2007 ರಲ್ಲಿ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಲಿಬಿಯಾಕ್ಕೆ ಹೊರಟು ಬರುವ ಮುನ್ನ ನೂರು ಜನ ನೂರು ಮಾತಾಡಿದ್ದರು, ಬಹಳಷ್ಟು ಜನ ನನ್ನನ್ನು encourage ಮಾಡಿದ್ದಕ್ಕಿಂತ discourage ಮಾಡಿದ್ದೇ ಹೆಚ್ಚು ಎಂದು ಈ ಮೊದಲೇ ಹೇಳಿದ್ದೆನಲ್ಲ. ಆದರೂ ಇವರ ಮಾತಿಗೆ ಕೇರ್ ಮಾಡದೇ ಲಿಬಿಯಾಕ್ಕೆ ಹೊರಟು ಬಂದಿದ್ದೆ. ನನ್ನ ಮಿತ್ರರು ಆಫ್ರಿಕಾದ ಬಗ್ಗೆ ಏನೇನೋ ಹೇಳುವಾಗ ಒಂಚೂರು ಅಧೀರನಾಗದ ನಾನು ಹೋಗುವ ದಿನ ಹತ್ತಿರ ಬಂದಂತೆ ನನ್ನೊಳಗೆ ಸಣ್ಣದೊಂದು ಆತಂಕ ಶುರುವಾಯಿತು. ಕಾಣದ ದೇಶ, ಕಾಣದ ಜನ, ಕೇಳದ ಭಾಷೆ ಹೇಗೋ ಏನೋ? ಇವರೆಲ್ಲ ಹೇಳುವದು ನಿಜವಾಗಿಬಿಟ್ಟರೆ? ಅಮೆರಿಕಾ, ಲಂಡನ್, ಜರ್ಮನಿಯಾದರೆ ಹೇಗೋ ಬದುಕಿ ಬಿಡಬಹುದು. ಆದರೆ ಇಲ್ಲಿ? ಇಲ್ಲಿಯ ಜನ ಒರಟಾಗಿರುತ್ತಾರೋ? ಮೃದುವಾಗಿರುತ್ತಾರೋ? ಇದು ಆಫ್ರಿಕಾ ದೇಶವಾಗಿದ್ದರಿಂದ ವಿದ್ಯಾರ್ಥಿಗಳು ತುಂಬಾ ಡಲ್ ಇರುತ್ತಾರೆ ಎಂದು ಯಾರೋ ಹೇಳಿದ್ದರು. ಅದು ನಿಜವೆ? ಎನ್ನುವ ಪ್ರಶ್ನೆಗಳು ಕಾಡತೊಡಗಿದವು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿ ಮೊಟ್ಟ ಮೊದಲಿಗೆ ಲಿಬಿಯಾ ದೇಶದ ಕುರಿತು ಇಂಟರ್ನೆಟ್ನಲ್ಲಿ ಒಂದಿಷ್ಟು ಮಾಹಿತಿ ಹೆಕ್ಕಿ ತೆಗೆದಿದ್ದೆ. ಬಂದ ಮಾಹಿತಿಯೆಲ್ಲ ಸಮಾಧಾನಕರವಾಗಿದ್ದರೂ ಮನಸ್ಸಿಗೇಕೋ ಸಮಾಧಾನವಿರಲಿಲ್ಲ. ಕಾಣದ ಊರಲ್ಲಿ ಏನಾದರು ಆಗಿಬಿಟ್ಟರೆ? ಎನ್ನುವ ಭಯ, ಆತಂಕ ಇದ್ದೇ ಇತ್ತು. ಈ ಭಯ, ಆತಂಕಗಳನ್ನು ಹೊತ್ತು ಕೊಂಡೇ ಅಕ್ಟೊಬರ್ 27, 2007 ರಂದು ನನಗೆ ಪೋಸ್ಟಿಂಗ್ ಆದ ಸೆಭಾಗೆ ಬಂದಿಳಿದೆ.
ಸೆಭಾ ಲಿಬಿಯಾದ ಐದನೇ ದೊಡ್ಡ ನಗರವಾಗಿರುವದರಿಂದ ಎಲ್ಲೆಲ್ಲೂ ನಗರೀಕರಣ ಎದ್ದು ಕಾಣುತ್ತಿತ್ತು. ದೊಡ್ದ ದೊಡ್ದ ಶಾಪಿಂಗ್ ಮಾಲ್ಗಲಳು, ದೊಡ್ದ ದೊಡ್ಡ ಪಾರ್ಕುಗಳು, ಹೋಟೆಲ್ಗುಳು, ಪರ್ವಾಗಿಲ್ಲ ನನಗೆ ಒಳ್ಳೆ ಕಡೆ ಪೋಸ್ಟಿಂಗ್ ಕೊಟ್ಟಿದ್ದಾರೆ ಎಂದು ಖುಷಿಯಾಯಿತು. ಆದರೆ ಮಾರನೆ ದಿನ ಅಲ್ಲಿಂದ ನನ್ನನ್ನು ಸೆಭಾ ವಿಶ್ವವಿದ್ಯಾನಿಲಯಕ್ಕೆ affiliate ಆಗಿರುವ ಇಲ್ಲಿಂದ 650 ಕಿ.ಮಿ. ದೂರವಿರುವ ಘಾಟ್ Arts & Science ಕಾಲೇಜಿಗೆ ಕಳಿಸಲಿದ್ದಾರೆ ಎಂಬ ಸುದ್ದಿ ಕೇಳಿ ನಿರಾಸೆಯಾಯಿತು. ಮಾರನೆ ದಿವಸ ಟ್ಯಾಕ್ಸಿ ಡ್ರೈವರ್ ನಾನು ಉಳಿದುಕೊಂಡಿರುವ ಹೋಟೆಲ್ಗೆ ನನ್ನನ್ನು ಪಿಕ್ಮಾಡಲು ಬಂದ. ಬೆಳಿಗೆ 11.30ಗೆ ಸೆಭಾ ಬಿಟ್ಟು ಘಾಟಿನತ್ತ ಹೊರಟೆ. ದಾರಿಯುದ್ದಕ್ಕೂ ಜಗತ್ತಿನ ಅತಿ ದೊಡ್ದ ಮರುಭೂಮಿ ಸಹರಾ ಅಡ್ದಲಾಗಿ ಮಲಗಿತ್ತು. ಎಲ್ಲಿ ನೋಡಿದರಲ್ಲಿ ಮರಳು, ಮರಳು, ಬರೀ ಮರಳು! ದಾರಿಯುದ್ದಕ್ಕೂ ಇದೇನಪ್ಪ ಎಲ್ಲಿ ನೋಡಿದರಲ್ಲಿ ಮರಳುಗಾಡು. ಇಂಥ ಜಾಗದಲ್ಲಿ ಜನಜೀವನ ಹೇಗಿದೆ? ಇಲ್ಲಿ ನಾನೊಬ್ಬನೇ ಇರಬೇಕೆ? ಎಂಬ ಆತಂಕದಲ್ಲಿಯೇ ಬಂದೆ.
ಘಾಟ್ ಬಂದು ಸೇರುತ್ತಿದ್ದಂತೆ ಆ ಊರನ್ನು ನೋಡಿ ಒಮ್ಮಿಂದೊಮ್ಮೆಲೆ ಖಿನ್ನತೆ ಆವರಿಸಿತು. ಆದರೆ ಈಗಾಗಲೇ ಅಲ್ಲಿ ಐದಾರು ವರ್ಷಗಳಿಂದ, ಹದಿನಾರು ವರ್ಷಗಳಿಂದ ವಾಸಿಸುತ್ತಿದ್ದ ಇಂಡಿಯನ್ ಮುಖಗಳನ್ನು ನೋಡಿ ಮನಸ್ಸಿಗೆ ಎಷ್ಟೋ ಸಮಾಧಾನವಾಗಿತ್ತು. ಈ ಊರು ಸೆಭಾದಂತೆ ಇರಲಿಲ್ಲ. ಇದೊಂದು ಸಣ್ಣ ಹಳ್ಳಿ. ಬಂದ ಹೊಸತರಲ್ಲೇನೋ ಹಳ್ಳಿಯೆನ್ನದೆ ಉತ್ಸಾಹದಿಂದ ಕಾಲ ಕಳೆದೆ. ಆದರೆ ಬರುಬರುತ್ತಾ ಏಕೋ ಈ ಜಾಗದ ಬಗ್ಗೆ ಬೇಸರ ಮೂಡತೊಡಗಿತು. ನನ್ನ ಕೆಲಸ ಮತ್ತು ಅದು ತರುವ ಸಂಬಳ ತೃಪ್ತಿ ಕೊಟ್ಟರೂ ಏಕೋ ಈ ಜಾಗ ನನಗೆ ಒಗ್ಗಿ ಬರಲಿಲ್ಲ. ನಾನು ಹಳ್ಳಿಯಿಂದ ಬಂದಿದ್ದರೂ ಈಗಾಗಲೇ ಎಂಟು ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದರಿಂದ ಹಳ್ಳಿಗೆ ಹೊಂದಿಕೊಳ್ಳುವ ಸ್ವಭಾವ ಹೊರಟುಹೋಗಿತ್ತು. ಬೆಂಗಳೂರಿನಂಥ ದೈತ್ಯ ನಗರದ ಮುಂದೆ ಈ ಜಾಗದ ಕೊರತೆಗಳು ಎದ್ದು ಕಾಣಿಸತೊಡಗಿದವು. ಎತ್ತಣ ಬೆಂಗಳೂರು? ಎತ್ತಣ ಘಾಟ್? ಬೆಂಗಳೂರಿನ ನನ್ನಮಿತ್ರರು ನಾನುಇಲ್ಲಿಗೆ ಬರುವ ಮುನ್ನ ಹೇಳಿದ ಒಂದೊಂದು ಮಾತುಗಳು ಸರಿ ಎನಿಸತೊಡಗಿದವು. ಯಾಕಾದ್ರು ಬಂದೆನೋ? ಇಲ್ಲಿ ಒಂದು ಸರಿಯಾದ ಸಿನೆಮಾ ಥೇಟರ್ ಇಲ್ಲ. ಸಾಯಂಕಾಲ ಸುತ್ತಾಡಿ ಕೊಂಡು ಬರಲು ಒಂದು ಪಾಶ್ ಏರಿಯಾ ಇಲ್ಲ. ಒಂದು ಪಾರ್ಕ್ ಇಲ್ಲ. ನಮಗೆ ಇಷ್ಟವಾಗುವ ತಿಂಡಿ ತಿನಿಸುಗಳಿಲ್ಲ. ಶಾಪಿಂಗ್ ಮಾಲ್ಗ ಳಿಲ್ಲ, ಕ್ಲಬ್ಬುಗಳಿಲ್ಲ, ಹೋಗಲಿ ಇದ್ದ ಕೆಲವೇ ಕೆಲವು ಅಂಗಡಿ ಮುಗ್ಗಟ್ಟುಗಳಿಗೆ ಶಾಪಿಂಗ್ ಮಾಡಲು ಹೋದರೆ ಅರೇಬಿಕ್ ಬಾರದ ನಾವು ಅವರನ್ನು ಅರ್ಥಮಾಡಿಸಲು ಹೆಣಗಾಡಬೇಕಾಗುತ್ತಿತ್ತು. ಜೊತೆಗೆ ಮೈ ಕೊರೆಯುವ ಚಳಿ ಬೇರೆ. ಅಬ್ಬಾ, ಒಂದೇ ಎರಡೇ ಎಲ್ಲವೂ ಬೇಸರ ತರಿಸುತ್ತಿತ್ತು. ಹೋಗಲಿ ನಿಸರ್ಗದಲ್ಲಿ ಒಂದಿಷ್ಟು ಹಸಿರನ್ನಾದರು ನೋಡಿ ಆನಂದ ಪಡೆಯೋಣವೆಂದರೆ ಅದೂ ಇಲ್ಲ. ಎತ್ತ ನೋಡಿದರತ್ತ ಬರಿ ನಿಸ್ತೇಜ ಮರಳು ಗುಡ್ದಗಳೇ! ಕ್ರಮೇಣ ಇಲ್ಲಿಯ ವಾತಾವರಣ ನನ್ನನ್ನು ಒಂದು ರೀತಿಯ ಡಿಪ್ರೆಶನ್ಗೆದ ತಳ್ಳಿತು. ಯಾಕಾದರು ಬಂದೆನೋ? ಬೆಂಗಳೂರಿನಲ್ಲಿಯೇ ಇದ್ದಿದ್ದರೆ ಎಷ್ಟೋ ಚನ್ನಾಗಿತ್ತು! ಎಂದು ಅದೇಷ್ಟು ಸಲ ಪರಿತಪಿಸಿರುವೆನೋ ಆ ದೇವರೇ ಬಲ್ಲ! ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೂ ಏಕೋ ಈ ಹಳ್ಳಿ ಇಷ್ಟವಾಗಲಿಲ್ಲ. ಮೊದಲಿಗೆ ಇಲ್ಲಿಗೆ ಹೊಂದಿಕೊಳ್ಳಲು ಅದೆಷ್ಟು ಹೆಣಗಾಡಿದನೆಂದು ನನಗೆ ಮಾತ್ರ ಗೊತ್ತು.

ಒಂದು ಮುಂಜಾನೆಯ ಸೂರ್ಯ
ಎಲ್ಲ ಬೇಸರಗಳಿಗೂ, ತಿರಸ್ಕಾರಗಳಿಗೆ ಒಂದು ಅಂತ್ಯವಿದ್ದಂತೆ ನನ್ನ ಬೇಸರಕ್ಕೂ, ತಿರಸ್ಕಾರಗಳಿಗೂ ಒಂದು ಅಂತ್ಯವಿತ್ತು. ದಿನ ಕಳೆದಂತೆ ಈ ಎಲ್ಲ ಕೊರತೆಗಳೊಂದಿಗೆ ಬದುಕುವದು ಅಭ್ಯಾಸವಾಯಿತು. ಇಂಥ ಕಡೆ ಬಂದಾಗ ವಾತಾವರಣ, ವ್ಯವಸ್ಥೆ ನಮಗೋಸ್ಕರ ಬದಲಾಗುವದಿಲ್ಲ ನಾವೇ ಅದಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವ ಸತ್ಯದ ಅರಿವಾಯಿತು. ಹಾಗಾಗಿ ಮೊದಲು ನನ್ನನ್ನು ನಾನು ಬದಲಾಯಿಸಿಕೊಂಡೆ. ಬದಲಾಯಿಸಿಕೊಂಡ ಮೇಲೆ ಸ್ವಲ್ಪಕಾಲದಲ್ಲೇ ವಾಸ್ತವದ ಅನೇಕ ಇರುವಿಕೆಗಳು ಗಮನಕ್ಕೆ ಬರತೊಡಗಿದವು. ಮೊದಲು ಎಲ್ಲವನ್ನೂ ಬೆಂಗಳೂರಿಗೆ ಹೋಲಿಸಿ ನೋಡುವದನ್ನು ನಿಲ್ಲಿಸಿದೆ. ಈ ಜಾಗವನ್ನು ಅದಿರುವಂತೆ ಸ್ವೀಕರಿಸತೊಡಗಿದೆ. ಈ ಸ್ಥಳದಲ್ಲಿ ನಾನು ಒಂದು ಭಾಗವಾಗಿ ಮಾರ್ಪಾಡಾದೆ. ಇಲ್ಲಿಯ ಪ್ರತಿ ಹಳ್ಳಿಗೂ ಒಂದು ಬ್ಯಾಂಕ್, ಒಂದು ಹಾಸ್ಪಿಟೆಲ್, ಒಂದು ಪೋಸ್ಟ್ ಆಪೀಸ್ ಇದ್ದಿದ್ದು ನೋಡಿ ಖುಶಿಯಾಯಿತು. ಹಾಗೆ ನೋಡಿದರೆ ಭಾರತದಲ್ಲಿನ ಎಷ್ಟೋ ಹಳ್ಳಿಗಳಿಗೆ ಈ ಸೌಲಭ್ಯಗಳಿನ್ನೂ ಸಿಕ್ಕೇ ಇಲ್ಲ. ಮೇಲಾಗಿ ಇಲ್ಲಿ ಬದುಕು ದುಬಾರಿಯಿರಲಿಲ್ಲ. ಹೀಗಾಗಿ ನಾವು ಗಳಿಸಿದ್ದರಲ್ಲಿ ಬಹಳಷ್ಟನ್ನು ಉಳಿಸಬಹುದಿತ್ತು.

ಸಹರಾ ಮರಭೂಮಿ
ಕ್ರಮೇಣ ನನ್ನೊಟ್ಟಿಗೆ ಕೆಲಸ ಮಾಡುವ ಇಜಿಪ್ಸಿಯನ್, ಇರಾಕಿ, ಸುಡಾನಿ ಹಾಗೂ ಜೋರ್ಡಾನಿ ಸಹೋದ್ಯೋಗಿಗಳೊಂದಿಗೆ ಬೆರೆಯುವದನ್ನು ಕಲಿತೆ. ಅವರ ಮಾತುಕತೆ, ಅವರ ಒಡನಾಟ, ಅವರ ಸ್ನೇಹ ಹಿತವೆನಿಸತೊಡಗಿತು. ಅವರೆಲ್ಲ ನನ್ನನ್ನು ನನ್ನ ಕವಚದೊಳಗಿಂದ ಹೊರಗೆಳೆದು ಒಂದಿಷ್ಟು ಸಾಂತ್ವನ ನೀಡಿದರು. ನಿಧಾನವಾಗಿ ಅವರೊಟ್ಟಿಗೆ ಹೊರಗೆ ಹೋಗುವದು, ಸುತ್ತಾಡುವದನ್ನು ರೂಡಿ ಮಾಡಿಕೊಂಡಂತೆ ನನ್ನ ಒಂಟಿತನ ದೂರವಾಗತೊಡಗಿತು. ಇಲ್ಲಿಯ ವಿದ್ಯಾರ್ಥಿಗಳೆಲ್ಲ ದಡ್ದರೆಂದು ಪೂರ್ವಗ್ರಹಪೀಡಿತನಾಗಿ ಬಂದ ನನಗೆ ಇಲ್ಲೊಂದಿಷ್ಟು ಅತಿ ಜಾಣ ವಿದ್ಯಾರ್ಥಿಗಳು ಕಾಣಿಸಿದ್ದರು. ಅವರಿಗೆಲ್ಲ ಅವರ ಓದಿನ ವಿಷಯದಲ್ಲಿ ನನ್ನ ಸಲಹೆ, ಸಹಕಾರಗಳನ್ನು ಕೊಡುತ್ತಾ ಸಂತೋಷಪಡುವದನ್ನು ಕಲಿತೆ. ಇಲ್ಲಿ ಬೆಂಗಳೂರಿನ ವೇಗದ ಬದುಕಾಗಲಿ, ಕೆಟ್ಟ ಟ್ರಾಫಿಕ್ ಆಗಲಿ ಇಲ್ಲವಾದ್ದರಿಂದ ಇಲ್ಲಿಯ ಬದುಕು ಸಹ್ಯವೆನಿಸತೊಡಗಿತು. ಇಲ್ಲಿಯ ಸ್ವಚ್ಛಗಾಳಿ ಮೈ ಮನಸ್ಸುಗಳಿಗೆ ಮುದ ನೀಡತೊಡಗಿತು. ಮೆಲ್ಲನೆ ಹೊರಗಿನ ವ್ಯವಹಾರಕ್ಕೆ ಬೇಕಾಗುವ ಒಂದಿಷ್ಟು ಅರೇಬಿಕ್ಭಾಷೆಯನ್ನು ಕಲಿತು ಸ್ಥಳೀಯರೊಂದಿಗೆ ವ್ಯವಹರಸತೊಡಗಿದೆ. ನಿಧಾನವಾಗಿ ಅಂಗಡಿಯವರೊಂದಿಗೆ, ತರಕಾರಿಯವರೊಂದಿಗೆ ಒಂದಿಷ್ಟು ಚೌಕಾಶಿ ಮಾಡುವದನ್ನು ಕಲಿತಂತೆ ಇಲ್ಲಿಯ ಬದುಕಿನ ಬಗ್ಗೆ ಪ್ರೀತಿ ಮೂಡತೊಡಗಿತು.

ಹುಣ್ಣಿಮೆಯ ಚಂದಿರ ಮಿನಾರುಗಳ ನಡುವೆ
ಮೊದ ಮೊದಲು ಮರಳುಗಾಡಿನಲ್ಲಿ ಏನೂ ಇಲ್ಲ ಎಂದು ಶಪಿಸುತ್ತಿದ್ದೆ. ನಿಧಾನವಾಗಿ ಅಲ್ಲಿ ಏನೇನೆಲ್ಲಾ ಇವೆ ಎನ್ನುವ ಸಂಗತಿಗಳು ಗೋಚರಿಸತೊಡಗಿದವು. ಇಲ್ಲಿ ಬೇಸಿಗೆಯಲ್ಲಿ ಕತ್ತಲಾಗುವದೇ ರಾತ್ರಿ ಒಂಬತ್ತರ ಮೇಲೆ. ಇದು ಮೊದ ಮೊದಲು ನನಗೆ ವಿಚಿತ್ರವಾಗಿ ಕಂಡಿತ್ತು. ಆದರೆ ಅದೇ ಕತ್ತಲ ರಾತ್ರಿಯನ್ನು ಕಾಯುತ್ತಾ ಕುಳಿತು ಕೊಳ್ಳತೊಡಗಿದೆ. ಏಕೆಂದರೆ ನಿಧಾನವಾಗಿ ಕತ್ತಲಾಗುತ್ತಿದ್ದಂತೆ ಆಗಸದಲ್ಲಿ ಸೂರ್ಯ ಒಂದು ಬಿಳಿಚೆಂಡಿನತೆ ಹಾಲೋಜಿನ್ಬಲ್ಬ್ ಎಸೆದಂತೆ ಗೋಚರಿಸುತ್ತಿದ್ದರಿಂದ ಅಲ್ಲಿ ಉಂಟಾಗುವ ಅಪೂರ್ವ ದೃಶ್ಯ ಕಣ್ಮನಗಳಿಗೆ ತಂಪನ್ನೀಯುತ್ತಿತ್ತು. ಬೆಂಗಳೂರಿನಲ್ಲಿ ಕಾಣಸಿಗದ ಬಣ್ಣಬಣ್ಣದ ನಕ್ಷತ್ರಗಳು ಇಲ್ಲಿ ಧಾರಾಳವಾಗಿ ಕಾಣಸಿಗುತ್ತಿದ್ದವು. ಹುಣ್ಣಿಮೆಯ ದಿನ ಚಂದ್ರ ’ಅಕಾಕುಸ್’ಪರ್ವತದ ಹಿಂದೆ ಕಣ್ಣುಮುಚ್ಚಾಲೆಯಾಡುವದು ಮನಸ್ಸಿನಲ್ಲಿ ಸುನಿತ ಬಾವನೆಗಳನ್ನು ಕೆರಳಿಸತೊಡಗಿತು. ಯಾವ ಮರಭೂಮಿಯನ್ನು ಬೇಸರದಿಂದ ನೋಡುತ್ತಿದ್ದೆನೋ ಅದೇ ಮರಭೂಮಿ ತನ್ನ ವಿವಿಧ ಚಿತ್ತಾರದ ಆಕೃತಿಗಳೊಂದಿಗೆ ನನ್ನಲ್ಲಿ ಬೆರಗನ್ನು ಮೂಡಿಸತೊಡಗಿತು. ಅಂಥ ಮರಳುಗಾಡಿನ ಮಧ್ಯ ಅಲ್ಲಲ್ಲಿ ಹುಟ್ಟಿಕೊಂಡ ಹಸಿರುಗಿಡಗಳು ನಿಸರ್ಗದ ಸಮತೋಲನವನ್ನು ಸಾರಿ ಹೇಳಿದ್ದವು. ಜೊತೆಗೆ ಆ ಮರಳು ಗುಡ್ಡಗಳ ಹಿಂದೆ ಸಂಜೆ ಸೂರ್ಯ ತನ್ನ ಕೆಂಬಣ್ಣ ಚೆಲ್ಲುತ್ತಾ ಅಸ್ತಮಿಸುತ್ತಿರುವ ಅಪೂರ್ವ ದೃಶ್ಯಾವಳಿ ಭಿನ್ನ ಅನುಭವವನ್ನು ಕೊಡುತ್ತಿತ್ತು.
ಬೆಂಗಳೂರಿನಲ್ಲಿ ಸಿಗದ ಸಮಯ ಇಲ್ಲಿಎಲ್ಲದಕ್ಕೂ ಧಾರಾಳವಾಗಿ ಸಿಗುತ್ತಿತ್ತು. ಈ ಸಮಯವನ್ನು ಬಳಸಿಕೊಂಡು ಅವಾಗವಾಗ ಬರೆಯುತ್ತಿದ್ದ ನಾನು ನನ್ನ ಬರವಣಿಗೆಯನ್ನು ಯಾಕೆ ಮುಂದುವರಿಸಬಾರದು ಎಂದುಕೊಂಡು ಬ್ಲಾಗ್ತೆರೆದೆ. ಆ ಮೂಲಕ ಒಂದಷ್ಟು ಹೊಸ ಸ್ನೇಹಿತರನ್ನು ಸಂಪಾದಿಸಿಕೊಂಡೆ. ಬೆಂಗಳೂರಿನಲ್ಲಿರುವಾಗ ಈ ಹಾಳಾದ್ದು ಬೆಂಗಳೂರು ಬಿಟ್ಟು ಯಾವುದಾದರೊಂದು ಹಳ್ಳಿಗೆ ಹೋಗಿ ಅರಾಮಾಗಿ ಇದ್ದು ಬಿಡಬೇಕೆಂದು ಎಷ್ಟೋ ಸಾರಿ ಅಂದುಕೊಳ್ಳುತ್ತಿದ್ದೆ. ಈಗ ಇದು ಒಂದು ಹಳ್ಳಿಯಲ್ಲವೆ? ಇಲ್ಲಿ ಉಳಿಯುವ ಅದೃಷ್ಟ ತಾನೇತಾನಾಗಿ ಒಲಿದು ಬಂದಿರುವದರಿಂದ ನಾನ್ಯಾಕೆ ಇಷ್ಟೊಂದು ಬೇಜಾರುಪಟ್ಟುಕೊಳ್ಳಬೇಕು? ಇಲ್ಲಿ ನೆಮ್ಮದಿಯಿಂದ್ಯಾಕೆ ಕಾಲ ಕಳೆಯಬಾರದು? ಎಂದೆಲ್ಲಾ ಅನಿಸತೊಡಗಿದಂತೆ ಇಲ್ಲಿಯ ಬದುಕಿನ ಬಗ್ಗೆ ಒಲವು ಬೆಳೆಸಿಕೊಂಡೆ. ಒಂದಿಷ್ಟು ಗೆಲುವಾದೆ. ಇಲಿಯ ಜನ ಅವರ ಮಾತು-ಕತೆ, ರೀತಿ-ನೀತಿಗಳಲ್ಲಿ ಒಂದಾದಂತೆ ಇಲ್ಲಿಯ ಬದುಕು ಇಷ್ಟವಾಗತೊಡಗಿತು. ನಿಧಾನಕ್ಕೆ ನಾನಿಲ್ಲಿ ಬೇರಿಳಿಸಿ ಅರಳುವ ಪರಿ ಕಲಿತುಕೊಂಡೆ. ಹಾಗೆಂದೇ ನಾನಿಲ್ಲಿ ಆರು ವರ್ಷಗಳಿಂದ ಬದುಕುತ್ತಿದ್ದೇನೆ.
ಮನುಷ್ಯ ಎಲ್ಲಿ ಬೇಕಾದರು ಬದುಕಬಲ್ಲ. ಆದರೆ ಅವನಿಗೆ ಬದುಕುವ ಕಲೆ ತಿಳಿದಿರಬೇಕಷ್ಟೆ. ಎತ್ತೆಂದರತ್ತ ಎಸೆದಲ್ಲಿ ನಿಧಾನವಾಗಿ ಬೇರಿಳಿಸಿ ಅರಳುವ ಪರಿಗೊತ್ತಿರಬೇಕಷ್ಟೆ. ಹಾಗಾದಾಗ ಮಾತ್ರ ಅವನು ಇಷ್ಟಪಡದೇ ಇರುವ ಜಾಗ ಯಾವುದಿರುತ್ತದೆ ಹೇಳಿ?





ನಾವು ಹುಟ್ಟಿ ಬೆಳೆದ ದೇಶ ಪ್ರದೇಶಗಳನ್ನು ಬಿಟ್ಟು ದೂರ ದೇಶಕ್ಕೆ ಹೋದಾಗ ಮನಸ್ಸಿನಲ್ಲಿ ಮೂಡುವ ವಿವಿಧ ಭಾವಗಳನ್ನು ತುಂಬಾ ಆಪ್ತವಾಗಿ ಅಕ್ಷರಕ್ಕಿಳಿಸಿದ್ದೀರಿ; ಇಷ್ಟವಾಯಿತು. ಬೇರೆ ಬೇರೆ ದೇಶಗಳ ಜನಜೀವನ-ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳುವುದು ಒಂಥರಾ ಆಸಕ್ತಿದಾಯಕವಾಗಿರುವುದರಿಂದ ನಿಮ್ಮ ಅಂಕಣವನ್ನು ಓದುತ್ತಿದ್ದೇನೆ, ಹೀಗೇ ಬರೆಯುತ್ತಿರಿ.
ಅಮೇರಿಕಾ (ಯು.ಎಸ್.ಎ), ಕೆನಡಾ, ಜಪಾನ್, ಯರೋಪ್ ರಾಷ್ಟ್ರಗಳು, ಗಲ್ಫ್ ರಾಷ್ಟ್ರಗಳ ಕುರಿತು ನಮ್ಮಲ್ಲಿ (ಕನ್ನಡದಲ್ಲಿ) ಸಾಕಷ್ಟು ಸಾಹಿತ್ಯ ಅಲ್ಲಿಗೆ ಪ್ರವಾಸ ಹೋದ ಅಥವಾ ಅಲ್ಲಿ ಕೆಲಸದ ನಿಮಿತ್ತ ಹೋದ ಕನ್ನಡಿಗರಿಂದ ಬಂದಿದೆ. ಆದರೆ ಆಫ್ರಿಕಾ ಖಂಡದ ವಿವಿಧ ದೇಶಗಳು, ದಕ್ಷಿಣ ಅಮೇರಿಕಾದ ವಿವಿಧ ದೇಶಗಳು, ರಷ್ಯಾ, ಹಿಂದಿನ ಸೋವಿಯತ್ ಒಕ್ಕೂಟದಿಂದ ಸ್ವತಂತ್ರಗೊಂಡ ದೇಶಗಳು, ಚೀನಾ ಮೊದಲಾದ ದೇಶಗಳ ಕುರಿತ ಸಾಹಿತ್ಯ ನಮ್ಮಲ್ಲಿ ಕಡಿಮೆ ಅಥವಾ ಇಲ್ಲ. ಹೀಗಾಗಿ ವಿಶ್ವಾದ್ಯಂತ ಹರಡಿರುವ ಕನ್ನಡಿಗರು ತಾವು ನೆಲೆಸಿರುವ ದೇಶಗಳ ಕುರಿತು ತಮ್ಮ ಗ್ರಹಿಕೆಗೆ ಸಿಕ್ಕಿದ್ದನ್ನು ಬರೆದು ಕನ್ನಡದ ಜ್ಞಾನಸಂಪತ್ತಿಗೆ ತಮ್ಮ ಕೊಡುಗೆ ನೀಡಬಹುದಾಗಿದೆ. ಲಿಬಿಯಾದ ಕುರಿತು ನೀವು ಬರೆಯಲು ತೊಡಗಿರುವುದು ಒಳ್ಳೆಯ ಬೆಳವಣಿಗೆ. ಇದು ಬೇರೆ ಬೇರೆ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ, ನೆಲೆಸಿರುವ ಹೊರನಾಡ ಕನ್ನಡಿಗರಿಗೂ ಬರೆಯಲು ಸ್ಫೂರ್ತಿ ನೀಡಬಹುದು ಎಂದು ಕಾಣುತ್ತದೆ.
Nice sir..
ಹೊಸ ಅನುಭವಕ್ಕೆ ನಿಮ್ಮನ್ನು ನೀವು ತೆರೆದುಕೊಂಡದ್ದರಿಂದ ನೀವು ಬಚಾವಾದಿರಿ. ಮಿಲ್ಟನ್ ಎಂಬ ಕವಿ ಹೇಳುತ್ತಾನೆ:” Mind is in its own place. It can make Heaven of Hell, Hell of Heaven.” ನೀವು ಬದಲಾಗಿ ಹೊಸದನ್ನು ನಮಗೆ ನೀಡುತ್ತಿದ್ದೀರಿ. Thanks.