ಮೊನೆಸ್ಟರಿಗಳು, ಪ್ರೇಯರ್ ವೀಲ್ ಗಳು (ಪ್ರಾರ್ಥನೆ ಬಾವುಟಗಳು) ಭೂತಾನಿನ ಅವಿಭಾಜ್ಯ ಅಂಗ. ಐದು ನಿಮಿಷ ಹೊರಗಡೆ ಹೋದರೆ ಕಡುಕೆಂಪು, ಎಣ್ಣೆಗೆಂಪು ಬಣ್ಣದ ಕಾವಿಯನ್ನುಟ್ಟ ಸನ್ಯಾಸಿಗಳನ್ನು ಕಾಣದೆ ಬರಲು ಸಾಧ್ಯವೇ ಇಲ್ಲ. ಹಚ್ಚ ಹಸಿರನ್ನು ಹೊತ್ತ ಭೂದೃಶ್ಯಗಳು,ಕಣಿವೆಗಳು, ಹಳೆಯ ಝಾಂಗ್ಗಳ ನಡುವೆ ಹಲವು ಹತ್ತು ಬಣ್ಣಗಳ ಕೆಂಪು ಕಾವಿ ಒಳ್ಳೆಯ ಕಾಂಟ್ರಾಸ್ಟ್ ನ್ನು ಸೃಷ್ಟಿ ಮಾಡುತ್ತೆ.
ಮೊನೆಸ್ಟರಿಗಳು ಯಾವಾಗಲೂ ದೇವಾಲಯ ಸಂಕೀರ್ಣಗಳ ಭಾಗವಾಗಿರುತ್ತವೆ. ಈ ಮೊನೆಸ್ಟರಿಗಳು ಕೆಲವೊಮ್ಮೆ ಝಾಂಗ್ಗಳ ಭಾಗವಾಗಿಯೂ ಕಾಣಸಿಗುತ್ತವೆ. ಹಾಗಾದರೆ ಅಲ್ಲಿ ವಾಸಿಸುವ ಎಲ್ಲರೂ ಸನ್ಯಾಸಿಗಳೆ? ಎಲ್ಲರೂ ಇಲ್ಲಿಗೆ ಸ್ವ ಇಚ್ಛೆಯಿಂದಲೇ ಬರುತ್ತಾರಾ? ಆರು ವರ್ಷ ಮೇಲ್ಪಟ್ಟವರಿಗೆ ಪ್ರವೇಶ ಇರೋ ಮಾನೆಸ್ಟರಿಗೆ ಕೇವಲಾ ಆರು ವರ್ಷಕ್ಕೇ ತಿಳಿವು ಬಂದು ಸೇರುತ್ತಾರಾ? ಮನೆಯ ಪರಿಸ್ಥಿತಿಯಿಂದ ಇಲ್ಲಿಗೆ ಬರುತ್ತಾರಾ?
ಹೀಗೆ ಟ್ರಾಫಿಕ್ ನಲ್ಲಿ ಒಂದರ ಹಿಂದೆ ಒಂದು ನಿಂತ ವಾಹನಗಳ ಸಾಲಿನಂತೆ ಪ್ರಶ್ನೆಗಳು ಮೂಡಿದವು. ಒಂದು ಮೊನೆಸ್ಟರಿಯಿಂದ ಮತ್ತೊಂದಕ್ಕೆ ಹೋಗುತ್ತಾ ನಾ ಕಂಡ, ಕೇಳಿದ ಚಿತ್ರಗಳನ್ನು ಮುಂದೆ ಹಂಚಿಕೊಂಡಿದ್ದೇನೆ.
ಮೊನೆಸ್ಟರಿಗಳು ಗುರುಕುಲದಂತೆ. ಇಲ್ಲಿ ಓದು ಉಚಿತ. ಸರ್ಕಾರ ಇದನ್ನು ಭರಿಸುತ್ತದೆ. ಸ್ವ ಇಚ್ಛೆಯಿಂದ ಸೇರುವವರ ಜೊತೆ ಅನೇಕ ಬಡಕುಟುಂಬಗಳು ಊಟ, ವಿದ್ಯಾಭ್ಯಾಸ, ವಸತಿ, ಖರ್ಚು ಕಳೆಯುತ್ತಲ್ಲಾ ಅಂತ ಚಿಕ್ಕ ವಯಸ್ಸಿಗೇ ಮೊನೆಸ್ಟರಿಗಳಿಗೆ ಕಳಿಸುತ್ತಾರಂತೆ.
ಒಮ್ಮೆ ಇಲ್ಲಿಯ ವಿದ್ಯಾಭ್ಯಾಸ ಚಕ್ರಕ್ಕೆ ಬಿದ್ದ ಮೇಲೆ ಇಲ್ಲೇ ಓದಬೇಕು. ಹೊರಗಿನ ಶಾಲೆ-ಕಾಲೇಜುಗಳಲ್ಲಿ ಇಲ್ಲಿ ಬಿಟ್ಟು ಬಂದ ವಿದ್ಯಾರ್ಥಿಗೆ ಅವಕಾಶ ನೀಡುವುದಿಲ್ಲವಂತೆ. ಹಾಗೆ ಅರ್ಧಕ್ಕೆ ಇಲ್ಲಿಂದ ಹೊರಬಿದ್ದ ಮಾಂಕ್ ಆಗದ ವಿದ್ಯಾರ್ಥಿಗಳು ಡ್ರೈವಿಂಗ್, ಗೈಡ್ ಹೀಗೆ ಯಾವುದಾದರೂ ಕೆಲಸಗಳನ್ನು ಆರಿಸಿಕೊಳ್ಳಬೇಕಾಗುತ್ತದೆ.
ನಾನು ಮಾತನಾಡಿಸಿದ ಒಂದು ದೇವಾಲಯದ ಪೂಜಾರಿ ಹೇಳಿದ್ದು. 28-30 ರ ವಯಸ್ಸು ದಾಟುವ ತನಕ ಯಾರೂ ಬೌದ್ಧ ಭಿಕ್ಕು ಆಗುವುದನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಆಮೇಲೆ ಕೂಡ ಮುಂದುವರೆಯುವವರು ಮಾತ್ರ ಗಂಭೀರವಾಗಿ ತಮ್ಮ ಶ್ರೇಣೀಯಲ್ಲಿ ಮುಂದುವರೆಯುತ್ತಾರೆ. ಒಂದು ಸಲ ಯಾವುದೋ ಮೊನೆಸ್ಟರಿಗೆ ಬೆಂಕಿ ಬಿದ್ದಾಗ ಅಲ್ಲಿದ್ದ ಸನ್ಯಾಸಿಗಳು ಕುಡಿಯುತ್ತಾ ಕುಳಿತಿದ್ದುದನ್ನು ಆತ ನೆನಪಿಸಿಕೊಂಡ.
ಮೊನೆಸ್ಟರಿಗಳ ಹಾಗೇ ಸನ್ಯಾಸಿನಿಯರಿಗಾಗಿ ನನ್ನರಿ(nunnery)ಗಳೂ ಇವೆ. ಟಿಂಪುವಿನಲ್ಲಿ ಒಂದು ಹಾಗೂ ಪುನಾಖಾದಲ್ಲಿ ಒಂದು ನನ್ನರಿಗೆ ಹೋಗಿದ್ದೆ. ಟಿಂಪುವಿನ ನನ್ನರಿಯಲ್ಲಿ ವಯಸ್ಸಾದ ಕೆಲವು ಸನ್ಯಾಸಿನಿಯರು ಧ್ಯಾನ ಮಾಡ್ತಾ ಇದ್ದದ್ದು ಬಿಟ್ರೆ ಮತ್ತೇನೂ ವಿಶೇಷ ಕಾಣಿಸಲಿಲ್ಲ. ಅದು ತುಂಬಾ ಹಳೆಯ ನನ್ನರಿ. ವಸತಿ ಜಾಗ ತುಂಬಾ ಪುಟ್ಟದಾಗಿತ್ತು.

ಪುನಾಖಾ ನನ್ನರಿ ಒಂದು ಗುಡ್ಡದ ಮೇಲಿರುವ ಜನವಸತಿಯಿಂದ ದೂರವಾಗಿರುವ ಜಾಗ. ಆದರೆ ಹೊಸದು. ನಾನು ಹೋದಾಗ ಸನ್ಯಾಸಿನಿಯರು ದೇವಾಲಯದ ಒಳಗೆ ಪ್ರಾರ್ಥನೆಯಲ್ಲಿದ್ದರು. ಸಾವಿರ ಕೈಗಳ ಅವಲೋಕಿತೇಶ್ವರನ ಎದುರು ಪೂಜೆ ನಡೆದು ನೈವೇದ್ಯಗಳನ್ನಿಟ್ಟಿದ್ದರು. ಇಲ್ಲೆಲ್ಲಾ ದೇವಾಲಯಗಳಲ್ಲಿ ದೇವರಿಗೆ ಇಡುವುದು ಏನು ಗೊತ್ತಾ? ಮ್ಯಾಗಿ, ಚಾಕೊಲೇಟ್, ಲೇಸ್, ಬಿಸ್ಕೆಟ್ ನ ಟಿನ್ ಗಳು, ಚಿಪ್ಸ್, ಕುರ್ಕುರೆ!! ಎಲ್ಲಾ ದೇವಾಲಯಗಳಲ್ಲೂ ಇದು ಸಾಮಾನ್ಯ. ನಾವು ಕರೆಯುವ ಸಾತ್ವಿಕ ಆಹಾರವನ್ನು ಎಲ್ಲೂ ನೋಡಲಿಲ್ಲ. ಅದರ ಜೊತೆ ಕೆಲವು ಪಾತ್ರೆಗಳಲ್ಲಿ ನೀರು ಇಡುತ್ತಾರೆ. ಎಲ್ಲಾ ದೇವಾಲಯಗಳಂತೆ ಇಲ್ಲಿ ಕೂಡ ವಿಕ್ಟರಿ ಫ್ಲ್ಯಾಗ್ ಅಂತ ಕರೆಯುವ ಬಣ್ಣಬಣ್ಣದ ಬಟ್ಟೆಗಳನ್ನು ಸೀಲಿಂಗ್ ನಿಂದ ತೂಗುಬಿಟ್ಟಿದ್ದರು.
ಅಲ್ಲಿ ಎಲ್ಲ ವಯಸ್ಸಿನ ಸನ್ಯಾಸಿನಿಯರಿದ್ದರು. ಮೊದಲು ನಿಂತು ಕೊಂಡು ಆರಂಭವಾದ ಅವರ ಪ್ರಾರ್ಥನೆ ಆಮೇಲೆ ಕುಕ್ಕುರುಗಾಲಿನಲ್ಲಿ ಮುಂದುವರೆದು ಕೊನೆಗೆ ಚಕ್ಕಳಮಕ್ಕಳ ಹಾಕಿಕೊಂಡು ಮುಂದುವರೆಯಿತು. ಹತ್ತು ನಿಮಿಷ ಮಂತ್ರ ಪಠಣದ ನಂತರ ಶಹನಾಯಿ ಹೋಲುವ ಅತಿ ಉದ್ದದ ವಾದ್ಯ, ಗಂಟೆ, ಜಾಗಟೆಗಳನ್ನು ಬಾರಿಸಿ ಮತ್ತೆ ಮುಂದುವರೆಸುತ್ತಾ ಇದ್ದರು. ಮಧ್ಯೆ ತೀರ್ಥ ಕೊಟ್ಟರು. ದೇವರಿಗೆ ಅರ್ಪಿಸಿ, ತೀರ್ಥದ ಬಟ್ಟಲಿನಲ್ಲಿ ಗಿಡದ ತರಹ ಏನೋ ಇಟ್ಟದ್ದರು. ಒಂದು ಗಂಟೆಗೂ ಜಾಸ್ತಿ ಅವರೊಡನೆ ಕುಳಿತಿದ್ದೆ. ಅವರೆಲ್ಲಾ ಆಚೆ ಬಂದರೆ ಒಳ್ಳೆಯ ಚಿತ್ರಗಳು ಸಿಗುತ್ತೆ ಅಂತ ನಾನು ಕಾಯ್ತಾನೇ ಇದ್ದೆ. ಅದು ಮುಗಿಯೋ ಸೂಚನೆ ಕಾಣದೆ ಆಚೆ ಬಂದೆ.
ಪಾಪ ಅವರ ಜೀವನ ಏನೂ ಅಷ್ಟು ಸುಲಭವಿರಲಾರದು ಅನಿಸಿತು. ಮತ್ತೊಂದು ಗುಂಪು ಅಂಗಡಿಯಿಂದ ಮ್ಯಾಗಿ ತಗೊಂಡು ಬರ್ತಾ ಇತ್ತು. ಅದರಲ್ಲೊಂದು ಮಗು ಬಲೂನ್ ಊದಿಕೊಂಡು ಖುಷಿಯಾಗಿ ಬರ್ತಿತ್ತು. ಅಲ್ಲಿನ ಎಲ್ಲಾ ಕೆಲಸಗಳನ್ನು ಅಂದರೆ ಅಡಿಗೆ, ಸ್ವಚ್ಛತೆ ಇವುಗಳನ್ನು ನೋಡಿಕೊಳ್ಳೋರು ಈ ಹೆಣ್ಣು ಮಕ್ಕಳೇ. ತಮ್ಮ ಮೇಲು ಹೊದಿಕೆಯನ್ನು ಗಾಳಿಗೆ ಹಾರಿಸಿಕೊಂಡು ಓಡ್ತಾ ಅದನ್ನು ಗಾಳಿಗೆ ಉಬ್ಬಿಸುವ ಆಟ ಆಡುತ್ತಿದ್ದರು. ಹಾಗೆನೇ ಚೀಮೀ ಲಾಖಾಂಗ್ ಗೆ ಹೋಗಿದ್ದಾಗ ಅಲ್ಲಿಯ ಕಾವಿಯ ಪೋರರು ಕ್ರಿಕೆಟ್ ಆಡುತ್ತಾ ಕಚ್ಚಾಡುತ್ತಾ ಇದ್ದರು. ಮಕ್ಕಳು ಎಲ್ಲಿದ್ದರೂ ಮಕ್ಕಳೇ ಅದು ಮೊನೆಸ್ಟರಿ ಆಗಿರಬಹುದು ನನ್ನರಿಯಾಗಿರಬಹುದು, ನಮ್ಮನೆ ಮುಂದಿನ ಅಂಗಳದ ಮಗುವಾಗಿರಬಹುದು.

ಉದ್ದನೆಯ ಬಣ್ಣಬಣ್ಣದ ಬಟ್ಟೆಗಳನ್ನು ಕಂಬಗಳಿಗೆ ಕಟ್ಟಿರುತ್ತಾರೆ. ಇವೇ ಪ್ರೇಯರ್ ಫ್ಲ್ಯಾಗ್ಸ್. ಕೆಲವೊಮ್ಮೆ ಇವನ್ನು ಅಡ್ಡವಾಗಿಯೂ ಕಟ್ಟಿರುತ್ತಾರೆ. ಇವನ್ನು ಪ್ರಾರ್ಥನಾ ಬಾವುಟಗಳು ಎಂದು ಕರೆಯುವರು. ಈ ಬಟ್ಟೆಗಳ ಮೇಲೆಲ್ಲಾ ಸಾವಿರಾರು ಪ್ರೇಯರ್ಗಳನ್ನು ಬರೆದಿರುತ್ತಾರೆ. ಐದು ಬಣ್ಣಗಳಲ್ಲಿ ಪ್ರಾರ್ಥನಾ ಬಾವುಟಗಳು ಇರುತ್ತವೆ. ಹಳದಿ, ಬಿಳಿ, ಹಸಿರು, ನೀಲಿ, ಕೆಂಪು ಅವು ಪಂಚಭೂತಗಳನ್ನು ಸೂಚಿಸುತ್ತವೆ. ಬಿಳಿ ಶಾಂತಿಯ ಸಂಕೇತವಾಗಿದೆ. ಉದ್ದನೆಯ ಪ್ರಾರ್ಥನಾ ಬಾವುಟಗಳನ್ನು ಉದ್ದುದ್ದವಾಗಿ ಗುಂಪು ಗುಂಪಾಗಿ ನೆಟ್ಟಿದ್ದರೆ ಅದು ಸತ್ತಿರುವವರ ನೆನಪಿಗಾಗಿ ಎಂದು ಅರ್ಥ. ಇವುಗಳನ್ನು ಯಾವಾಗ ಯಾರು ಬೇಕಾದರೂ ಕಟ್ಟಬಹುದು.

ಊರ ತುಂಬಾ ಸಿಗುವ ಪ್ರಾರ್ಥನಾ ಚಕ್ರ ( ವೀಲ್ಸ್) ಗಳಿಲ್ಲದ ಜಾಗವೇ ಇಲ್ಲ. ಇವುಗಳ ಒಳಗೆ ಸಾವಿರಾರು ಪ್ರಾರ್ಥನೆಗಳನ್ನು ಸುರುಳಿ ಮಾಡಿ ಇಟ್ಟಿರುತ್ತಾರೆ. ಅದನ್ನು ತಿರುಗಿಸುವುದೇ ಅವರ ಪೂಜೆಯ ಒಂದು ಭಾಗ. ತಿರುಗಿಸಿದಷ್ಟೂ ಪಾಪ ಕಡಿಮೆ ಆಗುತ್ತದಂತೆ. ಒಂದು ಗಂಟೆ ಮಂತ್ರ ಹೇಳೋದು ಒಂದೇ ಒಂದು ಸಲ ಇದನ್ನು ತಿರುಗಿಸುವುದೂ ಒಂದೇ. ದೇವಾಲಯಗಳ ಒಳ ಪ್ರವೇಶಿಸುವ ಮುನ್ನ ಪ್ರಾರ್ಥನಾ ಚಕ್ರಗಳನ್ನು ದಾಟಿಯೇ ಹೋಗಬೇಕು.


ಹೋದ ದೇವಾಲಯಗಳಲ್ಲೆಲ್ಲ ಜನ ದೇವರನ್ನು ಬಿಟ್ಟು ಬೇರೆ ಯಾವುದೋ ದಿಕ್ಕಿಗೆ ನಮಸ್ಕರಿಸುವುದನ್ನು ನೋಡುತ್ತಲೇ ಇದ್ದೆ. ಕೊನೆಗೆ ತಿಳೀತು. ಅದು ಗುರು ಪೀಠಕ್ಕೆ ಸಲ್ಲಿಸುವ ಗೌರವ ಅಂತ. ದೇವರಿಗೆ ನಮಸ್ಕರಿಸುವ ಮುನ್ನ ಗುರು ಇರಲಿ, ಇಲ್ಲದಿರಲಿ ಆ ಪೀಠಕ್ಕೆ ಉದ್ಧಂಡ ಹಾಕಿದ ಮೇಲೆಯೇ ದೇವರ ಪೂಜೆ.
ಭೂತಾನ್ ಗೆ ಹೋಗುತ್ತೇನೆ ಅಂದಾಗ ಕೆಲವು ಸ್ನೇಹಿತರು ಅಲ್ಲಿನ ಮೊನಾಸ್ಟರಿಗಳಲ್ಲಿ, ಮಾಂಕ್ ಗಳ ಜೊತೆ ಧ್ಯಾನ ಮಾಡು, ಪ್ರಾರ್ಥನೆ ಮಾಡು ಅಂತ ಸಲಹೆ ಕೊಟ್ಟಿದ್ದರು. ನನಗೆ ಅಂಥ ಯಾವ ಫ್ಯಾನ್ಸಿ ಕಲ್ಪನೆಗಳೂ ತಲೆಯಲ್ಲಿ ಇರಲಿಲ್ಲ. ಮನೆಯಲ್ಲಿ ದಕ್ಕದ ಧ್ಯಾನ ದೂರದ ಯಾವುದೋ ಮೊನಾಸ್ಟರಿಯಲ್ಲಿ ಸಿಕ್ಕುತ್ತೆ ಅಂತ ನಾನು ಅಂದು ಕೊಂಡಿಲ್ಲ. ಬುದ್ದನೊಂದಿಗೆ ತಳುಕುಹಾಕಿಕೊಂಡಿರುವ ಈ ಯಾವುದರಲ್ಲೂ ಬುದ್ಧ ಮಾತ್ರ ಕಾಣಲಿಲ್ಲ.
(ಮುಂದುವರಿಯುವುದು…)
ಎಂ ಆರ್ ಗಿರಿಜಾ ಪ್ರವಾಸ ಕಥನ : ಮೊನೆಸ್ಟರಿ, ಪ್ರೇಯರ್‌ಫ್ಲಾಗ್‌ಗಳು ಮತ್ತು ಪ್ರೇಯರ್‌ವೀಲ್‌ಗಳು
ನಿಮಗೆ ಇವೂ ಇಷ್ಟವಾಗಬಹುದು…





ಮನೆಯಲ್ಲಿ ದಕ್ಕದ ಧ್ಯಾನ ದೂರದ ಯಾವುದೋ ಮೊನಾಸ್ಟರಿಯಲ್ಲಿ ಸಿಕ್ಕುತ್ತೆ ಅಂತ ನಾನು ಅಂದು ಕೊಂಡಿಲ್ಲ. ಬುದ್ದನೊಂದಿಗೆ ತಳುಕುಹಾಕಿಕೊಂಡಿರುವ ಈ ಯಾವುದರಲ್ಲೂ ಬುದ್ಧ ಮಾತ್ರ ಕಾಣಲಿಲ್ಲ. — liked it