ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಉಲ್ಟಾ ಅಂಗಿ’ ಇಷ್ಟವಾಯ್ತು…

ಚನ್ನಬಸವ ಪುತ್ತೂರ

ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಜ್ಯ, ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಶಿಕ್ಷಕ ತಮ್ಮಣ್ಣ ಬೀಗಾರ ಅವರು ರಚಿಸಿರುವ ಮಕ್ಕಳ ಕಥಾ ಸಂಕಲನ ‘ಉಲ್ಟಾ ಅಂಗಿ’ ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತದೆ.

ಉಲ್ಟಾ ಅಂಗಿ ಕಥಾ ಸಂಕಲನದಲ್ಲಿ ರುವ 15 ಕಥೆಗಳು ಪ್ರತಿಯೊಂದೂ ಸರಳ ಸುಂದರ ವಸ್ತುವಿಷಯಗಳಿಂದ ಆಕರ್ಷಕವೂ ಸ್ವಾರಸ್ಯಕರವೂ ಆಗಿದ್ದು ಓದುಗರನ್ನು ಹಠಾತ್ತಾಗಿ ಬಾಲ್ಯಕಾಲಕ್ಕೆ ಕರೆದೊಯ್ದು ಬಾಲ್ಯದ ನೆನಪುಗಳಿಗೆ ರಂಗನ್ನೆರಚುತ್ತವೆ.

ಇಲ್ಲಿನ ಕಥೆಗಳ ವಿಶೇಷ ಏನೆಂದರೆ ಪ್ರತಿಯೊಂದು ಘಟನೆಗಳೂ ಪ್ರಾಕೃತಿಕ ಪರಿಸರದ ಪರಿಧಿಯಲ್ಲಿಯೇ ಘಟಿಸುತ್ತಾ ಮನುಷ್ಯ ಪ್ರಕೃತಿಯನ್ನು ಬಿಟ್ಟು ಬದುಕಲೇ ಸಾಧ್ಯವಿಲ್ಲ ಎಂಬ ಸಂದೇಶವನ್ನು ಒತ್ತಿ ಹೇಳುವುದರೊಂದಿಗೆ ಪ್ರಕೃತಿಯ ಕೂಸಾದ ಮನುಷ್ಯ ಜೀವಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕಾದ ಅಗತ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಇಲ್ಲಿನ ಕಥೆಗಳು ನಿರೂಪಿಸುತ್ತವೆ. ಮಾತ್ರವಲ್ಲ ಗ್ರಾಮೀಣ ಸಂಸ್ಕೃತಿಯ, ಕೂಡು ಕುಟುಂಬದ ಅಜ್ಜ ಅಜ್ಜಿ, ಹೊಳೆ, ತೊರೆ, ಕೆರೆ, ನದಿ ತಟಾಕ, ಗಿಡಮರ ಬಳ್ಳಿಗಳು, ಕಾಡು ಹಣ್ಣುಗಳು, ಹೂವುಗಳು, ಅರಣ್ಯ ಪರಿಸರದ ಸುತ್ತ ಹರಿದಾಡುವ ಕಥೆಗಳಲ್ಲಿ ತಂಗಾಳಿ, ಮಿಣುಕು ಹುಳ, ಕಪ್ಪೆ, ಹಾವುಗಳೇ ಮುಂತಾದ ಕ್ರಿಮಿಕೀಟಗಳೂ ಕಥೆಯ ಓಘಕ್ಕೆ ಕಳೆಕಟ್ಟುತ್ತವೆ.

ನಿಜ ಹೇಳಬೇಕೆಂದರೆ ಈ ಕಥೆಗಳಲ್ಲಿಯ ಬಹುತೇಕ ಅನುಭವಗಳು ನನ್ನವೂ ಆಗಿರುವುದು ಪ್ರಾಯಶಃ ಉಲ್ಟಾ ಅಂಗಿ ನನಗಿಷ್ಟವಾಗಲು ಕಾರಣವಾಗಿರಬಹುದು! ಇದಕ್ಕೆ ಅಪವಾದವೆಂಬಂತೆ ಸಂಕಲನದ ಕೊನೆಯ ಕಥೆ ‘ಹೊಳೆಯುವ ಕಲ್ಲು’ ಅನ್ಯಗ್ರಹ ಸಂಚಾರ-ಸಂದರ್ಶನದ ಅದ್ಭುತ ರೋಮಾಂಚಕ, ಕೌತುಕಮಯ ಕಥೆ ವಿಜ್ಞಾನಕ್ಕೇ ಸವಾಲೆಸೆಯುವಂತಿದ್ದು ಮಕ್ಕಳ ಕಲ್ಪನಾಶಕ್ತಿಯನ್ನು ಉದ್ದೀಪಿಸುವಲ್ಲಿ ಯಶಸ್ವಿಯೂ ಸ್ವಾರಸ್ಯಕರವೂ ಆಗಿರುವುದು ಉಲ್ಟಾ ಅಂಗಿಯ ಹೈಲೈಟ್ ಎನ್ನಬಹುದು.

ಇತರೆ ಕಥೆಗಳು ಅರಣ್ಯ ಪರಿಸರದಲ್ಲಿಯ ನನ್ನಜ್ಜಿ ಮನೆಯಲ್ಲಿನ ದಿನಗಳನ್ನು ನನಗೆ ನೆನಪಿಸಿದವು. ಅರಣ್ಯದ ತುದಿಗೆ ಮನೆ, ಮನೆಯ ಎದುರೇ ಹಚ್ಚಹಸುರಿನ ಹೊಲಗದ್ದೆ. ಗದ್ದೆಯ ಬದುವಿನಲ್ಲಿ ನಡೆದು ಕಾಲುಸಂಕದಲ್ಲಿ ಸರ್ಕಸ್ ಮಾಡುತ್ತಾ ದಾಟಿಕೊಂಡು ಸ್ಕೂಲು, ಪೇಟೆಗೆ ಹೋಗುವ ಮಜವೇ ಮಜ! ಹಣ್ಣುಗಳ ಕಾಲದಲ್ಲಿ ವಿಶೇಷವಾಗಿ ಮಾವಿನ ಹಣ್ಣಿನ ಕಾಲದಲ್ಲಿ ಕಾಡಂಚಿನಲ್ಲಿದ್ದ ಬೃಹತ್ ಮರಗಳಿಂದ ಗಾಳಿಬೀಸಿದಾಗ ಮಳೆಯಂತೆ ದಡದಡನೆ ಬೀಳುತ್ತಿದ ಘಮಘಮಿಸುವ ಜೀರಿಗೆ ಪರಿಮಳದ ಹಣ್ಣುಗಳನ್ನು ದೊಡ್ಡ ದೊಡ್ಡ ಬುಟ್ಟಿಯಲ್ಲಿ ತುಂಬಿಕೊಳ್ಳಲು ಸ್ಪರ್ಧೆಯೇ ನಡೆಯುತ್ತಿತ್ತು! ಆ ಹಣ್ಣುಗಳಿಂದ ತಯಾರಿಸುತ್ತಿದ್ದ ಚಟ್ನಿ, ಸಾರಿನ ರುಚಿ ಇಂದಿಗೂ ನಾಲಿಗೆಯ ತುದಿಯಲ್ಲಿದೆ ಎಂದರೆ ಉತ್ಪ್ರೇಕ್ಷೆಯಲ್ಲ! ಈ ಎಲ್ಲಾ ನನ್ನ ಅನುಭವ ಚಿತ್ರ ಈಗ ಅಲ್ಲಿ ತದ್ವಿರುದ್ಧ ವಾಗಿದೆ. ಕಾಡು ನಾಡಾಗಿದೆ, ಕೆರೆಕುಂಟೆಗಳು ಕಾಣೆಯಾಗಿದೆ.

ಉಲ್ಟಾ ಅಂಗಿಯ ವಿಷಯಕ್ಕೆ ಬಂದಾಗಲೂ ಮೇಲಿನ ನನ್ನ ಅನುಭವಕ್ಕೆ ಹತ್ತಿರವಾಗಿವೆ. ‘ಅಜ್ಜನಾಗುವವರೆಗೂ…’ ಕಥೆಯಲ್ಲಿ ಮೊಮ್ಮಗ ಅಜ್ಜನಾಗಿ, ಅಜ್ಜ ಮೊಮ್ಮಗನಾಗಿ ಬದಲಾಗಿ ಸುತ್ತಮುತ್ತಲಿನ ಪರಿಸರದಲ್ಲಿ ಓಡಾಡಿ ತಮ್ಮ ನೆನಪುಗಳನ್ನು ಹಂಚಿಕೊಂಡು ಪರಿಸರದಿಂದ ಮನುಷ್ಯನಿಗಿದ್ದ ಲಾಭ ಹಾಗೂ ಪರಿಸರ ನಾಶದಿಂದಾದ ಲಾಭ-ನಷ್ಟಗಳ ಬಗೆಗೆ ಅಜ್ಜ-ಮೊಮ್ಮಗನ ನಡುವೆ ನಡೆವ ಸಂಭಾಷಣೆಗಳಿಂದ ಹೃದಯ ಮರುಗುವಂತಾಗುತ್ತದೆ.

ನಗರ ಜೀವನ, ನಗರ ಸಂಸ್ಕೃತಿಯ ಮೋಹದಿಂದ ಮನುಕುಲದ ಇಂದಿನ ಪೀಳಿಗೆಗೆ ಪ್ರಾಕೃತಿಕ ಪರಿಸರದ ಸೌಂದರ್ಯ, ಮಹತ್ವ, ಜೀವನಾನುಭವಗಳು ಕೇವಲ ಕೃತಕ ಚಿತ್ರ ಪಟಗಳಿಂದ ಲಭ್ಯವಾಗುವುದೂ ದುರ್ಬಲವಾಗಿರುವ ಈ ಕಾಲಘಟ್ಟದಲ್ಲಿ ಇಂಥ ನೈಜ ಪರಿಸರ ಪ್ರೀತಿಯ ಕಥೆಗಳು ಮತ್ತು ಪ್ರಾಕೃತಿಕ ಪರಿಸರದೊಂದಿಗೆ ಬದುಕುವ, ಶಿಕ್ಷಣ ಕಲಿಯುವ ಅಗತ್ಯವಿದೆ. ವಾಸ್ತವ ಸ್ಥಿತಿ ಗತಿಯಲ್ಲಿ ಈ ನಿರೀಕ್ಷೆ, ಆಶಯಗಳು ಪ್ರಾಯೋಗಿಕವಾಗಿ ಕಷ್ಟಸಾಧ್ಯವಾಗಿರುವುದಕ್ಕೆ ಪಶ್ಚಾತ್ತಾಪ ಪಡುತ್ತಲೇ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಾದರೂ ನೈಜ ಪ್ರಾಕೃತಿಕ ಪರಿಸರದೊಂದಿಗೆ ಶಿಕ್ಷಣ ಪಡೆಯುವ,ಕಲಿಸುವ ಮತ್ತು ಬದುಕುವ ಅಗತ್ಯವಂತೂ ಇದ್ದೇ ಇದೆ ಎಂಬುದು ನಿರ್ವಿವಾದ.     

ಉಲ್ಟಾ ಅಂಗಿಯೊಳಗಿರುವ 15 ಕಥೆಗಳ ಶೀರ್ಷಿಕೆಗಳಲ್ಲಿ ಕೆಲವು ಚುಟುಕು ಮತ್ತು ಆಕರ್ಷಕವಾಗಿರದಿದ್ದರೂ, ಪುಟ್ಟ ಪುಟ್ಟ ಕಥೆಗಳ ಕಥಾಹಂದರ ಸೊಗಸಾಗಿದೆ. ಹಾಗೂ ಆಸಕ್ತಿ, ಕುತೂಹಲ ಕೆರಳಿಸುತ್ತಲೇ ಕಥಾ ಪಾತ್ರಗಳಲ್ಲಿ ನಾವೂ ಒಬ್ಬರೆಂಬಂತೆ ಭಾಸವಾಗುತ್ತದೆ. ಅದೇ ಸಂಭ್ರಮಗಳಿಂದ ಓದಿಸಿಕೊಂಡು ಹೋಗುತ್ತದೆ. ಆದಾಗ್ಯೂ ಶಿಶು ಸಾಹಿತ್ಯ ಪ್ರಕಾರಗಳಲ್ಲಿ ಶೀರ್ಷಿಕೆ ಕೂಡ ನೆನಪಿನಲ್ಲಿ ಇಟ್ಟುಕೊಳ್ಳುವಲ್ಲಿ ಪರಿಣಾಮಕಾರಿಯಾಗಿರುತ್ತವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ ಅಪೂರ್ವವಾದ ಮಕ್ಕಳ ಕಥೆಗಳ ಈ ಕೃತಿಯನ್ನು ಮೈಸೂರಿನ ಖ್ಯಾತ ಲೇಖಕರೂ ಸಾಹಿತಿಗಳೂ ಆಗಿರುವ ಜೀನಹಳ್ಳಿ ಸಿದ್ಧಲಿಂಗಪ್ಪ ಅವರ ಪ್ರೇಮ ಪ್ರಕಾಶನದಿಂದ ಪ್ರಕಟವಾಗಿರುವುದು ಸ್ತುತ್ಯರ್ಹ. ಲೇಖಕ ಶ್ರೀಯುತ ತಮ್ಮಣ್ಣ ಬೀಗಾರ ಹಾಗೂ ಪ್ರಕಾಶಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರುಗಳಿಬ್ಬರೂ ಅಭಿನಂದನಾರ್ಹರು.

‍ಲೇಖಕರು Avadhi

19 May, 2021

3 Comments

  1. T S SHRAVANA KUMARI

    ಉತ್ತಮ ಪುಸ್ತಕ ಪರಿಚಯ

  2. Meenakshi R

    ಮಲೇ ನಾಡಿನ ಪರಿಸರ ವನ್ನ ಇಡಿಯಾಗಿ ಕಟ್ಟಿಕೊಟ್ಟ ಉಲ್ಟಾ ಅಂಗಿಗೆ ತುಂಬಾ ಧನ್ಯವಾದಗಳು ನಮ್ಮಂತ ಬಯಲು ಸೀಮೆಯ ವರಿಗೆ ಮಲೆನಾಡಿನ ಚಿತ್ರಣ ಕಣ್ಣಿಗೆ ಕಟ್ಟುವಂತೆ ಮಾಡಿದ್ದೀರಿ ನಿಮ್ಮ ಮುಂದಿನ ಕತೆಗಳಿಗೂ ನಮ್ಮ ಕಾಯುವಿಕೆಯಲ್ಲಿ ಕಾತುರತೆ ಇದೆ

    • ತಮ್ಮಣ್ಣ ಬೀಗಾರ

      ಧನ್ಯವಾದಗಳು ಮೇಡಂ. ನಮಸ್ತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading