ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಿನ್ನೆ ಅವ್ವ ಸತ್ತಿದ್ದಾಳೆ….' – ಉದಯ್ ಇಟಗಿ

’ಅವಧಿ’ ಬಳಗದವರಲ್ಲೊಬ್ಬರಾದ ಉದಯ್ ಇಟಗಿ ಅವರ ತಾಯಿ ಇನ್ನಿಲ್ಲ.

ಕಡೆಯ ಸಲ ಅವರನ್ನು ನೋಡಲಾಗಲಿಲ್ಲ ಎನ್ನುವ ನೋವಿನಲ್ಲಿ ಉದಯ್ ಬರೆದ ಸಾಲುಗಳು ಇವು.

ಈ ನೋವಿನಲ್ಲಿ ನಾವು ಉದಯ್ ಅವರ ಜೊತೆಗಿದ್ದೇವೆ, ಅಮ್ಮನಿಗೆ ನಮ್ಮದೂ ಕಂಬನಿ.

***

ನಿನ್ನೆ ಅವ್ವ ಸತ್ತಿದ್ದಾಳೆ. ನನಗೆ ಲಿಬಿಯಾದಿಂದ ಅವಳ ಅಂತ್ಯ ಸಂಸ್ಕಾರಕ್ಕೆ ಹೋಗಲಾಗಲಿಲ್ಲ. ಇದು ತಕ್ಷಣಕ್ಕೆ ಹೋಗಲಾಗದ ನನ್ನಂಥ ಎನ್ ಆರ್ ಐಗಳ ಸಮಸ್ಯೆ. ಏನೋ ಒಂದು ತೆರದ ಅಪರಾಧಿ ಪ್ರಜ್ಞೆ, ಸಂಕಟ, ತಳಮಳಗಳು ಇದೀಗ ನನ್ನನ್ನು ತೀವ್ರವಾಗಿ ಕಾಡುತ್ತಿವೆ. ಸಾಯುವ ಮುನ್ನ ಅವ್ವ ನನ್ನನ್ನು ತುಂಬಾ ನೆನಪಿಸಿಕೊಂಡಳಂತೆ. ತುಂಬಾ ಸಂಕಟವಾಯಿತು ಇದನ್ನು ಕೇಳಿ. ಮೊನ್ನೆಯಷ್ಟೇ ಅಂದರೆ ಮಾರ್ಚ್ ತಿಂಗಳಲ್ಲಿ ಅವ್ವನನ್ನು ನೋಡಿಕೊಂಡು ಬಂದಿದ್ದೆ. ಅನೇಕ ಖಾಯಿಲೆಗಳಿಂದ ಬಳಲುತ್ತಿದ್ದ ಅಮ್ಮ ಆಗಷ್ಟೇ ಆಸ್ಪತ್ರೆಯಿಂದ discharge ಆಗಿ ಮನೆಗೆ ಬಂದಿದ್ದಳು. ಆದರೂ ಲವಲವಿಕೆಯಿಂದ ಇದ್ದಳು. ಆ ಸಮಯದಲ್ಲಿ ನನ್ನನ್ನು ನೋಡಲು ಬಂದ ಅನೇಕರೆದುರು ಅವ್ವ ನನ್ನ ಬದುಕಿನ ಸಾಹಸಗಾಥೆಯನ್ನು ಹೆಮ್ಮೆಯಿಂದ ವಿವರಿಸಿ ಹೇಳಿದ್ದಳು. “ಈಗ ಬೆಂಗಳೂರಿನಲ್ಲಿ ಮನೆ ಕಟ್ತುತ್ತಿರುವೆಯೆಲ್ಲಾ? ಅದು ಮುಗಿದ ಮೇಲೆ ಸಾಕಿನ್ನು, ಲಿಬಿಯಾದಿಂದ ವಾಪಾಸು ಬಂದುಬಿಡು” ಎಂದು ಹೇಳಿದ್ದಳು. ನಾನು “ಆಯ್ತು ಅವ್ವ. ಇನ್ನೊಂದು ವರ್ಷ ಇದ್ದು ಬಿಟ್ಟು ಬಂದುಬಿಡುತ್ತೇನೆ. ಅಲ್ಲಿಗೆ ನನ್ನ ಕಮಿಟ್ಮೆಂಟ್ ಗಳು ಹೆಚ್ಚುಕಮ್ಮಿ ಮುಗಿದುಹೋಗುತ್ತವೆ. ಖುಷಿಯಿಂದ ಇರಬಹುದು.” ಎಂದು ಹೇಳಿ ಬಂದಿದ್ದೆ.
ನಾನು ಅಲ್ಲಿಂದ ಬಂದ ಮೇಲೆ ಅಂದರೆ ಏಪ್ರೀಲ್ ಕೊನೆವಾರದಲ್ಲಿ ಮತ್ತೆ ಅವ್ವನಿಗೆ ತ್ರಾಸಾಗಿದೆ. ಮತ್ತೆ ಆಸ್ಪತ್ರೆಗೆ ಸೇರಿಸಿದ್ದಾರೆ. ಮತ್ತೆ ಚೇತರಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆಗ ಡಾಕ್ಟರು ಅಣ್ಣನಿಗೆ ಸೂಚ್ಯವಾಗಿ ಹೇಳಿದ್ದರಂತೆ “ಅವರ ಬಾಡಿ ಔಷಧಿಗಳಿಗೆ ಸರಿಯಾಗಿ ರೆಸ್ಪಾಂಡ್ ಮಾಡುತ್ತಿಲ್ಲ. ಇನ್ನು ಹೆಚ್ಚು ದಿನ ಬದುಕುವದಿಲ್ಲ. ಆದರೆ ಈಗ ಪರ್ವಾಗಿಲ್ಲ. ಕರೆದುಕೊಂಡುಹೋಗಿ ಎಂದು.” ಮನೆಗೆ ಕರೆದುಕೊಂಡು ಬಂದ ಮೇಲೆ ಹತ್ತು ದಿನ ಅವ್ವ ಚನ್ನಾಗಿಯೇ ಇದ್ದಳು. ನಾನು ದಿನಾಲು ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದೆ. ಆಮೇಲೆ ನೆಲ ಕಟ್ಟಿಯೇ ಬಿಟ್ಟಳು. ಹಾಗೆ ನೆಲಕಟ್ಟಿದವಳು ಮೇಲೇಳಲೇ ಇಲ್ಲ. ಅವಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಒಬ್ಬನೇ ಕುಳಿತು ಅತ್ತುಬಿಟ್ಟೆ. ಪ್ರತಿ ಅರ್ಧ ಘಂಟೆಗೊಮ್ಮೆ ಫೋನ್ ಮಾಡಿ ಅವಳ ಅಂತ್ಯ ಸಂಸ್ಕಾರದ ಡೀಟೆಲ್ಸ್ ಪಡೆದುಕೊಳ್ಳುತ್ತಾ ನಾನು ಅದರಲ್ಲಿ ಭಾಗಿಯಾಗಿರುವೆನೇನೋ ಎಂಬಂತೆ ನನ್ನಷ್ಟಕ್ಕೆ ನಾನೇ ಸಮಾಧನಪಟ್ಟುಕೊಂಡೆ.
ಇದು ನಮ್ಮಂಥ ಎನ್.ಆರ್.ಐ ಗಳ ಕಥೆ. ನಾವು ಒಂದು ಕಡೆ ಮಹಡಿ ಮೇಲೆ ಮಹಡಿ ಕಟ್ಟಿ ಜಗತ್ತಿನೆದುರು ನಮ್ಮ ಸಾಹಸಗಾಥೆಯನ್ನು ಪ್ರದರ್ಶಿಸುತ್ತಾ ಹೆಮ್ಮೆಯಿಂದ ಬೀಗುತ್ತೇವೆ. ಇನ್ನೊಂದೆಡೆ ಯಾರೊಂದಿಗೂ ಹಂಚಿಕೊಳ್ಳಲಾಗದೆ ಇಂಥ ಪಾಪಪ್ರಜ್ಞೆಗಳ ಸುಳಿಗೆ ಸಿಕ್ಕು ಒಳಗೊಳಗೆ ತಳಮಳಿಸಿ ನರಳುತ್ತೇವೆ. ಇದು ನಮ್ಮ ಬದುಕಿನ ದುರಂತವೋ? ವ್ಯಂಗ್ಯವೋ? ಏನೆಂದು ಕರೆಯಬೇಕೆಂದು ಗೊತ್ತಾಗುತ್ತಿಲ್ಲ.
ಅವ್ವ, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ಕೊನೆಯ ಬಾರಿ ನಾನು ನಿನ್ನ ಬಳಿ ಇರಲಾಗಲಿಲ್ಲ. ನಿನ್ನ ಮುಖ ನೋಡಲಾಗಲಿಲ್ಲ. ಅದಕ್ಕಾಗಿ ನನ್ನನ್ನು ಕ್ಷಮಿಸು. ನೀನು ಖಂಡಿತ ಕ್ಷಮಿಸುತ್ತಿಯೆಂದು ನನಗೆ ಗೊತ್ತು. ಎಷ್ಟೇ ಆಗಲಿ ನೀನು ತಾಯಿಯಲ್ಲವೇ? ಮಕ್ಕಳ ಶ್ರೇಯಸ್ಸನ್ನೇ ಬಯಸುವವಳು!
– ಉದಯ್ ಇಟಗಿ

‍ಲೇಖಕರು G

29 May, 2014

5 Comments

  1. vijaykanth patil

    avva nithyavuu saayutthirutthale;
    adaruu jeevanthavaagirutthaale..!
    nove avvana matthondu hesaraadaruu
    hoovanthe poreyutthaale ella….
    poreva,hariva,horuva kasuve
    avalaasthi;
    avala asthithvavuu ade..!
    avva chirakaalada swatthu;
    ondondu thutthalluu hommuva
    kaarunyada matthu…!

  2. mmshaik

    udya avare..namma kambani jotegide..

  3. nagraj.harapanahalli

    ನಿಮ್ಮ ಅವ್ವ ನಮ್ಮ ಅವ್ವನೂ ಹೌದು. ಅವ್ವಂದಿರು ಎಂದೂ ಸಾಯುವುದಿಲ್ಲ. ಅವರು ಭೂಮಿತಾಯಿಯ ಹಾಗೆ. ನಿಮ್ಮ ತಾಯಿ ನಿಮ್ಮಲ್ಲಿ ಇನ್ನು ಹೆಚ್ಚು ಜೀವಂತವಾಗಿ, ನಿಮ್ಮೊಂದಿಗೆ ಏಕಾಂತದಲ್ಲಿ ಮಾತಾಡುತ್ತಲೇ ಇರುತ್ತಾರೆ….

  4. amardeep.p.s

    avvana aatmakke shaanti sigali…..

  5. Anonymous

    ಏನೇ ಆಗಲಿ ತಾಯಿಯಲ್ಲವೆ, ಮಕ್ಕಳ ಶ್ರೇಯಸ್ಸನ್ನೆ ಬಯಸುವವಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading