ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಕಾಡಿನ ದಾರಿಯ ಮೇಲಿನ ಮೋಹ…

ಲಕ್ಷ್ಮಣ ವಿ ಎ

ರಾಣಿ ಚೆನ್ನಮ್ಮ ರೈಲು ಬೆಳಗಿನ ಐದೂವರೆಗೆ ಹುಬ್ಬಳ್ಳಿ ತಲುಪಿದ ಮೇಲೆ ಅರ್ಧಕ್ಕರ್ಧ ಖಾಲೀಯಾಗಿ ರಿಜರ್ವೇಷನ್ ಬರ್ತಗಳ ಸೀಟಿನ ಮೇಲೆ ಬಿದ್ದ ತಗ್ಗು ರಾತ್ರಿ ಕಂಡ ಪ್ರಯಾಣಿಕನ ಕನಸನ್ನು ಚಲಿಸುವ ರೈಲಿನಲ್ಲಿ ಚಲನ ಚಿತ್ರದ ಹಾಗೆ ಮುಂದುವರೆಸಿಕೊಂಡು ನಡೆದಿರುತ್ತವೆ.

ರೈಲು ಕಿಟಕಿಯಿಂದಾಚೆ ಮಬ್ಬು ಮಬ್ಬಾಗಿ ಕಾಣುವ ಉಣಕಲ್ಲು, ನವಿಲೂರು, ಈಗಷ್ಟೇ ಮೈ ಮುರಿದು ಆಕಳಿಸುತ್ತಿರುತ್ತವೆ, ಧಾರವಾಡ ತಲುಪಿದರೆ ನಿಚ್ಚಳ ಬೆಳಗು.

ಪಾವಟೆಯವರು ಕಟ್ಟಿಸಿದ ವಿಶ್ವ ವಿದ್ಯಾನಿಲಯದ ಗೋಪುರ ಗಡಿಯಾರದ ಮೇಲೆ ಸೂರ್ಯನ ಸ್ವರ್ಣ ಕಿರಣಗಳಿಂದ ಲಕ ಲಕಿಸುವಾಗ – ರೈಲು ಸಹ್ಯಾದ್ರಿ ಮಂಜಿನ ಹಾದಿಯ ಕಾಡು ಸೀಳಿ ಶಿಳ್ಳೆ ಹೊಡೆಯುತ್ತ ನಿದ್ದೆ ಗಣ್ಣಿನಲ್ಲಿ ಆಕಳಿಸುತ್ತಿರುವ ಸ್ಟೇಷನ್ ಮಾಸ್ತರನನ್ನು ಇನ್ನೊಂದು ದೈನಿಕಕ್ಕೆ ಸಜ್ಜುಗೊಳಿಸುತ್ತದೆ.
ಹಸಿರು ಝಂಡಾ ಇಕ್ಕೆಲದ ಹಸಿರು ಬೇಲಿಗಳ ಸೀಳುತ್ತ ಸಾಗುವ ಹೆಬ್ಬಾವಿನಂತಹ ರೈಲಿನೊಳಗೆ ಪ್ರಯಾಣಿಕರ ಕೈಯೊಳಗೆ ಹಬೆಯಾಡುವ ಡಿಪ್ ಚಹಾ ತಂದು ಕೊಡುತ್ತಿರುವ ಹುಡುಗರು ಯಾವ ಸ್ಟೇಷನ್ನಿನಲಿ ಹತ್ತಿ ಎಲ್ಲಿ ಇಳಿಯುತ್ತಾರೆ ಒಂದೂ ಗೊತ್ತಾಗುವುದಿಲ್ಲ.

ಅಸಲು ಧಾರವಾಡದಿಂದ ಬೆಳಗಾವಿಗೆ ಬಸ್ಸಿನಲ್ಲಿ ತೆರಳಿದರೆ ಕೇವಲ ಒಂದು ಗಂಟೆಯ ರೊಂಯ್ಯೆನ್ನುವ ಪೂನಾ – ಬೆಂಗಳೂರು ಹೆದ್ದಾರಿ ರಾಜಮಾರ್ಗ.

ಆದರೆ ಈ ರೈಲು ಕಾಲು ಮಾರ್ಗ ಇದ್ದ ಹಾಗೆ,ಸುದೀರ್ಘ ಮೂರುಗಂಟೆಯ ಕಾಡು ಹಾಡಿಯ ಪಯಣ.
ರೈಲು ಹಳಿ ಹಾಕಿದ ಬ್ರಿಟಿಷ್ ರಿಗೆ ಲೋಂಡಾ ವೈಯಾ ಗೋವೆಯ ಬಂದರು ಕನೆಕ್ಟ ಮಾಡಬೇಕಿತ್ತು.ಈ ಮೂಲಕ ತಮ್ಮ ಸರಕು ಇಂಗ್ಲೆಂಡ್ ತಲುಪಿಸಬೇಕಿತ್ತು.ಹೀಗಾಗಿ ಚೆನ್ನಮ್ಮನ ಕಿತ್ತೂರು ಹಾದಿ ಅವರಿಗೆ ಬೇಕಿರಲಿಲ್ಲ ಬಹುಶಃ. ಪ್ರತಿ ದಿನ ಇಲ್ಲಿ ಓಡಾಡುವ ಪಯಣಿಗರಿಗೆ ಈ ರೈಲು ಹಾದಿ ಪರಮಬೋರು ಹೊಡೆಸಿರಬಹುದು.ಆದರೆ ಕನಸಿನಲ್ಲೂ ಕಾಡಿನಲ್ಲಿ ಚಲಿಸುವ ನನ್ನಂತಹ ಹಸಿರು ಐಲು ಹತ್ತಿಸಿಕೊಂಡವರಿಗೊಂದು ಸುಖದ ದಾರಿ.

ದಾರಿಯುದ್ದಕ್ಕೂ ಅಲ್ಲಲ್ಲಿ ಕಾಣುವ ನವಿಲುಗಳು ,ಕವಲುದಾರಿಯಲಿ ಇಳಿದು ಸಾಗುವ ಸಣ್ಣ ತೊರೆ ಝರಿಗಳು,ಕ್ಯಾನ್ವಾಸಿನ ಮೇಲೆ ಬರೆದಂತಹ ಭತ್ತದ ಗದ್ದೆಗಳೆಲ್ಲಾ ಈ ಕಾಡಿನ ದಾರಿಯ ಮೇಲಿನ ಮೋಹ ಕಡಿಮೆಯಾಗದಂತೆ ತಲೆ ತಲಾಂತರಗಳಿಂದ ಚೆಲುವು ಕಾಪಿಟ್ಟುಕೊಂಡಿವೆ.

‍ಲೇಖಕರು Admin

8 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading