ಈ ಪ್ರಶ್ನೆ ಕೇಳಿ ಸಾಯಿನಾಥ್ ಮಾತು ಮುಗಿಸಿದರು..

ಪಿ ಸಾಯಿನಾಥ್ ಎನ್ನುವ ಮಾಧ್ಯಮ

pa sainath sandhyarani

ಎನ್ ಸಂಧ್ಯಾರಾಣಿ 

ನಿನ್ನೆ ವಿಧಾನ ಸೌಧದ ಬಾಂಕ್ವೆಟ್ ಹಾಲ್ ಕಡೆಗೆ ಬೆಂಗಳೂರಿನ ಸುಮಾರು ರಸ್ತೆಗಳು ಪ್ರಯಾಣ ಬೆಳೆಸಿದ್ದವು.  ೨೦೧೪ ಹಾಗೂ ೨೦೧೫ನೇ ಸಾಲಿನ ಮಾದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಪಿ ಸಾಯಿನಾಥ್ ಎನ್ನುವ ಮಾಧ್ಯಮ ಲೋಕದ ಮಾಧ್ಯಮವನ್ನು ನೋಡುವ, ಅವರ ಮಾತುಗಳನ್ನು ಕೇಳುವ ಅವಕಾಶ.  ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಮಾಧ್ಯಮ ಜಗತ್ತಿಗೆ ಸೇರಿದವರಷ್ಟೇ ಅಲ್ಲ, ಜಗತ್ತನ್ನು ನೋಡಲು ಹೊಸ ನೋಟ ಬೇಕು ಎಂದು ಆಶಿಸುವ ಎಲ್ಲಾ ಸಮಾನಮನಸ್ಕರೂ ಅಲ್ಲಿ ಸೇರಿದ್ದರು.

ಪಿ ಸಾಯಿನಾಥ್ ಎಲ್ಲರೂ ಬರೆಯುವ ಭಾರತದ ಬಗ್ಗೆ ಬರೆದವರಲ್ಲ.  ವರ್ಷಗಟ್ಟಲೆ ನಗರವನ್ನು ಮರೆತು, ಪಟ್ಟಣಗಳನ್ನು ತೊರೆದು ಹಳ್ಳಿಗಾಡಿನಲ್ಲಿ, ಗುಡ್ಡಗಾಡಿನಲ್ಲಿ ಬದುಕುಗಳನ್ನು ಹುಡುಕಿಕೊಂಡು ಅಲೆದವರು.  ಹಾಗೆ ಹೊರಟ ಸಾಯಿನಾಥ್ ಒಂದು ಕೈಯಲ್ಲಿ ಕ್ಯಾಮೆರಾ ಮತ್ತೊಂದು ಕೈಯಲ್ಲಿ ಲೇಖನಿ ಹಿಡಿದುಕೊಂಡು ನಮ್ಮೆಲ್ಲರಿಗೂ ತೋರಿಸಿದ ಭಾರತ ದರ್ಶನ ನಾವೆಂದೂ ಮರೆಯಲಾಗದ್ದು.

ಅಲ್ಲಿ ಪೇಜ್ 3 ರ  ರಂಗುರಂಗಿನ ಲೋಕವಿರಲಿಲ್ಲ, ಪೇಜ್ ಒಂದರ ರಾಜಕೀಯವಿರಲಿಲ್ಲ, ಪೇಜ್ ಎರಡರ ಕ್ರೈಮ್ ಇರಲಿಲ್ಲ, ಕಡೆಯ ಪುಟದಲ್ಲಿನ ಆಟವೆಂಬ ಬೃಹತ್ ಉದ್ಯಮವೂ ಇರಲಿಲ್ಲ.  ಅಲ್ಲಿದ್ದದ್ದೆಲ್ಲಾ ಯಾವುದೇ ಪತ್ರಿಕೆಗಳಿಗೆ ಸುದ್ದಿಯಾಗದವರ ಸುದ್ದಿಗಳು, ಅವರು ಹೆಸರಿಲ್ಲದ ಮನುಷ್ಯರು, ಓಟು ಕಾರ್ಡಿನಲ್ಲಿ ಮಾತ್ರ ಬದುಕುವ ವ್ಯಕ್ತಿಗಳು. ಅಂತಹ ಭಾರತದ ಬಗ್ಗೆ ಬರೆದ ಪಿ ಸಾಯಿನಾಥ್ ನಿನ್ನೆ ಮಾತನಾಡಿದ್ದು ಮಾಧ್ಯಮದ ಬಗ್ಗೆ, ಮಾಧ್ಯಮದ ಆಯ್ದ ಸತ್ಯಗಳ ಬಗ್ಗೆ, ಆಯ್ದ ಸುದ್ದಿಗಳ ಬಗ್ಗೆ.

p sainath2ಪತ್ರಿಕಾಧರ್ಮ ಯಾವಾಗ ಪತ್ರಿಕೋದ್ಯಮವಾಯಿತೋ ಆಗ ಅದು ರಾಜಕೀಯವಾಗಿ ಮುಕ್ತವಾಗಿ, ಲಾಭದ ಸರಪಳಿಗಳಿಂದ ಬಂಧಿತವಾಯಿತು ಎನ್ನುವ ಮಾತನ್ನು ಅವರು ಹಲವಾರು ಉದಾಹರಣೆಗಳ ಮೂಲಕ, ಅಂಕಿ ಅಂಶಗಳ ಮೂಲಕ ಕೊಡುತ್ತಾ ಹೋದರು.

We cover only if you bring us revenue ಎನ್ನುವ ಸತ್ಯ ಇಂದು ಎಲ್ಲಾ ಮಾಧ್ಯಮಗಳನ್ನೂ ಆಳುತ್ತಿದೆ.  ಹಣ ತಾರದ ಸುದ್ದಿ ಮಾಧ್ಯಮಗಳಿಗಿಂದು ಸುದ್ದಿಯಾಗಿ ಉಳಿದಿಲ್ಲ.  ಭಾರತದ ಮುಕ್ಕಾಲುಪಾಲು ಜನ ವಾಸ ಮಾಡುತ್ತಿರುವ ಹಳ್ಳಿಗಳ ಸುದ್ದಿ ಇಂದು ನಮಗೆ ಮಾಧ್ಯಮದಲ್ಲಿ ಕಾಣುತ್ತಿಲ್ಲ.  ಅಷ್ಟೇಕೆ ಪಟ್ಟಣಗಳ ಸುದ್ದಿಗೂ ಅಲ್ಲಿ ಜಾಗವಿಲ್ಲ.

ಅಲ್ಲಿ ಇಂದು ಸ್ಥಳ ಸಿಗುತ್ತಿರುವುದು ದೆಹಲಿಯ ಸುದ್ದಿಗೆ, ಬಾಲಿವುಡ್ ಸುದ್ದಿಗೆ, ಕ್ರಿಕೆಟ್ ನ ಸುದ್ದಿಗೆ.  ಭಾರತದ ಪತ್ರಿಗೆಗಳಲ್ಲಿ ಇಂದು ಕೃಷಿಗೇ ಮೀಸಲಾದ ಪತ್ರಕರ್ತ ಕಾಣುವುದಿಲ್ಲ, ಕಾರ್ಮಿಕರಿಗೇ ಮೀಸಲಾದ ಪತ್ರಕರ್ತ ಸಿಗುವುದಿಲ್ಲ.  ಇಲ್ಲಿ ಬಹುತೇಕ ಪತ್ರಕರ್ತರು ಸ್ಟೆನೋಗ್ರಾಫರ್ ಗಳಾಗಿ ಕೇವಲ ಹೇಳಿದ್ದನ್ನು ಬರೆದುಕೊಳ್ಳುವ ಲೇಖನಿಗಳಾಗಿ ಬದಲಾಗಿದ್ದಾರೆ ಎನ್ನುವುದರಲ್ಲಿ ನಮ್ಮ ದುರಂತ ಇದೆ.

ಒಂದು ಮಹಾ ನೀರಿನ ಸಮಸ್ಯೆ ನಮ್ಮೆದುರಲ್ಲಿ ತಾಂಡವವಾಡುತ್ತಿದೆ, ನಾವು ಅದನ್ನು ನೋಡುವ ಕಣ್ಣುಗಳಿಗೆ ಕಪ್ಪು ಕನ್ನಡಕ ಹಾಕಿ ಕುಳಿತಿದ್ದೇವೆ.  ನೀರಿನ ಮೂಲಗಳು ಒಣಗುತ್ತಿವೆ, ನದಿಗಳು ಸೊರಗುತ್ತಿವೆ. ಕೃಷಿಯಿಂದ ಕಿತ್ತು ಕೈಗಾರಿಕೆಗಳಿಗೆ ನೀರು ಕೊಡುತ್ತಿದ್ದೇವೆ, ಹಳ್ಳಿಗಳಿಂದ ಕಿತ್ತು ನಾವು ಪಟ್ಟಣಗಳಿಗೆ ನೀರು ಕೊಡುತ್ತಿದ್ದೇವೆ, ಜೀವನೋಪಾಯದಿಂದ ಕಿತ್ತು ಜೀವನಶೈಲಿಯ ಐಷಾರಾಮಕ್ಕೆ ನೀರನ್ನು ಕೊಡುತ್ತಿದ್ದೇವೆ.  ಹೀಗಿರುವಾಗ ಇನ್ನು ಮೂರು ಮಾನ್ಸೂನ್ ಗಳು ಪೂರ್ಣವಾಗಿ ಸುರಿದರೂ ಭಾರತದ ನೀರಿನ ಸಮಸ್ಯೆ ತೀರುವುದಿಲ್ಲ.  ಹೀಗೆ ಕೃಷ್ಣಾ ಮತ್ತು ಗೋದಾವರಿ ನದಿಗಳ ಮೂಲದಿಂದ ಅವರು ನದಿಯ ಹಾದಿಗುಂಟಾ ಅವರು ಮಾಡಿದ ಒಂದು ಪಯಣದ ಬಗ್ಗೆ ಪಿ ಸಾಯಿನಾಥ್ ಹೇಳುತ್ತಾರೆ.

ಗೋದಾವರಿಯ ಮೂಲಸ್ಥಾನದಲ್ಲಿ ಇಂದು ನೀರಿಲ್ಲ.  ಬ್ರಹ್ಮಗಿರಿ ಇಂದು ಒಣಗಿಹೋಗಿದೆ, ಏಕೆಂದು ಕಾರಣ ಹುಡುಕಿದರೆ ಅಲ್ಲಿನ ಒಂದೊಂದು ಇಂಚು ನೆಲವೂ ಇಂದು ಕಾಂಕ್ರೆಟ್ ಮಯವಾಗಿದೆ, ಅಲ್ಲಿನ ಪರ್ವತದ ಮರಗಳೆಲ್ಲವನ್ನು ಕಡಿಯಲಾಗಿದೆ, ಅಲ್ಲೆಲ್ಲಾ ರೆಸಾರ್ಟ್ ಗಳು ತುಂಬಿತುಳುಕುತ್ತಿವೆ.  ನಿಸರ್ಗಧಾಮವಾಗಿದ್ದ ಬ್ರಹ್ಮಗಿರಿ ಇಂದು ಹಾಲಿಡೇ ವಿಲೇಜ್ ಆಗಿದೆ. ಅದಕ್ಕಿಂತ ತಮಾಷೆ ಎಂದರೆ ಬ್ರಹ್ಮಗಿರಿಯಲ್ಲಿ, ತ್ರ್ಯಯಂಬಕೇಶ್ವರನ ಸನ್ನಿದಿಯಲ್ಲಿ ತೀರ್ಥಸ್ನಾನಕ್ಕೆ ಜನ ಬರುತ್ತಾರಲ್ಲಾ ಅವರಿಗೇನು ಮಾಡುವುದು?  ಟ್ಯಾಂಕರ್ ಗಳಲ್ಲಿ ನೀರು ತರಿಸಿ ನದಿಯ ಒಡಲಿಗೆ ಸುರಿಯಲಾಗುತ್ತಿದೆ.  ಇಡೀ ಪ್ರಪಂಚದಲ್ಲಿ ನದಿಗೆ ಟ್ಯಾಂಕರ್ ನೀರನ್ನು ತುಂಬಿಸುತ್ತಿರುವ ಒಂದೇ ದೇಶ ಭಾರತ!

ಎಲ್ಲೋ ಕುಂಭಮೇಳವಾಗುತ್ತದೆ.  ಅಲ್ಲಿಗೆ ಬಸಿದುಕೊಂಡ ನೀರು ಸತಾರದ ಎಕರೆಗಟ್ಟಲೆ ದ್ರಾಕ್ಷಿ ತೋಟಗಳನ್ನು ಬರಡಾಗಿಸುತ್ತದೆ.  ಬರದಿಂದ ತತ್ತರಿಸುತ್ತಿದ್ದ ಮರಾಠಾವಾಡದಿಂದ ಸತಾರಾದ ದ್ರಾಕ್ಷಿತೋಟಗಳಿಗೆ ಕೆಲಸಕ್ಕೆ ಬರುತ್ತಿದ್ದ ಅಷ್ಟೂ ಕೂಲಿಕಾರ್ಮಿಕರ ಮನೆಗಳಲ್ಲಿ ಒಲೆ ಉರಿಯುವುದಿಲ್ಲ.  ಟ್ಯಾಂಕರ್ ನೀರಿಗಾಗಿ ಗಂಟೆಗಟ್ಟಲೆ ಕಾದ ಹೆಣ್ಣುಮಗಳು ಒಂದು ಲೀಟರ್ ನೀರಿಗೆ ೪೫ ಪೈಸೆ ಕೊಡುತ್ತಾಳೆ, ಬಿಯರ್ ಫ್ಯಾಕ್ಟರಿಗಳಿಗೆ ಲೀಟರ್ ಗೆ ನಾಲ್ಕುಪೈಸೆ ಲೆಕ್ಕದಲ್ಲಿ ನೀರು ಸರಬರಾಜಾಗುತ್ತದೆ.  ಭಾರತದ ಎಚ್ಚೆತ್ತ ಜನರು ಹೇಗೆ ಇಲ್ಲಿನ ಅನುತ್ಪಾದಕ ವರ್ಗ ಉತ್ಪಾದಕ ವರ್ಗದ ತೆರಿಗೆ ಹಣವನ್ನು ಕೊಳ್ಳೆಹೊಡೆಯುತ್ತಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಣ್ಣೀರಿಡುತ್ತಾರೆ.

Diyas on the Ganges, Evening Offerings The Hindu faith has many colorful, often flamboyant traditions, rituals, and ceremonies.  Perhaps one of the more subdued traditions is that of setting offerings adrift on the sacred waters of the Ganges.  These small votives comprised of cups made of dried leaves, marigold flower petals and a lit candle, are gently placed upon the river's surface at sundown.

ತಿಂಗಳಿಗೆ ಐದು ಸಾವಿರ, ಹತ್ತು ಸಾವಿರ ಕನಿಷ್ಠ ಸಂಪಾದನೆ ಇರುವ ಮನೆ ಒಡೆಯನ ಸಂಖ್ಯೆ ನಮಗೆ ಗಾಬರಿ ಹುಟ್ಟಿಸುತ್ತಿದೆ, ಆದರೆ ಒಂದು ಇಡೀ ಕೃಷಿ ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ ತಿಂಗಳಿಗೆ ಕೇವಲ 6426. ಸಂಪತ್ತಿನ ಅಸಮಾನ ಹಂಚಿಕೆ ಮತ್ತು ಮಾಲೀಕತ್ವ ಕಣ್ಣಿಗೆ ರಾಚುತ್ತಿದೆ.  ಇದೀ ಪ್ರಪಂಚದಲ್ಲಿನ ಜನರ ಜೀವನಮಟ್ಟದ ಪಟ್ಟಿ ತಯಾರಿಸಿದರೆ ಸೋಮಾಲಿಯಾದಿಂದ ಕೆಳಗಡೆ ಭಾರತದ ಸರಾಸರಿ ಜನರ ಜೀವನ ಮಟ್ಟ ಬರುತ್ತದೆ, ಆದರೆ ಭಾರತದ ಕೆಲವಾರು ಮಂದಿಯ ಹೆಸರು ಫೋರ್ಬ್ ಪಟ್ಟಿಯಲ್ಲಿ ರಾರಾಜಿಸುತ್ತದೆ.

ಹರಿಯಾಣ ಮತ್ತು ರಾಜಾಸ್ಥಾನದ ಪಂಚಾಯತಿಗಳಲ್ಲಿ ಕನಿಷ್ಠ ಇಷ್ಟು ವಿದ್ಯಾಭ್ಯಾಸ ಇರುವವರು ಮಾತ್ರ ಪಂಚಾಯತಿ ಬೋರ್ಡ್ ಚುನಾವಣೆಗೆ, ಸರಪಂಚ್ ಚುನಾವಣೆಗೆ ನಿಲ್ಲಬಹುದು ಎನ್ನುವ ಒಂದು ಕಾನೂನು ಹೊರಡಿಸುತ್ತಾರೆ, ಅದು ಲಕ್ಷಾಂತರ ಮಂದಿ ದಲಿತರನ್ನೂ, ಬಡವರನ್ನೂ ಪ್ರಾಥಮಿಕ ಅಧಿಕಾರದಿಂದ ಒಂದೇ ಏಟಿಗೆ ದೂರ ಇಟ್ಟುಬಿಡುತ್ತದೆ.  ಆದರೆ ಅದೇ ನಿಯಮವನ್ನು ಮಂತ್ರಿಗಳಾಗಲು, ಶಾಸಕರಾಗಲು, ಎಂಪಿ ಗಳಾಗಲೂ ಅನ್ವಯಿಸುವುದಿಲ್ಲ.

ಪಿ ಸಾಯಿನಾಥ್ ಅಂಕಿ ಅಂಶಗಳ ಸಹಾಯದಿಂದ ಎಲ್ಲವನ್ನೂ ವಿವರಿಸುತ್ತಾ ಹೋದರು.  ’ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಮಾಧ್ಯಮ ಬಹಳ ಪ್ರಮುಖವಾದದ್ದು ನಿಜ, ಆದರೆ ಮಾಧ್ಯಮದಲ್ಲಿ ಪ್ರಜಾಪ್ರಭುತ್ವ ತರುವವರು ಯಾರು?’ ಈ ಪ್ರಶ್ನೆ ಕೇಳಿ ಸಾಯಿನಾಥ್ ಮಾತು ಮುಗಿಸಿದರು.  ಆ ಪ್ರಶ್ನೆ ಅಲ್ಲಿದ್ದವರ ಮನಸ್ಸಿನಲ್ಲಿ ಇನ್ನಷ್ಟು, ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಇತ್ತು.

‍ಲೇಖಕರು Admin

July 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸಂಧ್ಯಾ

    ಹೌದು ಮೇಡಂ…ಪತ್ರಿಕಾಧರ್ಮ ಪತ್ರಿಕೋದ್ಯಮವಾದಾಗಲೇ ಆ ಕ್ಷೇತ್ರದ ವಿಶ್ವಾಸಾರ್ಹತೆಗೆ ಪೆಟ್ಟುಬಿತ್ತು…ಇನ್ನು ಅಲ್ಲಲ್ಲಿ ಉಳಿದಿರುವ ಇಂಥವರಿಂದ ಭಾರತದ ನೈಜಚಿತ್ರಣ ದೊರಕುತ್ತಿದೆ ಅಷ್ಟೇ ….
    ಅವಧಿಗೆ ಧನ್ಯವಾದ…

    ಪ್ರತಿಕ್ರಿಯೆ
  2. Sudheendra Batni.

    It is very unfortunate that our electronic media is immersed in TRP ratings.prominence is given to the marginal news.happenings, more importance to the shenanigans of politicians and their families,and endless repetitions of disidence activities in all political parties,their mudslingings etc..I have been a regular follower of P.Sainath’s articles,which are very well researched and cover the problematic areas which are not seen in the media,It is not for nothing he has got prestigious MAGSASAY award! Of late I do not see his articles in THE HINDU.

    ಪ್ರತಿಕ್ರಿಯೆ
  3. nagraj harapanahalli

    ಪತ್ರಿಕೆ ಮತ್ತು ದೃಶ್ಯ ಮಾದ್ಯಮದ ಮಾಲೀಕರ ಕಣ್ಣು ಇನ್ನಾದರೂ ನದಿ ಮೂಲಗಳತ್ತ, ಜನಸಾಮಾನ್ಯನತ್ತ ತಿರುಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: