ಎನ್ ಸಂಧ್ಯಾರಾಣಿ
ಕೆಲವು ಸತ್ಯಗಳನ್ನು ಹೇಳಬೇಕಾಗಿರುತ್ತದೆ. ಸತ್ಯ ಕೇವಲ ತನ್ನ ಇರುವಿಕೆಯಿಂದ ಮಾತ್ರ ಸತ್ಯವಾಗುವುದಿಲ್ಲ, ಅದನ್ನು ಹೇಳುವಿಕೆಯಿಂದ, ಇನ್ನೊಬ್ಬರೆದುರಲ್ಲಿ ಅದನ್ನು ಒಪ್ಪಿಕೊಳ್ಳುವುದರಿಂದ ಸತ್ಯವಾಗುತ್ತದೆ.
ನನಗೆ ಇಲ್ಲಿ ವ್ಯಾಸರ ಕಥೆಯ ಸಾಲುಗಳು ನೆನಪಿಗೆ ಬರುತ್ತವೆ, ’ಆಡಿದ ಮಾತುಗಳು ಹೇಗೆ ಒಂದು ಬದುಕನ್ನು ನಿರ್ಮಿಸಲು ಶಕ್ಯವಾಗಿರುತ್ತದೊ, ಆಡದ ಮಾತುಗಳ ಸಹ ಹಾಗೆ ಶಕ್ತವಾಗಿರುತ್ತದೆ. ಆದರೆ ಹಾಗೆ ಉಳಿದ ಮಾತುಗಳು ನಿರ್ಮಿಸಿದ ಬದುಕು ಕತ್ತಲಲ್ಲಿರುತ್ತದೆ, ಮೃತ ಸರೋವರದ ಹಾಗೆ ಜಡವಾಗಿರುತ್ತದೆ’.
ಹಾಗೆ ಆಡದ ಮಾತುಗಳನ್ನು ಆಡಬೇಕೆಂದಾಗ ಕೆಲವು ಸಲ ನೇರವಾಗಿ ಹೇಳಬಹುದು, ಕೆಲವು ಸಲ ಹೇಳಲಿಕ್ಕಾಗುವುದಿಲ್ಲ. ಸಾಹಿತ್ಯದ ಒಡನಾಟವಿರುವವರು ಆಡಲೇಬೇಕಾದ ಅಂತಹ ಮಾತುಗಳನ್ನು ತಮ್ಮ ಕವನದಲ್ಲಿ, ಕಥೆ ಕಾದಂಬರಿಗಳಲ್ಲಿ ಬರೆದೋ, ಪಾತ್ರಗಳಿಂದ ಆಡಿಸಿಯೋ ತಮ್ಮ ಮನಸ್ಸಿನ ಉಮ್ಮಳವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.
ವಸುಧೇಂದ್ರ ಅವರು ಹಾಗೆ ಆಡಲೇಬೇಕಾದ ಆದರೆ ಯಾರೂ ಜೋರಾಗಿ ಆಡಲು ಧೈರ್ಯ ಮಾಡದ ಮಾತುಗಳನ್ನು ಬರೆದಾಗ ಅದು ’ಮೋಹನಸ್ವಾಮಿ’ಯಾಯಿತು. ಆ ಕಥೆಗಳು ತಮ್ಮನ್ನು ಮುಕ್ತಗೊಳಿಸಿದವು ಎಂದು ಅವರೇ ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಆ ಪುಸ್ತಕ ಬಂದಾಗ, ಆ ಪುಸ್ತಕ ಬರುವ ಮೊದಲು ಅವರು ಅನುಭವಿಸಿರಬಹುದಾದ ಸಂಕಟ, ಅಸಹಾಯಕತೆ, ನೋವು, ಅವಮಾನ, ಅಪಮಾನಗಳ ಒಂದು ಅಂದಾಜಾದರೂ ಆ ಪುಸ್ತಕ ಓದುವಾಗ ನಮಗೆ ದಕ್ಕುತ್ತದೆ. ಆದರೆ ಆ ನೋವು, ನಿಟ್ಟುಸಿರು, ನಿರಾಳತೆಯ ಸುಮಾರು ಚಪ್ಪಾಳೆಗಳು ಮೊನ್ನೆ ಕಲಾಕ್ಷೇತ್ರದಲ್ಲಿ ಮೊಳಗಿದವು.
ಸಲಿಂಗ ಕಾಮದ ಬಗೆಗಿನ ಈ ಪುಸ್ತಕವನ್ನು ’ರೂಪಾಂತರ’ ತಂಡ ನಾಟಕವಾಗಿಸಲು ಕೈಗೆತ್ತಿಕೊಂಡಾಗ ನನಗೆ ಒಂದೇ ಸಮಯದಲ್ಲಿ ಅಚ್ಚರಿ ಮತ್ತು ಮೆಚ್ಚಿಗೆ ಆಗಿದ್ದು ಸುಳ್ಳಲ್ಲ. ಕಥೆ ಬರೆಯುವುದು ಏಕಾಂತ, ಆದರೆ ನಾಟಕ ಲೋಕಾಂತ. ಇಂತಹ ವಸ್ತುವನ್ನು ಕೈಗೆತ್ತಿಕೊಂಡು ಅದನ್ನು ಲೋಕದೊಂದಿಗೆ ಲೋಕಾಂತದಲ್ಲಿ ಅನುಸಂಧಾನ ಮಾಡಿಕೊಳ್ಳುವ ಸವಾಲು ಕಥೆಗಳನ್ನು ರಂಗರೂಪಗೊಳಿಸಿದ ಬಸವರಾಜ ಸೂಳೇರಿಪಾಳ್ಯ, ನಿರ್ದೇಶನ ಮಾಡಿದ ಕೆ ಎಸ್ ಡಿ ಎಲ್ ಚಂದ್ರು ಮತ್ತು ‘ರೂಪಾಂತರ’ ತಂಡದ ನಟನಟಿಯರ ಮೇಲಿತ್ತು.
ನಾಟಕದ ಯಶಸ್ಸಿಗೆ ರಂಗದ ಮೇಲಿರುವ ನಟನಟಿಯರು, ರಂಗದ ಹಿಂದಿರುವ ಕೈಗಳ ಜೊತೆಜೊತೆಯಲ್ಲಿ ಪ್ರೌಢತೆ ಇರುವ ಪ್ರೇಕ್ಷಕರೂ ಸಹ ಅಷ್ಟೇ ಮುಖ್ಯ ಅನ್ನಿಸಿದ್ದು ಆ ನಾಟಕ ನೋಡುವಾಗ.
ನಾಟಕ ಪ್ರಾರಂಭವಾಗುವುದು ದ್ರೌಪದಿ ಪ್ರಲಾಪದಿಂದ. ಪಾಂಡವರ ಪಾಳಯದಲ್ಲಿ ಉಪಪಾಂಡವರ ಕಗ್ಗೊಲೆಯಾಗಿದೆ. ಮಕ್ಕಳ ಕಳೇಬರವನ್ನು ನೋಡಿದ ದ್ರೌಪದಿ ಅಪಾರ ಶೋಕದಿಂದ ವಿಲಪಿಸುತ್ತಾಳೆ. ಮೋಹನಸ್ವಾಮಿಯಲ್ಲಿ ದ್ರೌಪದಿ ಎಲ್ಲಿಂದ ಬಂದಳು ಎಂದು ಯೋಚಿಸುವಷ್ಟು ದೀರ್ಘವಾದ ಈ ದೃಶ್ಯದ ನಂತರ, ಇದು ಮನಸ್ಸಿನಲ್ಲಿ ಹೆಣ್ಣೊಬ್ಬಳನ್ನು ಇಟ್ಟುಕೊಂಡಿರುವ ಗಂಡು ಮಾಡಿದ ಪಾತ್ರ ಎಂದು ತಿಳಿಯುತ್ತದೆ. ಮೋಹನಸ್ವಾಮಿ ಕಥಾಸಂಕಲನದ ಕೆಲವು ಕಥೆಗಳನ್ನು ಹೆಣೆದು ಸೂಳೇರಿಪಾಳ್ಯ ಅವರು ಈ ನಾಟಕವನ್ನು ರಚಿಸಿದ್ದಾರೆ. ನಾಟಕದಲ್ಲಿ ಮೋಹನಸ್ವಾಮಿ ಸಣ್ಣ ಪಟ್ಟಣದಲ್ಲಿ ಹುಟ್ಟಿ, ವಿದ್ಯಾವಂತನಾಗಿ, ಪಟ್ಟಣದಲ್ಲಿ ಕೆಲಸಕ್ಕೆ ಸೇರುವ ಹುಡುಗ. ಅವನ ಮನಸ್ಸಿನಲ್ಲಿ ತನ್ನ ಲೈಂಗಿಕತೆಯ ಬಗ್ಗೆ ಒಂದಿಷ್ಟು