ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಎಂಟಿವಿ’ ಜೊತೆ ಪುಟ್ಟ ಸಂದರ್ಶನ

ಪಾರ್ವತಿ ಐತಾಳ್

——

ಕೇರಳದ ತಿರೂರು ಎಂಂಬಲ್ಲಿ ಆಧುನಿಕ ಮಲೆಯಾಳ ಭಾಷೆಯ ಪಿತಾಮಹ ಮತ್ತು ಅಧ್ಯಾತ್ಮ ರಾಮಾಯಣ ಎಂಬ ಮಹಾಕಾವ್ಯದ ಕರ್ತೃ ೧೬ನೇ ಶತಮಾನದ ಕವಿ ತುಂಜತ್ತ್ ಎಳುತ್ತಚ್ಛನ್ ಅವರ ಸ್ಮಾರಕ ಕೇಂದ್ರವಿದೆ. ವಿವಿಧ ರೀತಿಗಳಿಂದ ಅಕ್ಷರ ಸರಸ್ವತಿ ಪೂಜೆ ನಡೆಸಲು ಬೇಕು ಬೇಕಾದ ಎಲ್ಲಾ ಸುವ್ಯವಸ್ಥೆಗಳಿರುವ ಒಂದು ಸ್ಥಳವಿದು.

ಮಲೆಯಾಳದ ಎಲ್ಲಾ  ಸಾಹಿತ್ಯ ಕೃತಿಗಳಿರುವ ಸುಸಜ್ಜಿತ ವಾಚನಾಲಯ,  ಸೆಮಿನಾರ್ ಹಾಲ್, ಕೆತ್ತನೆ ಕಂಬಗಳಿರುವ  ಸರಸ್ವತಿ  ಮಂಟಪ,  ರಾಮಾಯಣದ ಪದ್ಯವನ್ನು ಕಿವಿಗೆ ಹೇಳಿಕೊಟ್ಟಿತು ಎಂದು ನಂಬಲಾಗುವ ಗಿಳಿ ಮಂಟಪ, ಗಿಳಿಯ ಮುಂದೆ ಓಲೆ ಗರಿ ಮತ್ತು ಒಂದು ಕಂಠ (ಲೇಖನಿ),  ಆಶಾನ್( ಗುರು)ಮಂಟಪ,  ವಿಶೇಷ ದಿನಗಳಂದು ಜಾತಿ ಮತ ಲಿಂಗ ಭೇದಗಳಿಲ್ಲದೆ ಎಲ್ಲರೂ  ಪೂಜೆ ನಡೆಸುವ ಒಂದೇ ಕಲ್ಲಿನಲ್ಲಿ ಕೆತ್ತಿದ  ಶ್ರೀರಾಮ-ಗಣಪತಿ-ಸರಸ್ವತಿಯರು ಒಟ್ಟಾಗಿರುವ ಮೂರ್ತಿ ಇರುವ ಗುಡಿ, ವಿಶೇಷ ಕೊಳ , ಕಹಿಯಿಲ್ಲದ ಕಾಸರಕನ ಮರ,  ಮಲೆಯಾಳ ಸಾಹಿತ್ಯಕ್ಕೆ ಸಂಬಂಧಿಸಿದ ಮ್ಯೂಸಿಯಂ, ಸುಂದರವಾದ ಹೂದೋಟ ಇಲ್ಲಿವೆ. 

ವರ್ಷದಲ್ಲಿ ಆಗಾಗ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಇಲ್ಲಿ ಉಳಕೊಳ್ಳುವ ಅತಿಥಿಗಳಿಗಾಗಿ ಸುಸಜ್ಜಿತ ಕಾಟೇಜುಗಳಿವೆ. ಫೆಬ್ರವರಿ ಮೊದಲ ವಾರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಾಲ್ಕು ದಿನಗಳ ‘ತುಂಜನೋತ್ಸವ’ ಭಾರತದ ಎಲ್ಲ ಭಾಷೆಗಳ ಸಾಹಿತಿಗಳ ಪಾಲ್ಗೊಳ್ಳುವಿಕೆಯಲ್ಲಿ ಅತ್ಯಂತ ಸಡಗರದಿಂದ  ಮತ್ತು ಅರ್ಥಪೂರ್ಣವಾಗಿ ನಡೆಯುತ್ತಿದೆ.

ಇಂಥ ಒಂದು ಸಂಸ್ಥೆಯ ಸ್ಥಾಪನೆಗಾಗಿ ಹಗಲಿರುಳೆನ್ನದೆ ದುಡಿದವರು ಜ್ಞಾನಪೀಠ ವಿಜೇತ ಸಾಹಿತಿ ಶ್ರೀ ಎಂ.ಟಿ. ವಾಸುದೇವನ್ ನಾಯರ್ ಅವರು. ಈ ಬಾರಿ ನವರಾತ್ರಿ ಹಬ್ಬ ಮತ್ತು ವಿದ್ಯಾರಂಭ ಕಾರ್ಯಕ್ರಮದ ಉದ್ಘಾಟನೆಗೆಂದು ಹೋಗಿದ್ದಾಗ ಅವರನ್ನು ಭೇಟಿಯಾಗಿ ‘ಸಾಹಿತ್ಯಕ ಅನುವಾದ’ದ ಬಗ್ಗೆ ನನ್ನ ಮನಸ್ಸಿನಲ್ಲಿರುವ ಕೆಲವು ಸಂದೇಹಗಳನ್ನು ಕೇಳಿ ಒಂದು ಪುಟ್ಟ ಸಂದರ್ಶನ ನಡೆಸಿದೆ. ಅದರ ಒಂದು ಝಲಕ್ ಇಲ್ಲಿದೆ.

ವಾಸುದೇವನ್ ನಾಯರ್ ಗೆ ಈಗ ತೊಂಬತ್ತು ವರ್ಷ ವಯಸ್ಸು. ಕಿವಿ ಸರಿಯಾಗಿ ಕೇಳುವುದಿಲ್ಲ. ನಾವು ತುಂಬಾ ಗಟ್ಟಿಯಾಗಿ ಮಾತನಾಡಬೇಕು ಮತ್ತು ಅವರು ತಗ್ಗಿಸಿದ ಧ್ವನಿಯಲ್ಲಿ ಉತ್ತರಿಸುತ್ತಾರೆ.ಇಂಥ ಸಮಸ್ಯೆಗಳ ನಡುವೆಯೇ ಸಂದರ್ಶನ ನಡೆಯಿತು. ಪ್ರಶ್ನೋತ್ತರಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ :

ಪಾರ್ವತಿ :  ಸಾಹಿತ್ಯದಲ್ಲಿ ಅನುವಾದ ಅನ್ನುವ ಪ್ರಕಾರವು ಇವತ್ತು ವೇಗದ ಬೆಳವಣಿಗೆಯನ್ನು ಸಾಧಿಸಿದೆ. ಲೋಕ ಭಾಷೆಗಳ ನಡುವೆ ಆದಾನ-ಪ್ರದಾನಗಳು ಇವತ್ತಿನ ಸಂದರ್ಭದಲ್ಲಿ ಬಹಳ ಅನಿವಾರ್ಯವಾಗಿವೆ.  ಇದರ ಬಗ್ಗೆ ನೀವು ಏನು ಹೇಳುತ್ತೀರಿ?

ಉತ್ತರ : ಸಾಹಿತ್ಯ ಕ್ಷೇತ್ರದಲ್ಲಿ ಅನುವಾದದ ಅಗತ್ಯ ತುಂಬಾ ಇದೆ ಅನ್ನುವ ಮಾತನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ.  ಇನ್ನೊಂದು ಸಾಹಿತ್ಯದಲ್ಲಿ ಇರುವುದನ್ನು ತಿಳಿದುಕೊಳ್ಳಲು- ಹೊಸ ಗಾಳಿ -ಹೊಸ ಬಎಳಕಉಗಳನ್ನಉ ಬರಮಾಡಿಕೊಳ್ಳಲು ನಮ್ಮ ಮನಸ್ಸಿನ ಕಿಟಕಿ ಬಾಗಿಲುಗಳು ಸದಾ ತೆರೆದುಕೊಂಡಿರಬೇಕು. ಬರೇ ನಮ್ಮ ಸಾಹಿತ್ಯ ಎಂದು ಕುಳಿತರೆ ನಾವು ಬೆಳೆಯುವುದಿಲ್ಲ.  ಕೆಲವು ಭಾಷೆಗಳ ಜನರು ತಮ್ಮ ಭಾಷೆಯಿಂದ ಇತರ ಭಾಷೆಗಳಿಗೆ ಮಾಡುವ ಅನುವಾದಗಳ  ಬಗ್ಗೆ ತುಂಬಾ ಆಸಕ್ತಿ ತೋರಿಸುತ್ತಾರೆ.‌ ಆದರೆ ಇತರ ಭಾಷೆಗಳಿಂದ ತಮ್ಮ ಭಾಷೆಗೆ ಬಂದ ಅನುವಾದಗಳನ್ನು ಓದುವುದೇ ಇಲ್ಲ. ಹಾಗಾಗಬಾರದು. ಭಾಷೆಗಳ ನಡುವೆ ಸಾಹಿತ್ಯದ ವಿನಿಮಯವಾಗ ಬೇಕು. ಮತ್ತು ಎಲ್ಲರೂ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸ ಬೇಕು.

ಪಾರ್ವತಿ :  ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವಾಗ ಮೂಲಕೃತಿಯ ಸತ್ವ ಕೆಲವೊಮ್ಮೆ  ಸೋರಿ ಹೋಗುತ್ತದೆ ಅನ್ನುತ್ತಾರೆ.‌ ಅದು ಕೆಲವೊಮ್ಮೆ ಅನುವಾದಕರ ಅಜಾಗರೂಕತೆಯಿಂದಲೂ ಆಗಬಹುದು. ಕೆಲವೊಮ್ಮೆ ಸಾಂಸ್ಕೃತಿಕವಾಗಿ ಇರುವ ವ್ಯತ್ಯಾಸಗಳಿಂದಾಗಿ ಅನುವಾದಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಅನಿವಾರ್ಯವಾಗಿ ಆಗಬಹುದು. ಇದರ ಬಗ್ಗೆ ಕನ್ನಡದ ಪ್ರಸಿದ್ಧ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅವರು ಒಮ್ಮೆ ಹೇಳಿದ ಮಾತುಗಳನ್ನು ನಾನು ಇಲ್ಲಿ ನೆನಪಿಸಿಕೊಳ್ಳುತ್ತೇನೆ: Translation –whether it is good or bad– the very fact that it is getting translated is something to be noted –ಅಂತ. ಈ ಬಗ್ಗೆ ನೀವು ಏನು ಹೇಳುತ್ತೀರಿ?

ಎಂಟಿವಿ : ಸಿ.ಎನ್.ರಾಮಚಂದ್ರನ್ ಸರಿಯಾಗಿಯೇ ಹೇಳಿದ್ದಾರೆ. ಭಾಷಾಂತರಗೊಳ್ಳುವದೇ ಒಂದು ಮಹತ್ವದ   ವಿಚಾರ . ಅದರಲ್ಲಿ ಕೊರತೆಗಳನ್ನು ಹುಡುಕುವುದು ಸುಲಭ. ಆದರೆ ಆ ಕೊರತೆಗಳನ್ನು ನೀಗಿಸುವುದು ಕಷ್ಟ. ಆದರೂ ಅನುವಾದ ಮಾಡುವವರು ತುಂಬಾ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಮೂಲಕೃತಿಯ ಸತ್ವ ಮತ್ತು ಸೌಂದರ್ಯ ಗಳನ್ನು ಉಳಿಸಿಕೊಳ್ಳಲು ತಮ್ಮಿಂದಾದ ಶ್ರಮ ವಹಿಸಬೇಕು.

ಪಾರ್ವತಿ :  ನಾನು ಒಬ್ಬ ಅನುವಾದಕಿ. ನನ್ನ ಮಾತೃಭಾಷೆ ಕನ್ನಡ. ಮತ್ತು ನಾನು ಶಾಲೆಯಲ್ಲಿ ಓದಿದ್ದು ಕೂಡಾ ಕನ್ನಡ.  ಸ್ವಂತ ಪರಿಶ್ರಮದಿಂದ ಮಲೆಯಾಳ ಓದಲು ಮತ್ತು ಬರೆಯಲು ಕಲಿತೆ.  ಮಲೆಯಾಳದಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಮಲೆಯಾಳದಿಂದ ಕನ್ನಡಕ್ಕೆ ಅನುವಾದ ಮಾಡುವವರು ಕರ್ನಾಟಕದಲ್ಲಿ ತುಂಬಾ ಮಂದಿ ಇದ್ದಾರೆ ಹಾಗೂ ಕನ್ನಡದಿಂದ ಮಲೆಯಾಳಕ್ಕೆ  ನೇರವಾಗಿ ಅನುವಾದಿಸುವವರು ಯಾರೂ ಇಲ್ಲ(ಒಬ್ಬಿಬ್ಬರು ಇದ್ದವರು ಈಗ ತೀರಿ ಹೋಗಿದ್ದಾರೆ)ಅನ್ನುವುದನ್ನು ಗಮನಿಸಿ  ಬಹಳ ಕಷ್ಟ ಪಟ್ಟು  –ಯಾಕೆಂದರೆ, ನಿಮಗೆ ಗೊತ್ತಿದೆ,  ನಮ್ಮದಲ್ಲದ ಒಂದು ಭಾಷೆಗೆ ಅನುವಾದಿಸುವುದು ಸುಲಭವಲ್ಲ– ನಾನು ಐದು ಕನ್ನಡ ಕೃತಿಗಳನ್ನು ಮಲೆಯಾಳಕ್ಕೆ ಅನುವಾದಿಸಿ ಪ್ರಕಟಿಸಿದೆ.  ಅದಕ್ಕೆ ಮಲೆಯಾಳಿಗಳು ಸಹಾಯವನ್ನು ತೆಗೆದುಕೊಂಡಿದ್ದೆ. ಆದರೆ ಅವುಗಳ ಕ್ವಾಲಿಟಿ ಚೆನ್ನಾಗಿಲ್ಲ ಅಂತ ನನ್ನ ಮಲೆಯಾಳಿ ಫ್ರೆಂಡ್ಸ್ ಹೇಳಿದರು. ಇದಕ್ಕೆ ಪರಿಹಾರವೇನು? ನಾನು ಮಲೆಯಾಳಕ್ಕೆ ಅನುವಾದಿಸುವುದನ್ನು ನಿಲ್ಲಿಸುವುದೆ? ಇವತ್ತಿನ ಯುವ ಮಲೆಯಾಳಿಗಳು ಕನ್ನಡ ಕಲಿತು ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದರೆ ತುಂಬಾ ಸಂತೋಷ.

ಎಂಟಿವಿ : ಇದಕ್ಕೆ ಪರಿಹಾರವೆಂದರೆ ಮಲೆಯಾಳಿಗಳು ಕನ್ನಡ ಕಲಿತು ಕನ್ನಡದಿಂದ ಮಲೆಯಾಳಕ್ಕೆ ಅನುವಾದಿಸುವುದು. ಅವರು ಮುಂದೆ ಬರಬೇಕು.

ಪಾರ್ವತಿ : ನಮ್ಮದು ಬಹುಭಾಷಾ ದೇಶ. ಆದರೆ ಒಂದು ಪ್ರದೇಶದ ಮಂದಿಗೆ ಪಕ್ಕದಲ್ಲೇ ಇರುವ ಇನ್ನೊಂದು ಪ್ರದೇಶದವರ ಭಾಷೆ ಗೊತ್ತಿಲ್ಲ.‌ ಈಗ ಆಗುತ್ತಿರುವ ಅನುವಾದಗಳಲ್ಲಿ ಹೆಚ್ಚಿನವುಗಳೂ ಇಂಗ್ಲಿಷ್ ಮೂಲಕ ಆಗುತ್ತಿವೆ ಅನ್ನುವುದು ಖೇದಕರ .ಆದ್ದರಿಂದ ಇಂದಿನ ಯುವ ಜನಾಂಗಕ್ಕೆ ತಮ್ಮದಲ್ಲದ ಇನ್ನೊಂದು ಭಾಷೆಯನ್ನು ಕಲಿಸುವ ವ್ಯವಸ್ಥೆಯಾಗಬೇಕು. ಭಾಷಾ ಸೌಹಾರ್ದವೆನ್ನು ವುದು ಮೊದಲಿನಿಂದಲೂ ತುಂಜನ್ ಸ್ಮಾರಕ ಕೇಂದ್ರದ  ಮುಖ್ಯ ಉದ್ದೇಶಗಳಲ್ಲೊಂದು. ಈ ಕೇಂದ್ರವನ್ನು ಕಟ್ಟಿ ಬೆಳೆಸಿದವರು ನೀವು. ಇಲ್ಲಿ ಒಂದು ವಿವಿಧ ಭಾಷಾ ಅಧ್ಯಯನ ಕೇಂದ್ರ ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಬಹುದಲ್ಲವೇ? ಕರ್ನಾಟಕದಲ್ಲಿ ವಿವಿಧ ಭಾಷೆಗಳ ನಡುವೆ ಅನುವಾದವನ್ನು ಪ್ರೋತ್ಸಾಹಿಸಲು ಒಂದು ಅಕಾಡೆಮಿಯೇ ಇದೆ. ಕುವೆಂಪು ಅವರ ಹೆಸರಿನಲ್ಲಿ. 

ಎಂಟಿವಿ :  ಖಂಡಿತಾ ಒಳ್ಳೆಯದು. ತುಂಜನ್ ಸ್ಮಾರಕ ಕೇಂದ್ರದ ಮುಂದಿನ ಯೋಜನೆ ಅದುವೇ.

ಪಾರ್ವತಿ :  ಒಂದು ಅನುವಾದಿತ ಕೃತಿ ಪೂರ್ತಿಯಾಗಿ ಒಬ್ಬ ಅನುವಾದಕನದ್ದು. ಅದರ ರಚನೆಯ ಹಿಂದಿನ ಪ್ರತಿಭೆ, ಪಾಂಡಿತ್ಯ ಮತ್ತು ಪರಿಶ್ರಮ ಅನುವಾದಕನದ್ದು. ಆದರೆ ಪುಸ್ತಕವನ್ನು ಪ್ರಕಟಿಸುವವರು–ಕೇಂದ್ರ ಸಾಹಿತ್ಯ ಅಕಾಡೆಮಿ ಕೂಡಾ–ಮೂಲ ಕೃತಿಕಾರರಿಗೆ  ಹೆಚ್ಚು ಪ್ರಾಶಸ್ತ್ಯ -ಪ್ರಾಮುಖ್ಯಗಳನ್ನು ಕೊಡುತ್ತಾರೆ.  ಹೆಸರು, ಕೀರ್ತಿ, ಸಂಭಾವನೆ- ಎಲ್ಲದರಲ್ಲೂ ದೊಡ್ಡ ಪಾಲು ಮೂಲಕೃತಿಕಾರರಿಗೆ. ಇದು ಅನ್ಯಾಯವಲ್ಲವೆ?

ಎಂಟಿವಿ : ಹೌದು. ಇದು ಅನ್ಯಾಯ. ಇದು ಬದಲಾಗಬೇಕು. ಅನುವಾದಕರಿಗೆಯೇ ಹೆಚ್ಚಿನ ಪಾಲು ಸಂದಾಯವಾಗಬೇಕು.

ಪಾರ್ವತಿ :  ನಿಮ್ಮ ಹೆಚ್ಚು -ಕಡಿಮೆ ಎಲ್ಲಾ ಕೃತಿಗಳು ಕನ್ನಡಕ್ಕೆ ನೇರ ಅನುವಾದದ ಮೂಲಕ ಬಂದಿವೆ. ಕನ್ನಡದ ಓದುಗರಿಗೆ ನಿಮ್ಮ ಹೆಸರು ಚಿರಪರಿಚಿತ. ಕನ್ನಡದವರು ಈ ಬಗ್ಗೆ ನಿಮ್ಮ ಹತ್ತಿರ ಅಭಿಪ್ರಾಯ ಹಂಚಿಕೊಂಡದ್ದು ಇದೆಯೇ?ಕನ್ನಡದ ಸಾಹಿತಿಗಳೊಂದಿಗೆ ನಿಮ್ಮ ಸಂಪರ್ಕ-ಸಂಬಂಧಗಳು ಹೇಗಿವೆ?

ಎಂಟಿವಿ :  ಕರ್ನಾಟಕಕ್ಕೆ ನಾನೂ ಅನೇಕ ಸಾಹಿತ್ಯ ಕಾರ್ಯಕ್ರಮಗಳಿಗೆ ಬಂದಿದ್ದೇನೆ.  ಮುಖ್ಯವಾಗಿ ಬೆಂಗಳೂರು, ಮಂಗಳೂರು, ಉಡುಪಿ, ಹೆಗ್ಗೋಡುಗಳಿಗೆ. ತುಂಬಾ ಮಂದಿ ನನ್ನ ಹತ್ತಿರ ನನ್ನ ಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಅನುವಾದಿಸಿದ ನಾಲ್ಕು ಕೃತಿಗಳ ಅನುವಾದವೂ ಬಹಳ ಚೆನ್ನಾಗಿ ಬಂದಿದೆಯೆಂದು ಹೇಳಿದ್ದಾರೆ. ದೊಡ್ಡ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಲಂಕೇಶ್, ಕಾರ್ನಾಡ್, ಕಂಬಾರ್, ಆಲನಹಳ್ಳಿ ಯವರು ನನಗೆ ಒಳ್ಳೆಯ ಸ್ನೇಹಿತರು. ನನ್ನನ್ನು ಕನ್ನಡಕ್ಕೆ ಒಳ್ಳೆಯ ರೀತಿಯಲ್ಲಿ ಪರಿಚಯಿಸಿದ ಎಲ್ಲಾ ಅನುವಾದಕರಿಗೆ ನಾನು ಕೃತಜ್ಞನಾಗಿದ್ದೇನೆ.

ಪಾರ್ವತಿ: ಅನುವಾದದ ಕುರಿತು ನನ್ನನ್ನು ಕಾಡುತ್ತಿದ್ದ ಕೆಲವು ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರ ನೀಡಿದ್ದೀರಿ. ನಿಮಗೆ ಅನಂತ ಧನ್ಯವಾದಗಳು. ನಮಸ್ಕಾರ.

‍ಲೇಖಕರು avadhi

23 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading