ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಸ್ಫುರದ್ರೂಪಿ ಯುವಕ 'ನಾನು ಬಾ ಕಿ ನ' ಎಂದರು..

ನರೇಂದ್ರ ಪೈ

ಬಾ.ಕಿ.ನ. ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಲಿಪಿ ಮುದ್ರಣವನ್ನೂ, ಗಾಂಧಿ ಬಜಾರ್ ಪತ್ರಿಕೆಯನ್ನೂ ನಡೆಸಿಕೊಂಡು ಬಂದಿದ್ದು ನಮಗೆಲ್ಲ ಕೇಳಿ ಗೊತ್ತು ಅಷ್ಟೆ. ಎಸ್.ಆರ್.ವಿಜಯಶಂಕರ್, ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ ಅವರೆಲ್ಲ ನನಗೆ ಗಾಂಧಿ ಬಜಾರ್ ಗಮನಿಸುವಂತೆ ಹೇಳಿದ ನೆನಪು. ಮುಂದೆ ಗಾಂಧಿ ಬಜಾರ್‌ಗೆ ನಾನೂ ಪುಸ್ತಕಗಳ ಬಗ್ಗೆ ಬರೆದಿದ್ದನ್ನು ಕಳಿಸಿದಂತೆಲ್ಲ ಅವರದನ್ನು ಪ್ರಕಟಿಸುತ್ತ ಬಂದಿದ್ದರು.
ಅವರನ್ನು ನಾನು ನೋಡಿದ್ದು ಒಮ್ಮೆ ಮಾತ್ರ. ತೀರ ಈಚೆಗೆ, ಎಸ್ ದಿವಾಕರ್ ಅವರ ಪುಸ್ತಕ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದಾಗ ಅವರು ಅಲ್ಲಿಗೆ ಬಂದಿದ್ದರು. ಕಾರ್ಯಕ್ರಮವೆಲ್ಲ ಮುಗಿದ ಬಳಿಕ ನೀಳಕಾಯದ ಈ ಸ್ಫುರದ್ರೂಪಿ ಯುವಕ ನಿಧಾನಕ್ಕೆ ಬಂದು “ನಾನು ಬಾ.ಕಿ.ನ.” ಎಂದು ಪರಿಚಯಿಸಿಕೊಂಡರು. ಆ ವಿನಯ, ಆ ಪ್ರೀತಿ ಮತ್ತು ಕಣ್ಣಲ್ಲೇ ತುಳುಕುತ್ತಿದ್ದ ಕನ್ನಡದ ಬರಹಗಾರರ ಮೇಲಿನ, ಸಾಹಿತ್ಯದ ಮೇಲಿನ ಪ್ರೀತಿಗೆ ಮಾತೇ ಇಲ್ಲದಂತೆ ಮೂಕನಾಗಿದ್ದೆ. ನಾವು ಬಹಳ ಹೊತ್ತು ಕೈ ಹಿಡಿದೇ ಒಬ್ಬರನ್ನೊಬ್ಬರು ನೋಡುತ್ತ ನಿಂತಿದ್ದೆವು. ಏನು ಆಡುವುದಿತ್ತೋ, ಏನು ಆಡಿಕೊಂಡೆವೋ ಗೊತ್ತಿಲ್ಲ. ಆದರೆ ತುಂಬಾ ಮಾತನಾಡುತ್ತಿದ್ದಂತಿತ್ತು.
gandhi bazar mag ba ki naಕೆ ಸತ್ಯನಾರಾಯಣರು ಹೇಳಿದರಲ್ಲ, ಅದು ನಿಜ. ಅವರು ಮುಂದೊತ್ತಿ ಹೋಗಿ ಸೆಳೆದುಕೊಳ್ಳದೆ ಹಿಂದೆ ಸರಿದು ನಿಂತು ಬಿಡಲು ನಿರ್ಧರಿಸಿದ್ದ ಸಜ್ಜನ. ಬದುಕು ಒಂದು ಸ್ಪರ್ಧೆ ಎಂದು ಒಪ್ಪಿಕೊಂಡು ಬಿಟ್ಟಿರುವ ನಮ್ಮ ಕಾಲಕ್ಕೆ ಅವರು ಅರ್ಥವಾಗುವುದು ಕಷ್ಟ.
ಅದೇ ದಿನ ಸರಿಸುಮಾರು ಇದೇ ಬಗೆಯಲ್ಲಿ, ಕೊನೆಯ ಕ್ಷಣ ಭೇಟಿಯಾದ ಇವರಂಥವರೇ ಇನ್ನೊಬ್ಬ ವ್ಯಕ್ತಿ ಪ್ರಹ್ಲಾದ್ ಡಿ. ವಿ. ಸಂಚಯದ ಮೂಲಕ ಇವರು ಕನ್ನಡಕ್ಕೆ ಅರ್ಪಿಸುತ್ತ ಬಂದ ಸ್ವಂತದ ಸಮಯ, ಶ್ರಮ ಮತ್ತು ಹಣ ಯಾವುದೂ ಸಣ್ಣದಲ್ಲ. ಇವರ ಈ ವ್ರತದ ಹಿಂದಿನ ಪ್ರೇರಣೆ, ಸ್ಫೂರ್ತಿ ಮತ್ತು ಉತ್ಸಾಹವನ್ನು ಅದ್ಯಾವ ಶಕ್ತಿ ಪೋಷಿಸುತ್ತಿದೆಯೋ ಅದು ಚಿರಾಯುವಾಗಲಿ!
ಇದೆಲ್ಲ ಯಾಕೆ ನೆನಪಾಗುತ್ತದೆ ಎಂದರೆ, ಬಾಕಿನ ಅವರು ಅಡಿಗರ ಸ್ನೇಹಿತರಾಗಿದ್ದವರು. ಅಡಿಗರ ಕಾಲದ ವಿದ್ಯಾರ್ಥಿಭವನದ ಚರ್ಚಾಕೂಟಕ್ಕೆ ಗಾಂಧಿ ಬಜಾರ್ ಮತ್ತು ಲಿಪಿ ಮುದ್ರಣದ ಕೊಡುಗೆಯೂ ಇದೆ ಎಂದು ಕೇಳಿದ್ದೇನೆ. ಒಂದು ಕಾಲದ ಸಾಹಿತಿ ದಿಗ್ಗಜರಲ್ಲಿ ಹಲವರಿಗೆ ಅದೊಂದು ಕೂಡುತಾಣವಾಗಿತ್ತಂತೆ. ಕೆ ಎಸ್ ನರಸಿಂಹಸ್ವಾಮಿ ಅವರ ಜನ್ಮಶತಮಾನೋತ್ಸವ ಆಚರಿಸುತ್ತ ಅವರ ಸಮಗ್ರದ ಬಗ್ಗೆ ಇವತ್ತು ನಾವು ಓಡಾಡುತ್ತಿದ್ದೇವಲ್ಲ, ಅದನ್ನು ಮೊದಲು ಪ್ರಕಟಿಸಿದ್ದು ಲಿಪಿ ಮುದ್ರಣ.
ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಪೈಯವರ ಮೊದಲ ಕಥಾಸಂಕಲನ (ಬೆರಳ ಗುರುತು) ತಂದಿದ್ದು ಲಿಪಿ ಮುದ್ರಣ. ಇಂಥ ಇನ್ನಷ್ಟು ಮೊದಲ ಹೆಜ್ಜೆಗಳನ್ನು ಬಾ.ಕಿ.ನ. ಇಟ್ಟಿರುವುದು ಸಾಧ್ಯವಿದೆ, ನಮಗೆ ಗೊತ್ತಿಲ್ಲ. ಅವರ ಪ್ರಕಾಶನದ ಹೆಚ್ಚಿನ ಪುಸ್ತಕಗಳು ಇವತ್ತು ಸಿಗುತ್ತಲೂ ಇಲ್ಲ.
ಈ ಬಾ.ಕಿ.ನ. ಅವರು ಗಾಂಧಿ ಬಜಾರ್ ಸುರು ಮಾಡಿದ ಹಿಂದಿನ ಪ್ರೇರಣೆಗಳೇನಿದ್ದಿರಬಹುದು, ಅದನ್ನು ಅವರು ನಡೆಸುತ್ತಾ ಪಡೆದ ಅನುಭವಗಳೇನಿರಬಹುದು, ಅವರ ನಿಕಟವರ್ತಿಗಳಾಗಿದ್ದು ಇದನ್ನೆಲ್ಲ ಕಂಡವರು ಸ್ವಲ್ಪ ಹೇಳಿದರೆ ಅದರಿಂದ ಎಲ್ಲರಿಗೂ ಅನುಕೂಲ. ನಡುವೆ ಗಾಂಧಿಬಜಾರ್ ಪತ್ರಿಕೆಯನ್ನು ಕೊಂಚ ದೊಡ್ಡ ಗಾತ್ರ ಮತ್ತು ಹೆಚ್ಚು ಪುಟಗಳಲ್ಲಿ ಹೊರತರಬೇಕೆಂಬ ಒಂದು ಉತ್ಸಾಹವೂ ಅವರಲ್ಲಿ ಮೂಡಿದ್ದುಂಟು. ಇದೆಲ್ಲ ಕುತೂಹಲಕರ ಮತ್ತು ಕನ್ನಡ ಸಾಹಿತ್ಯ ಪತ್ರಿಕೆಯಗಳ ಹುಟ್ಟು, ಬೆಳವಣಿಗೆ, ಸಾಧನೆ ಮತ್ತು ಅವಸಾನದ ಕುರಿತು ದಾಖಲಾಗಬೇಕಾದ ವಿವರಗಳು. ಇಲ್ಲವಾದಲ್ಲಿ ಗಾಂಧಿಬಜಾರ್ ಬಗ್ಗೆ ಎಲ್ಲಿಯೂ ಯಾವ ವಿವರವೂ ಇಲ್ಲದ ಸ್ಥಿತಿ ಉಳಿಯುತ್ತದೆ.

ಲಂಕೇಶ್ ಜೊತೆ ಬಾ ಕಿ ನ

ಲಂಕೇಶ್ ಜೊತೆ ಬಾ ಕಿ ನ


ಕನ್ನಡದ ಸಾಹಿತ್ಯ ಪತ್ರಿಕೆಗಳು ಯಾವತ್ತೂ ಸಾಂಸ್ಥೀಕರಣಗೊಳ್ಳಲಿಲ್ಲ. ಯಾರೋ ಒಬ್ಬಿಬ್ಬರು ತಳೆದ ಉತ್ಸಾಹವೇ ಅದರ ಯಾವತ್ತೂ ಸ್ಫೂರ್ತಿಯಾಗಿದ್ದುಕೊಂಡು ಬಂದಿದೆ. ಹಾಗಾಗಿಯೇ ಅವು ಯಾವಾಗ ನಿಲ್ಲುತ್ತವೋ, ಪ್ರಕಟವಾಗುತ್ತಿದ್ದರೆ ಯಾವಾಗ ಯಾವ ತಿಂಗಳಿನ ಸಂಚಿಕೆ ಹೊರಬರುತ್ತೋ ಅನಿಶ್ಚಿತವೇ. ಆದರೆ ನನಗೆ ತಿಳಿದ ಮಟ್ಟಿಗೆ ಗಾಂಧಿಬಜಾರ್ ಪ್ರತಿ ತಿಂಗಳ ಕೊನೆಯ ದಿನ ಕೈತಲುಪುತ್ತಿತ್ತು. ವಿಳಾಸದ ಬದಲಾವಣೆಯಾದಾಗಲೆಲ್ಲ ನಾನು ಒಂದೆರಡು ಸಂಚಿಕೆಗಳನ್ನು ಕಳೆದುಕೊಂಡಿದ್ದೇನೆಯೇ ಹೊರತು ಪತ್ರಿಕೆ ನಿಗದಿತವಾಗಿ ಬಂದಿದೆ. ಆದರೆ ಎರಡು ತಿಂಗಳ ಹಿಂದೆ ಗಾಂಧಿ ಬಜಾರ್ ಬಗ್ಗೆ ಮಾತೆತ್ತಿದಾಗ ನಾ ಮೊಗಸಾಲೆಯವರು ಅದೂ ನಿಲ್ಲುತ್ತದೆ ಮಾರಾಯ ಎಂದಿದ್ದರು. “ನಿನ್ನೆ ಮಾತನಾಡಿದ್ದೇನೆ ಅವರ ಜೊತೆ, ಇನ್ನು ಆಗಲ್ಲ, ನಿಲ್ಲಿಸುತ್ತಿದ್ದಾರೆ” ಎಂದು ಬಿಟ್ಟಿದ್ದರು.
ಅದರ ಚಂದಾ ತೀರ ಸಣ್ಣಮೊತ್ತವಾಗಿತ್ತು, ಈಗಲೂ ವಾರ್ಷಿಕ ನೂರ ಇಪ್ಪತ್ತೈದು ರೂಪಾಯಿಗಳಷ್ಟೇ. ಆರೂವರೆ ಕೋಟಿ ಕನಡಿಗರ ನಡುವಿಂದ ಕನಿಷ್ಠ ಐನೂರು ಮಂದಿ ಚಂದಾದಾರರು ಕನ್ನಡಕ್ಕಾಗಿ ಕೈ ಎತ್ತಲಿ, ಅವರು ಕಾಲಕಾಲಕ್ಕೆ ಚಂದಾ ನವೀಕರಿಸಲಿ ಎಂದೆಲ್ಲ ಇವತ್ತು ಹಾರೈಸಬಹುದು, ಯಾಕೆಂದರೆ ನಾವೇ ಆ ಐನೂರರಲ್ಲಿ ಒಬ್ಬರಾಗಲು ಸೋತೆವು ಎಂಬುದು ನಮಗೆಲ್ಲ ಗೊತ್ತಿರುವುದರಿಂದಲೇ.
ಆದರೆ ಬಾಕಿನ ಅವರು ಚಂದಾ ನಂಬಿಕೊಂಡು ಪತ್ರಿಕೆ ನಡೆಸಲಿಲ್ಲ ಎನ್ನುವುದು ಸ್ಪಷ್ಟ. ಸಹಜವಾಗಿಯೇ ಅವರಿಗೆ ಇದು ಈಗ ಕಷ್ಟ, ಈ ಹೊಣೆಗಾರಿಕೆ ತಮ್ಮ ಹೆಗಲಿಗೆ ಭಾರ ಅನಿಸಿರಬೇಕು. ಅವರಿಂದಲೇ ನಾವಾದರೂ ಎಷ್ಟನ್ನೆಲ್ಲ ನಿರೀಕ್ಷಿಸುವುದು, ಕೇವಲ ಫಲಾನುಭವಿಗಳಾಗಿದ್ದು ಬಿಡುವುದು ಸರಿ? ಇನ್ನೆಲ್ಲೊ, ಇನ್ಯಾವುದೋ ರೂಪದಲ್ಲಿ ಗಾಂಧಿಬಜಾರ್ ಮರುಹುಟ್ಟು ಪಡೆಯಬಹುದು, ಸಾಹಿತ್ಯ ವಿಮರ್ಶೆ, ಪುಸ್ತಕ ಪರಿಚಯ, ಪುಸ್ತಕಗಳ ಬಗ್ಗೆ ಮಾತನಾಡುವುದು ಎಲ್ಲ ಕನ್ನಡದ ಜಾಯಮಾನಕ್ಕೆ ಬೇಕು ಅನಿಸಿದರೆ. ಅದು ಕಾಲಕ್ಕೆ ಬಿಟ್ಟ ವಿಚಾರ.
ಆದರೆ ಬಾಕಿನ ಸಾಧನೆಯ ಕುರಿತು ಈಗ ಅವರ ಒಡನಾಡಿಗಳು ವಿವರವಾಗಿ ಬರೆಯಬೇಕೆಂದು ಅಪೇಕ್ಷೆ. ಕರ್ತ್ಯವ್ಯ ಕೂಡ ಅಲ್ಲವೆ? ಇದು ಬಹುಷಃ ಬಾಕಿನ ಅವರ ಎಲ್ಲ ಲಕ್ಷಾಂತರ ಅಭಿಮಾನಿಗಳ ನಿರೀಕ್ಷೆ ಕೂಡ ಎಂದು ಭಾವಿಸುತ್ತೇನೆ. ಅವಧಿ ಮನಸ್ಸು ಮಾಡಲಿ.

‍ಲೇಖಕರು Avadhi

8 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading