ಈ ಬೆಂಗಳೂರು ನಮಗಲ್ಲ
ಪಾಲಹಳ್ಳಿ ವಿಶ್ವನಾಥ್
ವುಡ್ ಹೌಸರ ‘ ಆಂಟ್ ಅಂಡ್ ದ ಸ್ಲಗರ್ಡ ‘ ಕಥೆಯ ರೂಪಾಂತರ
*
ರಾಕೇಶನ ವಿಷಯದಲ್ಲಿ ಜೀವ್ಸ್ ತಪ್ಪು ಮಾಡಿರಬಹುದು ಎಂಬ ಅನುಮಾನ ಬಂದಿತ್ತು . ಜೀವ್ಸ್ ಗೊತ್ತಲ್ಲ? ನನ್ನ
ಅಡಿಗೆಯವ, ನನ್ನ ಕಾರ್ಯದರ್ಶಿ, ಆಗ ಈಗ ತೊಂದರೆಗಳು ಬಂದರೆ ಅದನ್ನು ನಿವಾರಿಸುವ ಆಪತ್ ಬಾಂಧವ ಕೂಡ ! ಈ
ಪ್ರಕರಣ ಶುರುವಾಗಿದ್ದು ಒಂದು ಬೆಳಿಗ್ಗೆಯೇ ! ನನ್ನ ಜೀವನ ಹೀಗೇ ಆಗಿಬಿಟ್ಟಿದೆ. ನಾನೋ ರಾತ್ರಿ ಬಹಳ ತಡವಾಗಿ
ಮಲಗಿಕೊಳ್ಳುವವನು; ಕ್ಲಬ್ಬು, ಗೆಳೆಯರು ಎಲ್ಲಾ ಆದ ಮೇಲೆ ಟಿವಿಯಲ್ಲಿ ನನ್ನಂತವರಿಗೇ ಮಾಡಿದ್ದ ಹಳೆಯ ಸಿನೆಮಾಗಳು .
ಆದ್ದರಿಂದ ಬೆಳಿಗ್ಗೆ ನಿದ್ರೆ ನನಗೆ ಮುಖ್ಯ. ಆದರೆ ಜನ ಬೆಳಿಗ್ಗೆ ನನ್ನನ್ನು ನಿದ್ದೆ ಮಾಡಲು ಬಿಡುವುದೇ ಇಲ್ಲ. ತಮ್ಮ ತೊಂದರೆ
ಗಳನ್ನು ನನ್ನ (ಅಂದರೆ ಜೀವ್ಸ್) ಮೇಲೆ ಹೊರಿಸುವ ಗೆಳೆಯರಿಗೂ , ಅಗಾಥಾ ಚಿಕ್ಕಮ್ಮ ಎಂದೆನಿಸಿಕೊಂಡಿರುವ
ದುರ್ಗಾವತಿದೇವಿಯವರಿಗೂ ಬೆಳಿಗ್ಗೆಯೇ ಆಗಬೇಕು. ! ಸರಿ,ಈವತ್ತೂ ಯಾರೋ ಬೆಲ್ ಮಾಡುತ್ತಿದ್ದಾರೆ ! ಜೀವ್ಸ್
ಯಾರನ್ನೋ ಕರೆದುಕೊಂಡು ಬಂದು ‘ ಸಾರ್’ ಎಂದ . ಕಣ್ಣು ಬಿಟ್ಟು ನೋಡಿದಾಗ ಇದೇನು ಭ್ರಮೆ ಎಂದುಕೊಂಡೆ. ನನಗೆ
ತಿಳಿದ ಹಾಗೆ ದೂರದಲ್ಲಿ ಕೆಂಗೇರಿಯ ಹತ್ತಿರದ ಹಳ್ಳಿಯಲ್ಲಿ (ಹೆಸರೇ ನೆನಪಿಗೆ ಬರ್ತಾ ಇಲ್ಲ) ಇರಬೇಕಾದ ರಾಕಿ ! ರಾಕೇಶ
ಪಿನಾಕಿ ! ನನ್ನ ತರಹವೇ ಮಧ್ಯಾಹ್ನದ ಮುಂಚೆ ಎದ್ದೇಳದ ಸ್ವಭಾವದವನು !
ರಾಕೇಶ ಒಂದು ರೀತಿಯ ಕವಿ. ಅವನೇ ಹೇಳಿಕೊಳ್ಳುವಂತೆ ಕವಿತೆಯೇ ಅವನ ಆದಿಯಂತೆ, ಅಂತ್ಯವಂತೆ ! ನಿಜ
ಹೇಳಬೇಕೆಂದರೆ ಅವನು ಅಷ್ಟೇನೂ ಬರೆದಿಲ್ಲ. ಯಾವುದೂ ಪ್ರಕಟವಾಗಿಯೂ ಇಲ್ಲ. ಪ್ರಚಾರದಲ್ಲಿ ಅವನಿಗೆ ನಂಬಿಕೆ
ಇಲ್ಲವಂತೆ. ಪ್ರತಿವಾರದ ಮೊದಲ ಎರಡು ದಿನಗಳು ಕವಿತೆಗೆ ಮೀಸಲಾಗಿಡುತ್ತಾನಂತೆ .ಬರೆಯುತ್ತಾನೋ ಇಲ್ಲವೋ
ಮುಖ್ಯವಲ್ಲ. ಬೇರೆಯ ಸಮಯದಲ್ಲಿ ಏನೂ ಮಾಡದವ ( ಅಂದರೆ ನಮ್ಮ ಪ್ರಕಾರ) ನಮ್ಮ ರಾಕಿ. ಒಂದು ದಿನ ಅವನ ಹಳ್ಳಿಗೆ
ಹೋದಾಗ ಹತ್ತಿರದ ಹೂತೋಟದಲ್ಲಿ ಹಾಗೇ ಕುಳಿತಿದ್ದ. . ಏನೋ ಮಾಡ್ತಿದೀಯಾ ಎಂದರೆ ನೋಡು, ಆ ಹೂವು ಅರಳುವು
ದನ್ನೇ ಗಮನಿಸುತ್ತಿದ್ದೇನೆ . ಎಲ್ಲರಿಗೂ ಆ ಸೌಂದರ್ಯೋಪಾಸನೆ ಇದ್ದಿದ್ದರೆ ಎನ್ನಿಸುತ್ತೆ . ಶ್ರೀಮಂತ ತಂದೆತಾಯಿಯರು ,
ಆದರೆ ಅವರು ಅವನ ಚಿಕ್ಕಂದಿನಲ್ಲೇ ತೀರಿಹೋಗಿದ್ದರು. ಅವರ ಹಣವನ್ನೆಲ್ಲಾ ಅವನ ಅತ್ತೆ ( ತಂದೆಯ ತಂಗಿ) ಶಕುಂತಲಾ
ದೇವಿಯವರ ಹತ್ತಿರ ಬಿಟ್ಟರಂತೆ. . ಅವನ ಜೀವನೋಪಾಯಕ್ಕೆ ಎಂದು ಅವನ ಅತ್ತೆ ಪ್ರತಿ ತಿಂಗಳೂ ಹಣ ಕಳಿಸುತ್ತಿದ್ದರು.
ಆದರೆ ಹುಡುಗ ವಿವೇಚನೆಯಿಂದ ಇರಲಿ ಎಂದು ಕಡಿಮೆ ಹಣವನ್ನೇ ಕೊಡುತ್ತಿದ್ದರು. ಅವನೇನೂ ಕೇಳುತ್ತಿರಲಿಲ್ಲವಾದರೂ
ನನ್ನಂಥ ಗೆಳೆಯರು ಅವನ ಸೌಂದರ್ಯೋಪಾಸನೆಯನ್ನು ಮೆಚ್ಚುತ್ತಾ ಆಗ ಈಗ ಸ್ವಲ್ಪ ಹಣ ಕೊಡುತ್ತಿದ್ದೆವು. ಅಂತೂ ರಾಕಿ
ಹೀಗೆ ಆ ಹಳ್ಳಿಯಲ್ಲಿ ತನ್ನ ಜೀವನವನ್ನು ನಡೆಸುತ್ತಿದ್ದ.
ಹೀಗಿದ್ದವನು ಬೆಳಿಗ್ಗೆಯೇ ಬಂದು ನನ್ನ ನಿದ್ದೆ ಹಾಳುಮಾಡುತ್ತಿದ್ದ. ‘ಏನೋ ನಿನ್ನ ಗೋಳು’ ಎಂದು ಕೇಳಿದೆ. “ನೋಡು ಬರ್ಟಿ,
ನೀನು ಕೂಡ ಜೀವ್ಸ್ ! ನನ್ನ ಅತ್ತೆ ಈ ಪತ್ರ ಬರೆದಿದ್ದಾರೆ” ‘ಏನು ಬರೆದಿದ್ದಾರೋ ಓದು ‘ ಎಂದಾಗ ರಾಕೇಶ ಶುರುಮಾಡಿದ.
.” ನನಗೆ ಬೆಂಗಳೂರಿನ ಬಗ್ಗೆ ಇರುವ ಕುತೂಹಲ ನಿನಗೇ ಗೊತ್ತು ! ಅಲ್ಲಿಯ ಜೀವನ ಹೇಗಿರುತ್ತೋ ಎಂದು ನಾನು
ಚಿಕ್ಕವಳಾಗಿದ್ದಿನಿಂದಲೂ ಯೋಚಿಸುತ್ತಲೇ ಇದ್ದೇನೆ. ನಿಮ್ಮ ಸೋದರ ಮಾವನವರನ್ನು ಎಷ್ಟು ಕೇಳಿದರೂ ಅವರು
ಕರೆದುಕೊಂಡು ಹೋಗಲಿಲ್ಲ. ಅಂತೂ ನಾನಾಯಿತು. ನಮ್ಮ ಹೊಲ ಗದ್ದೆ ಗಳಾದವು , ಈ ಪುಟ್ಟೂರು ಆಯಿತು ಅಷ್ಟೇ ನನ್ನ
ಜೀವನ! ಇನ್ನು ಎಷ್ಟು ದಿನ ಎಂದು ನಿನಗೇ ಗೊತ್ತು.” “ ಏನಾಗಿದೆಯೋ ನಿಮ್ಮ ಅತ್ತೆಗೆ’ ಎಂದು ಕೇಳಿದಾಗ ರಾಕೇಶ ‘ ಏನಿಲ್ಲ ,
ಸರಿಯಾಗಿಯೇ ಇದ್ದಾರೆ. . ನಾಟಕ ಆಡದಿದ್ದರೆ ಆವರಿಗೆ ತಿಂದದ್ದು ಜೀರ್ಣವಾಗೋಲ್ಲ, ಸರಿ, ಮುಂದೆ ಓದ್ತೀನಿ “ ಏನೇ ಆಗಲಿ
ನನಗೆ ಸಿಗದಿದ್ದು ನಿನಗಾದರೂ ಸಿಗಲಿ. ಆ ಜೀವನವನ್ನು ನೀನಾದರೂ ಅನುಭವಿಸು . ನಿಮ್ಮತಂದೆ ತಾಯಿಯರ ಹಣದಿಂದ
ನಾನು ನಿನಗೆ ಪ್ರತಿ ತಿಂಗಳೂ ಕಳಿಸುತ್ತಿದೇನಲ್ಲವೆ . ಈಗ ನನ್ನ ಹಣದಿಂದಲೇ ನಾನು ನಿನಗೆ ಸ್ವಲ್ಪ ಭಾಗವನ್ನು ಪ್ರತಿ
ತಿಂಗಳೂ ಕಳಿಸುತ್ತೇನೆ, ನೀನಾದರೂ ಬೆಂಗಳೂರಿಗೆ ಹೋಗಿ ಆ ಭವ್ಯ ನಗರಿಯನ್ನು ಅನುಭವಿಸು. ನೀನು ಈಗ ಇರುವ
ಹಳ್ಳಿಯನ್ನು ಬಿಟ್ಟು ಬೆಂಗಳೂರಿಗೆ ಹೋಗ . ಅಲ್ಲಿರುವ ಖ್ಯಾತ ಹೋಟಲುಗಳಲ್ಲಿ ತಿಂದು ಬಾ. ಥಿಯೇಟರುಗಳಲ್ಲಿ ಸಿನೆಮಾ
ನೋಡಿ ಬಾ, ನಾಟಕಗಳನ್ನು ನೋಡಿ ಬಾ. ಆ ಮಹಾನಗರದ ಜೀವನವನ್ನು ಅನುಭವಿಸು. ಆದರೆ ಒಂದು ಮಾತ್ರ
ಮರೆಯಬೇಡ ಆ ನಿನ್ನ ಅನುಭವಗಳನ್ನು ನನಗೆ ಪ್ರತಿವಾರವೂ ಬರೆದು ತಿಳಿಸು. ಯಾವ ವಿವರವನ್ನೂ ಬಿಡಬೇಡ ಆದಷ್ಟು
ಬೇಗ ಈ ಕೆಲಸವನ್ನು ಮಾಡು –ನಿನ್ನ ಪ್ರೀತಿಯ ಅತ್ತೆ – ಶಕುಂತಲಾದೇವಿ !”
ರಾಕೇಶ ಈ ಕಾಗದ ಓದಿದ ಮೇಲೆ ‘ ಅಲ್ಲ ಕಣೋ ! ಸಂತೋಷ ಪಡಬೇಕು. ನೀನೋ ಅಳತಾ ಇದ್ದೀಯಾ ? ‘ ‘” ಏನು
ಸಂತೋಷ ಬರ್ಟಿ ! ನಿನ್ನ ಬೆಂಗಳೂರು ಯಾರಿಗೆ ಬೇಕು ? ಎಲ್ಲಾ ಕೃತಕ ಜೀವನ ! ಬಣ್ಣದ ಬದುಕು. ಆ ಟ್ರಾಫಿಕ್
ನಿನ್ನಂತಹವರಿಗೇ ಸರಿ ! ನಾನು ನನ್ನ ಹಳ್ಳಿಯನ್ನು ಬಿಟ್ಟು ಬರಲಾರೆ. ಆದರೆ ಇಲ್ಲ ಎಂದರೆ ಆ ನನ್ನ ಅತ್ತೆ ಏನು ಮಾಡ್ತಾರೋ
ಗೊತ್ತಿಲ್ಲ . ಕಳಿಸ್ತಾ ಇರೋ ದುಡ್ಡೂ ಹೋಗಬಹುದು ಈಗ ಜೀವ್ಸ್ ಏನು ಮಾಡೋಣ? “. ಹಾಗೇ ನಾವು ಯೋಚಿಸ್ತಾ
ಕುಳಿತಿದ್ದಾಗ ಜೇವ್ಸ್ “ ಸಾರ್,ಒಂದೇ ಉಪಾಯ ಹೊಳೀತಾ ಇದೆ. ಯಾರಾದರೂ ಬೇರೆಯವರು ಈ ಊರಿನ
ವೈಭವಗಳನ್ನೆಲ್ಲಾ ನೋಡಿದ ಹಾಗೆ ಪ್ರತಿವಾರವೂ ಶಕುಂತಲಾದೇವಿಯವರಿಗೆ ಬರೆಯುವುದು “ ‘ ಸರಿಯಾ ರಾಕೇಶ? “
ಎಂದು ಕೇಳಿದೆ. ಆದರೆ ಬರೆಯುವರು ಯಾರು? ‘ “ ಇನ್ನು ಯಾರು ಜೀವ್ಸ್ ಬರೀಬೇಕಾಗುತ್ತೆ “ . ಜೀವ್ಸ್ ಒಪ್ಪಿಕೊಂಡ .
ಸರಿ, ಶಕುಂತಲಾದೇವಿಯವರಿಗೆ ರಾಕೇಶನಿಂದ ( ಅಂದರೆ ಜೀವ್ಸ್ ಇಂದ) ಪತ್ರಗಳು ಹೋಗಲು ಶುರುವಾಯಿತು. “ ಅತ್ತೆ,
ಈವತ್ತು ಗಾಂಧಿಬಜಾರಿನ ವಿದ್ಯಾ ಭವನ ಎಂಬ ಹೊಟೇಲಿಗೆ ಹೋಗಿದ್ದೆ. ಒಳಹೋಗಲು ಬಹಳ ಜನ ಕಾದಿದ್ದರು ತಿರುಪತಿ
ನೆನಪಿಗೆ ಅಂದಿತು. ಒಳಗೆ ಹೋದರೆ ಗೋಡೆಯ ಮೇಲೆಲ್ಲಾ ಗಣ್ಯರ ಚಿತ್ರಗಳು! ದೋಸೆಯೋ ! ನಾನು ಹೇಳುವುದಿಲ್ಲ. ನೀನೇ
ಬಂದು ತಿನ್ನಬೇಕು” ಎಂದು ಮೊದಲ ಪತ್ರ ಹೋಯಿತು “ ಈವತ್ತು ಕೂಕೂ ಮಾಲ್ ಗೆ ಹೋಗಿದ್ದೆ. ಹೇಗೆ ಬಣ್ಣಿಸಲಿ ಅತ್ತೆ ಈ
ಅಂಗಡಿಗಳ ಸೊಬಗನ್ನು ! ದೇವೇಂದ್ರ ಇದನ್ನು ನೋಡಿ ನಾಚಿ ತನ್ನ ಅಮರಾವತಿಯ ಸುಂದರಿಕರಣಕ್ಕೆ ಹೋಗಬೇಕಾಗುತ್ತದೆ
“ : ಅತ್ತೆ ಈವತ್ತು ಲಾಲ್ಬಾಗಿನ ( ಅದರ ಬಗ್ಗೆ ಇನ್ನೊಂದು ದಿನ) ಹತ್ತಿರದ ಟಿಫಿನ್ ರೂಂ ಎಂಬ ಹೋಟೆಲಿಗೆ ಹೋಗಿದ್ದೆ.
ಇಲ್ಲಿಯೇ ಬಹಳ ಹಿಂದೆ ರವೆ ಇಡ್ಲಿ ಹುಟ್ಟಿತಂತೆ , ಇಲ್ಲಿಯ ದೋಸೆಯೂ ವಿಶ್ವ ವಿಖ್ಯಾತ . ದೆಹಲಿಗೆ ಯಾರಾದರೂ ಹೊರಗಿನ
ನಾಯಕ ನಾಯಕಿಯರು ರು ಬಂದರೆ ಅವರಿಗೆ ಇಲ್ಲಿಂದಲೇ ದೋಸೆಯ ಸ್ಸರಬರಾಜು !” “ ಅತ್ತೆ ! ನೀನು ವಿಧಾನ
ಸೌಧನೋಡಲೇ ಬೇಕು. ಯಾವ ಅರೆಮನೆಗೂ ಕಡಿಮೆಯಿಲ್ಲ. ಅದರಲ್ಲಿ ಕೂರುವರು ಯಾವ ರಾಜರಿಗೂ ಕಡಿಮೆಯಿಲ್ಲ “ “
ಕೋಶ ಎಂಬ ಹೊಟೇಲಿದೆ. ಹಿಂದಿನಕಾಲದ ಹೋಟೆಲು. ಆಂಗ್ಲ ಅಧಿಕಾರಿಗಳೆಲ್ಲಾ ಹೋಗುತ್ತಿದ್ದಾರಂತೆ . ಆಮೇಲೆ ಸ್ವತಂತ್ರ
ಭಾರತದ ಗಣ್ಯರೆಲ್ಲಾ ಹೋಗುತ್ತಿದ್ದರಂತೆ. ಲೇಖಕರು,ಕಲಾವಿದರು ಎಲ್ಲಾ ಅಲ್ಲಿ ಸೇರುತ್ತಾರೆ. ನೀನು ಅಲ್ಲಿಯ ಕಾಫಿ
ಕುಡಿಯಲೇ ಬೇಕು “ “ ರಂಗ ಎನ್ನುವ ನಾಟಕಗೃಹವಿದೆ. ಅಲ್ಲಿ ನಾಟಕನೋಡುವುದೇ ಬೇರೆಯ ಅನುಭವ ! “ ಇದೆಲ್ಲಾ
ಬರೆದ ಜೀವ್ಸ್ ತಾನೇ ಎಲ್ಲಾ ಕಡೆಗೂ ಹೋಗಿದ್ದನೇ ಎಂಬ ಸಂದೇಹ ಹುಟ್ಟಿದಾಗ ’ ಇಲ್ಲ, ಸಾರ್ ಅಲ್ಲಿಇಲ್ಲಿ ಓದಿ ಊಹಿಸಿ
ಬರೆದಿರುವುದು ‘ ಎಂದ. ಇದೆಲ್ಲಾ ನಡೆಯುತ್ತಿದ್ದಾಗ ರಾಕೇಶ ಅವನ ಹಳ್ಳಿಯಲ್ಲಿ ಹೂವುಗಳು ಅರಳುವುದನ್ನು ನೋಡುವುದರಲ್ಲಿ
ಜೀವನವನ್ನು ಕಳೆಯುತ್ತಿದ್ದ .
ಹೀಗೇ ಒಂದು ಮಧ್ಯಾಹ್ನ ತೂಕಡಿಸುತ್ತಿದ್ದಾಗ ಮನೆಯ ಕಾಂಪೌಂಡ್ ಗೇಟ್ ಶಬಡವಾಯಿತು. ಯಾರೋ ಒಂದಿಬ್ಬರು ಧಡೂತಿ
ವ್ಯಕ್ತಿಗಳು ಬರುತ್ತಿರುವ ಹಾಗೆ ನೆಲ ಕಂಪಿಸುತ್ತಿತ್ತು. ಜೀವ್ಸ್ ನೋಡು ಎಂದಾಗ “ ನಾನು ಶಕುಂತಲಾದೇವಿ. ರಾಕೇಶ ಪಿನಾಕಿಯ
ಅತ್ತೆ, ಇದು ಅವನ ಮನೆ ತಾನೇ ?” ಎಂದು ಗಡಸು ಧ್ವನಿಯ, ಎತ್ತರ ಮತ್ತು ತೂಕ ಹೆಚ್ಚೇ ಇದ್ದ ಹಿರಿಯ ಸ್ತ್ರೀಯೊಬ್ಬರು ಒಳಗೆ
ಬಂದರು. ‘ ಹೌದು ಕುಳಿತು ಕೊಳ್ಳಿ ‘ ಎಂದು ಜೀವ್ಸ್ ಅವರನ್ನು ಕೂರಿಸಿ ಒಳ ಬಂದ ‘ ಸಾರ್ ಶಕುಂತಲಾದೇವಿಯವರು !’ .
ಹೊರಗೆ ಬಂದು ನಮಸ್ಕಾರ ಹೇಳಿದೆ “ ನೀನು ರಾಕೇಶನ ಸ್ನೇಹಿತನಿರಬೇಕು. ಅವನೆಲ್ಲಿ ? ನೀನು ಯಾರು ? “ ಪರಿಚಯ
ಮಾಡಿಕೊಂಡೆ . ಅವರು ನನ್ನನ್ನು ನೋಡಿದ ರೀತಿ ಹೇಗಿತ್ತು ಎಂದರೆ ರಾಕೇಶ ಯಾವನೋ ಬೀದಿಯಲ್ಲಿ ಹೋಗುವನನ್ನು ತಂದು
ಮನೆಯಲ್ಲಿ ಇರಿಸಿಕೊಂಡಿದ್ದಾನೆ ಎನ್ನುವ ತರಹ ಇತ್ತು. ಮಾತು ಬದಲಾಯಿಸಲು ‘ ಕಾಫಿ ಕುಡಿಯುತ್ತೀರಾ ಪಾಪ ದೂರದಿಂದ
ಬಂದಿದ್ದೀರಾ ! ನಾನೂ ಜೀವ್ಸ್ ಗೆ ಹೇಳಿ ಬರುತ್ತೇನೆ” ಎಂದು ಒಳಗೆ ಹೋದೆ. ಜೀವ್ಸ್ ಎಲ್ಲಾ ಕೇಳಿಸಿಕೊಂಡಿದ್ದ. “ಸಾರ್,ರಾಕೇಶ
ಪಿನಾಕಿಯವರ ಪತ್ರಗಳೆಲ್ಲಾ ಈ ವಿಳಾಸದಿಂದಲೇ ಅಲ್ಲವೇ ಹೋಗಿರುವುದು !ಆದ್ದರಿಂದಲೇ ಅವರು ಇದು ರಾಕೇಶರ ಮನೆ ಅಂತ
ತಿಳಿದಿದ್ದಾರೆ .‘ ಎಂದು ಹೇಳಿದ . ಮತ್ತೆ ನಾನು ವರಾಂಡಗೆ ಹೋಗಿ ‘ ನೀವು ಬಂದಿದ್ದು ಆಶ್ಚರ್ಯ ! ‘ ಎಂದೇ ಅದಕ್ಕೆ ಅವರು “
ಆಶ್ಚರ್ಯ ಏಕೆ ? ನನ್ನ ಸೋದರಳಿಯನನ್ನು ನೋಡೋಕೆ ಅವನ ಮನೆಗೆ ಬಂದಿದೀನಿ. ಅದಿರಲಿ ಆ ರಾಕೇಶನ ಆಳಿಗೆ ಹೇಳು
ನನ್ನ ಸಾಮಾನೆಲ್ಲ ಒಳಗ ತೆಗೆದುಕೊಂಡು ಹೋಗಲು ‘ ದೂರದಿಂದ ಜೀವ್ಸ್ ಗೋಣಗಿಕೊಳ್ಳುತ್ತಿದ್ದು ಕೇಳಿಸಿತು. ‘ ನೀನು
ಯಾರಪ್ಪ? ಗೆಳಯ ಇರಬಹುದು ಆದರೆ ನಿನ್ನದೇ ಮನೆ ಅನ್ನೋ ತರಹ ಆಡ್ತಾ ಇದ್ದೀಯಲ್ಲ ! ಅದೂ ಮಧ್ಯಾಹ್ನ ನಿದ್ರೆ ಬೇರೆ
ಕೆಟ್ಟ ಅಭ್ಯಾಸ! “ ರಾಕೇಶನ ಜೊತೆ ಇರಲು ಬಂದಿದ್ದೆ ‘ ಅಂದೆ. ಈಗ ನಾನೂ ಬಂದಿದೀನಲ್ಲ, ನೀನು ಬಟ್ಟೆ ಎಲ್ಲ ತೊಗೊಂಡು
ನಿಮ್ಮ ಮನೇಗೆ ಹೊರಟುಹೋಗು’ ಜೀವ್ಸ್ ಎಲ್ಲಾ ಕೇಳಿಸಿಕೊಂಡಿದ್ದು ಒಳಗೆ ನನ್ನ ಪೆಟ್ಟಿಗೆಯಲ್ಲಿ ಬಟ್ಟೆ ಜೋಡಿಸತಾ ಇದ್ದ .
