ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಹೊತ್ತು, ಈ ಹೊತ್ತಿಗೆ ‘ಸೌಹಾರ್ದ ಕರ್ನಾಟಕ’

ಚಂದ್ರಕಾಂತ ವಡ್ಡು

ಅಂಕುರ ಪ್ರಕಾಶನದ ಹೊಸ ಪುಸ್ತಕ ‘ಸೌಹಾರ್ದ ಕರ್ನಾಟಕ’ ಸಂಕಲನದ ಮುನ್ನುಡಿ

ಪ್ರಚಲಿತ ಕೋಮು ತಿಕ್ಕಾಟದ ವಿದ್ಯಮಾನಗಳು ಈ ನೆಲದಲ್ಲಿ ಸಮುದಾಯಗಳ ನಡುವೆ ನೆಲೆಯೂರಿದ್ದ ಸಾಮರಸ್ಯದ ಬದುಕನ್ನು ಅಣಕಿಸುವಂತಿವೆ. ಇಂತಹ ಸಂದರ್ಭ, ಸಂಘರ್ಷಗಳ ಬಿಸಿಯಲ್ಲಿ ವೃತ್ತಿ ರಾಜಕಾರಣಿಗಳು ಮೈಕಾಯಿಸಿಕೊಳ್ಳುವುದನ್ನು ಅರ್ಥ ಮಾಡಿಕೊಳ್ಳಬಹುದು. ಎಲ್ಲಾ ಧರ್ಮಗಳಲ್ಲಿರುವ ಸಣ್ಣ ಸಂಖ್ಯೆಯ ಮತಾಂಧರ ಕುಬ್ಜತನ, ಅಂತಹ ಮನೋಧರ್ಮ ಪ್ರತಿನಿಧಿಸುವ ಸಂಘಟನೆಗಳ ಆರ್ಭಟ, ಕಿಡಿಗೇಡಿಗಳ ಆಟಾಟೋಪ ಹೊಸದೇನಲ್ಲ.

ಆದರೆ ಈವರೆಗೆ ಇವಾವುದರ ಗೊಡವೆಗೆ ಹೋಗದೇ ತಮ್ಮ ದೈನಂದಿನ ಕಾಯಕಗಳಲ್ಲಿ ಮುಳುಗಿರುತ್ತಿದ್ದ ನಾಡಿನ ಎರಡೂ ಸಮುದಾಯಗಳ ಬಹುಸಂಖ್ಯೆಯ ಸಾಮಾನ್ಯ ಜನರು ಕೂಡ ಇತ್ತೀಚೆಗೆ ಕೋಮುವಾದಿಗಳ ಹುಸಿ ತರ್ಕಸರಣಿಗೆ ಮನಸೋಲುತ್ತಿರುವುದು ಮಾತ್ರ ಗಂಡಾಂತರದ ಮುನ್ಸೂಚನೆ.

ಹೊಣೆಗೇಡಿ ವಾಹಿನಿಗಳು, ಸಾಮಾಜಿಕ ಮಧ್ಯಮದ ಪ್ರಭೂತಿಗಳು, ಫಾರ್ವರ್ಡ್ ಪ್ರವೀಣರು ತಮಗೆ ಅರಿವಿದ್ದೋ ಅರಿವಿಲ್ಲದೆಯೋ ಇಂತಹ ಅನಾಹುತಕಾರಿ ಬೆಳವಣಿಗೆಗಳ ಪ್ರಚಾರಕ್ಕೆ ವಾಹಕರಾಗಿದ್ದಾರೆ. ಅವರ ಓಟಕ್ಕೆ, ನೋಟಕ್ಕೆ ಸಮೂಹಸನ್ನಿ ಸ್ವರೂಪ. ಈ ನಡುವೆ ನಾಡಿನ ಜವಾಬ್ದಾರಿಯುತ ಮನಸ್ಸುಗಳು ವ್ಯಕ್ತಿಗತವಾಗಿ, ಸಾಮೂಹಿಕವಾಗಿ ತಮ್ಮದೇ ಆದ ನೀತಿ ರೀತಿ, ಮಿತಿಯಲ್ಲಿ ಸಾಮರಸ್ಯದ ಮರುಪೂರಣ ಕಾರ್ಯದಲ್ಲಿ ನಿರತರಾಗಿರುವುದು ಭರವಸೆ ಹುಟ್ಟಿಸುವಂತಿದೆ.

ಇಂತಹ ಸೌಹಾರ್ದ ಜೀವನದ ಸಹಯಾನದಲ್ಲಿ ಒಂದು ಸಣ್ಣ ಹೆಜ್ಜೆ ಇಡುವ ಈ ಹೊತ್ತಿನ ಪ್ರಾಮಾಣಿಕ ಪ್ರಯತ್ನವೇ ನಿಮ್ಮ ಕೈಯಲ್ಲಿರುವ ಈ ಹೊತ್ತಿಗೆ.

ಹಾಗೆ ನೋಡಿದರೆ ಈ ನೆಲದಲ್ಲಿ ಸೌಹಾರ್ದ ಬದುಕಿನ ಹೊಸ ಮಾದರಿಗಳ ಹುಡುಕಾಟ, ಬೆದಕಾಟ, ಬಿತ್ತನೆ, ಕೆತ್ತನೆ ಬೇಕಿಲ್ಲ; ಈಗಾಗಲೇ ನಡೆನುಡಿಗಳಲ್ಲಿ ಹಾಸುಹೊಕ್ಕಾಗಿರುವ ಸಾಮರಸ್ಯ ಬದುಕಿನ ನಿದರ್ಶನಗಳನ್ನು ಹೊರೆಕಟ್ಟಿ ಮುನ್ನೆಲೆಗೆ ಹೊತ್ತು ತರಬೇಕಿತ್ತು. ಅಂಥ ದೃಢವಾದ ನಂಬಿಕೆ, ಕನಸು, ಆಶಯದ ಅಕ್ಷರರೂಪವಿದು.

ನನ್ನ ಮಸ್ತಕದಲ್ಲಿ ಈ ಪುಸ್ತಕದ ಸ್ವರೂಪ ಹರಳುಗಟ್ಟುವ ಸಮಯದಲ್ಲೇ ‘ಸೌಹಾರ್ದ ಕರ್ನಾಟಕ’ ಶೀರ್ಷಿಕೆ ಹೊಳೆದು, ಲೇಖನಗಳಿಗೆ ಆಹ್ವಾನ ಹೋಗಿ, ಸಾಮರಸ್ಯ ಬದುಕಿನ ಬರಹಗಳು ಒಂದೇ ಸಮನೆ ಹರಿದುಬರತೊಡಗಿದಾಗ ಸಂಭ್ರಮದ ಜೊತೆಗೆ ಗೊಂದಲವೂ ಹುಟ್ಟಿತು. ಇಮೇಲು ಪೆಟ್ಟಿಗೆ ತುಂಬಿ ತುಳುಕುವಷ್ಟು ಸಂಖ್ಯೆಯ ಲೇಖನಗಳಲ್ಲಿ ಯಾವುದನ್ನು ಆಯುವುದು ಯಾವುದನ್ನು ಬಿಡುವುದು ಎಂಬ ಸವಾಲು ಬೇರೆ. ಈ ಮಧ್ಯೆ ‘ಸೌಹಾರ್ದ ಕರ್ನಾಟಕ’ದ ಮಹತ್ವವನ್ನು ತಡವಾಗಿ ಅರಿತ ಅನೇಕರು, ‘ಈಗ ಲೇಖನ ಕಳಿಸಬಹುದೇ…?’ ಎಂದು ಆಸಕ್ತಿ ತೋರುತ್ತಲೇ ಇದ್ದರು. ಅಂತಹವರಿಗೆ ತಮಾಷೆಯಾಗಿ ‘ದೇವರ ಮೇಲೆ ಭಾರ ಹಾಕಿ ಕಳಿಸಿ, ನೋಡೋಣ’ ಎಂದೆ. ಯಾವ ದೇವರು ಎಷ್ಟು ಭಾರ ಹೊತ್ತುಕೊಂಡನೋ ಗೊತ್ತಿಲ್ಲ! ಕೊನೆಗೆ ಯಾವ ಅರ್ಹ ಲೇಖನಕ್ಕೂ ಅವಕಾಶ ತಪ್ಪದಿರಲಿ ಎಂಬ ಕಾರಣಕ್ಕೆ ಸಂಕಲನದ ಎರಡು ಸಂಪುಟಗಳು ಹೊರಬರುತ್ತಿವೆ.

ಸೌಹಾರ್ದ ಬದುಕಿನ ಅಸ್ತಿತ್ವವನ್ನು ನೆನಪಿಸುವ, ಗುರುತಿಸುವ, ಗಟ್ಟಿಗೊಳಿಸುವ, ಮನನ ಮಾಡಿಕೊಳ್ಳುವ, ದಿಟ್ಟದನಿಯಲ್ಲಿ ಸಾರುವ 32 ಲೇಖಕರ ಅನುಭವಗಳ ಗುಚ್ಛವಿದು.

ಇಲ್ಲಿ ನೀ ಧರ್ಮ, ನಾ ಧರ್ಮ, ನೋ ಧರ್ಮ ಯಾವುದೂ ಇಲ್ಲ; ಇರುವುದು ಮನುಜ ಮತ, ವಿಶ್ವ ಪಥ. ಒಣ ವಿಶ್ಲೇಷಣೆ, ದೂಷಣೆ, ಶ್ಲಾಘನೆ, ಅನಿಸಿಕೆ, ಮುನಿಸಿಕೆ ಒಲ್ಲದ ನೇರ ನಿರೂಪಣೆ ಇಲ್ಲಿನ ಲೇಖನಗಳ ಗುಣಲಕ್ಷಣ.

ಈ ಪುಸ್ತಕ ರೂಪಿಸುವ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ನನ್ನ ಸ್ವಾರ್ಥ ಸಾಧನೆಯ ಉದ್ದೇಶವೂ ಇದೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾವ ಸಂಕೋಚವೂ ಇಲ್ಲ; ನನ್ನೊಳಗೆ ಮಡುಗಟ್ಟಿದ್ದ ದುಗುಡ, ದುಃಖ ಮತ್ತು ಜೀವನವಿಮುಖೀ ಭಾವನೆಗಳಿಂದ ಬಿಡುಗಡೆ ಪಡೆಯುವ ಮಾರ್ಗವಾಗಿ ಈ ಕೃತಿಯನ್ನು ಬಳಸಿಕೊಂಡಿದ್ದೇನೆ. ಆ ಬಗೆಯ ಭಾವನೆಗಳನ್ನು ನಿವಾರಿಸಿಕೊಳ್ಳುವ ಸ್ವಾರ್ಥ ಓದುಗರಲ್ಲೂ ಅಂಕುರಿಸಲಿ, ಅದಕ್ಕೆ ಈ ಸದ್ಭಾವನೆಯ ಸಂಕಲನ ಕುಮ್ಮಕ್ಕು ನೀಡಲಿ!

‍ಲೇಖಕರು Admin

2 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading