ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಎಸ್ ಶ್ರೀರಾಂ ಬರೆದ ಕಥೆ ’ಅವರವರ ಸತ್ಯ’

ಎಂ ಎಸ್ ಶ್ರೀರಾಂ

“Grant an idea or belief to be true. What concrete difference will its being true make in anyone’s actual life? How will the truth be realised? What experiences will be different if the belief were false? What, in short is the truth’s cash value in experimental terms?”
William James in Pragmatism
ಭಾಸ್ಕರರಾಯರು ಚಿಂತಿತರಾದರು.
ಅದೇನೂ ಹೊಸ ವಿಷಯವಾಗಿರಲಿಲ್ಲ. ಮೈಸೂರು ಬೆಂಗಳೂರುಗಳ ನಡುವೆ ಎಡತಾಕುವಾಗಲೂ, ಹಾಗೂ ಈಗಲೂ ಮಕ್ಕಳ ನಡುವೆ ಹಂಚಿಹೋದ ಭಾಸ್ಕರರಾಯರು ಈಗೀಗ ಎಲ್ಲಕ್ಕೂ ಮೂಕ ಪ್ರೇಕ್ಷಕರು. ಸದಾನಿರಂತರ ಚಿಂತಿತರು. ಎಪ್ಪತ್ತೈದರ ವಯಸ್ಸು ಸಾಮಾನ್ಯದ್ದೇನೂ ಅಲ್ಲ. ಅದು ಚಿಂತಿಸುವ ಚಿಂತೆಯುಂಟುಮಾಡುವ ವಯಸ್ಸು.
ಈ ಶ್ರಾವಣನಿಗೆ ಮೊದಲೇ ಹೆಳಿದ್ದುಂಟು. ಬೇಡವೆಂದು. ಈ ಹೈದರಾಬಾದು ಬೇಡಲೇ ಬೇಡ ಎಂದು. ಎಲ್ಲೋ ದೂರದೂರಿನಲ್ಲಿ ತೆಲುಗರ ತುರುಕರ ನಡುವೆ ಹಂಚಿಹೋಗಿ “ಪರದೇಶಿ” ಆಗುವುದು ಬೇಡ – ಅದರಲ್ಲೂ ಬೆಂಗಳೂರು ಮೈಸೂರುಗಳಲ್ಲಿ ಬೆಚ್ಚನೆಯ ಸರಕಾರಿ ಕಾರಕೂನಕಿ ದೊರೆಯುವಾಗ ಸಿಕ್ಕಸಿಕ್ಕಲ್ಲೆಲ್ಲ ಓಡಾಡುವುದು ಬೇಡವೆಂದು ಟಿಪಿಕಲ್ ಹಳೇ ಮೈಸೂರು ಶೈಲಿಯಲ್ಲಿ ಹೇಳಿದರೂ ಅವನು ಕೇಳಿರಲಿಲ್ಲ. ಬಂದೇ ಬಂದು ಇಲ್ಲೊಂದು ಮನೆಯ ಮಾಡಿದ. ಅದೂ ಎಲ್ಲಿ, ಚಾದರಘಾಟ್ ಸೇತುವೆ ದಾಟಿ ಹಳೇ ನಗರಕ್ಕಂಟಿನಿಂತ ಹೊಸ ಪ್ರಾಂತವೊಂದರಲ್ಲಿ.
ಹೀಗೆಲ್ಲಾ ದೂರದ ಮಗನನ್ನು ನೆನೆಸಿ ನೊಂದು ಕುಳಿತಿದ್ದ ಭಾಸ್ಕರರಾಯರು ಇದೀಗ – ಕೆಲದಿನಗಳ ಮಟ್ಟಿಗೆಂದು – ಅವನಲ್ಲಿಗೇ ಬಂದಿದ್ದರು. ಹಾಗೂ ಬಂದ ದಿನದಿಂದಲೇ ಪ್ರತಿದಿನವೂ ವಾಪಸ್ಸು ಹೋಗುವ ಆಸೆಯಲ್ಲಿ ಸೂಟ್ಕೇ ಸ್ ಕಟ್ಟುವ ಕೆಲಸ ಪ್ರಾರಂಭ ಮಾಡಿದ್ದರು. ಸರ್ವೀಸಿನಲ್ಲಿದ್ದಾಗಲೂ ಅಷ್ಟೇ – ಯಾವುದಾದರೂ ಊರಿಗೆ ವರ್ಗವಾದ ಕೂಡಲೇ ಭಾಸ್ಕರರಾಯರು ರುಜು ಹಾಕುತ್ತಿದ್ದ ಮೊದಲ ಕಾಗದವೆಂದರೆ – ಮೈಸೂರಿಗೆ ಮರುವರ್ಗ ಕೋರುವ ಅರ್ಜಿ! ಹೀಗಾಗಿ ಈ ಪರಕೀಯತೆ ಅವರಿಗೆ ಹೊಸದೇನೂ ಅಲ್ಲ. ಹಾಗೆಯೇ ಇದನ್ನು ಬಿಟ್ಟು ಓಡಿ, ಆ ಮೂಲಕ ವಿಜಯ ಸಾಧಿಸುವ ಆಶಾವಾದವೂ ಹೊಸದಾಗಿರಲಿಲ್ಲ.
ಆಗ, ಸೇತುವೆಯಾಚೆಯ ಅಕಬರಬಾಗಿನಲ್ಲಿ ಮನೆಮಾಡಿದಾಗಲೇ ಇಲ್ಲಿನ ಒಂಟಿತನ ಖಾಲಿತನ ಭಾಸ್ಕರರಾಯರಿಗೆ ಬೇಸರ ತರಿಸಿತ್ತು. ಅವನಿಲ್ಲಿ ಮನೆ ಮಾಡಿದಾಗ ಸುತ್ತಮುತ್ತ ಒಂದು ಮನೆಯೂ ಇದ್ದಿದ್ದಿಲ್ಲ. ಅದು ಹದಿನೈದು ವರ್ಷಗಳಿಗೂ ಹಿಂದಿನ ಮಾತು. ಕಡೆಗೆ ಮನಸ್ಸಿಗೊಂದು ಧೈರ್ಯದ ಭಾವನೆ ನೀಡುವ ಕಾಂಪೌಂಡೂ ಮನೆಯ ಸುತ್ತ ಇರಲಿಲ್ಲ. ಆದರೂ ಆಗ ಈ ಎಲ್ಲ ವಿಷಯಗಳು ರಾಯರನ್ನು ಆಳವಾಗಿ ಕಲಕಿರಲಿಲ್ಲ ಎಂದು ಈಗ ಯೋಚಿಸಿದಾಗ ಅನ್ನಿಸುತ್ತದೆ. ಕಾರಣ:ಆಗಿನ್ನೂ ಭಾಸ್ಕರರಾಯರು ಸರ್ವೀಸಿನಲ್ಲಿದ್ದಂತೆ ನೆನೆಪು. ಇದೀಗ ಅವರು ನಿವೃತ್ತಿ ತಂದ ಅನೇಕ ತೊಂದರೆಗಳಲ್ಲಿ ತಮ್ಮನ್ನು ತಾವೇ ಸಿಲುಕಿಸಿಕೊಂಡಿದ್ದಾರೆ. ಇರುವ ಮೂರು ಮಕ್ಕಳ ನಡುವೆ ಹಂಚಿಹೋಗಿರುವುದು, ’ಅನಿಕೇತನ’ನಾಗಿ ಮಗನಿಂದ ಮಗನಿಗೆ, ಊರಿಂದ ಊರಿಗೆ ಪ್ರಯಾಣ ಬೆಳೆಸಿ ಇಳಿವಯಸ್ಸಿನ ಸಕಲ ಕಷ್ಟಗಳನ್ನೂ ಅನುಭವಿಸುತ್ತಿದ್ದಾರೆ. ಎಪ್ಪತ್ತೈದೆಂದರೆ, ತಾಪತ್ರಯವೂ ಅಷ್ಟೇ. ವಯಸ್ಸಿಗೊಂದೊಂದು ವರ್ಷ ಸೇರಿದಂತೆ, ಒಂದೊಂದು ತೊಂದರೆ, ಒಂದೊಂದು ಹೊಸ ರೋಗ, ಹೊಸ ಮಾತ್ರೆ, ಹೊಸ ಚಿಂತೆ…. ಹಳೆತೆಂದರೆ ದೇಹವೊಂದೇ.

***

ಅಪ್ಪ ಬಂದಂದಿನಿಂದಲೂ ಶ್ರಾವಣ ಅವರ ಬಗ್ಗೆ ಅನೇಕ ಬಾರಿ ಯೋಚಿಸಿದ್ದಾನೆ. ಸುಮ್ಮನೆ ಮೌನವಾಗಿ ಪುಸ್ತಕ ಓದುವ ಅಪ್ಪನಿಗೆ ಕಾಲಹರಣಕ್ಕಾಗಿ ಏನಾದರೂ ಒದಗಿಸಬೇಕು. ಮೈಸೂರಿನಿಂದ ಇಲ್ಲಿಗೆ ಬಂದಾಗಲೆಲ್ಲ ಅಪ್ಪ ಹೀಗೇ. ಏಕೋ ವಿಲಿವಿಲಿ ಒದ್ದಾಡುತ್ತಾರೆ. ಆದರೂ, ಎಷ್ಟುದಿನವೆಂದು ಅಪ್ಪನನ್ನು ಮಹೇಶನ ಬಳಿಯೇ ಬಿಟ್ಟಿರುವುದು. ತನ್ನ ಜವಾಬ್ದಾರಿ ಇಲ್ಲವೇ? ಹಾಗೆ ನೋಡಿದರೆ ಅಪ್ಪ ಎಂದಿಗೂ ಯಾವ ಮಕ್ಕಳಿಗೂ ತೊಂದರೆ ಕೊಟ್ಟವರೇ ಅಲ್ಲ. ಅವರಿಗೆ ಈ ತನ್ನ ಮನೆಯಲ್ಲಿರುವುದಕ್ಕೆ ಇಷ್ಟವೇ ಆದರೂ, ಅಕಬರಬಾಗಿನ ವಾತಾವರಣ ಹಿಡಿಸುವುದಿಲ್ಲ ಎನ್ನಿಸುತ್ತದೆ. ಅಪ್ಪ ಬಂದರೆ ಅವರಿಗೂ ನೆಮ್ಮದಿಯಿರಲೆಂದೇ ತಿರುಮಲಗಿರಿಯಲ್ಲಿ ತಾನೊಂದು ಸೈಟು ಕೊಂಡದ್ದೂ ಆಗಿದೆ. ಸೈಟು ಕೊಳ್ಳಲು ಅಪ್ಪ ಒಂದೇ ಕಾರಣವಲ್ಲವಾದರೂ ಆ ನಿರ್ಧಾರ ಮಾಡಿದಾಗ ಅಪ್ಪ ತನ್ನ ಮನಸ್ಸಿನಲ್ಲಿದ್ದದ್ದು ನಿಜ. ಈಗ ಹೇಗಾದರೂ ಮಾಡಿ ಅಲ್ಲೊಂದು ಮನೆ ಕಟ್ಟಿಬಿಟ್ಟರೆ, ಸ್ವಲ್ಪ ಶಾಂತಿಯಿಂದಿರಬಹುದು. ಜನ ಕಮ್ಮಿಯಿದ್ದಷ್ಟೂ ಮೈಸೂರಿನ ವಾತಾವರಣಕ್ಕೆ ಹತ್ತಿರವಾಗುವುದೆಂದು ಶ್ರಾವಣ ಭಾವಿಸಿದ್ದಾನೆ. ಆಗಾಗ ಅನ್ನಿಸುತ್ತದೆ – ಈ ಅಕಬರಬಾಗಿನಲ್ಲಿ ಮನೆ ಮಾಡುವುದಕ್ಕೆ ಮೊದಲು ಈ ಎಲ್ಲ ಆಯಾಮಗಳನ್ನೂ ಯೋಚಿಸಬೇಕಿತ್ತು ಎಂದು. ಆದರೂ ಇದನ್ನು ಕೊಂಡಾಗ ಕೈಲಿದ್ದ ಹಣದಲ್ಲಿ ಬೇರೇನು ಮಾಡಬಹುದಿತ್ತು ಎಂಬ ಸಮಜಾಯಿಷಿಯ ಸಮಾಧಾನವನ್ನೂ ಶ್ರಾವಣ ತನಗೆ ತಾನೇ ಹೇಳಿಕೊಳ್ಳುವನು.
ಈ ಬಾರಿ ಸಮಯವಾದಾಗ, ಅಪ್ಪನ ಮೂಡನ್ನು ನೋಡಿ ಎಲ್ಲವನ್ನೂ ವಿವರಿಸಿ ಹೇಳಬೇಕು. ಚಿಂತೆ ಮಾಡಬೇಡ ಎಂದೂ. ಈ ಮನೆಯನ್ನು ಖಾಲಿ ಮಾಡುವು ವಿಷಯ ಅವರಿಗೆ ಸಾಕಷ್ಟು ಸಮಾಧಾನವನ್ನು ತಂದೀತು. ಆದರೂ ಈಚೀಚೆಗೇಕೋ ಅಪ್ಪನೊಂದಿಗೆ ಸಂವಹನವೇ ಸಾಧ್ಯವಾಗುತ್ತಿಲ್ಲ ಎಂದು ಅನ್ನಿಸುತ್ತದೆ. ತಾನು ಹೇಳಿದ್ದನ್ನು ಅಪ್ಪ ಅನುಮಾನದ ದೃಷ್ಟಿಯಿಅಂದ ನೋಡುತ್ತಾರೆ ಎಂಬ ಅನುಮಾನವೇ ಶ್ರಾವಣನನ್ನು ಆವರಿಸಿಬಿಟ್ಟಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ; ಹಿಂದೆ ಅಪ್ಪ ಹೇಳಿದ ಒಂದು ಮಾತಿಗೂ ತಾನು ಸೀರಿಯಸ್ಸಾಗಿ ಕಿವಿಗೊಟ್ಟಿಲ್ಲ. ಈ ಮನೆಯನ್ನು ಕೊಡಿಸಿದ ಷಫೀಕ್ ಸಾಬರ ನೆರವಿನಿಂದಲೇ ಇದು ಮಾರಾಟವೂ ಆಗಿಬಿಟ್ಟಿರೆ – ಹೊಸ ಮನೆಯೊಂದನ್ನು ನಿರ್ಮಿಸಬಹುದೆಂದೆಲ್ಲಾ ಶ್ರಾವಣ ಕನಸು ಹೆಣೆಯುತ್ತಾನೆ. ಅಪ್ಪ ಈಚೀಚೆಗೆ ಯಾಕೋ ಜನರನ್ನು ಕಂಡರೆ ಅಂಜಿ ರೂಮಿಗೋಡುತ್ತಾರೆ. ಯಾಕೋ ಕ್ಲಾಸ್ಟ್ರೋಫೊಬಿಕ್ ಆಗುತ್ತಿದ್ದಾರೆ ಎನ್ನಿಸುವ ಅವರ ವರ್ತನೆ ತನಗರ್ಥವಾಗಿಲ್ಲ. ಬಹುಶಃ ಇದಕ್ಕೆಲ್ಲ ಹೊಸಮನೆಯೇ ಉತ್ತರ ಎಂದು ಕನಸುವ ಶ್ರಾವಣನಿಗೆ ತಾನು ನಲವತ್ತು ದಾಟಿದ ನಂತರವೂ ಇನ್ನೂ ಕನಸು ಕಟ್ಟುವ ಕೆಲಸವನ್ನು ಬಿಟ್ಟಿಲ್ಲವಲ್ಲ ಎಂದು ನೆನಪಾದಾಗ ನಗೆಯುಕ್ಕಿ ಅದು ತನ್ನ್ ಯೌವನ ಇನ್ನೂ ಬತ್ತಿಲ್ಲ ಎಂಬುದರ ಸಂಕೇತವಿರಬಹುದು ಅನ್ನಿಸಿ ಅತೀವ ಆನಂದವೂ ಆಗುವುದು.
ಆದರೆ ಇದೀಗ ಭಾಸ್ಕರರಾಯರ ಚಿಂತೆಯ ವಿಷಯ ಇಂತೆಂದು ಹೇಳುವುದು ಕಷ್ಟವಿತ್ತು. ಅವರಿಗೆ ಆಗಾಗ ಅನಿಸುತ್ತದೆ: ಹೀಗಾಗಬಾರದಿತ್ತು ಎಂದು. ಅಥವಾ ಅದು ಹೀಗೆಯೇ ಆಗುವುದಿತ್ತೇನೋ. ಎಲ್ಲವೂ ಹುಟ್ಟಿನಿಂದ ಪಡೆದು ಬಂದದ್ದೆಂಬ ವಿಧಿವಿಲಾಸವಾದವನ್ನು ಮೈಗೂಡಿಸಿಕೊಂಡು ನಿರ್ಲಿಪ್ತವಾಗಿದ್ದುಬಿಡುವುದೂ ಸರಳವಾಗಿರಲಿಲ್ಲ. ಈಚೀಚೆಗೆ ಬಿಡಿಸಿಕೊಳ್ಳಲು ಸಾಧ್ಯವೇ ಆಗದ ದುರಭ್ಯಾಸವೊಂತು ಅಂಟಿಕೊಂಡಿದೆ. ಹಿಂದೆ ಅಜ್ಜ ಬಂದು “ಏಳು ಮುದ್ದಿನ ಗಿಣಿಯೆ ಏಳು ಮಾತಿನ ಖಣಿಯೆ ಏಳೂ ಬೆಳಗಾಯಿತು” ಎಂದು ಎಬ್ಬಿಸುತ್ತಿದ್ದ ಬಾಲ್ಯದ ನೆನಪು ಈಗ ನೆನಪು ಮಾತ್ರ. ಈಗ ಹಾಗೆ ಮೊಮ್ಮಗನನ್ನು ಎಬ್ಬಿಸುವುದೂ ಸಾಧ್ಯವಿಲ್ಲ! ರಾತ್ರೆ ನಿದ್ರೆ ಬರುವುದೂ ತಡ.. ಅದೂ ಸರಿಯಾಗಿ ಬರುವುದಿಲ್ಲ. ಎಲ್ಲರೂ ದೂರದರ್ಶನ ನೋಡಿ ರಾತ್ರೆ ಹನ್ನೂಂದಕ್ಕೆ ಹಾಲು ಸುರಿವ ಹಾಲಿನವನೊಂದಿಗೆ ರಾಜಕೀಯ ಚರ್ಚಿಸಿ ನಂತರ ದೀಪ ನಂದಿಸಿ ಮಲಗುವವರೆಗೂ ಏನೂ ತೋಚುವುದಿಲ್ಲ. ರಾತ್ರೋ ರಾತ್ರಿ ಹಾಲು ಸುರಿಯುವುದೂ ಈ ಅಕಬರಬಾಗಿಗೇ ಪ್ರತ್ಯೇಕವೆನ್ನಿಸುತ್ತದೆ. ಅದನ್ನೇ ದೊನವೂ ಚಕಿತರಾಗಿ ಯೋಚಿಸುವ ರಾಯರಿಗೆ ಮಲಗಿದ ನಂತರವೂ ನಿದ್ರೆ ಸರಳವಾಗಿ ಬರುವುದೆಂದೇನೂ ಅಲ್ಲ! ಯಾವಾಗಲೋ ಸಮಯ ತಿಳಿಯದೆಯೇ ಕಣ್ಣಿಗೆ ರೆಪ್ಪೆ ಅಂಟುವುದು. ಆ ನಂತರ ಏಳುವುದು ಮುಂಜಾನೆ ಯಾವಾಗಲೋ.. ಎದ್ದ ಮೇಲೂ ಒಂದು ಥರದ ಮೌನ. ಮಾತಿಗೆ ಅವಕಾಶವೇ ಇಲ್ಲ. ಮುದುಕನ ಮಾತನ್ನು ಕೇಳುವ, ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ್ದು ಬೆಳಗಿಗಷ್ಟೇ ಸೀಮಿತವೂ ಅಲ್ಲ.
ಹಿಂದಿನ ಮನೆಯ ರಂಗಾರೆಡ್ಡಿ ಈಗ ಭಾಸ್ಕರರಾಯರ ಚಿಂತೆಗೆ ಕಾರಣರದ ಅನೇಕರಲ್ಲೊಬ್ಬನಿರಬಹುದು. ಅಥವಾ ಅದು ಪಕ್ಕದ ಮನೆಯ ಷಫೀಕ್ ಅಲಿ ಆಗಲೀ, ಅಡ್ವೊಕೇಟ್ ಸುಬ್ಬಾರಾವು ಆಗಲೀ, ಸ್ವತಃ ತಮ್ಮ ಮೊಮ್ಮಗನೇ ಆಗಲೀ ಇರಬಹುದು. ತಮ್ಮ ಮಗ ಶ್ರಾವಣನೇನೂ ಸುಮ್ಮನಿರುವ ಪೈಕಿ ಅಲ್ಲ. ಏನಾದರೊಂದು ಕಾರುಬಾರು ಮಾಡುತ್ತಲೇ ಇರುವ ಪಿಪೀಲಿಕ. ಹೀಗಾಗಿ ಭಾಸ್ಕರರಾಯರ ಮನಸ್ಸು ಸದಾ ಜಾಗೃತವಾಗಿರಲು ಅವನೊಂದಿದಿನ ವಾಸ್ತವ್ಯವೇ ಸಾಕಿತ್ತು.
ಈಚೆಗಷ್ಟೇ ಹಿಂದಿನ ಮನೆಯ ರಂಗಾರೆಡ್ಡಿ ನೇರವಾಗಿ ಶ್ರಾವಣನ ಕಾಂಪೌಂಡಿಗಂಟಿಕೊಂಡೇ ಒಂದು ಕಂಭ ಎಬ್ಬಿಸಿದ್ದು, ಪಕ್ಕದ ಮನೆಯ ಷಫೀಕ್ ಅಲಿ ಆಗಾಗ ಒಂದಿಷ್ಟು ಜನರನ್ನು ಕರೆತಂದು ಮನೆ ತೋರಿಸಿದ್ದು – ಹಾಗೂ ಈ ಎಲ್ಲ ನಡೆಯುತ್ತಿದ್ದ ಕಾಲದಲ್ಲೇ ಹೈದರಾಬಾದಿನಲ್ಲಿ ನಡೆದ ಭೀಕರ ಕೋಮು ಗಲಭೆ – ಈ ಎಲ್ಲವೂ ಏಕಕಾಲಕ್ಕೆ ರಾಯರನ್ನು ಆವರಿಸಿ ಹೈರಾಣು ಮಾಡಿಬಿಟ್ಟಿತ್ತು.
ಇದ್ದ ಹಳೇ ಮನೆಯನ್ನು ಸ್ವಲ್ಪ ದೊಡ್ಡದು ಮಾಡು, ಒಂದು ಪೋರ್ಷನ್ ಬಾಡಿಗೆಗೆ ಕೊಟ್ಟು ಇನ್ನಷ್ಟು ಹಣ ಸಂಪಾದಿಸುವುದು ರಂಗಾರೆಡ್ಡಿಯ ಉದ್ದೇಶವಿದ್ದಿರಬಹುದು. ಆದರೆ ಶ್ರಾವಣ ಸುಮ್ಮನಿರಲಾರದೇ ಅವನಲ್ಲಿಗೆ ಹೋಗಿ ಸಾಕಷ್ಟು ಕಿರಿಕಿರಿಯುಂಟು ಮಾಡಿದನಂತೆ. ಕಾರ್ಪೊರೇಷನ್ ರೂಲ್ಸು – ಬಿಡಲೇ ಬೇಕಾದ ಐದಡಿ ಸೆಟ್ ಆಫ್, ಇಲ್ಲೀಗಲ್ ಕನ್ಸ್ ಟ್ರಕ್ಷಣ್ ಇತ್ಯಾದಿ ಹೇಳಿ ರಂಗಾರೆಡ್ಡಿಯನ್ನು ಕೆರಳಿಸಿ ಬಂದಿದ್ದಾನೆ. ಯಾಕೆ ಬೇಕಿತ್ತು ಇವನಿಗೆ ಈ ಉಸಾಬರಿ? ಸುಮ್ಮನಿರಬಹುದಿತ್ತಪ್ಪ. ಅವನ ಕಾಂಪೌಂಡಿನಲ್ಲಿ ಅವನೇನಾದರೂ ನಡೆಸಲಿ.. ನಮ್ಮ ಜಾಗ ಒತ್ತುವರಿ ಮಾಡದಿದ್ದಷ್ಟು ದಿನ ನಮಗೆ ಯಾಕೆ ಚಿಂತೆಯಾಗಬೇಕು? ಉದ್ದ ಮೂಗಿದೆಯೆಂದು ಸಿಕ್ಕಸಿಕ್ಕಲ್ಲೆಲ್ಲಾ ತೂರಿಸುವುದೇ? ಹೀಗೆ ಆಲೋಚಿಸಿದ ಭಾಸ್ಕರರಾಯರು ಹೆಂಡತಿಯನ್ನೊಮ್ಮೆ ನೆನಪು ಮಾಡಿಕೊಂಡರು. ಶ್ರಾವಣ ಅವನ ಮೂಗನ್ನು ಅವಳಿಂದಲೇ ಬಳುವಳಿ ಪಡೆದಿದ್ದ. ರಂಗಾರೆಡ್ಡಿ ನಡೆಸಿದ್ದು ಸರಿಬರದಿದ್ದರೆ ಅವನನ್ನು ನೋಡಿಕೊಳ್ಳಲು ಕಾರ್ಪೊರೇಷನ್ನಿನವರು ಇರುವಾಗ ಇವನೆಗೇಕೆ ಈ ಲೋಕೋದ್ಧಾರದ ಕೆಲಸ? ಎಂಬ ಆಲೋಚನೆ ಹಂಡತಿಯ ನೆನಪನ್ನು ಹಿಂದಕ್ಕಟ್ಟಿತು.
ಆದರೂ ಶ್ರಾವಣನಿಗೆ ಹೇಳುವವರು ಯಾರು? ಭಾಸ್ಕರರಾಯರಂತೂ ಮೌನಿ. ಯಾವುದನ್ನೂ ಬಾಯಿಬಿಟ್ಟು ಹೇಳುವವರಲ್ಲ. ಹೀಗಾಗಿ ಒಳಗೊಳಗೇ ಕುದಿಯುತ್ತಾರೆ. ಪೋಲೀಸಿನವರೊಂದಿಗೆ ದ್ವೇಷ ಕಟ್ಟಿಕೊಳ್ಳುವುದು ಅವರ ಮನಸ್ತತ್ವಕ್ಕೆ ಒಗ್ಗಿದ್ದಲ್ಲ. ಎಂದಾದರೊ ಸಮಯವೆಂದರೆ ಸಹಾಯ ಮಾಡುವವನೇ ಪೋಲೀಸು ರಂಗಾರೆಡ್ಡಿ ಎಂಬ ನಂಬಿಕೆ ರಾಯರಿಗೆ. ಹೀಗಾಗಿ, ಮನೆಗೆ ಗಿರಾಕಿಗಳನ್ನು ಹಿಡಿದು ತರುವ ಷಫೀಕ್ ಅಲಿಯನ್ನು ಕಂಡರೆ ಅವನು ಮುಸ್ಲಿಮನೆಂಬ ಕಾರಣಕ್ಕೆ ಏನೋ ಅನುಮಾನ ರಾಯರಿಗೆ. ಹಾಗೆ ನೋಡಿದರೆ ತಮ್ಮ ಬಾಲ್ಯದ ಗೆಳೆಯರೇನೂ ಹಿಂದೂಗಳಲ್ಲ – ಹ್ಯಾರಿ ಜ್ಯೋತಿಕುಮಾರ, ಅಬ್ದುಲ್ಲಾ ಎಂಬ ಗೆಳೆಯರು ರಾಯರಿಗಿದ್ದರು. ಅದನ್ನು ನೆನಪು ಮಾಡಿಕೊಂಡಾಗ ಮೈಸೂರಿನ ಮುಸ್ಲಿಮರೇ ಬೇರೆ ಹೈದರಾಬಾದಿನ ಮುಸ್ಲಿಮರೇ ಬೇರೆ ಎಂದೂ ಅನ್ನಿಸಿರುವುದುಂಟು. ಈ ಅನುಮಾನ ಯಾಕೆಂದೂ ರಾಯರಿಗೆ ತಿಳಿಯದು. ಹಾಗೆ ನೋಡಿದರೆ ಕೆಲಮುಖಗಳನ್ನು ಸಂಭಾವಿತರ ಭೂಮಿಕೆಯಲ್ಲಿಟ್ಟು ನೋಡುವುದು ರಾಯರಿಗೆ ಸಾಧ್ಯವೇ ಆಗಿಲ್ಲ. ಅಂಥವರಲ್ಲಿ ಷಫೀಕ್ ಅಲಿಯೂ ಒಬ್ಬ.

*****

ಶ್ರಾವಣನಿಗೆ ರಂಗಾರೆಡ್ಡಿಯನ್ನು ಕಂಡಾಗಲೆಲ್ಲಾ ಮೈ ಉರಿಯುವುದು ಏಕೆಂದು ಅರ್ಥವಾಗಿಲ್ಲ. ಅದೇಕೋ ತೆಲಂಗಾಣಾದ ಜಹಗೀರುದಾರಿಯಿಅನ್ನು ತೋರಿಸುವ, ಗತ್ತಿನ ಈ ವ್ಯಕ್ತಿಯನ್ನು ಅರಗಿಸಿಕೊಳ್ಳಲು ಅವನಿಗೆ ಸಾಧ್ಯವೇ ಆಗಿಲ್ಲ. ಇದು ಸಾಲದ್ದಕ್ಕೆ ಸಹಜ ದರ್ಪದ ರಂಗಾರೆಡ್ಡಿ ಪೋಲೀಸು ಇಲಾಖೆಯಲ್ಲಿರುವುದರಿಂದ ಅವನಿಗಿನ್ನಷ್ಟು ಗತ್ತು ಬಂದಂತಿದೆ.
ಇದಕ್ಕೆ ಶ್ರಾವಣ ಅನೇಕ ಬಾರಿ ಕಾರಣ ಹುಡುಕಲು ಪ್ರಯತ್ನಿಸಿದ್ದಿದೆ. ಬಹುಶಃ ಅವನು ಮಾಡುವ ಕೆಲಸ, ಹಾಗೂ ತನ್ನ ಎಡಪಂಥೀಯ ವಿಚಾರಧಾರೆ ಯಾವುದೇ ದಬ್ಬಾಳಿಕೆಯನ್ನು ಸಹಿಸದಂತೆ ಪ್ರೇರೇಪಿಸಿರಬಹುದು. ಆದರೂ ಅದು |ತೆಲಂಗಾಣಾ ರೆಡ್ಡಿಗಳು| ಎಂದು ಇಡೀ ಜಾತಿಗೇ ವಿಸ್ತಾರಗೊಂಡಿರುವುದು ಅವನ ತರ್ಕಕ್ಕೇ ನಿಲುಕದ ವಿಷಯವಾಗಿದೆ. ಇಂದು ರಂಗಾರೆಡ್ಡಿ ತನ್ನ ಹಳ್ಳಿಯಲ್ಲೇ ಇದ್ದು, ಇಲ್ಲಿ ತೋರುವ ದರ್ಪ ತೋರಿದ್ದರೆ ಡಿಚ್-ಪಲ್ಲಿಯ ಪಿ.ಡಬ್ಲೂ.ಜಿ. ಅವರು ಅವನನ್ನು ಮುಗಿಸಿಬಿಡುತ್ತಿದ್ದರೆನ್ನಿಸುತ್ತದೆ. ಎಂದಾದರೂ ರಂಗಾರೆಡ್ಡಿಗೆ ನಿಜಾಮಾಬಾದ್ ಜಿಲ್ಲೆಗೋ, ಮೆದಕ್, ಕರೀಂನಗರಕ್ಕೋ ವರ್ಗವಾಗಬೇಕೆಂದು ಶ್ರಾವಣ ಒಳಗೊಳಗೇ ಬಯಸುವುದುಂಟು. ಅಲ್ಲಾದರೆ ತನ್ನ ಕಾಮ್ರೇಡುಗಳು ಈ ರೆಡ್ಡಿಯನ್ನೊಂದು ಕೈ ನೋಡಿಕೊಳ್ಳಬಹುದಾದ ರೀತಿಯ ಬಗ್ಗೆಯೂ ತಾನು ಕನಸುತ್ತಿದ್ದುದುಂಟು.
ಈಗಂತೂ ರಂಗಾರೆಡ್ಡಿಯ ಮೇಲೆ ಸಾರಿರುವ ಸಮರ ಶ್ರಾವಣನಿಗೆ ಬಹಳ ಸಾಂಕೇತಿಕ ಮಹತ್ವವುಳ್ಳದ್ದು ಎನ್ನಿಸಿತು. ಬೇರೆಯವರ ಆಸ್ತಿ ಒತ್ತುವರಿ ಮಾಡಿಕೊಳ್ಳಲೂ ಹೇಸದ ರಂಗಾರೆಡ್ಢಿ, ತನ್ನ ಸ್ವಂತ ಜಾಗದಲ್ಲಿ ನಡೆಸುತ್ತಿರುವ ಕಟ್ಟಡ ಕಾರ್ಯವನ್ನೇ ತಾನು ಪ್ರಶ್ನಿಸುತ್ತಿರುವುದು, ಅಕಬರಬಾಗಿನಲ್ಲೇ ಚರಿತ್ರೆ ಸೃಷ್ಟಿಸಬಹುದು. ಹಾಗೂ ಬೀಗುತ್ತಾ ಅಲೆದಾಡುವ ರಂಗಾರೆಡ್ಡಿಗೆ ಕಲಿಸಬೇಕಾದ ಪಾಠವನ್ನು ಯಾರಾದರೂ ಕಲಿಸಿದಂತಾಗುವುದು. ರಂಗಾರೆಡ್ಡಿ ಈಗಾಗಲೇ ಎಬ್ಬಿಸಿರುವ ಕಂಬವನ್ನು ಹೀಗೆ ಕೋರ್ಟಿನ ಆದೇಶದೊಂದಿಗೆ ಇಳಿಸುವ ಕನಸನ್ನು ಶ್ರಾವಣ ಕಟ್ಟುತ್ತಾನೆ. ತಾನೀಗ ರಂಗಾರೆಡ್ಡಿಯ ವಿಷಯದಲ್ಲಿ ನಡೆಸುತ್ತಿರುವ ಕಾರುಬಾರು ಅಪ್ಪನಿಗೆ ತಿಳಿದೇ ಇರಬೇಕು. ಅವರೂ ಈ ವಿಷಯದಲ್ಲಿ ಎಂದಾದರೂ ಏನಾದರೂ ಹೇಳಬಹುದೆಂದು ನಿರೀಶಕ್ಷಿಸಿದ್ದೂ ಉಂಟು. ಆದರೆ ಅವರು ಇನ್ನೂ ಏನೂ ಹೇಳಿಲ್ಲ. ಹೇಳಬಹುದೆಂಬ ಭೀತಿಯೇ, ಅವರು ವಾಸ್ತವದಲ್ಲಿ ಹೇಳಿದ್ದರೆ ಆಗುತ್ತಿದ್ದ ಪರಿಣಾಮಕ್ಕಿಂತ ಬೃಹದಾಕಾರವಾಗಿ ನಿಂತು ಆಗಾಗ ಶ್ರಾವಣನನ್ನು ಕಾಡುವುದುಂಟು. ಹೀಗೆ ತನ್ನೆಲ್ಲ ಕನಸಿನ ನಡುವೆ ಅಪ್ಪನನ್ನು ಒದ್ದಾಡಿಸುವುದಕ್ಕಿಂತ, ಅವರನ್ನು ಮೈಸೂರಿಗೆ ಕಳಿಸಿಬಿಡುವುದೇ ಲೇಸೆಂದು ಆಗಾಗ ಅನ್ನಿಸಿದರೂ, ಯಾಕೋ ಶ್ರಾವಣನಿಗೆ ಆ ಕೆಲಸ ಮಾಡಲು ಮನಸ್ಸೇ ಇಲ್ಲ. ಇದಕ್ಕೆ ಕಾರಣ – ಎಲ್ಲವೂ ಕಡೆಗೆ ತಿರುಮಲಗಿರಿಯಲ್ಲಿ ಪರ್ಯಾವಸನವಾಗುವುದೆಂಬ ಆಶಾವಾದ.

*****

ಭಾಸ್ಕರರಾಯರಿಗೆ, ಈ ಎಲ್ಲದರ ವಿಷಯದಲ್ಲಿ ಮಗನಿಗೊಂದೆರಡು ಉಪದೇಶದ ಮಾತುಗಳನ್ನು ಯಾವಾಗಲಾದರೂ ಹೇಳಬೇಕೆಂದು, ಸಮಾಧಾನವಾಗಿ ಮಾತನಾಡಿ ಮನಶ್ಶಾಂತಿಯ ಮಹತ್ವವನ್ನು ವಿವರಿಸಬೇಕೆಂದು ಆಗಾಗ ಅನ್ನಿಸುತ್ತದೆ. ಹಾಗೆ ತಾವೇನಾದರೂ ಹೇಳಲು ಹೋದರೆ, ಶ್ರಾವಣ ತಮ್ಮ ಮೇಲೆಯೇ ರೇಗಿ ಬೀಳಬಹುದು. ಸಾಲದೆಂಬಂತೆ ಇದನ್ನವನು “This is a protest against Police imperialism” ಎಂದು ಒಂದು ತಾತ್ವಿಕ ಆಯಾಮ ನೀಡಿ ಅವನ ಎಡಪಂಥೀಯ ರೆಟರಿಕ್ಕನ್ನು ಹೊರಹೊಮ್ಮಿಸುವುದನ್ನೂ ರಾಯರು ಊಹಿಸಬಲ್ಲರು. ಪಾಪ ಆ ರಂಗಾರೆಡ್ಡಿ ಪೋಲೀಸು ನೌಕರಿ ಮಾಡುವುದೇ ಒಂದು ಮಹಾಪರಾಧ ಎಂದು ಕಾಣುವಂತೆ ಮಾಡುವ ಚಾಣಾಕ್ಷತನ ಶ್ರಾವಣನಲ್ಲಿದೆ.
ಕಳೆದ ವಾರ ನಡೆದದ್ದೂ ಹಾಗೆಯೇ. ರಂಗಾರೆಡ್ಡಿ ಗೋಡೆಗಂಟಿಕೊಂಡು ಕಂಬವನ್ನೆಬ್ಬಿಸಿದ ದಿನ ಶ್ರಾವಣ ಅವನೊಂದಿಗೆ ಮಾತನಾಡಿದನಂತೆ. ಬಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತನಾಡಿದ ರಂಗಾರೆಡ್ಡಿ ಕಟ್ಟಡದ ಕೆಲಸವನ್ನು ಕೂಡಲೇ ನಿಲ್ಲಿಸುವುದಾಗಿ ಮಾತುಕೊಟ್ಟನಂತೆ. ಶ್ರಾವಣನೂ ಲಾಯರು, ನೋಟೀಸು ಕೋರ್ಟು ಎಂದೆಲ್ಲಾ ಬೆದರಿಸಿ ಬರುವವನೇ. ಆದರೂ ಇಂಥ ಬೆದರಿಕೆಗೆ ಬಗ್ಗುವ ಕುಳ ಪೋಲೀಸು ರಂಗಾರೆಡ್ಡಿಯಲ್ಲ. ಈ ಮಾತುಕತೆ ನಡೆಯುತ್ತಿದ್ದಾಗ ಒಂದು ಭಾನುವಾರ ಮಧ್ಯಾಹ್ನ ಮಲಗಿದ್ದ ರಾಯರಿಗೆ ಎತ್ತರದ ಧ್ವನಿಯ ಮಾತುಕತೆ ಕೇಳಿ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಒಂದು ಥರದ ಮಂಪರಿನಲ್ಲಿಯೇ ಭಾಸ್ಕರರಾಯರು ನಡೆಯುತ್ತಿದ್ದ ಆ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದರು. ಕಡೆಗೆ ಒಂದು ಸಂಧಾನವಾದಂತೆಯೂ ಅವರಿಗನ್ನಿಸಿತು. ಇದಾದ ಒಂದೈದಾರು ದಿನ ತಣ್ಣಗಾದ ರಂಗಾರೆಡ್ಡಿ ಒಂದು ಶುಭ ಶುಕ್ರವಾರದಂದು ರಾತ್ರೋರಾತ್ರಿ ಗೋಡೆ ಎಬ್ಬಿಸಿ, ಶನಿ ಭಾನುವಾರಗಳಂದು ಆರ್.ಸಿ.ಸಿ ಹಾಕಿಸಿಯೇ ಬಿಟ್ಟ. ನೇರ ಮಾತುಕತೆಯ ಸಂಧಾನವನ್ನು ಗೌರವಿಸದೇ ಹೀಗೆ ಮೋಸದಿಂದ ಪ್ರವರ್ತಿಸಿದ್ದನ್ನು ತಡೆಯಲಾಗದ ಶ್ರಾವಣ ರಂಗಾರೆಡ್ಡಿಯ ಮೇಲಿನ ಸಿಟ್ಟನ್ನು ಮನೆಯವರ ಮೇಲೆಲ್ಲಾ ತೀರಿಸಿಕೊಂಡರೂ ಸಮಾಧಾನವಾಗದೇ, ತನ್ನ ಗೆಳೆಯ ಸುಬ್ಬಾರಾವನ್ನು ನೋಡಿ, ಅವನ ಕೈಯಲ್ಲಿ ಒಂದು ನೋಟಿಸ್ ಕೊಡಿಸಿ, ಕೂಡಲೇ ಕೋರ್ಟಿನಲ್ಲಿ ಒಂದು ಕೇಸನ್ನು ದಾಖಲು ಮಾಡಿಸಿದ. ಆಗಾಗ ಬಿಳಿ ಮಾರುತೀ ವ್ಯಾನಿನಲ್ಲಿ ಬರುವ ಸುಬ್ಬಾರಾವನ್ನು ರಾಯರು ಚೆನ್ನಾಗಿ ಬಲ್ಲರು. ಅದಕ್ಕೆ ಕಾರಣ, ಬಂದಾಗೆಲೆಲ್ಲ ಅವನು ರಾಯರ ಕೋಣೆಗೆ ಬಂದು ತಮ್ಮನ್ನು ಪ್ರತ್ಯೇಕವಾಗಿ ವಿಚಾರಿಸಿಕೊಂಡು ಹೋಗುತ್ತಾನೆ. ಹೆಚ್ಚೂಕಮ್ಮಿ ಸುಬ್ಬಾರಾವು ಬಂದಾಗೆಲ್ಲಾ ಬರುವ ಷಫೀಕ್ ಅಲಿ ರಾಯರನ್ನು ತಲೆಯೆತ್ತಿಯೂ ನೋಡುವುದಿಲ್ಲ. ಬಹುಶಃ ಷಫೀಕನನ್ನು ಕಂಡರೆ ರಾಯರಿಗೆ ಅಸಮಾಧಾನವಿರುವುದಕ್ಕೆ ಇದೂ ಒಂದು ಕಾರಣವಿರಬಹುದು. ಮೂರೂ ಜನ ಕುಳಿತು ಚಹಾ ಹೀರುತ್ತಾ ರಿಜಿಸ್ಟ್ರೇಷನ್, ಟೆನೆಂಸಿ, ಇತ್ಯಾದಿಯಾಗಿ ಏನೇನೋ ಕಾನೂನಿನ, ಆಸ್ತಿಪಾಸ್ತಿಯ ಭಾಷೆಯನ್ನು ಮಾತನಾಡುತ್ತಾರೆ.
ಅಂದು ಸುಬ್ಬಾರಾವು – ಶ್ರಾವಣರ ಪಿತೂರಿಯ ಫಲವಾಗಿ ನೋಟೀಸು ತಲುಪಿದ ದಿನವೂ ರಂಗಾರೆಡ್ಡಿ ಇವರ ಮನೆಗೆ ಬಂದು ಮೆಲುದನಿಯಲ್ಲಿ ಅತಿವಿನಯ ಪ್ರದರ್ಶಿಸಿ ಹೋದದ್ದು ಭಾಸ್ಕರರಾಯರಿಗೆ ಮಸಕು ಮಸಕು ನೆನಪು.
ಈಗ ಈ ಎಲ್ಲ ತರಲೆಗಳ ನಡುವೆ ಈಗ ಭಾಸ್ಕರರಾಯರ ವೃದ್ಧಾಪ್ಯ ಕಳೆಯಬೇಕಿದೆ. ಅವರಂತೂ ಈ ಎಲ್ಲದ್ದರಿಂದ ಓಡಿ ಮೈಸೂರಿನಲ್ಲಿರುವ ಹಿರಿಮಗ ಮಹೇಶಚಂದ್ರನಲ್ಲಿಗೆ ಹೋಗಬೇಕೆಂದು ಗಟ್ಟಿ ನಿರ್ಧಾರ ಮಾಡಿದ್ದಾರೆ. ಆದರೂ ಅವರು ಮಾತ್ರ ಈ ವಿಷಯ ಬಾಯಿ ಬಿಟ್ಟಿಲ್ಲ. ಇಲ್ಲಿನ ಗೊಂದಲ ಒಂದು ಘಟ್ಟ ತಲುಪುವವರೆಗೂ ಇಲ್ಲಿಂದ ದೂರ ಹೋಗುವ ಮನಸ್ಸೂ ಅವರಿಗಿಲ್ಲ. ಯಾವಾಗಲಾದರೂ ಹೃದಯಬಿಚ್ಚಿ ಈ ಎಲ್ಲದರ ಬಗ್ಗೆ ಮಗನೊಂದಿಗೆ ಮಾತನಾಡಬೇಕು ಎಂದುಕೊಳ್ಳುತ್ತಲೇ ರಾಯರು ಪ್ರತಿದಿನವೂ ಸೂಟ್ಕೇಚಸ್ ಕಟ್ಟುತ್ತಾರೆ.

*****

ರಂಗಾರೆಡ್ಡಿಗೆ ನೋಟೀಸು ತಲುಪಿದ ಮಾರನೆಯ ಸಂಜೆಯೇ, ಶ್ರಾವಣ ತಿಂಡಿ ತಿನ್ನುತ್ತಾ ಕುಳಿತಿದ್ದಾಗ ಹೊರಗಿನಿಂದ ಯಾರೋ ಜೋರಾಗಿ ಕೂಗಿದ ಶಬ್ದ ಕೇಳಿಸಿದಂತಾಯಿತು – “ಸಾರ್ ಎಮ್ಮಲ್ಲೆ ಸಮೀರ್ ಕುಮಾರ್ ಬಂದಿದ್ದಾರೆ” ಹೀಗೂಬ್ಬ ಆಗಂತುಕನ ಆಗಮನವನ್ನು ಕೂಗಿ ಹೇಳಿದ ರೀತಿ ಶ್ರಾವಣನಿಗೆ ವಿಪರೀತ ಸಿಟ್ಟು ತರಿಸಿತು. “ಬಹು ಪರಾಕ್ ಬಹು ಪರಾಕ್… ಎಂ.ಎಲ್.ಎ ಸಾಹೇಬರನ್ನು ಕುಳಿತುಕೊಳ್ಳಲು ಹೇಳಿ. ತಿಂಡಿ ತಿಂದು ಬಂದು ಅವರನ್ನು ಕಾಣುತ್ತೇನೆ.” ಎಂದು ಒಳಗಿನಿಂದಲೇ ಅರಚಿದ. ಇದು ರಂಗಾರೆಡ್ಡಿಯ ಪಿತೂರಿಯೇ ಇರಬೇಕೆಂಬ ಅವನ ಅನುಮಾನ, ಅವನು ಹೊರಬಂದಕೂಡಲೇ ನಿಜವಾಯಿತು. ಎಷ್ಟು ಬೇಗ ಒಂದು ಸಣ್ಣ ತಗಾದೆ ರಾಜಕೀಯ ಆಯಾಮ ಪಡೆದುಬಿಟ್ಟಿದೆ ಎಂದು ಯೋಚಿಸಿದಾಗ ಶ್ರಾವಣ ಚಕಿತಗೊಂಡ. ಆದರೂ ಈಗ ಸುಮ್ಮನೆ ಸಿಟ್ಟಾಗಿ ದನಿಯೇರಿಸುವುದರಲ್ಲಿ ಅರ್ಥವಿಲ್ಲ ಅನ್ನಿಸಿ ತನಗೆ ತಾನೇ ಸಮಾಧಾನವೂ ಮಾಡಿಕೊಂಡ. ಕೈಯಲ್ಲಿ ಲಾಯರ್ ನೋಟೀಸು ಹಿಡಿದ ರಂಗಾರೆಡ್ಡಿ ಹಾಗೂ ಸಮೀರ್ ಕುಮಾರ, ಶಾಂತಿಯ ಸಹಬಾಳ್ವೆಯ ಮಹತ್ವವನ್ನು – ಅದರಲ್ಲೂ ಒಂದೇ ಧರ್ಮದವರಾದ ಅವರಿಬ್ಬರೂ ಸ್ನೇಹ ಸೌಹಾರ್ದದಿಂದ ಇರಬೇಕಾದ ಅವಶ್ಯಕತೆಯನ್ನೂ ವಿವರಿಸಿದರು. ಈ ಎಲ್ಲವೂ ಷಫಿಕ್ ಸಾಬರನ್ನು ಮನಸ್ಸಿನಲ್ಲಿಟ್ಟು ಹೇಳುತ್ತಿರುವ ಮಾತುಗಳೆಂದು ಶ್ರಾವಣನಿಗೆ ಅರ್ಥವಾಯಿತು. ಏನೂ ಮಾತನಾಡದೇ, ಕಡೆಗೆ ಅವರಿಗೊಂದು ಲೋಟ ಚಹಾ ಕೂಡ ಕೊಡದೇ ಶ್ರಾವಣ ಅವರನ್ನು ಕಳುಹಿಸಿಬಿಟ್ಟ.
ಅವರು ಹೋದಮೇಲೆ, ಶ್ರಾವಣ ಕೂಡಲೇ ಅಪ್ಪನ ಕೋಣೆಗೆ ಹೋಗಿ ಅವರನ್ನು ನೋಡಿದ. ಅಪ್ಪ ಇನ್ನೂ ನಿದ್ರೆಯ ಮಂಪರಿನಲ್ಲಿ ಏಳುವುದೋ ಬೇಡವೋ ಎಂಬಂತೆ ಬಿದ್ದುಕೊಂಡಿದ್ದರು. ಸದ್ಯ – ಈ ಎಲ್ಲವೂ ನಡೆದಾಗ ಅಪ್ಪ ಮಲಗಿದ್ದರಲ್ಲಾ… ಅವರಿಗೇನಾದರೂ ಇಂದಿನ ಈ ಭೇಟಿಯ ಮಹತ್ವ ತಿಳಿದರೆ, ಇನ್ನೂ ಚಿಂತೆಗೊಳಗಾಗಿ ನರಳುವರು ಎನ್ನಿಸಿ, ತಿಳಿಯದಿರುವುದಕ್ಕೆ ನಿರಾಳ ನಿಟ್ಟುಸಿರುಬಿಟ್ಟ. ಹಾಗೆ ಯೋಚಿಸುತ್ತಲೇ – ತನ್ನ ಕನಸಿನ ತಿರುಮಲಗಿರಿಯ ಮನೆಯಾಗುವವರೆಗೂ ಅಪ್ಪನನ್ನು ಇಲ್ಲಿ ಕರೆಸಿಕೊಳ್ಳಬಾರದಿತ್ತು ಎನ್ನಿಸಿತು. ಜತೆಗೆ ಆಳುವ ಪಕ್ಷದ ಎಂ.ಎಲ್.ಎಯನ್ನು ತನ್ನ ಕಡೆಗೆಳೆದುಕೊಂಡು ಸೂಕ್ಷ್ಮವಾಗಿ ಹೆದರಿಸಬಂದ ರಂಗಾರೆಡ್ಡಿಯ ಚಾಣಾಕ್ಷತನಕ್ಕೆ ತಲೆದೂಗಿದ. ಅದಷ್ಟೇ ಅಲ್ಲ, ಅವನಿಗೆ ಒಂದಷ್ಟು ಕ್ಷಣ ನಿಜಕ್ಕೂ ಭಯವಾಯಿತು. ತಿರುಮಲಗಿರಿಯ ಮನೆ ಇತ್ಯದಿಗಳು ನಾಶವಾಗಲಿ, ಮೊದಲು ಇಲ್ಲಿಂದ ಜಾಗ ಖಾಲಿಮಾಡಿ, ಸೇತುವೆಯಾಚೆಯ ಬದಿಯಲ್ಲಿ ಒಂದು ಮನೆ ಬಾಡಿಗೆಗಾದರೂ ಹಿಡಿಯಬೇಕು ಅನ್ನಿಸಿತು. ಇದರಿಂದ ಅಪ್ಪನಿಗೂ ಶಾಂತಿ – ಕಾಲೇಜು, ಏಂಸೆಟ್ ಇತ್ಯಾದಿಗಳೆಂದು ಓಡಾಡುವ ಮಗನಿಗೂ ಅನುಕೂಲ ಎಂದೂ ಅನ್ನಿಸಿತು. ಒಂದೇ ಕ್ಷಣದ ಮಟ್ಟಿಗೆ, ಅಪ್ಪನನ್ನು ಮೈಸೂರಿಗೆ ವಾಪಸ್ಸು ಕಳಿಸಿಕೊಟ್ಟರೆ ಹೇಗೆಂಬ ಆಲೋಚನೆಯೂ ಬಂತು. ಆದರೆ ಮಹೇಶನ ಜತೆ ಜಗಳವಾಡಿ, ಕನಿಷ್ಟ ಮೂರು ತಿಂಗಳಿಗೆಂದು ಕರೆತಂದಿರುವ ಅಪ್ಪನನ್ನು ಒಂದೇ ತಿಂಗಳು ತೀರುವುದಕ್ಕೆ ಮೊದಲೇ ಕಳುಹಿಸಿಕೊಡುವುದು ಹೇಗೆಂದು ತಿಳಿಯದೇ ತನ್ನಾತ್ಮಸಾಕ್ಷಿಗೆ ಬಲಿಯಾದ. ಹಾಗೂ ಈ ಎಲ್ಲ ಗೊಂದಲದ ಆಶಾಕಿರಣವಾಗಿ ಮುಂದುವರೆದದ್ದೆಂದರೆ, ತಿರುಮಲಗಿರಿ ಮಾತ್ರ.

****

ಈ ಎಲ್ಲವೂ ನಡೆಯುತ್ತಿದೆ ಎನ್ನುವಾಗಲೇ ಇದು ಖರೆ ನಡೆಯುತ್ತಿದೆಯೇ ಎಂಬ ಅನುಮಾನವೂ ಭಾಸ್ಕರರಾಯರನ್ನು ಕಾಡುವುದುಂಟು. ಕಾರಣ: ಈ ಎಲ್ಲ ವಿಷಯಗಳ ಚರ್ಚೆ ಬಹಳ ನಿಗೂಢವಾಗಿ ನಡೆಯುತ್ತದೆ. ಹಾಗೂ ಈ ಚರ್ಚೆ ನಡೆಯವಾಗ ಭಾಸ್ಕರರಾಯರಿಗೆ ತಾವು ಸಂಪೂರ್ಣವಾಗಿ ಎಚ್ಚರವಿರುವಂತೆ ಅನ್ನಿಸುವುದೇ ಇಲ್ಲ. ಎಲ್ಲವೂ ಒಂದು ಥರದ ಮಂಪರಿನ ಸ್ಥತಿಯಲ್ಲೇ ನಡೆದುಹೋಗುತ್ತದೆ. ಶ್ರಾವಣ ಬಹುಶಃ ತನ್ನ ಮಗನಿಗೆ ಈ ವಿಷಯ ತಿಳಿಯದಿರಲೆಂದು ಹಾಗೆ ಮಾಡುತ್ತಾನೇನೋ….. ತಿಳಿದರೆ, ಅವನು ಹೆದರಿ ರಂಗಾರೆಡ್ಡಿಯ ಮಕ್ಕಳ ಜೊತೆ ಆಟ ಆಡುವುದನ್ನೂ ಬಿಟ್ಟುಬಿಟ್ಟಾನೆಂಬ ಭೀತಿಯಿದ್ದೀತು.
ಹಾಗೆ ನೋಡಿದರೆ, ತಮ್ಮ ಮೊಮ್ಮಗ ಪೋಲೀಸು ರಂಗಾರೆಡ್ಡಿಯ ಮಕ್ಕಳ ಜೊತೆಗಾಗಲೀ ಪಕ್ಕದ ಮನೆಯ ಷಫೀಕ್ ಅಲಿಯ ಮಕ್ಕಳ ಜತೆಗಾಗಲೀ, ಕ್ರಿಕೆಟ್ ಆಡುವುದು, ಗಾಳಿಪಟ ಹಾರಿಸುವುದೂ, ಭಾಸ್ಕರರಾಯರಿಗೆ ಟೆನ್ಷನ್ ಉಂಟುಮಾಡುವ ವಿಷಯವೇ. ಈಗಿನ ಅವರ ಚಿಂತೆಗೆ ಅದೂ ಒಂದು ಕಾರಣವಿದ್ದೀತು! ಅಕಸ್ಮಾತ್ ಶ್ರಾವಣನ ಮೇಲಿನ ಸಿಟ್ಟನ್ನು ಆ ರಂಗಾರೆಡ್ಡಿ ಈ ಹುಡುಗನ ಮೇಲೆ ತೀರಿಸಿಕೊಂಡುಬಿಟ್ಟರೆ?!
ರಾಯರು ತಮಗೆ ಅಂಟಿಕೊಂಡಿರುವ ರೋಗದ ಬಗ್ಗೆ ಯೋಚಿಸುತ್ತಾರೆ. ಈ ರೋಗ ಮುಂಜಾನೆ ಆರರಿಂದ ಏಳರ ನಡುವೆ ಅವರ ಮೇಲೆ ಧಾಳಿ ಮಾಡುತ್ತದೆ ಎನ್ನಿಸಿದರೂ ಅದರ ಖಚಿತತೆಯ ಬಗ್ಗೆ ಅವರಿಗೆ ಅನುಮಾನವಿದೆ. ಹಾಗೆ ನೋಡಿದರೆ ಅವರಿಗೆ ದಿನವಿಡೀ ಹಾಗೆಯೇ ಎಂದೂ ಹೇಳಬಹುದು. ಆದರೆ ಈ ರೋಗವಂತೂ ಭಾಸ್ಕರರಾಯರನ್ನು ಆವರಿಸಿಬಿಟ್ಟಿದೆ. ಅರ್ಥಾತ್: ಮುಂಜಾನೆ ಆರಕ್ಕೆ ಎಚ್ಚರಗೊಂಡಂತಾದ ಭಾಸ್ಕರರಾಯರು ಒಂದು ಥರದ ಮಂಪರಿನ ಸ್ಥಿತಿಯಲ್ಲಿರುತ್ತಾರೆ. ಅದು ಒಂದು ರೀತಿಯ ನಿದ್ದೆಯಲ್ಲದ ಎಚ್ಚರವಲ್ಲದ ಕನಸಲ್ಲದ ನನಸಲ್ಲದ ಎಲ್ಲಿಗೂ ಸಲ್ಲದ ಸ್ಥಿತಿ. ಈ ಅವಸ್ಥೆಯಲ್ಲಿ ಭಾಸ್ಕರರಾಯರಿಗೆ ಎನೇನೋ ಕಾಣಿಸುತ್ತದೆ. ಯಾವ ವಿಷಯಗಳೋ ಶಬ್ದಗಳೋ ಕೇಳಿಸುತ್ತವೆ, ಹಾಗೂ ಹಾಗೆಯೇ ಅವರು ಕ್ರಮೇಣ ನಿದ್ರೆಗೆ ಜಾರಿಬಿಡುತ್ತಾರೆ. ಮತ್ತೆ ಎದ್ದಾಗ ಎಲ್ಲವೂ ಸುಗಮ. ಯಾವಾಗಲಾದರೂ ಡಾಕ್ಟರಿಗೆ ತೋರಿಸಿಕೊಳ್ಳೋಣವೆಂದರೆ ರೋಗವೆಂದರೇನೆಂದು ತಿಳಿಯದಂತಹ ರೋಗ! ಆಲೋಚನೆಯ ಭ್ರೂಣಗಳು ಕ್ರಿಯಾರೂಪ ತಾಳುವಂತಹ ಪ್ರಕ್ರಿಯೆ.. ಈ ಸಮಯದಲ್ಲಿ ರಾಯರು ಕಾವ್ಯ ಕಟ್ಟುತ್ತಾರೆ. ಕನಸಿನ ಕದ ತಟ್ಟುತ್ತಾರೆ. ತಮಗರಿವಿಲ್ಲದಂತೆಯೇ ನಿದ್ರೆಯ ತೆಕ್ಕೆಗೂ ಸೇರಿಬಿಡುತ್ತಾರೆ. ದಿನಕ್ಕೆ ಈ ರೀತಿ ಹಲವು ಬಾರಿ ಎಚ್ಚರಗೊಳ್ಳುವುದು, ಹಲವುಬಾರಿ ನಿದ್ರೆಗೊಳಗಾಗುವುದು – ಈಚೆಗೆ ಅವರಿಗೆ ಬಿಡಿಸಿಕೊಳ್ಳಲಾಗದ ದುರಭ್ಯಾಸವಾಗಿಬಿಟ್ಟಿದೆ. ಈ ರೀತಿ ನನಸಿನೊಳಗಣ ಕನಸು ಕಾಣುವುದು ಅವರ ಪ್ರಕೃತಿಗೊಗ್ಗದ, ಪ್ರಕೃತಿ ಒಪ್ಪದ ಪರಿಪಾಠವಾಗಿದೆ.
ಹಿಂದಿನ ಮನೆಯ ರಂಗಾರೆಡ್ಡಿ ನಡೆಸಿದ ಈ ಎಲ್ಲ ಕಾರುಬಾರಿನ ವಿಷಯ ತಿಳಿದುಬಂದದ್ದೂ ಬಹುತೇಕ ಶ್ರಾವಣ ತನ್ನ ಹೆಂಡತಿಯೊಂದಿಗೆ ಈ ಸಮಸ್ಯೆ ಚರ್ಚಿಸುತ್ತಿದ್ದ ಸಮಯದಲ್ಲಿಯೇ.
ಆ ನಂತರ ಏನಾಯಿತೆಂದು ಭಾಸ್ಕರರಾಯರಿಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಹೀಗೆ ಕಂಡ ಈ ದೃಶ್ಯದ ಚಿಂತೆ ದಿನವಿಡೀ ಮರುಮರುಕಳಿಸಿ ಭಾಸ್ಕರರಾಯರನ್ನು ಸುಸ್ತಾಗಿಸಿಬಿಟ್ಟಿತ್ತು. ಆದರೂ ಈ ರಂಗಾರೆಡ್ಡಿಯ ಪುರಾಣ ನಿಜವಗರಲೇಬೇಕು. ಅಂದು ಮಧ್ಯಹ್ನ ಮಾತುಕತೆ ನಡೆದು ಸಂಧಾನವಾದಂತೆ ಅನ್ನಸಿದ ಮಾರನೆಯ ದಿನವೇ ರಂಗಾರೆಡ್ಡಿ – ಕ್ಯೂರಿಂಗಿಗೆ ಬಿಟ್ಟಿದ್ದ ತನ್ನ ಸೂರಿನ ಮೇಲೇರಿ “ನೀಯಮ್ಮ ಭಾಂಚೋದ್” “ಮಾಕೌಡೇ” ಎಂದೆಲ್ಲ ಶ್ರಾವಣನನ್ನು ಕೆಟ್ಟಕೆಟ್ಟದಾಗಿ ಬೈದದ್ದು ಭಾಸ್ಕರರಾಯರ ಕಿವಿಯನ್ನಿನ್ನೂ ಕೊರೆಯುತ್ತಿದೆ.
ಅಂದು ನಡೆದದ್ದಾದರೂ ಏನು? ಭಾಸ್ಕರರಾಯರು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹೌದು…. ಹಿಂದಿನ ದಿನವೇ, ಅದೂ ಮಧ್ಯಹ್ನದ ಈ ಗಲಾಟೆ, ಸಂಧಾನಕ್ಕೆ ಮೊದಲೇ ಸುಬ್ಬಾರಾವು ಬಂದು ಶ್ರಾವಣನ ಜೊತೆ ಗುಸುಗುಸು ಮಾಡಿಹೋದ.
ಅದರ ಫಲ:
ಶ್ರಾವಣ ಮಧ್ಯಾಹ್ನದ ನಂತರ ಎಲ್ಲ ಶಾಂತವಾಗಿದೆಯೆನ್ನುವಾಗ, ಯಾರೂ ಇಲ್ಲದ ಸಮಯ ನೋಡಿ, ರಂಗಾರೆಡ್ಡಿ ಈಗಾಗಲೇ ಎಬ್ಬಿಸಿರುವ ಗೋಡೆಯ ಚಿತ್ರ ತೆಗೆಯಲು ಕ್ಯಾಮರಾ ಹಿಡಿದು ಹೋದ.
ಉದ್ದೇಶ: ಈಗಾಗಲೇ ಎಬ್ಬಿಸಿರುವ ಗೋಡೆಗಳ ಚಿತ್ರಗಳನ್ನು ತೆಗೆದಿಟ್ಟುಕೊಳ್ಳುವುದು. ನಂತರ ಕೋರ್ಟಿಗೆ ಹೋಗಿ “ರಂಗಾರೆಡ್ಡಿ ಗೋಡೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾನೆ “ಸ್ಟೇ” ಕೊಡಿ” ಎಂದು ಅಪೀಲು ಮಾಡುವುದು.
ಮುಂದಾಲೋಚನೆ ಏನೆಂದರೆ: “ಸ್ಟೇ” ಕೊಟ್ಟ ನಂತರ ಗೋಡೆ ಎಬ್ಬಿಸಿದ್ದಾನೆಂದು ಕಾಂಟೆಂಪ್ಟ್ ಆಫ್ ಕೋರ್ಟ್ ಕೇಸು ಹಾಕುವುದು.
ಈ ಇಂಥ ವಿಚಿತ್ರ ಆಲೋಚನೆಗಳ ದರ್ಶನವಾದಾಗ ರಾಯರಿಗೆ ನಿಜಕ್ಕೂ ಅದು ಕನಸೋ, ವಾಸ್ತವವೋ ಎಂದು ಅನುಮಾನ ಬರುವುದಂತೂ ಖಂಡಿತ. ಖರೆಯಿರಲೇಬೇಕೆಂದು ನೆನಪುಮಾಡಿಕೊಳ್ಳಹೊರಟದ್ದೆಲ್ಲಾ ಹೀಗೆ ಅನುಮಾನದಲ್ಲೇ ಪರ್ಯಾವಸನವಾಗುವುದು ವಿಚಿತ್ರ ಚಡಪಡಿಕೆಗೆ ಕಾರಣವಾಗಿದೆ.
ಭಾಸ್ಕರರಾಯರಿಗೆ ಅನುಮಾನ ಬಂದಾಗಲೆಲ್ಲಾ – ಅನುಮಾನ ಎಂಬ ಪದ ನೆನಪಾದಾಗಲೆಲ್ಲ ಷಫೀಕ್ ಅಲಿಯ ಮುಖ ನೆನಪಾಗುವುದು. ಷಫೇಕನ ನೆನಪಾದಾಗಲೆಲ್ಲ ಶ್ರಾವಣ ತಿರುಮಲಗಿರಿಯಲ್ಲಿ ಸೈಟಿನ ನೆನಪಾಗುವುದು. ಈ ಮನೆಯನ್ನು ಮಾರಿ ದೂರದ ತಿರುಮಲಗಿರಿಗೆ ಹೋಗುವ ಆಲೋಚನೆಯನ್ನೂ ಈ ಷಫೀಕನೇ ಅವನ ತಲೆಯಲ್ಲಿ ಬಿತ್ತಿರಬಹುದೆಂಬ ಅನುಮಾನವೂ ಆವರಿಸಿದಾಗ ಒಂದಾದರೂ ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸಿರುವ ಷಫಾಕನ ಬಗ್ಗೆ ತುಸು ಅಂತಃಕರಣ ಮಿಡಿದರೂ, ಕಡೆಗುಳಿಯುವುದು ಅನುಮಾನವೇ. ತಿರುಮಲಗಿರಿಗೆ ಹೋಗುವ ಆಲೋಚನೆಯೂ ಒಳ್ಳೆಯದೇ. ಸುತ್ತಮುತ್ತೆಲ್ಲಾ ಕೊಳಕಾಗಿರುವ ಈ ಕೊಂಪೆಯಲ್ಲಿರುವುದಕ್ಕಿಂತ ಅಲ್ಲಿಗೆ ಹೋಗುವುದೇ ಲೇಸು… ಆದರೆ ಪಾಪದ ಶ್ರಾವಣನಿಗೆ ಈ ಅಕಬರಬಾಗಿನ ಮನೆಗೆ ಅವನು ನಿರೀಕ್ಷಿಸಿದಷ್ಟು ಬೆಲೆಯೇ ಸಿಗುತ್ತಿಲ್ಲ. ಸೇತುವೆ ದಾಟಿದ ಈ ಬದಿಯ ಏರಿಯಾ ಹಾಗೆಯೇ. ಕಡಿಮೆ ಬೆಲೆಯನ್ನು ಪಡೆಯುತ್ತದೆ. ಈ ಮನೆ ಹೇಗಾದರೂ ಮಾರಾಟವಾದರೆ ಅದರಲ್ಲಿ ಬಂದ ಹಣ ಹೂಡಿ ಒಂದು “ಆರ್ಕಿಟೆಕ್ಟ್ ಡಿಸೈನ್ಡ್ ಹೌಸ್” ಕಟ್ಟಬೇಕೆಂಬ ಕನಸು ಶ್ರಾವಣನಿಗುಂಟು. ಇದು ಮಾತ್ರ ಅವನ ಎಡಪಂಥೀಯ ರೆಟಾರಿಕ್ಕಿಗೊಳಗಾಗದೇ, ಮಧ್ಯತರಗತಿಯ ಬೂರ್ಜ್ವಾಗಳ ಶೈಲಿಯಲ್ಲಿ “ವೆಲ್ ವೆಂಟಿಲೇಟೆಡ್, ಸೆಲ್ಫ್ ಕಂಟೇನ್ಡ್ ಹೌಸ್” ಆಗಬೇಕೆಂದು ಅವನು ಕನಸು ಕಾಣುತ್ತಾನೆ. ಶ್ರಾವಣ ಕಟ್ಟಿರುವ ಈ ಕನಸುಗಳ ದರ್ಶನವೂ ರಾಯರಿಗೆ ತಮ್ಮ ರೋಗದ ಕಾಲದಲ್ಲೇ ಆಗಿದೇ. ಆದರೂ ಇದು ಖರೆಯಿರಲೇಬೇಕು. ದಿನದ ಯಾವುದೇ ಸಮಯದಲ್ಲಿ ಷಫೀಕ್ ಅಲಿ ಯಾರ್ಯಾರನ್ನೋ ಕರೆತಂದು ಮನೆಯನ್ನು ಪರೀಕ್ಷೆಗೊಳಪಡಿಸುವುದು ರಾಯರ ಪ್ರಜ್ಞೆಗೆ ಬಂದಿದೆ.
ಮದ್ಯಾಹ್ನ ನಿದ್ರೆಗೆಂದು ಮಲಗಿದಾಗ ಎಷ್ಟುಬಾರಿ ಸೊಸೆ ಬಂದು ತಮ್ಮನ್ನು ಎಬ್ಬಿಸಿಲ್ಲ! ಎದ್ದನಂತರ ಅವರಿಗೆ ಪ್ಲಿಂತ್ ಏರಿಯಾ, ಡೈಮೆಂಷನ್, ಸ್ಕ್ವೇರ್ ಯಾರ್ಡ್ ಇತ್ಯಾದಿಯಾಗಿ, ಸೈಟು ಮನೆಗಳಿಗೆ ಸಂಬಂಧಿಸಿದ ಅನೇಕ ವಿಷಯಗಳು ಕೇಳಿಸುತ್ತವೆ. ಭಾಸ್ಕರರಾಯರಿಗೆ ಇಲ್ಲಿ ಮನೆ ಕೊಂಡದ್ದೇ ತಪ್ಪು ಎನ್ನುಸುವಂಥ ಸಂದರ್ಭದಲ್ಲಿ ಈ ಮಾರಾಟದ ಮಾತು ಸಂತೋಷ ನೀಡಿದರೂ ಮತ್ತೆ ತಿರುಮಲಗಿರಿ ಇತ್ಯಾದಿಯಾಗಿ ಇಲ್ಲೇ ಸೆಟಲ್ ಆಗುವುದಕ್ಕಿಂತ ಮೈಸೂರಿಗೆ ಬಂದು ಒಂದು ಸೈಟು ಕೊಳ್ಳುವುದು ಉತ್ತಮವೆನ್ನಿಸುತ್ತದೆ. ಹುಣಸೂರು ರಸ್ತೆಯಲ್ಲಿ ಸಿಐಟಿಬಿಯವರ ಸೈಟುಗಳು ಮಾರಾಟಕ್ಕಿವೆಯಂತೆ. ಆದರೆ ಈ ಮಾತುಗಳನ್ನು ಹೇಳಲು ಪರಾವಲಂಬಿ ಭಾಸ್ಕರರಾಯರಿಗೆ ಬಾಯಿ ಬರುವುದಿಲ್ಲ. ಹೇಳಿದರೂ ಯಾರೂ ಕೇಳುವುದಿಲ್ಲ. ಈ ಇಂಥ ಆಲೋಚನೆಗಳು ಬಂದಾಗ, ಅವರು ಭಗವದ್ ಗೀತೆ ಹಿಡಿದು ಕುಳಿತುಬಿಡುತ್ತಾರೆ. ಅದನ್ನೆಂದೂ ಅವರು ಅಂತರ್ಗತ ಮಾಡಿಕೊಳ್ಳಲು ಪ್ರಯತ್ನಿಸಿಲ್ಲವಾದರೂ, ಈಗವರಿಗೆ ಅದೊಂದೇ ಕಾಲಹರಣ ಮಾಧ್ಯಮವಾಗಿದೆ.
ಮಾರಲು ನಿಶ್ಚಯಿಸಿರುವ ಈ ಮನೆಗಾಗಿ, ಸುಮ್ಮನೆ ರಂಗಾರೆಡ್ಡಿಯ ದ್ವೇಷ ಕಟ್ಟಿಕೊಳ್ಳುವುದು ಬೇಡವೆಂದು ಹೇಳಲೂ ಭಾಸ್ಕರರಾಯರ ಮನ ಹಾತೊರೆಯುವುದು. ಹೇಗಿದ್ದರೂ ಮಾರಾಟಮಾಡುವುದೇ ಆದಲ್ಲಿ ಮುಂಬರುವ ಮಾಲೀಕನಿಗೆ ಈ ಲಿಟಿಗೇಷನ್ನಿನ ಪರಂಪರೆಯನ್ನು ಏಕೆ ಬಳುವಳಿಯಾಗಿ ನೀಡಬೇಕು?
ಆದರೂ ಮಕ್ಕಳಿಗೆ ಇಪ್ಪತ್ತು ದಾಟಿದ ನಂತರ ಬುದ್ಧಿಮಾತು ಹೇಳುವುದು ಸರಿಯಲ್ಲ. ನಲವತ್ತು ದಾಟಿದ ನಂತರ ಅವರ ಬುದ್ಧಿಮಾತನ್ನೇ ಕೇಳುವ ಸ್ಥಿತಿ ಪ್ರಾಪ್ತವಾಗುತ್ತದೆ. ಶ್ರಾವಣನಿಗೆ ನಲವತ್ತರ ನಂತರ ಐದು ವರ್ಷಗಳಾಗಿವೆ.
(ಮುಂದಿನ ಭಾಗ ನಾಳೆಯ ಸಂಚಿಕೆಯಲ್ಲಿ)

‍ಲೇಖಕರು G

10 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading