ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ್ ಇಟಗಿ ಕಾಲಂ : ಮಳೆಯಲ್ಲಿ ಸಿಕ್ಕ ಅವರಿಬ್ಬರು. ………

ಇದು ಬದೂನ್‍(ಬಿರುಗಾಳಿ)ಗಳ ಸಮಯ. ಅಂದರೆ ಇಲ್ಲೀಗ ಚಳಿಗಾಲ ಮುಗಿದು ಬೇಸಿಗೆ ಕಾಲಿಡುತ್ತಿದೆ ಅಂತಾ ಅರ್ಥ. ಚಳಿಗಾಲ ಮುಗಿದು ಬೇಸಿಗೆ ಕಾಲ ಕಾಲಿಡುವ ಸಂಕ್ರಮಣ ಕಾಲಘಟ್ಟದಲ್ಲಿಯೇ ಈ ಬಿರುಗಾಳಿಗಳು ಅದೆಲ್ಲಿರುತ್ತವೋ ಒಮ್ಮಿಂದೊಮ್ಮೆಲೆ ಧುತ್ತೆಂದು ಇಳಿದು ನಮ್ಮ ಪ್ರಾಣ ತೆಗೆಯುತ್ತವೆ. ಅವು ಒಮ್ಮೊಮ್ಮೆ ಎಷ್ಟೊಂದು ಭಯಂಕರವಾಗಿರುತ್ತವೆಂದರೆ ನಮ್ಮ ಪಕ್ಕದಲ್ಲಿಯೇ ಇರುವ ವ್ಯಕ್ತಿಯನ್ನು ನಮಗೆ ಕಾಣದಷ್ಟು ಧೂಳಿನ ಕಣಗಳಿಂದ ಮುಚ್ಚಿ ಹಾಕಿಬಿಡುತ್ತವೆ. ಜೊತೆಗೆನಮ್ಮಮೂಗಿನೊಳಕ್ಕೆಹೊಕ್ಕುಉಸಿರಾಟಕ್ಕೂತೊಂದರೆಯುನ್ನುಂಟುಮಾಡುತ್ತವೆ.
ಆಗೆಲ್ಲಾ ನಾವು ಬೇಗ ಬೇಗನೆ ಮನೆಯೊಳಕ್ಕೆ ಸೇರಿಕೊಂಡು ಫ್ಯಾನು ಹಾಕಿಕೊಂಡು ಕುಳಿತುಬಿಡುತ್ತೇವೆ. ಹೊತ್ತು ಗೊತ್ತಿಲ್ಲದೆ ಬರುವ ಈ ಬದೂನ್ಗಗಳು ಮನೆ, ಮನುಷ್ಯರನ್ನೆಲ್ಲಾ ಧೂಳು ಧೂಳಾಗಿಸುತ್ತವೆ. ಒಂದೊಂದು ಸಾರಿ ಮನೆ ಮಾಳಿಗೆಯ ಮೇಲೆ ಸಿಕ್ಕಿಸಿದ ದೊಡ್ಡದೊಡ್ಡ ಟೀವಿ ಡಿಶ್ಗಡಳು ಸಹ ಗಾಳಿಯಲ್ಲಿ ಹಾರಿಕೊಂಡು ಎತ್ತೆತ್ತಲೋ ಹೋಗಿ ಬೀಳುವದುಂಟು. ಈ ಸಮಯದಲ್ಲಿಯೇ ವಿವಿಧ ಆಕಾರ, ಆಕೃತಿಗಳೊಂದಿಗೆ ಬಿದ್ದುಕೊಂಡಿರುವ ಸಹರಾ ಮರಳು ಗುಡ್ಡಗಳು ಗಾಳಿಯ ಹೊಡೆತಕ್ಕೆ ಸಿಕ್ಕಿ ಇನ್ನೆಲ್ಲೋ ಹೋಗಿ ಇನ್ಯಾವುದೋ ಆಕಾರ, ಆಕೃತಿಗಳನ್ನು ತಾಳಿ ನಿಲ್ಲುತ್ತವೆ. ನಾನಾಗ ಅಂದುಕೊಳ್ಳುತ್ತೇನೆ; ಈ ಮರಳು ಗುಡ್ಡಗಳು ಹಾಗೂ ಮನುಷ್ಯರ ನಡುವೆ ಅಂಥ ವ್ಯತ್ಯಾಸವೇನಿಲ್ಲ ಅಂತಾ. ಈ ಮರಳು ಗುಡ್ಡಗಳಂತೆ ಮನುಷ್ಯ ಕೂಡಾ ಬದುಕಿನ ಹೊಡೆತಗಳಿಗೆ ಸಿಕ್ಕಿ ತನ್ನ ಸ್ಥಾನ ಹಾಗೂ ಆಕಾರವನ್ನು ಬದಲಾಯಿಸಿ ಏನೇನೋ ಆಗಿ ನಿಲ್ಲುತ್ತಾನೆ.
ಈ ಬಿರುಗಾಳಿಗಳ ಬೆನ್ನ ಹಿಂದೆಯೇ ಇಲ್ಲಿ ಮಳೆಗಾಲ ಶುರುವಾಗುತ್ತದೆ. ಮಳೆಗಾಲವೆಂದರೆ ನಮ್ಮಲ್ಲಿ ಧೋ ಧೋ ಎಂದು ಸುರಿದು ರಸ್ತೆಯ ಮೇಲೆಲ್ಲಾ ನೀರು ಹರಿದಾಡುತ್ತದಲ್ಲ? ಅಂಥ ಮಳೆಯಲ್ಲ. ಬರೀ ಐದು ನಿಮಿಷ ಪಟಪಟ ಅಂತಾ ಹನಿದು ನಿಲ್ಲುವ ಜೋರು ಮಳೆ ಇಲ್ಲವೇ ಒಂದೆರೆಡು ನಿಮಿಷ ಜುಮುರು ಜುಮುರಾಗಿ ಸುರಿದು ನಿಲ್ಲುವ ಸಣ್ಣ ಮಳೆ ಮಾತ್ರ. ಲಿಬಿಯಾದ ಈ ಭಾಗ (ದಕ್ಷಿಣ) ಬಹುತೇಕ ಮರಭೂಮಿಯಾಗಿದ್ದರಿಂದ ಇಲ್ಲಿ ಮಳೆ ಬೀಳುವದೇ ಅಪರೂಪ. ಆದರೆ ಲಿಬಿಯಾದ ಉತ್ತರ ಭಾಗದಲ್ಲಿ ಅಂದರೆ ಟ್ರಿಪೋಲಿ, ಬೆಂಗಾಜಿ, ಮಿಶ್ರಟಾ, ಸಬ್ರತಾ ಮುಂತಾದ ಊರುಗಳಲ್ಲಿ ಆಗಾಗ ಹೇಳಿಕೊಳ್ಳುವಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಮಳೆ ಬೀಳುವದುಂಟು.
ಮೊನ್ನೆ ಇಲ್ಲೊಂದು (ಘಾಟ್ನ ಲ್ಲಿ) ಜೋರು ಮಳೆ ಬಿತ್ತು. ಜೋರು ಮಳೆಯೆಂದರೆ ಮಾಮೂಲಿಗಿಂತ ಸ್ವಲ್ಪ ದೊಡ್ದದಾಗಿಯೇ ಬಿದ್ದಿದ್ದರಿಂದ ನಮಗೆ ಅದೇ ಜೋರು ಮಳೆಯಾಗಿ ಕಾಣಿಸಿತು.ಏಕೆಂದರೆ ಇಲ್ಲಿ ಜೋರು ಮಳೆ ಬೀಳುವದೇಅಪರೂಪ! ಘಾಟ್ನಾ ನನ್ನ ಆರು ವರ್ಷದ ವಾಸದ ಅವಧಿಯಲ್ಲಿ ಈ ರೀತಿ ಜೋರಾಗಿ ಮಳೆ ಬಿದ್ದಿದ್ದು ಎರಡನೇ ಬಾರಿಯೋ, ಮೂರನೇ ಬಾರಿಯೋ? ಅಷ್ಟೆ. ಇಲ್ಲೇನಿದ್ದರೂ ಬರೀ ಜುಮುರು ಮಳೆ ಮಾತ್ರ! ಅದೂ ಕೇವಲ ಐದಾರು ನಿಮಿಷಗಳು!ಈ ಕಾರಣಕ್ಕಾಗಿಯೇನೋ ಇಲ್ಲಿನವರ ಮತ್ತು ಮಳೆಯ ನಡುವಿನ ನೆಂಟಸ್ತಿಕೆ ಅಷ್ಟಕ್ಕಷ್ಟೆ!
ಅವರಿಗೆ ಮಳೆಯ ಮಧುರ ನೆನಪುಗಳಾಗಲಿ,ಅದರೊಂದಿಗೆ ಹುಟ್ಟುವ ಬೆಚ್ಚನೆಯ ಕನಸುಗಳಾಗಲಿ ಇಲ್ಲವೇ ಇಲ್ಲ ಎನ್ನಬಹುದು. ಆದರೆ ನಮಗೆ ಮಳೆಯೆಂದರೆ ಏನೆಲ್ಲಾ! ಮಳೆಯೆಂದರೆ ಜಡಗಟ್ಟಿದ ಮನಸ್ಸನ್ನು ಬಡಿದೆಬ್ಬಿಸುವ ಸಂಜೀವಿನಿ,ಮಳೆಯೆಂದರೆ ಮಧುರ ಪ್ರೀತಿಯ ನೆನಪನ್ನು ಮೆಲಕುಹಾಕುವ ಸಮಯ, ಮಳೆಯೆಂದರೆ ಸಂಗಾತಿಯ ಸನಿಹವ ಬಯಸುವ ಹೊಂಗನಸು, ಮಳೆಯೆಂದರೆ………..ಇನ್ನೂ ಏನೇನೋ! ಒಂದೇ, ಎರಡೇ ಅದರಆಲಾಪಗಳು?ನಾನು ಮಳೆ ಬಂದಾಗಲೆಲ್ಲಾ ಆ ಮಳೆಯನ್ನು ಮತ್ತು ಅದರೊಟ್ಟಿಗೇಳುವ ಮಣ್ಣಿನ ವಾಸನೆಯನ್ನು ಸವಿಯಲೆಂದೇ ಹೊರಗೆ ಬಂದು ನಿಲ್ಲುತ್ತೇನೆ. ನಿಂತಂತೆ ಮಳೆಯ ನೆನಪಿನ ಆಲಾಪಗಳು ಕಿವಿಯಲ್ಲಿ ಗುಂಯ್ಯಗುಡತೊಡಗುತ್ತವೆ. ಜುಮುರು ಮಳೆಗೆ ಒಂದು ಆಲಾಪವಾದರೆ ಬಿರುಸು ಮಳೆಗೆ ಹತ್ತು ಹಲವು! ಮೊನ್ನೆ ಕೂಡಾ ಹೀಗೆ ಮಳೆಯಲ್ಲಿ ನಿಂತು ಅದನ್ನು ಆಸ್ವಾದಿಸುವಾಗ ಫಕ್ಕನೆ ‘ಅವರಿಬ್ಬರು’ ನೆನಪಾದರು. ಅವರಿಬ್ಬರೆಂದರೆ ಇಂಥದೇ ಒಂದು ಬಿರುಸು ಮಳೆಯಲ್ಲಿ ಒಮ್ಮೆ ಟ್ರಿಪೋಲಿಯಲ್ಲಿ ನಾನು ಅಸಹಾಯಕನಾಗಿ ನಿಂತಾಗ ನನಗೆ ಸಹಾಯವನ್ನುನೀಡಿದ, ತಮ್ಮ ಮಾನವೀಯತೆಯ ಮೂಲಕ ನನ್ನ ಮನಸ್ಸನ್ನು ತಾಕಿದಮನುಷ್ಯರು! ಅವರ ಬಗ್ಗೆ ನಿಮಗೂ ಹೇಳಲೇಬೇಕೆನಿಸಿ ಈ ಸಾರಿ ಅವರ ಬಗ್ಗೆ ಬರೆಯುತ್ತಿದ್ದೇನೆ.
ಅದು 2010ರ ಜೂನ್ ಕೊನೆವಾರ ಇರಬೇಕು. ಆ ವರ್ಷ ನನ್ನ ಹೆಂಡತಿ ಮತ್ತು ಮಗಳು ಎರಡನೆಯ ಬಾರಿಗೆ ಲಿಬಿಯಾಕ್ಕೆ ಬಂದಿಳಿದಿದ್ದರು. ಆ ವರ್ಷ ಅವರಿಗೆ ವೀಸಾ ತುಂಬಾ ತಡವಾಗಿ ಸಿಕ್ಕಿತ್ತು. ಜೊತೆಗೆ ಜೂನ್ ಕೊನೆವಾರ ಮುಗಿದು ಜುಲೈ 1 ಕ್ಕೆ ನನ್ನ ಹೆಂಡತಿಯ ಕಾಲೇಜು ಆರಂಭವಾಗುತ್ತಿದ್ದುದರಿಂದ ಆಕೆ ಆ ದಿನ ತಾನು ಖಡ್ಡಯವಾಗಿ ಅಲ್ಲಿರಲೇ ಬೇಕೆಂದು ಹೊರಟೇ ಬಿಟ್ಟಳು. ನನಗಿಲ್ಲಿ ರಜೆ ಆರಂಭವಾಗಲು ಇನ್ನೂ ಒಂದು ತಿಂಗಳ ಬಾಕಿಯಿದ್ದುದರಿಂದ ನಾನು ಅವರೊಟ್ಟಿಗೆ ಹೋಗುವ ಹಾಗಿರಲಿಲ್ಲ. ಹಾಗಾಗಿ ನಾನು ಅವರಿಬ್ಬರನ್ನೇ ಕಳಿಸಲು ನಿರ್ಧರಿಸಿದೆ. ಆ ಪ್ರಕಾರ ಅವರಿಬ್ಬರನ್ನು ಟ್ರಿಪೋಲಿಯವರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ವಿಮಾನ ಹತ್ತಿಸಿ ಬಂದರಾಯಿತೆಂದುಕೊಂಡು ಹೊರಟೆ.
ನಿಮಗೆ ಗೊತ್ತಿರಲಿ ಲಿಬಿಯಾದ ಯಾವುದೇ ಭಾಗದಲ್ಲಿನೀವು ಪ್ರಯಾಣಿಸಬೇಕಾದರೆ ನಿಮ್ಮ ಬಳಿ ಖಡ್ಡಾಯವಾಗಿ ಪಾಸ್ಪೋರ್ಟ್ ಹಾಗೂ ಹೆಲ್ತ್ ಕಾರ್ಡ್ (HIV ಮತ್ತು ಹೆಪಟೈಟಸ್ ಖಾಯಿಲೆಗಳನ್ನು ಪರೀಕ್ಷೆ ಮಾಡಿಸಿ ತೆಗೆದುಕೊಂಡ ಕಾರ್ಡು) ಇರಲೇ ಬೇಕು. ಈ ಕಾಯಿದೆ ನಮಗೆ ಮಾತ್ರವಲ್ಲ ಲಿಬಿಯನ್ರಿಯಗೂ ಸಹ ಅನ್ವಯಿಸುತ್ತದೆ. ಅವರು ಎಲ್ಲಿಗೆ ಹೋಗಬೇಕಾದರೂ ತಮ್ಮೊಂದಿಗೆ ‘ಪತಾಕಾ’ (ಐಡೆಂಟಿಟಿ ಕಾರ್ಡ್) ಮತ್ತು ಹೆಲ್ತ್ ಕಾರ್ಡನ್ನು ಒಯ್ಯಲೇಬೇಕು. ಒಂದು ವೇಳೆ ಒಯ್ಯದಿದ್ದರೆ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ ಇಲ್ಲವೇ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ವಿದೇಶಿಯರಾದರೆ ಇನ್ನೂ ಹೆಚ್ಚಿನ ದಂಡ ಕೊಡಬೇಕಾಗುತ್ತದೆ ಮತ್ತು ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಏಕೆಂದರೆ ಇಲ್ಲಿ ಪ್ರತಿ ನೂರು ಕಿಲೋಮೀಟರಿಗೊಂದು ಚೆಕ್ಪೋಠಸ್ಟ್ ಇರುವದರಿಂದ ಅಲ್ಲಿ ಪ್ರಯಾಣಿಕರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸುತ್ತಾರೆ. ಇದಕ್ಕೆ ಕಾರಣವೂ ಇದೆ. ಘಾಟ್ನ್ ಸಹರಾ ಮರಭೂಮಿ ನೈಜರ್, ನೈಜಿರಿಯಾ, ಗನಾ, ಗಾಂಬಿಯಾ ಮುಂತಾದ ವಿದೇಶಿಯರಿಗೆ ಅನೇಕ ಕಳ್ಳದಾರಿಗಳನ್ನು ಕಲ್ಪಿಸಿಕೊಟ್ಟಿದೆ. ಅವರು ಈ ಕಳ್ಳದಾರಿಗಳ ಮೂಲಕ ಲಿಬಿಯಾದೊಳಕ್ಕೆನಡೆದುಕೊಂಡು ಬರುತ್ತಾರೆ. ಇಲ್ಲಿ’ಅಕಾಮಾ’ (ರೆಸಿಡೆನ್ಸ್ ವೀಸಾ) ತೆಗೆದುಕೊಳ್ಳದೆ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಎಂಥದೋ ಒಂದು ಕೆಲಸವನ್ನು ಹುಡುಕಿಕೊಂಡು ಅಕ್ರಮವಾಗಿ ಬದುಕತೊಡಗುತ್ತಾರೆ. ಮತ್ತೆ ಕೆಲವರು ಇಲ್ಲಿಂದ ಅದ್ಹೇಗೋ ಟ್ರಿಪೋಲಿಗೆ ಹೋಗಿ ಅಲ್ಲಿಂದ ತಮ್ಮ ಪಾಸ್ಪೋರ್ಟ್ವೊಂದದರಿಂದಲೇ ಸಮುದ್ರ ಮಾರ್ಗವಾಗಿ ಇಟಲಿಗೋ, ರೋಮ್ಗೋಹ, ಫ್ರಾನ್ಸಿಗೋ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಹೀಗೆ ಅಕ್ರಮವಾಗಿ ಬದುಕುವ ಇಂಥವರಿಂದ ಸಮಾಜ ಘಾತುಕ ಕೆಲಸಗಳು ಜರಗುವ ಸಂಭವನೀಯತೆಯಿರುವದರಿಂದ ಇವರ ಮೇಲೆ ಸದಾ ಒಂದು ಹದ್ದಿನ ಕಣ್ಣಿಟ್ಟಿರುತ್ತಾರೆ ಹಾಗೂ ಇಂಥವರನ್ನು ಮಟ್ಟ ಹಾಕಲೆಂದೇ ಇಷ್ಟೆಲ್ಲಾ ನಿಯಮಗಳು ಜಾರಿಯಲ್ಲಿವೆ ಎಂದು ಇಲ್ಲಿನವರು ಹೇಳುತ್ತಾರೆ.
ಲಿಬಿಯಾದ ದಕ್ಷಿಣ ಭಾಗದಲ್ಲಿ ನಮಗೆ ಅಂದರೆ ಭಾರತೀಯರಿಗೆ ಪಾಸ್ಪೋರ್ಟ್ ಇರದಿದ್ದರೂ ಪರ್ವಾಗಿಲ್ಲ ನಾವು ಕೆಲಸ ಮಾಡುವ ಸಂಸ್ಥೆಯಿಂದ ನೀಡಿದ ಐಡೆಂಟಿಟಿ ಕಾರ್ಡೊಂದನ್ನು ತೋರಿಸಿದರೆ ಸಾಕು ನಮಗೆ ಚೆಕ್ ಪೋಸ್ಟ್‍ಗಳಲ್ಲಿ ಮತ್ತು ಹೋಟೆಲ್ಗಂಳಲ್ಲಿ ಸುಲಭವಾಗಿ ಎಂಟ್ರಿ ಸಿಗುತ್ತೆ. ಚೆಕ್ ಪೋಸ್ಟ್ಗಸಳಲ್ಲಿ ಒಂದೊಂದು ಸಾರಿ ನಾವು ಭಾರತೀಯರೆಂದು ಗೊತ್ತಾದ ತಕ್ಷಣ ನಮ್ಮನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸುವ ಗೋಜಿಗೆ ಹೋಗುವದಿಲ್ಲ. ಭಾರತೀಯರ ಮೇಲೆ ಅವರಿಗೆ ಅಷ್ಟು ನಂಬಿಕೆ ಮತ್ತು ಗೌರವ! ಆದರೆ ಉತ್ತರ ಭಾಗದಲ್ಲಿ ಹಾಗಲ್ಲ. ಖಡ್ಡಯವಾಗಿ ನಾವು ಪಾಸ್ಪೋರ್ಟ್ ಮತ್ತು ಹೆಲ್ತ್ ಕಾರ್ಡ್ಗೆಳನ್ನು ಹೊಂದಿರಲೇಬೇಕಾಗುತ್ತದೆ. ಅಲ್ಲಿ ಸಹ ನಾವು ಭಾರತೀಯರೆಂದು ಗೊತ್ತಾದ ತಕ್ಷಣ ನಮ್ಮನ್ನು ಹೆಚ್ಚು ತಪಾಸಿಸದೆ ಬರೀ ಪಾಸ್ಪೋರ್ಟ್ ಮತ್ತು ಹೆಲ್ತ್ ಕಾರ್ಡುಗಳನ್ನು ನೋಡಿ ಬಿಟ್ಟು ಬಿಡುತ್ತಾರೆ.
ಈ ಮೊದಲೇ ಹೇಳಿದಂತೆ ನಾನು,ನನ್ನ ಹೆಂಡತಿ ಮತ್ತು ಮಗಳನ್ನು ಇಂಡಿಯಾಕ್ಕೆ ಕಳಿಸಲು ಘಾಟ್ನಿಂದ ಟ್ರಿಪೋಲಿಗೆ ವಿಮಾನದಲ್ಲಿ ಹೊರಟುಬಂದೆ. ಘಾಟ್ನಿಂದ ಟ್ರಿಪೋಲಿಗೆ ವಿಮಾನ ಪ್ರಯಾಣ ಕೇವಲ ಒಂದೂವರೆ ಘಂಟೆ ಮತ್ತು ಹೆಚ್ಚಿನ ತಪಾಸಣೆಯನ್ನು ಎದುರಿಸುವ ಪ್ರಮೇಯ ಬೀಳುವದಿಲ್ಲ. ಆದರೆ ರಸ್ತೆ ಮಾರ್ಗದ ಪ್ರಯಾಣ ಸುಮಾರು ಹದಿನೆಂಟು ಘಂಟೆಗಳನ್ನು ತೆಗೆದುಕೊಳ್ಳುವದಲ್ಲದೆ ದಾರಿಯುದ್ದಕ್ಕೂ ಸಾಕಷ್ಟು ತಪಾಸಣೆಯನ್ನು ಎದುರಿಸಬೇಕಾಗುತ್ತದೆ. ಬರುವಾಗ ನಾನು ನನ್ನ ಪಾಸ್ಪೋರ್ಟ್ ತೆಗೆದುಕೊಂಡಿರಲಿಲ್ಲ. ಏಕೆಂದರೆ ಮುಂದಿನ ಇಪ್ಪತ್ತು ದಿನಗಳಲ್ಲಿ ಬೇಸಿಗೆ ರಜೆಯ ಮೇಲೆ ನಾವೆಲ್ಲಾ ಲೆಕ್ಚರರ್ಸ್ ನಮ್ಮ ನಮ್ಮ ದೇಶಗಳಿಗೆ ಹೋಗುತ್ತಿದ್ದುದರಿಂದ ನಮ್ಮ ಪಾಸ್ಪೋರ್ಟ್ಗಳನ್ನು ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಮಾಡಿಸಲು ಯೂನಿವರ್ಷಿಟಿಯವರು ತೆಗೆದುಕೊಂಡಿದ್ದರು.

ಟ್ರಿಪೋಲಿ ಹಡಗು ನಿಲ್ದಾಣ

ಹೀಗಾಗಿ ನಾನು ಪಾಸ್ಪೋರ್ಟ್ ಇಲ್ಲದೇ ಬರೀ ಐಡಿ ಕಾರ್ಡ್ನೊಂದಿಗೆ ಟ್ರಿಪೋಲಿಗೆ ಹೊರಟು ಬಂದೆ. ನಾನು ನಮ್ಮ ಕಾಲೇಜಿನಿಂದ ’ನನ್ನ ಪಾಸ್ಪೋರ್ಟ್ನ್ನುನ ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಮಾಡಿಸಲುಯೂನಿವರ್ಷಿಟಿಯವರುತೆಗೆದುಕೊಂಡಿದ್ದರಿಂದ ಈ ಪತ್ರವನ್ನೇ ಪಾಸ್ಪೋರ್ಟ್ ಎಂದು ಪರಿಗಣಿಸಿ’ ಎಂದು ಒಂದು ಪತ್ರವನ್ನು ತೆಗೆದುಕೊಂಡಿದ್ದರೂ ಸಾಕಿತ್ತು. ಆದರೆ ನಾನು ಅದ್ಯಾವುದನ್ನು ಮಾಡದೆ ಬರೀ ಐಡಿ ಕಾರ್ಡಿನೊಂದಿಗೆ ಹೊರಟು ಬಂದಿದ್ದೆ. ಮೇಲಾಗಿ ನನ್ನ ಪಾಸ್ಪೋರ್ಟ್ ಇರದಿದ್ದರೇನಂತೆ? ಹೇಗೂ ನನ್ನ ಹೆಂಡತಿ ಮತ್ತು ಮಗಳ ಪಾಸ್ಪೋರ್ಟ್ನವಲ್ಲಿ ನನ್ನ ಹೆಸರು ಇರುತ್ತದಲ್ಲ? ಅಷ್ಟು ಸಾಕು. ಜೊತೆಗೆ ನನ್ನ ಐಡಿ ಕಾರ್ಡು ಬೇರೆ ಇದೆ. ಇವನ್ನು ತೋರಿಸಿದರೆ ನಡೆಯುತ್ತೆ ಎಂಬ ಹುಂಭ ಧೈರ್ಯದಲ್ಲಿ ಟ್ರಿಪೋಲಿಗೆ ಸಾಯಂಕಾಲ ಆರು ಘಂಟೆಗೆ ಬಂದಿಳಿದೆ.
ನನ್ನ ಹೆಂಡತಿ ಮತ್ತು ಮಗಳು ಹೋಗುವ ಫ್ಲೈಟ್ ಮಾರನೆಯ ದಿನ ಮಧ್ಯಾಹ್ನ ಮೂರು ಘಂಟೆಗ ಇದ್ದುದರಿಂದ ಆ ದಿನ ನಾವು ಟ್ರಿಪೋಲಿಯ ಹೋಟೆಲ್ವೊಂ ದರಲ್ಲಿ ಉಳಿದುಕೊಳ್ಳುವದು ಅನಿವಾರ್ಯವಾಗಿತ್ತು. ಇಲ್ಲಿಂದ ಎಂಬತ್ತು ಕಿಲೋಮೀಟರ್ ದೂರದಲ್ಲಿರುವ ಸಬ್ರತಾದಲ್ಲಿನ ನನ್ನ ಸ್ನೇಹಿತ ಸುರೆಂದ್ರನ ಮನೆಗೆ ಹೋಗಬಹುದಾಗಿತ್ತು. ಆದರೆ ಇಲ್ಲಿಂದ ಅಷ್ಟುದೂರ ಹೋಗುವದು ಮತ್ತೆ ಮಾರನೆಯ ದಿನ ತರಾತುರಿಯಲ್ಲಿ ಎದ್ದು ಬರುವದು ನಮಗೆ ಬೇಡವಾಗಿತ್ತು. ಹೀಗಾಗಿ ಹೋಟೆಲ್ನೂಲ್ಲಿ ಉಳಿದುಕೊಳ್ಳಲು ನಿರ್ಧರಿಸಿದೆವು. ನಾನವನಿಗೆ ಬೇಕಂತಲೇ ಕಾಲ್ ಕೂಡಾ ಮಾಡಲಿಲ್ಲ. ಮಾಡಿದ್ದಿದ್ದರೆ ಅವನು ತನ್ನ ಮನೆಗೇ ಬರಬೇಕೆಂದು ಒತ್ತಾಯಿಸುವದು ಮತ್ತು ನಾನು ಹೊರಟು ನಿಲ್ಲುವದು ಅನಿವಾರ್ಯವಾಗುತ್ತಿತ್ತು. ಇದ್ಯಾವುದು ಬೇಡವೆಂದೇ ನಾವು ಹೋಟೆಲ್ನಾಲ್ಲಿ ಉಳಿಯಲು ನಿರ್ಧರಿಸಿದೆವು.
ಆ ಪ್ರಕಾರ ನಾನು ಮಾಮೂಲಾಗಿ ಉಳಿದುಕೊಳ್ಳುತ್ತಿದ್ದ ಹಾಗೂ ಟ್ರಿಪೋಲಿ ಹಡಗು ನಿಲ್ದಾಣದ ಪಕ್ಕದಲ್ಲಿದ್ದ ಹೋಟೆಲ್ಗೆವ ಟ್ಯಾಕ್ಷಿಯಲ್ಲಿ ಬಂದಿಳಿದೆ.ಆದರೆ ನನ್ನ ಬಳಿ ಪಾಸ್ಪೋರ್ಟ್ ಇರದಿದ್ದ ಕಾರಣ ಹೋಟೆಲ್ ಮಾಲಿಕ ನಮಗೆ ರೂಮನ್ನು ಕೊಡಲು ನಿರಾಕರಿಸಿದ. ನಾನು ನನ್ನ ಐಡಿ ಕಾರ್ಡನ್ನು ತೋರಿಸಿದೆ. ನನ್ನ ಹೆಂಡತಿ ಮತ್ತು ಮಗಳ ಪಾಸ್ಪೋರ್ಟ್ನಾಲ್ಲಿ ನನ್ನ ಹೆಸರು ಇರುವದನ್ನು ತೋರಿಸಿದೆ. ಪರಿ ಪರಿಯಾಗಿ ಬೇಡಿಕೊಂಡೆ. ಬೇಕಾದರೆ ಒಂದಿಪ್ಪತ್ತು ದಿನಾರಗಳನ್ನು ಹೆಚ್ಚಿಗೆ ಕೊಡುತ್ತೇನೆಂದೆ. ನಮ್ಮ ಡೀನ್ಗೆಡ ಕಾಲ್ ಮಾಡಿ ಅವನ ಜೊತೆ ಮಾತಾಡಿ ಅವನಿಗೆ ರೂಮು ಕೊಡಲು ಹೇಳಿ ಎಂದು ಕೇಳಿಕೊಂಡೆ. ಊಹೂಂ,ಅವ ಯಾವುದಕ್ಕೂ ಜಗ್ಗಲಿಲ್ಲ. ಏನು ಮಾಡಿದರೂ ಕೊಡಲಿಲ್ಲ. “ಪಾಸ್ಪೋರ್ಟ್ ಖಡ್ಡಾಯವಾಗಿರಲೇಬೇಕು, ಇದು ಲಿಬಿಯಾದ ರೂಲು. ರೂಲ್ ವಿರುದ್ಧ ನಾವು ಹೊಗಲಾರೆವು. ಏನಾದರು ಹೆಚ್ಚು ಕಮ್ಮಿಯಾದರೆ ನಾವು ತಲೆಕೊಡಬೇಕಾಗುತ್ತದೆ. ಸಾರಿ. ಬೇರೆ ಕಡೆ ಟ್ರೈ ಮಾಡಿ. ಸಿಕ್ಕರೂ ಸಿಗಬಹುದು” ಎಂದು ಹೇಳಿದ.
ಅಷ್ಟರಲ್ಲಿ ಇದ್ದಕ್ಕಿದ್ದಂತೆ ಮಳೆ ಹನಿಯತೊಡಗಿತು. ಸಣ್ಣಗೆ ಶುರುವಾದ ಮಳೆ ಕ್ರಮೇಣ ಜೋರಾಗಿ ಸುರಿಯತೊಡಗಿತು. ಸುಮಾರು ಅರ್ಧ ಘಂಟೆಯಾದರೂ ಮಳೆ ನಿಲ್ಲುವ ಲಕ್ಷಣಗಳೇ ಕಾಣಲಿಲ್ಲ. ನಾನು ಇದನ್ನೇ ನೆಪಮಾಡಿಕೊಂಡು “ಈ ಸುರಿವ ಮಳೆಯಲ್ಲಿ ನಾವು ಇನ್ಯಾವ ಹೋಟೆಲ್ ಹುಡುಕಿಕೊಂಡು ಹೋಗೋಣ. ದಯವಿಟ್ಟು ಇಲ್ಲಿಯೇ ಕೊಡಿ” ಎಂದು ಮತ್ತೊಮ್ಮೆ ಕೇಳಿದೆ.ಊಹೂಂ, ಅವ ಏನು ಮಾಡಿದರೂ ಕರಗಲಿಲ್ಲ. ನಾನು ಅಸಹಾಯಕನಾಗಿ ನಿಂತೆ. ನಮ್ಮ ಸಂದಿಗ್ಧ ಪರಿಸ್ಥಿತಿಯನ್ನು ನೋಡಿ ನನ್ನ ಹೆಂಡತಿ ಅಳತೊಡಗಿದಳು. ಆಗಲೂ ಆತ ಕರಗಲಿಲ್ಲ. ಅಷ್ಟರಲ್ಲಿ ಅದೇ ಹೊಟೆಲ್ನೊಲ್ಲಿ ಉಳಿದುಕೊಂಡಿದ್ದಮಧ್ಯ ವಯಸ್ಕ ಹೆಂಗಸೊಬ್ಬಳು ಹೊರಗಿನಿಂದ ಬಂದು ತನ್ನ ರೂಮು ಕೀ ಇಸಿದುಕೊಳ್ಳಲು Receptionist ಬಳಿ ನಡೆದು ಬಂದಳು. ಅಲ್ಲಿ ನನ್ನ ಹೆಂಡತಿ ಅಳುತ್ತಾ ನಿಂತಿರುವದನ್ನು ನೋಡಿ ಏನಾಯಿತೆಂದು Receptionistನನ್ನು ಅರೇಬಿಕ್ನಬಲ್ಲಿ ಕೇಳಿದಳು.
ಆತ ಎಲ್ಲ ವಿವರಿಸಿಯಾದ ಮೇಲೆ ನಮ್ಮ ಕಡೆ ತಿರುಗಿ “Hello, Excuse me. How can I help you?” ಎಂದು ಕೇಳಿದಳು.ನಾನು ನಡೆದಿದ್ದೆಲ್ಲವನ್ನೂ ಹೇಳಿದೆ. ಆಕೆ ಕೂಡಾ ಅವನ ಮನವೊಲಿಸಲು ಪ್ರಯತ್ನಿಸಿದಳು. ಪ್ರಯೋಜನವಾಗಲಿಲ್ಲ. ಆಗ ನಾನು ಗೆಳೆಯ ಸುರೇಂದ್ರನ ಮನೆಗೆ ಹೋದರಾಯಿತೆಂದುಕೊಂಡು ಅವನಿಗೆ ಫೋನ್ ಮಾಡಿದೆ. ಆದರೆ ಅವ ಫೋನ್ ತೆಗೆಯಲಿಲ್ಲ. ಮತ್ತೆ ಮತ್ತೆ ಮಾಡಿದೆ. ಊಹೂಂ, ನನ್ನ ದುರಾದೃಷ್ಟಕ್ಕೆ ಅವ ಆ ಸಮಯದಲ್ಲಿ ಫೋನ್ ತೆಗೆಯಲಿಲ್ಲ. ನಾನು ಮತ್ತಷ್ಟು ವಿಚಲಿತನಾಗಿ ನಿಂತೆ. ಆಗ ಆ ಹೆಣ್ಣುಮಗಳು “Don’t worry. I’ll take you to some other hotels. Let’s try your luck. But they may be bit costlier than this hotel. Is that ok with you?” ಎಂದು ಕೇಳಿದಳು. ನಾನಾಗ “ದುಡ್ದು ಎಷ್ಟು ಖರ್ಚಾದರು ಪರ್ವಾಗಿಲ್ಲ. ಒಟ್ಟಿನಲ್ಲಿ ರೂಮೊಂದು ಸಿಕ್ಕರೆ ಸಾಕು” ಎಂದು ಹೇಳಿದೆ. ಈ ಮಧ್ಯ ಗೆಳೆಯ ಸುರೇಂದ್ರನಿಗೆ ಫೋನಾಯಿಸುತ್ತಲೇ ಇದ್ದೆ. ಆದರೆ ಅದೇಕೋ ಅವನು ತೆಗೆಯುತ್ತಿರಲೇ ಇಲ್ಲ. ಬೇರೆ ಹೋಟೆಲ್ಗೆಳ ಹೋದರಾಯಿತೆಂದುಕೊಂಡು ನಮ್ಮ ಲಗೇಜ್ ಎತ್ತಿಕೊಂಡು ರಸ್ತೆಗೆ ಬರುತ್ತಿದ್ದಂತೆ ಆಕೆಯೇ ಹೋಗಿ ಟ್ಯಾಕ್ಷಿತೆಗೆದುಕೊಂಡುಬಂದಳು.
ಮಳೆ ಸುರಿಯುತ್ತಲೇ ಇತ್ತು. ಆ ಮಳೆಯಲ್ಲಿಯೇ ಹತ್ತಿರದಲ್ಲೇ ಇದ್ದ ಇನ್ನೊಂದು ಹೋಟೆಲ್ಗೆಕ ಹೋದೆವು. ಅಲ್ಲಿ ಆಕೆ “ನೀವು ಟ್ಯಾಕ್ಶಿಯಲ್ಲೇ ಕೂತಿರಿ. ನಾನು ಡ್ರೈವರ್ನೊಂಕದಿಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ.” ಎಂದು ನಮ್ಮನ್ನು ಕೆಳಗೆ ಇಳಿಯಲು ಬಿಡದೇ ಆಕೆಯೇ ಹೋಗಿ ವಿಚಾರಿಕೊಂಡು ಬಂದಳು. ಅಲ್ಲೂ ಅವರು ಪಾಸ್ಪೋರ್ಟ್ ಇಲ್ಲದವರಿಗೆ ರೂಮು ಕೊಡುವದಿಲ್ಲ ಎಂದು ಹೇಳಿದರು. ನನಗೆ ಆತಂಕ ಹೆಚ್ಚಾಯಿತು. ನಾನು ಮತ್ತೆ ಗೆಳೆಯನಿಗೆ ಫೋನಾಯಿಸಿದೆ. ಪುಣ್ಯಾತ್ಮ ತೆಗೆಯಲೇ ಇಲ್ಲ. “ಇನ್ನೂ ಒಂದಿಷ್ಟು ಹೊಟೆಲ್ಗಿಳಲ್ಲಿ ಕೇಳೋಣ ಇರಿ. ಸಿಕ್ಕರೂ ಸಿಗಬಹುದು.” ಎಂದು ನಮಗೆ ಧೈರ್ಯ ತುಂಬುತ್ತಲೇ ಇನ್ನೊಂದಿಷ್ಟು ಹೋಟೆಲ್ಗಟಳಿಗೆ ಕರೆದುಕೊಂಡು ಹೋದಳು. ಎಲ್ಲ ಕಡೆ ಒಂದೇ ಉತ್ತರ ಬಂತು; ಪಾಸ್ಪೋರ್ಟ್ ಇಲ್ಲದವಿರಿಗೆ ರೂಮು ಕೊಡುವದಿಲ್ಲ ಎಂದು. ನಾನು ಅಕ್ಷರಶಃ ಅಸಹಾಯಕನಾಗಿ ನಿಂತೆ. ನನ್ನ ಆತಂಕ ಇಮ್ಮುಡಿಯಾಯಿತು. ನನ್ನ ಹೆಂಡತಿ ಮತ್ತೆ ಅಳತೊಡಗಿದಳು.
ಈ ದೇಶದಲ್ಲಿ ಯಾಕಿಂಥ ಸ್ಟ್ರಿಕ್ಟ್ ರೂಲ್ಸು? ಇದೆಂಥಾ ನಿಯಮಗಳು? ಎಂದು ಶಾಪ ಬೇರೆ ಹಾಕಿದಳು. ಆದರೆ ನಾವು ಆ ನಿಯಮಗಳಿಗೆ ತಲೆಬಾಗದೆ ವಿಧಿಯಿರಲಿಲ್ಲ. ನನ್ನ ಹೆಂಡತಿ ಒಂದೇ ಸಮನೆ ಅಳುವದನ್ನು ನೋಡಿ ಆಕೆ “ದಯವಿಟ್ಟು ಅಳಬೇಡಿ. ನಿಮಗೆ ಎಲ್ಲಾದರೂ ಒಂದು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸುತ್ತೇನೆ. ನಾನು ಬೆಂಗಾಜಿಯವಳು. ನಾನು ಕೆಲಸದ ಮೇಲೆ ಟ್ರಿಪೋಲಿಗೆ ಬಂದು ಈ ಹೋಟೆಲ್ನಡಲ್ಲಿ ಉಳಿದುಕೊಂಡಿದ್ದೇನೆ. ನನಗೆ ಇಲ್ಲಿ ಯಾರೂ ಫ್ರೆಂಡ್ಸ್ ಆಗಲಿ, ರಿಲೆಟಿವ್ಸ್ ಆಗಲಿ ಇಲ್ಲ. ಇದ್ದಿದ್ದರೆ ನಿಮ್ಮನ್ನು ಅಲ್ಲಿಗೆ ಕಳಿಸಿಕೊಡುತ್ತಿದ್ದೆ. ಆದರೂ ಏನೋ ಒಂದು ವ್ಯವಸ್ಥೆ ಮಾಡುತ್ತೇನೆ. Be positive.” ಎಂದು ನಮಗೆ ಸಮಾಧಾನ ಹೇಳುತ್ತಾ ನಮ್ಮ ಟ್ಯಾಕ್ಷಿ ಡ್ರೈವರ್ನೊಂೂದಿಗೆ ಅದೇನೇನೋ ಅರೇಬಿಕ್ನನಲ್ಲಿ ಮಾತಾಡಿ ಮತ್ತೆ ನಮ್ಮ ಕಡೆ ತಿರುಗಿ “ಈ ಟ್ಯಾಕ್ಷಿ ಡ್ರೈವರ್ ಮನೆಯಲ್ಲಿ ಉಳಿದುಕೊಳ್ತಿರಾ? ಅವನೂ ಒಪ್ಪಿದ್ದಾನೆ. ನಿಮಗೆ ಇದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ.” ಎಂದು ಹೇಳಿದಳು.
ಆಗ ಟ್ಯಾಕ್ಷಿ ಡ್ರೈವರ್ “ನಮ್ಮ ಮನೆಗೆ ಬನ್ನಿ. ಅಲ್ಲಿ ಎರಡು ರೂಮುಗಳಿವೆ. ಒಂದು ರೂಮಿನಲ್ಲಿ ನೀವಿರಿ. ಬೆಳಿಗ್ಗೆ ನಾನೇ ನಿಮ್ಮನ್ನು ಏರ್ಪೋರ್ಟ್ಗೆ ಡ್ರಾಪ್ ಮಾಡುತ್ತೇನೆ. ನನ್ನ ಹೆಂಡತಿಗೂ ಹೇಳುತ್ತೆನೆ. ಆಕೆ ಖಂಡಿತ ಒಪ್ಪುತ್ತಾಳೆ. ನೀವೇನು ಆತಂಕ ಪಡಬೇಕಾಗಿಲ್ಲ.” ಎಂದು ಹೇಳುತ್ತಿದ್ದಂತೆ ಅವನ ಹೃದಯ ವೈಶಾಲ್ಯಕ್ಕೆ ನಮ್ಮಿಬ್ಬರ ಕಣ್ಣುಗಳು ಒದ್ದೆಯಾದವು. ಯಾರೆಂದು ಸರಿಯಾಗಿ ಗೊತ್ತಿರದ ನಮ್ಮಂತ ಅಪರಿಚಿತರನ್ನು ತನ್ನ ಮನೆಗೆ ಬಂದು ಇರಿ ಎಂದು ಹೇಳುತ್ತಿದ್ದಾನಲ್ಲ ಇವನು ಅದೆಂಥ ದೊಡ್ದ ವ್ಯಕ್ತಿಯಾಗಿರಬೇಕು? ಟ್ರಿಪೋಲಿಯಂಥ ಮಹಾನಗರದಲ್ಲಿ ಇನ್ನೂ ಇಂಥ ಜನರಿದ್ದಾರೆಯೇ? ಮಾನವೀಯ ಮೌಲ್ಯಗಳು ಇನ್ನೂ ಉಳಿದುಕೊಂಡಿವೆಯೇ?ಎಂದು ಅಚ್ಚರಿಪಡುತ್ತಿರುವಾಗಲೇ ಆಕೆ ಮತ್ತೆ “Yes, you can stay with him. No doubt, he is a good person. Moreover, you have no other go. Think positively” ಎಂದುಹೇಳುತ್ತಾ ನಮ್ಮ ಆತಂಕವನ್ನು ದೂರಮಾಡಿದಳು.
ನಮಗೂ ಬೇರೆ ದಾರಿ ಇರಲಿಲ್ಲ. ಅವನು ಅಷ್ಟೆಲ್ಲಾ ಭರವಸೆಯನ್ನು ಕೊಟ್ಟ ಮೇಲೂ ಅವನು ಹೇಗೋ ಏನೋ ಎಂದು ಯೋಚಿಸುತ್ತಾ ಕುಳಿತುಕೊಳ್ಳುವದರಲ್ಲಿ ಅರ್ಥವಿಲ್ಲ. ಮೇಲಾಗಿ ಅವನನ್ನು ಬಿಟ್ಟರೆ ಗತಿಯಿರಲಿಲ್ಲ. ಆದದ್ದಾಗಲಿ ಅವನೊಂದಿಗೆ ಹೋಗುವದೇ ಒಳ್ಳೆಯದೆಂದು ನಿರ್ಧರಿಸಿದೆವು. ಆಗ ಘಂಟೆ ರಾತ್ರಿ ಎಂಟನ್ನು ದಾಟಿತ್ತು. ಅಷ್ಟರಲ್ಲಿ ಗೆಳೆಯ ಸುರೇಂದ್ರನ ಫೋನ್ ಬಂತು. ಆತ ತನ್ನ ಫೋನ್ನ್ನು ಮನೆಯಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದರಿಂದ ನಮ್ಮ ಫೋನ್ನ್ನು ತೆಗೆಯಲಿಲ್ಲ ಎಂದು ಹೇಳಿದ. ಸಧ್ಯ ಸಿಕ್ಕನಲ್ಲ ಎಂದು ಖುಷಿಯಾಯಿಯಿತು. ನಾವು ನಮ್ಮ ಪರಿಸ್ಥಿತಿಯನ್ನು ವಿವರಿಸಿದೆವು. ಅವನು ಈ ಕೂಡಲೇ ಹೊರಟು ಬನ್ನಿ ಎಂದು ಹೇಳಿದ. ನಮಗೆ ಹೋದ ಉಸಿರು ಮರಳಿ ಬಂದಂತಾಯಿತು.
ಇನ್ನು ನಾವು ಟ್ಯಾಕ್ಷಿ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಸಬ್ರತಾಗೆ ಹೋಗಬೇಕಿತ್ತು. ಆಕೆ ಟ್ಯಾಕ್ಷಿ ನಿಲ್ದಾಣದವರೆಗೆ ನಿಮ್ಮನ್ನು ಬಿಡುತ್ತೇನೆ ಬನ್ನಿ ಎಂದು ನಾವು ಬಂದ ಟ್ಯಾಕ್ಷಿಯಲ್ಲೇ ಕರೆದುಕೊಂಡು ಹೊರಟಳು. ಅಷ್ಟೊತ್ತಿಗಾಗಲೇ ಮಳೆ ನಿಂತಿತ್ತು. ನನ್ನ ಮಗಳು ಹಸಿವೆ ಎನ್ನುತ್ತಿದ್ದಳು. ಟ್ಯಾಕ್ಷಿ ನಿಲ್ದಾಣ ತಲಪುತ್ತಿದ್ದಂತೆ ಆಕೆ ಮೊದಲು ಇಳಿದು ಹೋಗಿ ಸೇಬು ಹಣ್ಣು, ಬಾಳೆಹಣ್ಣು, ಕೇಕ್, ನೀರಿನ ಬಾಟಲ್ ಮತ್ತು ಚಾಕಲೇಟ್ನ್ನು ತಂದು ನಮ್ಮ ಕೈಗಿಡುತ್ತಾ “ಮಗು ಹಸಿದಿದೆ. ಮೊದಲು ಅವಳಿಗೆ ತಿನಿಸಿ.” ಎಂದು ಹೇಳಿದಾಗ ನಮ್ಮಿಬ್ಬರ ಹೃದಯಗಳಲ್ಲಿ ಆರ್ದ್ರತೆ ಜಿನುಗದೇ ಇರಲು ಸಾಧ್ಯವಾಗಲಿಲ್ಲ. ನಾವು ಅವರಿಬ್ಬರ ಪ್ರೀತಿಗೆ, ಉಪಕಾರಕ್ಕೆ ಮೂಕವಿಸ್ಮಿತರಾದೆವು. ಆಕೆಯ ಉಪಕಾರವನ್ನು ಹೇಗೆ ತೀರಿಸುವದೆಂದು ಗೊತ್ತಾಗದೆ “ನೀವು ಕೊಂಡುತಂದ ಹಣ್ಣುಗಳಿಗಾದರೂ ದುಡ್ಡನ್ನು ತೆಗೆದುಕೊಳ್ಳಿ” ಎಂದು ನಾನು ದುಡ್ಡನ್ನು ಕೊಡಲು ಮುಂದಾದಾಗ ಏನು ಮಾಡಿದರೂ ತೆಗೆದುಕೊಳ್ಳಲಿಲ್ಲ.
ಅಷ್ಟು ಹೊತ್ತು ಟ್ಯಾಕ್ಷಿಯಲ್ಲಿ ಸುತ್ತಾಡಿದ್ದಕ್ಕೆ ಬಾಡಿಗೆ ಕೊಡಲು ಹೋದರೆ ಆಕೆ ಅದನ್ನೂ ಕೊಡಿಸಿಕೊಡಲಿಲ್ಲ. ಆದರೆ ನಾನೇ ಡ್ರೈವರ್ನ ಕೈಯಲ್ಲಿ ಬಲವಂತವಾಗಿ ಹತ್ತು ದಿನಾರಿನ ನೋಟೊಂದನ್ನು ತುರುಕಿದೆ. ಅಲ್ಲಿಂದ ನಮ್ಮನ್ನು ಸಬ್ರತಾಗೆ ಹೋಗುವ ಟ್ಯಾಕ್ಷಿಯಲ್ಲಿ ಕೂರಿಸಿ ನಮಗೆ ಬೈ ಹೇಳಿದರು. ಹೋಗುವ ಮುನ್ನ ಆಕೆ ತನ್ನ ಮೊಬೈಲ್ ನಂಬರ್ ಕೊಟ್ಟು “ಸಬ್ರತಾ ಮುಟ್ಟಿದ ತಕ್ಷಣ ನನಗೊಂದು ಫೋನ್ ಮಾಡಿ. All the best” ಎಂದು ನಸುನಗುತ್ತಾ ನಮ್ಮನ್ನು ಬಿಳ್ಕೊಟ್ಟಳು. ಡ್ರೈವರ್ ಕೂಡಾ “ಒಂದು ವೇಳೆ ನಿಮ್ಮ ಫ್ರೆಂಡ್ ಇರದೇ ಇದ್ದರೆ ನನ್ನ ಮನೆಗೇ ಬನ್ನಿ. ತೊಂದರೆಯಿಲ್ಲ.” ಎಂದು ಹಳಿ ತನ್ನ ಮನೆಯ ಅಡ್ರೆಸ್ ಮತ್ತು ಫೋನ್ ನಂಬರ್ ಕೊಟ್ಟನು. ನಾವು ಅವರಿಬ್ಬರ ಉಪಕಾರವನ್ನುಮನದ ತುಂಬಾ ತುಂಬಿಕೊಳ್ಳತ್ತಾ ಸಬ್ರತಾದತ್ತ ಹೊರಟೆವು.ದಾರಿಯುದ್ದಕ್ಕೂ ಅವರ ಕಾಳಜಿ, ನಮ್ಮಂಥ ಅಪರಿಚಿತರಿಗೆ ಸ್ಪಂದಿಸಿದ ರೀತಿ ನಮ್ಮನ್ನು ಬೆರಗುಗೊಳಿಸುತ್ತಲೇ ಹೋಯಿತು. ಅವರಿಬ್ಬರ ಹೇಸರೇನೆಂದು ನನಗೀಗ ಸರಿಯಾಗಿ ನೆನಪಿಲ್ಲ. ಆದರೆ ಅವರ ಮುಖಗಳು ಹಾಗೂ ಅವರೊಳಗಿನ ಮನುಷ್ಯತ್ವ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತುಬಿಟ್ಟಿವೆ.
ನಮ್ಮ ಬದುಕಿನಸುದೀರ್ಘಪ್ರಯಾಣದಲ್ಲಿಯಾರ್ಯಾರೋ ನಮಗೆ ಉಪಕಾರ ಮಾಡುತ್ತಾರೆ, ಯಾರ್ಯಾರೋ ನಮ್ಮ ಆಪಾದ್ಭಾಂದವರಾಗುತ್ತಾರೆ, ಯಾರು ಯಾರೋ ನಮಗೆ ಸಹಾಯ ಹಸ್ತ ನೀಡುತ್ತಾರೆ. ಅಂಥವರನ್ನು ಜೀವನಪೂರ್ತಿ ನೆನಪಿಟ್ಟುಕೊಂಡು, ಅವರಬಗ್ಗೆ ಜಗತ್ತಿಗೆ ಸಾರಿ ಸಾರಿ ಹೇಳುತ್ತಾ ಈ ಯಾಂತ್ರಿಕ ಜಗತ್ತಿನಲ್ಲಿ ಮಾನವೀಯತೆಯೆನ್ನುವದು ಇನ್ನೂ ಇದೆ ಎಂದು ಮನದಟ್ಟು ಮಾಡಿಸುವ ಕೆಲಸವನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ?

‍ಲೇಖಕರು avadhi

21 May, 2013

1 Comment

  1. Krishna

    Loved this article ! Libya is mostly unknown to rest of the world. I like your writing style. Excellent. Look forward for your next installment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading