ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಚಿಕ್ಕ ತೊಗರಿ ಬೇಳೆ ಗಾತ್ರದ ನಾಣ್ಯವನ್ನು ಕೊಟ್ಟರು..

ಪರಮೇಶ್ವರ ಗುರುಸ್ವಾಮಿ ಹೆಸರಾಂತ ಚಲನಚಿತ್ರ ತಜ್ಞರು. ನಾಡಿನ ಮೂಲೆ ಮೂಲೆಯಲ್ಲಿ ಓಡಾಡಿ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಸಾಕ್ಷರತಾ ಆಂದೋಲನಕ್ಕೆ ಚಿತ್ರ- ಶ್ರವ್ಯ ಮಾಧ್ಯಮದ ಮೂಲಕ ಇವರು ಕೊಟ್ಟಿರುವ ಕೊಡುಗೆ ದೊಡ್ಡದು.

ಸಧ್ಯ ಪಕ್ಷಿ ಛಾಯಾಗ್ರಹಣದಲ್ಲಿ ನಿರತರಾಗಿರುವ ಇವರು ಆಗೀಗ ಅವಧಿಯಲ್ಲಿ ತಮ್ಮ ನೆನಪಿನ ಜೋಳಿಗೆಯನ್ನು ಬಿಚ್ಚಲಿದ್ದಾರೆ.

paramesh guruswamy

ಪರಮೇಶ್ವರ ಗುರುಸ್ವಾಮಿ

ಮಂಡ್ಯ ಜಿಲ್ಲೆಯ ಸಂಪೂರ್ಣ ಸಾಕ್ಷರತಾ ಆಂದೋಲನಕ್ಕೆ ಪೂರ್ವಭಾವಿಯಾಗಿ “ಹೆಬ್ಬೆಟ್ಟು” ಎಂಬ ಪ್ರೇರಣಾ ಕಿರುಚಿತ್ರದ ಚಿತ್ರೀಕರಣ ಮಾಡುತ್ತಿದ್ದೆವು. ಬಿಂಡಿಗನವಿಲೆಯ ಸುತ್ತಮುತ್ತ ಚಿತ್ರೀಕರಿಸುತ್ತಿದ್ದೆವು. ಒಂದು ವಾರ ಲೋಕೇಶ್ ಮತ್ತು ಪ್ರಮೀಳಾ ಜೋಷಾಯ್ ರವರು ನಾಗಮಂಗಲದಲ್ಲಿ ಬೇಡ ಎಂದು ಅಲ್ಲೇ ಗ್ರಾಮದಲ್ಲೇ ಉಳಿದುಕೊಂಡಿದ್ದರು.

ಗ್ರಾಮದವರು ಅಭಿಮಾನದಿಂದ ಲೋಕೇಶ್ ಅವರಿಗೆ ಪ್ರಿಯವಾದ ಗುಂಡು ತುಂಡುಗಳನ್ನು ಸರದಿ ಪ್ರಕಾರ ಗ್ರಾಮದೇವರಿಗೆ ಒಪ್ಪಿಸುವಂತೆ ಪೈಪೋಟಿಯಲ್ಲಿ ಪೂರೈಸುತ್ತಿದ್ದರು. ಪ್ರಮೀಳಾರವರನ್ನು ಊರಿನ ಹೆಣ್ಣು ಮಕ್ಕಳು ಒಲೈಸಿದರು. ಆಮೇಲೆ ಲೋಕೇಶ್ ಅವರು ಸಿಜಿಕೆ ಜೊತೆ ಪಿಕ್ನಿಕ್ ತರ ಇತ್ತು ಕಣ್ರಿ ಎಂದು ಹೇಳಿದರಂತೆ.

paramesh coin2ಉಳಿದ ನಾವು ಹತ್ತಿರದ ಒಂದು ತೊಂಬತ್ತು ಭಾಗ ಪಾಳು ಬಿದ್ದಿದ್ದ, ಮಧ್ಯೆ ದೇವಸ್ಥಾನವಿರುವ ಸುತ್ತಲೂ ಪಾಳುಮನೆಗಳಿರುವ ಮುನ್ನ ಬ್ರಾಹ್ಮಣರೇ ವಾಸವಿದ್ದ ಈಗ ಅವರ ಮಕ್ಕಳು ಮೊಮ್ಮಕ್ಕಳೆಲ್ಲ ವಿದೇಶಗಳಲ್ಲಿ ಸೆಟ್ಲ್ ಆಗಿರುವ ಅಗ್ರಹಾರದಲ್ಲಿ ಇದ್ದುದರಲ್ಲಿ ಚೆನ್ನಾಗಿರುವ ಒಂದು ಪುರಾತನ ಮನೆಯಲ್ಲಿ ಉಳಿದುಕೊಂಡಿದ್ದೆವು. ನಮಗಾಗಿ ಆ ಮನೆಯನ್ನು ಸ್ವಚ್ಛ ಮಾಡಿಸಿದ್ದರು.

ಆದರೂ ಮುಗ್ಗಲು ಮತ್ತು ಬಾವಲಿ ಹಿಕ್ಕೆಯ ವಾಸನೆ ಬರುತ್ತಿತ್ತು. ನಮ್ಮ ಲೈಟ್ ಬಾಯ್ಸ್ ಎಂದಿನಂತೆ ಇಡೀ ಮನೆಯನ್ನು ತಪಾಸಿಸುವಾಗ ಒಂದು ಬಾಗಿಲನ್ನು ಕೋಣೆಯ ಬಾಗಿಲು ಎಂದುಕೊಂಡು ತೆರೆದರೆ ಅದು ಬಾವಿ! ಸಧ್ಯ, ಅವನು ಬಾಗಿಲು ತೆಗೆದುಕೊಂಡು ಒಳಕ್ಕೆ ನುಗ್ಗಲಿಲ್ಲ! ಒಬ್ಬನಿಗಂತೂ ರಾತ್ರಿ ಹೊತ್ತು ಮೋಹಿನಿ ಕಾಣಿಸಿತ್ತಿದ್ದಳು! ಆ ಪಾಳು ಮನೆಗಳಲ್ಲಿ ಕೆಲವನ್ನು ವಿದೇಶಗಳಲ್ಲಿರುವ ಮಕ್ಕಳು ಸ್ಥಳೀಯರಿಗೆ ಮಾರಿದ್ದರು.

ಒಂದಿಬ್ಬರು ಸ್ಥಳೀಯ ತರುಣರು ಸ್ವಲ್ಪ ದಿನ ಹಿಂದೆ ನಡೆದ ಘಟನೆಯೊಂದನ್ನು ನನಗೆ ಹೇಳಿದರು. ಏನೆಂದರೆ ಅಲ್ಲಿನ ಒಂದು ಮನೆಯನ್ನು (ಪಾಳು ನಿವೇಶನ) ಕೊಂಡುಕೊಂಡಿದ್ದ ರೈತನೊಬ್ಬ ತನ್ನ ತೆಂಗಿನ ತೋಟಕ್ಕೆ ಆ ಕುಸಿದಿದ್ದ ಮನೆಯ ಮಣ್ಣನ್ನು ಸಾಗಿಸಿ ಹರಡಿದ್ದ. ಸ್ವಲ್ಪ ದಿನಗಳ ನಂತರ ಮಳೆ ಬಿದ್ದಾಗ ಅವನ ತೋಟದ ತುಂಬಾ ಕೆಸರಿನಲ್ಲಿ ಏನೋ ಥಳಥಳ ಹೊಳೆಯುವುದನ್ನು ಯಾರೋ ಕಂಡರು.

ಸುತ್ತಮುತ್ತಲ ಹಳ್ಳಿಯ ಜನ ಮುಗಿಬಿದ್ದು ಪುಟ್ಟ ಪುಟ್ಟ ಚಿನ್ನದ ನಾಣ್ಯಗಳನ್ನು ಅಲ್ಲಿ ಹೆಕ್ಕಿದರಂತೆ. ಅವರ ಮಾತು: “ಹೆಂಗುಸ್ರು ಗಂಡುಸ್ರು ಅನ್ದೆ ಒಬ್ಬರ್ ತಿಕ ಇನ್ನೊಬ್ರು ಮೂಸ್ಕೊಂಡು ಅಂಬೆಗಾಲಲ್ಲಿ ಆಯ್ಕೊಂಡ್ರು ಸಾರ್”. ಮಂಡ್ಯದಿಂದ ಯಾರೊ ಮಾರವಾಡಿಗಳು ಬಂದು ಜನರಿಗೆ ನೋಟು ಹಂಚಿ ಗೋಣಿಚೀಲದ ತುಂಬ ನಾಣ್ಯಗಳನ್ನು ತೆಗೆದುಕೊಂಡು ಹೋದರಂತೆ.

ನನಗೆ ಒಂದು ನಾಣ್ಯ ಸಿಗಬಹುದ ಹಣ ಕೊಡುತ್ತೇನೆ ಎಂದು ಕೇಳಿದೆ. ವಿಚಾರಿಸಿ ನೋಡತ್ತೇವೆ ಎಂದು ಹೋದವರು, “ಐತೆ ಸಾರ್. ಬಡ್ಡೆತ್ತವು ಇಲ್ಲ ಅಂತವೆ.
ತಾಸಿಲ್ದಾರ್ರು ಪೋಲೀಸವ್ರು ಬಂದು ಜಪ್ತಿ ಮಾಡಿದ್ರಲ್ಲ. ಎದುರ್ಕತವೆ.” ಆಂದ್ರು. ಅಲ್ಲಿ ನಮಗೆ ಮುಖ್ಯ ಸಂಪರ್ಕ ವ್ಯಕ್ತಿಯಾಗಿ ಒಬ್ಬರು ಇದ್ದರು. ಬಹಳ ಸಂಭಾವಿತ ನಗುಮೊಗದ ಆಗುಮಾಡಿಸುವ ವ್ಯಕ್ತಿ. ಅವರನ್ನು ವಿಚಾರಿಸಿದೆ. ಕಡೇಪಕ್ಷ ಒಂದು ನಾಣ್ಯವನ್ನಾದರೂ ನೋಡಬೇಕಲ್ಲ ಎಂದೆ. ಅವರು ನಗುತ್ತ, “ನಗ್ಸಾರ್ಕೆ ಮಾಡ್ತಾವೆ ಸಾರ್. ಎಲ್ಲ ಸುಳ್ಳು”. ಎಂದರು.

ಸರಿ. ನಮ್ಮ ಚಿತ್ರೀಕರಣವೆಲ್ಲ ಮುಗಿಸಿಕೊಂಡು ಹೊರಡುವ ದಿನ ಅವರು ನಮಗೆಲ್ಲ ಊಟ ಹಾಕಿದರು. ಎಲ್ಲರನ್ನೂ ಹೊರಡಿಸಿ ಯಾರೂ ಏನೂ ಬಿಟ್ಟಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ನಾನೂ ಹೊರಟಾಗ ಅವರು ವಿದಾಯ ಹೇಳುವವರಂತೆ ಬಂದು ಯಾರಿಗೂ ಕಾಣದಂತೆ ಈ ಚಿಕ್ಕ ತೊಗರಿ ಬೇಳೆ ಗಾತ್ರದ ನಾಣ್ಯವನ್ನು ಕೊಟ್ಟರು.

‍ಲೇಖಕರು admin

16 December, 2015

3 Comments

  1. prathibha nandakumar

    sir…soooperrr sir… plse photos of that house too….

    • Paramesvara Guruswamy

      Prathibhanandakumar madam, I have some photos of location and the house. I have to fathom them from my gujri. I will try to unearth those photos.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading