ಶೋಭಾ ದಿನೇಶ್
ಮಾರ್ಚ್ ತಿಂಗಳು ಎಂದಿನಂತೇ ಶುರುವಾಗಿತ್ತು, ಸಣ್ಣದಾಗಿ ಬಲಿಯುತ್ತಿದ್ದ ಬಿಸಿಲು, ಮಕ್ಕಳ ಪರೀಕ್ಷೆಯ ಪರಿಪಾಟಲು ನಡುವೆ ನಮ್ಮಂಥ ಸರ್ಕಾರಿ ನೌಕರರ ಧಾವಂತ ಹೇಳತೀರದು. ಆರ್ಥಿಕ ವರ್ಷದ ಕೊನೆಯ ತಿಂಗಳು ನಾವೆಲ್ಲ ಸುಡೋ ಬಾಣಲೆ ಮೇಲೆ ಕೂತಿರ್ತೀವಿ, ಅನುದಾನಗಳ ಬಳಕೆ, ನಿಗದಿಪಡಿಸಿದ ಗುರಿಗಳ ಪ್ರಗತಿ ಸಾಧನೆ ಕುರಿತಂತೆ ಇನ್ನಿಲ್ಲದಂತೆ ಸಮೀಕ್ಷೆ ನಡೆಯುವ ಕಾಲ ಮಾರ್ಚ್.
ಇಂತಿಪ್ಪ ಕಾಲದಲ್ಲಿ ಕಾಲಿಟ್ಟಿದ್ದು ಕೋರೋನಾ, ಮೊದಲೆಲ್ಲ ಆಟಕ್ಕುಂಟು ಲೆಕ್ಕಕಿಲ್ಲ ಅನ್ನೋ ಹಾಗೇ ಪರಮ ಅಮಾಯಕನಂತಿದ್ದ ಈ ಕೋರೋನಾ ಆಮೇಲಷ್ಟೆ ಗೊತ್ತಾಗಿದ್ದು ಹಿಡಿತಕ್ಕೆ ಸಿಗದೇ ದಿನೇ ದಿನೇ ವೃದ್ದಿಸಿದ ಮಹಾಮಾರಿ ಎಂದು.
ಈ ನಡುವೆ ನಮ್ಮ ಕಛೇರಿಯ ಹೊಸ ಕಟ್ಟಡ ಉದ್ಘಾಟನೆ ಬೇರೆ ಮಾರ್ಚ್22ರಂದು ನಿಗದಿಯಾಗಿ ಮಾನ್ಯ ಸಂಸದರು ಉದ್ಘಾಟಿಸುವವರಿದ್ದರು, ನಮ್ಮ ಆಡಳಿತ ಮಂಡಳಿಯ 13 ಮಹಿಳೆಯರೂ ಒಂದೇ ರೀತಿಯ ಸೀರೆ ಕಾಸ್ಟ್ಯೂಮ್‍ನಲ್ಲಿ ಮಿಂಚೋಕೆ ಸಿದ್ದವಾಗಿ ನನ್ನನ್ನೂ ಅವರ ಗ್ಯಾಂಗಿಗೆ ಎಳಕೊಂಡಿದ್ದರು. ಆಹ್ವಾನ ಪತ್ರಿಕೆ ಹಂಚಿ, ಅಥಿತಿಗಳ ವಿವರವನ್ನು ಕಲ್ಲಿನಲ್ಲಿ ಕೆತ್ತಿಸಿದ್ದೂ ಆಗಿತ್ತು ಇನ್ನೇನಿದ್ರೂ ನಾನು ಮತ್ತು ನಮ್ಮ ಹೆಂಗಳೆಯರ ಗ್ಯಾಂಗ್ ಹೊಸ ಸೀರೆಯಲ್ಲಿ ಮಿಂಚೋದಷ್ಟೇ ಬಾಕಿ.
ಅಷ್ಟರಲ್ಲಿ ಪರದೆ ಸರಿಸಿ ನಮ್ಮ ಪ್ರಧಾನ ಮಂತ್ರಿಗಳು ಇಳಿದೇಬಿಟ್ರು ಅಖಾಡಕ್ಕೆ ಮುಂದುವರೆದು ಮಾರ್ಚ್22ರಂದು ಸಂಪೂರ್ಣ ಲಾಕ್ ಡೌನ್ ಘೋಷಿಸಿಯೇಬಿಟ್ರು. ಆದಾಗ್ಯೂ ಕೋರೋನಾವನ್ನು ನಾವೇನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ ಅದೂ ನಮಗೇನು ಮಾಡಲ್ಲ ಅನ್ನೋ ಹುಂಬ ಧ್ಯರ್ಯ ಮತ್ತು ದೆಹಲಿಗೆ ಈಗಷ್ಟೇ ಆಗಮಿಸಿರುವ ಕೋರೋನಾ ಕರ್ನಾಟಕದ ಮೈಸೂರ್‍ವರೆಗೆ ಪ್ರಯಾಣ ಮಾಡೋಕೆ ಅದರ ಕೈಲಿ ಆಗುತ್ತಾ ಅನ್ನೋ ಸಿನಿಕ್ ವಾದ.

ಆದರೆ ಮುಂದಿನ ದಿನಗಳಲ್ಲಿ ಕೋರೋನಾ ಕರಾಳತೆ ಅರಿವಿಗೆ ಬಂತು, ಮಾರ್ಚ್22ರಂದು ನಿಗದಿಯಾಗಿ ರದ್ದಾಗಿದ್ದ ಕಟ್ಟಡ ಉದ್ಘಾಟನೆಯನ್ನು ಮುಂದಿನ ಮೂರು ದಿನಗಳಿಗೆ ಮುಂದೂಡಿ ಮಾಹಿತಿಯನ್ನು ಎಲ್ಲರಿಗೂ ತಿಳಿಸಲಾಯ್ತು (ಶತಾಯ ಗತಾಯ ಉದ್ಘಾಟನಾ ಸಮಾರಂಭ ಮಾಡ್ಲೇಬೇಕಿತ್ತು ತಗೋಂಡಿರೋ ಸೀರೆ ಉಟ್ಟು ತೋರಿಸ್ಲೇಬೇಕಿತ್ತು.) ಮತ್ತೆ ಅದೃಷ್ಟ ಕೈಕೊಟ್ತು ಉದ್ಘಾಟನೆ ಮಾಡೋ ಯಾವ ಅವಕಾಶವೂ ಒದಗಿ ಬರಲಿಲ್ಲ ಇಡೀ ದೇಶವೇ ಲಾಕ್‍ಡೌನ್ ಮುಷ್ಟಿಗೆ ಸಿಲುಕಿತ್ತು,
ಲಾಕ್ ಡೌನ್ ಮೇಲೆ ಲಾಕ್ ಡೌನ್, ಜನರೆಲ್ಲಾ ಮನೆ ಸೇರಿದ್ರು ನಾವು ಅಷ್ಟೂ ಸರ್ಕಾರಿ ನೌಕರರು ಬೀದಿಗಿಳಿದ್ವಿ. ಒಂದು ರೀತಿಯ ರಣರಂಗ ಸೃಷ್ಟಿಯಾಯ್ತು, ಇಡೀ ನಾಗರೀಕ ಪಡೆ ಒಂದು ಕಡೆ ಇದ್ದರೆ ಎದುರಾಳಿ ಕೋರೋನಾ ವೈರಸ್, ಇದೇ ಮೊದಲೇನೋ ಅನ್ನಿಸುತ್ತೆ ಇಡೀ ಸಮುದಾಯವೇ ಒಗ್ಗಟ್ಟು ತೋರಿಸಿದ್ದು, ಎಲ್ಲರೂ ತಮ್ಮಮ್ಮ ಕಿರೀಟ, ಅಧಿಕಾರ, ಅಹಂ ದಿಗಿಟ್ಟು ಈ ಮಹಾಮಾರಿಯನ್ನು ಸೆಣೆಸಲು ಒಗ್ಗೂಡಿದರು.
‘ಕೋರೋನಾ ವಾರಿಯರ್ಸ್’ ಎಂಬೋ ತತ್ಕಾಲ್ ಸೈನಿಕರು:
ತುರ್ತಾಗಿ ಮಾಡಬೇಕಿದ್ದ ಕೆಲಸ ರೋಗ ಗ್ರಾಮೀಣ ಪ್ರದೇಶಕ್ಕೆ ಹರಡದಂತೆ ತಡೆಗಟ್ಟುವುದು, ಅದಕ್ಕಾಗಿ ಗ್ರಾಮೀಣ ಕಾರ್ಯಪಡೆ ಕಟ್ಟಿ ಕೋರೋನಾ ವಿರುದ್ದ ಯುದ್ದ ಸನ್ನದ್ದರಾದ್ವಿ. ಈ ಕಾರ್ಯಪಡೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಡಾಕ್ಟರ್, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಪೋಲಿಸ್, ಕಂದಾಯ ಅಧಿಕಾರಿಗಳು ಇದ್ದು ಜನರಿಗೆ ರೋಗ ಅರಿವು ಮೂಡಿಸುವುದಲ್ಲದೇ ಸಾಮಾಜಿಕ ಅಂತರದ ಪಾಠ ಹೇಳಿಕೊಡಬೇಕಿತ್ತು.
ಜನ ಅಷ್ಟೂ ಸುಲಭಕ್ಕೆ ನಮ್ಮ ಪಾಠ ಕೇಳಲು ಸಿದ್ದರಿರಲಿಲ್ಲ ಟಿಪಿಕಲ್ ದಾರಿ ತಪ್ಪಿದ ವಿದ್ಯಾರ್ಥಿಗಳಂತೆ ವರ್ತಿಸೋಕೇ ಶುರು ಮಾಡಿದ್ರು. ಆರಂಭದ ದಿನಗಳು ನಿಜಕ್ಕೂ ಕೋರೋನಾ ವಾರಿಯರ್ಸ್ ಗೆ ತ್ರಾಸದಾಯಕ ದಿನಗಳು ಜನರಿಂದ ಬೈಗುಳಗಳು ಮಾತ್ರವಲ್ಲ ಏಟು ತಿಂದಿದ್ದು ಉಂಟು, ಆದರೂ ಇಟ್ಟ ಹೆಜ್ಜೆ ಹಿಂದಿಡಲಿಲ್ಲ ಇವತ್ತಿಗೂ ತಳಮಟ್ಟದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ ಅಂದರೆ ಅದರ ಅಷ್ಟೂ ಯಶಸ್ಸು ಕೋರೋನಾ ವಾರಿಯರ್ಸ್‍ಗೆ ಸಲ್ಲಬೇಕು
ಕುಟುಂಬಗಳಿಂದ ದೂರ ಇದ್ದು ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡಿದ್ದಾರೆ, ಮದುವೆ ಮುಂದೂಡಿದವರು, ತನ್ನವರನ್ನು ಕಳೆದುಕೊಂಡಾಗ ಮುಖ ನೋಡಲು ಸಾಧ್ಯವಾಗದವರು, ನಿಗದಿಯಾಗಿದ್ದ ಕುಟುಂಬ ಸಮಾರಂಭಗಳನ್ನು ರದ್ದುಪಡಿಸಿ ಹಗಲು ರಾತ್ರಿ ದುಡಿದವರು ನನ್ನ ನಡುವಿದ್ದಾರೆ. ನಮ್ಮ ತಂಡವೂ ನಿತ್ಯವೂ ಇಪ್ಪತ್ತು ಕುಟುಂಬಗಳನ್ನೂ ಭೇಟಿ ಮಾಡಲೇಬೇಕಿತ್ತು ಅವರಿಗೆ ರೋಗದ ಬಗ್ಗೆ ರೋಗ ಲಕ್ಷಣಗಳ ಬಗ್ಗೆ, ಮುಂಜಾಗೃತಾ ಕ್ರಮಗಳ ಬಗ್ಗೆಅರಿವು ಮೂಡಿಸಬೇಕಿತ್ತು.
ಅವರ ಮನೆ ಬಾಗಿಲಿಗೆ ಹೋದಾಗ ಅವರು ತೋರುವ ವಿಲಕ್ಷಣ ವರ್ತನೆಗಳನ್ನು ವಿಷಕಂಠನಂತೆ ನುಂಗಬೇಕಾದ ಪರಿಸ್ಥಿತಿ, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿ ಜನರನ್ನ ಮನೆ ಒಳಗೆ ಕೂಡಿಸಿದ್ದು ನಮಗೆ ಅರ್ಧ ಯುದ್ದ ಗೆದ್ದಂತಾಯ್ತು. ಉಳಿದಂತೆ ಹಗಲೂ ರಾತ್ರಿ ಮೈಕ್ ನಲ್ಲಿ ಗಂಟಲೂ ಹರಿಯೋ ಹಾಗೇ ಕಿರಿಚಿದ್ದೇ ಕಿರಿಚಿದ್ದು ಜನ ನಮ್ಮ ಗಂಟಲಿನ ರಭಸಕ್ಕೆ ಮನೆಯಿಂದ ಆಚೆ ಬರೋ ಸಾಹಸ ಮಾಡಲಿಲ್ಲ ಅಲ್ಲಿಗೆ ಪ್ರಧಾನ ಮಂತ್ರಿಗಳಿಗೆ ಕೊಟ್ಟ ಮಾತನ್ನು ನಿಯತ್ತಾಗಿ ಉಳಿಸಿಕೊಂಡ್ವಿ.
ವಲಸಿಗರ ಸಂರಕ್ಷಣೆ:
ಅತ್ತ ಲಾಕ್ ಡೌನ್ ಘೋಷಿಸ್ತಾ ಹಾಗೇ, ಇತ್ತ ನಗರಗಳಿಂದ ಜನ ಹಳ್ಳಿ ಕಡೆ ವಲಸೆ ಬರೋದಕ್ಕೆ ಶುರು ಆಯ್ತು. ಈಗ ನಿಜದ ಯುದ್ದ ಶುರು ಆಯ್ತು ಊರಿಗೆ ಊರೇ ವಿಲನ್ ಆಗಿ ಹೋಯ್ತು. ಒಂದು ಕಡೆ ಉಟ್ಟ ಬಟ್ಟೆಯಲ್ಲಿ ಬಂದು ನಿಂತಿರುವ ವಲಸಿಗರು, ಇನ್ನೊಂದೆಡೆ ಸಾವನ್ನೇ ಕಂಡಂತೆ ಊರಿನ ಹೆಬ್ಬಾಗಿಲಿ ಬೇಲಿ ಹಾಕುತ್ತಿರುವ ಅವರದೇ ಬಂಧುಗಳು.
ನಿಜಕ್ಕೂ ಇದು ನಮಗೆ ಸವಾಲಿನ ದಿನಗಳು, ಮನವೊಲಿಸುವಿಕೆ ಸುಲಭದ ಕೆಲಸವಾಗಿರಲಿಲ್ಲ. ವಲಸಿಗರಿಗೆ ವಸತಿಯ ಜೊತೆಗೆ ಆಹಾರ ಭದ್ರತೆಯೂ ಕೂಡಾ ನಮ್ಮ ಹೊಸ ಹೊಣೆಗಾರಿಕೆ ಆಯ್ತ. ಈ ಹಂತದಲ್ಲಿ ನಾನಾಗಲೀ ನನ್ನ ಸ್ನೇಹಿತರಾಗಲೀ ಧೃತಿಗೆಡಲಿಲ್ಲ. ನೆರವಿಗಾಗಿ ಉಳ್ಳವರ ಮುಂದೆ ಕೈ ಚಾಚಲಾಯ್ತು, ಕ್ವಿಂಟಾಲ್ ಗಟ್ಟಲೆ ಅಕ್ಕಿ, ಬೇಳೆ, ರಾಶಿ ರಾಶಿ ತರಕಾರಿಗಳು ನಮ್ಮ ಮುಂದಿದ್ದವು, ಮುುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ಆಹಾರ ಪಥಾರ್ಥಗಳನ್ನು ವಿತರಿಸಿದೆವು.
ಇದು ನನ್ನ ಜೀವನದ ಅತ್ಯಂತ ಸಾರ್ಥಕ ಕ್ಷಣಗಳು, ವಲಸಿಗರ ಮೂರುಹೊತ್ತಿನ ಊಟಕ್ಕೆ ನೆರವಾದ ದಾನಿಗಳನ್ನ ನಾ ಇಂದಿಗೂ ಸ್ಮರಿಸುತ್ತೇನೆ, ಪ್ರಾತಃಸ್ಮರಣೀಯರು. ಶಾಲೆ, ಅಂಗನವಾಡಿ, ಸಮುದಾಯ ಭವನಗಳನ್ನು ತಾತ್ಕಾಲಿಕ ವಸತಿಗೃಹಗಳಾದವು.

ಜೀವನ ಮಟ್ಟ ಸುಧಾರಿಸುವ ಜರೂರತ್ತು:
ಪ.ಜಾತಿ ಮತ್ತು ಪಂಗಡಗಳ ಕಡು ಬಡವರು, ಅಂಗವಿಕಲರು, ವಲಸಿಗರು, ಕೆಲಸ ಕಳಿದುಕೊಂಡ ಕೂಲಿ ಕಾರ್ಮಿಕರ ಆ ಹೊತ್ತಿಗೆ ದುಡಿಯುವ ಕೈಗೆ ಕೆಲಸ ನೀಡಿ ಜೀವನ ಮಟ್ಟ ಸುಧಾರಿಸುವ ಜರೂರತ್ತು ನಮ್ಮಂಥ ಪಿಡಿಓಗಳ ಮೇಲೆ ಬಿತ್ತು. ಇಂಥಹ ಕಡು ಸಂಕಷ್ಟದ ದಿನದಲ್ಲಿ ಕೈ ಹಿಡಿದಿದ್ದು ನರೇಗಾ ಯೋಜನೆ, ಅರ್ಹ ಫಲಾನುಭವಿಗಳನ್ನು ಗುರುತಿಸುವಿಕೆ, ಜಾಬಾ ಕಾರ್ಡು ನೀಡುವಿಕೆ, ಅವರಿದ್ದ ಸ್ಥಳದಲ್ಲೇ ಕೆಲಸ ನೀಡುವುದು, ನಿಗದಿತ ಸಮಯಕ್ಕೆ ಕೂಲಿ ಪಾವತಿಸುವುದು ಈ ಎಲ್ಲಾವನ್ನೂ ಸಮರೋಪಾದಿಯಲ್ಲಿ ಮಾಡಲಾಯಿತು. Proud To Be A PDO ಅನ್ನಿಸಿದಂತೂ ಸತ್ಯ
ನೂರಾರು ಕಾರ್ಮಿಕರನ್ನು ಒಂದೇ ಸ್ಥಳದಲ್ಲೇ ಕೆಲಸಕ್ಕೆ ಹಚ್ಚಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಸ್ಯಾನಿಟೈಸರ್ ವಿತರಿಸಿ ಕೋರೋನಾ ಹರಡದಂತೆ ಎಚ್ಚರಿಕೆ ವಹಿಸಿ ಜೊತೆಯಲ್ಲಿ ನಿಯಮಗಳನ್ನೂ ಪಾಲಿಸಿಕೊಂಡು ಜನರಿಗೆ ಕೆಲಸ ಕೊಡುವುದು ನಮಗೆ ಚೈನಾದವರ ಮೇಲೆ ಯುದ್ಧ ಮಾಡಿದಷ್ಟೇ ಭೀಕರವಾಗಿದ್ದು ಆದಾಗ್ಯೂ ಕೂಡಾ ಎಲ್ಲಿಯೂ ನನ್ನ ಪಿಡಿಓ ಧೈರ್ಯ ಕುಂದಲಿಲ್ಲ, ಉತ್ಸಾಹ ಕಳೆದುಕೊಳ್ಳಲಿಲ್ಲ.
ಜಲಸಂರಕ್ಷಣಾ ಕೆಲಸಗಳಿಗೆ ಆದ್ಯತೆ ಕೊಟ್ಟು ನೂರಾರು ಕೆರೆಗಳ ಹೂಳು ತೆಗೆಯಲಾಯಿತು, ರೈತರ ಜಮೀನುಗಳಲ್ಲಿ ಬದು, ಹೊಲಗಳಿಗೆ ಹೋಗುವ ರಸ್ತೆಗಳನ್ನ ನಿರ್ಮಿಸಲಾಯಿತು. ಸ್ನಾತಕೋತ್ತರ ಪದವೀಧರರು, ನಗರಗಳಲ್ಲಿ ಕೆಲಸ ಕಳೆದುಕೊಂಡ ವಾಪಾಸಾಗಿದ್ದ ವಲಸಿಗರೂ ಎಲ್ಲರೂ ಕೆಲಸಕ್ಕಾಗಿ ಗ್ರಾಮಪಂಚಾಯಿತಿಗೆ ನೋಂದಾಯಿಸಿಕೊಳ್ಳತೊಡಗಿದ್ದರು, ಭಿಕ್ಷೆ ಬೇಡುತ್ತಿದ್ದ ಜನರನ್ನೂ ಕೂಡಾ ಕೆಲಸಕ್ಕೆ ಹಚ್ಚಿ ಜೀವನ ಮಟ್ಟ ಸುಧಾರಿಸಿದ ಹೆಗ್ಗಳಿಗೆ ಪಿಡಿಓಗಳದ್ದು. ಇಂದು ಲಕ್ಷಾಂತರ ಜನಗಳಿಗೆ ಕೆಲಸ ನೀಡಿ ಸಾವಿರಾರು ಧೀರ್ಘಕಾಲೀನ ಆಸ್ತಿ ಸೃಜಿಸಲಾಗುತ್ತಿದೆ, ಇದರ ಹಿಂದಿನ ಪಿಡಿಓಗಳ ಶ್ರಮದ ಧೀಶಕ್ತಿಗೆ ನಮೋಃನಮಃ.
ಅನುದಾನವಿಲ್ಲದೇ ಪರಿಸ್ಥಿತಿ ನಿಭಾಹಿಸಬೇಕಾದ ಸಂಕಷ್ಟ:
ಕೋವಿಡ್ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿಗಳಿಗೆ ಯಾವುದೇ ವಿಶೇಷ ಪ್ಯಾಕೇಜ್ ಸರ್ಕಾರ ಘೋಷಿಸಲಿಲ್ಲ, ಹಾಗಂತ ದುಡ್ಡಿಲ್ಲ ಅನ್ನೋ ನೆಪ ಹೂಡಿ ಕೂರುವ ಸಮಯವೂ ಅದಾಗಿರಲಿಲ್ಲ, ನಮ್ಮಲ್ಲಿ ಲಭ್ಯವಿದ್ದ ಹಣವನ್ನೆ ನಮ್ಮ ವಿವೇಚಾನಾನುಸಾರವಾಗಿ ಬಳಸಿಕೊಂಡು ನಿರ್ವಹಣೆ ಮಾಡಬೇಕಿದ್ದ ದಿನಮಾನಗಳು, ಒಂದೆಡೆ ಸರ್ಕಾರ ಬೇಕಾದಷ್ಟು ದುಡ್ಡು ಕೊಟ್ಟಿದೆ ಅಧಿಕಾರಿಗಳು ಲೂಟಿ ಮಾಡುತ್ತಿವೆ ಅನ್ನೋ ಜನರ ಯಥಾಪ್ರಕಾರದ ಉಲಿಯುವಿಕೆ, ಇಂಥದೇ ದಿನಗಳಲ್ಲಿ ನಮ್ಮಲ್ಲಿ ಹೊಸ ಹೊಸ ಆಲೋಚನೆಗಳು, ಯೋಜನೆಗಳು ರೂಪುಗೊಳ್ಳ ತೊಡಗಿದವು.
ಎಷ್ಟೋ ಜನ ಪಿಡಿಓಗಳು ತಮ್ಮ ಸ್ವಂತ ಕಾರುಗಳನ್ನೇ ಅಂಬ್ಯುಲೆನ್ಸ್ ಗಳನ್ನಾಗಿ ಪರಿವರ್ತಿಸಿದರು, ರೈತರು ಬೆಳೆದಿದ್ದ ತರಕಾರಿಗಳನ್ನು ಕೊಂಡು ವಿತರಿಸಿದ್ದು, ದಾನಿಗಳಿಂದ ಅಕ್ಕಿ ಮತ್ತು ಅವಶ್ಯಕ ಸಾಮಾಗ್ರಿಗಳಾದ ಸೋಪು, ಸ್ಯಾನಿಟೈಸರ್, ಮಾಸ್ಕ್, ಹೊದಿಕೆಗಳನ್ನು ಸಂಗ್ರಹಿಸಿದ್ದು, ಕಡುಬಡವರ ಆರೋಗ್ಯ ಚಿಕಿತ್ಸೆಯ ವೆಚ್ಚ ಭರಿಸಿದ್ದು, ಸಮಾನ ಮನಸ್ಕರ ವಾಟ್ಸ್ ಆಪ್ ಗುಂಪು ರಚಿಸಿ ಇಂತಿಷ್ಟು ಎಂದು ಹಣ ಸಂಗ್ರಹಿಸಿ ಅವಕಾಶವಂಚಿತ ಕಲಾವಿದರ ಮನೆ ಬಾಗಿಲಿಗೆ ಸಹಾಯ ಧನ ತಲುಪಿಸಿದ್ದು, ಹೆಣ್ಣು ಮಕ್ಕಳ ಸ್ವಸಹಾಯ ಸಂಘಗಳಿಗೆ ಹೊಲಿಗೆ ಯಂತ್ರಗಳನ್ನು ನೀಡುವುದರ ಮೂಲಕ ಮೂಲಕ ಮಾಸ್ಕ್ ಗಳನ್ನ ತಯಾರಿಸಿ ಪ್ರತೀ ಕುಟುಂಬಗಳಿಗೂ ವಿತರಿಸಲಾಯಿತು. ಇಂಥಹ ಹಲವು ಹತ್ತು ಪುಣ್ಯದ ಕೆಲಸವೂ ಹಲವೂ ಅಡೆತಡೆಗಳ ನಡುವೆಯೂ ಎಗ್ಗಿಲ್ಲದೆ ಸಾಗುತ್ತಿವೆ.
ಮನುಷ್ಯನ ನಿಜ ಬಣ್ಣ ಬಯಲು ಮಾಡಿದ ಕೋರೋನಾ:
ಅರಳಿಮರದ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದುತ್ತಿದ್ದ ಗೆಳೆಯರು, ಟೀ ಅಂಗಡಿಯಲ್ಲಿ ಬೈ ಟೂ ಕುಡಿಯುತ್ತಿದ್ದ ಜಿಗರಿ ದೋಸ್ತ್ ಗಳು, ಕೊಟ್ಟು ಪಡೆದು ಸಂಸಾರ ತೂಗಿಸುತ್ತಿದ್ದ ಅಕ್ಕ ಪಕ್ಕದ ಮನೆಯ ಪ್ರಾಣ ಸ್ನೇಹಿತೆಯರು ದಿನಾ ಬೆಳಗಾಗೋದರಲ್ಲಿ ಶತ್ರುಗಳಾಗಿ ಹೋದ್ರು, ತಮ್ಮ ನೈಜ ಬಣ್ಣದ ಅನಾವರಣ ಮಾಡಿದರು.
ಊರಿನ ಒಬ್ಬನಿಗೆ ಕೋರೋನಾ ಬಂದ್ರು ಸಾಕು ಪ್ರಾಣ ಸ್ನೇಹಿತರಾದಿಯಾಗಿ ಎಲ್ಲರೂ ಅವರ ಮೇಲೆ ಮುಗಿಬಿದ್ದು ಅವರನ್ನ ಮಾನಸಿಕವಾಗಿ ಸಾಯಿಸಿಬಿಡುತ್ತಾರೆ. ಕೋರೋನಾ ಬಂದ ವ್ಯಕ್ತಿಗಳನ್ನು ಆಸ್ಪತ್ರೆ ಸೇರಿಸಿ ಅವರ ಕುಟುಂಬಕ್ಕೆ ಮನೆ ದಿಗ್ಬಂಧನ ವಿಧಿಸಿ, ಮನೆ ಸುತ್ತಲೂ ಸೀಲ್ ಡೌನ್ ಮಾಡಿ, ಔಷಧಿ ಸಿಂಪಡಿಸಿ ಎಲ್ಲಾ ರೀತಿಯ ಎಚ್ಚರಿಕೆ ವಹಿಸಿದರೂ ಅವರದೇ ಜನಗಳು ಅವರನ್ನ ಕ್ರಿಮಿನಲ್ ಗಳಾಗಿ ನೋಡಲು ಶುರು ಮಾಡುತ್ತಾರೆ, ಮನೆಯ ಕಿಟಕಿ ತೆಗೆದರೂ, ಬಾಗಿಲಿನಿಂದ ಆಚೆ ಇಣುಕಿದರೂ ನೂರಾರು ದೂರು, ಒಟ್ಟಾರೆ “ ಕೋವಿಡ್ ಅಸ್ಪೃಶ್ಯತೆ ” ಎಂಬ ಹೊಸ ಹುಟ್ಟಿಗೆ ಕಾರಣರಾದರು.

ದೈಹಿಕ ಮಾನಸಿಕ ಸಮತೋಲನ ಕಳೆದುಕೊಂಡ ಅಧಿಕಾರಿಗಳು:
ಸ್ವಚ್ಚತೆ ಕಾಪಾಡುವಿಕೆ, ಅಂಕಿ ಅಂಶಗಳ ಸಂಗ್ರಹಣೆ, ಸರ್ಕಾರಕ್ಕೆ ಪ್ರಗತಿ ಮಾಹಿತಿಗಳ ರವಾನೆ, ಕೋವಿಡ್ ಹರಡದಂತೆ ನಿಯಂತ್ರಣ, ಇಂತಹ ವಿಶ್ರಾಂತಿ ಇಲ್ಲದ ಕೆಲಸದಿಂದ ಹೈರಾಣದ ಅಧಿಕಾರಿಗಳು ಮಾನಸಿಕ ಸ್ವಾಸ್ಥ್ಯಕಳೆದುಕೊಂಡು ಆತ್ಮಹತ್ಯೆಯಂಥಹ ದುಡುಕಿನ ನಿಧಾರಕ್ಕೆ ಬಲಿಯಾಗಿದ್ದು ನಿಜ. ಕೋರೋನಾಕ್ಕೆ ಬೇಲಿ ಹಾಕಲು ಹೋಗಿ ತಾವೇ ಬಲಿಯಾಗಿದ್ದೂ ಕೂಡಾ ಅಷ್ಟೇ ಸತ್ಯ.
ನನಗೆ ನಿತ್ಯವೂ ಧ್ಯರ್ಯ ತುಂಬುತ್ತಿದ್ದ ಕೋರೋನಾ ಯಕಶ್ಚಿತ್ ಹೆದರುಪುಕ್ಕಲ ವೈರಸ್ ಎಂದು ಸಮಧಾನಿಸುತ್ತಿದ್ದ ನನ್ನೊಡಗೂಡಿ ಕೆಲಸ ಮಾಡುತ್ತಿದ್ದ 48 ವರ್ಷದ ಡಾಕ್ಟರ್ ಕೋರೋನಾಕ್ಕೆ ಬಲಿಯಾದಾಗ ಅಕ್ಷರಶಃ ನನ್ನೊಳಗಿನ ಮಹಾನ್ ಧೈರ್ಯವಂತ ಕೋರೋನಾ ವಾರಿಯರ್ ಕುಸಿದಿದ್ದು ಅಷ್ಟೇ ಮಹಾನ್ ಸತ್ಯ.
ಈಗ ನನ್ನ ಮುಂದೆ ಆಯ್ಕೆಗಳಿಲ್ಲ, ಇಂದಿಗೂ ನಾವು ಯಾರೂ ವಿರಮಿಸಿಲ್ಲ ಯಾವುದೋ ಕಾಣದ ಶಕ್ತಿಯನ್ನು ನಂಬಿ ಗ್ರಾಮೀಣ ಜನರೆಡೆಗಿನ ನಮ್ಮ ಆರ್ಧ್ರತೆ ಮತ್ತು ಕರಗುವಿಕೆಯನ್ನ ಕಾಪಿಟ್ಟುಕೊಂಡಿದ್ದೇವೆ. ಈ ಯುದ್ದ ಕೊನೆಗೊಳ್ಳತ್ತದೆ ಅಲ್ಲಿ ಗೆಲವೂ ನಮ್ಮದೇ ಅನ್ನೋ ಅಗಾಧ ವಿಶ್ವಾಸ ನಮ್ಮೆಲ್ಲರದು.






ನಿಮ್ಮ ಬರಹ ಸೂಪರ್. ಬರಹ ಸಕಾಲಿಕವಾಗಿದೆ ಮತ್ತು ನೈಜ ಸ್ಥಿತಿಯನ್ನು ತಿಳಿಸಿದೆ. ಓದಿದವರಿಗೆ ಒಬ್ಬ ಗ್ರಾಮ ಪಂಚಾಯಿತಿಯ ಅಧಿಕಾರಿಯ ನೋವು, ಸಾಮರ್ಥ್ಯ ಅರ್ಥವಾಗಲಿ.