“ ಏನಿದು ಜೀವ್ಸ್ ? ನಾನು ಎಲ್ಲಿಗೆ ಹೋಗಲಿ ? ‘ ‘ ರಾಕೇಶ ಪಿನಾಕಿಯವರಿಗೋಸ್ಕರ ತಡೆದುಕೊಳ್ಳಿ ಸಾರ್, ನಾನು ನಿಮಗೋಸ್ಕರ
ಒಂದು ಹೊಟೇಲಿಯಲ್ಲಿ ರೂಂ ರಿಸರ್ವ್ ಮಾಡೀದೀನಿ’ ಎಂದ ! ನನ್ನ ಪೆಟ್ಟಿಗೆ ಹೊರ ತಂದಿಟ್ಟ. ಆಟೋ ಬಂದಿತು. ಬರ್ತೀನಿ
ಜೀವ್ಸ್ ಎಂದೇ.’ ಆಗಲಿ , ಹೋಗಿ ಬನ್ನಿ ಸಾರ್ ‘ ಬೀಳ್ಕೊಡುಗೆಗಳು ಕಷ್ಟ ಅಲ್ವೇ? ಹಿಂದಿನವರು ಹೇಳ್ತಿದ್ದರಂತೆ ಜೀವನದಲ್ಲಿ
ಸಣ್ಣ ಪುಟ್ಟ ನೋವುಇರಲೇ ಬೇಕು. ಅದರಿಂದ ಮನುಷ್ಯ ಬೆಳೀತಾನಂತೆ.
ಪ್ರತಿ ದಿನ ರಾಕಿ ನನ್ನ ಕಾರಿನಲ್ಲಿ ಅವನ ಅತ್ತೆಯನ್ನು ಅಲ್ಲಿ ಇಲ್ಲ ಕರೆದುಕೊಂಡು ಹೋಗಲು ಪ್ರಾರಂಭಿಸಿದ. ಆವನಿ ಗೆ ಕಾರು
ಚಲಿಸಲು ಗೊತ್ತಿರಲಿಲ್ಲವಾದ್ದರಿಂದ ಜೇವ್ಸ್ ಅವರ ಚಾಲಕನಾಗಿ ಕೆಲಸ ಮಾಡಬೇಕಾಯಿತು. ಮೂವರೂ ಮಹಾನಗರದಲ್ಲಿ
ಎಲ್ಲ ಕಡೆ ಓಡಾಡಿದರು . ಶಕುಂತಲಾ ದೇವಿಯವರಿಗೆ ಉತ್ಸಾಹವೋ ಉತ್ಸಾಹ . ಹಲವಾರು ಖ್ಯಾತ ಹೋಟೆಲುಗಳಲ್ಲಿ
ತಿಂದರು, ಹಲವಾರು ಪ್ರಸಿದ್ಧ ಸಭಾಗೃಹಗಳಲ್ಲಿ ಸಿನೆಮಾ , ನಾಟಕ ನೋಡಿದರು. ವಿಧಾನ ಸೌಧದ ಒಳಗೂ ( ಅವರನ್ನು
ನೋಡುತ್ತಲೇ ದ್ವಾರಪಾಲಕರು ಸೆಲ್ಯೂಟ್ ಹೊಡೆಯುತ್ತಾ ಒಳ ಬಿಟ್ಟರು) ಹೋಗಿಬಂದರು . ಹೀಗೆ ಅವರು ಖುಷಿಯಾಗಿದ್ದರು,
ಆದರೆ ರಾಕೇಶ್ ಮತ್ತು ನಾನು ದು:ಖದಲ್ಲಿದ್ದೆವು. ರಾಕೇಶನಿಗೋ ಇವು ಯಾವುದೂ ಬೇಕಿರಲಿಲ್ಲ, ನನಗೋ ಎಷ್ಟು ದಿನ
ಹೋಟೆಲಿನಲ್ಲಿ ವಾಸ ! ಅದಲ್ಲದೆ ನನ್ನದೇ ಕೆಲಸ ಮಾಡಿಕೊಂಡು ಸುಸ್ತಾಗಿ ಬಿಟ್ಟಿತ್ತು
” ಏನಾದರೂ ಉಪಾಯ ಮಾಡಲೇಬೇಕು ನೀನು ಜೀವ್ಸ್” ಎಂದೆವು. ಅವನು ತಲೆ ಕೆರೆದುಕೊಂಡು ” ನೋಡ್ತೀನಿ ಸರ್,
ಪ್ರತಿ ಸಂಜೆ ನೀವೆಲ್ಲಾ ಇಲ್ಲಿ ಸೇರಿ ಇಸ್ಪೀಟು ಆಡಿಕೊಂಡು ಸ್ವಲ್ಪ ಗಲಾಟೆಮಾಡಿ “ಎಂದ ಸರಿ, ನಾನು ಎಲ್ಲರನ್ನೂ ಕರೆದೆ.
ಸಂಜೆ ನನ್ನ ಅಂದರೆ ರಾಕೇಶನ ಮನೆಯಲ್ಲಿ ಸಂಧಿಸಲು ಶುರುಮಾಡಿದೆವು, ಜೀವ್ಸ್ ಶಕುಂತಲ ದೇವಿಯವರನ್ನು ತಿಲಕ್
ಇನ್ಸ್ಟಿಟ್ಯೂಟಿನ ಪ್ರವಚನಗಳೀ ಕರೆದುಕೊಂಡು ಹೋಗಲು ಪಾರಂಭಿಸಿದ. ‘ ಈ ಮಹಾನುಭಾವರು ಭಗವದ್ಗೀತೆ ಮೇಲೆ ಒಂದು
ದೊಡ್ಡ ಪುಸ್ತಕವನ್ನೇ ಬರೆದಿದ್ದಾರೆ ‘ ಎಂದು ತಿಲಕರ ಪರಿಚಯ ಮಾಡಿಸಿದ್ದ. ಅಲ್ಲಿ ಹೋಗಿ ಬರುತ್ತಾ ನಿಧಾನವಾಗಿ ಅವರಲ್ಲಿ
ಏನೋ ಬದಲಾವಣೆ ಶುರುವಾಯಿತು. ಒಂದು ದಿನ ಜೀವ್ಸ್ ಅವರನ್ನು ‘ ಎಂಜಿ ರೋಡಿಗೆ ಹೋಗೋಣವಾ. ಮೇಡಂ ‘ ಎಂದು
ಕೇಳಿದ. ಶಕುಂತಲಾದೇವಿ “ ಬೇಡ ಜೀವಯ್ಯ, ಶಂಕರ ಮಠದ ಕಡೆ ಹೋಗಿ ಬರೋಣ” ಎಂದರು . ಶಕುಂತಲಾ
ದೇವಿಯವರ ಚಹರೆಯೇ ಬದಲಾಗುತ್ತ ಬಂದಿತು . ಹಿಂದೆ ರಜಸ್ಸು ತುಂಬಿದ್ದ ಮುಖದಲ್ಲಿ ಚೂರು ಸಾತ್ವಿಕ ಖಳೆ
ಕಾಣಿಸಿಕೊಳ್ಳಲು ಶುರುವಾಯಿತು.
ಪ್ರತಿ ಸಂಜೆ ನಾವು ರಾಕೇಶನ (ಅಂದರೆ ನನ್ನ ) ಮನೆಯಲ್ಲಿ ಸೇರಿ ಇಸ್ಪೀಟು ಆಡಲು ಶುರುಮಾಡಿದ್ದೆವಲ್ಲವೇ! ನಾವು
ಅಂದರೆ ರಾಕೇಶ,ನಾನು, ಬಿಂಗೋ, ಗಸ್ಸಿ, ಕಾರ್ಕಿ! ಪಾನೀಯಗಳೂ ಇದ್ದವು, ಸ್ವಲ್ಪ ಹೆಚ್ಚೇ ಗಲಾಟೆಮಾಡುತ್ತಿದ್ದೆವು.
ಅದನ್ನೆಲ್ಲಾ ನೋಡಲಾರದೇ ಶಕುಂತಲದೇವಿಯವರು ಮನೆ ಬಿಟ್ಟು ಹೋಗುತ್ತಿದ್ದರು. ಆದರೆ ಕಡೆಗೂ ಅವರಿಗೆ
ತಡೆಯಲಾಗಲಿಲ್ಲ ಎಂದು ಕಾಣುತ್ತೆ. ಬೆಳಿಗ್ಗೆ ಬೆಳಿಗ್ಗೆಯೇ ಜೀವ್ಸ್ ಗೆ ಅವರ ಸಾಮಾನನ್ನು ಕಟ್ಟಿಡಲು ಹೇಳಿದರು. ಇನ್ನೂ
ಮಲಗಿದ್ದ ರಾಕೇಶನನ್ನು ಎಬ್ಬಿಸಿ ಒಂದು ಭಾಷಣವನ್ನೇ ಕೊಟ್ಟುಬಿಟ್ಟರು :
” ರಾಕೇಶ ! ನಮಗೆ ಈ ಬೆಂಗಳೂರು ಜೀವನ ಸಾಕು 1 ನೀನು ಇಲ್ಲೇ ಇದ್ದರೆ ನಿನ್ನ ಒಳ್ಳೆಯ ಗುಣಗಳನ್ನೆಲ್ಲಾ ಕಳೆದುಕೊಂಡು
ಈ ನಿನ್ನ ಸ್ನೇಹಿತರ ತರಹ ಆಗಿಬಿಡುತ್ತೀಯ ! ಭೂತಕನ್ನಡಿ ಹಿಡಿದು ಹುಡುಕಿದರೂ ಇವರಲ್ಲಿ ಮನುಷ್ಯನನ್ನು ಪ್ರಾಣಿ ಜಾತಿಯ
ಮೇಲೆ ಇರಿಸಿರುವ ಒಂದು ಗುಣವೂ ಕಾಣಿಸುವುದಿಲ್ಲ. ಬರ್ಟಿ,ಬಿಂಗೋ ಗಸ್ಸಿ, ಕಾರ್ಕಿ ! ಏನು ಹೆಸರುಗಳೋ ! ಇವರನ್ನು ಏಕೆ
ಬಯ್ಯಬೇಕು? ಈ ಊರೇ ಹಾಗಿದೆ ! ಎಲ್ಲಾ ಅತಿ ಅತಿ ! ಬೆಂಗಳೂರು ಅವರ ಮೇಲೆ ಮಾಡಿರುವ ಪ್ರಭಾವದಿಂದ ಇವರೆಲ್ಲ
ದಾರಿ ತಪ್ಪಿದ್ದಾರೆ. ಬೇಡ ! ಈ ಊರಿನ ಹೋಟೆಲುಗಳು, ಸಿನೆಮಾಗಳು ಮಾಲ್ ಗಳು ಎಲ್ಲಾ ಅವರೇ ಇಟ್ಟುಕೊಳ್ಳಲಿ. ನಾವು
ನಮ್ಮ ಪುಟ್ಟ ಪ್ರಪಂಚಕ್ಕೆ ವಾಪಸ್ಸು ಹೋಗೋಣ. ನೀನು ನಿನ್ನ ಕಿರಿಗ್ರಾಮಕ್ಕೆ,ನಾನು ನನ್ನ ಪುಟ್ಟೂರಿಗೆ ! ಹಣದ ಯೋಚನೆ
ಬೇಡ ಈಗಿನ ತರಹವೇ ಕಳಿಸಿಕೊಡುತ್ತೇನೆ. ನೀನು ನಿನ್ನ ಸೌಂದರ್ಯೋಪಾಸನೆಯನ್ನು ಮುಂದುವರಿಸು. ಆಗ ಈಗ
ಕವಿತೆಗಳನ್ನು ಬರೆ. ಅಥವಾ ಬರೆಯದಿರು. ಆದರೆ ನಿನ್ನ ಶೀಲವನ್ನು ಕಾಪಾಡಿಕೊ! ಈ ದೊಡ್ಡ ಊರುಗಳು ನಮಗೆ ಬೇಡ!
