ಜಯಲಕ್ಷ್ಮಿ ಪಾಟೀಲ್ ಈ ಹೊತ್ತಿಗೆಗೊಂದು ಹೊಸ ರೂಪ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆಂದು ಈ ಹೊತ್ತಿಗೆಯ ವಿಶೇಷಾಂಕ ಪ್ರಕಟಿಸಿದ್ದಾರೆ.
ಅನೇಕ ಓದಲೇಬೇಕಾದ ಬರಹಗಳನ್ನೊಳಗೊಂಡ ಈ ವಿಶೇಷಾಂಕಕ್ಕೆ ಈ ಲಿಂಕ್ ಒತ್ತಿ-
https://ehottige.wordpress.com/
ವಿಶೇಷಾಂಕಕ್ಕಾಗಿ ಜಯಲಕ್ಷ್ಮಿ ಪಾಟೀಲ್ ಅವರು ಬರೆದ ಸಂಪಾದಕೀಯ ಇಲ್ಲಿದೆ-
ನಮ್ಮ ಈ ಹೊತ್ತಿಗೆಗೆ ಲಾಂಛನ ತಯಾರಿಸಿ ಕೊಡ್ತೀರಾ ಅಂತ ಸೌಮ್ಯ ಕಲ್ಯಾಣಕರ್ ಅವರನ್ನ ಕೇಳಿದಾಗ ಅವರು ಈ ಓದುತ್ತಿರುವ ಹೆಣ್ಣಿನ ಚಿತ್ರ ಬಿಡಿಸಿ ಕೊಟ್ಟಾಗ, ಸಣ್ಣದೊಂದು ಆತಂಕ ನನಗೆ. ಎಲ್ಲಿ ಈ ಚಿತ್ರ ನೋಡಿ, ಬರೀ ಹೆಣ್ಣುಮಕ್ಕಳಿರೊ ಗುಂಪಿದು’ ಅಂತನ್ಕೊಂಡು ಪುರುಷ ಸಾಹಿತ್ಯಾಸಕ್ತರು ಬರದೆ ಇದು ಸೀಮಿತ ಗುಂಪಾಗಿ ಬಿಟ್ಟರೆ ಉದ್ದೇಶ ಫಲಿಸುವುದಿಲ್ಲವಲ್ಲ ಅನಿಸಿತ್ತು. ಅದನ್ನೇ ಸೌಮ್ಯಾ ಹತ್ರ ಹೇಳಿದೆ. ಅವ್ರು ಹಾಗೇನಾಗಲ್ಲ ಬಿಡಿ ಒಳ್ಳೆಯ ಕಾರ್ಯಕ್ರಮಗಳಾದ್ರೆ ಇದೆಲ್ಲ ನೋಡದೆ ಜನ ಬರ್ತಾರೆ ಅನ್ನೊ ಧೈರ್ಯದ ಮಾತುಗಳನ್ನಾಡಿದ್ರು. ಆ ಕ್ಷಣ ನನಗೆ ‘ಈ ಪುರುಷ ಪ್ರಧಾನ ಸಮಾಜದ ಪ್ರಭಾವ ನಮ್ಮ ಆಲೋಚನೆಗಳ ಮೇಲೂ ಎಷ್ಟೊಂದು ಬಲವಾಗಿದೆ ಅನ್ನುವುದರ ಅರಿವಾಯಿತು! ಅವರಿಗಿಂತ ಮುಂಚೆ ನಾವೇ ಅಂದುಕೊಳ್ಳುವಷ್ಟು ಹೆಣ್ಣುಮಗಳಿರೊ ಲಾಂಛನವಾದ್ರೆ ಪುರುಷರು ಚರ್ಚೆಗೆ ಬರ್ಲಿಕ್ಕಿಲ್ಲ ಎಂದು ನಾವೇ ನಿರ್ಧರಿಸುವಷ್ಟರ ಮಟ್ಟಿಗೆ ನಾವು ಈ ವ್ಯವಸ್ಥೆಗೆ ಒಗ್ಗಿಹೋಗಿದ್ದೇವೆ ಮತ್ತು ಹೊಸ ಪ್ರಯೋಗಗಳಿಗೆ ಹೆದರುತ್ತೇವೆ ಅನಿಸಿದ್ದೇ ಇದೇ ಲಾಂಛನವಿರಲಿ ಎಂದು ತೀರ್ಮಾನಿಸಿ ಸೌಮ್ಯಾಗೊಂದು ತ್ಯಾಂಕ್ಸ್ ಹೇಳಿದೆ.
ನನ್ನ ಆತಂಕ ಸುಳ್ಳೇನಾಗಿರಲಿಲ್ಲ. ಶುರುವಿನಲ್ಲಿ ಹೆಣ್ಣುಮಕ್ಕಳ ಗುಂಪೆಂದು ಕೆಲವರು, ಎಡ ಇಲ್ಲವೆ ಬಲ ಎಂದು ತಾವು ತಾವೆ ನಿರ್ಧರಿಸಿ ಕೆಲವರು ದೂರವೇ ಉಳಿದರು. ಅದನ್ನು ಮೀರಿ ಸಾಹಿತ್ಯಾಸಕ್ತಿಯೊಂದೇ ತಮಗೆ ಮುಖ್ಯ ಎಂದುಕೊಂಡ ಗಂಡಸರು ಮೊದಲ ದಿನದಿಂದಲೇ ಬಂದುದು ಹೌದಾದರೂ, ಗಂಡಸರ ಸಂಖ್ಯೆಗಿಂತ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚಿದ್ದಿದ್ದು, ಇರುವುದು ಸತ್ಯ ಮತ್ತು ತಮ್ಮ ಅನಿವಾರ್ಯತೆಗಳ ಪರಿಧಿ ಮೀರಿ ಹೆಣ್ಣು ಮಕ್ಕಳು ಭಾಗವಹಿಸುತ್ತಿರುವುದು ಖುಷಿ ಕೂಡ. ಆದರೆ ಏಳು ವರ್ಷಗಳಲ್ಲಿ ತಾರತಮ್ಯದ ಈ ಗೋಡೆ ಸಾಕಷ್ಟು ಸಡಿಲಗೊಂಡಿರುವುದಂತೂ ಸತ್ಯ. ಒಂದೊಮ್ಮೆ ಅದಿಲ್ಲಿತ್ತು ಎನ್ನುವ ಕುರೂಹೂ ಇಲ್ಲವಾಗಬಹುದು. ಆ ದಿನಕ್ಕಾಗಿ ಕಾಯುತ್ತೇನೆ. ಆಶಾವಾದಿ ನಾನು. ಪ್ರಯತ್ನಗಳು ಮಾತ್ರ ಸತತ ನನ್ನೊಂದಿಗಿರಲು ಸಾಧ್ಯ. ಹೀಗಾಗಿ ನನ್ನೊಳಗಿನ ಆತಂಕ, ನಿರಾಸೆಗಳಿಗೆ ಆಯುಷ್ಯ ಕಡಿಮೆ.
ಇಷ್ಟೆಲ್ಲ ಹೇಳುತ್ತಿರುವುದರ ಹಿಂದ ಕಾರಣವನ್ನು ನೀವೀಗ ಬಲ್ಲಿರಿ. ಇಂದು ಮಾರ್ಚ್ ೮; ವಿಶ್ವ ಮಹಿಳಾ ದಿನಾಚರಣೆ. ಸಂಕೋಲೆ, ಸಂಕೋಚಗಳನ್ನು ಇಷ್ಟಿಷ್ಟೆ ಬಿಡಿಸಿಕೊಳ್ಳುತ್ತಾ ನಡೆದವರು ನಾವು. ನನ್ನಜ್ಜಿಯ ಕಾಲಕ್ಕೂ ನನ್ನ ಮಗಳ ಕಾಲಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ವಿದ್ಯಾವಂತ ಮಹಿಳೆಯರ ಸಂಖ್ಯೆ ಅಂದಿಗಿಂತ ಇಂದು ಹೆಚ್ಚಿದೆ ಅಂದುಕೊಳ್ಳುವ ಸಮಯದಲ್ಲೆ, ವಿದ್ಯಾವಂತ ಹೆಣ್ಣುಮಕ್ಕಳ ಸಂಖ್ಯೆಯ ನಾಲ್ಕುಪಟ್ಟು ಅವಿದ್ಯಾವಂತ ಹೆಣ್ಣುಮಕ್ಕಳಿರುವ ಸತ್ಯ ಮನಸಿಗೆ ರಾಚುತ್ತದೆ. ಈ ಎರಡು ದಶಕಗಳಲ್ಲಿ ಆಧುನಿಕತೆ ಹಳ್ಳಿಗಳಿಗೂ ಕಾಲಿಟ್ಟಿದೆ ಎಂದು ಬರೆಯುವುದನ್ನು ಓದಿದಾಗ ಆಧುನಿಕತೆ ಎಂದರೆ ನೈಟಿ, ನೇಲ್ ಪಾಲೀಶ್, ಟಿವಿ, ಮೊಬೈಲುಗಳು ಮಾತ್ರ, ಒಳಗಿರುವ ಎಲ್ಲ ಸಂಕೋಲೆಗಳೂ ಇನ್ನೂ ಮೊದಲಿನಷ್ಟೇ ಬಿಗಿ ಬಂದೋಬಸ್ತಿನಲ್ಲಿವೆ ಎನ್ನುವ ಸತ್ಯ ಮನವರಿಕೆಯಾಗುವ ಸಮಯದಲ್ಲೇ ’ಉಭಯದ ಜ್ಞಾನ ಹೆಣ್ಣೊ ಗಂಡೊ’ ಎಂದು ಪ್ರಶ್ನಿಸುವ ಹನ್ನೆರಡನೇ ಶತಮಾನದ ಗೊಗ್ಗವ್ವೆ ನಿಜವಾದ ಆಧುನಿಕಳು ಅನಿಸುತ್ತಾಳೆ.

ಲೋಕ ಇನ್ನಾದರೂ ಹೆಣ್ಣು ಎಂದರೆ ಹೀಗಿರಬೇಕು ಹೀಗಿರಬಾರದು ಎಂದು ಆದೇಶಿಸುವುದನ್ನು ನಿಲ್ಲಿಸಬೇಕು. ಜಾಗತೀಕರಣದ ಎಲ್ಲ ಸೌಲಭ್ಯಗಳನ್ನು, ಜ್ಞಾನವನ್ನು ಸುಲಭದಲ್ಲಿ ದಕ್ಕಿಸಿಕೊಳ್ಳುತ್ತಿರುವ ಈ ಕಾಲ ಘಟ್ಟದಲ್ಲಿಯಾದರೂ ಮನಸ್ಥಿತಿ ಬದಲಾಗಬೇಕು. ಅಧಿಕಾರಶಾಹಿ ಮನೋಭಾವ ಕಡಿಮೆಯಾಗಿ ಸಹೃದಯತೆ ಹೆಚ್ಚಾಗಬೇಕು. ವಿವೇಚನೆ ಕೇವಲ ಗಂಡಿನ ಸ್ವತ್ತಲ್ಲ, ಎಲ್ಲ ಗಂಡಸರೂ ವಿವೇಚನೆ ಉಳ್ಳವರಾಗಿರುವುದೂ ಇಲ್ಲ! ಹಾಗೆಯೇ ಹೆಂಗಸರೆಂದರೆ ಸಂಸ್ಕೃತಿ ಸಂಸ್ಕಾರಗಳ ಗುತ್ತಿಗೆಗಾರರೂ ಅಲ್ಲ. ಇದು ನೆನಪಿದ್ದು ಅದರಂತೆ ನಡೆದುಕೊಂಡರೆ ಸಾಕು, ಹೆಣ್ಣಿನ ಮೇಲಿನ ದೌರ್ಜನ್ಯ ಅತ್ಯಾಚಾರಗಳು ಬಹುಮಟ್ಟಿಗೆ ನಿಯಂತ್ರಣಕ್ಕೆ ಬರಬಲ್ಲವು.
ಸ್ವಾತಂತ್ರ್ಯ ಸಮಾನತೆ ಎಲ್ಲರ ಜನ್ಮಸಿದ್ಧ ಹಕ್ಕು ಅದರಲ್ಲೆರಡು ಮಾತಿಲ್ಲ. ಆದರೆ ಎಷ್ಟೋ ಮನೆಗಳಲ್ಲಿ, ಜಗತ್ತಿನ ಅನೇಕ ದೇಶಗಳಲ್ಲಿ ಇಂದಿಗೂ ಇದು ಹಲವು ಹೆಣ್ಣುಮಕ್ಕಳಿಗಷ್ಟೆ ಗೊತ್ತಿರುವ, ಕೆಲವರಷ್ಟೆ ಈ ಹಕ್ಕನ್ನು ಅನುಭವಿಸುತ್ತಿರುವ ಫಲಾನುಭವಿಗಳು. ಉಳಿದಂತೆ ತಡವಾಗಿಯಾದರೂ ಸರಿ ಒಬ್ಬೊಬ್ಬರೇ ಎಚ್ಚೆತ್ತುಕೊಳ್ಳುತ್ತಿರುವ ಸಮಯವಿದು. ಮಾರ್ಚ್ ೮ ಅಂಥ ಬೆಳಗುಗಳಿಗೆ ಪ್ರತಿವರ್ಷವೂ ಸುಪ್ರಭಾತ ಹಾಡುತ್ತಾ ಬರುತ್ತಿರುವುದು ಸಮಾಧಾನದ ಸಂಗತಿ. ಬೆಳಗಿನ ಬೆಳಕಿಗೊಮ್ಮೆ ಕಣ್ಣು ಹೊಂದಿಸಿಕೊಂಡರಾಯಿತು, ಹೆಜ್ಜೆಗಳು ತಡವರಿಸದೆ ದೃಢವಾಗಿ, ತುಂಬಿದ ಆತ್ಮವಿಶ್ವಾದಿಂದ ಮುಂದುವರೆಯುತ್ತವೆ.
ವರ್ಷವಿಡೀ ಈ ಹೊತ್ತಿಗೆಯ ಕಾರ್ಯಕ್ರಮಗಳನ್ನು ಆಯೋಜಿಸಲು ನೆರವಾಗುತ್ತಾ, ಸಾಹಿತ್ಯದೊಲುಮೆಯಿಂದಾಗಿ ಎಲ್ಲ ಬಗೆಯ ನೆರವನ್ನೂ ನೀಡುತ್ತಾ ಬಂದಿರುವ ಈ ಹೊತ್ತಿಗರು ಮತ್ತು ಕೆಲ ಸ್ನೇಹಿತರು ಮೊದಲ ಬಾರಿ ಈ ಹೊತ್ತಿಗೆಗಾಗಿ ಬರೆದಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಇಲ್ಲಿನ ಬಹುತೇಕರು ಈಗಾಗಲೇ ಸಾಹಿತ್ಯದೊಲಯದಲ್ಲಿ ಹೆಸರು ಮಾಡಿದವರಾಗಿದ್ದರೆ ಇನ್ನೂ ಕೆಲವರು ಉದಯೋನ್ಮುಖ ಲೇಖಕರು. ಎಲ್ಲರೂ ಸೇರಿ ಅಂದಿನ, ಇಂದಿನ ಹೆಣ್ಣಿನ ಅನೇಕ ಬಗೆಯ ಚಿತ್ರಣಗಳನ್ನು ತಮ್ಮ ಕತೆ, ಕವನ, ಲೇಖನಗಳಲ್ಲಿ ಕಟ್ಟಿಕೊಟ್ಟು, ವಿಶ್ವ ಮಹಿಳಾ ದಿನವನ್ನು ತಮ್ಮದೇ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅನು ಮೋತಿ, ಅರವಿಂದ ಮೋತಿ ಅವರುಗಳು ಎಲ್ಲ ಬರಹಗಳನ್ನು ಅಚ್ಚುಕಟ್ಟಾಗಿ ಹೊಂದಿಸಿ ಈ ಹೊತ್ತಿಗೆ ಬ್ಲಾಗ್‍ನಲ್ಲಿ ಹಾಕುವ ಜವಾಬ್ದಾರಿಯನ್ನು ತುಂಬು ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ. ಇಲ್ಲಿರುವ ಚಿತ್ರಗಳು ಅದಿತಿ ಪಾಟೀಲ್ ಬಿಡಿಸಿದ್ದು. ಎಲ್ಲರಿಗೂ ಧನ್ಯವಾದಗಳನ್ನರ್ಪಿಸುತ್ತ ತಮ್ಮೆಲ್ಲರಿಗೂ ಮಹಿಳಾ ದಿನಾಚರಣೆಯ ಶುಭ ಕೋರುವೆ.
-ಜಯಲಕ್ಷ್ಮಿ ಪಾಟೀಲ್






0 Comments