ಬದುಕಿನ ಸಂದಿಗ್ಧ ಅನುಭವಗಳಿರಬಹುದು ಅಥವಾ ಸುಂದರ ಅನುಭವಗಳಿರಬಹುದು ಅದನ್ನು ಹೊರಹಾಕಲು ಯಾವುದಾದರೂ ಒಂದು ಮಾಧ್ಯಮ ಅಗತ್ಯ. ಅದಕ್ಕೆ ನಾನು ದುಡಿಸಿಕೊಂಡ್ಡಿದ್ದು, ನನ್ನ ಜಾಯಮಾನಕ್ಕೆ ಹೊಂದಿಕೊಂಡ್ಡಿದ್ದು ರಂಗಭೂಮಿ, ಸಿನಿಮಾ. ಅನುಭವಗಳೇ ಬದುಕನ್ನು ಕಟ್ಟುವುದು ಮತ್ತು ಒಡೆಯುವುದು ಎಂಬುದು ನನ್ನಂಥವರ ಎಷ್ಟೋ ಮಂದಿ ಹೆಣ್ಣುಮಕ್ಕಳ ಜೀವನದಲ್ಲಿ ಈ ಎರಡೂ ಸಾಧ್ಯತೆಗಳಲ್ಲಿ ಸಾಬೀತಾಗಿದೆ. ಈ ಅನುಭವಗಳು ಹೇಳಿಕೊಡುವ ಪಾಠ, ಅವು ನಮ್ಮನ್ನು ಗಟ್ಟಿಗೊಳಿಸುವ ಮತ್ತು ಸಡಿಲಗೊಳಿಸುವ ಪರಿ ನಿಜಕ್ಕೂ ನನಗೆ ಒಮ್ಮೊಮ್ಮೆ ಜಾದೂ ಅನ್ನಿಸಿಬಿಡುತ್ತದೆ.
ಇದೇ ನನ್ನ ಅನುಭವಗಳ ಹೆಜ್ಜೆಗಳನ್ನು ಗುರುತಿಸಿದರೆ ಕಡು ಕಷ್ಟದ ದಿನಗಳು ಬಂದವು. ಬಂದಿದ್ದೆಲ್ಲಾ ಬರಲಿ ಭಗವಂತನ ದಯೆ ಒಂದಿರಲಿ ಎಂದು ಕೈ ಕಟ್ಟಿ ಕುಳಿತುಬಿಟ್ಟಿದ್ದರೆ ಇಂದು ನಾನು ಪಡೆದಿರುವ ವಿಸ್ತಾರವಾದ ಅನುಭವ ದೊರಕುತ್ತಿರಲ್ಲಿಲ. ಹೀಗೆಯೇ ಕೈ ಚಲ್ಲಿ ಕುಳಿತುಬಿಟ್ಟಿದ್ದರೆ, ಅನುಭವಗಳಿಗೆ ಅರ್ಥ ತಂದುಕೊಡಲು ಪ್ರಯತ್ನಿಸದಿದ್ದಿದ್ದರೆ, ಅಲ್ಲಿಗೆ ಬದುಕು ಮುಗಿಸಿ ಹೊಸ ಅನುಭವ ತುಂಬಿದ ಬದುಕಿನ ಕದ ತೆಗೆಯದೆ ಮುಚ್ಚಿಬಿಡುತ್ತಿತ್ತು. ಈ ರೀತಿಯಾಗಿ ಅದೆಷ್ಟೋ ಜನ ಅನುಭವದ ಮನೆಯ ಬೀಗಹಾಕಿಬಿಡುವ ಉದಾಹರಣೆಗಳು ಎಷ್ಟೋ ಇವೆ. ಇನ್ನು ಕೆಲವರು ಬೀಗ ತೆಗೆದು ಮನೆಯನ್ನು ಸ್ವಚಗೊಳಿಸಿ, ಹೊಸ ಬದುಕನ್ನು ಅದೇ ಮನೆಯಲ್ಲಿದ್ದು ಜಗತ್ತಿನಲ್ಲಿ ಇರುವ ಹೊಸ ಸಾಧ್ಯತೆಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಈ ಹುಡುಕಾಟದಲ್ಲಿ ನಿಮ್ಮ ಉಮಾಶ್ರೀ ಇಲ್ಲಿಯ ವರೆಗೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಬಂದಿದ್ದಾಳೆ.
ಇದುವರೆಗೂ ಈ ಅನುಭವಗಳು ಕೊಟ್ಟ ಅದಮ್ಯವಾದ ಗಟ್ಟಿತನದಿಂದ, ನಾನು ಅನೇಕ ರಂಗ ಕಲಾಕೃತಿಗಳಲ್ಲಿ, ಸಿನಿಮಾ ಆಕೃತಿಗಳಲ್ಲಿ, ಭಾಷಣಗಳಲ್ಲಿ, ಕೌಟುಂಬಿಕ ನೆಲೆಯ ಹಲವು ಸ್ತರಗಳಲ್ಲಿ, ವ್ಯಯಕ್ತಿಕ ನೆಲೆಯಲ್ಲಿ, ಸಾಮಾಜಿಕ ವಿನ್ಯಾಸದ ಕೆಲವು ನೆಲೆಗಳಲ್ಲಿ ಇವೇ ಅನುಭವಗಳನ್ನು ಉಪಯೋಗಿಸಿಕೊಂಡ್ಡಿದ್ದೇನೆ. ಈ ಕೊಡುವ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನನ್ನ ಬದುಕು ಮತ್ತು ವ್ಯಕ್ತಿತ್ವ ಎರಡೂ ಸಾಕಷ್ಟು ರೀತಿಯಲ್ಲಿ ಸ್ವಯಂ ಏರ್ಪಾಡಾಗಿದೆ. ಇದನ್ನೆಲಾ ಬಳಸಿಕೊಂಡು ನಾಟಕಗಳಲ್ಲಿ, ಸಿನಿಮಾಗಳಲ್ಲಿ ಅಥವಾ ರಾಜಕೀಯ ರಂಗದಲ್ಲಿ ನನ್ನನ್ನು ನಾನೇ ಕಾಣುವ ಮತ್ತು ಸಮಾಜದಲ್ಲಿ ತೆರೆದುಕೊಳ್ಳುವ ಪ್ರಯತ್ನ ನಿತ್ಯವಾಹಿನಿಯಂತೆ ಹರಿಯುತ್ತಲೇ ಇದೆ. ಇದರಾಚೆಗೂ ಅಂದರೆ ಕಲಾಕೃತಿಯಲ್ಲಿ, ಕೃತಿಯನ್ನು ಕಟ್ಟುವುದರ ಜೊತೆಗೆ ಅಕ್ಷರ ಕಟ್ಟಬೇಕೇಂದು ಇತ್ತೀಚಿಗೇಕೋ ಸಾಕಷ್ಟು ಬಾರಿ ನನಗೆ ಅನ್ನಿಸುತ್ತಿದೆ.
ಬೇಲೂರು ರಘುನಂದನ್ ಅವರ ‘ಶ್ವೇತಪ್ರಿಯ’ ಕವನ ಸಂಕಲನವನ್ನು ಓದಿ, ನನ್ನ ಅನುಭವಕ್ಕೆ ದಕ್ಕಿದ ವಿಚಾರಗಳನ್ನು ಬೆನ್ನುಡಿಯ ರೂಪದಲ್ಲಿ ಬರೆದಾಗಿನಿಂದ ನನ್ನ ಭಾವನೆಗಳೂ ಅಕ್ಷರಗಳಾಗಿ ಮಾತಾಡುತ್ತವೆ, ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದೇನೆ. ಆದರೆ ಮೊದಮೊದಲು ಅಳುಕು ಎಲ್ಲರಿಗೂ ಇರುವಂತೆ ಬರೆಯುವಾಗ ನನಗೂ ಇತ್ತು. ಈಗ ಅಭಿನಯ ಮಾಡುವಷ್ಟೇ ದೈರ್ಯವಾಗಿ ಬರೆಯಬಲ್ಲೆ ಎಂದು ನನಗೆ ಅನ್ನಿಸುತ್ತಿದೆ. ಹಾಗಾಗಿ ನನ್ನ ಆತ್ಮಕತೆಯನ್ನು ನಾನೇ ಬರೆಯಬೇಕೆಂಬ ಕನಸು ನನ್ನ ಬೆನ್ನೇರಿದೆ. ಆದರೆ ನನ್ನ ಸಾಧನೆಗಳ ಪಟ್ಟಿಯಲ್ಲಿ ನಾನು ಸಮಷ್ಟಿಗೆ ಕೊಡಬೇಕಾದದ್ದು ಇನ್ನೂ ಇವೆ. ಅದಕ್ಕಾಗಿ ಕಾಯುತ್ತಿದ್ದೇನೆ. ಹಂಬಲವಿದ್ದಾಗ ಕಾಯುವುದರಲ್ಲಿ ಅರ್ಥವಿದೆ ಅಲ್ಲವೆ?
ಸಾಹಿತ್ಯ ರಚನೆಗೆ ಅನುಭವಗಳೇ ಮುಖ್ಯ. ಅನುಭವಗಳಿಂದ ಕವಿ, ಕಥೆಗಾರ ಕೃತಿಗೆ ಜೀವತುಂಬುತ್ತಾನೆ. ಹಾಗೆಯೇ ಕಲಾವಿದರಾದ ನಾವು ಕೂಡಾ ಪಾತ್ರಗಳಿಗೆ ಜೀವತುಂಬುವ ಕೆಲಸವನ್ನೇ ಮಾಡುತ್ತೇವೆ. ಆದರೆ ಅವರದ್ದು ಲಿಖಿತ ನಮ್ಮದು ಮೌಖಿಕ, ಆಂಗಿಕ, ಮತ್ತು ಭಾವುಕ. ಇವುಗಳನ್ನು ಸಾಹಿತ್ಯವೆಂದು ಯಾಕೆ ಪರಿಗಣಿಸಬಾರದೆಂಬ ಪ್ರಶ್ನೆ ಹಲವು ಬಾರಿ ನನ್ನ ಮುಂದೆ ಬಂದರೂ, ಸಾಹಿತ್ಯ ಕಲೆ ಇವೆಲ್ಲದರ ಬೇರು ಒಂದೇ ತಾನೆ ಅನ್ನುವುದೂ ಕೂಡಾ ಅಷ್ಟೇ ಸ್ಪಷ್ಟ. ಅಂತಿಮವಾಗಿ ಎಲ್ಲಾ ಕಲಾ ಪ್ರಕಾರಗಳು ಬಯಸುವುದು ಅನುಭವಗಳನ್ನು ಮಾತ್ರ ತಾನೆ?
ಇದೇ ಅನುಭವಗಳ ಜಾಡನ್ನು ಹಿಡಿದು ನನ್ನ ಆತ್ಮಕ್ಕೊಂದು ಚರಿತ್ರೆ ಇದೆ, ಎಂಬುವುದಕ್ಕಿಂತ ನನ್ನ ಆತ್ಮದ ಅನುಭವಗಳನ್ನು ‘ಆತ್ಮಚರಿತ್ರೆ’ ಎಂಬ ಹೆಸರಲ್ಲಿ ಖಂಡಿತವಾಗಿಯು ಮುಂದಿನ ದಿನಗಳಲ್ಲಿ ಬರೆಯುತ್ತೇನೆ. ಅದಕ್ಕೆ ಬೇಕಾದ ಮಾನಸಿಕ ತಯಾರಿ, ಅನುಭವ ಮತ್ತು ಘಟನೆಗಳ ಜೋಡಣೆ ಮಾಡುವ ಪ್ರಕ್ರಿಯೆಲ್ಲಿ ಈಗಾಗಲೆ ತೊಡಗಿಕೊಂಡಿದ್ದೇನೆ. ನಾನು ನಿಭಾಯಿಸಬೇಕಿರುವ ಇನ್ನೂ ಹಲವು ಪಾತ್ರಗಳಿವೆ. ಅವುಗಳ ನಿರ್ವಹಣೆಯ ನಂತರ, ಈಗಾಗಲೆ ತೆರದಪುಸ್ತಕದಂತೆ ಕೆಲವು ನನ್ನ ಬದುಕಿನ ವಿಚಾರಗಳು ಗೊತ್ತಿದ್ದರು, ಇನ್ನೂ ಅನೇಕಾನೇಕ ಜಗತ್ತಿಗೆ ಗೊತ್ತಿರದ ಉಮಾಶ್ರೀ ಎದೆಯೊಳಗೆ ಬೇಯುತ್ತಿರುವ, ಹಾಡುತ್ತಿರುವ, ಕುಣಿಯುತ್ತಿರುವ, ಕಣ್ಣೀರಿಡುತ್ತಿರುವ ಇಳಿಸಲಾರದ ಅನುಭವದ ಮೂಟೆಗಳು ಅದೆಷ್ಟೋ ಇವೆ. ಹಾಗೂ ನೋವು ನಲಿವುಗಳು, ಸೋಲು ಗೆಲುವುಗಳು, ಬದುಕು ಬವಣೆಗಳನ್ನು ನಿಮ್ಮ ಮುಂದೆ ಅಕ್ಷರವಾಗಿಸಿ, ಪುಸ್ತಕವಾಗಿಸಿ ನಾನೇ ನಿಮಗೆ ಕೊಡುತ್ತೇನೆ.
ಬಿ. ಗಣಪತಿಯವರು ಈಗಾಗಲೇ ಬೆಂಕಿ ಬೆಡಗು ಉಮಾಶ್ರೀ ಅನ್ನುವ ಪುಸ್ತಕವನ್ನು ಅಹರ್ನಿಶಿ ಪ್ರಕಾಶನದ ಅಕ್ಷತಾ ಅವರ ಸಹಕಾರದಿಂದ ಹೊರತರುತ್ತಿದ್ದಾರೆ. ಅದಕ್ಕೆ ನಾಡಿನ ಖ್ಯಾತ ವಿಮರ್ಶಕರೂ, ಕವಿ, ನಾಟಕಕಾರರು ಆದ ಎಚ್. ಎಸ್. ಶಿವಪ್ರಕಾಶ್ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಇದೆಲ್ಲಾ ಸಂತೋಷದ ವಿಷಯ. ಹಾಗೆಯೇ ಇದು ನನ್ನ ಬದುಕನ್ನು ಹಲವು ದಿಕ್ಕುಗಳಿಂದ ಅವಲೋಕನ ಮಾಡಿಕೊಳ್ಳುವ ಸಂಗತಿ. ಆದರೆ ಈ ಪುಸ್ತಕ ಬರುತ್ತದೆ ಎಂಬುದರ ಸೂಚಕವಾಗಿ ಕೆಲವು ತಿಂಗಳ ಹಿಂದಷ್ಟೇ, ಶಿವಪ್ರಕಾಶ್ ಅವರು ಒಂದು ಪತ್ರಿಕೆಯಲ್ಲಿ ಲೇಖನ ಬರೆದಾಗಿನಿಂದಲೂ ಮಾಧ್ಯಮದ ಮಿತ್ರರು, ರಂಗದ ಗೆಳೆಯರು, ರಾಜಕೀಯದ ಒಡನಾಡಿಗಳು, ಬಂಧುಗಳು, ಸ್ನೇಹಿತರು, ಅಭಿಮಾನಿಗಳು ಇನ್ನೂ ಅನೇಕರು ಹಲವಾರು ಕಡೆ ಸಿಕ್ಕಾಗೆಲ್ಲ ನಿಮ್ಮ ಆತ್ಮಕತೆ ಬರುತ್ತಿದೆಯಲ್ಲಾ? ಯಾವಾಗ? ಪುಸ್ತಕ ಯಾವಾಗ ಸಿಕ್ಕಿತ್ತದೆ? ಎಂಬ ಹಲವಾರು ಪ್ರಶ್ನೆಗಳನ್ನು ಹಾಕುತ್ತಿದ್ದಾರೆ.
ನಾನು ಕೂಡಾ ‘ನನ್ನ ಆತ್ಮಚರಿತ್ರೆ ಬರುತ್ತಿಲ್ಲ. ಬಿ. ಗಣಪತಿಯವರು ನಿರೂಪಿಸಿದ ಬೆಂಕಿ ಬೆಡಗು ಉಮಾಶ್ರೀ ಪುಸ್ತಕ ನನ್ನ ಆತ್ಮಚರಿತ್ರೆ ಅಲ್ಲ’ ಅಂತ ಉತ್ತರಿಸುತ್ತಿದ್ದೇನೆ. ಹಾಗೂ ಇಂಟರ್ನೆಟ್ನಲ್ಲಿ, ಹಲವು ಬ್ಲಾಗ್ಗಳಲ್ಲಿ ಇದೇ ಚರ್ಚೆ ನಡೆಯುತ್ತಿದೆ. ಹಾಗಾಗಿ ಓದುಗರು ಉಮಾಶ್ರೀ ಆತ್ಮಚರಿತ್ರೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಪುಸ್ತಕ ಬಂದ ಮೇಲೆ ಸಾಹಿತ್ಯಾಸಕ್ತರು ನಿರಾಶರಾಗಬಾರದು, ಬರುತ್ತಿರುವ ಬೆಂಕಿ ಬೆಡಗು ಉಮಾಶ್ರೀ ಪುಸ್ತಕ ಆತ್ಮಚರಿತ್ರೆ ಎಂದು ಭಾವಿಸ ಬಾರದು ಅಂತ ನನ್ನ ಮನವಿ. ಬಿ.ಗಣಪತಿಯವರು ಹಿಂದೆ ರೂಪತಾರ ಪತ್ರಿಕೆಗೆ ನನ್ನನ್ನು ಸಂದರ್ಶಿಸಿ ಬರೆದ ನನ್ನ ಬದುಕಿನ ಕೆಲವು ಅನುಭವಗಳ ಎಪಿಸೋಡುಗಳು ಎಂಬುದನ್ನು ಸಾಹಿತ್ಯ ಪ್ರಿಯರು ಗ್ರಹಿಸಬೇಕು.
ಆದರೆ, ನಾನು ಹಂಚಿಕೊಂಡ ಕೆಲವು ಮೌಲಿಕವಾಗಿದ್ದ ಅನುಭವಗಳಿಗೆ ಅಕ್ಷರ ರೂಪ ಕೊಡುತ್ತಿರುವುದಕ್ಕೆ, ಕಲಾವಿದೆಯನ್ನು ಕುರಿತು ಒಂದು ಪುಸ್ತಕ ಮಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ. ಕಲಾವಿದೆಯನ್ನು ಆಧರಿಸಿದ ಪುಸ್ತಕ ಒಂದನ್ನು ಸಾಹಿತ್ಯ ಲೋಕಕ್ಕೆ ಕೊಡುತ್ತಿರುವುದು ಅಭಿನಂದನಾರ್ಹ. ಅಂತಿಮವಾಗಿ ಇವುಗಳೆಲ್ಲವುಗಳ ಒಟ್ಟು ಮೊತ್ತ ಅನುಭವಗಳನ್ನು ಹುಡುಕಿ, ಕೆದಕಿ, ಕೃತಿಯನ್ನು ಕಲಾಕೃತಿಯನ್ನಾಗಿಸುವುದು ಅಂತ ಭಾವಿಸಿದ್ದೇನೆ.
ಉಮಾಶ್ರೀ ಬರೆಯುತ್ತಾರೆ: ನಾನೂ ಆತ್ಮಚರಿತ್ರೆ ಬರೆಯುತ್ತೇನೆ
ನಿಮಗೆ ಇವೂ ಇಷ್ಟವಾಗಬಹುದು…






ಅಮ್ಮ ನಿಮ್ಮ ಭಾವನೆಗಳಿಗೆ,ಅಕ್ಷರಗಳಿಗೆ ಎಷ್ಟೊಂದು ಶಕ್ತಿಯಿದೆ …..ನೀವೊಬ್ಬ ಅದ್ಭುತ ಕಲಾವಿದೆ ಮಾತ್ರ ಅಲ್ಲ. ಒಬ್ಬ ಸಾಹಿತಿ,ಚಿಂತಕಿ,ವಿಮರ್ಶಕಿ,ಸಮಾಜ ವಿಜ್ಞಾನಿ,,,,,,,,
ನಿಮ್ಮಗೆ ಅದು ಸಾಧ್ಯವಾದರೆ ಖಂಡಿತ ಖುಷಿಯಾ ವಿಚಾರವೇ ಸರಿ
ಅನುಭವಗಳು ಗಟ್ಟಿಯಾದ ಬರಹವನ್ನು ಕೊಡುತ್ತವೆ ಎಂಬುದಕ್ಕೆ ನಿಮ್ಮ ಬರವಣಿಗೆಯೇ ಸಾಕ್ಷಿ. ಕೇವಲ ಕಲ್ಪನೆಯ ರಸಿಕತೆಯೇ ಬಂಡವಾಳವಾಗಿ ಬರುತ್ತಿರುವ ಇತ್ತೀಚಿನ ಜೊಳ್ಳು ಲೇಖನಗಳಿಗೆ, ಸಾಹಿತ್ಯಕ್ಕೆ ಉತ್ತರಿಸುವಂತಿದೆ ನಿಮ್ಮ ಈ ಸಾಲುಗಳು. ಸಂಸಾರ ತಾಪತ್ರಯಗಳಲ್ಲಿ ಗೋಳೋ ಎಂದು ಅಳುತ್ತ, ಕಂಡವರನ್ನೆಲ್ಲ ದೂಷಿಸುತ್ತ ತಮ್ಮದೊಂದು ಬದುಕು ರೂಪಿಸಿಕೊಳ್ಳದ ಎಷ್ಟೋ ಮಹಿಳೆಯರನ್ನು ನೋಡಿದಾಗ ನಾನು ನೆನಪಿಸಿಕೊಳ್ಳುವ ಮಹಿಳೆಯರ ಮುಖಗಳಲ್ಲಿ ನಿಮ್ಮದೂ ಇರುತ್ತದೆ. ಸಾಹಸಿ ಮಹಿಳೆಯರು, ಬದುಕಿನ ಸಾವಿರ ನೋವು, ನಲಿವುಗಳ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಾಗ ಕಿರಿಯ ಹೆಣ್ಣುಮಕ್ಕಳಿಗೆ ಜೀವನದಾರಿಯಲ್ಲಿ ಎಲ್ಲೆಲ್ಲೆ ಅಡತಡೆಗಳಿವೆ, ಅವುಗಳನ್ನು ಹೇಗೆ ನಿಭಾಯಿಸಬಹುದು ಎಂಬುದು ಗೊತ್ತಾಗುತ್ತದೆ. ಅಂತಹ ನೋವುಗಳನ್ನೇ ಗೆದ್ದು ಬಂದವರಿದ್ದಾರೆ, ಇನ್ನು ನನ್ನದ್ಯಾವುದು ಲೆಕ್ಕ ಎಂದು ನೋವಿನ ಕೂಪದಿಂದ ಎದ್ದು ಬರಲು ಖಂಡಿತವಾಗಿಯೂ ನಿಮ್ಮಂತಹ ಸಾಹಸಿಗರ ಕಥೆ ಸ್ಫೂರ್ತಿ ನೀಡುತ್ತದೆ. ಅಂತಹ ಒಂದು ಸ್ಫೂರ್ತಿ ಬೇಗ ಬರಲಿ.
ತಮ್ಮ ಆತ್ಮಚರಿತ್ರೆಯನ್ನ ತಾವೆ ಬರೆಯುವುದು ನಿಜಾವಾಗಿಯು ಒಳ್ಳೆಯದು ಎಕೆಂದರೆ ಅದರಲ್ಲಿ ಅನುಭವದ ತೊಕ ಅಕ್ಷರ ರೂಪದಲ್ಲಿರುತ್ತದೆ ಮತ್ತು ಅಂತಹ ಬರಹವನ್ನು ಒದಿದಾಗ ಆಗುವ ಸುಂದರ ಅನುಭವ ಆ ಒದುಗನೊಬ್ಬನಿಗೆ ಗೊತ್ತು. ಒಬ್ಬ ಬರಹಗಾರ ಮತ್ತೊಬ್ಬರ ಆತ್ಮಚರಿತ್ರೆ ಬರೆಯುವುದು ಸಾಮಾನ್ಯವಾಗಿದೆ. ಆದರೆ ಇಂತಹ ಬರವಣಿಗೆಯಲ್ಲಿ ಅಕ್ಷರವಿರುತ್ತದೆ ಆದರೆ ಆತ್ಮಚರಿತ್ರೆಗಾರನ ಅನುಭವ ಕಣ್ಣುಂದೆ ಬರುವುದಿಲ್ಲ. ಯಾರು ತಮ್ಮ ಆತ್ಮಚರಿತ್ರೆಯನ್ನ ತಾವೆ ಬರೆಯತ್ತಾರೊ, ಅಂತಹ ಬರವಣಿಗೆ ನಿಜಾವಾಗಿಯೂ ಒಳ್ಳೆಯ ಸಾಹಿತ್ಯದ ಚರಿತ್ರೆಗೆ ಸೇರುತ್ತದೆ. ಈಗ ಉಮಾಶ್ರೀಯವರು ತಮ್ಮ ಆತ್ಮಚರಿತ್ರೆಯನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೆ ಎಂದು ಹೇಳಿದ್ದಾರೆ. ನಮಗೆ ಇದು ನಿಜಾವಾಗಲು ಖುಷಿ ವಿಷಯ. ನಾವು ಅದ್ದಕ್ಕಾಗಿ ಕಾಯುತ್ತೇವೆ.
ಶೀಲ ಅವರ ಮಾತುಗಳು ನಿಜಕ್ಕೂ ಅರ್ಥಪೂರ್ಣವಾದವು.ಲೇಖನದ ದೃಷ್ಟಿಕೋನವನ್ನು ಸರಿಯಾಗಿ ಗುರುತಿಸಿದ್ದಾರೆ.
ಪುಟ್ಟ ಮಲ್ಲಿಯ ಬೆಟ್ಟದಂಥ ಅನುಭವಗಳಿಗಾಗಿ ಎದುರು ನೋಡುತ್ತಿದ್ದೇವೆ.
ಅಭಿನಯ ಸಲೀಸು ಅಂತ ಗೊತ್ತಿತ್ತು ಅಕ್ಷರವೂ ನಿಮಗೆ ಸಲೀಸು ಅಂತ ಈಗ ತಿಳಿಯಿತು
ನಿಮ್ಮ ಅಕ್ಷರಗಳಿಗಾಗಿ ಎದುರು ನೋಡುತ್ತೇವೆ ಉಮಕ್ಕಾ, ಕುತೂಹಲ ಎನ್ನುವುದಕ್ಕಿಂತ ಒಬ್ಬ ಅತ್ಯುತ್ತಮ ನಟಿಯ ಜೀವನ ಹೇಗಿರಬಹುದೆಂಬ ಕಾತರ. ನಾವಂತು ಕಾಯುತಿದ್ದೇವೆ
ಅಭಿನಯದ ಮೇರು ಪ್ರತಿಭೆಯ ಅನುಭವಗಳ ಜೀವನಸಾರ ಆವರ ಕೈಯ್ಯಲ್ಲೇ ‘ಆತ್ಮಚರಿತ್ರೆ’ಯಾಗಿ ಹೊರಬರುವುದು ಬರುವುದು ಖುಷಿಯ ವಿಚಾರ. ನಟನೆಯಷ್ಟೇ ಸಲಿಸಾಗಿ ಅಕ್ಷರ ಕೃಷಿಯೂ ಆಗುತ್ತದೆ ಎಂಬುದಕ್ಕಿದೊಂದು ಉದಾಹರಣೆ. ‘ಬೆಂಕಿ ಬೆಡಗು’ ಕೃತಿಗೂ ಕಾಯುತ್ತಿದ್ದೇವೆ, ಅಭಿನಂದನೆಗಳು ಉಮಾ ಅಮ್ಮಾ. 🙂
UMASRI Madam,After the book of BANNADA GANTE by umesh, your book will be most eagerly awaited one.I am really waiting for your autobiography,because I know you are the one person having unique experiences in karnataka,as an artiste, a rural based women,a politician,a backward class person,more over UMASRI as an individual.I Hope you will write it soon,Any how best wishes for your interview based book BENKI BEDAGU