ನನ್ನ ಜೊತೆ ಇರುವ ಈ ಹಾಡು ನನ್ನನ್ನು ಆ ಕಾಲದ ಬೇಂದ್ರೆ ಮನೆಗೂ, ನನ್ನ ಯೌವನಕ್ಕೂ, ಸಲೀಸಾಗಿ ನಡೆಸಿಕೊಂಡು ಹೋಗಿ ಬಿಟ್ಟಿದೆ. ಪಲ್ಲವಿ ಎಂದರೆ ಪಲ್ಲವಿಯೇ ಸೈ ಎನ್ನುವಂತೆ ಅವರ ಹಾಡಿನ ದನಿ ನನ್ನೊಳಗೆ ಆಡುತ್ತಲೇ ಇದೆ.

ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೋಣಂತ

ಅನಿಸುತ್ತಿದೆ.

ಎಂ ಡಿ ಪಲ್ಲವಿ ಹಾಡಿದ ಈ ಹಾಡು ಕೇಳಿದರೆ ನಿಮಗೂ ಥೇಟ್ ಹಾ..ಹಾಗೇ ಅನಿಸುತ್ತದೆ

ಒಂದು ಹಾಡಿನಿಂದ ಏನೆಲ್ಲಾ..

‍ಲೇಖಕರು Admin

2 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading