ಎಂಜಲೆಲೆಯ ಕ್ರೌರ್ಯ ಸಂಸ್ಕೃತಿಯ ಔದಾರ್ಯ…

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆ, ವಿಚಾರ ಮಥನ ಇಲ್ಲಿನ ಮುಖ್ಯ ಉದ್ಧೇಶ. ನಾ ದಿವಾಕರ್ ಅವರು ಮಡೆ ಮೇಡ್ ಸ್ನಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಬನ್ನಿ ನೀವೂ ಭಾಗವಹಿಸಿ. ** -ನಾ ದಿವಾಕರ ಭಾರತ ಬಹುಸಂಸ್ಕೃತಿಗಳ, ಬಹುಭಾಷೆಗಳ, ಬಹುಧರ್ಮಗಳ, ಬಹುಜಾತಿಗಳ ದೇಶವಷ್ಟೇ ಅಲ್ಲ ಬಹುಮೌಢ್ಯಗಳ ದೇಶವೂ ಹೌದು ಎಂದು ನಿರೂಪಿಸಲು ಕುಕ್ಕೆ ಸುಬ್ರಮಣ್ಯದ ಮಡೆಸ್ನಾನ ಪದ್ಧತಿಯೇ ಸಾಕ್ಷಿ. ಹಾಗೆ ನೋಡಿದರೆ ಕುಕ್ಕೆ ಸುಬ್ರಮಣ್ಯ ಕ್ಷೇತ್ರವೇ ಮೂಢ ನಂಬಿಕೆಗಳ ನೆಲೆಬೀಡು. ಯಾರ ತಂಟೆಗೂ ಹೋಗದೆ ತಮ್ಮ ಪಾಡಿಗೆ ಹುತ್ತಗಳಲ್ಲಿ ಸೇರಿಕೊಂಡು ಭೂತಳದಲ್ಲಿ ಶಾಖ ಹೆಚ್ಚಾದಾಗ ಹೊರಬರುವ ಹಾವುಗಳು ಈ ಧರ್ಮ ಕ್ಷೇತ್ರದ ಮೂಲ ಬಂಡವಾಳ. ಹಾವಿನ ಸುತ್ತ ಸೃಷ್ಟಿಸಲಾಗಿರುವ ಅನೇಕ ಮಿಥ್ಯೆಗಳು, ಮೂಢನಂಬಿಕೆಗಳೇ ಸುಬ್ರಮಣ್ಯದ ಔದ್ಯಮಿಕ ಮಾರುಕಟ್ಟೆ ಕ್ಷೇತ್ರ. ಇನ್ನು ಸುಬ್ರಮಣ್ಯ ಶಿವಪುತ್ರನಲ್ಲವೇ. ಅಪ್ಪನ ಕೊರಳಿನ ಹಾವು ತನ್ನ ಪೀಠವಾದರೆ ಆತನಿಗೇನೂ ಕೊರತೆಯಿಲ್ಲ. ಭಕ್ತಾದಿಗಳು ಹೆಚ್ಚಾಗುತ್ತಾರೆ. ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಮನದಾಳದಲ್ಲಿ ಹಾವುಗಳ ಬಗ್ಗೆ ಇರುವ ಭೀತಿಯೇ ಕನಸಿನಲ್ಲೂ ಕಾಡುತ್ತವೆ. ಆದರೆ ಈ ರೀತಿ ಕಾಣಿಸಿಕೊಂಡ ಕೂಡಲೇ ಭಕ್ತಾದಿಗಳಿಗೆ ನೆನಪಾಗುವುದು ಕುಕ್ಕೆ. ಇಲ್ಲಿಗೆ ಬಂದು ನಾಗ ಪ್ರತಿಷ್ಠೆ ಮಾಡಿಸಿದರೆ, ಅಥವಾ ಪೂಜೆ ಮಾಡಿಸಿದರೆ ನಾಗದೋಷ ಪರಿಹಾರವಾಗುವುದು ಎಂಬುದು ಅಳಲೆಕಾಯಿ ಪಂಡಿತರ ವ್ಯಾಖ್ಯಾನ. ಇದಕ್ಕೆ ಬಲಿಯಾಗುವವರಲ್ಲಿ ಶ್ರೀಮಂತ ಸುಶಿಕ್ಷಿತರೇ ಹೆಚ್ಚು. ಏಕೆಂದರೆ ಬಡಜನತೆ ತಮ್ಮ ಮನೆಯ ಮುಂದಿನ ಹುತ್ತಕ್ಕೇ ಹಾಲೆರೆದು ಕೈತೊಳೆದುಕೊಳ್ಳುತ್ತಾರೆ.ಇನ್ನು ಯಾವುದಾದರೂ ಮಗುವಿಗೆ ಜನ್ಮತಃ ನಾಗದೋಷ ಇದೆಯೆಂದು ಪಂಡಿತೋತ್ತಮರು(?) ಹೇಳಿದರೆ ಸಾಕು ಇಡೀ ಕುಟುಂಬವೇ ಕುಕ್ಕೆಗೆ ದೌಡಾಯಿಸುತ್ತದೆ. ಅಲ್ಲೊಂದು ಹೋಮ, ಹವನ, ನಾಗ ಪ್ರತಿಷ್ಠೆ ಮಾಡಿಸಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಂಡು, ಶೈಕ್ಷಣಿಕ ಪ್ರತಿಷ್ಠೆಯನ್ನು ಕುಗ್ಗಿಸುತ್ತಾರೆ. ಈ ಕ್ಷೇತ್ರದ ಬಗ್ಗೆ ಮತ್ತೊಂದು ಪ್ರತೀತಿ ಇದೆ. ಇಲ್ಲಿಗೆ ಭೇಟಿ ನೀಡಿದ ಮೇಲೆ ಮತ್ತಾವುದೇ ಧರ್ಮ ಕ್ಷೇತ್ರಗಳಿಗೆ ಹೋಗಕೂಡದು ! ಅಂದರೆ ನಿಮ್ಮ ಪ್ರವಾಸದ ಕೊನೆಯ ತಾಣ ಕುಕ್ಕೆ ಆಗಿರಬೇಕು. ಧರ್ಮ ಕ್ಷೇತ್ರಗಳಲ್ಲಿ ಮೂಢನಂಬಿಕೆಗಳು ಸಾಂಪ್ರದಾಯಿಕ ಪಾವಿತ್ರ್ಯತೆ ಪಡೆದುಕೊಳ್ಳುವುದರಿಂದ ಯಾವುದೇ ಅವೈಜ್ಞಾನಿಕ ಆಚರಣೆಗಳಿಗೂ ಒಂದು ಮಿಥ್ಯೆಯನ್ನು ಸೃಷ್ಟಿಸಿ ಪ್ರಚಾರ ಮಾಡಲಾಗುತ್ತದೆ. ಪ್ರಸ್ತುತ ಮಡೆ ಸ್ನಾನ ಅಥವಾ ಉರುಳುಸೇವೆಯೂ ಇದೇ ಪ್ರವೃತ್ತಿಯ ಮತ್ತೊಂದು ಕರಾಳ ಮುಖ. ಮಡೆ ಸ್ನಾನ ಎಂದರೆ ಬ್ರಾಹ್ಮಣರು ಊಟ ಮಾಡಿ ಬಿಟ್ಟ ಎಂಜಲೆಲೆಯ ಮೇಲೆ ಉರುಳುವ ಮೂಲಕ ಉರುಳು ಸೇವೆ ಮಾಡಿದರೆ ಚರ್ಮರೋಗ ಪರಿಹಾರವಾಗುತ್ತದೆ ಎಂದು ನಂಬಿಕೆ. ಇಲ್ಲಿ ಮಡೆ ಎಂದರೆ ದೇವರಿಗೆ ಅರ್ಪಿಸಿದ ಎಡೆ ಅಥವಾ ನೈವೇದ್ಯ ಎಂದು ಅರ್ಥ(ನಿಘಂಟಿನ ಪ್ರಕಾರ). ಅಂದರೆ ವಿಪ್ರರು ಊಟ ಮಾಡಿಬಿಟ್ಟ ಎಂಜಲೆಲೆ ದೇವರಿಗೆ ನೈವೇದ್ಯ ಎಂದಂಥಾಯಿತು. ಈ ನೈವೇದ್ಯದ ಮೇಲೆ ಉರುಳಿದರೆ ಚರ್ಮ ರೋಗ ಪರಿಹಾರ ಸಿದ್ಧ ಎಂದು ನಂಬುತ್ತಾರೆ. ಕಳೆದ ಹಲವು ವರ್ಷಗಳಿಂದ ಇದನ್ನು ಮಾಡುತ್ತಿರುವುದಾಗಿಯೂ ಕೆಲವರು ಹೇಳಿದ್ದಾರೆ. ಅಂದರೆ ಅವರ ರೋಗನಿವಾರಣೆಯಾಗಿಲ್ಲ ಎಂದರ್ಥ. ಇಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ದೇವರಿಗೆ ನೈವೇದ್ಯ ಮಾಡಿದ ನಂತರವೇ ಬ್ರಾಹ್ಮಣರಿಗೆ ಊಟ ಬಡಿಸುವುದು ಧಾರ್ಮಿಕ ಅಚರಣೆ. ಆದರೆ ವಿಪ್ರರ ಎಂಜಲೆಲೆ ಮಡೆ ಹೇಗಾಗುತ್ತದೆ ? ಇದನ್ನು ಭಕ್ತಾದಿಗಳು, ವಿಪ್ರೋತ್ತಮರು, ಪೌರೋಹಿತ್ಯದ ಅಧಿಪತಿಗಳು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ? ಹೀಗೆ ಮಾಡಿದರೆ ನಾಗದೇವತೆ ಮತ್ತು ಒಡೆಯ ಸುಬ್ರಮಣ್ಯ ಸಿಟ್ಟಾಗುವುದಿಲ್ಲವೇ ? ಇರಲಿ. ಈ ಎಲೆಗಳ ಮೇಲೆ ಉರುಳಿದರೆ ಚರ್ಮ ರೋಗ ಹೇಗೆ ವಾಸಿಯಾಗುತ್ತದೆ ? ಅಂತಹ ಔಷದೀಯ ಗುಣಗಳು ಬ್ರಾಹ್ಮಣರ ಎಂಜಲೆಲೆಯಲ್ಲಿದ್ದರೆ ಮಡೆಸ್ನಾನವನ್ನು ಕುಕ್ಕೆಯಲ್ಲಿ ಮಾತ್ರ ಏಕೆ ಮಾಡಬೇಕು, ಎಲ್ಲೆಡೆಯೂ ಮಾಡಬಹುದಲ್ಲವೇ ? ಚರ್ಮರೋಗ ತಜ್ಞರಿಗೆ ವಿಶ್ರಾಂತಿಯಾದರೂ ದೊರಕೀತು ! ಇನ್ನು ನ್ಯಾಯಾಧೀಶರೂ, ವಕೀಲರು, ವೈದ್ಯರೂ ಮಡೆ ಸ್ನಾನ ಮಾಡುತ್ತಾರೆ ಎಂಬ ಅಚ್ಚರಿಯನ್ನು ಕುರಿತ ವ್ಯಾಖ್ಯಾನ. ಈ ಸುಶಿಕ್ಷಿತ ಸಮುದಾಯದಲ್ಲಿ ಮೂಢನಂಬಿಕೆಗಳು ಇರಬಾರದು ಎಂದು ಅಪೇಕ್ಷಿಸುವುದೇ ತಪ್ಪಲ್ಲವೇ ? ಇಂದು ಧಾರ್ಮಿಕ ಆಚರಣೆಗಳಲ್ಲಿ ಮೂಢನಂಬಿಕೆಗಳು ಮತ್ತು ಢಂಬಾಚಾರಗಳು ಹೆಚ್ಚಾಗಿದ್ದರೆ ಅದಕ್ಕೆ ಸುಶಿಕ್ಷಿತ ಸಮುದಾಯವೇ ಕಾರಣವಲ್ಲವೇ ? ಒಮ್ಮೆ ನಗರಗಳಲ್ಲಿನ ಹೋಮ ಕುಂಡಗಳತ್ತ ಕಣ್ಣು ಹಾಯಿಸಿದರೆ ತಿಳಿಯುತ್ತದೆ. ಇಲ್ಲಿ ಪ್ರಶ್ನೆ ಇರುವುದು ಮೂಢನಂಬಿಕೆಗಿಂತಲೂ ನಮ್ಮ ಸುಶಿಕ್ಷಿತ ಸಮಾಜದಲ್ಲಿ ಅಡಕವಾಗಿರುವ ಕ್ರೌರ‍್ಯ. ತಾನು ತಿಂದ ಎಲೆಯನ್ನು ತೆಗೆಯದೆ ಕೈತೊಳೆದು ಮೇಲೇಳುವುದೇ ಅಮಾನವೀಯ ಪದ್ಧತಿಯ ದ್ಯೋತಕ. ಅಂದರೆ ನಾವು ಬಿಟ್ಟ ಎಂಜಲನ್ನು ಮತ್ತೊಬ್ಬರು ತೆಗೆಯುತ್ತಾರೆ ಎಂದು ಭಾವಿಸುವ ಒಂದು ಸಾಮಾಜಿಕ ಪರಿಕಲ್ಪನೆ ಇಲ್ಲಿ ಅಡಗಿದೆ. ಇದು ಸಾರ್ವತ್ರಿಕವಾಗಿ ಸ್ವೀಕೃತವೂ ಆಗಿರುವುದರಿಂದ ಸಮೂಹ ಭೋಜನಗಳಲ್ಲಿ ಸಾಮಾನ್ಯವಾಗಿ ಯಾರೂ ಎಲೆ ತೆಗೆಯುವುದಿಲ್ಲ. ಆದರೆ ತಮ್ಮ ಎಂಜಲೆಲೆಯ ಮೇಲೆ ಉರುಳುವ ಜನರನ್ನು ಧನ್ಯ ಭಾವದಿಂದ, ಪಾವಿತ್ರ್ಯತೆಯ ಅಹಂನಿಂದ ನೋಡುತ್ತಾ ನಿಲ್ಲುವ ವಿಪ್ರೋತ್ತಮವ ಮನದಾಳದಲ್ಲಿ ಕ್ರೌರ‍್ಯವನ್ನು ಹೇಗೆ ಬಣ್ಣಿಸುವುದು ? ಮಡೆ ಸ್ನಾನ ಕುಕ್ಕೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಆಚರಣೆ ಇರಬಹುದು. ಇದನ್ನು ವರ್ಷಕ್ಕೊಮ್ಮೆ ಪ್ರತಿಭಟಿಸಲೂಬಹುದು. ಆದರೆ ಪೌರೋಹಿತಶಾಹಿ ವ್ಯವಸ್ಥೆಯ ಗರ್ಭದಲ್ಲಿ ಅಡಗಿರುವ ಈ ಕ್ರೌರ‍್ಯ ನಿತ್ಯ ನಿರಂತರ ಗೋಚರಿಸುತ್ತಲೇ ಇರುತ್ತದೆ. ವಿಭಿನ್ನ ಸ್ವರೂಪಗಳಲ್ಲಿ. ಪ್ರಗತಿಪರರು ಮೂಲಭೂತವಾಗಿ ಪ್ರತಿಭಟಿಸಬೇಕಿರುವುದು ಈ ಕ್ರೌರ‍್ಯವನ್ನು. ನೋಡಿ ನಮ್ಮ ಎಂಜಲೆಲೆಯೇ ನಿಮ್ಮ ರೋಗ ನಿವಾರಣೆ ಮಾಡುತ್ತದೆ ಎಂದು ಅನ್ಯರಿಗೆ ಸವಾಲೊಡ್ಡುವ ಈ ಅನಿಷ್ಠ ಪದ್ಧತಿ ಮತ್ತೊಂದೆಡೆ ನೋಡಪ್ಪಾ ಸುಬ್ರಮಣ್ಯ ನಮ್ಮ ಎಂಜಲನ್ನೇ ನಿನಗೆ ನೈವೇದ್ಯವನ್ನಾಗಿ ಇರಿಸಿದ್ದೇವೆ ಎಂದು ದೇವರಿಗೂ ಸವಾಲೊಡ್ಡುತ್ತದೆ. ಈ ಕ್ರೌರ‍್ಯವನ್ನು ನಿರ್ಮೂಲ ಮಾಡದ ಹೊರತು ಭಾರತೀಯ ಸಮಾಜ ಪಾತಾಳ ಸೂಜಿ ಹಾಕಿದರೂ ಮೌಢ್ಯದ ಕೂಪದಿಂದ ಮೇಲೇಳಲು ಸಾಧ್ಯವಿಲ್ಲ.]]>

‍ಲೇಖಕರು G

December 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. Santhosh Shetty

    <>
    ಧರ್ಮಸ್ಥಳದಲ್ಲಿ, ಹೊರನಾಡಿನಲ್ಲಿ ಎಲ್ಲಾ ಸಮುದಾಯದವರೂ ಊಟ ಮಾಡುತ್ತಾರೆ, ಹಾಗೆಯೇ ಅವರ ಎಲೆಗಳನ್ನೂ(ತಟ್ಟೆ) ಅವರು ತೆಗೆದಯುವುದಿಲ್ಲ. ಇದು ಯಾರ ಅಹಂಕಾರದ ಧ್ಯೋತಕ?

    ಪ್ರತಿಕ್ರಿಯೆ
    • ರವಿ

      ಸಂತೋಷ್,
      ನೀವು ಹುದ್ದೆಯ ದೃಷ್ಟಿಯಿಂದ ಬುದ್ಧಿವಂತ ಮತ್ತು ದಡ್ಡ ಎಂಬುದಾಗಿ ವರ್ಗೀಕರಿಸ ಹೊರಟಿದ್ದೀರಿ, ಅದು ಎಷ್ಟು ಸಮಂಜಸವಾದದ್ದು? ಶಿಕ್ಷಿತನಾದನೆಂದರೆ ಅವನ ಕ್ಷೇತ್ರದಲ್ಲಿ ಬುದ್ಧಿವಂತನಿರಬಹುದು ಎಲ್ಲಾ ಕ್ಷೇತ್ರದಲ್ಲಿ ಆಗಿರಬೇಕಾಗಿಲ್ಲ. ನಂಬಿಕೆಯನ್ನು ವಿಮರ್ಷೆಗೆ ಒಳಪಡಿಸದೆ ಅದೇ ದಾರಿಯಲ್ಲಿ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗುವುದೆ ಈ ರೀತಿಯ ಕೆಟ್ಟ ಆಚರಣೆ ಜೀವಂತವಿರಲು ಕಾರಣವಾಗಿದೆ.
      ಇದಕ್ಕೆ ಒಂದು ಉದಾಹರಣೆ ಎಂದರೆ ಈಗಿನ ಇಸ್ರೊ ಚೇರಮನ. ಅವರನ್ನು ಚೇರಮನ ಮಾಡಿದನ್ನು ಗುರುವಾಯುರಪ್ಪನ ಕೃಪೆ ಎಂದಿದ್ದರು, ಅವರಿಗೆ ಅವರ ಪರಿಣಿತಿಗಿಂತ ಬೇರೆ ವಿಷಯದಲ್ಲಿ ಹೆಚ್ಚು ತರ್ಕಾತೀತ ನಂಬಿಕೆ.

      ಪ್ರತಿಕ್ರಿಯೆ
  2. Santhosh Shetty

    ಎಂಜಲೆಲೆ ಆಚರಣೆಯಲ್ಲಿ ಸಮಾಜದ ಪ್ರತಿಷ್ಟಿತ ಹುದ್ದೆಯಲ್ಲಿರುವವರೂ ಭಾಗವಹಿಸುತ್ತಿದ್ದಾರೆ. ಇದು ಅವರಿಗೆ ಸಮಸ್ಯೆಯಾಗದೆ “ಪ್ರಗತಿ ಪರರು” ಎಂಬ ಹಣೆಪಟ್ಟಿ ಕಟ್ಟಿಕೊಂಡವರಿಗೆ ಏನು ಸಮಸ್ಯೆ? ಅದನ್ನು ಮೌಢ್ಯ ಎಂದು ಕರೆಯುವ ಮುನ್ನ ಅದೇಕೆ ಮೌಢ್ಯ ಎಂದು ವಿವರಿಸಬೇಕು, ಇಲ್ಲವಾದರೆ ಅದರಲ್ಲಿ ಭಾಗವಹಿಸುವ ಭಕ್ತರನ್ನು ಮೌಢ್ಯರೆಂದು ಸಾರಾಸಗಟಾಗಿ ಹೇಳಿದಂತೆ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ಇಡೀ ಸಂಸ್ಕೃತಿಯ ಜನರು ದಡ್ಡರು, ಅವರಿ ಮೌಢ್ಯ ತುಂಬಿದೆ, ಆದರೆ ಅದನ್ನ ಪ್ರತಿರೋಧಿಸುವ ಕೆಲವೆ ಕೆಲವರು ಮಾತ್ರ ಬುದ್ಧಿವಂತರು ಎಂದು ಹೇಳಬೇಕಾಗುತ್ತದೆ. ಆದರೆ ಇದು ಸತ್ಯವೆ? ಇದು ಸತ್ಯವಲ್ಲ ಏಕೆಂದರೆ ಆ ಆಚರಣೆಯಲ್ಲಿ ಭಾಗವಹಿಸುವ ಜನರ ಹುದ್ದೆಯ ದೃಷ್ಟಿಯಿಂದ ನೋಡಿದರೂ ಅವರು ದಡ್ಡರಂತೆ ಕಾಣುವುದಿಲ್ಲ, ಆದರೂ ಅವರೇಕೆ ಇಂತಹ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಮೌಢ್ಯರು ದಡ್ಡರು ಎನ್ನುವುದಕ್ಕಿಂತ ಆಚರಣೆಗಳ ಮಹತ್ವ ಹಾಗೂ ಜನರು ಏಕೆ ಭಾಗವಹಿಸುತ್ತಾರೆಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
    ಇದು ಕೇವಲ ಬ್ರಾಹ್ಮಣರು ಮಾಡುವ ಕುತಂತ್ರ ಎನ್ನಲೂ ಸಾಧ್ಯವಿಲ್ಲ, ಏಕೆಂದರೆ ಕರಾವಳಿಯ ಹಲವಾರು ಪ್ರದೇಶಗಳಲ್ಲಿ ಬ್ರಾಹ್ಮಣರೂ ಸಹ ಹೊರಳಾಡುವುದನ್ನು ಮಾಧ್ಯಗಳಲ್ಲಿ ಬಿತ್ತರಿಸಲಾಗಿದೆ. ಆದ್ದರಿಂದ ಇದನ್ನು ಕೇವಲ ಜಾತಿಗೆ ಸೀಮಿತ ಗೊಳಿಸದೆ ಆಚರಣೆಯ ಹಂತದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವೆ ಎಂಬುದನ್ನು ಯೋಚಿಸಬೇಕಾಗಿದೆ. ಹಾಗೂ ಒಂದೊಮ್ಮೆ ಹಾಗೆ ಯೋಚಿಸಲು ಪ್ರಾರಂಭಿಸಿದರೆ ಆಚರಣೆಗಳು ಅರ್ಥವಾಗಬಹುದು, ತದನಂತರ ಆಚರಣೆಯು ಇರಬೇಕೆ ಬೇಡವೇ ಎಂಬುದನ್ನು ಚರ್ಚಿಸಬಹುದು.
    ಇಂದು ಬರುತ್ತಿರುವ ಪ್ರಚಾರ, ಅಪಪ್ರಚಾರ ಎಲ್ಲವನ್ನು ಗಮನಿಸಿದರೆ ಅವಗಳನ್ನು ಅರ್ಥಮಾಡಿಕೊಳ್ಳುವ ಬದಲು ಬೇರೆಯದೇ ಹಾದಿಯನ್ನು ಹಿಡಿದುರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ಆಚರಣೆಯನ್ನು ಮಾಡಬೇಕೆಂದು ಸಮರ್ಥಿಸಿಕೊಳ್ಳುವುದು ನನ್ನ ಉದ್ದೇಶವಲ್ಲ, ಬದಲಿಗೆ ಅಷ್ಟು ಸುಶಿಕ್ಷಿತರೂ ಪ್ರಜ್ಞಾವಂತ ಸಮುದಾಐಗಳು ಭಾಗವಹಿಸುತ್ತಿವೆ ಎಂದರೆ ಅದರಲ್ಲಿ ಏನೋ ವಿಶೇಷವಿರಬೇಕು ಎಂದೆನಿಸುತ್ತದೆ. ಈ ಮಾರ್ಗದಲ್ಲಿ ಯೋಚಿಸಲು ಸಾಧ್ಯವೇ ಎಂಬುದನ್ನು ನೋಡುವಾ ಅಗತ್ಯವಿದೆ ಎಂಬುದು ನನ್ನ ಅಭಿಪ್ರಾಯ

    ಪ್ರತಿಕ್ರಿಯೆ
  3. P. Bilimale

    ಎಂಜಲು ಎಲೆಯ ಮೇಲೆ ಉರುಳುವ ದಯನೀಯ ಘಟನೆಯ ಬಗ್ಗೆ ಓದಿ ವಿಷಾದವಾಯಿತು. ನಾನು ಹುಟ್ಟಿದ ಊರು ಕುಕ್ಕೆ ಸುಬ್ರಹ್ಮಣ್ಯದ ಹತ್ತಿರದ ಪಂಜ ಎಂಬ ಹಳ್ಳಿ, ಓದಿದ್ದು ಸುಬ್ರಹ್ಮಣ್ಯದಲ್ಲಿ . ನಾನು ಚಿಕ್ಕವನಿದ್ದಾಗ ವಾಂತಿ ಮಾಡಿದೆ ಅಂತ ನನ್ನ ಅಮ್ಮ ಸುಬ್ರಹ್ಮಣ್ಯದಲ್ಲಿ .ಎಂಜಲು ಎಲೆಯ ಮೇಲೆ ಉರುಳುವ ಹರಕೆ ಹೇಳಿಕೊಂಡಿದ್ದರಂತೆ. ನಾನು ದೊಡ್ಡವನಾದಾಗ ಅಮ್ಮ ಅದನ್ನು ನೆನಪಿಸಿ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡೆಸೆದ ಎಂಜಲು ಎಳೆಯಲ್ಲಿ ಉರುಳಲು ಒತ್ತಾಯಿಸುತ್ತಿದ್ದರು. ನಾನು ಮೌನವಾಗಿ ಆದರೆ ದಿಟ್ಟವಾಗಿ ನಿರಾಕರಿಸಿದೆ. ನನ್ನ ಮೌನ ಮತ್ತು ಪ್ರತಿಭಟನೆ ಅಮ್ಮನ ಆತಂಕವನ್ನು ತೀವ್ರವಾಗಿ ಹೆಚ್ಚಿಸುತಿತ್ತು. ಕೊನೆಗೊಮ್ಮೆ ಅದು ತೀರ ಅತಿರೇಕಕ್ಕೆ ಹೋದಾಗ ನಾನು ಅಮ್ಮನಿಗೆ ‘ ಮಗ ಮತ್ತು ಬ್ರಾಹ್ಮಣರ ಎಂಜಲು ಎಲೆಯಲ್ಲಿ ಒಂದನ್ನು ಆಯ್ದುಕೊ’ ಎಂದೆ. ಅಮ್ಮ ಕೊನೆಗೂ ಮಗನನ್ನು ಆರಿಸಿಕೊಂಡರು. ಅಮ್ಮನ ಆಯ್ಕೆಯ ಮೂಲಕ ನಾನು ಬದುಕಿಕೊಂಡೆ.
    ಈಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೇ ಎಂಜಲು ಸೇವೆಯನ್ನು ಬಹಿಷ್ಕರಿಸಿ ಮಾನವನ ಘನತೆಯನ್ನು ಎತ್ತಿ ಹಿಡಿಯಬೇಕು
    ಪುರುಷೋತ್ತಮ ಬಿಳಿಮಲೆ, ನವದೆಹಲಿ

    ಪ್ರತಿಕ್ರಿಯೆ
  4. B. T. Jahnavi

    ಇಂತಹ ಆಚರಣೆಗಳಿಗೆಲ್ಲಾ ತಲೆಬಾಗೋದು, ಅದನ್ನ ಓಪ್ಪಿಕೊಳ್ಳೋದು ಬೇರಾವುದು ಅಲ್ಲ ಒಂದು ಅತಿಯಾದ ಭಯ ಇನ್ನೊಂದು ಅತಿಯಾಸೆ. ಇಂಥದಕ್ಕು, ಎಂಥದಕ್ಕೂ ಮನುಷ್ಯ ಎಲ್ಲಾ ಬಿಟ್ಟು ಸಿದ್ಧನಾಗ್ತಾನೆ ಅಂದ್ರೆ ಅದಕ್ಕೆ ಅವನಲ್ಲಿನ ಭಯಗ್ರಸ್ತ ಮನಸ್ಸು ಕಾರಣ. ಮಾಡಬಾರದ್ದನ್ನ ಮಾಡಿ ಅರಗಿಸಿಕೊಳ್ಳಲು ಆಗದವರು, ಅದರಲ್ಲೇ ಸಿಕ್ಕು ಒದ್ದಾಡುವವರು ಇಲ್ಲಾ ಏನಾದ್ರು ಪಡಿಯೋಕೆ ಬೇಕಾದ್ದು ಮಾಡ್ಲಿಕೆ ತಯರಾಗುವಂಥ ಮಹತ್ವಾಕಾಂಕ್ಷಿಗಳು. ಇಂಥವರಿಗಂತಲೇ ಮಾಡಿರುವಂತಹ ಆಚರಣೆಗಳು ಇವು. ಇಂತಹ ಆಚರಣೆಗಳನ್ನ, ಸಂಪ್ರದಾಯಗಳನ್ನ ಯಾರಾದ್ರು ಹುಟ್ಟಾಕಿರಲಿ, ಮಾಡಿರಲಿ ಆದರೆ ಅದನ್ನ ಆಚರಣೆಗೆ ತರುವವರಿಗೆ, ಪಾಲಿಸುವವರಿಗೆ ಮೈಮೇಲೆ ಎಚ್ಚರವಿರಬೇಕಾದ್ದು ಎಲ್ಲಕ್ಕಿಂತಲೂ ಅವಶ್ಯ. ನಮ್ಮ ಬುದ್ದಿವಂತಿಕೆ, ಪ್ರತಿಷ್ಠೆ, ಗೌರವ ಯಾವ ಹಾದಿ ಹಿಡಿದಿದೆ, ಯಾವ ಮಟ್ಟ ತಲುಪಿದೆ ಎಂಬುದಕ್ಕೆ ಒಂದು ನಿಚ್ಚಳ ನಿದಶರನ ಈ ಆಚರಣೆ.

    ಪ್ರತಿಕ್ರಿಯೆ
    • Santhosh Shetty

      ಜಾನ್ಹವಿಯವರೆ
      ಭಯದಿಂದ ಒಂದು ಆಚರಣೆಯನ್ನ ಮಾಡುತ್ತಾರೆ ಎಂಬುದು ದಿಟವೇ ಆಗಿದ್ದರೆ, ಆ ಭಯವನ್ನು ಹೋಗಲಾಡಿಸಲು ಆ ದೇವರನ್ನ ನಂಬದೇ ಇರುವುದು ಅದಕ್ಕೆ ಸಂಬಂಧಿಸಿದ ಆಚರಣೆಯನ್ನು ಕೈಬಿಡುವುದು ಉತ್ತಮ ಮಾರ್ಗವಲ್ಲವೆ? ಉದಾಹರಣೆಗೆ ನಾಸ್ತಿಕರನ್ನು ನೋಡಿ ಅವರಿಗೆ ದೇವರ ಕುರಿತ ಭಯವೂ ಇಲ್ಲ, ಅದಕ್ಕೆ ಬೇಕಾದ ಆಚರಣೆಗಳನ್ನೂ ಮಾಡುವುದಿಲ್ಲ. ದೇವರ ಭಯದಿಂದ ಮುಕ್ತಿಗೊಳ್ಳಲು ಏಕೆ ಈ ಮಾರ್ಗವನ್ನು ಅನುಸರಿಸಬಾರದು. ಆದರೆ ಜನರು ಅನುಸರಿಸುತ್ತಾದ್ದಾರೆಂದರೆ ಅದಕ್ಕೆ ಭಯವೇ ಮೂಲಕಾರಣವೆಂಬುದು ಅತಾರ್ಕಿಕವಾದುದು.
      ಜನರಿಗೆ ಖುಷಿ ಬೇಕು, ಭಯಬೇಡ ಎಂಬುದು ಸಾಮಾನ್ಯ ಸಂಗತಿ. ವಿಷದಿಂದ ನಮಗೆ ತೊಂದರೆಯಾಗುತ್ತದೆ ಎಂದೆನಿಸಿದರೆ ಅದರಿಂದ ದೂರವಿರುತ್ತೇವೋ? ಇಲ್ಲ ಅದನ್ನು ಕಂಕುಳಲಲ್ಲಿ ಇಟ್ಟುಕೊಳ್ಳುತ್ತೇವೋ? ಸಾಮಾನ್ಯವಾಗಿ ದೂರ ಇಡುತ್ತೇವೆ. ನಿಜವಾಗಿಯೂ ಯಾವುದಾದರೂ ವಸ್ತುವಿಂದ ಅಥವಾ ಕಾರ್ಯದಿಂದ ಭಯವಾದರೆ ನಿಜವಾಗಿಯೂ ಅವು ನಮ್ಮಿಂದ ದೂರವಾಗುತ್ತವೆ. ಆದರೆ ಇದಕ್ಕೆ ವಿರುದ್ಧವಾಗಿ ಆಚರಣೆಗಳು ನಡೆಯುತ್ತಿವೆ. ಜನರಿಗೆ ಒಂದೊಮ್ಮೆ ನಿಜವಾಗಿಯೂ ಭಯವಿದ್ದರೆ ಏಕೆ ಆಚರಣೆಗಳನ್ನು ಇನ್ನೂ ಮಾಡುತ್ತಿದ್ದಾರೆ, ಅವರು ಅವುಗಳನ್ನು ಬಿಟ್ಟು ನೆಮ್ಮದಿಯಾಗಿ ಇರಬಹುದಿತ್ತು. ಅವರು ಬಿಟ್ಟಿಲ್ಲವೆಂದರೆ ಭಯವೊಂದೆ ಅದಕ್ಕೆ ಕಾರಣವಲ್ಲ ಎಂಬುದಂತೂ ಸ್ಪಷ್ಟ

      ಪ್ರತಿಕ್ರಿಯೆ
  5. ಕುಮಾರ ರೈತ

    ಎಂಜಲೆಲೆ ಮೇಲೆ ಉರುಳೋದು ಅಂದ್ರೆನ್ರಿ. ಅವಿವೇಕತನ. ನಮ್ಮ ಆತ್ಮಕ್ಕಾದ್ರೂ ಗೌರವ ಕೊಡಬಾರದೆನ್ರಿ. ನನಗನ್ನಿಸುತ್ತೆ ಇದೊಂದು ತರಹ ಸನ್ನಿ. ಇದಕ್ಕೆ ಅಕ್ಷರಸ್ಥ-ಅನಕ್ಷರಸ್ಥ ಅನ್ನೋ ಭೇದ-ಭಾವವಿಲ್ಲ. ಮುಂದಿನ ಬಾರಿ ಇದು ಮರುಕಳಿಸದಂತೆ ಮಾಡಬೇಕಾದ ಅವಶ್ಯವಿದೆ. ಒಂದು ವೇಳೆ ನಡೆದ್ರೆ ದೇವಸ್ಥಾನದ ಆಡಳಿತಮಂಡಳಿಯನ್ನೇ ಹೊಣೆಗಾರಿಕೆ ಮಾಡಬೇಕು

    ಪ್ರತಿಕ್ರಿಯೆ
    • Santhosh Shetty

      ಅವಿವೇಕತನ ಅಂದರೆ ಏನ್ರಿ? ನಮ್ಮ ಆತ್ಮಕ್ಕೆ ಗೌರವ ಕೊಡುವುದು ಅಂದರೆ ಏನು?

      ಪ್ರತಿಕ್ರಿಯೆ
  6. Santhosh Shetty

    ಪ್ರೀತಿಯ ರವಿ
    ನಿಮ್ಮ ವಾದ ಸ್ವಲ್ಪ ಮಟ್ಟಿಗೆ ಸರಿಯಾಗಿದೆ, ಯಾವುದೋ ಕ್ಷೇತ್ರದಲ್ಲಿ ಬುದ್ದಿವಂತರಾಗಿರುವವರು ಎಲ್ಲಾ ಕ್ಷೇತ್ರದಲ್ಲೂ ಹಾಗೆ ಇರಬೇಕೆಂಬ ನಿಯಮವಿಲ್ಲ. ಆದರೆ ನಿಮ್ಮ ಎರಡನೆಯ ಅಂಶ ನನಗೆ ಅರ್ಥವಾಗುತ್ತಿಲ್ಲ, ಅಂದರೆ ನಂಬಿಕೆಯನ್ನು ವಿಮರ್ಶೆಗೆ ಒಳಪಡಿಸುವುದು. ನನ್ನ ಸಂಶೋಧನೆಯಲ್ಲಿ ಕಂಡುಕೊಂಡಂತೆ ಹಾಗೂ ಆಚರಣೆಗಳ ಕುರಿತ ವಿದ್ವಾಂಸರ (ಫ್ರಿಟ್ಸ್ ಸ್ಟಾಲ್) ಇತ್ತೀಚಿನ ಚರ್ಚೆಯನ್ನು ಗಮನಿಸಿದರೆ, ಆಚರಣೆಗಳಿಗೆ ನಂಬಿಕೆಯೇ ಬುನಾದಿ ಎಂಬ ವಾದವು ಸುಳ್ಳು ಎಂದೆನಿಸುತ್ತದೆ. ಒಂದು ಆಚರಣೆಗೆ ಸುಸಂಬದ್ಧವಾದ ಅಥವಾ ಅಸಂಬದ್ಧವಾದ ನಂಬಿಕೆಯನ್ನು ಹುಡುಕುವುದು ಕಷ್ಟ. ನಂಬಿಕೆಯೇ ಇಲ್ಲದೆ ಆಚರಣೆಗಳನ್ನು ಮಾಡಬಹುದು, ಅದಕ್ಕೆ ನಮ್ಮ ದಿನನಿತ್ಯದ ಪೂಜೆ ಪುನಸ್ಕಾರ, ಇಸ್ರೊದ ಛೇರ‍್ಮನ್ ರ ಉದಾಹರಣೆಗಳೇ ಸಾಕ್ಷಿ. ಆಚರಣೆಗಳಿಗೆ ನಂಬಿಕೆಯ ಇದೆ ಎಂಬ ವಾದವನ್ನು ಸರ್ವತಾ ಒಪ್ಪಿರುವುದರಿಂದ ನಮಗೆ ಇದು ದೊಡ್ಡ ಗೊಂದಲವಾಗಿ ಗೋಚರಿಸುತ್ತದೆ.
    ಇಸ್ರೊದಲ್ಲಿನ ವಿಜ್ಞಾನಿ ಒಂದು ಉಪಗ್ರಹವನ್ನು ಉಡಾವಣೆ ಮಾಡುವಾಗ ಅವರ ಜ್ಞಾನ – ತಂತ್ರಜ್ಞಾನ ಗಳನ್ನೆಲ್ಲಾ ಉಪಯೋಗಿಸಿಕೊಂಡು ಕೆಲಸದಲ್ಲಿ ನಿರತರಾಗುತ್ತಾರೆ. ಆದರೆ ಅದೇ ವ್ಯಕ್ತಿ ಆಚರಣೆಯ ಸಂದರ್ಭದಲ್ಲಿ ಯಾವುದೇ ಜ್ಞಾನ ಜಿಜ್ಞಾಸೆಗಳನ್ನು ಉಪಯೋಗಿಸಿಕೊಳ್ಳದೆ ಅದರಲ್ಲಿ ತೊಡಗುತ್ತಾರೆಂದರೆ ಅದು ಸ್ಪಷ್ಟವಾಗಿ ಸೂಚಿಸುವುದು ಕೆಲವು ವೃತ್ತಿಗಳಿಗೆ ಜಿಜ್ಞಾಸೆಯ ಅಗತ್ಯವಿದೆ, ಕೆಲವು ಆಚರಣೆಗಳಿಗೆ ಅದರ ಅಗತ್ಯವಿಲ್ಲ. ಅಂದರೆ ಆಚರಣೆಗಳಲ್ಲಿ ಭಾಗವಹಿಸುವವರು ಎಷ್ಟೇ ಬುದ್ಧಿವಂತರಾಗಿದ್ದರೂ ಅವರ ಜಿಜ್ಞಾಸೆ ಅಲ್ಲಿ ನಿರಪಯುಕ್ತವೆಂಬುದು ಅವರಿಗೂ ತಿಳಿದಂತಿದೆ. ಏಕೆಂದರೆ ನಮ್ಮ ಜಿಜ್ಞಾಸೆಯ ಹೊರತಾದ ಪ್ರಪಂಚದಲ್ಲಿ ನಂಬಿಕೆಯ ಹೊರತಾದ ಪ್ರಪಂಚದಲ್ಲಿ ಆಚರಣೆಗಳು ಜರುಗುತ್ತಿರಬಹುದು.
    ಇಲ್ಲಿ ಚರ್ಚೆಗೆ ಅವಕಾಶವಿರುವುದರಿಂದ ನನ್ನ ಅನಿಸಿಕೆಗಳನ್ನು ಹೇಳಿದ್ದೇನೆ. ಇದರ ಹಿಂದೆ ಎಂಜಲೆಲೆಯ ಆಚರಣೆಯನ್ನು ಸಮರ್ಥಿಸಿಕೊಳ್ಳುವ ಹುನ್ನಾರ ಖಂಡಿತ ಇಲ್ಲ. ಒಂದೊಮ್ಮೆ ಆ ಆಚರಣೆಯಿಂದ ನಿಜವಾಗಿಯೂ ತೊಂದರೆಯಾಗುತ್ತಿದೆ ಎಂದರೆ ಅದನ್ನು ತೀವ್ರವಾಗಿ ಖಂಡಿಸುವವರಲ್ಲಿ ನಾನೂ ಒಬ್ಬ. ಆದರೆ ಅದಕ್ಕೂ ಮುನ್ನ ಅದರಲ್ಲಿ ಭಾಗವಹಿಸುವ ಜನರಿಗೇಕೆ ಅದು ತೊಂದರೆಯಾಗಿ ಕಾಣುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಅಭಿಪ್ರಾಯ. ಅದನ್ನು ಸುಮ್ಮನೆ ಮೌಢ್ಯ, ಮೂಢತನ ಎಂದು ಪರಿಗಣಿಸಿದರೆ ಅದರಿಂದ ಆಚರಣೆಯಲ್ಲಿ ಭಾಗವಹಿಸುತ್ತಿರುವವರನ್ನಾಗಲೀ ಆಚರಣೆಗಳನ್ನಾಗಲೀ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

    ಪ್ರತಿಕ್ರಿಯೆ
  7. anand

    ನಮ್ಮ ದೇಶದಲ್ಲಿ ಬೇರೆಯವರ ಆಚರಣೆ ಮೇಲೆ ಮೂಗು ತೂರಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಯಾರಿಗಿಷ್ಟವಿಲ್ಲವೋ ಅವರು ಮಾಡಬೇಡಿ ಅಷ್ಟೆ. ಅವರವರ ನಂಬಿಕೆ, ಆಚರಣೆ ಅವರಿಗೆ ಬಿಡಿ. ಎಂಜಲ ಮೇಲಾದರೂ ಹೊರಳಾಡಲಿ, ಗಂಜಲದ ಮೇಲಾದರೂ ಹೊರಳಾಡಲಿ. ಬೇರೆಯವರಿಗೆ ತೊಂದರೆ, ಒತ್ತಾಯ ಮಾಡದಿದ್ದರೆ ಆಯಿತು. ಪ್ರಾಣಿಬಲಿಯಂತಹ ಕ್ರೌರ್ಯವಂತೂ ಅಲ್ಲವಲ್ಲ ಇದು.

    ಪ್ರತಿಕ್ರಿಯೆ
  8. SATHYAPRASAD BV

    ಆತ್ಮೀಯರೆ, ಇದೊಂದು ಅಮಾನವೀಯ ಹಾಗೂ ಅಸಹ್ಯಕರ ಘಟನೆ, ನಾಗರಿಕ ಸಮಾಜವೊಂದು ತಲೆತಗ್ಗಿಸಬೇಕಾದ ವಿಚಾರವಿದು. ಯಾವ ಸಬೂಬನ್ನೂ ಹುಡುಕದೆ ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ಎಲ್ಲ ವಿಚಾರವಂತರು ಒಗ್ಗೂಡಿ ಇಂತಹ ಘಟನೆಗಳು ಮತ್ತೆಂದೂ ಮರುಕಳಿಸದಂತೆ ಕಾರ್ಯೋನ್ಮುಖರಾಗಬೇಕಿದೆ.

    ಪ್ರತಿಕ್ರಿಯೆ
    • Santhosh Shetty

      ಪ್ರೀತಿಯ ಸತ್ಯಪ್ರಸಾದ್ ರವರೆ
      ಆಚರಣೆಯನ್ನು ಮಾಡುವವರಿಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ? ಅವರೇನು ಒತ್ತಾಯ ಮಾಡಿ ಆಚರಣೆಯನ್ನು ಹೇರುತ್ತಿದ್ದಾರೆಯೇ? ಸರಿ, ಅದು ಕೆಟ್ಟದಾಗಿದ್ದರೆ ನಿಲ್ಲಿಸಲು ಎಲ್ಲರಿಗೂ ಸಹಮತವಿದೆ ಎಂದಿಟ್ಟುಕೊಳ್ಳಿ, ಆದರೆ ಏಕೆ ನಿಲ್ಲಿಸಬೇಕೆಂದು ಸಮರ್ಥವಾದ ಕಾರಣವನ್ನು ನೀಡದ ಹೊರತು ನಿಮ್ಮ ಸಲಹೆ ಉಪಯುಕ್ತವಾಗುವುದಿಲ್ಲ. ಕೇವಲ ಅಸಹ್ಯ ಎಂದರೆ ಸಾಲದು. ಏಕೆಂದರೆ ಅದು ನಿಮಗೆ ಸಹ್ಯವಲ್ಲದೆ ಇರಬಹುದು ಆದರೆ ಅದನ್ನು ಮಾಡುವವರಿಗೆ ಅದು ಸಹ್ಯವಾಗಿಯೇ ತೋರುವಂತಿದೆ. ಅಸಹ್ಯ, ಕೆಟ್ಟದು ಎಂಬಂತಹ ಮನಸೋಇಚ್ಚೆ ವಾದಕ್ಕಿಂತ ವೈಜ್ಞಾನಿಕವಾಗಿ ಅದರಿಂದ ಏನು ತೊಂದರೆಯಾಗುತ್ತದೆ ಎಂಬುದು ಜನರಿಗೆ ಮನದಟ್ಟಾಗುವವರೆಗೆ ನಿಮ್ಮ ವಾದವು ಗಾಳಿಯಲ್ಲಿ ಗುಂಡುಹಾರಿಸಿದ ಹಾಗೆ ಆಗುತ್ತದೆ.
      ಆ ಆಚರಣೆಯನ್ನು ಮಾಡಲು ಏನು ಕಾರಣವಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅದನ್ನು ನಿಲ್ಲಿಸಲು ನಿರ್ದಿಷ್ಟವಾದ ಕಾರಣವಂತೂ ಬೇಕೆ ಬೇಕು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: