‘ಅವಧಿ’ಬಳಗವು ನನ್ನನ್ನು ಲಿಬಿಯಾದ ಬಗ್ಗೆ ಬರೆದು ಕೊಡಿ ಎಂದು ಕೇಳಿದಾಗ ನನಗೆ ತಕ್ಷಣ ಎಲ್ಲಿಂದ ಆರಂಭಿಸಬೇಕೆಂದು ತಿಳಿಯಲಿಲ್ಲ. ನಾನು ಮೊಟ್ಟ ಮೊದಲಿಗೆ ಲಿಬಿಯಾದ ರಾಜಧಾನಿ ಟ್ರೀಪೋಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಲ್ಲಿ ಸಮಾನತೆಯ ಸಿದ್ಧಾಂತಕ್ಕೆ ಸಂಬಂಧಪಟ್ಟ ಹಾಗೆ ನನ್ನನ್ನು ಬಹುವಾಗಿ ಆಕರ್ಷಿಸಿದ ಬೋರ್ಡೊಂದರ ಸಾಲಿನಿಂದ ಆರಂಭಿಸಲೆ? ಅಥವಾ ಎರಡನೇ ದಿನವೇ ಟ್ಯಾಕ್ಶಿ ಡ್ರೈವರ್ ನೊಬ್ಬನನ್ನು “ಇಲ್ಲಿ ಟಾಯ್ಲೆಟ್ ಎಲ್ಲಿ?’ ಎಂದು ಅರೇಬಿಕ್ ಬಾರದ ನಾನು ಇಂಗ್ಲೀಷಿನಲ್ಲಿ ಕೇಳಿ ಅವನನ್ನು ಅರ್ಥ ಮಾಡಿಸಲು ಹೆಣಗಾಡಿದ ಪ್ರಸಂಗದಿಂದ ಬರೆಯಲೆ?
ಅಥವಾ ಲಿಬಿಯನ್ನರು ಮಾತಿಗೂ ಮುಂಚೆ ಸಲಾಂ ಅಲೀಕ್, ಕೆಫೆಹಲಾಲ್, ಕೋಯಿಸ್ ಎಂದೆಲ್ಲಾ ಆರಂಭಿಸಿ ನೀವು ಹೇಗಿದ್ದಿರಿ? ನಿಮ್ಮ ಅಪ್ಪ ಹೇಗಿದ್ದಾನೆ? ಅಮ್ಮ ಹೇಗಿದ್ದಾಳೆ? ಅಕ್ಕ ಹೇಗಿದ್ದಾಳಿ? ತಂಗಿ ಹೇಗಿದ್ದಾಳೆ? ಅಣ್ಣ ಹೇಗಿದ್ದಾನೆ? ತಮ್ಮ ಹೇಗಿದ್ದಾನೆ? ಎಂದೆಲ್ಲಾ ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕೇಳುವದಲ್ಲದೆ ಕೊನೆಗೆ ನಿಮ್ಮ ಹೊಲದಲ್ಲಿರುವ ಕುರಿ, ಕೋಳಿ, ಒಂಟೆಗಳು ಸಹ ಹೇಗಿವೆ? ಎಂದೆಲ್ಲಾ ಪ್ರಾಣಿಗಳ ಬಗ್ಗೆಯೂ ವಿಚಾರಿಸಿಕೊಳ್ಳುವದು ನಮಗೆಲ್ಲಾ ತಮಾಷೆಯಾಗಿ ಕಂಡಿದ್ದನ್ನು ಬರೆಯಲೆ?
ಅಥವಾ ಇವರಿಗೆ ಇಂಗ್ಲೀಷೇ ಬಾರದೆಂದುಕೊಂಡು ನಾವು ಕ್ಲಾಸಿರೂಮಿನೊಳಗೆ ಕಾಲಿಟ್ಟಾಗ ಅವರಲ್ಲಿ ಕೆಲವರ ಇಂಗ್ಲೀಷನ್ನು ಕೇಳಿ ನಾವೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದನ್ನು ಬರೆಯಲೆ? ಅಥವಾ ಯಾವುದೇ ಜಾಗತೀಕರಣದ ತೀವ್ರ ಪ್ರಭಾವಕ್ಕೊಳಗಾಗದೆ ಆಧುನಿಕ ಬದುಕನ್ನು ಬದುಕುತ್ತಾಇನ್ನೂ ಮೌಲ್ಯಗಳನ್ನು ಉಳಿಸಿಕೊಂಡಿರುವ ಇಲ್ಲಿನ ಬುಡಕಟ್ಟು ಜನರ ಬಗ್ಗೆ ಬರೆಯಲೆ? ಅಥವಾ ಮನೆಯಲ್ಲಿ ಹೀಟರ್ ಗಳನ್ನು ಹಾಕಿಕೊಂಡು ಕುಳಿತರೂ ಮೈ ನಡುಗಿಸುವಷ್ಟುಕೆಟ್ಟದಾಗಿರುವಇಲ್ಲಿನ ಚಳಿಯ ಬಗ್ಗೆ ಬರೆಯಲೆ?ಅಥವಾ ಮೈ ಸುಟ್ಟುಹೋಗುವಷ್ಟು ಅನುಭವವಾಗುವ ಇಲ್ಲಿನ ರಣಬಿಸಿಲಿನ ಬಗ್ಗೆ ಬರೆಯಲೆ?
ಯಾವುದರ ಬಗ್ಗೆ ಮೊದಲು ಬರೆಯಲಿ ಎಂದು ಯೋಚಿಸುವಾಗಲೆಲ್ಲಾ ಗಡಾಫಿ ನೆನಪಾಗುತ್ತಾನೆ.ಆತನ ಕರಾಳ ಅಂತ್ಯ ನೆನಪಾಗುತ್ತದೆ.ನಲವತ್ತೆರೆಡು ವರ್ಷಗಳ ಕಾಲದ ಆತನ ಆಳ್ವಿಕೆ ನೆನಪಾಗುತ್ತದೆ. ಆತನ ಸಿದ್ಧಾಂತಗಳು ನೆನಪಾಗುತ್ತವೆ. ಹೇಗಿದ್ದವ ಹೇಗಾಗಿ ಹೋದ? ಲಿಬಿಯಾ ಎಂದರೆ ಗಡಾಫಿ, ಗಡಾಫಿ ಎಂದರೆ ಲಿಬಿಯಾ ಎಂದು ಹೇಳುತ್ತಲೇ ಹೇಳಹೆಸರಿಲ್ಲದಂತೆ ನಾಶವಾಗಿ ಹೋದನಲ್ಲ? ಅಂಥವನ ಬಗ್ಗೆ ಮೊದಲು ಬರೆಯದೇ ಲಿಬಿಯಾದ ಇನ್ಯಾವ ವಿಷಯದ ಬಗ್ಗೆ ಬರೆಯಲಿ?ಹೀಗಾಗಿ ಮೊದಲು ಆತನ ಬಗ್ಗೆ ಒಂದಷ್ಟು ಬರೆದು ಆಮೇಲೆ ಮುಂದೆ ಹೋದರಾಯಿತು ಎಂದು ಅವನ ಬಗ್ಗೆ ಬರೆಯುತ್ತಿದ್ದೇನೆ.
ನಾನು 2007 ರಲ್ಲಿ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಸಾಗರದಾಚೆಯ ಸಾವಿರ ಸಾವಿರ ಮೈಲಿ ದೂರವಿರುವ ಲಿಬಿಯಾಗೆ ಬಂದಿಳಿದಿದ್ದೆ. ಗೆಳೆಯರು, ಸಹೋದ್ಯೋಗಿಗಳು “ನಮ್ಮ ಸುಂದರ ದೇಶ ಬಿಟ್ಟು, ಹೋಗಿಹೋಗಿ ಆ ಆಫ್ರಿಕಾ ದೇಶಕ್ಕೆಹೋಗತೀರಲ್ರಿ? ಬುದ್ದಿಯಿಲ್ಲ ನಿಮಗೆ”ಎಂದು ನಗಾಡಿದ್ದರು. ದುಡ್ದಿಗೆ, ಬುದ್ಧಿಗೆ ಆಫ್ರಿಕಾದೇಶ, ಯೂರೋಪ್ ದೇಶ, ಅರಬ್ ದೇಶ ಅಂತೆಲ್ಲಾ ಇರುತ್ತದೆಯೆ? ಎಲ್ಲಿ ನನ್ನ ಬುದ್ಧಿ ಬೆಲೆ ಬಾಳುತ್ತದೋ ಅಲ್ಲಿಗೆ ಹೋಗುವವನು ನಾನು. ಬುದ್ಧಿಗೆ ಹಾಗೂ ಅದನ್ನು ಹಿಂಬಾಲಿಸಿಕೊಂಡು ಬರುವ ದುಡ್ದಿಗೆ ಜಾಗದ ಹಂಗಿಲ್ಲ. ಅಥವಾ ’ಕೆಲಸ ಮಾಡಿದರೆ ನಮ್ಮ ದೇಶದಲ್ಲಿಯೇ ಮಾಡಬೇಕು’ ಎನ್ನುವ ಭಯಂಕರ ಸ್ವಾಭಿಮಾನದ ಕಟ್ಟಿಗೆಬಿದ್ದು ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವಷ್ಟು ಕಟ್ಟಾ ದೇಶಾಭಿಮಾನಿಯಾಗಲಿ ಅಥವಾ ಸಿಗದೇ ಇರುವ ಅವಕಾಶವನ್ನು ದೇಶಾಭಿಮಾನದ ನೆಪವೊಡ್ಡಿ ಹೋಗಲಿಲ್ಲ ಎಂದು ಹೇಳುವ ಸೋಗಲಾಡಿ ಮನುಷ್ಯನಾಗಲಿ ನಾನಲ್ಲವಾದ್ದರಿಂದ ಅವರ ಮಾತಿಗೆ ನನ್ನ ನಿರ್ಲಕ್ಷ್ಯ ನಗೆಯೊಂದನ್ನು ಉತ್ತರವಾಗಿ ನೀಡಿ ಇಲ್ಲಿಗೆ ಹಾರಿಬಂದಿದ್ದೆ.
ಹೋಗುವ ಮುನ್ನ ನೂರು ಜನ ನೂರು ಮಾತನಾಡಿದ್ದರು. “ಅಯ್ಯೋ ಆಫ್ರಿಕಾ ದೇಶಾನಾ? ಅಯ್ಯೋರಾಮ! ಮುಗಿದೇ ಹೋಯ್ತು ನಿಮ್ಮಕಥೆ! ಅದೊಂದು ಕೆಟ್ಟ ಖಂಡ! ಅಲ್ಲಿಗ್ಯಾಕ್ರಿ ಹೋಗ್ತೀರಾ?” ಎಂದು ನನ್ನ ಸಹದ್ಯೋಗಿಯೊಬ್ಬರು ಇಡೀ ಆಫ್ರಿಕಾ ಖಂಡವನ್ನೇ ಸುತ್ತಿ ಬಂದವರ ತರ ಅಧಿಕೃತವಾಗಿ ಘೋಷಿಸಿಬಿಟ್ಟರು. ಇನ್ನೊಬ್ಬರು “ಅಲ್ಲಿ ಯೆಲೋ ಫಿವರ್, ಏಡ್ಸು ತುಂಬಾ ಜಾಸ್ತೀರೀ. ಹುಷಾರು!” ಎಂದು ಎಚ್ಚರಿಸಿದ್ದರು. ಇನ್ನುಕೆಲವರು “ಅಲ್ಲಿ ಕಳ್ಳತನ, ಕೊಲೆಎಲ್ಲಾ ತುಂಬಾ ಕಾಮನ್ ಅಂತೆ. ಯಾವುದಕ್ಕೂ ಹುಷಾರಾಗಿರಿ. ರಾತ್ರಿ ಹೊರಗೆ ಒಬ್ರೇ ಎಲ್ಲೂ ಓಡಾಡಬೇಡಿ”ಎಂದು ನನ್ನ ಬಗ್ಗೆ ಕಳಕಳಿ ವ್ಯಕ್ತ ಪಡಿಸುತ್ತಾ ಒಂದಷ್ಟು ಉಪದೇಶಿಸಿದ್ದರು. ಮತ್ತೆ ಕೆಲವರು “ಫಾರಿನ್ ಗೆ ಹೋಗೋದಾದರೆ UK, USA, ಆಸ್ಟ್ರೀಲಿಯಾ, ಯೂರೋಪ್ ದೇಶಗಳಿಗೆಮಾತ್ರ ಹೋಗಬೇಕಪ್ಪ, ಅದು ಬಿಟ್ಟು ಬೇರೆ ದೇಶಗಳಿಗೆ ಹೋಗೋದ್ರಲ್ಲಿ ಏನು ಸುಖ ಇದೆ?”ಎಂದು ವ್ಯಂಗ್ಯವಾಡಿದ್ದರು. ಇನ್ನು ಕೆಲವರು ‘ಅದು ನಿರಂಕುಶವಾದಿ ಮೌಮೂರ್ ಗಡಾಫಿಯ ಹಿಡಿತದಲ್ಲಿರುವ ದೇಶ, ಅಲ್ಲಿನ ಸ್ಥಿತಿಗತಿಗಳು ಅಷ್ಟೇನೂ ಚನ್ನಾಗಿರಲಿಕ್ಕಿಲ್ಲ, ಅಲ್ಲಿಗ್ಯಾಕ್ರೀ ಹೋಗ್ತೀರಿ?’ ಎಂದು ನನ್ನ ಬಗ್ಗೆ ಭಾರಿ ಕಾಳಜಿ ವಹಿಸಿ ಮಾತನಾಡಿದ್ದರು. ಏನಾದರಾಗಲಿ, ಸಿಕ್ಕ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ? ಎಂದು ಕೊಂಡು ನಾನು ಲಿಬಿಯಾಗೆ ಹೊರಟು ಬಂದಿದ್ದೆ.
ಮೇಲಾಗಿ ಗಡಾಫಿ ಒಬ್ಬ ತಿಕ್ಕಲು, ವಿಲಕ್ಷಣ ವ್ಯಕ್ತಿ, ವಿಕ್ಷಿಪ್ತ ಮನಸ್ಸಿನವನು ಹಾಗೂ ಅಮೇರಿಕನ್ನರಂಥ ಅಮೆರಿಕನ್ನರಿಗೆ ಸೆಡ್ಡು ಹೊಡೆದು ನಿಲ್ಲುವವನು ಎಂದು ಕೇಳಿ ತಿಳಿದುಕೊಂಡಿದ್ದೆ. ಈ ತೆರದ ವಿಲಕ್ಷಣ ವ್ಯಕ್ತಿಗಳು ತುಂಬಾ ಇಂಟರೆಸ್ಟಿಂಗ್ ಮಾತ್ರವಲ್ಲ ಅಸಾಮಾನ್ಯ ಸಾಧಕರು ಕೂಡ ಆಗಿರುತ್ತಾರೆ. ಅವನ ಬಗ್ಗೆ ಒಂದಷ್ಟು ಹತ್ತಿರದಿಂದ ತಿಳಿಯವ ಕುತೂಹಲವಿತ್ತು ಹಾಗೂ ಅಮೆರಿಕನ್ನರಂಥ ಅಮೇರಿಕನ್ನರನ್ನೇ ಎದುರು ಹಾಕಿಕೊಂಡು ಬದುಕವವನ ನಾಡಿನಲ್ಲಿ ಜೀವನ ಹೇಗಿರುತ್ತದೆ? ಒಮ್ಮೆ ನೋಡಿಯೇ ಬಿಡೋಣವೆಂದುಕೊಂಡು ಇಲ್ಲಿಗೆ ಹಾರಿ ಬಂದಿದ್ದೆ.
ಲಿಬಿಯನ್ನರ ಹೊಸದೆಂದು ಹೇಳಲಾದ ಹಳೆಯ ಧ್ವಜ
ನಾನು ಮೊಟ್ಟ ಮೊದಲ ಬಾರಿಗೆ ಲಿಬಿಯಾದ ರಾಜಧಾನಿ ಟ್ರೀಪೋಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಥಟ್ಟನೆ ನನ್ನ ಗಮನ ಸೆಳೆದಿದ್ದು ಅಲ್ಲಿ ನೇತುಹಾಕಿದ್ದ ಬೋರ್ಡೊಂದರ ಮೇಲೆ ಬರೆದ ಸಾಲು. ಅದು ಅಲ್ಲಿನ ಕೆಳದರ್ಜೆಯ ಕೆಲಸಗಾರರ ಕುರಿತಾಗಿತ್ತು.ಅದು ಹೀಗಿತ್ತು: “Do not call them wage workers but call them your partners.”ಈ ಸಾಲನ್ನು ಓದಿ “ಅರೆರೆ! ಇದೇನಿದು? ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಇಂಥದೊಂದು ಬೋರ್ಡು? ಇಂಥ ಒಂದು ಸಮಾನತೆಯ ಸಿದ್ಧಾಂತ ಇಲ್ಲಿ ಜಾರಿಯಲ್ಲಿರಲು ಸಾಧ್ಯವೆ? ಎಂದು ಆಶ್ಚರ್ಯ ಮತ್ತು ಅನುಮಾನಗಳೆರೆಡನ್ನೂ ಒಟ್ಟಿಗೆ ವ್ಯಕ್ತಪಡಿಸಿದ್ದೆ. ಆದರೆ ನಾನು ಯಾವಾಗ ಲಿಬಿಯನ್ನರೊಟ್ಟಿಗೆ ಕೆಲಸ ಮಾಡತೊಡಗಿದನೋ ಆಗ ಇದು ಬರೀ ಬೋರ್ಡಲ್ಲಿ ಬರಿದಿಟ್ಟ ಮಾತಲ್ಲ, ಅಕ್ಷರಶಃ ಜಾರಿಯಲ್ಲಿರುವ ಮಾತು ಎಂಬ ಸತ್ಯದ ಅರಿವಾಯಿತು. ಇಲ್ಲಿ ಎಲ್ಲರೂ ಸಮಾನರೇ. ಮೇಲಾಧಿಕಾರಿ, ಕೆಳಾಧಿಕಾರಿ ಎಂಬ ಬೇಧ ಭಾವ ಇಲ್ಲ. ಅಥವಾ ಮೇಲಾಧಿಕಾರಿಯಾದವನು ತನ್ನ ಕೈ ಕೆಳಗಿರುವ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವಂತಿಲ್ಲ. ಒಬ್ಬ ಅಟೆಂಡರ್ ನಿಂದ ಹಿಡಿದು ಕಾಲೇಜಿನ ಡೀನ್ ವರೆಗೂ ಎಲ್ಲರೂ ಸರಿ ಸಮಾನರೇ. ಅಟೆಂಡರ್ ನಾದವನು ಡೀನ್ ಕುರ್ಚಿಯ ಮೇಲೆ ಯಾವುದೇ ಹಿಂಜರಿಕೆಯಿಲ್ಲದೆ ಕುಳಿತುಕೊಳ್ಳುತ್ತಾನೆ. ಆತನ ಅಪ್ಪಣೆಯಿಲ್ಲದೆ ಆತನ ಕಂಪ್ಯೂಟರನ್ನು ಬಳಸುತ್ತಾನೆ. ಆತನೊಟ್ಟಿಗೆ ಕುಳಿತು ಕಾಫಿ ಕುಡಿಯುತ್ತಾನೆ. ಹಾಗೆಯೆ ಡೀನ್ ಆದವನು ಕುಳಿತಲ್ಲಿಂದಲೇ ಎಲ್ಲ ಕೆಲಸ ತೆಗೆಯಬೇಕು ಎಂದೇನೂ ನಿಯಮವಿಲ್ಲ. ಅಗತ್ಯ ಬಿದ್ದರೆ ಅವನು ಒಬ್ಬ ಗುಮಾಸ್ತನವರೆಗೂ ನಡೆದುಕೊಂಡುಬಂದು ಕೆಲಸಮಾಡಿಸಿಕೊಳ್ಳುತ್ತಾನೆ. ಒಂದುವೇಳೆ ಅವನು ಬೇರೆ ಕೆಲಸದಲ್ಲಿ ಮಗ್ನನಾಗಿದ್ದರೆ ಅವನ ಕೆಲಸ ಮುಗಿಯುವವರೆಗೂ ಈತನು ಕಾಯಬೇಕಾಗುತ್ತದೆ. ಇದೆಲ್ಲಾ ಅಭ್ಯಾಸವಿರದ ನಮಗೆ ಇದು ಮೊದಮೊದಲು ವಿಚಿತ್ರವಾಗಿ ಕಂಡಿತು. ಆಮೇಲಾಮೇಲೆ ರೂಢಿಯಾಯಿತು. ನಮ್ಮ ಕಾಲೇಜಿನ ಪರೀಕ್ಷಾ ವಿಭಾಗದ ಮುಖ್ಯಸ್ಥ (ಕಂಟ್ರೋಲರ್ ಆಫ್ ಎಕ್ಸಾಮಿನಿಶನ್ ಬೋರ್ಡ್ ) ಯಾವುದೇ ಸಂಕೊಚವಿಲ್ಲದೆ ಒಬ್ಬ ಗುಮಾಸ್ತನ ಕೋಣೆಯಲ್ಲಿ ಕುಳಿತು ಅವನೊಟ್ಟಿಗೆ ಆತ್ಮೀಯವಾಗಿ ಹರಟೆ ಹೊಡೆಯುವದನ್ನು ನೋಡಿ ಇದೇನಿದು? ಒಂದು ಉನ್ನತ ಹುದ್ದೆಯಲ್ಲಿರುವ ಅಧಿಕಾರಿ ಈ ತರ ಕೆಳದರ್ಜೆಯ ಅಧಿಕಾರಿಯೊಟ್ಟಿಗೆ ಅದೂ ಅವನ ಚೇಂಬರ್ರ ನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾನೆ? ಎಂದು ಬೆರಗಾಗಿದ್ದೆವು.
ಹಾಗೆ ನೋಡಿದರೆ ಇಂಥದೊಂದು ಪರಿಕಲ್ಪನೆ ಸೋ ಕಾಲ್ಡ್ ಪ್ರಜಾರಾಜ್ಯ ಎನಿಸಿಕೊಂಡ ನಮ್ಮ ದೇಶದಲ್ಲಿ ಇರಬೇಕು (ಇಲ್ಲ ಎನ್ನುವದು ಬೇರೆ ಮಾತು). ಆದರೆ ಸರ್ವಾಧಿಕಾರಿಯ ನಾಡಿನಲ್ಲಿದ್ದಿದ್ದುನ್ನು ಕಂಡು ಆಶ್ಚರ್ಯಪಟ್ಟಿದ್ದೆ. ಅಷ್ಟೇ ಏಕೆ? ನಾನು ಕೆಲಸ ಮಾಡುವ ‘ಘಾತ್’ ಪ್ರಾಂತ್ಯದ ಕಾರ್ಮಿಕ ಮಂತ್ರಿಯೊಬ್ಬರು ನನ್ನ ಸಹೋದ್ಯೋಗಿಯಾಗಿದ್ದರು. ಅವರು ಮಂತ್ರಿ ಎಂಬ ಕಾರಣಕ್ಕೆ ಅವರಿಗೆ ಪ್ರತ್ಯೇಕ ಸರಕಾರಿ ಕಾರ್ ಆಗಲಿ, ಬೇರೆ ಸೌಲತ್ತುಗಳಾಗಲಿ ಇರಲಿಲ್ಲ. ತಮ್ಮದೇ ಸ್ವಂತ ಕಾರಿನಲ್ಲಿ ಯಾವುದೇ ಸೆಕ್ಯೂರಿಟಿ, ಎಸ್ಕಾರ್ಟ್ ಇಲ್ಲದೆ ನಮ್ಮ ಕಾಲೇಜಿಗೆ ಬಂದು ಪಾಠ ಮಾಡಿಹೋಗುತ್ತಿದ್ದರು. ಬ್ಯಾಂಕುಗಳಲ್ಲಿ ಮತ್ತು ಸರಕಾರಿ ಕಛೇರಿಗಳಲ್ಲೂ ಅಷ್ಟೆ,ಅವರಿಗೆ ಯಾವುದೇ ವಿಶೇಷ ರಿಯಾಯಿತಿ ತೋರಿಸುತ್ತಿರಲಿಲ್ಲ. ಎಲ್ಲರಂತೆ ಅವರು ಕೂಡ ಸರದಿಯಲ್ಲಿ ನಿಂತು ತಮ್ಮ ಕೆಲಸ ಮುಗಿಸಿಕೊಳ್ಳಬೇಕಿತ್ತು. ಒಂದೊಂದು ಸಾರಿ ಕಾರು ಕೆಟ್ಟುಹೋದರೆ ಅವರು ನಡೆದುಕೊಂಡು ಬಂದೇ ಪಾಠ ಮಾಡಿ ಹೋಗುತ್ತಿದ್ದರು. ಈ ತೆರದ ಸಮಾನತೆಯ ಪರಿಕಲ್ಪನೆ ಒಬ್ಬ ಸರ್ವಾಧಿಕಾರಿಯ ನಾಡಿನಲ್ಲಿ ಹೇಗೆ ಇರಲು ಸಾಧ್ಯ? ಎಂದು ಯೋಚಿಸುತ್ತಿರುವಾಗಲೆ ನಮ್ಮ ಕಾಲೇಜಿನ ಲೈಬ್ರರಿಯಲ್ಲಿ ಗಡಾಫಿಯ ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ವಿಚಾರಧಾರೆಗಳನ್ನೊಳಗೊಂಡ ಅವನ ಪುಸ್ತಕ “ದಿ ಗ್ರೀನ್ ಬುಕ್”ಸಿಕ್ಕಿತು. ಅದು ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿತ್ತು. ಓದುತ್ತಿದ್ದಂತೆ ಆತನ ವಿಚಾರಧಾರೆಗಳಿಗೆ ನಿಬ್ಬೆರಗಾಗಿದ್ದೆ. ಅವನ್ನು ಗಡಾಫಿ ಬರೀ ಪುಸ್ತಕದಲ್ಲಿ ಮಾತ್ರ ಹೇಳಿ ಸುಮ್ಮನೆ ಕೂರಲಿಲ್ಲ. ಅಕ್ಷರಶಃ ಜಾರಿಗೆ ತಂದ. ಪರಿಣಾಮವಾಗಿ ಈ ಸಮಾನತೆಯ ಕಲ್ಪನೆ ಜನರ ಮನದಲ್ಲಿ ಗಟ್ಟಿಯಾಗಿ ತಳವೂರಿತು.
ಹಾಗಾದರೆ ಇಷ್ಟೆಲ್ಲ ಸಮಾಜವಾದದ ಸಿದ್ಧಾಂತವನ್ನು ಬೋಧಿಸುತ್ತಿದ್ದ ಗಡಾಫಿತನ್ನ ಅಧಿಕಾರ ಗದ್ದುಗೆಯನ್ನೇಕೆ ಅಷ್ಟು ಸುಲಭವಾಗಿ ಬೇರೆಯವರಿಗೆ ಬಿಟ್ಟುಕೊಡದೆ ಸಾಯಬಾರದ ಸಾವು ಸತ್ತ? ದುರಂತವೆಂದರೆ ಗಡಾಫಿಯನ್ನು ಕನ್ನಡದ ಮಾಧ್ಯಮಗಳೂ ಸೇರಿದಂತೆ ಜಗತ್ತಿನ ಎಲ್ಲ ಮಾಧ್ಯಮಗಳು ಮುಂಚಿನಿಂದಲೂ ಒಬ್ಬ ಖಳನಾಯಕನಂತೆ ಚಿತ್ರಿಸಿಕೊಂಡು ಬಂದವು. ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಈ ಇಂಗ್ಲೀಷ್ ಚಾನಲ್ ಗಳು ಹೇಳುವದೆಲ್ಲಾ ಸತ್ಯ ಎಂದು ನಂಬುತ್ತೇವೆ. ಆದರೆ ಇಲ್ಲಿಗೆ ಬಂದು ಸುಮ್ಮನೆ ಒಮ್ಮೆ ಜನರನ್ನು ಕೇಳಿ ನೋಡಿ. ಅವರು ಈ ಇಂಗ್ಲೀಷ್ ಚಾನಲ್ ಗಳಿಗೆಹಿಡಿ ಹಿಡಿ ಶಾಪ ಹಾಕುತ್ತಾರೆ. ಅವರ ಪ್ರಕಾರ ಅವು ಬೋಗಸ್, ಬಂಡಲ್! ಬರೀ ಅಮೆರಿಕಾದವರು ಮತ್ತು ಯೂರೋಪಿಯನ್ನರ ಪರವಾಗಿ ಕೆಲಸ ಮಾಡುವಂಥವು ಎಂದು ಕಿಡಿಕಾರುತ್ತಾರೆ.
ಆದರೆ ಬಹಳಷ್ಟು ಜನಕ್ಕೆ ಗೊತ್ತಿರದ ಮತ್ತು ಮಾಧ್ಯಮಗಳು ಬಹಿರಂಗಪಡಿಸದ ಸಂಗತಿಯೇನೆಂದರೆ ಲಿಬಿಯಾದಲ್ಲಿ ಎದ್ದ ಕ್ರಾಂತಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಗಡಾಫಿ ಕೆಲವು ಬಂಡುಕೋರರ ಮುಖಂಡರನ್ನು ಕರೆದು “ಆಯ್ತು. ನಾನು ಅಧಿಕಾರ ಬಿಟ್ಟುಕೊಡುತ್ತೇನೆ. ನೀವು ಹೇಳುವಂತೆ ಚುನಾವಣೆ ನಡೆಸೋಣ. ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ ಅವರು ಅಧಿಕಾರವಹಿಸಿಕೊಳ್ಳೋಣ.” ಎಂದು ಹೇಳಿದನಂತೆ. ಆದರೆ ಬಂಡುಕೋರರಿಗೆ ಗಡಾಫಿ ಏನಾದರು ಚುನಾವಣೆಗೆ ನಿಂತರೆ ಖಂಡಿತ ಅವನೇ ಆರಿಸಿ ಬರುತ್ತಾನೆಂಬುದು ಚನ್ನಾಗಿ ಗೊತ್ತಿದ್ದರಿಂದ “ಬೇಡ. ನಾವು ಹೋರಾಟ ಮಾಡಿಯೇ ಗೆಲ್ಲುತ್ತೇವೆ” ಎಂದು ತಮ್ಮ ಹೋರಾಟ ಮುಂದುವರಿಸಿದರು. ಜೊತೆಗೆ ಇದನ್ನೇ ಕಾಯ್ದುಕೊಂಡಿದ್ದ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಅವರಿಗೆ ಬೆಂಬಲ ನೀಡಿದರು. ಹೀಗಾಗಿ ಲಿಬಿಯಾದಲ್ಲಿ ಒಂದು ದೊಡ್ಡ ಕ್ರಾಂತಿಯೇ ನಡೆದುಹೋಯಿತು. ಒಬ್ಬ ಬಲಿಷ್ಠ ಸರ್ವಾಧಿಕಾರಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿ ಹೆಮ್ಮೆಯಿಂದ ಬೀಗಿದರು.
ಆದರೆ ಇಲ್ಲಿಗೆ ಬಂದು ಈ ವಿಷಯದ ಕುರಿತಂತೆ ಒಮ್ಮೆ ಸುಮ್ಮನೆ ಇಲ್ಲಿಯವರನ್ನು ಮಾತನಾಡಿಸಿ ನೋಡಿ. ಅವರು ಕೊಡುವ ಚಿತ್ರಣವೇ ಬೇರೆ. “ಈ ಕ್ರಾಂತಿಯ ಹಿಂದೆ ಅಮೆರಿಕಾದವರ ಕೈವಾಡವಿದೆ. ಅವರಿಗೆ ಮುಂಚಿನಿಂದಲೂ ಗಡಾಫಿ ಮೇಲೆ ದ್ವೇಷವಿತ್ತು. ಮತ್ತು ಇಲ್ಲಿಯ ತೈಲಸಂಪತ್ತಿನ ಮೇಲೆ ಕೂಡ ಅವರ ಕಣ್ಣಿತ್ತು. ಈ ಹಿಂದೆ 1988ರಲ್ಲಿ ಸ್ಕಾಟ್ಲೆಂಡ್ನು ಪಾನ್ ಅಮ್ ವಿಮಾನದಲ್ಲಿ ಬಾಂಬಿಟ್ಟ ಅರೋಪ ಲಿಬಿಯಾದ ಮೇಲಿತ್ತು. ಆ ಘಟನೆಯಲ್ಲಿ ಸುಮಾರು 250 ಜನ ಅಮೆರಿಕನ್ನರು ಸತ್ತಿದ್ದರು. ಅದನ್ನು ಬಹುಕಾಲ ಗಡಾಫಿ ನಿರಾಕರಸುತ್ತಲೇ ಬಂದಿದ್ದ. ಈ ಕಾರಣಕ್ಕಾಗಿ ಲಿಬಿಯಾದ ಮೇಲೆ ಅಮೆರಿಕಾ ಹನ್ನೆರೆಡು ವರ್ಷಗಳ ಕಾಲ ದಿಗ್ಬಂಧನ ಹೇರಿತ್ತು. ತದನಂತರದಲ್ಲಿ ಗಡಾಫಿ ಆರೋಪಿಗಳನ್ನು ಅವರಿಗೆ ಒಪ್ಪಿಸಿ ಮೃತರ ಕುಟುಂಬಕ್ಕೆ ಸುಮಾರು 2.7 ಬಿಲಿಯನ್ ಡಾಲರಿನಷ್ಟು ಪರಿಹಾರ ನೀಡಿದ್ದ.
ಆದರೆ ತೀರ ಇತ್ತೀಚಿಗೆ ಗಡಾಫಿ ಅಮೆರಿಕಾ ಸರಕಾರವನ್ನು ದಿಗ್ಬಂಧನದ ಸಮಯದಲ್ಲಿ ಲಿಬಿಯಾಕ್ಕೆ ಉಂಟಾದ ನಷ್ಟವನ್ನು ಕಟ್ಟಿಕೊಡಿ ಇಲ್ಲವೇ ನಿಮ್ಮ ತೈಲ ಕಂಪನಿಗಳಿಗೆ ಬೀಗ ಜಡಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದ. ಆದರೆ ಇದಕ್ಕೆ ಕ್ಯಾರೆ ಅನ್ನದೆ ಅಮೆರಿಕಾ ಸರಕಾರ ತನ್ನ ಎಂದಿನ ಕಾಯಕವನ್ನು ಮುಂದುವರಿಸಿತ್ತು. ಸಿಟ್ಟಿಗೆದ್ದ ಗಡಾಫಿ ಹೇಳಿದಂತೆ ಅಕ್ಟೋಬರ್ ತಿಂಗಳಲ್ಲಿ ಅಂದರೆ ಕ್ರಾಂತಿ ಆರಂಭವಾಗುವದಕ್ಕೆ ಮೂರು ತಿಂಗಳು ಮುಂಚೆ ಲಿಬಿಯಾದಲ್ಲಿದ್ದ ಅಮೆರಿಕಾದ ಕಂಪನಿಗಳಿಗೆ ಬೀಗ ಜಡಿದೇ ಬಿಟ್ಟ. ಇದು ಅಮೆರಿಕನ್ನರನ್ನು ರೊಚ್ಚಿಗೆಬ್ಬಿಸಿತ್ತು. ಮೇಲಾಗಿ ಶೀಘ್ರದಲ್ಲಿಯೇ ಆತ ಜಾರಿಗೆ ತರಲಿದ್ದ ಆತನ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಸ್ಥಿತಿಗೆ ಮುಳುವಾಗಲಿದ್ದವು. ಗಡಾಫಿ, ಟ್ರಿಪೋಲಿಯ ಹಡುಗು ನಿಲ್ದಾಣದ ಮೂಲಕ ವಿವಿಧ ವ್ಯಾಪಾರ-ಸರಕುಗಳನ್ನು ಹೊತ್ತು ಯೂರೋಪಿನ ಮಾರುಕಟ್ಟೆಯತ್ತಸಾಗುವ ಹಡುಗಗಳನ್ನು ಇಲ್ಲೇ ನಿಲ್ಲಿಸಿ ಆ ಎಲ್ಲ ಸರಕುಗಳು ತಾನು ಶೀಘ್ರವಾಗಿ ಸ್ಥಾಪಿಸಲಿದ್ದ ಟ್ರಿಪೋಲಿ ಮುಕ್ತ-ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದ.ಇದರಿಂದ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳ ಮಾರುಕಟ್ಟೆಗೆ ಭಾರಿ ನಷ್ಟವುಂಟಾಗಲಿತ್ತು.
ಇದು ಹೀಗೆಯೇ ಮುಂದುವರೆದಿದ್ದರೆ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಅವನೊಬ್ಬ ದೊಡ್ಡ ಥ್ರೆಟ್ ಆಗಿ ಉಳಿಯಲಿದ್ದ. ಹೀಗಾಗಿಅವನನ್ನು ಹೇಗಾದರು ಮಾಡಿ ಮುಗಿಸಿಬಿಟ್ಟರೆ ತಮಗಿನ್ಯಾವ ಆತಂಕವೂ ಇರುವದಿಲ್ಲವೆಂದು ನ್ಯಾಟೋ ಅವನನ್ನು ಮುಗಿಸಿಬಿಟ್ಟಿತು.” ಎಂದು ನಿಟ್ಟುಸಿರಿಡುತ್ತಾರೆ. “ಅಯ್ಯೋ, ನ್ಯಾಟೋದವರೆಲ್ಲಿ ಸಾಯಿಸಿದ್ದು? ನಿಮ್ಮವರೇ ತಾನೆ ಅವನನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದು?” ಎಂದು ಕೇಳಿದರೆ ಅವರು ಹುಸಿನಗುತ್ತಾ “ಇದೆಲ್ಲಾ ಪೂರ್ವ ನಿಯೋಜಿತ. ನ್ಯಾಟೋಗೆ ಗಡಾಫಿ ತನ್ನ ಅಡಗುತಾಣಗಳನ್ನು ಬದಲಾಯಿಸುವದು ಗೊತ್ತಿತ್ತು. ಅವನು ಹೀಗೆ ಬದಲಾಯಿಸುತ್ತಿರಬೇಕಾದರೆ ನಾವು ಪತ್ತೆ ಹಚ್ಚಿ ಅವನನ್ನು ನಿಮ್ಮ ಕೈಗೆ ಒಪ್ಪಿಸುತ್ತೇವೆ. ಆಮೇಲೆ ನೀವೇ ಅವನನ್ನು ಸಾಯಿಸಿ ಎಂದು ಉಪಾಯ ಹೇಳಿಕೊಟ್ಟವರೇ ಅವರು. ಆ ಪ್ರಕಾರ ಗಡಾಫಿ ತನ್ನ ತವರು ಪಟ್ಟಣ ಸಿರ್ತ್ನಲಲ್ಲಿ ಅಡಗುತಾಣಗಳನ್ನು ಬದಲಾಯಿಸುತ್ತಿರಬೇಕಾದರೆ ಅವನು ಕುಳಿತಿದ್ದ ಕಾರಿನ ಮೇಲೆ ನ್ಯಾಟೋ ಸಣ್ಣದೊಂದು ಬಾಂಬ್ನ್ನು ಹಾಕಿದೆ. ಪ್ರಾಣಭೀತಿಯಿಂದ ಗಡಾಫಿ ಕಾರಿನ ಬಾಗಿಲು ತೆರೆದು ಓಡಿಹೋಗಿ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಜೀವರಕ್ಷಣೆಗಾಗಿ ಅಡಗಿಕೊಂಡಿದ್ದಾನೆ. ಅಲ್ಲಿಂದ ಮುಂದೆ ಅವನನ್ನು ಬಂಡುಕೋರರಿಗೆ ಒಪ್ಪಿಸಿ ಅಟ್ಟಾಡಿಸಿ ಸಾಯಿಸಿದರು. ಆ ಮೂಲಕ ಹೊರಜಗತ್ತಿಗೆ ಅವನ ಜನರೇ ಅವನನ್ನು ಹೊಡೆದು ಸಾಯಿಸಿದರು ಎಂಬ ಚಿತ್ರಣವನ್ನು ಕೊಟ್ಟರು.
ಗಡಾಫಿ ತಾನು ಇರುವವರಿಗೂ ಲಿಬಿಯಾದ ತೈಲ ಸಂಪತ್ತನ್ನು ಭದ್ರವಾಗಿ ಕಾಯ್ದುಕೊಂಡು ಬಂದ. ಈಗ ಆ ಸಂಪತ್ತೆಲ್ಲಾ ಅಮೆರಿಕಾ, ಫ್ರಾನ್ಸ್, ಬ್ರಿಟನ್ ಪಾಲಾಗುತ್ತಿದೆ.” ಎಂದು ಕಣ್ಣೀರಿಡುತ್ತಾರೆ. ಅಂತೆಯೇ ನಮಗೆ ಗೊತ್ತಿರದ ಇನ್ನೊಂದು ಸತ್ಯವನ್ನು ಹೇಳಿ ಬೆಚ್ಚೆಬೀಳಿಸುತ್ತಾರೆ. ಅದೇನೆಂದರೆ ಈ ಅಮೆರಿಕನ್ನರಿಗೆ ಆಫ್ರಿಕಾ ಖಂಡದ ಮೂರು ಬಲಿಷ್ಠ ಸರ್ವಾಧಿಕಾರಿಗಳು ಮುಳುವಾಗಿದ್ದರು. ಅವರನ್ನು ಹೇಗಾದರು ಮಾಡಿ ಕಿತ್ತೊಗೆಯಲೇಬೇಕೆಂದು ತೀರ್ಮಾನಿಸಿ ಒಬ್ಬೊಬ್ಬರನ್ನಾಗಿ ಮುಗಿಸುತ್ತ ಬಂದರು. ಅವರು ಯಾರೆಂದರೆ ಇರಾಕಿನ ಸದ್ದಾಂ ಹುಸೇನ್, ಲಿಬಿಯಾದ ಮೌಮರ್ ಗಡಾಫಿ, ಹಾಗೂ ಸಿರಿಯಾದ ಈಗಿನ ಅಧ್ಯಕ್ಷ ಬಷಾರ್ ಆಲ್-ಅಸಾದ್. ಮೊದಲಿಬ್ಬರನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾದರು. ಈಗ ಮೂರನೆಯವನನ್ನು ಬೇಟೆಯಾಡುತ್ತಿದ್ದಾರೆ. ಹಾಗೆಂದೇ ಅಲ್ಲಿ ಎದ್ದ ಕ್ರಾಂತಿ ಇನ್ನೂ ತಣ್ಣಗಾಗಿಲ್ಲ. ಈ ಮೂವರು ಅಮೆರಿಕಾದವರ ಮಾತಿಗ ಸೊಪ್ಪು ಹಾಕುವದಾಗಲಿ, ಜಗ್ಗುವದಾಗಲಿ ಮಾಡುತಿರಲಿಲ್ಲ. ಈ ಕಾರಣಕ್ಕಾಗಿ ಒಬ್ಬೊಬ್ಬರನ್ನೇ ತೆಗೆಯುತ್ತಾ ಬಂದರು ಎಂದು ಹೇಳುತ್ತಾ ಅಮೆರಿಕಾದವರ ಬಂಡವಾಳ ಬಯಲಿಗಿಡುತ್ತಾರೆ.
ಒಡೆದು ಹಾಕಿರುವ ಗಡಾಫಿ ಮನೆ
ಗಡಾಫಿ ವಿರುದ್ಧ ದಂಗೆಯೆದ್ದೆದ್ದು ನಿಮ್ಮವರೇ ಅಲ್ಲವೇ? ಅದಕ್ಯಾಕೆ ಅಮೆರಿಕಾದವರನ್ನು ದೂಷಿಸುತ್ತೀರಿ? ಎಂದು ಕೇಳಿದರೆ ಇದು ಅಮೆರಿಕಾದವರದೇ ಕುತಂತ್ರ. ದಂಗೆ ಎದ್ದ ಜನ ಕೇವಲ 9% ಮಾತ್ರ. They are crazy! ಅವರಿಗೆ ಬುದ್ಧಿಯಿಲ್ಲ. ಗಡಾಫಿ ಅವರನ್ನು ಹೇಗಾದರು ಮಾಡಿ ಹತ್ತಿಕ್ಕುತ್ತಿದ್ದ. ಆದರೆ ಇದನ್ನೇ ಕಾಯ್ದುಕೊಂಡಿದ್ದ ಅಮೆರಿಕಾದವರು ಬಂಡುಕೋರರಿಗೆ ಕುಮ್ಮಕ್ಕು ಕೊಟ್ಟು ಗಡಾಫಿಯನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು ಎಂದು ಪರಿತಪಿಸುತ್ತಾರೆ. ಹೀಗೆ ಗಡಾಫಿ ಹೊರಜಗತ್ತಿಗೆ ಒಬ್ಬ ಖಳನಾಯಕನಾಗಿ ಕಾಣಿಸಿದರೆ ಇಲ್ಲಿಯವರೆಗೆ ಒಬ್ಬ ದುರಂತ ನಾಯಕನಾಗಿ ಕಾಣಿಸುತ್ತಾನೆ. ಇವತ್ತು ಲಿಬಿಯಾದಲ್ಲಿ ಗಡಾಫಿ ಇಲ್ಲ. ಆದರೆ ಗಡಾಫಿತನ ಮಾತ್ರ ಹಾಗೆ ಇದೆ. ಅವನು ಹಾಕಿಕೊಟ್ಟ ಸಮಾನತೆಯ ಸಿದ್ಧಾಂತದ ಪರಿಕಲ್ಪನೆ ಮಾತ್ರ ಜನರ ಮನದಲ್ಲಿ ಇನ್ನೂ ಹಾಗೆ ಇದೆ.
ವ್ಯಕ್ತಿಯೊಬ್ಬನನ್ನು ಸುಲಭವಾಗಿ ಅಳಿಸಿಹಾಕಬಹುದು. ಆದರೆ ಅವನ ಸಿದ್ಧಾಂತಗಳನ್ನು ಅಷ್ಟು ಸುಲಭವಾಗಿ ಅಳಿಸಿಹಾಕಲಾದೀತೆ?







ಎಷ್ಟೊಂದು ಭಿನ್ನ ಭಾವಗಳು ಅಲ್ಲವೇ
ಮಾವೋ ನ ಕೆಂಪು ಪುಸ್ತಕ ಮತ್ತು ಗದಾಫಿಯ ಹಸುರು ಪುಸ್ತಕ ಸಮಾನತೆಯನ್ನೇ ಪ್ರತಿಪಾದಿಸಿದ್ದು….ವೈರುಧ್ಯಗಳ ನಡುವೆ ಅವೆರಡೂ ಹಿಂಸೆಗೆ ತಿರುಗಿದ್ದು ಶೋಚನೀಯ…
ಆದರೆ ಒಂದಂತು ನಿಜ ಒಂದು ನೆಲದ ಗುಣವನ್ನ ನಾವು ಅಳಿಯಬೇಕಾದರೆ ಅದನ್ನ ನೋಡುವ ವರೆಗೆ ಮತ್ತು ಅಲ್ಲಿಯ ಅನುಭವಗಳನ್ನ ಅನುಭವಿಸುವವರೆಗೆ ಸಾಧ್ಯವಂತೂ ಇಲ್ಲ…
ಲಿಬಿಯಾದ ಬಗ್ಗೆ ನಮಗಿರುವ ಚಿತ್ರಣ ಅಂದ್ರೆ TIMES NOW ಮತ್ತು NDTV ಗಳು ಕಟ್ಟಿಕೊಟ್ಟ ನಿರ್ಧಾರಗಳು ಮತ್ತು ಅಮೇರಿಕಾದ ನಡಾವಳಿಗಳು ಅಷ್ಟೇ…
ನಿಮ್ಮ ಅಂಕಣ ಬಹಳ ಪ್ರಸ್ತುತ ಅನ್ನಿಸಿತು
ತುಂಬಾ ಒಳ್ಳೆಯ ಲೇಖನ ,
ಲಿಬಿಯಾದಿಂದಲೇ ಕನ್ನಡಿಗರೊಬ್ಬರು ಬರೆದ ಪ್ರತ್ಯಕ್ಷದರ್ಶಿ ವರದಿ ಒಂದು ಒಳ್ಳೆಯ ಪ್ರಯತ್ನ. ಭಾರತೀಯರ ಮನಸ್ಸನ್ನು ಕೊರೆಯುತ್ತಿದ್ದ ಪ್ರಮುಖ ವಿಷಯದಿಂದ ಈ ಲೇಖನ ಮಾಲೆಯ ಆರಂಭ ಕೂಡ ಸ್ವಾಗತಾರ್ಹ. ನಾವು ಅಮೆರಿಕಾ, ಯುರೋಪುಗಳ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ನಮ್ಮಂತದೇ ಮೂರನೇ ಜಗತ್ತಿನ ದೇಶದ ಜನಜೀವನದ ಪರಿಚಯ ಮಾಡಿಕೊಳ್ಳುವುದು ಅತಿ ಅವಶ್ಯಕ. ಈ ಬಗೆಗಿನ ಅಗಾಧ ಕೊರತೆಯನ್ನು ಈ ಮಾಲೆ ನೀಗಿಸುತ್ತದೆ.ಇದೇ ಮಾತುಗಳನ್ನು ಭಾರತದ ಕಮ್ಯುನಿಸ್ಟರು ಹೇಳುತ್ತಿದ್ದಾಗ, ಅಮೇರಿಕದ, ಯುರೋಪಿನ ಬೃಹತ್ ಬಂಡವಾಳಗಾರರ ಯುದ್ಧಕೋರ ಸಂಚುಗಳ ಬಗ್ಗೆ ಪ್ರತಿಭಟಿಸುತ್ತಿದ್ದಾಗ ನಮ್ಮನ್ನು ಆಡಿಕೊಂಡವರೆಷ್ಟೋ ! ಅದೇ ಸಮಯದಲ್ಲಿ ಗಢಾಫಿ ಒಬ್ಬ ಸರ್ವಾಧಿಕಾರಿ, ಅದರಿಂದಲೇ ನ್ಯಾಟೋ ಕೂಟದ ಕುತಂತ್ರಗಳ ವಿರುದ್ಧ ತನ್ನ ಜನರನ್ನು ವಿಯೆತ್ನಾಂ, ಕ್ಯೂಬಾ, ವೆನಿಜುವೆಲಾ ಮಾಡಿದಂತೆ ಎದುರು ನಿಲ್ಲಿಸಲಾಗಲಿಲ್ಲ ಎಂಬುದೂ ಅಷ್ಟೇ ಸತ್ಯ. ಇನ್ನು ಇಲ್ಲಿ ಮಾವೋರವರ ಕೆಂಪು ಪುಸ್ತಕದ ಬಗ್ಗೆ ಪ್ರಸ್ತಾಪ ಬಂದಿದೆ. ಆ ಪುಸ್ತಕ ಸ್ತಿತ್ವಕ್ಕೆ ಬರುವ ಮನ್ನವೇ ಚೀನಾದಲ್ಲಿ ಸಮಾನತೆಯನ್ನು ಸ್ಥಾಪಿಸಲಾಗಿತ್ತು. ಈ ಕೆಮಪು ಪುಸ್ತಕ ಅಲ್ಲಿ ನೆಲೆಗೊಂಡಿದ್ದ ಸಮಾನತೆಗೆ ಗಣನೀಯ ಹಾನಿ ಉಂಟುಮಾಡಿತು ಎಂಬುದನ್ನು ಗಮನಿಸಬೇಕು.
ಹೊಸ ದೇಶ, ಹೊಸ ಪರಿಚಯ… ಹೊಸ ವಿಷಯ, ಹಳೆ ಸಿದ್ದಾಂತಗಳ ಹೊಸ ಹೊಳಹುಗಳು…
ಕುತೂಹಲವಿದೆ, ಮುಂದಿನ ಬರಹಗಳೆಡೆಗೆ…
ಗೊರ್ಬಚೇವ್, ಪೆರಿಸ್ಟ್ರೋಯಿಕಾ ಮಂತ್ರ ಪಠಿಸುತ್ತಿದ್ದಾಗ ಅದರ ಹಿಂದೆ ಅಮೆರಿಕಾದ ಹುನ್ನಾರ ಇರುವುದು ಕೂಡ ಯಾರಿಗೂ ತಿಳಿಯಲಿಲ್ಲ. ಸಮಾಜವಾದ ಬಗ್ಗೆ ಕೆಂಗಣ್ಣು ಬೀರುತ್ತಿರುವ ಅಮೆರಿಕಾ ರಷ್ಯಾ ಒಕ್ಕೂಟ ಮುರಿದು ಹಾಕಿತು. ಕ್ಯೂಬಾದ ಮೇಲೂ ಅದಕ್ಕೆ ಉರಿಗಣ್ಣು. ಲಿಬಿಯಾದಲ್ಲಿ ಕ್ರಾಂತಿ ನಡೆಯುತ್ತಿದೆ ಎಂದೆ ಅಮೆರಿಕನ್ ಪ್ರಣೀತ ಮಾಧ್ಯಮಗಳ ಮೂಲಕ ಪುಂಗಿ ಊದಿಸಿ ಗಡಾಫಿ ಹೊಸಕಿಹಾಕಿತು.
ಲಿಬಿಯಾ ಬೆಳವಣಿಗೆಗಳನ್ನು ನೇರ ನೋಡಿದ ಉದಯ್ ಆ ಬಗ್ಗೆ ಬರಿಯುತ್ತಿವುದಕ್ಕೆ ಅವರಿಗೆ ಅಭಿನಂದನೆ…
thanks
ಸರ್, ಗಡಾಫಿ ಸತ್ತಾಗ ನಾವು ಪತ್ರಿಕೆಗಳಲ್ಲಿ ಟಿ,ವಿಗಳಲ್ಲಿ ನೋಡಿ ತಿಳಿದುಕೊಂಡದ್ದು ಹಾಗೆಯೇ… ಅಮೇರಿಕ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳು ಸಲುವಾಗಿ ಸತ್ಯವನ್ನು ಬುಡಮೇಲು ಮಾಡುವ ಹೇಯ ಕೃತ್ಯವೆಂದು ತಿಳಿದ ಮೇಲಂತೂ ಅಸಹ್ಯವೆನ್ನಿಸಿತು… ನಮ್ಮ ದೇಶವನ್ನು ಬಹು ದೊಡ್ಡ ಪ್ರಜಾಸತ್ತಾತ್ಮಕ ಎಂದು ಕರೆದರೂ ಲಿಬಿಯಾದ ಸಮಾನತೆ ಕಾಣುವುದೇ ಇರುವುದು ದುರ್ದೈವವೇ ಸರಿ… ಸರ್ ಇಷ್ಟೊಳ್ಳೆ ಲೇಖನಗಳನ್ನು ಮಿಸ್ಸ್ ಮಾಡದೇ ಓದುತ್ತೇವೆ,…
ನಿಜವಾಗಿ ನನ್ನನ್ನು ಬಹುವಾಗಿ ಕಾಡಿದ ಲೇಖನ. ಮಾನ ಮಾರ್ಯಾದೆ ಎಲ್ಲವನ್ನು ಬಿಟ್ಟ ಮಾಧ್ಯಮಗಳು ಉಳ್ಳವರ ಪರ ನಿಂತು ಆಡುವ ಮಾತುಗಳಿಗೆ ಕಿವಿಯಾಗಬೇಕಾದ ದುರಂತ ನಿಮ್ಮೆದುರಿಗಿದೆ. ನಿಜ ಯಾವುದು ಎಂದು ಅನುಮಾನಿಸುವ ಸ್ಥಿತಿಯಲ್ಲಿ ನಾವಿದ್ದೇವೆ
ಸಾತ್ವಿಕ್ ಎನ್ ವಿ
Estondu huchcharu navu annisuttide…naavu namma madyamagalli nodiddakku, odiddakku mattu nimma barahakku entha virodhabhasa..antha obba samajavaadi vyaktiyannu kaamukanannagi torisibittaralla….
Idu nijave agiddare namma patrika mitraru sathyasathyathe arithu suddhi prakatisidhe adare Gadafi athmake shanthi dorakuvudu, nodi mitrare karyonmikaragi, nimma mele koti janara vishvasavide adanu ulisikolalu prayathnisi…. Uday sir dhanyavadagalu