ಅವುಗಳ ಅತಿರೇಕಗಳ ಅರ್ಥ ನನಗೆ ಈಗ ಆಗುತ್ತಿದೆ. ನಾನು ನನ್ನ ಉಳಿದ ಸಮಯವನ್ನು ನಮ್ಮ ಊರನ್ನು ಸುಧಾರಿಸಲು
ನೋಡುತ್ತೇನೆ. ಹಾಗೂ ಈ ಕೊಳಕಿನ ಮಧ್ಯೆ ಮಾಣಿಕ್ಯ ಒಂದಿದೆ ಇದೆ. ಅದೇ ಈ ಜೀವಯ್ಯ ! ನನ್ನ ಜೊತೆ ಬಂದಿರಲು
ಕೇಳಿದೆ, ಹೆಚ್ಚ್ಚು ಹಣ ಕೊಡ್ತೀನಿ ಎಂದೇ, ಅವನು ಒಪ್ಪಲಿಲ್ಲ. ಸಾಧ್ಯವಾದರೆ ನೀನು ಅವನನ್ನು ನಿನ್ನ ಹಳ್ಳಿಗೆ ಕರೆದುಕೊಂಡು
ಹೋರಟುಹೋಗಿಬಿಡು . ಈಗ ಬಾ. ನನ್ನನ್ನು ರೈಲು ಹತ್ತಿಸು “
ಕಡೆಯಲ್ಲಿ ನನ್ನನ್ನು ಒಂದು ರೀತಿಯ ಕರುಣೆಯಿಂದ ( ‘ ನಿನ್ನಂಥವರೂ ಇದ್ದಾರಲ್ಲ ಈ ಪ್ರಪಂಚದಲ್ಲಿ ‘) ನೋಡಿ
ಶಕುಂಲಾದೇವಿ ಮನೆಯಿಂದ ಹೊರಹೋದರು. ಸರಿ, ನಾನು ನನ್ನ ಮನೆಗೇ ವಾಪಸ್ಸು ಬಂದೆ ! ಮಧ್ಯಾಹ್ನ ಒಳ್ಳೆಯ ನಿದ್ರೆ
ಮಾಡಿ . ಸಂಜೆ ರಾಕೇಶನನ್ನು ಅವನ ಹಳ್ಳಿಯಲ್ಲಿ ಬಿಡಲು ನಾವು ಮೈಸೂರು ರೋಡಿನ ಕಡೆ. ಹೊರಟೆವು. ಜೀವ್ಸ್ ನ್ನು
ಕೇಳಿದೆ ‘ ಶಕುಂತಲಾದೇವಿ ನಿನ್ನನ್ನು ಅವರೂರಿಗೆ ಕರೆದಿದ್ದರೆ ?’ ಅವನು ಹೂ ಎಂದ . ‘ ಎಷ್ಟು ಕೊಡ್ತೀನಿ ಎಂದರು ? ‘ ‘ ಬಿಡಿ
ಸಾರ್ ! ಇಲ್ಲ, ಪರವಾಯಿಲ್ಲ ಹೇಳು ಎಂದಾಗ ‘ ಈಗಿನ ಎರಡರಷ್ಟು’ ಎಂದ ಜೀವ್ಸ್. ;ಆಯಿತು ಎಂದೆ . “ ಎಡಗಡೆ ನೋಡಿ
ಸಾರ್ , ಅಲ್ಲಿ ವೃಷಭಾವತಿ ಹರೀತಾ ಇದೆ ‘ ಎಂದ ಜೀವ್ಸ್ !
( ವುಡ್ ಹೌಸರ ‘ ಆಂಟ್ ಅಂಡ್ ದ ಸ್ಲಗರ್ಡ ‘ ಕಥೆಯ ರೂಪಾಂತರ – ಅಲ್ಲಿಯ ನ್ಯೂಯಾರ್ಕ್, ಇಲ್ಲಿಯ ಬೆಂಗಳೂರು’ )






0 Comments