ಗೊಂದಲ ಇರುತ್ತದೆ. ನಾಟಕ ಮೋಹನಸ್ವಾಮಿ ತನ್ನ ಲೈಂಗಿಕತೆಯನ್ನು ತಾನು ಅರ್ಥಮಾಡಿಕೊಳ್ಳುವ, ಒಪ್ಪಿಕೊಳ್ಳುವ, ತನ್ನ ಗಿಲ್ಟ್ ಕಳೆದುಕೊಳ್ಳುವ ಪಯಣ. ನಾಟಕ ಪ್ರಾರಂಭವಾಗುವಾಗ ಅಲ್ಲಿರುವ ಪರದೆಗಳನ್ನು ಅವನು ಒಂದೊಂದಾಗಿ ದಾಟುವ ಪಯಣ. ಈ ಪ್ರಯಾಣದಲ್ಲಿ ಅವನು ಹಲವರನ್ನು ಭೇಟಿಯಾಗುತ್ತಾನೆ.
ತನ್ನ ಲೈಂಗಿಕತೆಯನ್ನು ಮರೆಮಾಡದೆ ಅದನ್ನು ಸಂಭ್ರಮಿಸುವ ಬಾಲ್ಯದ ಗೆಳೆಯ. ಅವನ ಮಾತುಗಳ, ನಡವಳಿಕೆಯ ಕಾರಣದಿಂದ ಮುಜುಗುರಕ್ಕೆ ಒಳಗಾಗುವ ಅವನ ಮನೆಯವರು, ಮೋಹನಸ್ವಾಮಿ ಅವನೊಡನೆ ತನ್ನನ್ನು ಸಮೀಕರಿಸಿಕೊಂಡು ಅವನಿಗಾಗಿ ಮಿಡಿಯುತ್ತಿರುತ್ತಾನೆ. ಕಡೆಗೆ ಅವನ ಮನೆಯವರೇ ಅವನನ್ನು ಕೊಂದರು ಎಂದು ತಿಳಿದು ತನ್ನದೆ ದೇಹದ ಒಂದು ಭಾಗವನ್ನು ಯಾರೋ ಕತ್ತರಿಸಿದಂತೆ ವಿಲಪಿಸುತ್ತಾನೆ. ಅದೇ ಊರಿನಲ್ಲಿ ಅವನ ಇನ್ನೊಬ್ಬ ಗೆಳೆಯ ಕಾಸಿಂ ಪೀರ್ ಅಥವಾ ಕಾಶಿವೀರ ಇದ್ದಾನೆ. ಅವನ ಗಂಡುತನವನ್ನು ಕಂಡರೆ ಮೋಹನಸ್ವಾಮಿಯೊಳಗೆ ಇರುವ ಹೆಣ್ಣು ಮಿಡಿಯುತ್ತಾಳೆ. ಅವನೊಡನೆ ಇವನ ದೈಹಿಕ ಸಂಪರ್ಕ ನಡೆಯುತ್ತದೆ. ತನ್ನ ಲೈಂಗಿಕತೆಯನ್ನು ಒಪ್ಪಿಕೊಂಡು ಅದು ಅವನು ದಾಟುವ ಮೊದಲ ಪರದೆ.
ಆಮೇಲೆ ಆ ಗೆಳೆಯ ಇವನನ್ನು ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸುತ್ತಾನೆ. ಆಗ ಮೋಹನಸ್ವಾಮಿ ಆ ಬಲೆಯಿಂದ ಹೊರಬರಲು ಧೈರ್ಯ ತುಂಬುವುದು ಒಬ್ಬ ಮಂಗಳಮುಖಿ. ಮೋಹನಸ್ವಾಮಿ ತನ್ನ ಜೀವನದಲ್ಲಿ ಮೊದಲ ಬಾರಿ ತನ್ನ ಸ್ಥಿತಿ ಮತ್ತು ಪರಿಸ್ಥಿತಿಯ ಬಗ್ಗೆ ಕುಗ್ಗಿ ಹೋಗುವುದು ಬಿಟ್ಟು ಅದನ್ನು ಎದುರಿಸಿ ನಿಲ್ಲುತ್ತಾನೆ. ಅದು ಅವನು ದಾಟುವ ಎರಡನೆಯ ಪರದೆ.
ನಂತರದ ದೃಶ್ಯದಲ್ಲಿ ಅವನು ತನ್ನ ಸ್ನೇಹಿತ ಕಾರ್ತಿಕ್ ನೊಡನೆ ಸಹಜೀವನ ನಡೆಸುತ್ತಿದ್ದಾನೆ. ಎಲ್ಲಾ ಪ್ರೇಮಿಗಳಂತೆ ಅವರ ನಡುವೆ ಸಹ ಪ್ರೇಮ, ಸರಸ, ಕಾಡುವುದು, ಅನುನಯಿಸುವುದು ಎಲ್ಲಾ ಇದೆ. ಆದರೆ ಇಲ್ಲಿ ನಾಟಕಕ್ಕೆ ಒಂದು ತಿರುವು ಬರುತ್ತದೆ. ಇವನ ಸ್ನೇಹಿತನ ಮದುವೆ ನಿಶ್ಚಯವಾಗಿದೆ. ಅದನ್ನು ಕಾರ್ತಿಕ್ ಇವನಿಗೆ ಹೇಳುವುದಿಲ್ಲ, ಮತ್ಯಾರದೋ ಮೂಲಕ ಇವನಿಗೆ ವಿಷಯ ತಿಳಿಸುತ್ತದೆ. ಪ್ರೇಮಿ ಕೈ ಜಾರುತ್ತಾನೆ ಎನ್ನುವ ಸಂಕಟ, ಅವನ ಪ್ರೇಮವನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ತಾನೆಲ್ಲಿ ಸೋತೆ ಎನ್ನುವ ಅನುಮಾನ, ತನ್ನ ಸೋಲಿನ ಬಗ್ಗೆ ಅವಮಾನ, ಅವನು ಈಗೀಗ ಫೋನ್ ಬಂದರೆ ಹೊರಗೆ ಹೋಗಿ ಮಾತನಾಡುತ್ತಾನೆ ಎನ್ನುವ ಅಸೂಯೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಅವನು ದೂರಾಗುತ್ತಾನೆ ಎನ್ನುವಾಗ ಅವನ ಕಣ್ಣೀರು, ಕೃಷ್ಣನ ಮುಂದೆ ಅವನು ಅದನ್ನು ಹೇಳಿಕೊಳ್ಳುವ ರೀತಿ…..
ಸಂಬಂಧಗಳು ಕೇವಲ ಸಂಬಂಧಗಳು. ಅವರು ಹೆಣ್ಣು ಮತ್ತು ಗಂಡು, ಗಂಡು ಮತ್ತು ಗಂಡು, ಹೆಣ್ಣು ಮತ್ತು ಹೆಣ್ಣು ಅನ್ನುವುದು ಕೇವಲ ಸಾಂದರ್ಭಿಕ ಅನ್ನಿಸಿತು. ಕಾರ್ತಿಯ ಮದುವೆ ಆಗಿದೆ. ಪ್ರೇಮಿಯ ಮದುವೆಯ ನಂತರ ಮೋಹನಸ್ವಾಮಿ ಅನುಭವಿಸುವ ಒದ್ದಾಟವನ್ನು ನಿರ್ದೇಶಕ ಚಂದ್ರು ಆ ದೃಶ್ಯದಲ್ಲಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮೋಹನಸ್ವಾಮಿ ತನ್ನದು ಅಸೂಯೆ ಅಲ್ಲ, ತನ್ನ ಪ್ರೇಮ ಅಷ್ಟು ಕೇವಲ ಅಲ್ಲ, ಕಾರ್ತಿಕನ ಸುಖವನ್ನು ತಾನು ಅಸೂಯೆಯಿಂದ ನೋಡುವುದಿಲ್ಲ ಎಂದು ತನ್ನನ್ನು ತಾನೇ ನಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಅವನ ಮನದೊಳಗೆ ಇರುವ ಹೆಣ್ಣು ಇಷ್ಟು ಹೊತ್ತಿಗೆ ಅವರಿಬ್ಬರೂ ಎಷ್ಟು ಹತ್ತಿರವಾಗಿರಬಹುದು ಎಂದು ನೆನೆದು ನೆನೆದು ಒದ್ದಾಡುತ್ತಿರುತ್ತಾಳೆ. ಅವನ ಮನಸ್ಸಿನ ತುಮುಲವನ್ನು ಆ ದೃಶ್ಯ ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ.
ಮತ್ತೆ ತನ್ನ ಬದುಕಿನಲ್ಲಿ ಪ್ರೇಮವಿಲ್ಲ ಎಂದು ಕೃಷ್ಣನನ್ನು ಮುಟ್ಟಿ ಶಪಥ ಮಾಡಿದ್ದ ಮೋಹನಸ್ವಾಮಿ ಈಗಾಗಲೆ ಇನ್ನೊಬ್ಬನನ್ನು ಬಯಸುತ್ತಿದ್ದಾನೆ. ಮೊದಲ ಸಲ ಅವನನ್ನು ಭೇಟಿಯಾಗಲು ಹೋಗುತ್ತಾನೆ. ಮೋಹನಸ್ವಾಮಿಯ ನಡೆನುಡಿಯಲ್ಲಿ ಹೆಣ್ತನ ಇದೆ, ಆದರೆ ಅವನು ಕಾಫಿಶಾಪಿನಲ್ಲಿ ಭೇಟಿ ಮಾಡುವ ಹುಡುಗನ ನಡವಳಿಕೆಯಲ್ಲಿ ಅದಿಲ್ಲ. ಆದರೂ ಅವನ ಮನಸ್ಸಿನಲ್ಲಿ ಒಬ್ಬ ಹೆಣ್ಣು ಇರುತ್ತಾಳೆ. ಅಂದರೆ ಆಂಗಿಕ ಮತ್ತು ಮಾನಸಿಕ ಸ್ಥಿತಿಗೆ ಏನೂ ಸಂಬಂಧವಿಲ್ಲ ಎನ್ನುವುದನ್ನೂ ಆ ದೃಶ್ಯ ಹೇಳುತ್ತದೆ. ಮನಸ್ಸಿನಲ್ಲಿ ಹೆಣ್ಣಿರುವ ಆ ಹುಡುಗ ಸಹ ಮತ್ತೊಬ್ಬ ಗಂಡನ್ನೇ ಹುಡುಕುತ್ತಿರುತ್ತಾನೆ. ಆದ್ದರಿಂದಲೆ ಮೋಹನಸ್ವಾಮಿಯೊಡನೆ ಪ್ರೇಮ ಸಾಧ್ಯವಿಲ್ಲ ಎಂದು ಅವನು ಹೇಳುತ್ತಾನೆ. ತನ್ನ ಪರಿಸ್ಥಿತಿಯನ್ನು ಅವನು ಒಪ್ಪಿಕೊಂಡ ನಿರ್ಭಿಡತೆ ಮೋಹನಸ್ವಾಮಿಗೆ ಮೆಚ್ಚುಗೆ ಆಗುತ್ತದೆ. ತನ್ನ ಲೈಂಗಿಕ ಆಯ್ಕೆಯನ್ನು ಹಾಗೆ ಒಪ್ಪಿಕೊಳ್ಳುವುದೇ ಲೇಸು ಎಂದು ಅವನು ನಿರ್ಧಾರ ಮಾಡುವಾಗ ಅವನು ಮೂರನೆಯ ಪರದೆಯನ್ನು ದಾಟುತ್ತಾನೆ.

’ಜೀವನಪೂರ್ತಿ ನಾನು ಬೀಗದೆಸಳಿಗಾಗಿ ಹುಡುಕುತ್ತಿದ್ದೆ, ಕಡೆಯ ಕ್ಷಣದಲ್ಲಿ ನೋಡಿದಾಗ ಬಾಗಿಲು ತೆರೆದೇ ಇತ್ತು’ ಎನ್ನುವ ರೂಮಿಯ ಕವಿತೆಯೊಂದಿಗೆ ನಾಟಕ ಮುಗಿಯುತ್ತದೆ.
ಇದು ಮೋಹನಸ್ವಾಮಿ ಒಬ್ಬನ ಪಯಣವಲ್ಲ, ಅವನಂತಹ ಅನೇಕರ ಪಯಣ ಎಂದು ಅನ್ನಿಸುತ್ತಿತ್ತು. ತಾನು ನಂಬಿದ್ದನ್ನು ನಾಟಕ ಜೋರು ದನಿಯಲ್ಲಿ ಹೇಳುತ್ತದೆ. ಆದರೆ ಒಂದಿಷ್ಟು ಮೌನ ನಾಟವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಬಹುದಿತ್ತು ಅನ್ನಿಸುತ್ತದೆ.
ಮೋಹನಸ್ವಾಮಿಯಾಗಿ ಹರೀಶ್ ನಟನೆ ಅತ್ಯಂತ ಪರಿಣಾಮಕಾರಿಯಾಗಿ ಬಂದಿದೆ. ಗಂಡಿನೊಳಗೆ ಇರುವ ಹೆಣ್ತನ ಎಂದರೆ ಅದು ಹೆಣ್ತನದ ಕ್ಯಾರಿಕೇಚರ್ ಅಲ್ಲ. ಅದು ಗಂಡಿನ ದೇಹ ಮತ್ತು ಹೆಣ್ಣಿನ ನಡವಳಿಕೆ. ಅವೆರಡೂ ಹೊಂದುವುದಿಲ್ಲ ಎನ್ನುವುದು ಗೊತ್ತಾಗುತ್ತಿರುತ್ತದೆ, ಆದರೆ ಅದು ಕಣ್ಣಿಗೆ ಹೊಡೆಯಬೇಕಿಲ್ಲ. ಆ ಸಮತೋಲನವನ್ನು ಹರೀಶ್ ಸಾಧಿಸಿದ್ದಾರೆ. ಕೆಲವು ಸಲ ನಾಟಕ ಅತಿ ಮೆಲೋಡ್ರಾಮಿಕ್ ಅನ್ನಿಸಿಬಿಡುತ್ತದೆ. ಅದನ್ನು ನಿವಾರಿಸಿಕೊಳ್ಳಬಹುದು ಅನ್ನಿಸುತ್ತದೆ. ನಾಟಕಕ್ಕೆ ಮೆರುಗು ಕೊಟ್ಟಿದ್ದು ಸಂಗೀತ. ಹಾಡುಗಳು ಮತ್ತು ಸಂಗೀತ ಸಂಯೋಜನೆ ಎರಡೂ ನಾಟಕದ ಆತ್ಮವನ್ನು ಹಿಡಿದು ತೋರಿಸಿತ್ತು.
ಕೆಲವು ಸಲ ಕೆಲವು ಮಾತುಗಳನ್ನು ಆಡಲೇಬೇಕಿರುತ್ತದೆ, ಅದನ್ನು ಆಡುವ, ಒಪ್ಪಿಕೊಳ್ಳುವ, ಒಪ್ಪಿಕೊಂಡವರನ್ನು ಒಪ್ಪಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿರುತ್ತದೆ. ಆ ಜವಾಬ್ದಾರಿಯನ್ನು ಈ ನಾಟಕ ಯಶಸ್ವಿಯಾಗಿ ನಿರ್ವಹಿಸಿದೆ.





ನೀವು ಹೇಳಿದಂತೆ ಕೆಲವೆಡೆ ಅನಗತ್ಯವಾಗಿ ಕಲಾವಿದರು ಓವರ್ ಆಕ್ಟಿಂಗ್ ಮಾಡ್ತಿದ್ದಾರೆ ಅನಸ್ತು ಸಂದ್ಯಕ್ಕ. ಕೆಲ ಪಾತ್ರಗಳಂತೂ ಗೇ ಪಾತ್ರ ಮಾಡುವ ಕಲಾವಿದರಿಗೆ ಗೇ ಮತ್ತು ಹಿಜಡಾಗಳ ನಡುವಿನ ತರವನ್ನು ನಿರ್ದೇಶಕರು ಮನವರಿಕೆ ಮಾಡಿಕೊಟ್ಟಿದ್ದರೆ ಚನ್ನಿತ್ತು. ಉಳಿದಂತೆ ನಾಟಕ ತುಂಬಾ ಇಷ್ಟವಾಯಿತು.