ಜಯಶ್ರೀ ಕಾಸರವಳ್ಳಿ
ಈ ಹೊತ್ತಿಗೆಯ ಆರನೇ ಭಾನುವಾರದ ಈ ಹೊತ್ತಿನ ಕಾರ್ಯಕ್ರಮದಲ್ಲಿ ನಮ್ಮೆಲ್ಲರ ಓದಿಗೆ ನಿಗದಿಪಡಿಸಿಕೊಂಡ ಪುಸ್ತಕ ಎಂ.ಎಸ್. ಶ್ರೀರಾಮ್ ಅವರ ಕಥಾಸಂಕಲನ ‘ತೇಲ್ ಮಾಲಿಶ್’. ಎಂದೋ ಬರೆದ ಕಡೆಯ ಮೂರು ಕತೆಗಳನ್ನೂ ಈ ಸಂಕಲನದಲ್ಲಿ ಹೇಗೋ ತೂರಿಸಿಬಿಟ್ಟೆ ಎಂದು ಸ್ವತಃ ಲೇಖಕರೇ ತಮಾಷೆ ಮಾಡಿಕೊಂಡರೂ, ಸುಮಾರು ಎಂಟು ಕತೆಗಳ ಈ ಸಂಕಲನದ ಎಲ್ಲಾ ಕತೆಗಳು ಒಂದಲ್ಲಾ ಒಂದು ರೀತಿಯಲ್ಲಿ ಓದುಗರ ಸೆಳೆತಕ್ಕೆ ಒಳಗಾಗಿದ್ದು ಗಮನಾರ್ಹ ವಿಷಯ. ಆದರೆ ಒಮ್ಮತದಿಂದ ಹೆಚ್ಚು ಮೆಚ್ಚುಗೆಗೆ ಕಾರಣವಾಗಿ ಲಾಟರಿ ಎದ್ದಿದ್ದು ಅವರ ಮೊದಲ ಕತೆ ‘ಲಾಟರಿ’ಗೆ.

ಸ್ವತಃ ಶ್ರೀರಾಮ್ರೇ ಅನೇಕ ಕಡೆ ಪ್ರಸ್ತುತಪಡಿಸುವ ಹಾಗೆ ಹಾಗೂ ಅನೇಕ ಕತೆಗಳಲ್ಲಿ ಮತ್ತೆ ಮತ್ತೆ ಮಗ್ಗುಲು ಬದಲಾಯಿಸಿಕೊಂಡು ಮೂಡಿಬರುವ ಹಾಗೆ, ಶ್ರೀರಾಮ್ ಅವರ ಸ್ಥಾಯೀಭಾವದಲ್ಲಿನ್ನೂ ಉಳಿದಿರುವ ಭಾಸ್ಕರರಾಯರು, ಮತ್ತವರ ಏಕಾಂಕಿತನವೇ ಕೇಂದ್ರವಾಗಿರುವ ಈ ಕತೆಯ ಹಂದರ ಹುಟ್ಟುವುದು ಹೈದರಾಬಾದ್ನ ಅಂಗಳದಲ್ಲಿ ನಿಂತು, ಮೈಸೂರನ್ನು ತಮ್ಮ ನೆನಪಿನಂಗಳದಲ್ಲಿ ಬೆಚ್ಚಗೆ ಹೊದ್ದು ನೆನೆಯುವುದರಿಂದ. ಹೆಚ್ಚು ಮಾತನಾಡದ ಭೋಳೆ ಸ್ವಭಾವದ ಭಾಸ್ಕರರಾಯರು, ಹೆಂಡತಿಯನ್ನು ಕಳೆದುಕೊಂಡು, ನಿವೃತ್ತರಾಗಿ ಬಂದ ಹಣ ಬ್ಯಾಂಕಿನಲ್ಲಿ ಜಮಾಯಿಸಿ ಅದರ ಬಡ್ಡಿಯಲ್ಲಿ ತಮ್ಮ ದಿನನಿತ್ಯದ ಪೂರೈಕೆಗಳನ್ನು ಪೂರೈಸಿಕೊಳ್ಳುತ್ತಾ, ಮಗ ಶ್ರಾವಣನೊಂದಿಗೆ ಹೈದರಾಬಾದ್ಗೆ ಬಂದು ನೆಲೆ ನಿಂತು, ಸೊಸೆ ಮೊಮ್ಮಗರೊಡನೆ ಹೊರ ನೋಟಕ್ಕೆ ಯಾವ ಕಿತ್ತಾಟವೂ ಇರದ, ಎಂದೂ ಕೊಂಡಿ ಕಳಚದ ಲೆಕ್ಕಾಚಾರದ ಏಕತಾನದ ಬದುಕಿನಲ್ಲಿ ಹದಿನೆಂಟು ವರುಷ ಸವೆಸಿದ ನಂತರವೂ ಮತ್ತೆ ಮಗನ ಮೇಲೆ ಅವಲಂಬಿತರಾಗುತ್ತಾ ಹಣಕಲ್ಲದಿದ್ದರೂ ಬೇರೆ ಅವಶ್ಯಕತೆಗಳಿಗೆ ಬಾಗುವುದು, ಅಸಹಾಯಕರಾಗಿ ನಿಲ್ಲುವುದು ಮತ್ತು ಸಮಯ ಕೊಲ್ಲಲಿಕ್ಕಾಗಿಯೇ ಬ್ರಹ್ಮಾನಂದ ರೆಡ್ಡಿ ಪಾರ್ಕ್ ನಲ್ಲಿ ಬೆಳ್ಳಂಬೆಳಗ್ಗೆ ಲಾಫ್ಟರ್ ಕ್ಲಬ್ ಸೇರಿ ಪ್ರಯಾಸದಿಂದ ತಿಣುಕುತ್ತಾ ಬಾರದ ನಗುವನ್ನು ಬರಿಸಿಕೊಳ್ಳಲು ಕಸರತ್ತು ನಡೆಸುವಂತಹ ಹಲವು ವೈಪರೀತ್ಯಗಳಿಗೆ ಒಳಗಾಗುವ ದುಸ್ತರ ಸಂದರ್ಭದಲ್ಲಿರುವಾಗಲೇ ಪ್ರತಿಭಾ ರೆಡ್ಡಿಯ ಪರಿಚಯವಾಗುತ್ತದೆ. ಅದೂ ‘ಎಲ್ಲವನ್ನೂ ಒಂದು ಚೌಕಟ್ಟಿನಲ್ಲಿ ಬಂಧಿಸಿಡುತ್ತಿದ್ದ ರಾಯರಿಗೆ ಈಗ ಮುಕ್ತತೆಯ ಅವಶ್ಯಕತೆ ಕಾಣುತ್ತಿದೆ’ ಎಂಬಂತಹ ಸಂದರ್ಭದಲ್ಲಿ. ಮಿಲನ್ ಕುಂದೇರಾನ ಹಲವು ಪಾತ್ರಗಳಂತೆ, ಗಂಡು ಹೆಣ್ಣು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಕ್ಕೆ ಮುಂಚೆಯೇ ಬದುಕಿನ ಬಣಕ್ಕೆ ಇಳಿದ ಹಾಗೆ, ನಾವೂ ಅವನ ಪಾತ್ರಗಳಾಗಿದ್ದೇವೆಯೇ ಎಂಬ ಅನುಮಾನವನ್ನು ರಾಯರು ವ್ಯಕ್ತಪಡಿಸುವುದರೊಂದಿಗೇ ಇಬ್ಬರೂ ಬದುಕಿನಾಟಕ್ಕೆ ಇಳಿಯುತ್ತಾರೆ. ಎರಡು ವಿಭಿನ್ನ ವೈರುಧ್ಯಗಳಿರುವ ದೃವಗಳಿಗೆ ಅಕರ್ಷಣೆ ಸಹಜವೆನ್ನುವ ಅಲಿಖಿತ ಪರಂಪರಾಗತ ನಂಬಿಕೆಯಂತೆ ಒಬ್ಬರ ಹಿಡಿತದೊಳಗೆ ಮತ್ತೊಬ್ಬರು ಸಿಕ್ಕೂ ಸಿಗದಂತೆ ಜಾರಿಕೊಳ್ಳುತ್ತಾ, ಪೊರೆ ಕಳಚಿ ತುಸುವೇ ಹೊರ ಇಣುಕುವ ರಾಯರೂ, ರೆಕ್ಕೆ ಮುದುರಿ ಇಂಚಿಂಚೇ ರಾಯರ ಆಧಿಪತ್ಯಕ್ಕೆ ಬರುವ ಪ್ರತಿಭಾರನ್ನೂ ಕಾಣುತ್ತೇವೆ.
ತನ್ನ ಮಗ ಕಿಡ್ನಿ ವೈಫಲ್ಯದಿಂದ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ಗೆ ಒಳಗಾಗುವ ನೋವಿನ ಬದುಕಿನಲ್ಲಿದ್ದಾಗಿಯೂ, ಅವನ ಕಾಯಿಲೆಯಿಂದ ದೇವರು ದಿಂಡರು ಬಾಬಾಗಳೆಂದು ದೇವರಲ್ಲಿ ವಿಪರೀತ ಮೊರೆ ಹೊಕ್ಕು ಇರುವ ಅಲ್ವಸ್ವಲ್ಪ ಬದುಕನ್ನು ದುಸ್ತರಗೊಳಿಸಿಕೊಳ್ಳುವ ಮದ್ಯಮ ವರ್ಗದ ಮೊಫ್ಯೊಸಿಲ್ ಮನೋಧರ್ಮದ ತನ್ನ ಸೊಸೆಯ ಕಿರಿಕಿರಿಯಿಂದಲೂ ತಪ್ಪಿಸಿಕೊಳ್ಳಲು ದಿನಾ ಪಾರ್ಕ್‌ಗೆ ಬರುವ ಪ್ರತಿಭಾ, ತನ್ನ ಬದುಕಿಗೂ ಮಗನ ನೋವಿಗೂ ಯಾವ ರೀತಿಯ ಕಾಕತಾಳೀಯ ಸಂಬಂಧವನ್ನೂ ಬೆಸೆದುಕೊಳ್ಳಬಯಸದೆ ತನ್ನ ಸ್ವಾತಂತ್ರ್ಯವನ್ನು ಹಕ್ಕಿನಿಂದಲೇ ಅನುಭವಿಸುವುದು ಕಂಡು ರಾಯರಿಗೆ ವಿಸ್ಮಯ. ತಾವು ಬದುಕನ್ನು ಅನುಭವಿಸಲು ಸರ್ವ ರೀತಿಯಲ್ಲೂ ಸ್ವತಂತ್ರರಾಗಿಯೂ ನಂಬಿಕೊಂಡ ಹಲವು ಮೌಲ್ಯಗಳ ಕಟ್ಟುಪಾಡಿನಿಂದ ಅನುಭವಿಸಲಾಗದ ವಿಚಿತ್ರ ತೊಳಲಾಟದಲ್ಲಿ ಬೇಯುವ ರಾಯರು ಮುಕ್ತತೆಯನ್ನು ಬಯಸಿ ಸೀಮೋಲ್ಲಂಘನೆ ಮಾಡಿದರೂ ಅದರ ಫಲವನ್ನು ಭರಿಸಲಾಗದ ತಳಮಳದಲ್ಲಿ ಮತ್ತೆ ಬಂಧಿತರಾಗುವಂತಹ ಕಟು ವ್ಯಂಗ್ಯದೊಂದಿಗೆ, ಅಪರ ವಯಸ್ಕರ ಈ ಇಬ್ಬರ ಯಾನ ಇಪ್ಪತ್ತನಾಲ್ಕು ಗಂಟೆ ತಾಜಾ ಸುದ್ದಿ ಭಿತ್ತರಿಸುವ ಒಂದು ಸುದ್ದಿ ಮಾಧ್ಯಮಕ್ಕೆ ಗ್ರಾಸವಾಗಿ ರೋಚಕ ಸುದ್ದಿಯಾಗುವುದು ಮಾತ್ರ ಇಂದಿನ ವಾಸ್ತವ ಬದುಕಿನ ವೈಪರೀತ್ಯಕ್ಕೆ ಹಿಡಿದ ಕನ್ನಡಿ!
ಮಗ ಶ್ರಾವಣ ಎಷ್ಟು ಹೇಳಿದರೂ ಮೊಬೈಲ್ ಹಿಡಿದು ಓಡಾಡಲು ನಿರಾಕರಿಸುತ್ತಿದ್ದ ರಾಯರು, ಮೈಸೂರಿಗೆ ಹೊರಡುವುದಕ್ಕೆ ಮುಂಚೆ ಪ್ರತಿಭಾ ಕೊಟ್ಟ ಮೊಬೈಲ್ ಅನ್ನೂ ಪ್ಯಾಕ್ ಮಾಡುತ್ತಾ ಅದಕ್ಕೊಂದು ದಿನ ಸಿಮ್ ಹಾಕಬೇಕಿನ್ನುವಲ್ಲಿಗೆ ಜೀವನದ ಎಳೆಯೊಂದಿಗೆ ಕೊಂಡಿ ಬೆಸೆಯುವ ಶ್ರೀರಾಮ್ ಅವರು ಮಿಲನ್ ಕುಂದೇರಾನ ಪಾತ್ರವಾಗುವ ಅಪಾಯದಿಂದ ತಮ್ಮ ಪಾತ್ರಗಳನ್ನು ಎತ್ತಿ ಹಿಡಿಯುತ್ತಾರೆ.
‘ಹೋಗುವುದೆಲ್ಲಿಗೆ’, ‘ತೇಲ್ ಮಾಲಿಶ್’, ‘ನಿಲ್ದಾಣ’- ಮುಂತಾದ ಕತೆಗಳೂ ನಮ್ಮ ವ್ಯವಸ್ಥೆಯ ಸುತ್ತಲೇ ಸುತ್ತುವರಿಯುತ್ತಾ ಜನಸಾಮಾನ್ಯರೂ, ಅಮಾಯಕರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣಕರ್ತರಾಗುತ್ತಾ ಬಲಿಯಾಗುವ ವಿಷಯವನ್ನು ಒಳಗೊಂಡಿದೆ. ಕಳುವಾದ ತನ್ನ ಮನೆಯ ವಸ್ತುಗಳನ್ನು ಕುರಿತು ಕಂಪ್ಲೇಂಟ್ ಕೊಡಲು ಪೋಲೀಸ್ ಸ್ಟೇಷನ್ಗೆ ಮೊದಲ ಬಾರಿಗೆ ಬರುವ ಮಕ್ಕಳಿಲ್ಲದ ವಿಶು, ಸ್ಟೇಷನ್ನಲ್ಲಿ ಕಂಡ ಮಗುವಿಗೆ ಮಾನವೀಯವಾಗಿ ಮಿಡಿದು ಮಗುವಿನ ಜಾಡು ಹಿಡಿದು ಹೋದಾಗ, ಕಳುವು ಮಾಡುವ ವಸ್ತುಗಳನ್ನು ಮಾರಾಟ ಮಾಡುವವರ ಜಾಲದಲ್ಲಿ ಶಾಮೀಲಾಗಿರುವ ನಮ್ಮಿಡೀ ವ್ಯವಸ್ಥೆಯೇ ಅವನ ಮುಂದೆ ಗೋಚರಿಸುವುದನ್ನೂ, ತೇಲ್ ಮಾಲಿಶ್ನಲ್ಲಿ ಕೋಮು ಗಲಭೆಯೇ ಇರಲಿ, ಯಾವ ಗಲಾಟೆಯೇ ಇರಲಿ, ಜನ ಸಾಮಾನ್ಯರು ತಮ್ಮ ಬದುಕನ್ನು ತಾವು ಕಟ್ಟಿಕೊಂಡು ನಿಲ್ಲಲೇ ಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಜಾತಿ ಗಲಭೆಗಳಿಗೂ ಬದುಕಿಗೂ ಇರುವಂತಹ ಅಜಗಜಾಂತರ ವ್ಯತ್ಯಾಸವನ್ನು, ಬಷೀರ್ನಂತಹ ಸಹೃದಯನೊಬ್ಬ ಮತ್ತೆ ವ್ಯವಸ್ಥೆಗೆ ಬೆದರಿ ಪಾಲಾಯನಗೈಯುವುದನ್ನು ನಿಲ್ದಾಣದಂತಹ ಕತೆಗಳಲ್ಲೂ ಕಾಣುತ್ತೇವೆ.
ಸೂಕ್ಮವಾಗಿ ನೋಡಿದಾಗ, ಒಟ್ಟಾರೆ ಈ ಎಲ್ಲಾ ಕತೆಗಳಲ್ಲೂ ನಮ್ಮ ವ್ಯವಸ್ಥೆಯಲ್ಲಿನ ವ್ಯಂಗ್ಯವನ್ನೇ ಎತ್ತಿ ಹಿಡಿದ ಹಾಗೆ ಮೇಲುನೋಟಕ್ಕೆ ಕಂಡರೂ, ವ್ಯಂಗ್ಯದ ಧೋರಣೆಯಾಗಿ ಕೃತಕ ಆಡಂಬರತೆಯಿಂದ ಅದೆಲ್ಲೂ ಕೊರಗುವುದಿಲ್ಲ; ಸೊರಗುವುದಿಲ್ಲ. ತಮ್ಮ ನವಿರು ಭಾಷೆಯ ಲಾಲಿತ್ಯದಿಂದ ಶ್ರೀರಾಮ್ರು ಮುಟ್ಟಿಸುವುಲ್ಲಿ, ತಟ್ಟಿಸುವುವಲ್ಲಿ ಮುಟ್ಟಿಸಿ, ತಟ್ಟಿ – ಮಗುವಿನ ಮುಗ್ಧತೆಯಲ್ಲಿ ದೂರ ಸರಿದು ತುಂಟತನದಿಂದ ಅವಲೋಕಿಸುತ್ತಾರೆ. ಬಹುಶಃ ಯಾರಿಗೂ ನೋವಾಗದ, ವ್ಯಕ್ತಿಗತವಾಗಿ ಯಾರನ್ನೂ ನೇರ ಸಂಪರ್ಕಿಸದ ಆರೋಗ್ಯಪೂರ್ಣ ಚಿಕಿತ್ಸಕ ಮನೋದೃಷ್ಟಿಯ ಹಾಸ್ಯ – ಮುಖದ ಮೇಲಿನ ಮಂದಹಾಸದಂತೆ ತೆಳುವಾಗಿ ನಮ್ಮನ್ನು ಸವರಿ ಹೋಗುತ್ತದೆ. ಶ್ರೀರಾಮ್ರು ಅಂಕಣಗಾರರೂ ಆಗಿರುವುದರಿಂದ ಅಷ್ಟೇನೂ ಸುಲಭ ಸಾಧುವಲ್ಲದ ಇಂತಹ ವಿಡಂಬನಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಅವರಿಗೆ ಸಾಧ್ಯವಾಗಿದೆ ಎಂದು ನಾನು ಭಾವಿಸುವೆ. ಒಂದು ರೀತಿಯಲ್ಲಿ ಸರಳವಾಗಿ, ನೇರವಾಗಿ ಆರಾಮದಲ್ಲಿ ಓದಿಸಿಕೊಳ್ಳುವ ಇಲ್ಲಿನ ಎಲ್ಲಾ ಕತೆಗಳೂ ಮಾತ್ರ ಕಡೆಯಲ್ಲಿ ಶಾಕ್ ಅಬ್ಸಾರ್ಬರ್ನಂತೆ ಅನಿರೀಕ್ಷೀತ ತಿರುವು ಕೊಟ್ಟು ನಮ್ಮನ್ನು ಕ್ಷಣ ಕಾಲ ಬೆಚ್ಚಿಬೀಳಿಸುವುದಂತೂ ನಿಜ.
ಸಂವಾದ ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋ : ಜಯಲಕ್ಷ್ಮಿ ಪಾಟೀಲ್






ಸಂವಾದದಲ್ಲಿ ಮೂಡಿ ಬಂದ ಶ್ರೀರಮರ ಕಥೆಗಳ ಗ್ರಹಿಕೆ ಸರಿಯಾದದ್ದು .ಅಭಿನಂದನೆಗಳು…
Congratulations and thanks. I read with pleasure your report of the Samvaada session on my very intimate and esteemed friend Sreeraam. Do please keep reporting on sessions on other writers you might conduct Samvaada on.