ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಳಿದ ನದಿಗಳ ಹಾಗೆ ನಾನಲ್ಲ, ನಾನು ಶಾಲ್ಮಲೆ !

ಎಂ ಆರ್ ಕಮಲ

ಉಳಿದ ನದಿಗಳು
ಹುಟ್ಟನ್ನು, ಸಾವನ್ನು ಸಂಭ್ರಮಿಸುತ್ತ ಸಾಗುತ್ತವೆ
ಕೂಡುವ, ಕಳೆಯುವ,
ಅಗಲುವ, ಬೆಸೆಯುವ
ಹೊಸ ಲೆಕ್ಕಗಳ ಪಕ್ಕ ಬಿಚ್ಚುತ್ತ ಹೋಗುತ್ತವೆ
ತಾನು ತನ್ನಂತೆಯೇ ಹರಿದು
ತಾನಿಲ್ಲವಾಗುವ `ತೊರೆ’ಯಾಗುತ್ತವೆ

ಉಳಿದ ನದಿಗಳ ಹಾಗೆ ನಾನಲ್ಲ,
ನಾನು ಶಾಲ್ಮಲೆ
ನನಗೆ ಊರಿಲ್ಲ, ಹೆಸರು ಕೂಗಿದರು ಕೇಳುವುದಿಲ್ಲ
ಭೋರ್ಗರೆದು ಬರಸೆಳೆವ ಮೊರೆತವಿಲ್ಲ .
ಕಟ್ಟಿ ಹಿಡಿದು ಗುಟ್ಟಾಗಿ ಪ್ರೀತಿಸುವ
ಹೊಳೆ ದಂಡೆಗಳಿಲ್ಲ,
ಉಕ್ಕಿ ಹರಿವ ಉನ್ಮಾದಕ್ಕೆ ಅಣೆಕಟ್ಟಿಲ್ಲ
ಕೆಟ್ಟ ಕೈಗಳಿಗೆ ಸಿಕ್ಕಿ ಬೀಳುವ ಆತಂಕವು ಇಲ್ಲ.

ಉಳಿದ ನದಿಗಳ ಹಾಗೆ ನಾನಲ್ಲ,
ನಾನು ಶಾಲ್ಮಲೆ
ನನ್ನೆದೆಯ ತಬ್ಬಿ ಮಕ್ಕಳು ಜೋತು ಬೀಳುವುದಿಲ್ಲ.
ನೀರಿನಂತೆ ನಗೆ ಚಿಮ್ಮುವುದಿಲ್ಲ,
ಬೆಸ್ತರ ಹಾಡು ನಾಲಗೆಯಲ್ಲಿ ದೋಣಿ ಹಾಡ ಕೇಳಲಿಲ್ಲ.
ಸಾಹಸಿಗರು ನನ್ನ ಮೈ ಜುಮ್ಮೆನಿಸಲಿಲ್ಲ.
ಅರಿವೆ ಒಗೆಯುತ್ತ ಊರ ಸುದ್ದಿಯನ್ನಾರು ಹೇಳುವುದಿಲ್ಲ
ಅಶ್ರು `ತರ್ಪಣ’ವಿಲ್ಲ, ಮೋಕ್ಷಕ್ಕೆ ಸೋಪಾನವಲ್ಲವೇ ಅಲ್ಲ!

ಉಳಿದ ನದಿಗಳ ಹಾಗೆ ನಾನಲ್ಲ,
ನಾನು ಶಾಲ್ಮಲೆ
ಹರಿಯುತ್ತ ಹಸಿರುಕ್ಕಿಸಿ,
ಕೊಕ್ಕರೆಗಳಿಗೆ ಅಕ್ಕರೆಯಾಗುವ,
ದಂಡೆಯಲ್ಲಿನ ಜೋಡಿಗಳ ಪುಲಕಿಸಿ
ಮರ ಮರಗಳ ಮರ್ಮರಕ್ಕೆ ಕಿವಿಯಾಗುವ,
ನಲ್ಲನಿಗೆ ಬೆಲ್ಲವಾಗಿ ಕರಗುವ ಸೌಭಾಗ್ಯವಿಲ್ಲ
ಉಳಿದ ನದಿಗಳ ಹಾಗೆ ನಾನಲ್ಲ.
ನಾನು ಶಾಲ್ಮಲೆ

ಇಲ್ಲಿ ಹೊಲಸಿಲ್ಲ, ಕೊಳೆತು ನಾರುವ ಹೆಣವಿಲ್ಲ.
ಹುಚ್ಚೆದ್ದು ಕುಣಿದು ಊರು ಕೇರಿಯ ಕೊಚ್ಚುವ
ಮನೆ, ಮಠಗಳ ಉರುಳಿಸಿ ಮಸಣವಾಗಿಸುವ
ಪ್ರಳಯ ವಿಲಾಸಿನಿಯ, ದೌರ್ಭಾಗ್ಯವಿಲ್ಲ.
ಬಹುಶಃ
ನಾನು ಬದುಕಾದ ಸಾವು.
ನೆಲದೊಳಗಿನ ನೋವು.

(ಚಂಪಾ ಅವರೊಂದಿಗೆ ನನ್ನ ಅನೇಕ ಚಿತ್ರಗಳಿದ್ದರೂ ನನಗಿಷ್ಟವಾದದ್ದು ಮಗಳ ಜೊತೆಗಿನ ಈ ಚಿತ್ರ. ಚಿಕ್ಕವರನ್ನು ಅವರು ಸಂಕ್ರಮಣದ ಮೂಲಕ ಪ್ರೋತ್ಸಾಹಿಸುತ್ತಿದ್ದ ಬಗೆ. ಮಗಳು ತನ್ನನ್ನು ಕಾಡುವ ಶಾಲ್ಮಲಾ’ ಕವಿತೆಯನ್ನು ಹಾಡಿದಾಗ ರೋಮಾಂಚಿತರಾಗಿದ್ದರು, ಫೋಟೋ ಮತ್ತು ಪುಟ್ಟ ಪತ್ರ ಕಳಿಸಿದ್ದರು. ಚಂದ್ರಶೇಖರ ಪಾಟಿಲರ ಉಳಿದ ನದಿಗಳ ಹಾಗೆ’ ಕವಿತೆಯೊಂದಿಗೆ ಸಂವಾದ ನಡೆಸಿ ನಾನು ಬರೆದಿರುವ ಕವಿತೆಯಿದು. ಗೌರವಪೂರ್ವಕ ವಿದಾಯ ಸರ್ )

‍ಲೇಖಕರು Admin

10 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading