-ಮಮತಾ ಅರಸೀಕೆರೆ
ಋತುಚಕ್ರ ರಜೆ ಹಾಗೂ ಹಲವು ಅಭಿಪ್ರಾಯಗಳು
ಋತುಚಕ್ರ ರಜೆ ನೀತಿ ಜಾರಿಯಾದ ನಂತರ ಕೆಲವು ಪ್ರತಿಕ್ರಿಯೆಗಳು ಬಂದವು. ಅದೇನೊ ತೀರಾ ಚರ್ಚೆಯಾಗಲಿಲ್ಲ ಅನ್ನೋದು ಗಮನೀಯ. ಆದರೆ ಪರವಾಗಿದ್ದೇವೆ ಅನ್ನೋ ಸಂದೇಶವಂತೂ ಪರೋಕ್ಷವಾಗಿ ತಲುಪಿತು ಅಂದುಕೊಂಡಿದ್ದೇನೆ. ಇಂಗ್ಲೀಷಿನ ಒಂದು ಪತ್ರಿಕಾ ವರದಿ ನೋಡಿದೆ. ಅದರಲ್ಲಿ ಗೈನಕಾಲಜಿಸ್ಟ್ ಡಾಕ್ಟರ್ ಗಳ ಹೇಳಿಕೆಯಿತ್ತು.. ಅವರ ಪ್ರಕಾರ ಅವರು ಆ ದಿನಗಳಲ್ಲಿ ತುಂಬಾ ಕ್ರಿಯಾಶೀಲವಾಗಿಯೇ ಇರುತ್ತಾರಂತೆ. ಹೆಚ್ಚು ಕೆಲಸವನ್ನೂ ಮಾಡುತ್ತಾರಂತೆ. ನೋವು, ಒತ್ತಡ, ಖಿನ್ನಸ್ಥಿತಿ, ಇನ್ನಿತರ ಸಮಸ್ಯೆಗಳನ್ನು ಮೀರಿ ಸೃಜನಶೀಲವಾಗಿರಬಹುದಂತೆ. ಕೆಲಸವನ್ನ ಹೆಚ್ಚು ಮಾಡಿದಷ್ಟೂ ಆ ದಿನಗಳನ್ನು ಆರಾಮವಾಗಿ ದಾಟಬಹುದೆನ್ನುವ ಸಂದೇಶ ಅವರ ಮಾತಿನ ದಾಟಿಯಲ್ಲಿತ್ತು. ತಮ್ಮಲ್ಲಿ ಕೆಲಸ ಮಾಡುವ ನರ್ಸ್ ಗಳೂ ಸಹ ಚಟುವಟಿಕೆಯಿಂದ ಸಮಸ್ಯಾ ಮುಕ್ತರಾಗಿರುತ್ತಾರೆನ್ನುವುದನ್ನೂ ಸಹ ಅವರು ಉಲ್ಲೇಖಿಸಿದ್ದರು.
ಡಾಕ್ಟರ್ ಗಳು ಹೆಚ್ಚು ಓದಿದವರಾಗಿರುತ್ತಾರೆ. ಅವರದು ಅಧ್ಯಯನಪೂರ್ಣ ಅನಿಸಿಕೆ. ಖಂಡಿತಾ ಒಪ್ಪಬೇಕಾದ್ದೆ. ಕೆಲಸ ಮಾಡಿದಷ್ಟೂ ಹೊತ್ತು ಮನಸು ದೇಹ ಆರೋಗ್ಯದಿಂದಲೇ ಇರುತ್ತದೆ. ನನಗೊಮ್ಮೆ ಗೊಂದಲವಾಗಿಬಿಟ್ಟಿತ್ತು. ಯಾವುದು ಸರಿ ಅಂತ. ಯಾಕೆಂದರೆ ಒಬ್ಬೊಬ್ಬ ಮಹಿಳೆಯ ದೇಹಸ್ಥಿತಿ ಒಂದೊಂದು ಬಗೆ. ಮನಸು, ದೇಹದ ರಚನೆಯಲ್ಲಿ ವೈವಿಧ್ಯತೆಯಿದೆ. ಹೀಗಾದಾಗ ಋತುಚಕ್ರದ ಅವಧಿಯನ್ನು ಆರಾಮವಾಗಿ ಹೇಗೆ ಕಳೆಯಬಹುದು ಅಂತ ಹೇಳಬಹುದೇ ವಿನಃ, ತಮ್ಮ ಅನುಭವ ಸಾರ್ವತ್ರಿಕವಾಗಿ ಎಲ್ಲರ ಅನುಭವವಾಗುವುದು ಹೇಗೆ ಸಾಧ್ಯ ಅನಿಸಿತ್ತು.
ಹಲವರು ನಮ್ಮ ಹಿರಿಯರ ಉದಾಹರಣೆ ಕೊಡುತ್ತಾರೆ. ಅಸಂಘಟಿತ ಕಾರ್ಮಿಕ ಮಹಿಳೆಯರ ಬಗ್ಗೆ ಯೋಚಿಸಿ ಅನ್ನುತ್ತಾರೆ. ಅಸಂಘಟಿತ ವಲಯದ ಕಾರ್ಮಿಕರ ಕೆಲಸ ತುಂಬಾ ಕಷ್ಟಕರವಾದ್ದು, ಮತ್ತವರಿಗೆ ರಜೆ ಕನಸಿನ ಮಾತು. ಅಸಾಧ್ಯ. ಬದುಕೇ ಮುಖ್ಯವಾಗುವಾಗ ಆ ದಿನಗಳಲ್ಲಿ ಅನುಭವಿಸುವ ಕಿರಿಕಿರಿಗಳನ್ನು ಎಣಿಸುತ್ತಾ, ಗೊಣಗುತ್ತಾ ಕುಳಿತರೆ ಜೀವನ ನಡೆಯಬೇಕಲ್ಲ? ಕಾಲಾನಂತರ ಅವರೂ ಸಹ ಆ ದಿನಗಳಲ್ಲಿ ಪಟ್ಟ ಶ್ರಮದ ಪರಿಣಾಮಗಳನ್ನು ಎದುರಿಸಬಹುದಾ ಅನ್ನುವುದು ನನಗಿರುವ ಜಿಜ್ಞಾಸೆ.
ನಮ್ಮ ಅಮ್ಮಂದಿರು, ಅಜ್ಜಿಯರು ಅದ್ಹೇಗೆ ಈ ದಿನಗಳನ್ನು ದಾಟಿದರು ಎಂಬೋ ಪ್ರಶ್ನೆಯೂ ಮುಂದಾಗುತ್ತದೆ. ಅಸಲಿಗೆ ಆ ಹೆಣ್ಣುಮಕ್ಕಳಿಗೆ ಮಾತನಾಡಲಾದರೂ ಎಲ್ಲಿ ಸ್ಥಳವಿತ್ತು. ಯಾವ ವೇದಿಕೆಯಿತ್ತು? ತಮ್ಮ ತಮ್ಮಲ್ಲೆ ಗುಸುಗುಟ್ಟಿಕೊಂಡು, ಮನೆಯಲ್ಲಿ ಪಿಸುಮಾತನಾಡಲೂ ಅಂಜಿಕೆ ಹಿಂಜರಿಕೆ. ಅವರಾರೂ ಏನೂ ಹೇಳದೆ ಬದುಕು ಸವೆಸಿಬಿಟ್ಟರು. ಏನನ್ನೂ ಅಭಿವ್ಯಕ್ತಿಸದೇ ಕಳೆದದ್ದೇ ಅವರು ಮಾಡಿದ ತಪ್ಪು. ಹೇಳಿಕೊಂಡಿದ್ದರೆ, ಪದೇ ಪದೇ ಮನವರಿಕೆ ಮಾಡಿಕೊಟ್ಟಿದ್ದರೆ ಈ ಜಗತ್ತು ಸೂಕ್ಷ್ಮವಾಗುತ್ತಿತ್ತೋ ಏನೊ. ಅಮ್ಮಂದಿರು ಹಿಂಜರಿದುಬಿಟ್ಟರು.
ಋತುಚಕ್ರದ ನೆಪದಲ್ಲಿ ಚಾಪೆ, ತಟ್ಟೆ, ಲೋಟದೊಂದಿಗೆ ಮೂಲೆ ಹಿಡಿದವರು, ಊರಿನಿಂದಲೇ ಹೊರ ಹಾಕಿಸಿಕೊಂಡವರು, ಬಹಿಷ್ಕೃತರಂತೆ ಮೂರು ದಿನಗಳನ್ನು ಕಳೆದವರಿಗೆ ಆ ಒಟ್ಟು ವಿದ್ಯಮಾನವೇ, ತಮ್ಮೊಂದಿಗೆ ನಡೆದುಕೊಳ್ಳುವ ರೀತಿಯೇ ಹಿಂಜರಿಕೆ ಹುಟ್ಟಿಸುವಾಗ ಅವೂ ಸಹಜ ದಿನಗಳೆಂಬಂತೆ ಪರಿಗಣಿಸಿ ಎಂಬುದಾಗಿ ಕೇಳುವುದು ಹೇಗೆ ಸಾಧ್ಯ.? ತಮ್ಮಲ್ಲಾಗುವ ಅಸಹಜ ತಳಮಳಗಳು, ಹಿಂಸೆಗಳು,ಮನಸಿನ ಏರಿಳಿತಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಲಾದರೂ ಸಾಧ್ಯವಿತ್ತೆ? ಅದರಲ್ಲೂ ಹೆಣ್ಣಿನ ದೇಹದ ರಚನೆ, ಅವಳ ದೇಹದಲ್ಲಾಗುವ ಎಲ್ಲಾ ಪ್ರಾಕೃತಿಕ ವಿದ್ಯಮಾನಗಳನ್ನು ಮುಟ್ಟು, ಮೈಲಿಗೆ, ಸೂತಕದ ಹೆಸರಿನಲ್ಲಿ ಕಂಡವರಿಗೆ ಅವೆಲ್ಲ ವ್ಯಕ್ತಪಡಿಸಬಾರದ, ಬಚ್ಚಿಟ್ಟುಕೊಳ್ಳುವ ವಿಷಯಗಳಾಗಿ ಕಂಡಾಗ ಹೆಣ್ಣು ಅಭಿವ್ಯಕ್ತಿಸಲು ಸಾಧ್ಯವೆ? ಧಾರ್ಮಿಕ ಕಾರ್ಯಗಳಲ್ಲಿ, ದೇವರು ದಿಂಡಿರ ನೆಪದಲ್ಲಿ, ಶಾಪ, ಮುನಿಸಿನ ಭಯದಲ್ಲಿ ಕಟ್ಟಿಹಾಕಿಬಿಟ್ಟರು. ದೇಹದ ಕುರಿತು ನಾಚಿಕೆ, ಮುಜುಗರವನ್ನು ಸೃಷ್ಟಿಸಿಬಿಟ್ಟರು. ಖಾಸಗಿ ಅಂಗಗಳು ಮಾತನಾಡಬಾರದ ವಿಷಯಗಳಾಗಿಬಿಟ್ಟವು. ಇಂದ್ರನಿಗೆ ಕೊಟ್ಟ ಶಾಪವನ್ನು ಅವನು ಕಳೆದುಕೊಳ್ಳಲು, ಶಾಪದ ಒಂದು ಭಾಗವನ್ನು ಹೆಣ್ಣಿನ ಮುಟ್ಟಿಗೂ ಹಂಚಿಬಿಟ್ಟ ದಂತ ಕತೆಯ ಕಾರಣ ಆಕೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ಅನೇಕ ಅವಕಾಶಗಳಿಂದ ವಂಚಿತಳಾಗಿಬಿಟ್ಟಳು. ಯಾವುದೇ ಹೆಣ್ಣೂ ತೀರ ಸನಿಹದ ಗೆಳತಿಯ ಬಳಿಯೂ ಮುಕ್ತವಾಗಿ ಮಾತನಾಡಬಹುದಾದರೂ ತೀರಾ ಅಂದರೆ ತೀರಾ ತಮ್ಮ ಸಮಸ್ಯೆಗಳನ್ನು ವಿವರವಿವರವಾಗಿ ಯಾರ ಬಳಿಯೂ,ತನ್ನ ಗಂಡನ ಬಳಿಯೂ ಕೊನೆ ಪಕ್ಷ ಗೈನಕಾಲಜಿಸ್ಟ್ ಡಾಕ್ಟರ್ ಹತ್ತಿರವೂ ಹೇಳಲು ಮುಜುಗರಿಸುವಂತೆ, ನಾಚುವಂತೆ ಮಾಡಿದ್ದು ನಮ್ಮ ಪರಂಪರೆಯ ಕೊಡುಗೆ. ಅದರಿಂದ ಅನುಭವಿಸಿದ ಪರಿಣಾಮಗಳೇನು? ಆರೋಗ್ಯದ ಮೇಲಾದ ಪ್ರಭಾವಗಳೇನು ಅನ್ನೋದು ಇತ್ತೀಚೆಗೆ ತಿಳಿಯುತ್ತಿದೆ.
ಇದಿಷ್ಟೇ ಅಲ್ಲ, ತಮ್ಮ ಆಸೆ ಅಭಿಲಾಷೆ ಕುರಿತ ಬೇರಾವುದೇ ಸಂಗತಿಗಳನ್ನೂ ಸ್ತ್ರೀ ಬಿಚ್ಚಿಟ್ಟ ಉದಾಹರಣೆಗಳು ಕಡಿಮೆ. ಹಾಗೆ ಬಿಚ್ಚಿಟ್ಟಿದ್ದೇ ಆದರೆ ಆಕೆ ವ್ಯಭಿಚಾರಿ, ಕುಲಟೆ, ಮಾನ ಮರ್ಯಾದೆ ಇಲ್ಲದವಳು, ಮೊದಲಾದ ಬಿರುದಿಗೆ ಪಾತ್ರಳಾಗುವ ಭಯಕ್ಕೆ ಮನೆ ಮರ್ಯಾದೆ, ನಮ್ಮ ಸಂಸ್ಕೃತಿ ಉಳಿಸುವ ರಾಯಭಾರಿಯಾಗಿಬಿಟ್ಟಳು. ಗಂಡು ಬಯಸಿದಾಗ ಅವರ ಆಕಾಂಕ್ಷೆಗಳನ್ನು ತಣಿಸುವ ಮಾಧ್ಯಮವಾದಳು. ತಮ್ಮ ಲೈಂಗಿಕ ಬಯಕೆಗಳನ್ನು ಹೇಳಿಕೊಳ್ಳುವ ಅವಕಾಶವಾದರೂ ಅವರಿಗಿತ್ತಾ ಹೇಳಿ? ಪುರುಷರ ಕಣ್ಸನ್ನೆಗೆ, ಬಯಕೆಗೆ ಒಡ್ಡಿಕೊಂಡರೆ ವಿನಃ, ತನಗೂ ಆಸೆಯಿದೆ ಎಂಬ ಅಗತ್ಯವನ್ನು ಯಾವಾಗ ಬೇಡಿದ್ದಳು? ಯಾವ ಸಾಹಿತ್ಯದಲ್ಲಿ ಉಲ್ಲೇಖವಿದೆ ತಿಳಿಸಿ. ಶೃಂಗಾರದ ಮೂಲಕ, ಸಾಂಕೇತಿಕವಾಗಿ ವ್ಯಕ್ತವಾಗಿದೆಯೆ ವಿನಃ ನೇರಾನೇರಾ ಅಭಿವ್ಯಕ್ತಿಯಿಲ್ಲ. ನಮ್ಮ ಭಕ್ತಿ ಪರಂಪರೆಯ ಮೀರಾ, ಅಕ್ಕಮಹಾದೇವಿಯೂ ಸಹ ಕ್ಲುಪ್ತವಾಗಿ ದಾಖಲಿಸಿದರು. ದೇವಯಾನಿಯ ಬೇಡಿಕೆಯೂ ಮಿತಿಯಲ್ಲಿಯೇ ಇತ್ತು. ಸಂಚಿ ಹೊನ್ನಮ್ಮ ಕೌಟುಂಬಿಕ ಕರ್ತವ್ಯವನ್ನೂ , ಹೆಣ್ಣನ್ನು ಕಾಣಬೇಕಾದ ಬಗೆಯನ್ನೂ ಹೇಳಿ ಪರೋಕ್ಷವಾಗಿ ಅಭಿಲಾಷೆಯನ್ನು ತೋಡಿಕೊಂಡರು. ಶೃಂಗಾರದ ಹಸಿಬಿಸಿ ಉಲ್ಲೇಖವೆಲ್ಲ ಪುರುಷರು ದಾಖಲಿಸಿದ್ದು. ವಾತ್ಸಯನನೇ ಇವತ್ತಿಗೂ ಶೃಂಗಾರಕ್ಕೆ ಅಧಿಪತಿ.
ಇಷ್ಟು ಹೇಳಹೊರಟಿದ್ದು ಹೆಣ್ಣುಮಕ್ಕಳ ಖಾಸಗಿ ವಿಷಯದ ಅಭಿವ್ಯಕ್ತಿ ಸಾಕಷ್ಟಿಲ್ಲ ಅನ್ನುವ ಕಾರಣಕ್ಕೆ. ತಮಗಾಗುವ ಎಲ್ಲಾ ಅನುಭವಗಳನ್ನು ಮಿತಿಯಲ್ಲಾದರೂ ಆಕೆ ದಿಟ್ಟವಾಗಿ ಹೇಳಿಕೊಂಡಿದ್ದರೆ ಇಪ್ಪತ್ತನೆಯ ಶತಮಾನದವರೆಗೂ ಕಾಯಬೇಕಾಗುತ್ತಿರಲಿಲ್ಲ, ಒಂದಷ್ಟು ಸವಲತ್ತುಗಳು ಆಕೆಗೂ ದಕ್ಕುತ್ತಿದ್ದವು. ಈಗೀಗ ಕಾಲಚಕ್ರ ತಿರುಗಿದೆ. ಆಸೆಗಳು ನೇರಾನೇರಾ ಭಿತ್ತರವಾಗುತ್ತವೆ. ಗಂಡಸಿನ ಅವಶ್ಯಕತೆ ಇಲ್ಲವೆನ್ನುವಂತೆ ಆಟಿಕೆಗಳ ಪ್ರಸ್ತಾಪವಾಗುತ್ತದೆ. ಹೆಣ್ಣಿನ ಮೂಲಗುಣ ಶರಣಾಗುವುದು. ಅತಿಯಾಗಿ ಹಚ್ಚಿಕೊಳ್ಳುವುದು. ತಾನೊಲಿದ ಗಂಡಿಗೆ ಸಾಧ್ಯವಾದಷ್ಟೂ ನ್ಯಾಯ ಒದಗಿಸುವುದು. ಅದೇ ಭಾವನೆಗೆ ಧಕ್ಕೆಯಾದರೆ ಆಧುನಿಕ ಹೆಣ್ಣು ಪರ್ಯಾಯ ಹುಡುಕುತ್ತಾಳೆ. ಹೆಣ್ಣಿನ ಖಾಸಗಿತನವನ್ನು ಗೌರವಿಸದಿದ್ದರೆ, ಕೊಂಚವಾದರೂ ಆಕೆಯ ಅಸ್ಮಿತೆಗೆ ಬೆಲೆಯಿರದಿದ್ದರೆ ವಿಭಿನ್ನ ಮಾರ್ಗ ಶೋಧಿಸುತ್ತಾಳೆ. ಆಧುನಿಕ ವ್ಯವಸ್ಥೆಯೂ ಈಗೀಗ ಪೂರಕವಾಗಿಯೆ ಇದೆ. ಕಾನೂನುಗಳೂ ಸಹಾಯಕ್ಕಿವೆ. ಈ ತಕ್ಕಡಿಯಲ್ಲಿ ಎಲ್ಲಾ ಪುರುಷ ವರ್ಗವನ್ನು ಸೇರಿಸದೇ ಹೆಂಗರುಳಿನ ಗಂಡಸರೂ ಬೆಂಬಲಕ್ಕಿದ್ದಾರೆನ್ನುವುದನ್ನು ಹೇಳಲೇಬೇಕಾಗುತ್ತದೆ.
ಋತುಚಕ್ರದ ಸಮಯದಲ್ಲಿ ಆಗುವ ಸಮಸ್ಯೆಗಳ ಕಾರಣಕ್ಕೆ ನಮ್ಮ ಪ್ರಭುತ್ವ ಈಗ ಕೊಂಚ ಸಂವೇದನೆ ತೋರಿಸಿದೆ. ಈ ಸೂಕ್ಷ್ಮ ಮಾದರಿಯ ಜಾರಿಯಲ್ಲಿ ಪುರುಷರ ಬೆಂಬಲವೂ ಇದೆಯೆನ್ನುವುದು ಶ್ಲಾಘನೀಯ. ಶರಣು ಶರಣಾರ್ಥಿ. ವಿಭಿನ್ನ ಪ್ರತಿಕ್ರಿಯೆಯೂ ಬಂದಿದೆ. ಕೆಲವು ಮಹಿಳೆಯರು ಗಟ್ಟಿಯಿರುತ್ತಾರೆ. ಅವರಿಗೆ ಆ ಸಮಯದಲ್ಲಿ ಯಾವ ದೂರುಗಳೂ ಇರುವುದಿಲ್ಲ. ಹಲವು ಹೆಣ್ಣುಗಳು ಅನುಭವಿಸುವ ವೇದನೆಯಿದೆಯಲ್ಲ ಅದು ಅಸಾಧ್ಯ. ಅತಿಯಾದ ಸ್ರಾವ, ಮಾನಸಿಕ ಖಿನ್ನತೆ, ದೇಹದಲ್ಲಿ ಹಲವು ಬದಲಾವಣೆ, ಏರುಪೇರು ಸಾಮಾನ್ಯ ಸಂಗತಿ. ವ್ಯಾಯಾಮ ಮಾಡುವುದು, ಶ್ರಮದ ಕೆಲಸ ಮಾಡುವುದು ಹಲವಾರು ಮಹಿಳೆಯರಿಗೆ ಸಾಧ್ಯವಾಗದ್ದು. ಅತಿಯಾದ ಸ್ರಾವದಿಂದ ಬಳಲಬೇಕಾಗುತ್ತದೆ. ವೈಯಕ್ತಿಕ ಅನುಭವ ಕೂಡ. ಆ ಸಮಯದಲ್ಲಿ ಸೃಜಶೀಲತೆ ಕ್ರಿಯಾಶೀಲತೆ ಮಾನಸಿಕವಾಗಿ ತೊಡಗಬಹುದಾದ ಕ್ರಿಯೆಗಳು, ಮತ್ತೊಮ್ಮೆ ಹೇಳುವುದಾದರೆ, ನೂರು ಮರ ಹಲವು ಸ್ವರ. ವೈವಿಧ್ಯತೆಯನ್ನು ಗುರುತಿಸುವ ವ್ಯವಸ್ಥೆಗೆ ಧನ್ಯವಾದ ಹೇಳಬಹುದಷ್ಟೆ.






0 Comments