ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ‘ಸಂಭಾಷಣೆ’ ಅನ್ನೋದು ದೊಡ್ಡದು ಕನಾ..

ಒಂದು ನಾಟಕ ಇನ್ನೂ ಕಣ್ಣು ಅರಳಿಸುತ್ತಿರುವಾಗಲೇ ಒಂದು ದೊಡ್ಡ ಸಂವಾದ ಆರಂಭವಾಗಿದೆ.

ಕರ್ನಾಟಕ ನಾಟಕ ಅಕಾಡೆಮಿ ನಡೆಸಿದ ಶಿಬಿರದಲ್ಲಿ  ಭಾಗವಹಿಸಿದ ಇಬ್ಬರು

ಹೊಸ ಕಣ್ಣಿನ ನಾಟಕಕಾರ್ತಿಯರು ತಮ್ಮೊಡನೆ ಹಂಚಿಕೊಂಡ ನಾಟಕ ನಂಬಿಕೆಗಳು ಇಲ್ಲಿವೆ 

pratibha nandakumar on a cover

ಇದಕ್ಕೆ ನಮ್ಮ ನಡುವಿನ ದೊಡ್ಡ ಪ್ರತಿಭೆ ಪ್ರತಿಭಾ ನಂದಕುಮಾರ್ ಕೊಟ್ಟ ಪ್ರತಿಕ್ರಿಯೆಯೂ ಇಲ್ಲಿದೆ 

bharathi b v

ಬಿ ವಿ ಭಾರತಿ 

ಸಂಧ್ಯಾ ಬರೀತಿರೋ ನಾಟಕದ ಕೆಲವು ಡೈಲಾಗ್ಸ್ ಹೆವಿ ಅನ್ನಿಸಿ, ಪ್ರೇಕ್ಷಕರಿಗೆ ಅದು ಅರ್ಥವಾಗದೇ ಹೋಗಬಹುದಾ ಅನ್ನುವ ಅನುಮಾನ ಕಾಡಿ, ಅವಳಿಗೆ ಹಾಗೆ ಹೇಳಲು ಹೋದವಳಿಗೆ ಅನ್ನಿಸಿತು –

ಅವರಿಗೆ ಅರ್ಥವಾಗದೇ ಹೋಗಬಹುದು ಅಂದುಕೊಳ್ಳೋದೇ ನಮ್ಮ ಮೂರ್ಖತನವೂ ಆಗಿರಬಹುದು ಅಲ್ಲವಾ ಅಂತ!

ಇದು ಬದುಕಿನ ಒಂದು ಪಾಠವೂ ಹೌದು, ಎದುರಿಗಿರುವ ವ್ಯಕ್ತಿಯ ಬುದ್ದಿವಂತಿಕೆಯನ್ನು ಯಾವತ್ತೂ ತಪ್ಪಾಗಿ ಲೆಕ್ಕ ಹಾಕಬಾರದು …

sandhyarani2

ಎನ್ ಸಂಧ್ಯಾರಾಣಿ 

’ಒಂದು ನಾಟಕದ ಸಂಭಾಷಣೆ ಹೇಗಿರಬೇಕು?’ – ಇವತ್ತು ಬೆಳಗ್ಗೆ Bharathi Bv ನಾನು ಬರೆಯುತ್ತಿರುವ ನಾಟಕದ ಒಂದು ದೃಶ್ಯದ ಸಂಭಾಷಣೆ ಓದಿ ಒಂದು ಸಾಲಿನ ವಿಮರ್ಶೆ ಬರೆದಾಗಿನಿಂದ ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ.

Chandru Alur ಬೇರೆ ’ಭಾರತಿ, ಇದು ಸಂಧ್ಯಾಗೆ ನೀವು ಕೊಡುತ್ತಿರುವ ಸೂಚನೆ’ ಎಂದು ಚುಡಾಯಿಸಿದ್ದಾರೆ!

ನನಗೆ ಒಂದು ಹಳೆಯ ಜನಪದ ಹಾಡು ನೆನಪಾಗುತ್ತಿದೆ. ಮಗಳನ್ನು ಮದುವೆ ಮಾಡಿಕೊಟ್ಟ ಮೇಲೆ ತಂದೆ ಒಮ್ಮೆ ಮಗಳ ಮನೆಗೆ ಹೋಗಿದ್ದಾರೆ. ’ಹೇಗಿದ್ದೀಯಮ್ಮಾ?’ ಎಂದು ಮಗಳನ್ನು ಕೇಳಿದ್ದಾರೆ. ತುಂಬಿದ ಮನೆಯ ಸೊಸೆ, ಎಲ್ಲರೆದುರಿಗೆ ಏನೆಂದಾಳು? ಸುಖವಾಗಿದ್ದೀನಪ್ಪ, ಒಮ್ಮೊಮ್ಮೆ ಮೊಳಕೈಗೆ ಚಿಲಕ ತಾಗಿದಂತಾಗುತ್ತದೆ ಅಷ್ಟೇ ಅಂದಳಂತೆ.

ಅಪ್ಪ ಅರೆರೆ ಅಷ್ಟೇ ತಾನೆ, ಹಾಗಿದ್ದರೆ ನನ್ನ ಮಗಳು ಸುಖವಾಗೇ ಇದ್ದಾಳೆ ಎಂದುಕೊಂಡು ಮನೆಗೆ ಹಿಂದಿರುಗುತ್ತಾರೆ. ಸ್ವಲ್ಪ ದಿನ ಆದ ಮೇಲೆ ಅವರು ಅವಸರದಲ್ಲಿ ನಡೆಯುವಾಗ ಅವರ ಮೊಳಕೈಗೆ ಬಾಗಿಲ ಚಿಲಕ ತಾಕಿತಂತೆ, ’ಮೊಳಕೈಗೆ ಚಿಲಕ ತಾಕಿದ ನೋವು’ ಆಗ ಅವರಿಗೆ ಅರ್ಥವಾಗುತ್ತದೆ.

ಮಾತುಗಳೆಂದರೆ ಹೀಗೆಯೇ. ಅವು ನಮ್ಮ ಅನುಭವಗಳಿಗೆ ತಕ್ಕಂತೆ ನಮಗೆ ಅರ್ಥವಾಗುತ್ತಾ ಹೋಗುತ್ತದೆ. ನಾನು ಅಂಕಣ ಬರೆಯುವಾಗ ಒಮ್ಮೊಮ್ಮೆ ಈ ಅನುಮಾನ ಕಾಡಿದ್ದಿದೆ, ಆಗೆಲ್ಲಾ ನನ್ನ ಸ್ನೇಹಿತ ನೀನು ಬರೆಯಬೇಕು ಎಂದದ್ದನ್ನು ಪ್ರಾಮಾಣಿಕವಾಗಿ ಬರಿ, ಅದು ಓದುವವರಿಗೆ ತಾಕಿಯೇ ತಾಕುತ್ತದೆ ಎಂದಿದ್ದ.

ಅದು ಹಾಗೇ ಆಯಿತು. ನಾಟಕದಲ್ಲಿ ಕಡೆಗೂ ಸಂಭಾಷಣೆಯನ್ನು ನಿರ್ದೇಶಿಸುವುದು ಆಯಾ ಪಾತ್ರಗಳು ಮತ್ತು ಆಯಾ ಸನ್ನಿವೇಶಗಳು ಎನ್ನುವುದು ನನ್ನ ನಂಬಿಕೆ. ಆ ಜನಪದ ಹಾಡಿನಲ್ಲಿ ಅವಳು ತನ್ನ ಕಷ್ಟವನ್ನು ನೇರವಾಗಿ ಹೇಳಿಬಿಟ್ಟಿದ್ದಿದ್ದರೆ ಅದು ಅವಳ ಹಾಡು ಮಾತ್ರ ಆಗುತ್ತಿತ್ತು, ಈಗ ಅದು ಕಾಲದಿಂದ ಕಾಲಕ್ಕೆ ನಮ್ಮೆಲ್ಲರ ಹಾಡೂ ಆಗಿದೆ..

pratibha nandakumar1

ಪ್ರತಿಭಾ ನಂದಕುಮಾರ್ 

ಸಂಭಾಷಣೆ ಬರೆಯುವ ವಿಷಯ ಚರ್ಚಿತವಾಗುತ್ತಿರುವುದರಿಂದ… ..

ಸಂಧ್ಯಾ — ಭಾರತಿ ಹೇಳಿದ್ದು ಮತ್ತು ನೀವು ಹೇಳಿದ್ದು ಬೇರೆ ಬೇರೆ ಸೂಕ್ಷ್ಮಗಳನ್ನು.

ಭಾರತಿ ಹೇಳಿದ ಮಾತು ಎಲ್ಲಾ ಒಳ್ಳೆಯ ಬರಹಗಾರು ವಾಸ್ತವವಾಗಿ ಅನುಸರಿಸುವ ಸಂಗತಿ. ಓದುಗರ ಹಾಗೂ ನೋಡುಗರ ಮನಸ್ಥಿತಿಯನ್ನು ಊಹಿಸಿ ಅದಕ್ಕೆ ತಕ್ಕಂತೆ ಅಥವಾ ಸಾಮಾನ್ಯ ಮಾತಿನಲ್ಲಿ ಹೇಳಬೇಕಾದರೆ ಅವರಿಗೆ ಅರ್ಥವಾಗುವಂತೆ ಬರೆಯಹೊರಟರೆ — ಅಂದರೆ ಭಿನ್ನ ಆಯಾಮಗಳಲ್ಲಿ ನೋಡಿದರೆ ಮಾತ್ರ ಅರ್ಥವಾಗುವಂತೆ ಇರುವುದನ್ನು ಬೇಕಂದೇ ತಿಳಿಗೊಳಿಸಿ – ಸರಳವಾಗಿ ಬರೆಯಲು ನಿರ್ಧರಿಸುವುದು ನಿಜವಾದ ಸೃಜನಾತ್ಮಕ ವ್ಯಕ್ತಿ ಅನುಸರಿಸುವ ಮಾರ್ಗವಲ್ಲ.

ಹಾಗೆ ಬರೆಯುವ ಪ್ರತಿಭೆ ಇಲ್ಲದ ವ್ಯಕ್ತಿ ಮಾತ್ರ ತನ್ನ ಮಿತಿಗೆ ಅನುಗುಣವಾಗಿ ಸರಳವಾಗಿ ಬರೆದು ಮುಗಿಸುತ್ತಾನೆ/ಳೆ. ಕಾಫ್ಕಾ ಮೆಟಮಾರಫ಼ಸಿಸ್ ಬರೆಯುವಾಗ ಓದುಗರ ಮನಸ್ಥಿತಿಯನ್ನು ಪರಿಗಣನೆಯಲ್ಲಿಟ್ಟುಕೊಂಡು ಬರೆಯಲಿಲ್ಲ. ತಿಥಿ ಚಿತ್ರದ ಕೆಲವು ಡಯಲಾಗ್ ಕೆಲವರನ್ನು ಬರೀ ಮೇಲ್ಪದರದಲ್ಲಿ ಮಾತ್ರ ಮುಟ್ಟಿದರೆ ಕೆಲವರಿಗೆ ಅದರಾಚೆ ಮೀರಿ ಇನ್ನೊಂದೇ ಆಯಾಮವನ್ನು ತೆರೆದುಕೊಟ್ಟಿತು.

ಭಾರತಿ “ಅವರಿಗೆ ಅರ್ಥವಾಗದೇ ಹೋಗಬಹುದು ಅಂದುಕೊಳ್ಳೋದೇ ನಮ್ಮ ಮೂರ್ಖತನವೂ ಆಗಿರಬಹುದು ಅಲ್ಲವಾ ಅಂತ!” ಅನ್ನುವುದೇ ಅವರಿಗಾದ ಸಾಕ್ಷಾತ್ಕಾರ.

ಸಂಧ್ಯಾ ” ನಾಟಕದಲ್ಲಿ ಕಡೆಗೂ ಸಂಭಾಷಣೆಯನ್ನು ನಿರ್ದೇಶಿಸುವುದು ಆಯಾ ಪಾತ್ರಗಳು ಮತ್ತು ಆಯಾ ಸನ್ನಿವೇಶಗಳು ಎನ್ನುವುದು ನನ್ನ ನಂಬಿಕೆ” ಅನ್ನುವುದು ಒಂದು ವಾದವಾದರೂ ಅದರ ಹಿಂದೆ ನಾಟಕಕಾರ/ರ್ತಿ ತನ್ನನ್ನೇ, ತನ್ನ ನಂಬಿಕೆ ಸಿದ್ಧಾಂತಗಳನ್ನೇ ಪಾತ್ರಗಳ ಬಾಯಲ್ಲಿ ಹೇಳಿಸುತ್ತಿರುವುದರಿಂದ ಹಾಗೂ ಆ ಸಂಭಾಷಣೆಗಳು ಮತ್ತು ಸಿದ್ಧಾಂತಗಳ ಮೂಲಕವೇ ನಾವು ನಾಟಕಕಾರ / ರ್ತಿ ಯಾ ಮನಸ್ಥಿತಿಯನ್ನು ಅರಿತುಕೊಳ್ಳುವ/ ನಿರ್ಧರಿಸುವ ಪ್ರಕ್ರಿಯೆ ಮಾಡುತ್ತಿರುವುದರಿಂದ ಎಲ್ಲಾ ಸಂಭಾಷಣೆ / ಬರಹಗಳಿಗೂ ಬರೆದಾತ/ಕೆ ಜವಾಬ್ದಾರಿಯಾಗಬೇಕಾಗುತ್ತದೆ.

ಉದಾಹರಣೆಗೆ : ಒಂದು ಸಂದಿಗ್ಧ ಸನ್ನಿವೇಶದಲ್ಲಿ ಸಿಕ್ಕಿಬಿದ್ದಿರುವ ಪಾತ್ರವೊಂದು – ಉದಾ ಆ ಜಾನಪದ ಮಹಿಳೆ – ತನ್ನ ಸ್ಥಿತಿಯನ್ನು ಮುಕ್ತವಾಗಿ ಹೇಳಬೇಕಿತ್ತು ಎಂದು ನಂಬುವ ಫೆಮಿನಿಸ್ಟ್ ಅಥವಾ ಹೀಗೆ ಗೂಢವಾಗಿ ಹೇಳಿದ್ದರಿಂದ ಅದು “ಅವಳ ಹಾಡು ಮಾತ್ರ ಆಗುತ್ತಿತ್ತು, ಈಗ ಅದು ಕಾಲದಿಂದ ಕಾಲಕ್ಕೆ ನಮ್ಮೆಲ್ಲರ ಹಾಡೂ ಆಗಿದೆ..” ಎಂದು ನಂಬುವ ಸಂಧ್ಯಾ ಬರೆಯುವ ಸಂಭಾಷಣೆ ಬೇರೆ ಬೇರೆಯಾಗಿರುತ್ತದೆ ಮತ್ತು ಎರಡೂ ತಮ್ಮ ತಮ್ಮ ನೆಲೆಯಲ್ಲಿ ಸರಿಯೂ , ಔಚಿತ್ಯಪೂರ್ಣವೂ ಆಗಿರುತ್ತದೆ.

ಓದುಗರು ತಮ್ಮತಮ್ಮ ಸಿದ್ಧತೆಯ ನೆಲೆಯಲ್ಲಿ ಅದನ್ನು ಸ್ವೀಕರಿಸಿ ಚರ್ಚಿಸುತ್ತಾರೆ. ಹಾಗಾಗಿ ಒಂದು ಪಠ್ಯವನ್ನು ಚರ್ಚಿಸುವಾಗ ದೇಶ, ಕಾಲ ಮತ್ತು ಅದಕ್ಕೆ ಸಂವಹಿಸುತ್ತಿರುವ ಓದುಗ / ನೋಡುಗ ಸಮುದಾಯ ಎಲ್ಲವೂ ಪರಿಗಣಿತವಾಗುತ್ತದೆ. ಅದಕ್ಕೇ ಪಠ್ಯ ಗಳನ್ನು ಅದರ ಹಾಳೆಯ ಚೌಕಟ್ಟೀನಾಚೆಗೆ ವಿಸ್ತರಿಸಬೇಕೋ ಇಲ್ಲ ಅದರ ಮಿತಿಯೊಳಗೆ ಮಾತ್ರ ಓದಬೇಕೋ ಅನ್ನುವ ವಾದ ಇರುವುದು.

ಮತ್ತೆ ಮೊದಲಿನ ಮಾತಿಗೆ ಬಂದರೆ ರಚಿಸುವ ವ್ಯಕ್ತಿ ತನ್ನ ಅನುಭವ ನಂಬಿಕೆ ಸಿದ್ಧಾಂತಗಳಲ್ಲೇ ಬರೆಯುತ್ತಿರುತ್ತಾನೆ/ಳೆ. ಅದಕ್ಕೇ ನಮಗೆ ಕೆಲವು ನಾಟಕ ಹಾಗೂ ಚಿತ್ರಗಳ ಸಂಭಾಷಣೆ ತೀರಾ ಬಾಲಿಶ ಅಥವಾ ತೀರಾ ಪ್ರೌಢ ಆಗಿದೆ ಅಂತ ಅನ್ನಿಸುತ್ತಿರುವುದು. ಯು ಟರ್ನ್ ಚಿತ್ರದಲ್ಲಿ ಆ ಪತ್ರಕರ್ತೆ ಒಂದು ತನಿಖಾ ವರದಿ ಮಾಡುತ್ತಿದ್ದರೂ ಒಂದೈವತ್ತು ಸಲ ” ನಂಗೇನೂ ಗೊತ್ತಿಲ್ಲ ಸರ್ ” “ಯಾಕೆ ಸರ್” ಅಂತ ಹೇಳುತ್ತಿದ್ದುದು ನೋಡಿ ಅಲ್ಲಿ ಬೇರೆ ಮಾತು ಬರಬೇಕಿತ್ತು ಅಂತ ಅನ್ನಿಸುವುದು ಪತ್ರಿಕೋದ್ಯಮದವರಿಗೆ ಅನ್ನಿಸಿದರೂ ಅದು ತಿಳಿಯದ ಸಾಮಾನ್ಯ ನೋಡುಗ ಅದನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡ.

ಅದೇ ರೀತಿ ಗೋಧಿ ಬಣ್ಣ ಸಾಧಾರಣ … ದಲ್ಲಿ ಒಬ್ಬಳು ಡಾಕ್ಟರ್ ಆಗಿ ಶ್ರುತಿ ಸರಿಯಾಗಿ ಮಾತಾಡಲೇ ಇಲ್ಲ ಬದಲಿಗೆ ನರ್ಸ್ ಅಥವಾ ಆಯಾ ಥರ ಮಾತಾಡುತ್ತಿದ್ದಳು. ಅವಳ ನಡವಳಿಕೆಯೂ ಹಾಗೇ ಇತ್ತು. ಅದಕ್ಕೇ ಒಳ್ಳೆಯ ಸಂಭಾಷಣೆಕಾರರಿಗೆ ತಾನು ಯಾವ ಸಂದರ್ಭಕ್ಕೆ ಬರೆಯುತ್ತಿದ್ದೇನೆ ಅನ್ನುವ ಬಗ್ಗೆ ಸಮಗ್ರ ಅಂದರೆ ಸಮಗ್ರ ಮಾಹಿತಿ ಇರಬೇಕು. ಅದು ಅತೀ ಮುಖ್ಯ.

ಮೊನ್ನೆ ಟ್ರಾಲ್ ಹೈಕಳು ಹಾಕಿದ ಒಂದು ಜೋಕ್ ನಲ್ಲಿ ಕನ್ನಡದ ಒಂದು ಚಿತ್ರದಲ್ಲಿ ಶರತ್ ಬಾಬು ನಾನು ಮೇಲಿನಿಂದ ಕೆಳಗೆ ಬಿದ್ದೆ ಆದಾರು ಅಂಗಾತ ಬಿದ್ದೆ ಕೈಕೊಟ್ಟು ಅಂತ್ ಏನೋ ಹೇಳಿದಾಗ ಡಾಕ್ಟರು ” ನೀವು ಬೆನ್ನು ಕೆಳಗಾಗಿ ಬಿದ್ದಿರುವುದರಿಂದ ನಿಮಗೆ ಮಕ್ಕಳಾಗುವ ಸಾಮರ್ಥ್ಯ ಇಲ್ಲ ” ಅನ್ನುತ್ತಾನೆ!!!! ಇದು ಮಾಹಿತಿಯ ಕೊರತೆ, ಸಿಲ್ಲಿತನ, ನೋಡುಗರು ಮೂರ್ಖರು ಅಂತ ಭಾವಿಸುವ ಉಡಾಫ಼ೆತನ ಎಲ್ಲವೂ ಕಾಣುತ್ತದೆ.

ಪ್ರತಿಯೊಂದು ಸಂಭಾಷಣೆಯನ್ನು ಆಯಾ ಪಾತ್ರ ಆಯಾ ಸಂದರ್ಭದಲ್ಲಿ ಹಾಗೇ ಆಡುತ್ತದೆ ಎಂದು ನೋಡುಗರು ನಂಬುವಂತೆ ಬರೆಯುವುದೇ ಸಂಭಾಷಣೆಕಾರರ ದೊಡ್ದ ಸವಾಲು ಮತ್ತು ಪ್ರತಿಭೆ.

‍ಲೇಖಕರು Admin

21 June, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading